Wednesday 11 July 2012


ಬಿಸಿಯೂಟ  ಸಾಮಗ್ರಿಗೆ ಮುಂಗಡ ಪಾವತಿ ಆದೇಶ
ಅಕ್ಷರ ದಾಸೋಹಕ್ಕೆ ತೊಡಕಾಗದಿರಲಿ


ಮಂಗಳೂರು: ಸರಕಾರ ಸುಪ್ರೀಂಕೋರ್ಟಿನ ಆದೇಶದ ಮೇರೆಗೆ ಸರಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಬಿಸಿಯೂಟದಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.  ೧ರಿಂದ ೧೦ ನೇ ತರಗತಿಯ ಎಲ್ಲಾ ಮಕ್ಕಳಿಗೂ ಬಿಸಿಯೂಟದ ವ್ಯವಸ್ಥೆಯಾಗಿದ್ದು, ಈ ವರೆಗೆ ಸಣ್ಣಪುಟ್ಟ ಲೋಪಗಳ ಹೊರತಾಗಿಯೂ  ಈ ಯೋಜನೆ  ಸಾಕಷ್ಟು ಉತ್ತಮವಾಗಿಯೇ ನಡೆಯುತ್ತಿದೆ. ಆದರೆ ಸರಕಾರಿ ಶಾಲೆಗಳಿಗೆ  ಬೇಳೆ, ಎಣ್ಣೆ, ಉದ್ದು ಕಳುಹಿಸಬೇಕಾದ ಕೆಎಫ್‌ಸಿಎಸ್‌ಸಿ ಗೆ  ಈ ವರ್ಷದಿಂದ  ಮುಂಗಡ ಹಣ ಪಾವತಿ ಮಾಡಬೇಕು ಎನ್ನುವ ಸುತ್ತೋಲೆಯೊಂದು ಈಗ ಅಧಿಕಾರಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.ಒಂದು ವೇಳೆ ಸಕಾಲದಲ್ಲಿ ಹಣ ಬಿಡುಗಡೆಯಾಗದೆ ಹೋದರೆ ಅದು ಮಕ್ಕಳ ಬಿಸಿಯೂಟಕ್ಕೆ ತೊಡಕುಂಟು ಮಾಡಬಹುದೆಂಬ ಆತಂಕ ವ್ಯಕ್ತಗೊಳ್ಳುತ್ತಿದೆ.
ದ.ಕ.ಜಿಲ್ಲೆಯಲ್ಲಿ 
ರಾಜ್ಯದಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ಬಿಸಿಯೂಟದ ವ್ಯವಸ್ಥೆಯನ್ನು ಮಾಡಲಾಗಿರುವುದರಲ್ಲಿ ಕೇಂದ್ರದ ಶೇ.೭೫ ಹಾಗೂ ರಾಜ್ಯ ಸರಕಾರದ ಶೇ.೨೫ರ ಅನುದಾನವಿದೆ. ೨೦೧೧-೧೨ ರಲ್ಲಿ ದಕ್ಷಿಣ ಕನ್ನಡದಲ್ಲಿ ೨,೧೧,೯೮೦ ಮಕ್ಕಳು ಬಿಸಿಯೂಟದ ಪ್ರಯೋಜನ ಪಡೆದಿದ್ದಾರೆ. ಕೇಂದ್ರ ಸರಕಾರದಿಂದ ೧೬.೬೯ ಕೋ.ರೂ. ನಾಲ್ಕು ಕಂತುಗಳಲ್ಲಿ ಬಿಡುಗಡೆಯಾಗಿದ್ದು, ೧೬.೪೮ ಕೋ.ರೂ. ವ್ಯಯವಾಗಿದೆ. ೨೦೧೨-೧೩ ನೇ ಸಾಲಿನಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ೨,೧೨,೩೭೦ ಮಕ್ಕಳನ್ನು ಗುರುತಿಸಲಾಗಿದ್ದು ಕೇಂದ್ರದಿಂದ ರೂ.೩.೮೮ ಕೋ.ಪ್ರಥಮ ಕಂತು ಬಿಡುಗಡೆಯಾಗಿದೆ.
ಅಕ್ರಮ ತಪ್ಪಿಸಲು ಎನ್‌ಸಿಡಿಇಎಕ್ಸ್ 
  ರಾಜ್ಯದಲ್ಲಿ ಈ ಯೋಜನೆಗೆ ರಾಜ್ಯಆಹಾರ ಮತ್ತು ನಾಗರಿಕ ಸೇವಾ ಇಲಾಖೆ (ಕೆಎಫ್‌ಸಿಎಸ್‌ಸಿ) ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹರಾಜು ನಡೆಸುತ್ತಿದ್ದು ಅಲ್ಲಿ ಅವ್ಯವಹಾರದ ಆರೋಪ ಕೇಳಿಬಂದಿತ್ತು.೨೦೧೧-೧೨ರಿಂದ ಅಕ್ರಮ  ತಡೆಯಲು ಕೆಎಫ್‌ಸಿಎಸ್‌ಸಿ ಹರಾಜು ಪ್ರಕ್ರಿಯೆಯನ್ನು ಕೇಂದ್ರೀಯ ಸಂಸ್ಥೆಯಾದ ಎನ್‌ಸಿಡಿಇಎಕ್ಸ್‌ಗೆ  ವಹಿಸಿತ್ತು. ಇಲ್ಲಿ ನೋಂದಾವಣೆ ಮಾಡಿದ ಗುತ್ತಿಗೆದಾರರು ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಪಾಲ್ಗೊಂಡು ಆಯ್ಕೆಯಾದವರು ಆಹಾರ ಸಾಮಗ್ರಿಯನ್ನು ಪೂರೈಕೆ ಮಾಡುತ್ತಾರೆ. ಈ ಸಂದರ್ಭ ಗುತ್ತಿಗೆದಾರರ ಸಾಮಗ್ರಿ ಗುಣಮಟ್ಟ ಪರೀಕ್ಷಕ, ಕೆಎಫ್‌ಸಿಎಸ್‌ಸಿ.ಯ ಇನ್‌ಸ್ಪೆಕ್ಟರ್, ಜಿ.ಪಂ.ನ ಅಧಿಕಾರಿಯೊರ್ವರೂ ಆ ಸಂದರ್ಭದಲ್ಲಿದ್ದು  ಪೂರೈಕೆಯಾದ ವಸ್ತುವಿನ ಗುಣಮಟ್ಟವನ್ನು ಪರಿಶೀಲಿಸಿ ವಿವಿಧ ಶಾಲೆಗಳಿಗೆ ಪೂರೈಕೆಯಾಗುತ್ತದೆ. ೨೦೧೧-೧೨ ರವರೆಗೆ ಆಹಾರ ಸಾಮಾಗ್ರಿ ಪೂರೈಕೆ ಮಾಡಿದ ನಂತರದಲ್ಲಿ ಹಣವನ್ನು ಪಾವತಿ ಮಾಡಲಾಗುತ್ತಿತ್ತು. ಕಳೆದ ಬಾರಿ ನಡೆದ ಗೊಂದಲದಿಂದಾಗಿ ಈ ಬಾರಿ ಒಂದು ತಿಂಗಳ ಮುಂಚಿತವಾಗಿ ಹಣವನ್ನು ಪಾವತಿಸಬೇಕು ಎನ್ನುವ ಸದುದ್ದೇಶದ ಆದೇಶವನ್ನು ಸರಕಾರ ಪ್ರತಿ ಜಿಲ್ಲೆಗೂ ನೀಡಿತ್ತು.
ಸಾಮಗ್ರಿ ಪೂರೈಕೆ ಹೇಗೆ?
ದ.ಕ.ಜಿಲ್ಲೆಯೊಂದರಲ್ಲಿ ತಿಂಗಳಿಗೆ  ರೂ. ೯೦ಲಕ್ಷ ಬಿಸಿಯೂಟಕ್ಕಾಗಿ ವ್ಯಯಿಸಲಾಗುತ್ತಿದೆ. ಸರಕಾರದ ಆದೇಶದಂತೆ ಒಂದು ತಿಂಗಳ ಮುಂಚಿತವಾಗಿ ಕೆಎಫ್‌ಸಿಎಸ್‌ಸಿಗೆ ಹಣ ಹಾಗೂ ತಿಂಗಳಿಗೆ ಬೇಕಾದ ಆಹಾರದ ಪಟ್ಟಿಯನ್ನು  ಪ್ರತಿ ತಿಂಗಳ ೧೦ ರೊಳಗೆ ನೀಡಬೇಕು. ಇದೊಂದು ಆರ್ಥಿಕ ಶಿಸ್ತು -ದಕ್ಷತೆ ಸಾಧಿಸುವ ಕ್ರಮವೇ ಆಗಿದೆ. ಜಿ.ಪಂ.ನಿಂದ ಬಿಡುಗಡೆಯಾದ ಹಣ ಹಾಗೂ ತಾಲೂಕಿಗೆ ಬೇಕಾದ ಆಹಾರ ಪಟ್ಟಿಯನ್ನು ಕೆಎಫ್‌ಸಿಎಸ್‌ಸಿಗೆ ಕಳುಹಿಸಬೇಕು.ಅವರು ಅದನ್ನು ಎನ್‌ಸಿಡಿಇಎಕ್ಸ್‌ಗೆ ನೀಡಿದ ನಂತರ ಅದರ ಪರಿಶೀಲನೆಯಾಗಿ ಅನಂತರ ಹರಾಜು ಪ್ರಕ್ರಿಯೆ . ಮುಂಬೈಯಲ್ಲಿರುವ ಎನ್‌ಸಿಡಿಇಎಕ್ಸ್‌ನಲ್ಲಿ ನೋಂದಾವಣೆ ಮಾಡಿದ ಗುತ್ತಿಗೆದಾರರು ಹರಾಜಿನಲ್ಲಿ ಭಾಗವಹಿಸಿ ಆಯ್ಕೆಯಾದವರು ಜಿಲ್ಲೆಗೆ ಆಹಾರವನ್ನು ಪೂರೈಕೆ ಮಾಡುತ್ತಾರೆ.
ಆದರೆ ಇಲ್ಲೊಂದು ತಾಂತ್ರಿಕ ತೊಡಕುಂಟಾಗುವ ಆತಂಕ ಇದೆ ಎನ್ನಲಾಗುತ್ತದೆ.ಎನ್‌ಸಿಡಿಇಎಕ್ಸ್‌ನಲ್ಲಿ ಭಾಗವಹಿಸುವ ಗುತ್ತಿಗೆದಾರರು ಉತ್ತರ ಕರ್ನಾಟಕದವರು. ಇವರು ಮುಂಬೈಯಿಂದ ಬಹಳ ದೂರದಲ್ಲಿರುತ್ತಾರೆ. ಹರಾಜು ಪ್ರಕ್ರಿಯೆ ಮುಗಿದು ಆಹಾರ ಪೂರೈಕೆಗೆ ಕನಿಷ್ಠ೨೦ ದಿನಗಳು ಬೇಕು. ಸರಕಾರದಿಂದ ೩ ತಿಂಗಳಿಗೆ ಬೇಕಾಗುವ ಹಣವನ್ನು ಆಯಾ ಜಿ.ಪಂ.ಗೆ ನೀಡಿದ್ದರೂ ಕೆಲವೊಮ್ಮೆ ಅಧಿಕಾರಿ ನಿರ್ಲಕ್ಷ್ಯ ಹಾಗೂ ತಾಂತ್ರಿಕ ತೊಂದರೆಯಿಂದ ಕೆಎಫ್‌ಸಿಎಸ್‌ಸಿಗೆ ಹಣ ಹಾಗೂ ಆಹಾರದ ಪಟ್ಟಿ ತಲುಪುವುದು ವಿಳಂಬವಾದರೆ ಬಿಸಿಯೂಟ ವ್ಯವಸ್ಥೆಗೆ ತೊಡಕಾಗಬಹುದು.ಅಕ್ಷರ ದಾಸೋಹದಲ್ಲಿ ಅಕ್ಕಿಯಿಂದ ಯಾವುದೇ ಸಮಸ್ಯೆ ಇಲ್ಲದಿದ್ದರೂ ಉದ್ದು , ಬೇಳೆ ಹಾಗೂ ಎಣ್ಣೆಯಿಂದ ತೊಂದರೆಯಾಗಬಹುದು ಎನ್ನುವ ಆತಂಕ ಅಕ್ಷರದಾಸೋಹದ ಅಧಿಕಾರಿಗಳಾದಾಗಿದೆ. ಇದು ಕೇವಲ ದಕ್ಷಿಣ ಕನ್ನಡದ ಸ್ಥಿತಿ ಮಾತ್ರವಲ್ಲ. ಈ ಸ್ಥಿತಿ ರಾಜ್ಯದ ಇತರ ಕಡೆಗಳಲ್ಲೂ ಕಂಡುಬರುವ ಸಾಧ್ಯತೆ ಇದೆ.
ಬಿಸಿಯೂಟದ ಯೋಜನೆಯಿಂದ  ಸಾವಿರಾರು ಮಕ್ಕಳು ಪ್ರಯೋಜನ ಪಡೆದಿದ್ದು, ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಿದೆ. ಸಂಬಂಧಿಸಿದ ಅಧಿಕಾರಿಗಳು ಆರ್ಥಿಕ ಶಿಸ್ತಿಗೆ ಪೂರಕವಾಗಬಹುದಾದ ಈ ವ್ಯವಸ್ಥೆಯಲ್ಲಿ ಸಕಾಲದಲ್ಲಿ ಮುಂಗಡ ಪಾವತಿಯಾಗುವಂತೆ ನೋಡಿಕೊಂಡು  ಬಿಸಿಯೂಟ ಯಾವುದೇ ವಿಘ್ನವಿಲ್ಲದೆ ನಡೆಯುವುದನ್ನು ಖಾತ್ರಿ ಪಡಿಸಿದಲ್ಲಿ ಬಿಸಿಯೂಟ ಯೋಜನೆ ಇನ್ನಷ್ಟು ದಕ್ಷ ರೀತಿಯಲ್ಲಿ ನಡೆಯಲು ಸಾಧ್ಯವಿದೆ.






No comments:

Post a Comment