Wednesday, 11 July 2012


ಸರ್ವ ಶಿಕ್ಷಣ ಅಭಿಯಾನದಲ್ಲಿ ಮತ್ತೊಂದು ಹೆಜ್ಜೆ
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಆಂದೋಲನ ``ಶಾಲೆಗಾಗಿ ನಾವು-ನೀವು"



ಮಂಗಳೂರು: ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಇತರ ರಾಜ್ಯಗಳಿಗಿಂತ ವಿಶಿಷ್ಟ ಸ್ಥಾನದಲ್ಲಿರುವ ಕರ್ನಾಟಕವು ಶಿಕ್ಷಣದಲ್ಲಿ ಕ್ರಾಂತಿಯ ಅಲೆಯನ್ನು ಸೃಷ್ಟಿಸಿದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಮಕ್ಕಳ ಶಿಕ್ಷಣದ ಹಕ್ಕು ಕಾಯಿದೆ-೨೦೦೯ನ್ನು ರಾಜ್ಯದಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳು ೨೦೧೨ರ ಅಡಿಯಲ್ಲಿ ಜಾರಿಗೆ ತಂದಿರುವುದು ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೊಂದು ಹೆಮ್ಮೆಯ ಗರಿ. ಈ ಕಾಯಿದೆಯಲ್ಲಿ ಮಕ್ಕಳಿಗೆ ನೀಡಿರುವ ಹಕ್ಕುಗಳಲ್ಲಿ ಲೋಪವಾದರೆ ಹಕ್ಕಿನ ರಕ್ಷಣೆಗೆ ಮಕ್ಕಳು ನ್ಯಾಯಾಲಯದ ಮೊರೆ ಹೋಗ ಬಹುದಾಗಿದೆ. ಆದರೆ ಮಕ್ಕಳ ಸಂವಿಧಾನದತ್ತವಾದ ಹಕ್ಕುಗಳ ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋಗಬಾರದು ಎನ್ನುವ ನೆಲೆಯಲ್ಲಿ ರಾಜ್ಯ ಸರಕಾರದ ಈ ಕಾರ್ಯ ಶ್ಲಾಘನೀಯ.
ಕಳೆದ ಬಾರಿಯಂತೆ ಶೈಕ್ಷಣಿಕ ವಲಯದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿ ಸರಕಾರಿ ಶಾಲೆಯಲ್ಲಿ ಉತ್ತಮ ಫಲಿತಾಂಶ ಕಾಣುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಜು.೪ರಿಂದ ಜು.೩೧ರವರೆಗೆ ರಾಜ್ಯಾದಾದ್ಯಂತ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆಂದೋಲನ ರೂಪವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಮುಖ್ಯಮಂತ್ರಿಗಳು ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರವರೆಗಿನ ಜನಪ್ರತಿನಿಧಿಗಳು, ಇಲಾಖೆಯ ಎಲ್ಲಾ ಸ್ತರದ ಅಧಿಕಾರಿಗಳು ಮತ್ತು ವಾರ್ತಾ ಇಲಾಖೆಯ ಆಯುಕ್ತರಿಂದ ಹಿಡಿದು ಸಮೂಹ ಸಂಪನ್ಮೂಲ ವ್ಯಕ್ತಿವರೆಗಿನ ಎಲ್ಲಾಹಂತದ ಅಧಿಕಾರಿಗಳು ಆಯಾ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುತ್ತದೆ.
ಕಾರ್ಯಕ್ರಮದ ಉದ್ದೇಶ:
ಮಕ್ಕಳ ಶಿಕ್ಷಣದ ಹಕ್ಕು ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ  ಸರಕಾರ ಶೈಕ್ಷಣಿಕ ವಲಯಕ್ಕೆ ನೀಡುವ ಉತ್ತೇಜಕಗಳು ಫಲಾನುಭವಿಗಳಿಗೆ ತಲುಪಿರುವುದನ್ನು ಖಾತ್ರಿ ಪಡಿಸಿಕೊಳ್ಳಲು ಅನುಕೂಲವಾಗಿದೆ. ೨ ನೇ ತರಗತಿಯಿಂದ ೧೦ ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಸ್ಥೂಲವಾಗಿ ಗುರುತಿಸಿ ದಾಖಲಿಸುವುದು. ಫಲಿತಾಂಶ ಆಧರಿಸಿ ಕಾರ್ಯಾನುಸರಣೆ ಮಾಡಲು ಸಹಕಾರಿಯಾಗಿದೆ. ಶಾಲೆಗಳಲ್ಲಿ ಚಾಲ್ತಿಯಲ್ಲಿರುವ ವಿಶಿಷ್ಟ ಚಟುವಟಿಕೆ ಗುಣಮಟ್ಟದ ಉಸ್ತುವಾರಿ ಮಾಡುವುದು. ಸಮುದಾಯ ಮತ್ತು ದಾನಿಗಳನ್ನು ಪ್ರೇರೆಪಿಸಿ ಅವರ ನೆರವಿನಿಂದ ಶಾಲೆಯ ಭೌತಿಕ, ಶೈಕ್ಷಣಿಕ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುಲಾಗುವುದು. ವಿಶೇಷವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ತರುವಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ, ಹಳೆಯ ವಿದ್ಯಾರ್ಥಿಗಳು, ಸ್ಥಳೀಯ ಮುಖಂಡರು ಮತ್ತು ಅಧಿಕಾರಿಗಳು ಸಕ್ರೀಯವಾಗಿ ತೊಡಗುವಂತೆ ಮಾಡುವುದಾಗಿದೆ.
ಕಾರ್ಯಕ್ರಮದ ಸ್ವರೂಪ:
ಜು.೫ರಂದು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಶಾಲೆಗಾಗಿ ನಾವು-ನೀವು ಕಾರ್ಯಕ್ರಮದ ಅನುಷ್ಠಾನವಾಗಲಿದೆ. ವಿವಿಧ ಹಂತದ ಅಧಿಕಾರಿಗಳು ಜು.೭ರಿಂದ ೩೧ರವರೆಗೆ ಶಾಲೆಗಳ ಸಂಕ್ಷಿಪ್ತ ಮೌಲ್ಯಮಾಪನ ನಡೆಸುವರು. ಆಗಸ್ಟ್೧೬ರಿಂದ ಜ.೧೫ರವರೆಗೆ ನಿರಂತರ ಕಾರ್ಯಾನುಸರಣೆ, ಸ್ಥಳೀಯವಾಗಿ ಜ.೧೬ರಿಂದ ೩೧ರವರೆಗೆ ಎಸ್.ಡಿ.ಎಂ.ಸಿ, ಸಮುದಾಯ, ಅಧ್ಯಾಪಕರ ಸಮಾವೇಶ  ಆಯಾ ಶಾಲೆಯಲ್ಲಿ ಆಯೋಜಿಸಲಾಗಿದೆ.
ಶಾಲೆಗೆ ಹೋಗೊಣ:
ಜು.೫ರಂದು ಚುನಾಯಿತ ಪ್ರತಿನಿಧಿಗಳು, ಸಚಿವರು, ಸಾಂಸದರು, ಶಾಸಕರು, ಜಿಲ್ಲಾ ತಾಲೂಕು-ಗ್ರಾಮ ಪಂಚಾಯತ್‌ಗಳ ಸದಸ್ಯರು ತಮ್ಮ ಕ್ಷೇತ್ರದ ಒಂದು ಸರಕಾರಿ ಶಾಲೆಗೆ ತೆರಳಿ ಪುಟ್ಟ ಮಕ್ಕಳಿಗೆ ಉತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣದ ಹೊಣೆಗಾರಿಕೆ ಹಿರಿಯರಾದ ನಮ್ಮದು ಎನ್ನುವ ಭರವಸೆ ನೀಡುವ ಮೂಲಕ ಮಕ್ಕಳ ಶಿಕ್ಷಣದ ಹಕ್ಕು ಕಾಯಿದೆ ೨೦೦೯ರ ಅನುಷ್ಠಾನಕ್ಕೆ ಅತ್ಯುತ್ತಮ ಅಡಿಪಾಯ ಹಾಕುವರು. ಈ ರೀತಿಯಾಗಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪ್ರತಿಯೊರ್ವರ ಮೂಲ ಜವಾಬ್ದಾರಿಯನ್ನು ಮನವರಿಕೆ ಮಾಡಲಾಗುತ್ತದೆ.
ಯೋಜನೆಯಲ್ಲಿ ಸೂಚಿತ ಚಟುವಟಿಕೆಗಳು:
ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಶಾಲೆಗೆ ದಾಖಲಾಗದೆ ಉಳಿಯುವ ಹಾಗೂ ಅರ್ಧದಲ್ಲಿಯೇ ಶಾಲಾ ಜೀವನ ಮೊಟಕುಗೊಳಿಸುವ ಮಕ್ಕಳು ವಿಪರೀತವಾಗಿರುವುದರಿಂದ ಈ ಪ್ರದೇಶದಲ್ಲಿ ಜನಪ್ರತಿನಿಧಿಗಳು, ಅಧಿಕಾರಿ ಹಾಗೂ ಶಿಕ್ಷಕರು ಸೇರಿ, ಜನರೊಂದಿಗೆ ಮುಖಾಮುಖಿಯಾಗಿ ಅವರೊಡನೆ ಶಾಲೆಗೆ ಜಾಥಾ ಬರುತ್ತಾರೆ. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ, ಗ್ರಾಮ ಪಂಚಾಯತ್‌ನ ವತಿಯಿಂದ ಶ್ವೇತ ಪತ್ರ ಹೊರಡಿಸುವಿಕೆ, ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳು ೨೦೧೨ರ ಸರಳವಾದ ಕೈಪಿಡಿ ಪ್ರಕಟನೆ, ಶಿಕ್ಷಣದ ಹಕ್ಕುಗಳ ಮಾಹಿತಿಯನ್ನು ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಯ ಗೋಡೆಯ ಮೇಲೆ ನಮೂದಿಸಿ ಅನಾವರಣಗೊಳಿಸುವುದು, ಹಿರಿಯರು ಪ್ರತಿಜ್ಞಾ ಸ್ವೀಕಾರ, ಎಸ್.ಡಿ.ಎಂ.ಸಿ ಹೊಣೆಗಾರಿಕೆ, ಶಾಲೆಯಲ್ಲಿ ನಡೆಯಬೇಕಾದ ಕಡ್ಡಾಯ ಚಟುವಟಿಕೆಗಳ ಪರಿಶೀಲನೆ, ಮೇಲ್ವಿಚಾರಕರ ಭೇಟಿ, ಎಂ.ಎಚ್.ಆರ್.ಡಿ ನಮೂನೆಯಂತೆ ಗುಣಾತ್ಮಕ ಶಿಕ್ಷಣಕ್ಕಾಗಿ ಕೈಗೊಂಡಿರುವ ಕ್ರಮ ತಿಳಿದುಕೊಳ್ಳಲು ಸ್ವಯಂ ಸೇವಕರ ಭೇಟಿ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳಿರುತ್ತದೆ. ಪ್ರತಿ ಪ್ರೌಢಶಾಲಾ ತಂಡದಲ್ಲಿ ೬ ಜನ ವಿಷಯ ಶಿಕ್ಷಕರು, ಬ್ಲಾಕ್ ಹಂತದಲ್ಲಿ ಬಿ.ಇ.ಒ, ಬಿ.ಆರ್.ಪಿ, ಇ.ಸಿ.ಒ, ಸಿ.ಆರ್.ಪಿ, ಐ.ಇ.ಆರ್.ಟಿ, ಹಾಗೂ ಮುಖ್ಯ ಶಿಕ್ಷಕರು ಭಾಗಿಯಾಗುತ್ತಾರೆ.

ಅವಿಭಜಿತ ದ.ಕ ಮತ್ತು ಉಡುಪಿಯಲ್ಲಿ ಯೋಜನೆ:
ದ.ಕ.ಜಿಲ್ಲೆಯಲ್ಲಿ ೯೩೨ ಸರಕಾರಿ ಪ್ರಾಥಮಿಕ ಹಾಗೂ ೧೬೦ ಪ್ರೌಢಶಾಲೆಗಳಿದ್ದು ೪೭ ಬ್ಲಾಕ್ ತಂಡಗಳು, ೮ ಜಿಲ್ಲಾ ತಂಡಗಳನ್ನು ಆಯೋಜಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ೬ ಜನರ ೩೭ ತಂಡಗಳನ್ನು ರಚಿಸಿದ್ದು ೨೦ ದಿನದಲ್ಲಿ ೬೧೭ ಪ್ರಾಥಮಿಕ ಹಾಗೂ ೧೦೬ ಪ್ರೌಢಶಾಲೆಗೆ ಭೇಟಿ ನೀಡಲಾಗುತ್ತದೆ.


ಸರಕಾರಿ ಶಾಲೆಯ ಕುರಿತು ಜನರಿಗೆ ಕಡಿಮೆ ದರ್ಜೆಯದು ಎನ್ನುವ ತಾತ್ಸಾರ ಮನೋಭಾವನೆಯಿದೆ. ಅದನ್ನು ಹೋಗಲಾಡಿಸಿ ಸಾರ್ವಜನಿಕರ ಸಹಭಾಗಿತ್ವ ಹೆಚ್ಚಿಸಬೇಕು. ಸರಕಾರಿ ಶಾಲೆಯಲ್ಲಿ ವಿಶೇಷ ಫಲಿತಾಂಶ ಕಾಣಲು ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಸಹಾಯವಾಗಲಿದೆ. ಈ ಯೋಜನೆ ಕಾರ್ಯಚಟುವಟಿಕೆಯಿಂದ ೨೦೧೧-೧೨ರ ಸಾಲಿನಲ್ಲಿ ಸರಕಾರಿ ಶಾಲೆ ಫಲಿತಾಂಶದಲ್ಲಿ ಉತ್ತಮ ಪ್ರಗತಿ ಕಂಡಿದೆ. ಪ್ರತಿವರ್ಷ ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ಮಾಡುವ ಉದ್ದೇಶವಿದೆ. 
ವಿಶ್ವೇಶ್ವರ ಹೆಗಡೆ ಕಾಗೇರಿ- ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ 







No comments:

Post a Comment