Sunday 5 August 2012


ದೈಹಿಕ ನ್ಯೂನತೆಯಿಂದ ಕಂಗೆಡದ ವಿಶಿಷ್ಟ ಕೈಚಳಕದ ತಬಲಾವಾದಕ ಶಿವಾನಂದ ಶೇಟ್

SHIVANANDA SHET
 ಯುವ ಜನತೆ ಪಾಶ್ಚತ್ಯ ಸಂಗೀತದ ಬೆಂಬತ್ತಿ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಆ ಸಂಸ್ಕೃತಿ ಓಲೈಸುವುದರಿಂದ ಅವರಿಗೆ ಪಾಶ್ಚಾತ್ಯದಲ್ಲೂ ಹಾಗೂ ದೇಶೀಯ ಕಲಾ ಪ್ರಕಾರಗಳಲ್ಲಿ ಪಾಂಡಿತ್ಯ ಲಭಿಸದೆ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಯುವಪ್ರತಿಭೆಗಳಿಗೆ ವೇದಿಕೆಯ ಅವಶ್ಯಕತೆಯೊಂದಿಗೆ ಅವರನ್ನು ಸತತವಾಗಿ ಪ್ರೋತ್ಸಾಹಿಸಿದಾಗಲೆ ದೇಶೀಯ ಕಲೆಯನ್ನು ಉಳಿಸುವುದಕ್ಕೆ ಸಾಧ್ಯವಿದೆ. ವ್ಯಕ್ತಿಯನ್ನು ನೋಡದೆ ಅವರಲ್ಲಿರುವ ಪ್ರತಿಭೆ ಗುರುತಿಸಬೇಕು.
ಎಸ್.ಶಿವಾನಂದ ಶೇಟ್- ವಿಕಲಚೇತನ ತಬಲಾ ವಾದಕ.









ಜಾಗತೀಕರಣದ ಯುಗದಲ್ಲಿ ಬಾಹ್ಯ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡಿ ತಮ್ಮ ಸುಂದರ ಜೀವನಕ್ಕೆ ತಿಲಾಂಜಲಿ ಇಟ್ಟವರು ಅನೇಕ ಮಂದಿ ಕಾಣ ಸಿಗುತ್ತಾರೆ. ಸೌಂದರ್ಯ, ವಿದ್ಯಾರ್ಹತೆ ಹಾಗೂ ದೈಹಿಕವಾಗಿ ಬಲಿಷ್ಠವಾಗಿದ್ದರೆ ಮಾತ್ರ ಜೀವನ ನಡೆಸಬಹುದು ಎಂದು ತಿಳಿದುಕೊಂಡಿರುವ ಆಧುನಿಕ ಯುವ ಜನತೆಗೆ ಮಾದರಿಯಾಗಿ ವೈಜ್ಞಾನಿಕ ವೇಗ ಪಡೆದುಕೊಳ್ಳುತ್ತಿರುವ ನಗರದ ಮಧ್ಯಭಾಗದಲ್ಲಿ ವಾಸವಾಗಿರುವ ವಿಕಲಚೇತನ ಪ್ರತಿಭೆ  ಶಿವಾನಂದ ಶೇಟ್ ಅಪವಾದವಾಗಿದ್ದಾರೆ.
ಅಪ್ರಕಟೀಕೃತಶಕ್ತಿಃ ಶಕ್ತೋಪಿ ಜನಸ್ತಿರಸ್ಕ್ರಿಯಾಂ ಲಭತೇ/
ನಿವಸನ್ನಂತರ್ದಾರುಣಿ ಲಂಘ್ಯೋ ವಹ್ನಿರ್ನ ತು ಜ್ವಲಿಯಃ//
ಶೀರ್ಷಿಕೆ ಸೇರಿಸಿ
ಶಕ್ತಿಶಾಲಿಯಾಗಿದ್ದರೂ ಸಹ ತನ್ನ ಮಹಿಮೆ ಪ್ರಕಟಿಸದ ಮನುಜನು ಜಗದ ಅವಜ್ಞೆಗೆ ಗುರಿಯಾಗುತ್ತಾನೆ, ಮರದೊಳಗೆ ಅಡಗಿದ ಅಗ್ನಿಯು (ಕಾಷ್ಠಗಳೆರಡರ ಘರ್ಷಣೆಯಿಂದಷ್ಟೇ ಹುಟ್ಟುವ ಬೆಂಕಿ)ಹೊರಗೆ ಕಾಣದಿರುವಾಗ ಜನರ ಉಪೇಕ್ಷೆಗಷ್ಟೇ ಅದು ತುತ್ತಾಗುವುದಲ್ಲವೇ! ಅಂತೆಯೇ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅವ್ಯಕ್ತವಾದ ಶಕ್ತಿ ಅಡಕವಾಗಿರುತ್ತದೆ. ಅದನ್ನು ನೈಜವಾದ ಹೊತ್ತಿನಲ್ಲಿ ಪ್ರಕಟ ಪಡಿಸಬೇಕು. ಕೆಲಸ ಅಸಾಧ್ಯವೆಂದು ಕೈಕಟ್ಟಿ ಕುಳಿತರೆ ಸಣ್ಣ ಕೆಲಸ ಮಾಡಲು ಸಾಧ್ಯವಿಲ್ಲ. ಅಸಾಧ್ಯವಾದುದನ್ನು ಸಾಧ್ಯವಾಗುವಂತೆ ಮಾಡುವ ಧೃಢ ನಿರ್ಧಾರದ ಹೆಜ್ಜೆಯೇ ಸಮಾಜದಲ್ಲಿ ಗುರುತಿಸುವಂತಾಗುತ್ತದೆ. ಗರುಡ ಎಷ್ಟೇ ಬಲಿಷ್ಟವಾಗಿದ್ದರೂ ಶ್ರಮ ವಹಿಸದಿದ್ದರೆ ಒಂದಡಿಯಷ್ಟು ಮುಂದೆ ಚಲಿಸಲು ಸಾಧ್ಯವಿಲ್ಲ. ಇರುವೆ ಸಾಮರ್ಥ್ಯ ಹಾಗೂ ದೇಹದ ಆಕೃತಿಯಲ್ಲಿ ಚಿಕ್ಕದಾಗಿದ್ದರೂ ಸತತ ಪ್ರಯತ್ನದಿಂದ ಸಾವಿರಾರು ಹೆಜ್ಜೆ ಕ್ರಮಿಸ ಬಲ್ಲುದಾಗಿದೆ. ಪ್ರತಿಭೆಗೆ ಯಾವುದೇ ವರ್ಗ, ಜಾತಿ ಮೇಲು-ಕೀಳು ಎನ್ನುವ ಸಾಮಾನ್ಯ ಅಂಶ ಅಡ್ಡ ಬರುವುದಿಲ್ಲ. ಸಮಾಜದಲ್ಲಿ ಅನೇಕ ಬಡ ಪ್ರತಿಭೆಗಳು ಅನುಕೂಲ ಹಾಗೂ ಅನಾನುಕೂಲತೆಗಳ ನಡುವೆಯೂ ಅಸಾಧ್ಯವಾದುದನ್ನು ಸಾಸಿದ್ದಾರೆ. ದೈಹಿಕ ನ್ಯೂನ್ಯತೆಗಳಿಂದ ಕಂಗೆಡದೆ ಅಚಲ ನಿರ್ಧಾರದ ಮೂಲಕ ತಮ್ಮ ದುರದೃಷ್ಟ ಹಳಿಯುತ್ತಾ ಕೂರದೇ ಸಿಕ್ಕಿದ ಸಮಯ ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಗಮನ ಸೆಳೆಯುವ ಕಾರ್ಯ ಮಾಡಿದ್ದಾರೆ.
ಮಂಗಳೂರು ನಗರ ಮದ್ಯಭಾಗದಲ್ಲಿ ವಾಸವಾಗಿರುವ ಶಿವಾನಂದ ಶೇಟ್ ಜನ್ಮದತ್ತವಾಗಿ ದೊರಕಿದ ಊನತೆಯನ್ನು ಶಾಪವಾಗಿ ಸ್ವೀಕರಿಸದೆ ಅದನ್ನು ವರವಾಗಿ ಸ್ವೀಕರಿಸಿದ್ದಾರೆ. ಪೋಲಿಯೊ ರೋಗದ ಪರಿಣಾಮದಿಂದ ತನ್ನ ಎರಡು ಕಾಲುಗಳ ಬೆಳವಣಿಗೆ ಕುಂಠಿತಗೊಂಡು ಎರಡು ಕೈಗಳನ್ನೆ ಕಾಲುಗಳನ್ನಾಗಿ ಬಳಸಿಕೊಂಡಿರುವುದು ಮಾತ್ರವಲ್ಲದೆ ಅದ್ಬುತವಾಗಿ ತಬಲವಾದನ ಮಾಡುತ್ತಾರೆ ಎಂದಾಗ ಆಶ್ಚರ್ಯ ಪಡಲೇಬೇಕು. ಸಾಸಿದರೆ ಸಬಳವನ್ನಾದರೂ ನುಂಗಬಹುದು ಎನ್ನುವ ನಾಣ್ಣುಡಿ ಇಂಥವರನ್ನು ನೋಡಿಯೇ ಹೇಳಿರಬೇಕು ಅಲ್ಲವೇ...
ಕೇರಳದ ಕೊಲ್ಲಂನಲ್ಲಿ ೧೯೫೯ ನವೆಂಬರ್ ೨೮ ರಂದು ಜನಿಸಿದ ಶಿವಾನಂದರು ಹುಟ್ಟಿದ ೬ ತಿಂಗಳು  ಮಾತ್ರ ಅಲ್ಲಿದ್ದು  ನಂತರ ತಂದೆ-ತಾಯಿ ಮಂಗಳೂರಿಗೆ ಬಂದು ನೆಲೆ ನಿಂತಿದ್ದಾರೆ. ಅಂಚೆ ಇಲಾಖೆಯ ಉದ್ಯೋಗಿಯಾಗಿ, ವಾಯ್‌ಲಿನ್ ವಾದಕರಾಗಿದ್ದ ಶ್ರೀನಿವಾಸ ರಾವ್ ಹಾಗೂ ರತ್ನಾಬಾಯಿ ದಂಪತಿಗಳ ಮೂರನೇ ಮಗನಾಗಿ ಜನಿಸಿದ ಇವರು ೭ ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಅಣ್ಣಂದಿರಾದ ವೆಂಕಟಗಿರಿ, ಶ್ಯಾಮ್‌ಸುಂದರ್ ಇವರಂತೆ ಕಲೆಯಲ್ಲಿ ಆಸಕ್ತಿ ತಳೆದು ವಾಯ್‌ಲಿನ್, ತಬಲಾ ಅಭ್ಯಾಸ ಮಾಡಿದ್ದಾರೆ. ಅವಿಭಕ್ತ ಕುಟುಂಬದ ಸದಸ್ಯರೆಲ್ಲಾ ಕಲಾಮಾತೆಯನ್ನು ಆರಾದಿಸುತ್ತಾ ಒಂದೊಂದು ಕಲೆಯಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಬಾಲಕನಾಗಿದ್ದಾಗ ನಗರದ ಪಳ್ನೀರ್‌ನಲ್ಲಿರುವ ಸತ್ಯಸಾಹಿ ಮಂದಿರದಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮಕ್ಕೆ ಪರರನ್ನು ಅವಲಂಬಿಸಿ ಹೋಗುತ್ತಿದ್ದರು. ಭಜನಾ ಕಾರ್ಯಕ್ರಮಕ್ಕೆ ಉಪಯೋಗಿಸುತ್ತಿದ್ದ ಪರಿಕರ ನೋಡಿ ಆಕರ್ಷಿತನಾಗಿ ಮನದಲ್ಲಿ ಏನನ್ನಾದರೂ ಸಾಸಬೇಕು ಎನ್ನುವ ಆಸೆಯ ಬೀಜ ಮೊಳಕೆಯೊಡೆದು ಅದುವೆ ಹೆಮ್ಮರವಾಗಿ ನಿರ್ಧಾರ ಅಚಲವಾಯಿತು. ಸಂಪೂರ್ಣ ಭಜನಾ ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಎರಡು ಡಬ್ಬಿ  ಇಟ್ಟು ಕೊಂಡು ಬಾರಿಸುತ್ತಿದ್ದರು. ಭಜನೆಯ ಹುಚ್ಚು ತಬಲಾ ವಾದನದತ್ತ ಆಸಕ್ತಿ ತಳೆಯುವಲ್ಲಿ ಪ್ರೇರಣೆಯಾಗಿರುವುದಲ್ಲದೆ ಕ್ಯಾಸೆಟ್ಟು, ಟಿವಿ, ಆಕಾಶವಾಣಿ ಸಂಗೀತ ಕಾರ್ಯಕ್ರಮಕ್ಕೆ ಕಿವಿಯಾಗಿ ಸಂಗೀತ ಜ್ಞಾನದೊಂದಿಗೆ ತಬಲಾವಾದನದ ಒಂದೊಂದೆ ಮಟ್ಟುಗಳನ್ನು ಅರಗಿಸಿಕೊಂಡರು.
ಕೋತಿ ಭಾರಃ ಸಮರ್ಥನಾಂ ಕಿಂ ದೂರಂ ವ್ಯವಸಾಯಿನಾಮ್/
ಕೋ ವಿದೇಶಃ ಸುವಿದ್ಯಾನಾಂ ಕಃ ಪರಃ ಪ್ರಿಯವಾದಿನಾಮ್//
ಸಮರ್ಥರಿಗೆ ಯಾವುದು ತಾನೇ ಭಾರ? ಶ್ರಮ ಪಡಬಲ್ಲವರಿಗೆ ಯಾವುದು ತಾನೇ ದೂರ? ವಿದ್ಯಾವಂತರಿಗೆ ಯಾವುದು ತಾನೇ ಪರದೇಶ? ಒಳ್ಳೆಯ ಮಾತನಾಡಬಲ್ಲವರಿಗೆ ಯಾರು ತಾನೇ ಅಪರಿಚಿತರು? ಶಿವಾನಂದರಿಗೆ ಸಾಮರ್ಥ್ಯವಿದೆ ಎನ್ನುವುದನ್ನು ಧೃಡ ಮನಸ್ಸಿನಿಂದ ನಿರ್ಧರಿಸಿದ್ದರ ಪರಿಣಾಮದಿಂದಲೇ ಹಲವಾರು ಕಾರ್ಯಕ್ರಮ ನೀಡಲು ಸಾಧ್ಯವಾಗಿದೆ. ಶಿವಾನಂದರ ಕಲಾ ಆಸಕ್ತಿ ಗಮನಿಸಿ ಪೋಷಕರು ಗುರುವಿನಿಂದ ವಿದ್ಯೆ ಕೊಡಿಸಬೇಕು ಎನ್ನುವುದಕ್ಕಾಗಿ ನಾರಾಯಣ ಸುವರ್ಣ ಬೋಳಾರ ಅವರಲ್ಲಿ ಸೇರಿಸಿದ್ದರು. ಸತತ ೨ ವರ್ಷ ಅಭ್ಯಾಸ ಮಾಡಿದ್ದರು. ಪಂಡಿತ್ ಓಂಕಾರನಾಥ ಗುಲ್ವಾಡಿ ಅವರಿಂದ ಒಂದು ವಾರಗಳ ಕಾಲ ತಬಲಾ ಪ್ರಾತ್ಯಕ್ಷಿಕಾ ಶಿಬಿರದಲ್ಲಿ ಭಾಗವಹಿಸಿ ಕಲಿತದ್ದು ಹೊರತುಪಡಿಸಿ ಯಾವುದೇ ತರಗತಿಗೆ ಹೋಗದೇ ಸ್ವ-ಪ್ರೇರಣೆ ಹಾಗೂ ಆಸಕ್ತಿಯಿಂದ ಕಲಿತು ರಾಜ್ಯ, ಹೊರರಾಜ್ಯಗಳಲ್ಲಿ ಹಲವಾರು ಕಾರ್ಯಕ್ರಮ ನೀಡಿದ್ದಾರೆ. ೧೯ ವರ್ಷದವರೆಗೆ ಮಗನ ಆಸೆಗೆ ತಣ್ಣಿರೆರೆಚದೆ ಸಂಗೀತ ವೃಕ್ಷಕ್ಕೆ ಪ್ರೀತಿಯ ನೀರನ್ನು ಸುರಿದರು. ಮಗ ಇಚ್ಚಿಸಿದ ಕಾರ್ಯಕ್ರಮಕ್ಕೆ ಅವರನ್ನು ಎತ್ತಿಕೊಂಡು ಸಾಗಿರುವುದರ ಪರಿಣಾಮ ಶಿವಾನಂದರು ಸಮಾಜದಲ್ಲಿ ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗಿದೆ.
ಹಸಿ ಮಡಕೆಯ ಮೇಲೆ ರಚಿಸಿದ ಚಿತ್ರ ವಿಚಿತ್ರ ರೇಖೆಗಳು ಮಡಕೆಯನ್ನು ಸುಟ್ಟಾಗಲೂ ಹೇಗೆ ಅಚ್ಚಳಿಯದೆ ಉಳಿಯುತ್ತದೊ ಚಿಕ್ಕಂದಿನಲ್ಲಿ ಕಲಿತ ವಿದ್ಯೆ ಸಮಾಜದಲ್ಲಿ ವ್ಯಕ್ತಿಯ ವ್ಯಕ್ತಿತ್ವ ನಿರ್ಮಿಸಲು ಸಹಕಾರಿಯಾಗುತ್ತದೆ ಎನ್ನುವುದಕ್ಕೆ ಶಿವಾನಂದ ಶೇಟ್ ಜ್ವಲಂತ ಸಾಕ್ಷಿಯಾಗಿದ್ದಾರೆ. ತಬಲಾ ವಾದನ ಮಾತ್ರವಾಗಿರದೆ ಮರದ ಕೆತ್ತನೆಯ ವಿನ್ಯಾಸ ರಚಿಸುವ ಕಾರ್ಯದಲ್ಲೂ ಪಳಗಿದ್ದಾರೆ. ಇವರು ರಚಿಸಿದ ದೇವರ ಮಂಟಪ ಇಂದಿಗೂ ಮನೆಯಲ್ಲಿದೆ. ಮರದ ಕೆತ್ತನೆಗೆ ವಿನ್ಯಾಸ ರಚಿಸಿದಾಗ ಸ್ವಲ್ಪ ವ್ಯತ್ಯಾಸವಾದರೂ ಅವರೂ ಸಹಿಸುವುದಿಲ್ಲ. ಅಲ್ಲದೇ ೧೦೦ಕ್ಕಿಂತಲೂ ಹೆಚ್ಚು ದೇಶ-ವಿದೇಶದ ಅಂಚೆ ಚೀಟಿ ಸಂಗ್ರಹಿಸಿರುವುದು ಅವರ ಆಸಕ್ತಿಗೆ ಕೈಗನ್ನಡಿಯಾಗಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಂವೇದನಾ ಕಾರ್ಯಕ್ರಮದಲ್ಲಿ ಸೋಲೋ ತಬಲಾ ಪ್ರದರ್ಶನ ಮಾಡಿರುವುದು ಶಿವಾನಂದರ ಜೀವಮಾನದ ಪ್ರಥಮ ಪ್ರದರ್ಶನವಾಗಿದೆ. ಪ್ರಸಿದ್ಧ ಸಂಗೀತ ನಿರ್ದೇಶಕ ಎಂ.ಎಸ್.ಗಿರಿಧರ್ ಅವರನ್ನು ಸ್ಟುಡಿಯೋ ರೆಕಾರ್ಡಿಂಗ್‌ಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅನೇಕ ವೇದಿಕೆ ಒದಗಿಸಿದ್ದಾರೆ. ಕಲಾವಿದ ವೆಂಕಟೇಶ ಮೂರ್ತಿ ಅವರ ಸಹಕಾರವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾರೆ. ಪ್ರಸಿದ್ದ ಕಲಾವಿದರೊಂದಿಗೆ ಭಕ್ತಿಗೀತೆ, ಸುಗಮ ಸಂಗೀತ, ಭಜನಾ ಕಾರ್ಯಕ್ರಮದಲ್ಲಿ ತಬಲಾವಾದಕರಾಗಿ ಕಾರ್ಯಕ್ರಮ ನೀಡಿರುವುದು ಇವರ ಸಾಧನೆಯ ಇನ್ನೊಂದು ಮುಖವಾಗಿದೆ. ತಂತ್ರಜ್ಞಾನ ವೇಗ ಪಡೆದುಕೊಂಡಿರುವ ಪ್ರಸ್ತುತ ಕಾಲಘಟ್ಟದಲ್ಲಿ ಶಿವಾನಂದರಿಗೆ ವೇದಿಕೆಯ ಅವಶ್ಯಕತೆಯಿದೆ. ಹಲವಾರು ಸಂಘಸಂಸ್ಥೆಗಳು ಇವರಿಗೆ ವೇದಿಕೆ ನಿರ್ಮಿಸಿಕೊಟ್ಟಿದ್ದರೂ ಮುಂದಿನ ದಿನದಲ್ಲಿ ವಿಕಲಚೇತನ ಕಲಾವಿದರನ್ನು ಗುರಿಯಾಗಿಸಿ ಅವರನ್ನು ಪ್ರೋತ್ಸಾಹಿಸಲು ಸೂಕ್ತ ವೇದಿಕೆ ನಿರ್ಮಿಸಿ ಕೊಡಬೇಕಾಗಿದೆ. ಆಗಲೇ ಅವರ ಸಾಧನೆಗೆ ತಕ್ಕ ಫಲ ಸಿಕ್ಕಂತಾಗುತ್ತದೆ.


ಮಗನ ಮನದಲ್ಲಿ ವಿಕಲಾಂಗ ಎನ್ನುವ ಭಾವನೆಯನ್ನು ತೋರಗೊಡದೆ ಅವನಲ್ಲಿ ಅಡಕವಾಗಿರುವ ಪ್ರತಿಭೆ ಸಮಾಜಕ್ಕೆ ತೋರ್ಪಡಿಸಬೇಕು ಎನ್ನುವ ಉದ್ದೇಶದಿಂದ ಪ್ರೋತ್ಸಾಹ ನೀಡಿದೆವು. ಅವನು ಆಸೆ ಪಟ್ಟ ಸಮಾರಂಭಗಳಿಗೆ ಎತ್ತಿಕೊಂಡು ಹೋಗಿ ಬರುತ್ತಿದ್ದೆವು. ಆವತ್ತು ಅವನಲ್ಲಿ ಆತ್ಮವಿಶ್ವಾಸವನ್ನು ತುಂಬಿದ್ದರಿಂದ ಇಂದು ಉತ್ತಮ ಕಾರ್ಯಕ್ರಮ ಕೊಡಲು ಶಕ್ತನಾಗಿದ್ದಾನೆ.
ರತ್ನಾಬಾಯಿ- ಶಿವಾನಂದರ ತಾಯಿ








No comments:

Post a Comment