Sunday, 22 July 2012



ಅವಿಭಜಿತ ದ.ಕ ಮತ್ತು ಉಡುಪಿಯಲ್ಲಿ...
ಕೃಷಿ ಭೂಮಿಯನ್ನು ಆಕ್ರಮಿಸುತ್ತಿರುವ ಅಕ್ರಮ ಕಲ್ಲುಕೋರೆಗಳು  
ಭಾರತ ರೈತರ ನಾಡು. ಇಲ್ಲಿರುವ ರೈತ ದೇಶದ ಆರ್ಥಿಕತೆಯ ಬೆನ್ನೆಲು ಬಾಗಿದ್ದಾನೆ. ಆದರೆ ಇತ್ತೀಚಿನ ದಿನದಲ್ಲಿ ರೈತನ ಬೆನ್ನು ಮೂಳೆ ಮುರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ತಪ್ಪಾಗಲಾರದು. ಕೃಷಿಭೂಮಿಯೇ ರೈತನ ಜೀವಾಳ. ಆದರೆ ನೈಸರ್ಗಿಕ ಸಂಪತ್ತುಗಳಿಗಾಗಿ ಕೃಷಿಭೂಮಿಯ ನಾಶ ದಿನದಿಂದ ದಿನಕ್ಕೆ ವಿಪರೀತವಾಗುತ್ತಿದೆ. ದೇಶದ ಅಭಿವೃದ್ಧಿಗೆ ನೈಸರ್ಗಿಕ ಸಂಪತ್ತುಗಳು ಪೂರಕವಾಗಿದೆ. ಪೆಟ್ರೋಲಿಯಂ, ಕಲ್ಲಿದ್ದಲು, ಕಬ್ಬಿಣದ ಅದಿರು, ಕಲ್ಲುಗಳು  ನೈಸರ್ಗಿಕವಾಗಿ ದೊರಕುವ ಸೌಲಭ್ಯಗಳಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾಧ್ಯಂತ ಹೆಚ್ಚಾಗಿ ಸಿಗುವ ಸೋಮನಾಥ ಶಿಲೆ, ಕಪ್ಪುಶಿಲೆ, ಕೆಂಪುಶಿಲೆಗಳು ಕಟ್ಟಡದ ಸೌಂದರ್ಯ ಹೆಚ್ಚಿಸುವುದರೊಂದಿಗೆ ದೇಶದ ಅಭಿವೃದ್ಧಿಗೆ ಸಾಕಾರವಾಗಿದೆ.
ಆದರೆ ಇಂದು ಈ  ನೈಸರ್ಗಿಕ ಸಂಪತ್ತುಗಳನ್ನು ವ್ಯಾವಹಾರಿಕ ದೃಷ್ಟಿಯಿಂದಲೇ ನೋಡುತ್ತಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಣ್ತಪ್ಪಿಸಿ ಅಕ್ರಮ ಕಲ್ಲುಕೋರೆ  ನಡೆಸುವ ದಂಧೆ ಕರಾವಳಿಯಲ್ಲಿ ಪ್ರಾರಂಭವಾಗಿದೆ. ನೈಸರ್ಗಿಕ ಸಂಪತ್ತಾದ ಕಲ್ಲು ಮನುಷ್ಯನ ಜೀವನಕ್ಕೆ ಅವಿಭಾಜ್ಯ ಅಂಗವಾಗಿದೆ ನಿಜ ಆದರೆ ಕೃಷಿ ಭೂಮಿ, ಸರಕಾರಿ ಅರಣ್ಯ ಇಲಾಖೆಯ ಸ್ಥಳವನ್ನು ಇಲಾಖೆಯ ಅನುಮತಿಯನ್ನು ಮೀರಿ ಅಕ್ರಮವಾಗಿ ಬಳಸುವುದು ಯಾವ ನ್ಯಾಯ? ಅಲ್ಲದೇ ಕ್ರಷರ್‌ಗಳಲ್ಲಿ ಬಳಸುವ ಸುಡುಮದ್ದುಗಳ ಸ್ಪೋಟದಿಂದಾಗಿ ಇಬ್ಬರು ಮಹಿಳೆಯರು ಮೃತ ಪಟ್ಟಿರುವುದು ಆತಂಕಕ್ಕೆ ಎಡೆಮಾಡಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಕ್ಸಲರ ಹಾವಳಿ ಒಂದೆಡೆಯಾದರೆ ಅಕ್ರಮ ಕಲ್ಲುಕೋರೆಗಳ ಮಾಲಕರಿಂದ ಕೃಷಿ ಭೂಮಿಯ ನಾಶ ಹಾಗೂ ಅನೇಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ದಿನ ಬೆಳಗಾದರೆ ಆತಂಕದಿಂದ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.
ಕಲ್ಲು ಕೋರೆಯಿಂದ ಅಲಂಕಾರಿಕ ಕಲ್ಲುಗಳು, ಕಪ್ಪು ಶಿಲೆ ಹಾಗೂ ಕೆಂಪುಕಲ್ಲುಗಳು ಎಂದು ವಿಭಾಗ ಮಾಡಲಾಗಿದ್ದು ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಶಿಲೆ ಕಲ್ಲು (ಕ್ರಷರ್) ಮತ್ತು ಕೆಂಪು ಕಲ್ಲು ಕೋರೆಗಳೆ ಜಾಸ್ತಿ ಕಾರ್ಯವೆಸಗುತ್ತಿದೆ. ಸಾಮಾನ್ಯವಾಗಿ ಶಿಲೆ ಕಲ್ಲುಗಳು ವಿಶಾಲವಾದ ಜಾಗದಲ್ಲಿ ಎತ್ತರವಾಗಿರುತ್ತದೆ. ಇವುಗಳು ತುಂಬಾ ಗಡುಸುತನ ಹೊಂದಿರುವುದರಿಂದ ಒಡೆಯಲು ಸಿಡಿಮದ್ದುಗಳನ್ನು ಬಳಸಬೇಕಾಗುತ್ತದೆ. ಸಿಡಿಸಲು ಬಳಸುವ ಅಪಾಯಕಾರಿ ವಸ್ತುಗಳ ಶೇಖರಣೆಗೆ ಸರಿಯಾದ ಸ್ಥಳ ಹಾಗೂ ಅನುಭವ ಕೊರತೆಯಿರುವ ಕಾರ್ಮಿಕರಿಂದ ಅಪಾಯ ಜಾಸ್ತಿಯಾಗಿದೆ. ಕೆಂಪುಕಲ್ಲುಗಳು ಭೂಮಿಯ ಒಳಭಾಗದಲ್ಲಿ ಸೇರಿಕೊಂಡಿರುವುದರಿಂದ ಅವುಗಳನ್ನು ತೆಗೆಯಲು ತುಂಬಾ ಆಳದವರೆಗೆ ಹೋಗಿ ಜಾಗರೂಕತೆಯಿಂದ ಕತ್ತರಿಸಿ ಮಾರಬೇಕಾಗುತ್ತದೆ. ಬೇಸಿಗೆಯಲ್ಲಿ ಮಾತ್ರ ಕಾರ್ಯಚರಣೆಗೈಯುವ ಈ ಕೋರೆಗಳು ಮಳೆಗಾಲದಲ್ಲಿ ನೀರಿನಿಂದ ತುಂಬಿಕೊಂಡು ಅಪಾಯವನ್ನು ಕೈಬೀಸಿ ಕರೆಯುತ್ತಿರುತ್ತದೆ. ಇತ್ತೀಚಿನ ದಿನದಲ್ಲಿ ಕರಾವಳಿ ಕೋರೆಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ಅನ್ಯಜಿಲ್ಲೆ ಹಾಗೂ ಅನ್ಯರಾಜ್ಯದವರಾಗಿದ್ದಾರೆ. ಗುತ್ತಿಗೆದಾರರು ಕೂಡ ಅನ್ಯ ರಾಜ್ಯದವರೇ ಆಗಿ ಸರಕಾರಿ ಜಾಗ ಹಾಗೂ ಅರಣ್ಯ ಇಲಾಖೆಯ ಸ್ಥಳವನ್ನು ಆಕ್ರಮಿಸುತ್ತಿದ್ದಾರೆ.
ದ.ಕ ಜಿಲ್ಲೆಯು ೪,೭೭,೧೪೯ ಹೆಕ್ಟೇರ್ ವಿಸ್ತೀರ್ಣವಿದೆ. ಇದರಲ್ಲಿ  ೧,೨೮,೪೭೬ ಹೆ. ಅರಣ್ಯ ಪ್ರದೇಶವಿದೆ. ಜಿಲ್ಲೆಯ ಒಟ್ಟು ವಿಸ್ತೀರ್ಣದ ಶೇ.೨೭ ಭಾಗವನ್ನು ಅರಣ್ಯ ಪ್ರದೇಶ ಒಳಗೊಂಡಿದೆ. ಉಳಿದಂತೆ ೧,೫೭,೩೨೬ ಸಾಗುವಳಿ, ೭೦.೩೮೭ ಹೆ. ನೀರಾವರಿ, ೮೬೯೩೯ ಕುಷ್ಕಿ ಜಮೀನು ಹೊಂದಿದೆ. ಸಾಗುವಳಿ ಭೂಮಿ ಹಾಗೂ ಗುಡ್ಡಗಾಡು, ಅರಣ್ಯ ಪ್ರದೇಶಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಗುತ್ತಿಗೆದಾರರಿಗೆ ನೀಡಿದ ಅನುಮತಿಯ ದಿಕ್ಕರಿಸಿ ಅಕ್ರಮ ಕಲ್ಲುಕೋರೆಗಳು ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತಲೆಯೆತ್ತಿವೆ.
ಇಲಾಖೆಯಿಂದ ಗುತ್ತಿಗೆ ನೀಡುವ ಪದ್ದತಿ ಹೇಗೆ:
ಇಲಾಖೆ ವತಿಯಿಂದ ಕಲ್ಲು ಗಣಿ ಗುತ್ತಿಗೆಯನ್ನು ೫ ಅಥವಾ ೧೦ ವರ್ಷಗಳಿಗೆ ನೀಡಲಾಗುತ್ತದೆ. ಗುತ್ತಿಗೆದಾರ ಸ್ಥಳದ ಮಾಹಿತಿ ಪತ್ರ, ಕೋರೆಯ ನಕ್ಷೆ, ಪಹಣಿ ಪತ್ರ(ಆರ್‌ಟಿಸಿ)ವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಲ್ಲಿಸಬೇಕು. ಇದರೊಂದಿಗೆ ಅರಣ್ಯ ಇಲಾಖೆ, ಜಮೀನಿನ ಮಾಲಕರಿಂದ ಅನುಮತಿ ಹಾಗೂ ಪರಿಸರ ವಿಮೋಚನ ಪತ್ರವನ್ನು ಲಗತ್ತಿಸಬೇಕು. ಎಲ್ಲಾ ವರದಿಯನ್ನು ಗಮನಿಸಿ ಇಲಾಖೆ ಗುತ್ತಿಗೆದಾರರು ಸಲ್ಲಿಸಿದ ಅರ್ಜಿಗೆ ನಕ್ಷೆಯನ್ನು ರಚಿಸಿ ಅನುಮತಿಯನ್ನು ನೀಡುತ್ತದೆ. ಕಪ್ಪು ಶಿಲೆಗೆ ಅನುಮತಿ ನೀಡುವಾಗ ಜಿಲ್ಲಾಧಿಕಾರಿ, ಅಗ್ನಿಶಾಮಕ ಇಲಾಖೆ ಸೇರಿದಂತೆ ೮ ವಿಭಾಗಗಳಿಂದ ಅನುಮತಿಯನ್ನು ಪಡೆಯಬೇಕಾಗುತ್ತದೆ.
ರಸ್ತೆಯಿಂದ ಕನಿಷ್ಟ ೫೦ ಮೀಟರ್ ದೂರದಲ್ಲಿ ಕೋರೆ ಮಾಡಬೇಕೆನ್ನುವ  ನಿರ್ಬಂಧವಿದ್ದರೂ ಗುತ್ತಿಗೆದಾರರು ಪಾಲಿಸುವುದಿಲ್ಲ. ಕೃಷಿ ಭೂಮಿಯಿರುವ ಸ್ಥಳದಲ್ಲಿ ದನಕರು, ಶಾಲಾ ಮಕ್ಕಳು ಸಂಚರಿಸುವ ಜಾಗದಲ್ಲಿ ತಡೆಗೋಡೆಯನ್ನು ನಿರ್ಮಿಸಬೇಕಾಗುತ್ತದೆ. ನೀರು ನೋಡಿದಾಕ್ಷಣ ಮಕ್ಕಳು ಈಜುವುದಕ್ಕೆ ತೆರಳುವ ಸಾದ್ಯತೆಯಿರುವುದರಿಂದ ಜಮೀನು ಹಾಗೂ ಕೋರೆ ಮಾಲಕರು ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಳ್ಳಬೇಕು. ಅನೇಕ ವರ್ಷಗಳ  ಹಿಂದೆ ಬೆಳುವಾಯಿಯ ಖಾಸಗಿ ಭೂಮಿಯಲ್ಲಿದ್ದ ಕಲ್ಲುಕೋರೆಯಲ್ಲಿ ಇಬ್ಬರು ಬಾಲಕರು ಈಜಲು ತೆರಳಿ ಸಾವನ್ನಪ್ಪಿದ್ದಾರೆ. ಅದರ ನೆನಪು ಮಾಸುವಾಗಲೇ ಇತ್ತೀಚಿಗೆ ಕುಂದಾಪುರ ಸಮೀಪ ಇಟ್ಟಿಗೆ ತಯಾರಿಕೆಗೆ ಬಳಸಿದ ಭೂಮಿಯಲ್ಲಿ ನೀರು ತುಂಬಿಕೊಂಡಿದ್ದು ರಜಾದಿನದಲ್ಲಿ ಈಜಲು ತೆರಳಿದ ಒಂದೇ ಕುಟುಂಬದ ನಾಲ್ವರು ಮಕ್ಕಳು ಸಾವನ್ನಪ್ಪಿರುವುದು ಬೇಸರ ಹುಟ್ಟಿಸುತ್ತದೆ. ಅಲ್ಲದೇ ಕ್ರಷರ್‌ಗಳಲ್ಲಿ ಶಿಲೆಕಲ್ಲನ್ನು ಸಿಡಿಸುವಾಗ ಜಾಗೃತೆ ವಹಿಸುವುದರೊಂದಿಗೆ ಧೂಳಿನ ವಿಪರೀತತೆಯನ್ನು ಕಡಿಮೆ ಮಾಡುವ ಮಾರ್ಗವನ್ನು ಅನುಸರಿಸಬೇಕು. ಮಾಲಕರು ರೆವೆನ್ಯೂ ನಕ್ಷೆಯಲ್ಲಿರುವಂತೆ ಕೋರೆಗೆ ಸ್ಥಳ ನಿಗದಿಮಾಡಬೇಕೆ ಹೊರತು ಅದನ್ನು  ನಿರ್ಲಕ್ಷಿಸಿ ಕಾರ್ಯವೆಸಗುವುದು ಅಕ್ರಮವಾಗುತ್ತದೆ.
ಶಿಲೆ ಕೋರೆಯಲ್ಲಿ ಅಕ್ರಮಗಳು ಕಡಿಮೆಯಾಗಿರುತ್ತದೆ. ಈ ಕೋರೆಯಲ್ಲಿ ಕ್ರಷರ್ ಹಾಕಿಸುವುದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿದ್ದು ಗುತ್ತಿಗೆದಾರರು ಬ್ಯಾಂಕ್ ಲೋನ್‌ನ್ನು  ಅವಲಂಬಿಸುತ್ತಾರೆ. ಅಲ್ಲದೇ ಸ್ಪೋಟಕಗಳನ್ನು ಬಳಸಲು ಇರುವುದರಿಂದ ಹಲವಾರು ಒಪ್ಪಂದಗಳಿಗೆ ಸಹಿ ಮಾಡಬೇಕಾಗುತ್ತದೆ. ಆದ್ದರಿಂದ ಮಾಲಕರು ಅಕ್ರಮ ಕಾರ್ಯಗಳಿಗೆ ಮುಂದಾಗುವುದಿಲ್ಲ. ಕೆಂಪು ಕಲ್ಲು ಕೋರೆಯಲ್ಲಿ ಖರ್ಚುಗಳು ಕಡಿಮೆಯಾದ್ದರಿಂದ ಅಕ್ರಮ ವಿಪರೀತವಾಗಿ ನಡೆಯುತ್ತದೆ.
ಅವಿಭಜಿತ ದ.ಕ. ಮತ್ತು ಉಡುಪಿಯಲ್ಲಿರುವ ಸಕ್ರಮ ಕೋರೆಗಳ ೨೦೧೦-೧೧ರ ವರದಿ:
ದ.ಕ ಜಿಲ್ಲೆಯಲ್ಲಿ ಅಲಂಕಾರಿಕ ಶಿಲೆ ೫ ಗುತ್ತಿಗೆ ನೀಡಲಾಗಿದ್ದು ೩೦೩ ಕ್ಯೂಬಿಕ್ ಉತ್ಪಾದನೆಯಾಗಿದೆ. ಶಿಲೆಕಲ್ಲು ಕೋರೆ ೨೭೩ ಗುತ್ತಿಗೆ ದಾರರಿಂದ ೫,೩೪,೬೨೮ ಮೇ.ಟನ್ (೦.೫ ಮಿಲಿ ಟನ್),೧೧೩- ಕೆಂಪು ಕೋರೆ ಗುತ್ತಿಗೆ ದಾರರಿಂದ ೪೨,೯೬೪ ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ.(ಸಕ್ರಮ ಕೋರೆಗಳಿಂದ). ದ.ಕ ಜಿಲ್ಲೆಯಲ್ಲಿ ೨೦೧೧-೧೨ರಲ್ಲಿ ೧೦೨ ಅಕ್ರಮ ಕಲ್ಲುಕೋರೆಯನ್ನು ಪತ್ತೆಹಚ್ಚಿ ರೂ. ೯.೨೭ ಲಕ್ಷ ದಂಡವನ್ನು ಸಂಗ್ರಹಿಸಲಾಗಿದೆ.
ಉಡುಪಿ ಜಿಲ್ಲೆ:
ಉಡುಪಿ ಜಿಲ್ಲೆಯಲ್ಲಿ ೬ ಅಲಂಕಾರಿಕ ಕೋರೆಗಳಿಂದ ೬೭೫ ಕ್ಯೂಬಿಕ್ ಉತ್ಪಾದನೆಯಾಗಿದ್ದು, ೪೦೫ ಕೆಂಪು ಕೋರೆ ಹಾಗೂ ಶಿಲೆಕೋರೆಗಳಿಂದ ೬,೮೩,೧೮೯ ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ. ೨೦೧೧-೧೨ರಲ್ಲಿ ೧೬೯ ಅನಧಿಕೃತ ಕಲ್ಲುಕೋರೆಯನ್ನು ಪತ್ತೆಹಚ್ಚಿ ೩೦೫ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಕ್ರಮವಾಗಿ ಕೋರೆ ನಡೆಸುತ್ತಿರುವ ಮಾಲಕರಿಗೆ ದಂಡ ವಿಧಿಸಲಾಗಿದ್ದು ೨೦೧೧-೧೨ರಲ್ಲಿ ರೂ.೨೭,೨೧,೧೦೦ ಸಂಗ್ರಹಿಸಲಾಗಿದೆ. ಕೆಲವೊಂದು ಪ್ರಕರಣಗಳು ಕೋರ್ಟ್‌ನಲ್ಲಿವೆ.
ಕಲ್ಲುಗಳು ಮನೆ ಕಟ್ಟುವುದಕ್ಕೆ ಅವಶ್ಯಕವಾಗಿದ್ದರೂ, ಕೃಷಿ ಭೂಮಿ ಮನುಷ್ಯ ಸಂತೋಷವಾಗಿ ಜೀವನ ನಡೆಸಲು ಅವಶ್ಯಕ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಕಲ್ಲುಕೋರೆಗಳಿಂದ ಕೃಷಿ ಭೂಮಿ ಹಾಗೂ ಅರಣ್ಯ ಪ್ರದೇಶಗಳಿಗೆ ಹಾನಿಯಾಗದೇ ಇಲಾಖೆಯು ಸೂಚಿಸಿದ ನಕ್ಷೆಯಂತೆ ಕಾರ್ಯ ನಿರ್ವಹಿಸಿದ್ದೇ ಆದರೆ ಅಕ್ರಮವನ್ನು ತಡೆಯಬಹುದು. ಆದರೆ ಹಳ್ಳಿಯಲ್ಲಿ ಕಲ್ಲುಕೋರೆಗಳ ಸಮೀಪದಲ್ಲಿ ಮಕ್ಕಳು ಶಾಲೆಗೆ ಹೋಗುವುದರಿಂದ ಈಜುವುದಕ್ಕೆ ತೆರಳುವ ಸಾಧ್ಯತೆಯಿದೆ. ದನಕರುಗಳು ತಿರುಗಾಡುವುದರಿಂದ ಅವುಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಆದರೆ ಕಲ್ಲು ಕೋರೆ ಮಾಲಕರು ಈ ಕುರಿತು ಎಚ್ಚರಿಕೆ ವಹಿಸಿದರೆ ಅನೇಕ ಜೀವಗಳನ್ನು ರಕ್ಷಣೆ ಮಾಡಬಹುದಾಗಿದೆ.

ಎಫ್‌ಎಂಬಿಯಲ್ಲಿರುವ ನಕ್ಷೆಯನ್ನು ಹೊರತಾಗಿ ಕೋರೆ ವಿಸ್ತರಿಸಿದರೆ ಅಥವಾ ಇಲಾಖೆಯಿಂದ ಅನುಮತಿಯನ್ನು ಪಡೆಯದಿದ್ದರೆ ಆ ಕೋರೆಯನ್ನು ಅಕ್ರಮವೆಂದು ಪರಿಗಣಿಸಲಾಗುತ್ತದೆ.  ಅಲ್ಲದೇ ದೇಶದಲ್ಲಿರುವ ಭೂಮಿಯನ್ನು ಕೃಷಿ, ಅರಣ್ಯ, ನೈಸರ್ಗಿಕ ಸಂಪತ್ತಿನ ಭೂಮಿಯನ್ನಾಗಿ ವಿಭಾಗಿಸಬೇಕು. ಇದರಿಂದ ಅರಣ್ಯ ಪ್ರದೇಶವನ್ನು ಅಕ್ರಮ ಕಲ್ಲು ಕೋರೆಗೆ ಬಳಸಿಕೊಳ್ಳುವುದನ್ನು ತಪ್ಪಿಸಬಹುದು. ಅಕ್ರಮವಾಗಿ ಸಿಕ್ಕಿಬಿದ್ದವರು ಪ್ರಾಮಾಣಿಕತೆಯಿಂದ ತಪ್ಪನ್ನು ಒಪ್ಪಿಕೊಂಡು ಅಕ್ರಮ ಕಾರ್ಯ ನಿಲ್ಲಿಸಿದ್ದಾರೆ.
ಡಾ.ಬಿ.ಎಂ.ರವೀಂದ್ರ ಉಪನಿರ್ದೇಶಕ
ದ.ಕ.ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ

ಉಡುಪಿ ಜಿಲ್ಲೆಯಲ್ಲಿ ಮೂರು ತಾಲೂಕುಗಳು ಇರುವುದರಿಂದ ಎಲ್ಲಾ ಜವಾಬ್ದಾರಿಯನ್ನು ನಾವು ಇಬ್ಬರೇ ನೋಡಿಕೊಳ್ಳಬೇಕು. ಸಿಬ್ಬಂದಿಯ ಕೊರತೆಯಿದ್ದಾಗಲೂ ದಕ್ಷತೆಯಿಂದ ಕಾರ್ಯವೆಸಗಿದ್ದೇವೆ. ಅಕ್ರಮವಾಗಿ ಕಾರ್ಯವೆಸಗುತ್ತಿರುವ ಕುರಿತು ಗ್ರಾಮಸ್ಥರು ನೇರವಾಗಿ ದೂರುಗಳನ್ನು ನೀಡಿದರೆ ಅಥವಾ ಗ್ರಾಮ ಪಂಚಾಯತ್‌ನ ಮೂಲಕ ಮಾಹಿತಿಯನ್ನು ನೀಡಿದರೂ ಶೀಘ್ರವೇ ಕಾರ್ಯ ನಿರತರಾಗಿ ಅಕ್ರಮ ಕೋರೆಯನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ.
ಮೃತ್ಯುಂಜಯ- ಉಪನಿರ್ದೇಶಕ ಉಡುಪಿ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ




No comments:

Post a Comment