Tuesday 7 August 2012

 ೪೦ಕ್ಕೂ ಅಕ ವರ್ಷದಿಂದ ಬ್ಯಾಗ್ ರಿಪೇರಿ ಮಾಡಿ ಜೀವನ ಸಾಗಿಸುತ್ತಿದ್ದೇನೆ. ಮಕ್ಕಳೆಲ್ಲಾ ಸಮರ್ಥರಾಗಿ ನನ್ನನ್ನು ಸಾಕುವ ಶಕ್ತಿ ದೇವರು ಕರುಣಿಸಿದ್ದರೂ ಕೆಲಸ ಮಾಡುತ್ತಿದ್ದ ದೇಹಕ್ಕೆ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಅದಕ್ಕಾಗಿ ಸಾಧ್ಯವಾದ ಸಣ್ಣ ಕೆಲಸವನ್ನು ಮಾಡುತ್ತಿದ್ದೇನೆ.
-ಅಜೀಜ್



ಮಂಗಳೂರು: ದೇಶದ ಅಭಿವೃದ್ದಿ ಹಾಗೂ ತಂತ್ರಜ್ಞಾನದಲ್ಲಿ ವೈಜ್ಞಾನಿಕ ವೇಗ ಕಂಡು ಕೊಂಡಿದ್ದರೂ ಮನುಷ್ಯ ಪರರನ್ನು ಅವಲಂಬಿಸುವುದು ತಪ್ಪಿಲ್ಲ. ಅಭಿವೃದ್ಧಿಗೆ ಕಾರಣಿಕರ್ತನಾದ ಮನುಷ್ಯ ಸಣ್ಣ-ಪುಟ್ಟ ಕಾರ್ಯಗಳನ್ನು ಹೊರತು ಪಡಿಸಿ ಕೆಲವೊಂದು ಅಂಶದಲ್ಲಿ ಪರರನ್ನು  ಅಥವಾ ವಸ್ತುಗಳನ್ನು ಅವಲಂಬಿಸಲೇಬೇಕು. ಒತ್ತಡದ ಪ್ರಪಂಚದಲ್ಲಿ ಉದ್ಯೋಗದ ನಿಮಿತ್ತ ಬೇರೊಂದು ಕಡೆಗೆ ಪ್ರವಾಸಕ್ಕೊ? ನೆಂಟರಿಷ್ಟರ ಮನೆಗೋ? ಮಕ್ಕಳು ಶಾಲೆಗೆ ಹೋಗುವಾಗ ಬ್ಯಾಗ್‌ನ ಅವಶ್ಯಕತೆಯಿರುತ್ತದೆ. ದಿನನಿತ್ಯ ಉಪಯೋಗಿಸುವ ಬ್ಯಾಗ್‌ನಲ್ಲಿ ಕೊರತೆ ಕಂಡುಬಂದರೆ ಅದನ್ನು ಬಿಸಾಡದೆ ರಿಪೇರಿ ಮಾಡಲು ಪ್ರಯತ್ನಿಸಿ, ಕೈಸೋತಾಗ ರಿಪೇರಿ ಮಾಡುವ ಅಂಗಡಿ ಎಲ್ಲಿದೆ ಎಂದು ಹೊತ್ತೊಯ್ಯುತ್ತೇವೆ. ಹೀಗೆ ನಗರದ ಹೃದಯ ಭಾಗದಲ್ಲಿ ಸುಮಾರು ೪೦ ವರ್ಷಗಳಿಂದ ಸದ್ದಿಲ್ಲದೇ ಬ್ಯಾಗ್ ರಿಪೇರಿಯ ಕಾಯಕದಲ್ಲಿ ಮಗ್ನರಾಗಿದ್ದಾರೆ ಅಜೀಜ್...
ಸಿರಿವಂತರಾಗಲಿ ಅಥವಾ ಬಡವರಾಗಿರಲಿ ಅವರು ಉಪಯೋಗಿಸುವ ಬ್ಯಾಗಿನ ಗುಣಮಟ್ಟ ವ್ಯತ್ಯಾಸವಿರಬಹುದು. ವ್ಯವಹಾರದ ದೃಷ್ಟಿಯಿಂದ ಅಥವಾ ಮಕ್ಕಳು ಶಾಲೆಗೆ ಹೋಗುವಾಗ ಬ್ಯಾಗ್ ಅವಶ್ಯಕವಾಗಿದೆ. ಈ ಬ್ಯಾಗುಗಳು ಶಾಶ್ವತವಾಗಿರದೆ  ಜಿಪ್ ಹೋಗುವುದು, ಬಟ್ಟೆ ಹರಿಯುವುದು ಸಹಜವಾಗಿರುತ್ತದೆ. ಆದರೆ ಈ ಬ್ಯಾಗುಗಳನ್ನು ಬಿಸಾಡದೆ ಅವುಗಳ ರಿಪೇರಿಗೆ ಹೊತ್ತೊಯ್ಯುತ್ತೇವೆ.
ಅಜೀಜ್ ಕಾಸರಗೋಡು ಪೆರ್ಲದಲ್ಲಿ ಹುಟ್ಟಿ ಬೆಳೆದು ಪ್ರಾಥಮಿಕ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ, ಮಂಗಳೂರಿಗೆ ಆಗಮಿಸಿ ಜೀವನ ನಿರ್ವಹಣೆಗೆ ಈ ವೃತ್ತಿಯನ್ನು ಆರಿಸಿಕೊಂಡಿದ್ದಾರೆ. ಮಾರ್ಕೆಟ್ ರಸ್ತೆಯ ಸಮೀಪ ಇವರು ಬಾಡಿಗೆ ರೂಂನಲ್ಲಿ ವಾಸವಾಗಿದ್ದಾರೆ. ೪೦ಕ್ಕೂ ಅಕ ವರ್ಷದ ವೃತ್ತಿಜೀವನದಲ್ಲಿ ೨೦ ವರ್ಷ ನಿರ್ಮಲಾ ವಸತಿ ಗೃಹದ ಕೆಳಗೆ ಕೆಲಸ ಮಾಡುತ್ತಿದ್ದರು. ಈಗ ಅಲ್ಲಿ ಅವರ ಊರಿನವರೆ ಆದ ಬೇರೊಬ್ಬರು ಇದೇ ಕಾರ್ಯ ಮಾಡುತ್ತಿದ್ದಾರೆ. ೨೦ ವರ್ಷದಿಂದ ಫಿಲಿಕ್ಸ್ ಪೈ ಬಝಾರ್ ಸಮೀಪ ರಮೇಶ ಶೆಟ್ಟಿ  ಅವರಿಗೆ ಸೇರಿದ ಸ್ಥಳದಲ್ಲಿ ಭಾರತ್ ಬ್ಯಾಗ್ ಮತ್ತು ಸೂಟ್‌ಕೇಸ್ ರಿಪೇರಿಂಗ್ ಸೆಂಟರ್ ಎನ್ನುವ  ಮಡಲಿ (ತೆಂಗಿನ ಗರಿ)ನಿಂದ  ಮಾಡಿದ ಸಣ್ಣ ಜೋಪಡಿಯಲ್ಲಿ ವೃತ್ತಿ ಮಾಡುತ್ತಿದ್ದಾರೆ.  ೬೩ ವರ್ಷದ ಅವರು ೭ ಮಕ್ಕಳಲ್ಲಿ  ಮೂವರು ಗಂಡು ಮಕ್ಕಳು ವಿದೇಶದಲ್ಲಿ ಕೆಲಸದಲ್ಲಿದ್ದು ಸಂತೃಪ್ತ ಜೀವನ ನಡೆಸುತ್ತಿದ್ದಾರೆ.
ಎಲ್ಲಾ ರೀತಿಯ ಸೂಟ್‌ಕೇಸ್‌ಗಳು, ಜರ್ಕಿನ್, ಲೇಡಿಸ್ ಬ್ಯಾಗ್, ಸ್ಕೂಲ್ ಬ್ಯಾಗ್, ಪೈಬರ್ ಸೂಟ್‌ಕೇಸ್‌ಗಳ ರಿಪೇರಿಯನ್ನು ಮಾಡುತ್ತಿದ್ದು, ಸೇವೆಯಲ್ಲಿ ಬೇದ ಬಾವ ಮಾಡದೇ ಕೆಲಸಕ್ಕೆ ತಕ್ಕ ಬೆಲೆ ನಿಗದಿಪಡಿಸುತ್ತಾರೆ. ದಿನವೊಂದಕ್ಕೆ ೫೦೦ರಿಂದ ೮೦೦ರೂಪಾಯಿ ಸಂಪಾದಿಸುತ್ತಿದ್ದರೂ ರಿಪೇರಿಗೆ ಬಳಸಿದ ವಸ್ತುಗಳ ಖರ್ಚು ಇದರಲ್ಲಿಯೇ ಸಾಗಬೇಕಿದೆ. ಹಿಂದೆ ಗಂಡುಮಕ್ಕಳು ಇವರೊಂದಿಗೆ ಕೆಲಸ ಮಾಡುತ್ತಿದ್ದರಿಂದ ಹೇಳಿದ ಸಮಯಕ್ಕೆ ಸರಿಯಾಗಿ ಒದಗಿಸುತ್ತಿದ್ದರು. ಇತ್ತೀಚಿನ ದಿನದಲ್ಲಿ ಸ್ವಲ್ಪ ವಿಳಂಭವಾಗುತ್ತಿದ್ದರೂ ಗ್ರಾಹಕರು ಸಹಿಸಿಕೊಳ್ಳುತ್ತಾರೆ. ಶಾಲಾ ದಿನದಲ್ಲಿ ಬೆಳಿಗ್ಗೆ ೯ರಿಂದ ರಾತ್ರಿ ೮ ರವರೆಗೆ  ಮತ್ತು ಭಾನುವಾರದಂದು ಮಧ್ಯಾಹ್ನದವರೆಗೆ ಕೆಲಸ ಮಾಡುತ್ತಾ ಪ್ರತಿಯೊಬ್ಬರ ನಂಬಿಕೆ ವಿಶ್ವಾಸ ಗಳಿಸಿಕೊಂಡಿದ್ದಾರೆ ಅಜೀಜ್.
ಅನೇಕ ಬಾರಿ ಬ್ಯಾಗ್ ರಿಪೇರಿಗೆಂದು ಕೊಟ್ಟು ಹೋಗಿದ್ದು ಅದನ್ನು ಮರಳಿ ತೆಗೆದುಕೊಂಡು ಹೋಗದೆ ಕಸದ ತೊಟ್ಟಿಗೆ ಹಾಕಿದ ಉದಾಹರಣೆಗಳಿವೆ. ಆ ಬ್ಯಾಗ್‌ಗಳನ್ನು ರಿಪೇರಿ ಮಾಡಿ ಇಡುವುದರಿಂದ ಅದರ ಮಷಿನ್‌ಗಳೆಲ್ಲಾ ಹಾಳಾಗಿ ಯಾರು ಉಪಯೋಗಿಸದ ಸ್ಥಿತಿ ನಿರ್ಮಾಣವಾಗುತ್ತದೆ. ಪ್ರತಿಯೊಂದು ಬ್ಯಾಗ್‌ನ ಜಿಪ್ ಹಾಕುವುದು, ಪುನಃ ಸ್ಟಿಚ್ ಮಾಡುವುದು, ಹರಿದ ಬಟ್ಟೆಯನ್ನು ತೆಗೆದು ಹೊಸ ಬಟ್ಟೆ ಕೂಡಿಸುವುದು ಹೀಗೆ ಒಂದಲ್ಲ ಹಲವಾರು ಸಣ್ಣ-ಪುಟ್ಟ ಕೆಲಸಗಳು ಇರುತ್ತವೆ. ಅದಕ್ಕೆ ಬೇಕಾದ ಸಾಮಾಗ್ರಿಗಳು ಹಳೆ ಬಸ್‌ನಿಲ್ದಾಣದ ಕೆ.ಕೆ.ಟ್ರೇಡರ್‍ಸ್‌ನಲ್ಲಿ ದೊರಕುತ್ತದೆ. ಹಲವಾರು ವರ್ಷದಿಂದ ನಿಷ್ಠೆಯಿಂದ ಕಾರ್ಯನಿರ್ವಹಿಸಿ ಶಾಲಾ ಮಕ್ಕಳಿಗೆ ಪ್ರೀತಿಯ ಅಜ್ಜನಾಗಿ, ಉಳಿದ ಗ್ರಾಹಕರಿಗೆ ಸ್ನೇಹಿತನಾಗಿ ಬ್ಯಾಗ್ ರಿಪೇರಿ ಮಾಡುತ್ತಿದ್ದಾರೆ. ದೀರ್ಘ ಅನುಭವವಿರುವ ಇವರ ಕಾರ್ಯವೈಖರಿಗೆ ಕಾಸರಗೋಡು, ಕಾಂಞಂಗಾಡ್, ಉಡುಪಿ, ಕುಂದಾಪುರ ಸೇರಿದಂತೆ ದಕ್ಷಿಣ ಕನ್ನಡದ ಜನತೆಯು ಇವರ ಜೋಪಡಿ ಅಂಗಡಿಯನ್ನು ಹುಡುಕುತ್ತಾ ಬರುತ್ತಾರೆ ಎನ್ನುವುದು ಗಮನಿಸಬೇಕಾದ ವಿಷಯವಾಗಿದೆ.




























No comments:

Post a Comment