Sunday, 22 July 2012




ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ನೆಲೆನಿಂತು ಭಕ್ತರ ಸಲಹುತ್ತಿರುವ ಕೊಲ್ಲೂರಿನ ಮೂಕಾಂಬಿಕೆ
ಪಶ್ಚಿಮ ಘಟ್ಟಗಳ ತಪ್ಪಲಿನ ಸೌಪರ್ಣಿಕಾ ನದಿಯ ದಂಡೆಯಲ್ಲಿ ನೆಲೆನಿಂತಿರುವ ಕೊಲ್ಲೂರು ಶ್ರೀ ಮೂಕಾಂಬಿಕೆ ಭಕ್ತರ ಕಷ್ಟಗಳನ್ನು ಅನುದಿನವೂ ಪೂರೈಸುತ್ತಿರುವಳು. ನದಿಯ ಇಕ್ಕೆಲಗಳಲ್ಲಿ ಸೊಂಪಾಗಿ ಬೆಳೆದಿರುವ ಹಸಿರು ಹುಲ್ಲಿನ ಪಕ್ಕದಲ್ಲಿಯೆ ಇರುವ ಕೊಡಚಾದ್ರಿ ಬೆಟ್ಟದ ಸೌಂದರ್ಯ ಸಿರಿಯೊಂದಿಗೆ ದೇವಿಯ ಭವ್ಯ ಮಂದಿರ ಕಂಗೊಳಿಸುತ್ತದೆ. ಘಟ್ಟದ ತಪ್ಪಲಿನಲ್ಲಿರುವ ಮೂಕಾಂಬಿಕಾ ಕ್ಷೇತ್ರವು ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಸುತ್ತದೆ.
೧೨೦೦ ವರ್ಷಗಳ ಹಿಂದೆಯೆ ಸ್ಥಾಪಿತವಾಗಿದ್ದು, ಹಿಂದು ಸಂತ, ವೈದಿಕ ವಿದ್ವಾಂಸ ಆದಿಶಂಕರರೊಂದಿಗೆ ಈ ದೇವಸ್ಥಾನ ಸಂಬಂಧವಿರುವುದರಿಂದ ಅಗಾಧ ವಿಶೇಷತೆಯಿದೆ. ದೇವಿಯು ಶಕ್ತಿ, ಸರಸ್ವತಿ, ಮಹಾಲಕ್ಷ್ಮೀಯ ಆವಿರ್ಭಸುವಿಕೆ ಎಂದು ನಂಬಿರುವುದರಿಂದ ಭಕ್ತರು ಅತೀವವಾದ ನಂಬಿಕೆ ಇರಿಸಿಕೊಂಡಿದ್ದಾರೆ. ಈ ದೇವಸ್ಥಾನ ಕರ್ನಾಟಕದಲ್ಲಿನ ಸಪ್ತ ಮುಕ್ತಿ ಸ್ಥಳ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ. ಕೊಲ್ಲೂರು, ಉಡುಪಿ, ಸುಬ್ರಹ್ಮಣ್ಯ, ಕುಂಭಾಶಿ, ಕೋಟೇಶ್ವರ, ಶಂಕರನಾರಾಯಣ ಮತ್ತು ಗೋಕರ್ಣಗಳೇ ಸಪ್ತ ಕ್ಷೇತ್ರಗಳಾಗಿದೆ.
ಕೊಡಚಾದ್ರಿ ಶಿಖರದ ತಪ್ಪಲಿನಲ್ಲಿ ಮೂಕಾಂಬಿಕೆಯು ನೆಲೆಗೊಂಡಿದ್ದು ಶಿವ ಹಾಗೂ ಶಕ್ತಿ ಇವರೀರ್ವರನ್ನೂ ಸಂಯೋಜಿಸಿರುವ ಜ್ಯೋತಿರ್ಲಿಂಗದ ಸ್ವರೂಪದಿಂದ ಈ ದೇವತೆ ಕಂಡು ಬರುತ್ತಾಳೆ. ಶ್ರೀ ಚಕ್ರದ ಮೇಲೆ ಸ್ಥಾಪಿತವಾಗಿರುವ ದೇವತೆ ಪಂಚಲೋಹದಿಂದ ಶೋಭಿಸುತ್ತಾಳೆ.  ಈ ವಿಗ್ರಹವನ್ನು ಆದಿ ಶಂಕರಾಚಾರ್ಯರು ಈ ಸ್ಥಳಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಪ್ರತಿಷ್ಠಾಪಿಸಿದರು. ಮೂಕಾಂಬಿಕೆಯ ಮೂಲಸ್ಥಾನ ಕೊಡಚಾದ್ರಿ ಶಿಖರದ ತುತ್ತತುದಿಯ ಮೇಲಿದೆ. ಸಮುದ್ರ ಮಟ್ಟದಿಂದ ೩೮೮೦ ಮೀ ಎತ್ತರದಲ್ಲಿದೆ. ಕೊಡಚಾದ್ರಿಯನ್ನು ಸಂಪೂರ್ಣವಾಗಿ ಚಾರಣ ಮಾಡಿಕೊಂಡು ಮೂಲಸ್ಥಳ ತಲುಪುವುದು ಸಾಮಾನ್ಯ ಜನರಿಗೆ ಕಷ್ಟಕರವಾದ್ದರಿಂದ ಶಂಕರಾಚಾರ್ಯರು ಮೂರ್ತಿಯನ್ನು ಕೊಲ್ಲೂರಿನಲ್ಲಿ ಪುನರ್ ಸ್ಥಾಪಿಸಿದರು. ದೇವಳದಲ್ಲಿ ಪಂಚಮುಖಿ ಗಣೇಶನ ಮನಮೋಹಕ ವಿಗ್ರಹವನ್ನು ಕಾಣಬಹುದಾಗಿದೆ.  ಕರ್ನಾಟಕದಲ್ಲಿನ ಪರಶುರಾಮ ಕ್ಷೇತ್ರದ ಸಪ್ತ ಮುಕ್ತಿ ಸ್ಥಳದ ತೀರ್ಥಯಾತ್ರಾ ತಾಣಗಳ ಪೈಕಿ ಕೊಲ್ಲೂರು ಒಂದಾಗಿದೆ.
ದೇವಸ್ಥಾನದಲ್ಲಿ ಸುಬ್ರಹ್ಮಣ್ಯ, ಪಾರ್ಥಿಶ್ವರ, ಪಂಚಮುಖಿ ಗಣಪತಿ, ಚಂದ್ರ ಮೌಳೀಶ್ವರ, ಪ್ರಾಣಲಿಂಗೇಶ್ವರ, ನಂಜುಂಡೇಶ್ವರ, ಆಂಜನೇಯ, ವೆಂಕಟರಮಣ ತುಳಸಿ ಗೋಪಾಲಕೃಷ್ಣ ದೇವರುಗಳನ್ನು ನೋಡಬಹುದಾಗಿದೆ. ನವರಾತ್ರಿಯಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿರುತ್ತದೆ. ಜನ್ಮಾಷ್ಟಮಿ ಅಥವಾ ಕೃಷ್ಣ ಜಯಂತಿ ಇಲ್ಲಿನ ಜನಪ್ರಿಯ ಉತ್ಸವ ಎನಿಸಿಕೊಂಡಿದೆ. ಈ ದಿನದಂದು ಶಂಭು ಲಿಂಗವು ಕಾಣಿಸಿಕೊಂಡಿತು ಎನ್ನುವ ಪ್ರತೀತಿಯಿದೆ. ನವರಾತ್ರಿ ಕೊನೆಯ ದಿನದಂದು ಇಲ್ಲಿನ ಸಂಸ್ಕೃತಿ ಮಂಟಪದಲ್ಲಿ ಪುಟ್ಟ ಮಕ್ಕಳಿಗೆ ಅವರದೇ ಮಾತೃಭಾಷೆಯಲ್ಲಿ ವರ್ಣಮಾಲೆಯ ಅಕ್ಷರಗಳಲ್ಲಿ ದೀಕ್ಷೆ ಅಥವಾ ಉಪದೇಶ ನೀಡಲಾಗುತ್ತದೆ. ಇದು ವಿದ್ಯಾರಂಭದ ದ್ಯೋತಕವಾಗಿರುತ್ತದೆ. ಈ ದೇವಳದಲ್ಲಿ ಯಾವುದೇ ಸೂಕ್ತವಾದ ದಿನದಂದು ವಿದ್ಯಾರಂಭದ ಕೈಂಕರ್ಯವನ್ನು ನಡೆಸಬಹುದಾಗಿದೆ. ದೇವಸ್ಥಾನದಲ್ಲಿ ಪ್ರತಿದಿನದ ಮಧ್ಯಾಹ್ನದ ಅವ ಮತ್ತು ಸಾಯಂಕಾಲ ಎರಡೂ ಸಂದರ್ಭದಲ್ಲಿ ಭಕ್ತರಿಗೆ ಅನ್ನದಾನ ಮಾಡಲಾಗುತ್ತದೆ.
ಕ್ಷೇತ್ರದ ಇತಿಹಾಸ:
ಪಶ್ಚಿಮ ಘಟ್ಟವೆಂದು ಕರೆಯಲ್ಪಡುವ ಘೋರವಾದ ಕಾನನದಲ್ಲಿ ಹಲವಾರು ವರ್ಷಗಳ ಹಿಂದೆ ಕೋಲ ಮಹರ್ಷಿ ತಪಸ್ಸು ಮಾಡುತ್ತಿದ್ದನು. ಲೋಕಕಲ್ಯಾಣಕ್ಕಾಗಿ ದೇವರನ್ನು ಸಂಪ್ರೀತಗೊಳಿಸಿ ಅವರಿಂದ ಬೇಕಾದ ವರವನ್ನು ಪಡೆಯುವ ಉದ್ದೇಶದಿಂದ ತಪಸ್ಸನ್ನಾಚರಿಸುತ್ತಿದ್ದ ಈ ಕೋಲ ಮಹರ್ಷಿ. ಆದರೆ ಸ್ವಾರ್ಥ ಸಾಧನೆಗಾಗಿ ಶಿವನನ್ನು ಮೆಚ್ಚಿಸಿ ವರವನ್ನು ಪಡೆದು ಸಜ್ಜನರಿಗೆ ತೊಂದರೆ ಕೊಡುವ ದುರುದ್ದೇಶವನ್ನು ಹೊತ್ತ ರಾಕ್ಷಸನೊಬ್ಬ ಕೂಡ ಅದೇ ಕಾಡಿನಲ್ಲಿ ದೀರ್ಘ ಘನಘೋರ ತಪಸ್ಸನ್ನು ಮಾಡುತ್ತಿದ್ದನು. ರಾಕ್ಷಸ ತನ್ನ ದುಷ್ಟ ಬಯಕೆ ಪೂರೈಸದಂತೆ ಅವನನ್ನು ತಡೆಗಟ್ಟುವ ಸಲುವಾಗಿ ಆದಿಶಕ್ತಿಯು ಆತನನ್ನು ಮೂಗನನ್ನಾಗಿ ಮಾಡಿದಳು. ಹೀಗೆ ರಾಕ್ಷಸನ ದೀರ್ಘ ತಪಸ್ಸಿಗೆ ಮೆಚ್ಚಿ ಶಿವ ರಾಕ್ಷಸನ ಮುಂದೆ ಪ್ರತ್ಯಕ್ಷನಾದಾಗ ರಾಕ್ಷಸನ ಬಾಯಿಯಿಂದ ಒಂದು ಮಾತು ಕೂಡ ಹೊರಳದೆ ಯಾವ ವರವನ್ನು ಕೇಳಲು ಸಾಧ್ಯವಾಗಲಿಲ್ಲ. ಶಿವ ಪ್ರತ್ಯಕ್ಷನಾದಾಗಲೂ ಯಾವುದೇ ವರವನ್ನು ಕೇಳಲು ಅಸಾಧ್ಯವಾದ್ದರಿಂದ ಸಿಟ್ಟುಗೊಂಡ ರಾಕ್ಷಸ ಋಷಿ ಮುನಿಗಳಿಗೆ ತೊಂದರೆ ಕೊಡಲು ಪ್ರಾರಂಬಿಸಿದನು.  ಕೋಲ ಮಹರ್ಷಿಯ ಪ್ರಾರ್ಥನೆಯಿಂದ ಆದಿಶಕ್ತಿ ಮೂಕಾಸುರನನ್ನು ಕೊಲ್ಲುತ್ತಾಳೆ. ಮೂಕಾಸುರನನ್ನು ಕೊಂದ ಅಂಬಿಕೆಗೆ ಋಷಿಗಳು ಹಾಗೂ ದೇವತೆಗಳು  ``ಮೂಕಾಂಬಿಕಾ" ಎಂದು ಗುಣಗಾನ ಮಾಡುತ್ತಾರೆ. ಕೋಲ ಮಹರ್ಷಿಯ ಪ್ರಾರ್ಥನೆಗೆ ಅನುಸಾರವಾಗಿ ದಿವ್ಯಮಾತೆಯು ಎಲ್ಲಾ ದೇವರುಗಳ ಜೊತೆಗೂಡಿ ಅಲ್ಲಿಯೇ ನೆಲೆಗೊಂಡು ಭಕ್ತರನ್ನು ಅನುಗ್ರಹಿಸುತ್ತಿರುವಳು.
ಇನ್ನೊಂದು ಕಥೆ:
ಆದಿ ಶಂಕರರು ತಾವು ಪಡೆದ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಮಾತ್ರದಿಂದ ದೇವತೆಯ ವಾಕ್ಯಕ್ಕೆ ಕಟ್ಟುಬಿದ್ದು ಅಲ್ಲಿ ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ. ಆ ಕಥೆಯಲ್ಲಿ ಆದಿ ಶಂಕರರು ಕೊಡಚಾದ್ರಿ ಬೆಟ್ಟದಲ್ಲಿ ಧ್ಯಾನಮಾಡಿ ಅವರ ಮುಂದೆ ಪ್ರತ್ಯಕ್ಷಳಾದ ದೇವಿಯು ಬಯಕೆಯೇನೆಂದು ಕೇಳಿದಾಗ ತಾನು ಪೂಜಿಸಲು ಬಯಸಿರುವ ಕೇರಳದಲ್ಲಿನ ಸ್ಥಳವೊಂದರಲ್ಲಿ ದೇವಿಯನ್ನು ಸಂಘಟಿಸಿ ಸ್ಥಾಪಿಸುವ ತಮ್ಮ ಬಯಕೆಯನ್ನು ಹೊರಗೆಡವಿದರು. ಇದಕ್ಕೆ ದೇವಿ ಸಮ್ಮತಿಸಿದಳು ಹಾಗೂ ಶಂಕರರಿಗೆ ಸವಾಲನ್ನು ಇರಿಸಿದಳು. ತಾನು ಆದಿ ಶಂಕರರನ್ನು ಅನುಸರಿಸುವುದಾಗಿಯೂ ಮತ್ತು ಶಂಕರರು ತಮ್ಮ ಗವ್ಯಸ್ಥಾನ ತಲುಪವರೆಗೆ ಹಿಂತಿರುಗಿ ನೋಡಬಾರದು ಎಂದು ಸವಾಲನ್ನು ಕೂಡ ಶಂಕರರಿಗೆ ನೀಡುತ್ತಾಳೆ. ಕೊಡಚಾದ್ರಿ ಬೆಟ್ಟದಿಂದ ಹೊರಟು ಬೆಟ್ಟದ ಬುಡದಲ್ಲಿ ಬರುವಾಗ ದೇವಿಯು ಶಂಕರರನ್ನು ಪರೀಕ್ಷಿಸುವ ದೃಷ್ಠಿಯಿಂದ ತನ್ನ ನಡೆಗೆ ಉದ್ದೇಶಪೂರ್ವಕವಾಗಿ ಅಲ್ಪವಿರಾಮ ನೀಡುತ್ತಾಳೆ. ಶಂಕರರಿಗೆ ದೇವಿಯ ಗೆಜ್ಜೆಯ ಧ್ವನಿ ಕೇಳದಾದಾಗ ತತ್‌ಕ್ಷಣವೇ ಹಿಂದುರುಗಿ ನೋಡಿದರು. ಆಗ ದೇವಿಯು ಅವರನ್ನು ಅನುಸರಿಸುವುದನ್ನು ಬಿಟ್ಟು ಆ ಸ್ಥಳದಲ್ಲಿ ತನ್ನ ವಿಗ್ರಹ ಸ್ಥಾಪಿಸುವಂತೆ ಶಂಕರರಿಗೆ ತಿಳಿಸಿದಳು ಎಂದು ಇನ್ನೊಂದು ಕಥೆಯಲ್ಲಿ ಬರುತ್ತದೆ.
ಶಂಕರಾಚಾರ್ಯರ ತವರು ಕೇರಳದ ಹುಟ್ಟು:
ಕೊಲ್ಲೂರು ಕ್ಷೇತ್ರವು ಗೋಕರ್ಣದಿಂದ ಕನ್ಯಾಕುಮಾರಿಯವರೆಗೆ ಹಬ್ಬಿದ್ದ ಪ್ರಾಚೀನ ಕೇರಳದ ಒಂದು ಭಾಗವೂ ಆಗಿತ್ತು. ಕೇರಳದ ಹುಟ್ಟಿನ ಕುರಿತಾದ ಒಂದಷ್ಟು ಪುರಾಣದ ಕಥೆಗಳನ್ನು ಕಾಣಬಹುದಾಗಿದೆ. ವೀರ ಸನ್ಯಾಸಿ ಪರಶುರಾಮನಿಂದ ಕೇರಳ ಸೃಷ್ಟಿಯಾದದ್ದು ಎನ್ನುವ ಪುರಾಣ ಕಥೆಯಿದೆ. ಬ್ರಾಹ್ಮಣರ ಪುರಾಣದಲ್ಲಿ ಮಹಾವಿಷ್ಣುವಿನ ೬ ನೇ ಅವತಾರವಾದ ಪರಶುರಾಮನು ತನ್ನ ಕದನ ಕೊಡಲಿಯನ್ನು ಸಮುದ್ರದೊಳಗೆ ಎಸೆದ ಪರಿಣಾಮವಾಗಿ ಕೇರಳದ ಭೂಭಾಗವು ಹುಟ್ಟಿಕೊಂಡಿತು. ಜಲರಾಶಿಯಿಂದಾವೃತವಾದ ಈ ಸ್ಥಳವನ್ನು ವಾಸಯೋಗ್ಯವನ್ನಾಗಿ ಪರಿವರ್ತಿಸಲಾಯಿತು.
ದುಷ್ಟರ ಸಂಹಾರಕ್ಕಾಗಿ ಯುಗ-ಯುಗದಲ್ಲಿ ಬಗೆ ಬಗೆಯ ಅವತಾರವನ್ನೆತ್ತಿ ಬರುತ್ತೇನೆ ಎಂದು ಭಕ್ತ ಜನರಿಗೆ ಮಹಾವಿಷ್ಣು ಅಭಯವನ್ನಿತ್ತು ಪರಿಣಾಮವೇ ವಿಷ್ಣುವಿನ ೬ ನೇ ಅವತಾರ ಪರಶುರಾಮನದು. ಕ್ಷತ್ರಿಯ ರಾಜ ಕಾರ್ತವೀರ್ಯ ದರ್ಪದಿಂದ ಪರಶುರಾಮನ ತಂದೆ ಜಮದಗ್ನಿಯನ್ನು ಕೊಂದ ಪರಿಣಾಮವೇ ೨೧ ಬಾರಿ ಭೂಮಂಡಲ ಸುತ್ತಿ ದುಷ್ಟ ಕ್ಷತ್ರೀಯರ ಸಂಹಾರ ಮಾಡಿ ಅವರ ರಕ್ತವನ್ನು ಐದು ಸರೋವರದಲ್ಲಿ ಭರ್ತಿ ಮಾಡಿದ. ಕ್ಷತ್ರೀಯ ರಾಜರನ್ನು ನಾಶಮಾಡಿದ ನಂತರ ತನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸಲುವಾಗಿ ವಿದ್ವಜ್ಜನರ ಸಮೂಹವನ್ನು ಸಂಪರ್ಕಿಸಿದ. ಶಾಶ್ವತ ನರಕ ಶಿಕ್ಷೆಯಿಂದ ತನ್ನ ಆತ್ಮವನ್ನು ರಕ್ಷಿಸಿಕೊಳ್ಳಲು ಜಯಿಸಿದ್ದ ಭೂಭಾಗವನ್ನು ಬ್ರಾಹ್ಮಣರಿಗೆ  ಹಸ್ತಾಂತರಿಸಬೇಕು ಎನ್ನುವ ಸಲಹೆ ನೀಡಲಾಯಿತು. ವಿದ್ವಜ್ಜನರು ನೀಡಿದ ಸಲಹೆಯಂತೆ ಪರಶುರಾಮನು ನಡೆದುಕೊಂಡು ಹೋಗಿ ಗೋಕರ್ಣದಲ್ಲಿ ಧ್ಯಾನಕ್ಕೆ ಕುಳಿತುಕೊಂಡನು. ಅಲ್ಲಿ ಸಾಗರಗಳ ದೇವರಾದ ವರುಣ ಮತ್ತು ಭೂದೇವತೆಯಾದ ಭೂಮಿದೇವಿಯು ಅವರನ್ನು ಹರಸಿದರು. ಗೋಕರ್ಣದಿಂದ ನೇರವಾಗಿ ಹೊರಟು ಕನ್ಯಾಕುಮಾರಿ ತಲುಪಿ, ತನ್ನ ಕೈಯಲ್ಲಿದ್ದ ಕೊಡಲಿಯನ್ನು ಸಾಗರದ ಉತ್ತರದ ಕಡೆಗೆ ಎಸೆದನು. ಆ ಕೊಡಲಿಯು ನೆಲೆಗೊಂಡ ಸ್ಥಳವೇ ಕೇರಳವಾಗಿತ್ತು. ಇದು ಗೋಕರ್ಣ ಮತ್ತು ಕನ್ಯಾಕುಮಾರಿಯ ನಡುವೆ ನೆಲೆಗೊಂಡಿರುವ ಭೂಭಾಗವಾಗಿದೆ. ಪುರಾಣ ಹೇಳುವಂತೆ ಪರಶುರಾಮನು ಕ್ಷತ್ರಿಯರನ್ನು ಕೊಂದ ಪಾಪ ಪರಿಹಾರಾರ್ಥವಾಗಿ ಉತ್ತರದಿಂದ ೬೪ ಬ್ರಾಹ್ಮಣ ಕುಟುಂಬಗಳನ್ನು ಕೇರಳದಲ್ಲಿ ನೆಲೆಗೊಳಿಸಿದ. ಪುರಾಣಗಳ ಅನುಸಾರ ಕೇರಳದ ಭೂಭಾಗ ಪರಶುರಾಮ ಕ್ಷೇತ್ರಂಎನ್ನುವುದಾಗಿ ಕರೆಯಲ್ಪಡುತ್ತದೆ. ಸಮುದ್ರದಿಂದ ಭೂಬಾಗವನ್ನು ಅವನು ವಾಸಯೋಗ್ಯವಾಗಿಸಿದ ಐತಿಹ್ಯವೇ ಈ ಹೆಸರಿಗೆ ಕಾರಣವಾಗಿದೆ.
ದೇವಳದ ವಿಶೇಷ:
ದೇವಸ್ಥಾನದಲ್ಲಿ ಉಪಕಾರ ಸ್ಮರಣೆಗಾಗಿ ಭಕ್ತರು ಕೊಡಮಾಡಿದ ಆಭರಣಗಳ ಬೃಹತ್ ಸಂಗ್ರಹವೇ ಇದೆ. ದೇವತೆಯ ಕೃಪಾಕಟಾಕ್ಷದಿಂದ ತಮ್ಮ ಕನಸು ಹಾಗೂ ಈಡೇರಿದ ಬಯಕೆಯ ನೆನಪಾರ್ಥವಾಗಿ ಕೊಡುಗೆಯನ್ನು ನೀಡಿರುತ್ತಾರೆ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.  ದೇವಿಯ ನಾನಾ ಬಗೆಯ ಆಭರಣಗಳ ಪೈಕಿ ಪಚ್ಚೆಯಲ್ಲಿರುವ ಆಭರಣವು ಅತ್ಯಮೂಲ್ಯ ಎನಿಸಿಕೊಂಡಿದೆ. ಪಚ್ಚೆಯು ಜ್ಞಾನವನ್ನು ಸಂಕೇತಿಸುತ್ತದೆ. ದೇವಳದ ಉತ್ಸವದಲ್ಲಿ ಬಂಗಾರದಲ್ಲಿ ಮಾಡಿರುವ ಎರಡು ಉತ್ಸವಮೂರ್ತಿಯನ್ನು ಬಳಸಲಾಗುತ್ತದೆ. ಮೂಲ ವಿಗ್ರಹ ಕಳೆದುಹೋದಾಗ ಅದಕ್ಕೆ ಪರ್ಯಾಯವಾಗಿ ಚೆನ್ನಮ್ಮ ರಾಣಿಯು ಮತ್ತೊಂದನ್ನು ನೀಡಿದ್ದಳು. ಆದರೆ ಕಳೆದುಹೋದ ಉತ್ಸವಮೂರ್ತಿಯು ತರುವಾಯದಲ್ಲಿ ಸಿಕ್ಕಿತು. ಹೀಗಾಗಿ ಕೊಲ್ಲೂರಿನಲ್ಲಿ ಎರಡು ಉತ್ಸವಮೂರ್ತಿಯನ್ನು ಕಾಣಬಹುದು. ತಮಿಳ್ನಾಡಿನ ಹಿಂದಿನ ಮುಖ್ಯಮಂತ್ರಿ ಈ ದೇವಸ್ಥಾನಕ್ಕೆ ಒಂದು ಬಂಗಾರದ ಕತ್ತಿಯನ್ನು ಕೊಡುಗೆಯಾಗಿ ನೀಡಿದ್ದು ಅದು ಒಂದು ಕೆ.ಜಿ.ಯಷ್ಟು ತೂಗುತ್ತದೆ ಹಾಗೂ ಎರಡೂವರೆ ಅಡಿ ಉದ್ದವಿದೆ. ಕರ್ನಾಟಕದ ಹಿಂದಿನ ಮುಖ್ಯಮಂತ್ರಿ ಗುಂಡೂರಾವ್ ಬೆಳ್ಳಿಯಿಂದ ಮಾಡಿದ ಇದೇ ಬಗೆಯ ಕತ್ತಿಯೊಂದನ್ನು ಕೊಡುಗೆಯಾಗಿ ನೀಡಿದ್ದರು. ಮೂಕಾಂಬಿಕಾ ದೇವಿಯ ಮುಖವಾಡ ಸಂಪೂರ್ಣ ಸುವರ್ಣಮಯವಾಗಿದೆ. ಇದು ವಿಜಯ ನಗರ ಸಾಮ್ರಾಜ್ಯದ ಕೊಡುಗೆಯಾಗಿದೆ. ಕೆಳದಿಯ ಚೆನ್ನಮ್ಮಾಜಿಯವರಿಂದ ಕೊಡುಗೆಯಾಗಿ ನೀಡಲ್ಪಟ್ಟ ಜ್ಯೋತಿರ್ಲಿಂಗದ ಬಂಗಾರದ ಮುಖವಾಡವು ಇಲ್ಲಿನ ಅನನ್ಯ ಆಭರಣವಾಗಿದೆ. ಸಂಗೀತ ಉತ್ಸವ ಕಳೆದ ೩೦ ನಡೆಯುತ್ತಿದ್ದು  ಸಂಗೀತ ಚಕ್ರವರ್ತಿ ಯೇಸುದಾಸ ತಮ್ಮ ಜನ್ಮದಿನದಂದು ಶ್ರೀ ಕ್ಷೇತ್ರಕ್ಕೆ ಬಂದು ಸರಸ್ವತಿ ಕುರಿತಾದ ಕೀರ್ತನೆಗಳನ್ನು ಹಾಡುತ್ತಿದ್ದಾರೆ. ಒಂಬತ್ತು ದಿನಗಳ ಅವದಿಯ ಸಂಗೀತ ಉತ್ಸವ ಪ್ರತಿ ಜನವರಿಯಲ್ಲಿ ಆರಂಭವಾಗುತ್ತದೆ.
ಸ್ಥಳ ಮಹಿಮೆ:
ದಟ್ಟವಾದ ನಿತ್ಯಹರಿಧ್ವರ್ಣದ ಕಾಡಿನಿಂದ ಮತ್ತು ಅಡಿಕೆ ತೋಟಗಳನ್ನು ಹೊಂದಿರುವ ಇತರ ಪುಟ್ಟ ಹಳ್ಳಿಗಳಿಂದ ಕೊಲ್ಲೂರು ಸುತ್ತುವರಿಯಲ್ಪಟ್ಟಿದೆ. ಕೊಡಚಾದ್ರಿ ಶಿಖರದೊಂದಿಗೆ ಪಶ್ಚಿಮ ಘಟ್ಟಗಳ ಇತರ ಶಿಖರಗಳು ಸೇರಿಕೊಂಡು ದೇವಸ್ಥಾನಕ್ಕೆ ಒಂದು ಸುಂದರ ನೋಟ ನೀಡುತ್ತಿದೆ. ಇಲ್ಲಿನ ಕಾಡುಗಳು ಯಾವಾಗಲೂ ಹಸಿರಿನಿಂದ ಕಂಗೊಳಿಸಿರುತ್ತವೆ ಮತ್ತು ಹಲವಾರು ಕಾಡುಪ್ರಾಣಿಗಳು ಹಾಗೂ ಪಕ್ಷಿಗಳಿಗೆ ಆಶ್ರಯ ನೀಡಿದೆ. ಇಲ್ಲಿ ಅಪರೂಪದ ಸಸ್ಯಗಳನ್ನು ಸಹ ಕಾಣಬಹುದು. ಕೊಲ್ಲೂರು ಮತ್ತು ಕೊಡಚಾದ್ರಿಯ ನಡುವೆ ಇರುವ ಅಂಬಾವನ ಎನ್ನುವ ಕಾಡು ಅಭೇಧ್ಯವಾದ ಕಾಡು ಎಂದು ಬಣ್ಣಿಸಲಾಗಿದೆ.
ದೇವಸ್ಥಾನದಿಂದ ಸುಮಾರು ೪ ಕಿ.ಮೀ. ದೂರದಲ್ಲಿ ಅರಶಿನಗುಂಡಿ ಎನ್ನುವ ಹೆಸರಿನ ಸುಂದರ ಜಲಪಾತವಿದೆ. ಈ ಜಲಪಾತವು ಕೊಡಚಾದ್ರಿ ಬೆಟ್ಟಗಳ ತಪ್ಪಲು ಪ್ರದೇಶದಲ್ಲಿ ನೆಲೆಗೊಂಡಿದ್ದು, ಇದು ಸುಂದರ ದೃಶ್ಯಗಳ ಪೈಕಿ ಒಂದೆನಿಸಿದೆ. ಈ ಜಲಪಾತವು ದಾಲಿ ಹಳ್ಳಿಯ ಸಮೀಪದಲ್ಲಿದ್ದು ಇಲ್ಲಿಗೆ ತಲುಪಲು ಚಾರಣಿಗರು ೩.ಕಿ.ಮೀ ನಷ್ಟು ಅಂತರವನ್ನು ಚಾರಣ ಮಾಡ ಬೇಕಾಗುತ್ತದೆ.
ಮೂಕಾಂಬಿಕಾ ದೇವಿಯ ಪವಿತ್ರ ಸ್ಥಳದಲ್ಲಿ ಹರಿಯುವ ಎರಡು ನದಿಗಳಾದ ಅಗ್ನಿತೀರ್ಥ ಮತ್ತು ಸೌಪರ್ಣಿಕಾ ಕೊಡಚಾದ್ರಿ ಬೆಟ್ಟಗಳಿಂದ ಉದ್ಬವವಾಗುತ್ತದೆ. ತಂಪಾದ ನೀರಿನ ಪುಟ್ಟ ಚಿಲುಮೆಯು ಕಾಲಭೈರವ ಮತ್ತು ಉಮಾಮಹೇಶ್ವರ ದೇವಸ್ಥಾನಗಳ ನಡುವೆ ನೆಲೆಗೊಂಡಿದ್ದು ಇದೇ ಸೌಪರ್ಣಿಕಾ ನದಿಯ ಉಗಮ ಸ್ಥಾನವಾಗಿದೆ.
ಸೌಪರ್ಣಿಕೆಯ ಹಿನ್ನೆಲೆ:
ಪುರಾಣದ ಪ್ರಕಾರ ಸುಪರ್ಣನು(ಗರುಡ) ತನ್ನ ತಾಯಿ ವಿನುತಾಳ ಅಳಲನ್ನು ಉಪಶಮನ ಗೊಳಿಸಬೇಕೆಂದು ದೇವತೆಗೆ ಮೊರೆಯಿಡುತ್ತಾ ಈ ನದಿಯ ದಂಡೆಗಳ ಮೇಲೆ ಕುಳಿತು ತಪಸ್ಸು ಮಾಡಿದ. ದೇವತೆಯು ಅವನ ಮುಂದೆ ಪ್ರತ್ಯಕ್ಷಳಾದಾಗ ಈ ನದಿಯನ್ನು ಇನ್ನು ಮುಂದೆ ತನ್ನ ಹೆಸರಿನಿಂದ ಕರೆಯಬೇಕೆಂದು ಪ್ರಾರ್ಥಿಸಿದ. ಆದ್ದರಿಂದಲೇ ಈ ನದಿಯನ್ನು ಸೌಪರ್ಣಿಕಾ ಎನ್ನುವುದಾಗಿ ಕರೆಯಲಾಗುತ್ತದೆ. ಆತ ತಪಸ್ಸಿಗೆ ಕುಳಿತ ಎನ್ನಲಾಗುವ ಜಾಗದಲ್ಲಿ ಈಗಲೂ ಒಂದು ಪುಟ್ಟ ಗವಿಯಿದ್ದು ಅದನ್ನು ಗರುಡನ ಗವಿಯೆಂದು ಕರೆಯಲಾಗುತ್ತದೆ.
ಈ ಪವಿತ್ರ ನದಿಯು ಕೊಡಚಾದ್ರಿಯಲ್ಲಿ ಉಗಮವಾಗಿ ಅಂತರ್ಗಾಮಿ ಪ್ರದೇಶದ ಅಂಚಿನವರೆಗೆ ಹರಿಯುತ್ತದೆ. ಈ ಪ್ರದೇಶದಲ್ಲಿ ಭೃಂಗೀಶ ಮತ್ತು ತಿಪ್ಪಲಾದ ಎನ್ನುವ ಎರಡು ಸಣ್ಣ ನದಿಗಳು ಅದಕ್ಕೆ ಸೇರುತ್ತದೆ. ನಂತರ ಇದು ಪಶ್ಚಿಮದ ಕಡೆಗೆ ಹರಿಯುತ್ತದೆ. ಸಂಪಾರ ಎನ್ನುವ ಹೆಸರಿನೊಂದಿಗೆ ಕೊಲ್ಲೂರನ್ನು ಸುತ್ತುವರಿದು ಸಾಗುತ್ತದೆ. ಮರವಂತೆಯ ಮಹಾರಾಜ ಸ್ವಾಮಿ( ವರಾಹ ಸ್ವಾಮಿ) ದೇವಸ್ಥಾನದ ಸಮೀಪ ಇದು ಸಮುದ್ರವನ್ನು ಸೇರುತ್ತದೆ. ಈ ನದಿಯು ಹರಿಯುತ್ತಾ ಹೋಗುವಾಗ ೬೪ ವಿಭಿನ್ನ ಔಷದಿ ಸಸ್ಯಗಳು ಹಾಗೂ ಭೇರುಗಳ ಅಂಶ ಧಾತುಗಳನ್ನು ಹೀರಿಕೊಳ್ಳುವುದರಿಂದ ಈ ನದಿಯಲ್ಲಿ ಸ್ನಾನ ಮಾಡುವವರ ಎಲ್ಲಾ ಕಾಯಿಲೆಗಳನ್ನು ಇದು ವಾಸಿ ಮಾಡುತ್ತದೆ ಎನ್ನುವ ನಂಬಿಕೆಯು ಮನೆಮಾತಾಗಿದೆ. ಆದ್ದರಿಂದಲೇ ಈ ನದಿಯಲ್ಲಿನ ಸ್ನಾನ ಪ್ರಾಮುಖ್ಯತೆಯನ್ನು ಪಡೆದು ಬಹಳ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ.
ಕೊಲ್ಲೂರಿಗೆ ತಲುಪುವ ಬಗೆ ಹಾಗೂ ಸೌಲಭ್ಯಗಳು:
ಉಡುಪಿ ಶ್ರೀ ಕೃಷ್ಣನ ಕ್ಷೇತ್ರ ಹಾಗೂ ಕುಂದಾಪುರದಿಂದ ಹಲವಾರು ಬಸ್ಸುಗಳು ಶ್ರೀಕ್ಷೇತ್ರಕ್ಕೆ ಸಂಪರ್ಕವನ್ನು ಕಲ್ಪಿಸುತ್ತವೆ. ಕೊಂಕಣ ರೈಲ್ವೇ ಮಾರ್ಗದಲ್ಲಿರುವ ಮೂಕಾಂಬಿಕಾ ರೋಡ್ ಎಂದೆ ಕರೆಯಲ್ಪಡುವ ಬೈಂದೂರಿನಲ್ಲಿ ಇಳಿದು ತಗ್ಗರ್ಸೆ ಮೂಲಕ ಕೊಲ್ಲೂರು ಕ್ಷೇತ್ರವನ್ನು ತಲುಪ ಬಹುದಾಗಿದೆ. ಶ್ರೀಕ್ಷೇತ್ರದಲ್ಲಿ ಹಲವಾರು ವಸತಿ ಸೌಕರ್ಯಗಳಿವೆ. ಆಡಳಿತ ಮಂಡಳಿಯ ಸೌಪರ್ಣಿಕಾ ಅತಿಥಿಗೃಹವು ಭಕ್ತಾಗಳಿಗೆ ವಸತಿಯ ವ್ಯವಸ್ಥೆಯನ್ನು ನೀಡುತ್ತಿದೆ. ಅಲ್ಲದೇ ಸ್ಥಳದಲ್ಲಿ ಲಲಿತಾಂಬಿಕಾ ಅತಿಥಿಗೃಹ, ಮಾತಾಛತ್ರಂ, ಗೊಯೆಂಕಾ ವಸತಿ ಗೃಹಗಳಿದ್ದು, ಸುಮಾರು ೪೦೦ ಕೋಣೆಗಳು ಸಂಯೋಜಿಸಲ್ಪಟ್ಟಿದೆ. ಸಾಮಾನ್ಯ ಜನರಿಗೆ ಪಾವತಿ ಮಾಡಲು ಶಕ್ಯವಾಗುವಷ್ಟರ ಮಟ್ಟಿಗೆ ಇಲ್ಲಿನ ಕೋಣೆಗಳ ದರವನ್ನು ನಿಗದಿಪಡಿಸಲಾಗಿದೆ. ಏಕೈಕ ಸಂದರ್ಶಕರಿಗಾಗಿ ಬಸ್‌ನಿಲ್ದಾಣದ ಸಂಕೀರ್ಣದಲ್ಲಿ ಒಂದು ವಿಶ್ರಾಂತಿ ಗೃಹದ ವ್ಯವಸ್ಥೆ, ಅತಿಥಿ ಮಂದಿರ ಮತ್ತೊಂದು ಸೌಕರ್ಯವಾಗಿದ್ದು ಇದನ್ನು ರಾಮಕೃಷ್ಣ ಯೋಗಾಶ್ರಮ ನಿರ್ವಹಿಸುತ್ತದೆ.


No comments:

Post a Comment