Sunday, 5 August 2012


ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇ ದಾಳಿ: ಭಾರತೀಯ ಸಂಸ್ಕೃತಿಗೆ ಸವಾಲು  

ತುಂಡುಡುಗೆಯ ಹೆಣ್ಣು ಮಕ್ಕಳ ಕಣ್ಣೀರಿಗೆ ಬೆಂಬಲಿಸಿದ ಪ್ರಜ್ಞಾವಂತ.....

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ೬೫ ವರ್ಷಗಳಾಗಿದ್ದು ಅದನ್ನು ಸಂಪೂರ್ಣ ಅನುಭವಿಸಿದ್ದೇವೆಯೋ ಎಂದಾಗ ಉತ್ತರ ಮಾತ್ರ ಶೂನ್ಯ. ಸ್ವಾತಂತ್ರ್ಯ ಸಿಕ್ಕಿದೆ ಎಂದು ಸಂಭ್ರಮ ಆಚರಣೆ ಮಾಡಿದರೂ  ಇತ್ತೀಚಿನ ದಿನದಲ್ಲಿ ನಡೆಯುತ್ತಿರುವ ಪರಿಸ್ಥಿತಿ ಗಮನಿಸಿದರೆ ಯಾಕೋ ಸಂಶಯ ಹುಟ್ಟುತ್ತದೆ. ಮಂಗಳೂರಿನಲ್ಲಿ ನಡೆದ ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇ ಮೇಲೆ ದಾಳಿಯ ಸಂದರ್ಭ ಬುದ್ದಿಜೀವಿ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಂಘ, ಲೇಖಕರು ಹಾಗೂ ರಾಜಕೀಯ ನಾಯಕರು ತಮಗೆ ಸಿಕ್ಕಿದ ಅವಕಾಶ ಎನ್ನುವ ತೆರದಲ್ಲಿ ಸ್ವಲ್ಪವೂ ಮುಂದಾಲೋಚನೆ ಮಾಡದೆ ತಪ್ಪು ಒಪ್ಪುಗಳ ವಿಮರ್ಶೆ ಮಾಡದೆ ಏಕಮುಖವಾಗಿ ಹೇಳಿಕೆ ನೀಡುತ್ತಾರೆ ಎಂದಾಗ ೧೯೪೭ ಸ್ವಾತಂತ್ರ್ಯದ ಕುರಿತು ದಲಿತ ಕವಿ ಸಿದ್ದಲಿಂಗಯ್ಯ ಹೇಳಿದ ಮಾತು  ನೆನಪಿಗೆ ಬರುತ್ತದೆ ಮಾತ್ರವಲ್ಲ ಅದುವೆ ಗಾಡವಾಗಿ ಕಾಡಲು ಹಾಗೂ ತರ್ಕಿಸಲು ಅಣಿ ಮಾಡಿದೆ. ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತಮಾತೆ ಬಿಡುಗಡೆಯಾದಳೇನೊ ನಿಜ? ಆದರೆ ದೇಶದ ಅಸ್ತಿಯಾದ ರೈತಾಪಿ ಜನ ಅಥವಾ ಬಡ ಜನತೆಯ ಪಾಲಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನುವ ನೈಜ ಸಂಗತಿಯನ್ನು ಪದ್ಯ ರೂಪವಾಗಿ ಹೇಳಿರುವುದು ಎಲ್ಲರಿಗೂ ತಿಳಿದಿದೆ.
ಯಾರಿಗೆ ಬಂತು ಎಲ್ಲಿಗೆ ಬಂತು ೪೭ರ ಸ್ವಾತಂತ್ರ್ಯ
ಪೊಲೀಸರ ಬೂಟಿಗೆ ಬಂತು,
ವಕೀಲರ ಕೋಟಿಗೆ ಬಂತು,
ಶ್ರೀಮಂತರ ಕೋಣೆಗೆ ಬಂತು
ಬಡವರ ಮನೆಗೆ ಬರಲಿಲ್ಲ.. ಈ ಸ್ವಾತಂತ್ರ್ಯದ ಜ್ಯೋತಿ ಎಂದಿರುವುದು ಅಕ್ಷರಶಃ ಸತ್ಯ.
ಜು.೨೮ ರಂದು ಪಡೀಲ್‌ನ ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇ ದಾಳಿ ನಡೆದ ಸಂದರ್ಭ ಬರ್ತ್‌ಡೇ ಪಾರ್ಟಿ ಆಚರಿಸುತ್ತಿದ್ದ ಎಂಟು ಮಂದಿ ಹುಡುಗರು ಹಾಗೂ ಐದು ಮಂದಿ ಹುಡುಗಿಯರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಲಾಯಿತು. ಈ ಘಟನೆಯನ್ನು ಮಾನವೀಯ ನೆಲೆಯಿಂದ ಗಮನಿಸಿದರೆ ಹೆಣ್ಣು ಮಕ್ಕಳ ಮೇಲೆ ಕೈ ಮಾಡಿರುವುದು ತಪ್ಪು. ಪ್ರಜ್ಞಾವಂತ ನಾಗರಿಕ ಇದನ್ನು ಸಹಿಸುವುದಿಲ್ಲ. ಆದರೆ ನಮ್ಮ ದೇಶದ ಸಂಸ್ಕೃತಿ ಯಾವುದು? ಅದರ ಮರ್ಮವೇನು? ದೇಶದಲ್ಲಿ ಹೆಣ್ಣಿಗೆ ನೀಡಿರುವ ಸ್ಥಾನಮಾನವಾದರೂ ಯಾವುದು? ಮಹಾಭಾರತದಲ್ಲಿ ಇಚ್ಚಾಮರಣಿ ಭೀಷ್ಮನೆದರು ಶಿಖಂಡಿ ಯುದ್ದಕ್ಕೆ ನಿಂತಾಗ ಯುದ್ದ ಮಾಡದೇ ಶರಣಾಗಿ ಮರ್‍ಯಾದೆ ನೀಡಿದ ನಮ್ಮ ದೇಶದಲ್ಲಿ ನಡೆದ ಈ ಘಟನೆಯನ್ನು ಯಾರು ತಾನೇ ಸಹಿಸಿಯಾರು?
ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ
ಎಲ್ಲಿ ನಾರಿಯರು ಸಂತೋಷದಿಂದ ಇರುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಗಾಂದೀಜಿ ಒಂದೆಡೆ ಹೆಣ್ಣೋರ್ವಳು ಮದ್ಯರಾತ್ರಿ ಒಬ್ಬಳೆ ನಿರ್ಭಯವಾಗಿ ಹೋಗುತ್ತಾಳೊ ಆಗಲೇ ಸ್ವತಂತ್ರ್ಯ ಸಿಕ್ಕಿದೆ ಎಂದು ತಿಳಿಯಬಹುದು. ಆದರೆ  ಮುಸ್ಸಂಜೆ ಹೊತ್ತಿನಲ್ಲಿ ಹೆಣ್ಣುಮಕ್ಕಳ ಮೇಲೆ ಕೈ ಮಾಡಿರುವುದು ಸಭ್ಯ ನಾಗರಿಕ ಕ್ಷಮಿಸುವುದಿಲ್ಲ. ಅದನ್ನು ನಾನು ಕೂಡ ಖಂಡಿಸುತ್ತೇನೆ.
ಈ ಘಟನೆ ಆದ ಮೂರು ದಿನದ  ನಂತರ ಆ ಸ್ಥಳವನ್ನು ಒಮ್ಮೆ ನೋಡಬೇಕು ಎನ್ನುವ ನಿಟ್ಟಿನಲ್ಲಿ ಅಲ್ಲಿಗೆ  ಹೋದಾಗ ನನ್ನ ಮನದಲ್ಲಿ ಮೂಡಿದ ಸಂಶಯವಿಷ್ಟೇ? ಅವರು ಇಂತಹ ಸ್ಥಳದಲ್ಲಿ ಹುಟ್ಟಿದ ಹಬ್ಬ ಆಚರಿಸುತ್ತಿದ್ದರೊ ಅಥವಾ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದರೊ ಎನ್ನುವ ಸಂಶಯ ಹುಟ್ಟಿಕೊಂಡಿದೆ. ಆ ಯುವಕ ಯುವತಿಯರು ಸಭ್ಯರಾಗಿದ್ದರೆ ಹುಟ್ಟಿದ ಹಬ್ಬವನ್ನು ನಗರ ಪ್ರದೇಶದ ಹೊರತಾಗಿ ಗುಡ್ಡದ ಮೇಲಿನ ಕೊನೆಯಲ್ಲಿರುವ ಮನೆಯನ್ನು ಯಾಕೆ ಆರಿಸಿಕೊಳ್ಳುತ್ತಿದ್ದರು? ಅಲ್ಲದೆ ಪೋಷಕರೊಂದಿಗೆ ಹುಟ್ಟಿದ ಹಬ್ಬ ಆಚರಿಸಿ ಕೊಳ್ಳಬಹುದಿತ್ತು ತಾನೇ? ರಾತ್ರಿಯಲ್ಲಿ ಗುಡ್ಡಗಾಡಿನ ಮನೆಯೊಂದರಲ್ಲಿ ಬರ್ತ್‌ಡೇ ಪಾರ್ಟಿ ಆಚರಿಸುವುದಾದರೆ ಪೊಲೀಸರಿಗೆ ಮಾಹಿತಿ ನೀಡಿ ಅವರಿಂದ ಅನುಮತಿ ಪಡೆಯ ಬೇಕಿತ್ತು? ಬರ್ತ್‌ಡೇ ಆಚರಿಸುವಾಗ ಅವರು ಹೋಗುವಾದ ಧರಿಸಿದ್ದ ಬಟ್ಟೆಯನ್ನು ತೆಗೆದು ತುಂಡುಡುಗೆ ಧರಿಸುವ ಪ್ರಮೇಯವಾದರು ಏನು? ಹೀಗೆ ಆಲೋಚಿಸುತ್ತಾ ಹೋದರೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆಯೇ ವಿನಃ ಅದಕ್ಕೆ ಉತ್ತರ ಸಿಗುವುದು ಕಷ್ಟವೆನಲ್ಲ. ಇದರಿಂದಲೇ ನಿಜಾಂಶ  ತಿಳಿಯಬಹುದು.
ಈ ಘಟನೆಗೆ ತಕ್ಕಂತೆ ಮಾಧ್ಯಮ, ವಿವಿಧ ಸಂಘಟನೆಗಳು ಆ ವಿಷಯವನ್ನೇ ಹಿಗ್ಗಾಮುಗ್ಗಾ ಎಳೆದಾಡುತ್ತಾ ಟಿಆರ್‌ಪಿ ಜಾಸ್ತಿ ಮಾಡಿಕೊಳ್ಳುತ್ತಿದ್ದಾವೆಯೇ ವಿನಃ ಅವರಲ್ಲಿ ಯಾರಿಗೂ ಅನ್ಯಾಯವಾದವರಿಗೆ ನ್ಯಾಯ ಒದಗಿಸಬೇಕು ಎನ್ನುವ ಕಾಳಜಿ ಇಲ್ಲಾ ಎನ್ನುವುದು ಸ್ಪಷ್ಟ.  ಪಡೀಲ್ ಘಟನೆಯಲ್ಲಿ ೮ ಮಂದಿ ಹಾಗೂ ೫ ಯುವತಿಯರು ಶ್ರೀಮಂತ ಕುಟುಂಬಕ್ಕೆ ಸೇರಿದ್ದು, ಪೊಲೀಸ್ ಅಧಿಕಾರಿಯ ಮಗಳು ಕೂಡ ಸೇರಿದ್ದಳು. ಈವರೆಗೆ ಅನ್ಯಾಯಕ್ಕೆ ಒಳಗಾದವರು ಯಾರು ದೂರು ನೀಡದಿರುವುದು ತಮ್ಮಿಂದ ತಪ್ಪಾಗಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಂತೆ ಅಲ್ಲವೇ? ಆದರೆ ಅವರಿಗೆ ಅನ್ಯಾಯವಾಗಿದೆ  ನ್ಯಾಯ ಒದಗಿಸಿಕೊಡಬೇಕು ಎನ್ನುವ ಸಂಘಟನೆಗಳು ಈ ಘಟನೆ ನಡೆಯುವುದಕ್ಕೆ ವಾರದ ಮುಂಚೆ ಬೆಂಗಳೂರಿನಿಂದ ಮಂಡ್ಯಕ್ಕೆ ಹೊರಟ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಅನೈತಿಕ ಚಟುವಟಿಕೆಗೆ ಕರೆದು ಪ್ರೋತ್ಸಾಹ ನೀಡದೆ ಇದ್ದಾಗ ರೈಲಿನಿಂದ ಹೊರಗೆ ದೂಡಿದರಲ್ಲ? ಕುಟುಂಬದ ಹೊರೆ ಹೊತ್ತ ಯುವತಿಯ ಬಾಳು ಕತ್ತಲೆಯಲ್ಲಿ ಕಳೆಯುವಂತಾಯಿತಲ್ಲಆಗ ಸಂಘಟನೆಗಳು ಯಾಕೆ ಕೈಕಟ್ಟಿ ಕುಳಿತಿರುವುದು ಸ್ವಾಮಿ? ಈ ಎರಡು ಘಟನೆ ನೋಡಿದಾಗ ಒಂದು ಕಣ್ಣಿಗೆ ಬೆಣ್ಣೆ  ಇನ್ನೊಂದು ಕಣ್ಣಿಗೆ ಸುಣ್ಣ ಸವರುತ್ತಿದ್ದಾರೆ ಎನ್ನುವುದು ನಿಜವಲ್ಲವೇ? ಅಥವಾ ಚುನಾವಣೆಯ ಮುನ್ಸೂಚನೆಯೇ? ಶ್ರೀಮಂತಿಕೆಯ ದರ್ಪ ಮೀತಿ ಮೀರಿ ಅನ್ಯ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಯುವತಿಯರ ಮೇಲೆ ದಾಳಿ ನಡೆದಾಗ ಅವರಿಗೆ ಸಾಂತ್ವಾನ ಹೇಳುವ ದೊಡ್ಡ ಸಮೂಹವೆ ರಾಜ್ಯದಲ್ಲಿ ಹುಟ್ಟಿಕೊಂಡಿತು. ತನ್ನ ಪಾಡಿಗೆ ಕರ್ತವ್ಯ ನಿರ್ವಹಿಸಿ ತಂದೆ ತಾಯಿಯ ಮುಖವನ್ನು ನೋಡಬೇಕು ಎಂದು ತವಕದಿಂದ ಹೋಗುವಾಗ  ಕಾಮಪಿತ್ತ ನೆತ್ತಿಗೇರಿದ ನಾಲ್ವರ ಯುವಕರ ಗುಂಪು ಬಡ ಯುವತಿ ಲೈಂಗಿಕ ಚಟುವಟಿಕೆಗೆ ಪ್ರೋತ್ಸಾಹ ನೀಡದಿದ್ದಾಗ ಚಲಿಸುತ್ತಿರುವ ರೈಲಿನಿಂದ ಹೊರಕ್ಕೆ ದೂಡಿದರಲ್ಲ ಆಗ ಎಲ್ಲಿ ಹೋಗಿದೆ ಸ್ವಾಮಿ ಇವರ ಮಾನವೀಯತೆ?  ಮನೆಯ ಮಗಳಾಗಿ ಬಾಳಿ ಬದುಕಬೇಕಾದ ಬಡ ಹೆಣ್ಣು ಮಗಳ ದುಃಖಕ್ಕೆ ಸಾಕ್ಷಿಯಾಗುವವರು ಯಾರಿದ್ದಾರೆ.
ಮಾರ್ನಿಂಗ್ ಮಿಸ್ಟ್‌ನಲ್ಲಿ ಬರ್ತ್‌ಡೇ ಪಾರ್ಟಿ ಆಯೋಜಿಸಿದ್ದ ಡಿಜೆ ವಿಜಯ್ ಹಾಗೂ ಗುರುದತ್ತ ಅವರು ದೊಡ್ಡ ದೊಡ್ಡ ಹೊಟೇಲ್‌ಗಳಲ್ಲಿ ಡಿಜೆ ನಡೆಸಿ ಹೆಣ್ಣು ಮಕ್ಕಳ ಸಂಪರ್ಕ ಬೆಳೆಸಿ ಅನ್ಯಚಟುವಟಿಕೆಗೆ ಹೆಣ್ಣು ಮಕ್ಕಳನ್ನು ಅಣಿಗೊಳಿಸುವ ಕೆಲಸವೆ ಇವರದಾಗಿರುವಾಗ ಅವರ ಮೇಲೆ ನಂಬಿಕೆ ಬರಲು ಸಾಧ್ಯವಿದೆಯೇ? ಗುರುದತ್ತನ ತಾಯಿ ತಾನೇ ಮಗನನ್ನು ಪಾರ್ಟಿಗೆ ಬಿಟ್ಟು ಬಂದಿದ್ದೇನೆ ಎಂದು ಹೇಳಿದಾಗ ದಾಳಿಗೊಳಗಾದವರ ಪೊಷಕರು ಮಕ್ಕಳ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಸಂತೋಷವಾಗಿತ್ತು. ಉಳಿದ ಪೋಷಕರ ಮನಸ್ಸಿಗೆ ನೋವಾಗಿದೆ ನಿಜ. ಆದರೆ ಗುರುದತ್ತನ ತಾಯಿಯ ನೈಜ ವಿಷಯ ತಿಳಿದುಕೊಂಡಾಗ ಇಂಥವರು ಇರುತ್ತಾರೆಯೊ ಎನ್ನುವ ಸಂಶಯದ ಕಿಡಿ ಹುಟ್ಟಿಕೊಳ್ಳುತ್ತದೆ. ಗುರುದತ್ತನ ತಾಯಿ ನಗರದ ಚಿಲಿಂಬಿಯಲ್ಲಿ ಮಸಾಜ್ ಪಾರ್ಲರ್ ನಡೆಸುತ್ತಿದ್ದು ೨೦೦೯ರಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿರುವ ಮಾಹಿತಿ ಪಡೆದು ಪೊಲೀಸರು ರೈಡ್ ಮಾಡಿದಾಗ ಸಿಕ್ಕಿ ಬಿದ್ದು ಅದನ್ನು ನಿಲ್ಲಿಸಲಾಗಿತ್ತು. ತಾಯಿಯೇ ಅನೈತಿಕ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾಳೆ ಎಂದಾಗ ಘನಂದಾರಿ ಮಗ ಎಷ್ಟರ ಮಟ್ಟಿಗೆ ಸಾಚಾ? ತಿಳಿಯುವುದು ನಿಮ್ಮ ಬುದ್ಧಿಮತ್ತೆಗೆ ಬಿಟ್ಟಿದ್ದೇನೆ.
ಪ್ರತಿಭಟನೆ ನಡೆಸುವಾಗ ಅನೇಕರು ದೇಹದಲ್ಲಿ ಕನಿಷ್ಟ ಬಟ್ಟೆ ಧರಿಸಿದರೆ ತಪ್ಪೇನು? ಎಂದಾಗ ಭವ್ಯ ಭಾರತದಲ್ಲೂ ಈ ಮಾತುಗಳು ಬರುತ್ತವೆ ಎಂದಾಗ ನಮ್ಮ ದೇಶದ ಸಂಸ್ಕೃತಿ ಎಲ್ಲಿಗೆ ತಲುಪುತ್ತಿದೆ. ಕಾಯೇಷು ದಾಸಿ, ಕರಣೇಶು ಮಂತ್ರಿ, ಬೋಜ್ಯೇಷು ಮಾತಾ, ರೂಪೇಚಾ ಲಕ್ಷ್ಮೀ, ಶಯನೇಷು ವೇಶ್ಯಾ, ಕ್ಷಮಯಾ ಧರಿತ್ರಿ- ಆರು ಗುಣಗಳುಳ್ಳ ನಾರಿ ಉತ್ತಮ ಸಂಸಾರ ನಿರ್ವಹಣೆ ಮಾಡಿ ಸಂಸ್ಕಾರವನ್ನು ಕಲಿಸುತ್ತಾಳೆ. ಇವಳಿಂದಲೇ ಭವಿಷ್ಯತ್ತಿನ ಪ್ರಜೆಗಳ ನಿರ್ಮಾಣವಲ್ಲವೇ. ಮಾರ್ನಿಂಗ್ ಮಿಸ್ಟ್‌ನ ಘಟನೆ ಗಮನಿಸಿದರೆ ಆಧುನಿಕ ನಾರಿಮಣಿಗಳಿಂದ ಭವಿತವ್ಯದ ಭಾರತ ನಿರ್ಮಾಣ ಸಾಧ್ಯವೇ? ಎನ್ನುವ ಅನುಮಾನ ಕಾಡುತ್ತದೆ. ಗುರುದತ್ತನ ತಾಯಿ ಹಾಗೂ ಅರೆ-ಬರೆ ಬಟ್ಟೆ ತೊಟ್ಟ ಐವರು ಯುವತಿಯರನ್ನು ನೋಡಿದಾಗ ಮೇಲಿನ ಮಾತಿಗೆ ವ್ಯತಿರಿಕ್ತವಾಗಿದ್ದಾರೆ ಎಂದು ಅನಿಸುವುದಿಲ್ಲವೇ?
ಅರೆಬರೆ ಬಟ್ಟೆ ತೊಟ್ಟದ್ದರಿಂದ ಏನಾಯ್ತು ಎನ್ನುವ ಸಾಮಾನ್ಯ ಪ್ರಶ್ನೆ ಕೇಳುವವರಿಗೆ ಲಂಡನ್ ಒಲಿಂಪಿಕ್ಸ್ ಯಾಕೆ ಮಾದರಿಯಾಗುವುದಿಲ್ಲ. ಹಿಂದು ಸಂಸ್ಕೃತಿಯಲ್ಲಿ ಮೈತುಂಬಾ ಬಟ್ಟೆ ಧರಿಸುವುದು, ಹಣೆಗೆ ಕುಂಕುಮ ಇಡುವುದು ಪದ್ಧತಿಯಾದರೂ ಅದನ್ನು ವಿದ್ಯಾವಂತರು ಇಂದು ಯಾರು ಪಾಲಿಸುತ್ತಿಲ್ಲ. ಆಧುನಿಕ ಶಿಕ್ಷಣಕ್ಕೆ ಮಾರುಹೋಗಿ ಭಾರತೀಯತೆ ಮರೆಯುತ್ತಾ ಸಾಗುವ ಯುವಜನತೆಗೆ ಮುಸ್ಲಿಂ ಮಹಿಳೆಯರು ಯಾಕೆ ಮಾದರಿಯಾಗುವುದಿಲ್ಲ. ಬುರ್ಖಾ ಧರಿಸಿ ದೇಹದ ಯಾವುದೇ ಭಾಗವನ್ನು ತೋರಗೊಡದಿರುವುದು ಮೆಚ್ಚಲೇ ಬೇಕು. ಲಂಡನ್ ಒಲಿಂಪಿಕ್ಸ್‌ನಲ್ಲಿ ಟ್ಯುನೀಷಿಯಾದ ಮಹಿಳಾ ವೇಟ್‌ಲಿಫ್ಟರ್ ಘಡಾ ಹಸೈನ್ ಮೈತುಂಬಾ ಬಟ್ಟೆ ಧರಿಸಿ ಸ್ಪರ್ಧಿಸಿದ ಮೊದಲ ಕ್ರೀಡಾ ಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ೬೯ ಕೆ.ಜಿ. ಮಹಿಳಾ ವಿಭಾಗದ ಬಿ.ಗುಂಪಿನಲ್ಲಿ ಸ್ಪರ್ಧಿಸುವಾಗ ಹೊಸದಾಗಿ ಅನುಮತಿ ಪಡೆದು ಯುನಿಟಾರ್ಡ್ ವಸ್ತ್ರಧರಿಸಿ ಪಾಲ್ಗೊಂಡಿದ್ದನ್ನು ಮರೆಯುವಂತಿಲ್ಲ. ಒಲಿಂಪಿಕ್ಸ್‌ನ ಹಿಂದಿನ ನಿಯಮದಂತೆ ವೇಟ್‌ಲಿಫ್ಟಿಂಗ್‌ನಲ್ಲಿ ಸ್ಪರ್ಧಿಗಳು ತೋಳು ಕಾಣುವ ಹಾಗೂ ಮೊಣಕಾಲಿನ ಮೇಲೆ ವಸ್ತ್ರ ಧರಿಸಬೇಕಿತ್ತು. ಆದರೆ ಮುಸ್ಲಿಂ ದೇಶಗಳ ಸ್ಪರ್ಧಿಗಳ ಅನುಕೂಲಕ್ಕಾಗಿ ಮಾರ್ಪಾಟು ಮಾಡಲಾಗಿದೆ. ೧೯ ವರ್ಷದ ಹಸೈನ್ ವೇಟ್‌ಲಿಫ್ಟಿಂಗ್ ಕಾಸ್ಟ್ಯೂಮ್‌ನ ಒಳಗೆ ಯುನಿಟಾರ್ಡ್ ಬಳಸಿದ್ದಲ್ಲದೇ ಶಿರವಸ್ತ್ರ ಧರಿಸಿದ್ದರು. ಪ್ರಜ್ಞಾವಂತ ನಾಗರೀಕರೆನಿಸಿಕೊಂಡವರು ಆಂಗ್ಲ ವಿದ್ಯಾಭ್ಯಾಸದ ಪ್ರಭಾವದಿಂದ ಇಂಚು ಇಂಚು ದೇಹ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಪ್ರೀತಿಯ ಮಕ್ಕಳಲ್ಲೂ ಇದೆ ಮಾನಸಿಕತೆ ಹುಟ್ಟು ಹಾಕುತ್ತಿದ್ದಾರೆ ಎನ್ನುವುದಕ್ಕೆ ಮಾರ್ನಿಂಗ್ ಮಿಸ್ಟ್‌ನಲ್ಲಿ ನಡೆದ ಘಟನೆ ಹಾಗೂ ಅದಕ್ಕೆ ಬೆಂಬಲ ವ್ಯಕ್ತಪಡಿಸಿದವರ ವರ್ತನೆಯಿಂದಲೇ ತಿಳಿಯುತ್ತದೆ.  
ಬುದ್ದಿವಂತ ನಾಡಿನ ಜನತೆಯ ಮಾನಸಿಕತೆ ಯಾವ ರೀತಿಯದಾಗಿದೆ. ಯಾವ ದೃಷ್ಟಿಕೋನದಲ್ಲಿ ವ್ಯವಹರಿಸುತ್ತಿದ್ದಾರೆ. ಮಾರ್ನಿಂಗ್ ಮಿಸ್ಟ್‌ನಲ್ಲಿ ಕಾನೂನು ಕೈಗೆತ್ತಿಕೊಂಡು ಹೆಣ್ಣು ಮಕ್ಕಳ ಮೇಲೆ ಕೈಮಾಡಿರುವುದು ಖಂಡನೀಯ. ಆದರೆ ಬರ್ತ್‌ಡೇ ಪಾರ್ಟಿ ಎನ್ನುತ್ತಾ ಮದ್ಯಪಾನ, ಗಾಂಜಾ ಸೇದುತ್ತಾ ಮೋಜು-ಮಸ್ತಿಗಳಲ್ಲಿ ತೊಡಗಿದ್ದ ಯುವಕ ಯುವತಿಯರಿಗೆ ಬೆಂಬಲವಾಗಿರುತ್ತಾರೆ ಎಂದಾಗ ಜನತೆ ಯಾವುದನ್ನು ಓಲೈಕೆ ಮಾಡುತ್ತಿದೆ. ಹುಟ್ಟಿದ ಮಗುವಿನಲ್ಲಿ ಕೇಳಿದರೂ ಹೆಣ್ಣು ಮಕ್ಕಳಿಗೆ ಹೊಡೆದಿರುವುದು ತಪ್ಪು ಎಂದು ಹೇಳುತ್ತದೆ. ಹಾಗೆ ರಾತ್ರಿ ಸಮಯ ಸ್ನೇಹಿತರಾಗಿದ್ದರೂ ಮದ್ಯಪಾನ ಮತ್ತರಾಗಿರುವ ಯುವಕರೊಂದಿಗೆ ಹೆಣ್ಣು ಮಕ್ಕಳು ಇರುತ್ತಾರೆಂದರೆ ಇವರೆಷ್ಟು ಸಭ್ಯರು ಎನ್ನುವ ಪ್ರಶ್ನೆಯನ್ನು ಕೇಳುತ್ತದೆ. ಮಕ್ಕಳ ಈ ರೀತಿಯ ವರ್ತನೆಗೆ ಕಾರಣರಾರು? ಪೋಷಕರೋ ಅಥವಾ ಸಮಾಜವೋ? ಸಿಕ್ಕಿದ ಸ್ವಾತಂತ್ರ್ಯವೋ ಅಥವಾ ಸ್ವೇಚ್ಚೆಯೇ? ಈಗಲಾದರೂ ದಲಿತ ಕವಿ ಸಿದ್ದಲಿಂಗಯ್ಯ ಹೇಳಿರುವುದು ಸತ್ಯ ಎಂದು ಒಪ್ಪಿಕೊಳ್ಳಬಹುದು ತಾನೇ? ಶ್ರೀಮಂತರ ಮಕ್ಕಳಿಗೆ ಅನ್ಯಾಯವಾದರೆ ಕಾನೂನು ಬಗ್ಗೆ ಮಾತನಾಡುವ ಜನ ಬಡ ಹೆಣ್ಣು ಮಗಳಿಗಾದ ಅನ್ಯಾಯಕ್ಕೆ ಸಾಂತ್ವಾನ ನೀಡುವರೇ......?
ವಿದ್ಯಾರ್ಥಿಗಳ ನುಡಿ:
ಪೋಷಕರು ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಹಾಸ್ಟೆಲ್‌ಗಳಲ್ಲಿಯೋ, ಪೇಯಿಂಗ್ ಗೆಸ್ಟ್‌ನಲ್ಲಿ ಸೇರಿಸುತ್ತಾರೆ. ವಿದ್ಯಾಭ್ಯಾಸದ ಬದಲಿಗೆ ಸಂತೋಷ ಅನುಭವಿಸಲು ಸಾಮಾಜಿಕ ಜಾಲತಾಣ, ಮೊಬೈಲು ಇತರ ಮಾಧ್ಯಮ ಬಳಸಿಕೊಂಡು ಇಂತಹ ಚಟುವಟಿಕೆಯಲ್ಲಿ  ಬಾಗಿಯಾಗುತ್ತಾರೆ. ಹುಟ್ಟಿದ ಹಬ್ಬ ಈ ರೀತಿ ಆಚರಿಸಿಕೊಂಡು ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಟ್ಟುಕೊಂಡಿದ್ದಾರೆ. ಬುದ್ಧಿವಂತ ಜನ ಸತ್ಯಾಸತ್ಯತೆ ಅರಿತು ಮಾತನಾಡಬೇಕು.
ನವೀನ್ ಎಸ್.-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪುತ್ತೂರು.

ದಾಳಿ ಸಂದರ್ಭ ಹಿಂಸಾ ಪ್ರವೃತ್ತಿ ಅನುಸರಿಸಿದ್ದು ಖಂಡನೀಯ. ಭವ್ಯ ಭಾರತದಲ್ಲಿ ಹುಟ್ಟಿದ ವಿದ್ಯಾರ್ಥಿನಿಯರು ಸ್ನೇಹಿತರ ಜೊತೆಯಲ್ಲಿ ಅರೆಬೆತ್ತಲೆಯಾಗಿ ಹುಟ್ಟಿದ ಹಬ್ಬ ಆಚರಿಸಿದ್ದು ನಮ್ಮ ಸಂಸ್ಕೃತಿಯಲ್ಲ. ತಂದೆ ತಾಯಿಯೊಂದಿಗೆ ಆಚರಿಸಿದ್ದರೆ ತೊಂದರೆಯಾಗುತ್ತಿದ್ದಿಲ್ಲ.
ಸಂತೋಷ ನಾಯ್ಕ-ಬಿಕಾಂ ವಿದ್ಯಾರ್ಥಿ ಮಂಗಳೂರು ವಿಶ್ವವಿದ್ಯಾನಿಲಯ

ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಹೆಣ್ಣಿನ ಮೇಲೆ ಕೈ ಮಾಡಿರುವುದು ತಪ್ಪು. ವಿದೇಶಿ ಸಂಸ್ಕೃತಿಗೆ ಮಾರು ಹೋಗಿ ಭಾರತೀಯ ಸಂಸ್ಕೃತಿಯನ್ನು ಗಾಳಿಗೆ ತೂರುತ್ತಿದ್ದಾರೆ. ಅನೈತಿಕ ಚಟುವಟಿಕೆಗಳಿಗೆ ಪೂರಕವಾಗಿರುವ ಹೋಮ್ ಸ್ಟೇಗಳ ವಿರುದ್ಧ ಪೋಷಕರು ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾಗಿದೆ.
ರವಿ ಹಾವೇರಿ- ಎಂಎಸ್‌ಡಬ್ಲ್ಯೂ ವಿದ್ಯಾರ್ಥಿ

ಸಂಸ್ಕೃತಿ ಎನ್ನುವುದು ಮನೆಯಿಂದಲೇ ಬರಬೇಕಾಗಿದೆ.  ಈ ದಾಳಿಯಲ್ಲಿ ತಪ್ಪು-ಒಪ್ಪುಗಳ ಜಿಜ್ಞಾಸೆ ಮೂಡುತ್ತದೆ. ಹುಟ್ಟಿದ ಹಬ್ಬವನ್ನು ಪೋಷಕರ ಜೊತೆಯಲ್ಲಿ ಮನೆಯಲ್ಲಿ ಆಚರಿಸಬಹುದಾಗಿದ್ದರೂ ನಗರದ ಹೊರವಲಯದಲ್ಲಿ ಆಚರಿಸುವ ಪ್ರಮೇಯವಿರಲಿಲ್ಲ.
ಅಕ್ಷಿತಾ - ಪಾಲಿಟೆಕ್ನಿಕ್ ವಿದ್ಯಾರ್ಥಿನಿ ಮಂಗಳೂರು.

ಎಂಜಾಯ್ ಮಾಡುವುದೆಂದರೆ ಇಂದು ಹೀಗೆ ಎಂಬಂತಾಗಿರುವುದು ದುರದೃಷ್ಟಕರ.ನಿಜವಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿಗಳ ಜೊತೆ ಆಟ-ಪಾಠಗಳಲ್ಲಿ ತೊಡಗಿಕೊಂಡು ಭವಿಷ್ಯದ ಜೀವನಕ್ಕೆ ಭದ್ರ ತಳಪಾಯ ಹಾಕುವುದರಲ್ಲೇ ಎಂಜಾಯ್ ಇರುವುದು. ಇದನ್ನು ಮರೆತರೆ ಎಂಜಾಯ್ ಮಾಡಲು ಹೋಗಿ ಭವಿಷ್ಯವೇ ಮುರುಟಿ ಹೋಗುವುದು.ಇದನ್ನು ವಿದ್ಯಾರ್ಥಿ ಮಿತ್ರರು ಅರ್ಥ ಮಾಡಿಕೊಳ್ಳಬೇಕಾಗಿದೆ.
ಚೈತ್ರ , ವೈದ್ಯಕೀಯ ವಿದ್ಯಾರ್ಥಿನಿ, ಕಾಸರಗೋಡು





No comments:

Post a Comment