Sunday, 22 July 2012


ನಾನೆಂಬ ಅಹಂ ಬಿಟ್ಟು ಬಾ ನನ್ನ ಬಳಿಗೆ ಎಂಬ ಸಂದೇಶ ನೀಡುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ: 
ಅಯಗಿರಿ  ನಂದಿನಿ ನಂದಿತ ಮೇದಿನಿ, ವಿಶ್ವ ವಿನೋದಿನಿ ನಂದನುತೇ
ಗಿರಿವರ ವಿಂಧ್ಯಶಿರೋಧಿ ನಿವಾಸಿನಿ, ವಿಷ್ಣು ವಿಲಾಸಿನಿ ಜಿಷ್ಣುನುತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ,ರಮ್ಯ ಕಪರ್ದಿನಿ ಶೈಲ ಸುತೇ
ತ್ರಿಲೋಕಗಳ ಶಾಂತಿಗಾಗಿ ಮಹಿಷಮರ್ದಿನಿಯಾದ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಕ್ಷೇತ್ರದಲ್ಲಿ ಕಳೆದ ಮೀನ ಸಂಕ್ರಮಣದಂದು ವರ್ಷಾವಧಿ ಜಾತ್ರೆಯ ಧ್ವಜಾರೋಹಣವಾಗುತ್ತದೆ. ತಿಂಗಳಾವಧಿಯ  ಜಾತ್ರೆಯ ನಿರ್ಣಾಯಕ ಘಟ್ಟವೆ `ಪುರಾಲ್ದ ಚೆಂಡ್'. ಪೊಳಲಿ ಉತ್ಸವಕ್ಕೇ  `ಪೊಳಲಿಚೆಂಡು 'ಎಂಬ ಪರ್ಯಾಯ ಹೆಸರು ಬರುವಷ್ಟರ ಮಟ್ಟಿಗೆ  ಪ್ರಸಿದ್ಧ ಇಲ್ಲಿನ ಚೆಂಡಾಟ. ಇದಕ್ಕೆ ಮುಖ್ಯ ಕಾರಣ ಶ್ರೀ ಕ್ಷೇತ್ರದ  ಚರ್ಮದ ಚೆಂಡಿನ ಭಾರೀ ಗಾತ್ರ ಹಾಗೂ ಇದನ್ನು ಆಡಲು-ನೋಡಲು ಜಮಾಯಿಸುವ ಅಪಾರ ಜನಸ್ತೋಮ.
ಉತ್ಸಾಹಿ ಯುವಕರಿಗೆ ಐದು ದಿನಗಳ ಚೆಂಡಾಟ ಶಕ್ತಿಯ ಪ್ರದರ್ಶನದ ಜೊತೆಗೆ ಭಕ್ತಿಯ ಸೇವೆಯಾದರೆ, ನೋಡುಗರಿಗೆ ಇದೊಂದು ರೋಮಾಂಚನಕಾರಿಯಾದ ಅಪೂರ್ವ ಕೌತುಕದ ಆಟ. ತುಳುನಾಡಿನ ಹಲವು ದೇವಾಲಯ- ದೈವಸ್ಥಾನಗಳಲ್ಲೂ ಚೆಂಡಾಟವಿದೆ. ಆದರೆ ಅಲ್ಲೆಲ್ಲೂ ಚೆಂಡು ಇಷ್ಟೊಂದು ಭಾರೀ ಗಾತ್ರವಿಲ್ಲ  ಮತ್ತು ಚೆಂಡಾಟದ ದಿನ ಕೂಡ ಮೂರು ದಿನ ಮೀರುವುದಿಲ್ಲ. ಪೊಳಲಿಯಲ್ಲಿ ಮಾತ್ರ ಚೆಂಡಾಟ ೫ದಿನಗಳ ಕಾಲ.ಇದೇ ಇಲ್ಲಿನ ವಿಶೇಷ. ದೂರದೂರುಗಳಲ್ಲಿ ಉದ್ಯೋಗದಲ್ಲಿರುವ ಊರವರು  ಕಡೆಚೆಂಡಿನ ದಿನ ಪೊಳಲಿಗೆ ತಲುಪಿಯೇ ತಲುಪುತ್ತಾರೆ.
`ಕಣ್ಣು ಎರಡು ಸಾಲದು ,ತಾಯಿ ನಿನ್ನ ನೋಡಲು'
ಮಸ್ತ್ ತೇಜಸ್ವಿನಿ ತೋಜ್ವೆರ್, ಇನಿತ ದಿನತ ಅಲಂಕಾರೊಡು
ಶ್ರೀ ಕ್ಷೇತ್ರದ ಎಡಬದಿಯಲ್ಲಿರುವ ,ಅಮ್ಮ ಲಲಿತಾಂಬಿಕೆಯು ಭುವನೇಶ್ವರಿಯಾಗಿ ವ್ಯಾಘ್ರ ವಾಹಿನಿಯಾಗಿ ಮಹಿಷ, ಚಂಡ ಮುಂಡ, ರಕ್ತಬೀಜಾಸುರ, ಶುಂಭ ನಿಶುಂಭಾದಿ ರಕ್ಕಸರ ರುಂಡಗಳನ್ನು  ಕತ್ತರಿಸಿ ಕೆಡವಿ ಚೆಂಡಾಡಿದ್ದ ವಿಶಾಲ ಗದ್ದೆಯಲ್ಲೇ ವರ್ಷವೂ ಚೆಂಡಾಟ ನಡೆಯುತ್ತದೆ. ದೇವಿ ಮಹಾಲಕ್ಷ್ಮಿ, ಸರಸ್ವತೀ ಅಭಿದಾನ ಪಡೆದು ಮಹಾಕಾಳಿಯ ಅವತಾರದಲ್ಲಿ ರಕ್ಕಸ ಪಡೆಯನ್ನು ಆಮೂಲಾಗ್ರ ನಿಗ್ರಹಿಸಿ ವಿಜಯಿಯಾದ ದಿನದಂದು ಆದಿಮಾಯೆಯ ಅಲಂಕಾರ ಅಪೂರ್ವ, ಮಹಾತೇಜಸ್ಸಿನಿಂದ ಕೂಡಿರುವುದು. ಆದಿಪರಾಶಕ್ತಿಯು ಸಾಕ್ಷಾತ್ ಮಹಾರಾಜ್ಞಿಯೇ ಆಗಿ ಮೆರೆಯುವರು. ಸಾವಿರ ಸೀಮೆಗಳ ಪೊಳಲಿ ಕ್ಷೇತ್ರದ ಯುವಕರು, ಮಕ್ಕಳು, ವೃದ್ಧರಲ್ಲದೆ ,ಹರಕೆ ಹೇಳಿಕೊಂಡ ಸಾರ್ವಜನಿಕರೂ  ಚೆಂಡಾಟದಲ್ಲಿ ಪಾಲ್ಗೊಂಡು, ಚೆಂಡನ್ನು ಗುರಿಯತ್ತ ದೂಡಲು  ಪಡುವ ಪರದಾಟ,ಪರಿಶ್ರಮವನ್ನ್ನು ಕಣ್ಣಾರೆ ಕಾಣಬೇಕು, ಕಂಡು ಆನಂದಾನುಭವಿಸಬೇಕು.
ಸಕಲೋಪಚಾರದಿ ಭಕ್ತರು ಸ್ತುತಿಪರು...ಸ್ವರ್ಣ ಕವಚವಿತ್ತು ಅಮ್ಮನಿಗೆ...
ಪರ್ಸಿಯಾದ ಅರಸ ಕಕ್ಕಲಿಯನ್‌ನ ರಾಯಭಾರಿ ಅಬ್ದುಲ್ ರಝಾಕ್ ಕ್ರಿ.ಶ.೧೪೪೨ರಲ್ಲಿ  ಸಮುದ್ರ ಮಾರ್ಗವಾಗಿ ಮಂಗಳೂರಿಗೆ ಬಂದಿದ್ದ. ೧೪೪೩ರಲ್ಲಿ ಪೊಳಲಿಗೆ ಬಂದು ದೇವಾಲಯ ಕಂಡ ಆತ ನಿಬ್ಬೆರಗಾಗಿದ್ದ.. ಪ್ರಪಂಚದಲ್ಲಿ ಎಲ್ಲೂ ಇಲ್ಲದ ವಿಗ್ರಹಗಳನ್ನು ತಾನೀ ದೇವಾಲಯದಲ್ಲಿ ಕಂಡೆ ಎಂದು ತನ್ನ ಪ್ರವಾಸೀ ಕಥನದಲ್ಲಿ  ಉದ್ಗರಿಸಿದ್ದಾನೆ. ಹತ್ತು ಗಜ ಉದ್ದ, ಹತ್ತು ಗಜ ಅಗಲವಾಗಿ ಚಚ್ಚೌಕಾರದ ಈ ದೇಗುಲ ಆಗ ೫ಗಜ ಎತ್ತರವಿತ್ತಂತೆ.
ಕಂಚಿನ ಎರಕವೂ ಮಾಯ....
ಇಡೀ ದೇಗುಲ ಎರಕ ಹೊಯ್ದ  ಕಂಚಿನಿಂದ ನಿರ್ಮಾಣವಾಗಿತ್ತು. ದೇಗುಲದೊಳಗೆ ನಾಲ್ಕು ವೇದಿಕೆಗಳಿದ್ದುವು. ಮುಂದಿದ್ದ ವೇದಿಕೆ ಮೇಲೆ ಚಿನ್ನದಿಂದ ನಿರ್ಮಿತ ಮನುಷ್ಯಾಕಾರದ ದೊಡ್ಡ ವಿಗ್ರಹವಿದೆ. ಇದರ ಎರಡು ಕಣ್ಣುಗಳ ದೃಷ್ಟಿಗೆ ಕೆಂಪು ರತ್ನಗಳನ್ನು ಅಳವಡಿಸಲಾಗಿದೆ. ಎಲ್ಲಿ ನಿಂತು ನೋಡಿದರೂ ನಮ್ಮನ್ನೆ ನೋಡುವ ಕಲಾಕೌಶಲದ ವಿಗ್ರಹ ಇದೆಂದು ಆ ರಾಯಭಾರಿ ವರ್ಣಿಸಿದ್ದ.  ಕ್ರಿ.ಶ. ೧೫ನೇ ಶತಮಾನದಲ್ಲಿ  ಪೊಳಲಿ ದೇಗುಲಕ್ಕೆ ಅಪಾರ ಸಂಪತ್ತಿತ್ತು. ಹಲವು ಶತಮಾನಗಳಿಂದ ರಾಜಾಶ್ರಯ ಹೊಂದಿ, ಭಕ್ತರಿಂದ ಆರಾಧಿತ ಪೊಳಲಿ ಶ್ರೀ ರಾಜರಾಜೇಶ್ವರಿ ಅಪಾರ ಸಂಪತ್ತಿನ ಒಡತಿಯಾಗಿದ್ದಳು. ಆಗ ದೇವಾಲಯವು ಚೌಟರಸರ ಆಳ್ವಿಕೆಯಲ್ಲಿತ್ತು. ಆದರೆ ಈ ಸಂಪತ್ತುಗಳೆಲ್ಲ ಎಲ್ಲಿ ಹೋಯಿತು? ಹೇಗೆ ಮಾಯವಾಯಿತೆಂಬುದು ಎನ್ನುವುದು ನಿಗೂಡ?
ಅಮ್ಮನವರ ಮೂರ್ತಿ ಚಿನ್ನದಿಂದ ನಿರ್ಮಿತ ಎಂದು ರಾಯಭಾರಿ ವರ್ಣಿಸಿದ್ದ. ಅಂದರೆ ತಾಯಿಗೆ ಸ್ವರ್ಣ ಕವಚ,  ಹವಳದ ಕಣ್ಣುಗಳಿದ್ದುದು ಸುಸ್ಪಷ್ಟ. ತ್ರಿಲೋಕೇಶ್ವರಿಯಾದ ಶ್ರೀ ರಾಜರಾಜೇಶ್ವರಿಯನ್ನು ನಿತ್ಯ ಈ ಚಿನ್ನಾಭರಣಗಳಿಂದ ಅಲಂಕರಿಸಿ ಅರ್ಚಿಸಲಾಗುತ್ತಿತ್ತು.ಕ್ರಿ.ಶ. ೧೪೪೬ರಲ್ಲಿ ಫಲ್ಗುಣಿ ನದಿಯುಕ್ಕಿ ಪ್ರವಾಹದ  ಸಂದರ್ಭ ದೇವಿಯ ಗರ್ಭಗುಡಿ ಹೊರತು ಮಿಕ್ಕೆಲ್ಲವೂ ಕೊಚ್ಚಿ ಹೋಗಿದ್ದವು. ಆ ಸಂದರ್ಭ ದೇಗುಲಕ್ಕೆ  ಬಂದಿದ್ದ ಪುತ್ತಿಗೆ ಚೌಟರು, ಅಮ್ಮನವರ ಆಭರಣಗಳನ್ನಿಡಲು ದೇವಾಲಯದೊಳಗೆ ಸುರಕ್ಷಿತ ಜಾಗವಿಲ್ಲವೆಂಬ ಕಾರಣ ಮುಂದಿಟ್ಟು, ಗುತ್ತಿನವರ ಅನುಮತಿ ಪಡೆದು ಎಲ್ಲಾ ಆಭರಣಗಳನ್ನು ಪುತ್ತಿಗೆ ಅರಮನೆಗೆ ಒಯ್ದಿದ್ದರಂತೆ. ಆನಂತರ ಈ ಬಂಗಾರ ಏನಾದುವು ಎಂಬುದು ಯಾರಿಗೂ ಅರಿಯದು. ದರೋಡೆಕೋರರು ಅಪಹರಿಸಿದ್ದರೂ ಇರಬಹುದೆಂಬ ಗುಮಾನಿಯೂ ಇದೆ. ದೇವಾಲಯದ ಅಂದಿನ ಕಂಚಿನ ಎರಕದ ಗಟ್ಟಿಮುಟ್ಟಾದ ಮಾಡು ಕೂಡಾ ಮಾಯವಾಗಿರುವುದು ವಿಪರ್‍ಯಾಸ.
ತನ್ನ ಪಟ್ಟೆ  ಸಹಿತ ಯಾವುದನ್ನೂ ಯಾರಿಗೂ ಬಿಟ್ಟುಕೊಡಲೊಲ್ಲದ ಕಟ್ಟಾ ಸಂಪ್ರದಾಯಸ್ಥೆಯಾದ ಶ್ರೀ ರಾಜರಾಜೇಶ್ವರಿಯು ತನ್ನ ಅಪಾರ ಬಂಗಾರಗಳನ್ನು ಕಳೆದುಕೊಂಡುದಾದರೂ ಹೇಗೆ ?  ನಿಗೂಢವಾಗಿ ಮಾಯವಾಗಿರುವ ಅಮ್ಮನ ಆಭರಣಗಳು ಇಂದಲ್ಲ ನಾಳೆ ಖಂಡಿತವಾಗಿಯೂ ಅಮ್ಮನ ಭಂಡಾರಕ್ಕೆ ಮರಳಿಯಾವು ಎಂಬುದು ಆಸ್ತಿಕರ ಬಲವಾದ ನಂಬುಗೆ.
ಪ್ರಧಾನ ದೈವವಿದ್ದರೂ ಹೊರಗಿನ ಎರಡು ದೈವಗಳಿಗೆ ನೇಮ ನಡೆಯುತ್ತಿತ್ತಿಲ್ಲಿ
ಉತ್ಸವದ ಕೊನೆಯ ದಿನ ಸೀಮೆಯ ಮತ್ತೆರಡು ಸ್ಥಾನಗಳಿಂದ ದೈವಗಳ ಭಂಡಾರ ಪೊಳಲಿಗೆ ಬಂದು ನೇಮ ಸ್ವೀಕರಿಸುವ ಸಂಪ್ರದಾಯವಿತ್ತು. ಈ ಪೈಕಿ ಒಂದು ಅರ್ಕುಳ ಬೀಡಿನಿಂದ ಮಗ್‌ರಂದಾಯ ಭಂಡಾರ, ಇನ್ನೊಂದು ಸುಜೀರುಗುತ್ತಿನಿಂದ ಮುಡದಾಯ ಭಂಡಾರ. ಉತ್ಸವದ ಸಂದರ್ಭ ಇವೆರೆಡು ಕಡೆಗಳಿಂದ ಬರುವ ದೈವಗಳು ಪೊಳಲಿಯಲ್ಲಿ  ನೇಮ ಮುಗಿಸಿಕೊಂಡು ಮರಳುತ್ತಿದ್ದವು. ಈ ವಿಶಿಷ್ಟ ಸಂಪ್ರದಾಯ ನಂತರದ ವರ್ಷಗಳಲ್ಲಿ ನಿಂತುಹೋಗಿದೆ. ಹಾಗೆಂದು ಪೊಳಲಿ ಕ್ಷೇತ್ರದಲ್ಲಿ ದೈವವಿಲ್ಲವೆ ಎಂಬ ಪ್ರಶ್ನೆ ಮೂಡಬಹುದಾದರೂ ಪೊಳಲಿಯ ಪ್ರಧಾನ ದೈವ ಕೊಡಮಣಿತ್ತಾಯ. ದೈವಕ್ಕೆ ಶ್ರೀ ದೇವಿಯ ಅವಭೃಥದ ಮರುದಿನ ಗೋಪುರದ ಬಾಗಿಲಲ್ಲೆ  ವಿಜೃಂಭಣೆಯ ನೇಮ ನಡೆಯುತ್ತದೆ. ಆದರೂ ಇನ್ನೆರಡು ಸ್ಥಾನಗಳಿಂದ ದೈವಗಳ ಭಂಡಾರ ಶ್ರೀ ಕ್ಷೇತ್ರಕ್ಕೆ ಬಂದು ನೇಮ ಸ್ವೀಕರಿಸಿ ಹಿಂತಿರುಗಿ ಹೋಗುವ ವಿಶೇಷ ಸಂಪ್ರದಾಯವಿದ್ದುದು ಪೊಳಲಿಯಲ್ಲಿ ಮಾತ್ರ ಎನ್ನುವುದು ಗಮನಿಸಬೇಕಾದ ಅಂಶ.
ಜಗವೆಲ್ಲ ನಿನ್ನಯ ಸಂಕಲ್ಪ ಮಾತ್ರ..ಮಣ್ಣಿನ ಪ್ರತಿಮೆ ಭಕ್ತರಿಗೆ ಶುಭದಾಯಕ:
ಪೊಳಲಿ ಕ್ಷೇತ್ರದ ಅಧಿದೇವಿ ಶ್ರೀ ರಾಜರಾಜೇಶ್ವರಿಯ ಪ್ರತಿಮೆ ಶಿಲೆಯಿಂದ ನಿರ್ಮಿತವಾದ್ದಲ್ಲ.  ಸರಿಸುಮಾರು ೯ಅಡಿ ಎತ್ತರದ ರಕ್ತವರ್ಣದ ,ಅಪೂರ್ವ ತೇಜೋರಾಶಿ ಮೈತಳೆದಂತಿರುವ ಮೃಣ್ಮಯ ಮೂರ್ತಿಯಿದು. ಕಳೆದು ಹೋದ ರಾಜ್ಯವನ್ನು ಮರಳಿ ಪಡೆಯಲು, ಶತ್ರು ಸಂಹಾರಕ್ಕಾಗಿ ಎರಡನೆ ಮನು ವಂಶಜನಾದ ರಾಜಾ ಸುರಥನು , ವೈಶ್ಯ ಸಮಾಧಿಯ ಜತೆ ಸೇರಿಕೊಂಡು ನಿರ್ಮಿಸಿದ ಇಷ್ಟೊಂದು ಎತ್ತರದ ಅಮ್ಮನವರ ಮೂರ್ತಿ ಪ್ರಾಯಶಃ ದಕ್ಷಿಣ ಭಾರತದಲ್ಲಿ ಎಲ್ಲೂ ಇಲ್ಲ. ಮಾರ್ಕಂಡೇಯ ಪುರಾಣ ಪ್ರಸಿದ್ಧವಾದ ಈ ಮೃಣ್ಮಯ ಅಥವಾ ಮಣ್ಣಿನ ಮೂರ್ತಿ ಭಕ್ತರ ಪಾಲಿಗೆ ಶುಭಪ್ರದ. ಮೂರ್ತಿಯ ದೃಷ್ಟಿ ಸಮದೃಷ್ಟಿಯಾದ್ದರಿಂದ ಆಗಮ ಶಾಸ್ತ್ರ ಪ್ರಕಾರ ಪೂಜೆಗೆ ಪ್ರಶಸ್ತವಾದುದು. ಮೂರ್ತಿಯ ಬೃಹದಾಕಾರವು ಪೂಜ್ಯವೆನಿಸಿದೆ. ಆಗಮ ಶಾಸ್ತ್ರ ಪ್ರಕಾರ ೩೨ಲಕ್ಷಣಗಳಿಂದ ಕೂಡಿರುವ ಈ ಭವ್ಯಮೂರ್ತಿಯು ಲೋಕಾತೀತವೂ, ಸರ್ವಾತೀತವೂ ಆಗಿದೆ.
ಭಗವತಿ ಹೇ ಶಿತಿಕಂಠ ಕುಟುಂಬಿನಿ ಭೂರಿ ಕುಟುಂಬಿನಿ ಭೂರಿಕೃತೇ.....
ಮಾಯೆ ಇವಳು...ಇವಳೇ ಮೋಕ್ಷಪ್ರದಾಯಿನಿ ಮುಕ್ತಿ ಪ್ರದಾಯಕಳಾದ, ಜ್ಞಾನ ರೂಪಿಣಿ, ತ್ರಿಮೂರ್ತಿಗಳಿಗೂ ನಿಯಾಮಕಳಾಗಿರುವ ಶ್ರೀ ರಾಜರಾಜೇಶ್ವರಿಯು ಸಾಕ್ಷಾತ್ ಆದಿಮಾಯೆ. ಈಕೆ ಜನನ ಮರಣಾತೀತಳು. ಇಹ ಲೋಕದ ಭೋಗದ ಜತೆಗೆ ಸ್ವರ್ಗ ಮೋಕ್ಷಗಳನ್ನು ಕರುಣಿಸುವವಳೂ ಇವಳೇ ಆಗಿದ್ದಾಳೆ. ಮಹಾವಿಷ್ಣುವಿನ ನೇತ್ರಗಳಲ್ಲಿ ಯೋಗ ನಿದ್ರಾರೂಪದಲ್ಲಿ ಅವ್ಯಕ್ತವಾಗಿ ನೆಲೆಸಿದ್ದ ಆದಿಮಾಯೆ, ಜೀವಗಳನ್ನು ಲೌಕಿಕ ಸುಳಿಯಲ್ಲಿ ಸಿಲುಕಿಸುವವಳೂ, ಕೊನೆಗೆ ಮೋಕ್ಷದ ಹಾದಿಯನ್ನೂ ತೋರುವ ಭಕ್ತವತ್ಸಲೆ. ರಾಜ್ಯದಾಯಿನಿ ಶ್ರೀ ರಾಜರಾಜೇಶ್ವರಿಯು ಭೂಲೋಕದ ಸಾಮ್ರಾಜ್ಯ ಹಾಗೂ ಮೋಕ್ಷ  ಸಾಮ್ರಾಜ್ಯಗಳ ಹೆಮ್ಮೆಯ ಏಕೈಕ ಒಡತಿ. ಬ್ರಹ್ಮಾದಿಗಳಿಗೂ  ಈಕೆಯೇ ಮಹೇಶ್ವರಿ. ಲಲಿತಾ ಸಹಸ್ರನಾಮದಲ್ಲಿ ಹೇಳಿರುವಂತೆ `ಸರ್ವ ಮಂತ್ರಾತ್ಮಿಕಾ' ಅಂದರೆ ಎಲ್ಲ ಮಂತ್ರಗಳ ಸ್ವರೂಪವುಳ್ಳವಳು , ಸಪ್ತಕೋಟಿ ಮಹಾ ಮಂತ್ರಗಳ ಸ್ವರೂಪವುಳ್ಳವಳೂ ಈ ಲಲಿತಾಂಬಿಕೆ. ಮಹಾವಿಷ್ಣುವಿನ ಕರ್ಣದ ಮಲದಿಂದ ಜನಿಸಿದ ದಾನವರಾದ ಮಧು-ಕೈಟಭರನ್ನು ಸಂಹರಿಸುವಲ್ಲಿ ಲಕ್ಷ್ಮೀನಾರಾಯಣನಿಗೆ ನೆರವಾಗಿ ಮಹಾಕಾಳಿ ಎಂಬ ಅಭಿದಾನ ಪಡೆದ ಶ್ರೀದೇವಿಯು, ಮಹಿಷಾಸುರನನ್ನು ಮರ್ಧಿಸಿ ಮಹಾಲಕ್ಷ್ಮಿ ಎಂದು ಸ್ತುತಿಸಲ್ಪಟ್ಟವಳು. ಶುಂಭ ನಿಶುಂಭ, ಧೂಮ್ರಲೋಚನ,  ಚಂಡ ಮುಂಡ, ರಕ್ತಬೀಜಾದಿ ದಾನವರನ್ನು ಸಂಹರಿಸಿ ಮಹಾಸರಸ್ವತಿಯೆಂದು ಕೊಂಡಾಡಲ್ಪಟ್ಟ ಆದಿಪರಾಶಕ್ತಿ ಶ್ರೀ ರಾಜರಾಜೇಶ್ವರಿಯ ಪದಕಮಲಗಳಿಗೆ ಶರಣಾದಲ್ಲಿ ಜೀವರುಗಳಿಗೆ ಮೋಹದ ಮಾಯಾ ಪ್ರಪಂಚದ ಬಂಧನಗಳಿಂದ ಮೋಕ್ಷ ಖಂಡಿತ.
ಪುಳಿನದಿಂದ ಹೊಳಲ್...ಹೊಳಲ್ ಪುರಾಲ್ ಆಯಿತು
ಮಳಲಿ ಸಾವಿರ ಸೀಮೆಯ ದೇವಾಲಯ ಪೊಳಲಿ. ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಈ ಸಾನಿಧ್ಯ ಪೊಳಲಿ ಎಂದು ಅಭಿದಾನ ಪಡೆಯುವ ಮುನ್ನ ಈ ಊರಿಗೆ ಇನ್ನಷ್ಟು ಹೆಸರುಗಳಿದ್ದುವಂತೆ. ಮಾರ್ಕಂಡೇಯ ಪುರಾಣದಲ್ಲಿ ಈ ಕ್ಷೇತ್ರಕ್ಕೆ  `ಪುಳಿನ 'ವೆಂಬ ಹೆಸರಿತ್ತು. ಪುಳಿನವೆಂದರೆ ಮೊದಲು ನೀರು ತುಂಬಿದ್ದು,  ನಂತರ ನೀರು ಇಳಿದು ಹೋದ ಅಥವಾ ಹರಿದು ಹೋದ ಪ್ರದೇಶ. ಕರಿಯಂಗಳದಲ್ಲಿ ದೊರೆತ ಕ್ರಿ.ಶ.೮ನೇ ಶತಮಾನದ ೩೮೦ನೇ ಶಾಸನದಲ್ಲಿ ಈ ಕ್ಷೇತ್ರಕ್ಕೆ ` ಹೊಳಲ್' ಎಂಬ ಹೆಸರಿತ್ತು. ಹೊಳಲ್ ಅಂದರೆ ಪಟ್ಟಣ ಎಂದರ್ಥ. ಆ ಕಾಲದಲ್ಲಿ ಇದು ಪಟ್ಟಣವಾಗಿರಬೇಕು. ಈ ಹೊಳಲ್ ಎಂಬುದೇ ಕಾಲಕ್ರಮೇಣ ಪೊರಲ್, ಪುರಾಲ್ ಎಂದು ಜನ ಜನಿತವಾಗಿರಬೇಕು.
ಅಲೂಪೆರೇ ಇನಿತ ತುಳುವೆರ್ ತುಳುನಾಡಿನ ಮೂಲ ಹೆಸರು ಆಲುವ !
ಪೊಳಲಿ ಶ್ರೀರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದ ಪ್ರಾಚೀನತೆ ಹಾಗೂ ಪ್ರತಿಷ್ಠೆ ಕುರಿತು ನಿಖರ ಮಾಹಿತಿ ಹೊಂದುವುದು ಬಹಳ ಕಷ್ಟ.  ಈ ದೇಗುಲದ ಸುತ್ತಮುತ್ತ ಹಲವು ಶಿಲಾಶಾಸನಗಳಿದ್ದುವು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇವು ಮೂಲೆಗುಂಪಾಗಿವೆ, ಕಾಣೆಯಾಗಿವೆ. ಆದಿಶಕ್ತಿಯ ಕಡುಭಕ್ತ  ಸುರಥ ಮಹಾರಾಜ ಕಲಿಯುಗದ ಆದಿಯಲ್ಲಿದ್ದವನು. ಈ ಹಿನ್ನೆಲೆಯ ಜೊತೆ ಜೊತೆಗೆ ಅಮ್ಮುಂಜೆ, ಕರಿಯಂಗಳ ಹಾಗೂ ಪೊಳಲಿ ದೇವಾಲಯಗಳಲ್ಲಿ  ಉಪಲಬ್ಧವಾಗಿ ಪ್ರಕೃತ ಮೈಸೂರು ಸರ್ಕಾರದ ಅಧೀನದಲ್ಲಿರುವ ಕೆಲವು ಶಾಸನಗಳ ಪ್ರಕಾರ, ಪೊಳಲಿ ಕ್ಷೇತ್ರವು ೫ಸಾವಿರ ವರ್ಷಗಳಿಗೂ ಹಿಂದಿನದು. ಈ ದೇವಾಲಯವು ಮುಖ್ಯವಾಗಿ ಅಲೂಪ ಅರಸರ ಅಧಿಕಾರಕ್ಕೆ ಒಳಪಟ್ಟಿತ್ತು. ನಂತರ ಮೂಡುಬಿದಿರೆಯ ಚೌಟರಸರು ದೇಗುಲದ ನಿರ್ವಹಣೆ ಹೊಂದಿದ್ದರು. ಜಿಲ್ಲೆಯ ಕದಂಬರು, ಚಾಲುಕ್ಯರು,  ಅಲೂಪರು, ರಾಷ್ಟ್ರಕೂಟರು,  ಹೊಯ್ಸಳರು, ವಿಜಯನಗರದವರು,ಇಕ್ಕೇರಿಯವರು ,ಮೈಸೂರರಸರ ಆಡಳಿತಕ್ಕೊಳಗಾಗಿದ್ದ ಬಂಗ, ಚೌಟ,  ಬಲ್ಲಾಳ  ಇತ್ಯಾದಿ ಪಾಳಯಗಾರರ ಸಂಸ್ಥಾನಗಳಾಗಿ, ಮಾಗಣೆಗಳಾಗಿ ವಿಭಾಗಿಸಲ್ಪಟ್ಟು ಅವರಿಂದ ಆಳಲ್ಪಟ್ಟಿತೆಂದು ಚರಿತ್ರೆ, ಶಾಸನಗಳು ನಿರೂಪಿಸಿವೆ.
ಪ್ರಪಂಚ ಹೃದಯವೆಂಬ ಸಂಸ್ಕೃತ ಗ್ರಂಥದಲ್ಲಿನ ಮಾಹಿತಿ ಪ್ರಕಾರ, ಪರಶುರಾಮ ಸೃಷ್ಟಿಗೆ `ಸಪ್ತ ಕೊಂಕಣ'ಯೆಂದು ಹೆಸರು. ಇದರಲ್ಲಿ ಏಳು ದೇಶಗಳು ಒಳಗೊಂಡಿರುವುದೇ ಈ ಹೆಸರು ಬರಲು ಕಾರಣ. ಕೂಪಕ,ಕೇರಳ, ಮೂಷಕ, ಆಲುವ,ವಶುಕ, ಕೊಂಕಣ, ವರಕೊಂಕಣ ಎಂಬುದು ಈ ಏಳು ದೇಶಗಳು. ಈ ಪೈಕಿ ಮೊದಲ ಮೂರು ದೇಶಗಳು ತಿರುವಾಂಕೋಡು, ಕೊಚ್ಚಿ ಹಾಗೂ ಮಲಯಾಳ ಎಂಬುದಾಗಿವೆ. ಕೊನೆಯ ಮೂರು ದೇಶಗಳು ಉ.ಕ., ದ.ಕೊಂಕಣ, ಉತ್ತರ ಕೊಂಕಣವಾದರೆ ನಡುವೆ ಬರುವ `ಆಲುವ  'ಇಂದಿನ ತುಳುನಾಡು. ಉತ್ತರಕನ್ನಡ-ಮಲೆಯಾಳಗಳ ನಡುವಣ ಪ್ರದೇಶವೇ ತುಳುನಾಡಾಯಿತು. ತುಳುನಾಡಿನ ಪ್ರಾಚೀನ ಹೆಸರು ಆಲುವ. ಕಡಲತೀರದ ಮಣ್ಣು ಸಹಜವಾಗೇ ಮೆತ್ತಗಿರುವುದು. ಅಂದರೆ ತುಳುನಾಡು ಮೆದುಮಣ್ಣಿನ ಪ್ರದೇಶ. ಈ ನಾಡನ್ನಾಳಿದ ಅರಸರು ಆಲುವ ಅಥವಾ ಅಲೂಪರೆಂದು ಕರೆಯಲ್ಪಟ್ಟಿರಬೇಕು.
ಫಲ್ಗುನಿಯು ಸುತ್ತಿ ಹರಿದಿರುವಳಿಲ್ಲಿ ಸ್ವಯಂ ಪವಿತ್ರ ಸಾನಿಧ್ಯವಿದು:
ಕುದುರೆಮುಖ ಘಟ್ಟದಿಂದ ಹರಿದು ಬರುತ್ತಿರುವ ಫಲ್ಗುನೀ ನದಿಯು ಶ್ರೀ ಕ್ಷೇತ್ರದ ಉತ್ತರ ಪಾರ್ಶ್ವದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿದು, ವಾಯವ್ಯ ದಿಕ್ಕಿನಲ್ಲಿ ತಿರುಗಿ ದಕ್ಷಿಣಾಭಿಮುಖವಾಗಿ ಹರಿದಿದೆ. ಹಾಗಾಗಿ ಶ್ರೀ ಕ್ಷೇತ್ರಕ್ಕೆ ಸ್ವತಃ ಪಾವಿತ್ರವು ಪ್ರಾಪ್ತಿಯಾಗಿದೆ. ಪೊಳಲಿ ಕ್ಷೇತ್ರದ ಪೂರ್ವದಲ್ಲಿ `ರೆಂಜೆಗಿರಿ 'ಬೆಟ್ಟ ಹಾಗೂ ಬಯಲು ಬೆಟ್ಟು ಗದ್ದೆಗಳಿದ್ದರೆ,  ದಕ್ಷಿಣದಲ್ಲಿ  ಮೊಗರು ಎಂಬ ಮಳಲು ಭೂಮಿ, ಬಯಲು ಗದ್ದೆಗಳು ಹಾಗೂ ೧೨ ಮಹಾ ವಟವೃಕ್ಷಗಳಿರುವುದು ಗಮನಾರ್ಹ.
ಶ್ರೀ ಮಾತಾ ಮತ್ಸಿಂಹಾಸನೇಶ್ವರೀ..`ರಾಜದೇವಾಲಯವಿದು':
ದೇಗುಲದ ದಕ್ಷಿಣದಲ್ಲಿ  `ಸಿಂಹಾಸನಕಟ್ಟೆ  'ಇದೆ. ೪ನೇ ಚೆಂಡಿನಂದು ದೇವರು ಈ ಕಟ್ಟೆಯಲ್ಲಿ  ಕುಳಿತು ಪೂಜೆ ಪಡೆಯುವ  ಪದ್ಧತಿ ಇದೆ. ಕಟ್ಟೆಯ ಹಿಂಬದಿ ಪುರಾತನದ ಒಂದು ಭಾರೀ ಕಟ್ಟಡದ ಬುನಾದಿಯಿತ್ತು. ಅಲ್ಲೀಗ ಅತಿಥಿ ಬಂಗಲೆಯೊಂದು ತಲೆಯೆತ್ತಿದೆ. ಸಿಂಹಾನಸಕಟ್ಟೆಯ ಆಸುಪಾಸು ಹೂತೋಟವಿದೆ. ದೇಗುಲದ ಪಶ್ಚಿಮದಲ್ಲಿ ೧೦೦ಗಜ ದೂರದಲ್ಲಿ ೭ಎಕರೆ ವಿಸ್ತೀರ್ಣದ ಉಪವನವಿದೆ.ದೇಗುಲದ ಪೂರ್ವದಲ್ಲಿ ೧೫೦ಗಜ ದೂರದಲ್ಲಿ  `ಅಗ್ರಸಾಲೆ ಕೆರೆ ಈಗ ಪಾಳುಬಿದ್ದಿದೆ. ದೇಗುಲದ ಪ.ದಿಕ್ಕಿನಲ್ಲಿ ದಕ್ಷಿಣಕ್ಕೆ ಹರಿವ ಫಲ್ಗುನೀ ನದಿಯ ಪಶ್ಚಿಮದಡದಲ್ಲಿ  ವೀರಮಾರುತಿ ದೇವಾಲಯವಿದೆ. ಇದಕ್ಕೆ ಅಗ್ರಹಾರದ ಮಾರುತಿಯೆಂದೇ ಹೆಸರು. ದೇಗುಲದ ಆಸುಪಾಸಿನಲ್ಲಿ ಹಳೆಕಾಲದ ಕಲ್ಲು ಕಟ್ಟಿದ  ಬಾವಿಗಳಿವೆ. ಇದರ ನಿರ್ಮಾತೃರ್‍ಯಾರೆಂಬ ಮಾಹಿತಿ ಇಲ್ಲ. ಪೊಳಲಿಯೆಂಬ ಸುಮಾರು ಒಂದು ಮೈಲು ಉದ್ದಗಲದ ಕ್ಷೇತ್ರದಲ್ಲಿ  ಎಲ್ಲಿ ಅಗೆದರೂ ಕಾಣಸಿಗುವ ಇಟ್ಟಿಗೆಗಳು, ಕೆತ್ತಿದ ಮುರಕಲ್ಲುಗಳು, ಬಿದ್ದುಹೋಗಿರುವ ಪೂರ್ವ ಕಟ್ಟಡಗಳ ನೆಲಗಟ್ಟನ್ನು ಸಾಂಕೇತಿಸುತ್ತಿವೆ. ದೇಗುಲದ ಪೂರ್ವದಲ್ಲಿ ೩೦೦ ಗಜ ದೂರದಲ್ಲಿನ ರೆಂಜೆಗಿರಿ ಬೆಟ್ಟವಿದ್ದು, ಇದು  ಹಿಂದೆ ಚಿಕ್ಕಕೋಟೆಯೋ, ಗಾಳಿಗೋಪುರವೋ ಆಗಿರಬೇಕು. ದೇವಾಲಯದ  ದಕ್ಷಿಣ ಭಾಗದ ಕಂಚೇಶ್ವರ ಎಂಬಲ್ಲಿ ದಿಣ್ಣೆಗಳನ್ನು ಕಿತ್ತು ಗದ್ದೆ ನಿರ್ಮಿಸುತ್ತಿದ್ದ  ಸಂದರ್ಭ ಗಾಜಿನ ಬಳೆಗಳ ಅವುಗೆಯ ಕುರುಹುಗಳು, ಬಳೆಗಳ ಮಲ್ಲಾರಗಳೂ ಗೋಚರಿಸಿದ್ದವು.
ದೇವಾಲಯದ ಅಷ್ಟ ದಿಕ್ಕುಗಳಲ್ಲಿ ಹಲವು ಚಿಕ್ಕಪುಟ್ಟ ದೇವಾಲಯಗಳಿದ್ದುವು. ಈ ಪೈಕಿ ಕೆಲವು ಬಿದ್ದುಹೋಗಿದ್ದರೂ,  ಹಲವು ಈಗಲೂ ಇವೆ. ಒಟ್ಟಿನಲ್ಲಿ ಪೊಳಲಿ ಕ್ಷೇತ್ರಕ್ಕೆ ಹಿಂದಿದ್ದ  ಪುಳಿನಪುರವೆಂಬ ಹೆಸರು, ದೇಗುಲ ಪರಿಸರದಲ್ಲಿ ಕಾಣಸಿಗುವ ಕುರುಹುಗಳು,ಅವಶೇಷಗಳು ಆಸುಪಾಸಿನ ಚಿಕ್ಕ ದೇವಾಲಯಗಳು,ಶಿಲಾಶಾಸನಗಳನ್ನು ಗಮನಿಸುವಾಗ ಇದೊಂದು ಚಿಕ್ಕ ರಾಜಧಾನಿಯಾಗಿತ್ತು, `ಪೊಳಲಿ ದೇವಾಲಯ ರಾಜ ದೇವಾಲಯ 'ವಾಗಿತ್ತೆಂಬುದು ಸ್ಪಷ್ಟ.
ಚೆಂಡಿನ ಗದ್ದೆಯಲ್ಲಿ `ದೇವಿಮಹಾತ್ಮ್ಯೆ'ಆಡುವಂತಿಲ್ಲ !
ಅದೆಷ್ಟೋ ವರ್ಷಗಳ ಹಿಂದೆ  ಶ್ರೀ ದೇವಿಯ ಚೆಂಡಾಟದ ಗದ್ದೆಯಲ್ಲಿ ದೇವಿ ಮಹಾತ್ಮ್ಯೆ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿತ್ತು.ಈ ಗದ್ದೆಯಲ್ಲಿ ದೇವೀ ಮಹಾತ್ಮ್ಯೆ ಯಕ್ಷಗಾನ ಆಡಿದರೆ ಸಾಕ್ಷಾತ್ ಆದಿಪರಾಶಕ್ತಿ ಅವತರಿಸಿ ಬರುವಳು, ರಕ್ಕಸರನ್ನು ಕೊಲ್ಲುವಳು ಎಂಬ ಸತ್ಯ ಸಂಘಟಕರಿಗೂ ಗೊತ್ತಿಲ್ಲ. ದೇವಿ  ಪಾತ್ರ ವಹಿಸಿದ್ದ ಕಲಾವಿದ  ಭಕ್ತಿ-ಶ್ರದ್ಧೆ,ಮಡಿಯಲ್ಲಿದ್ದ  ಬರೇ ಪಾತ್ರಧಾರಿಯಾಗಿರಲಿಲ್ಲ.ರಕ್ಕಸರ ವಧೆಗಾಗಿ ತ್ರಿಮೂರ್ತಿಗಳು, ದೇವತೆಗಳು ನೀಡಿದ ಆಯುಧಪಾಣಿಯಾಗಿ ಸಿಂಹವಾಹಿನಿಯಾಗುತ್ತಲೇ  ಸಾಕ್ಷಾತ್ ದುರ್ಗೆಯೇ ಅಲ್ಲಿ ಅವತರಿಸಿಬಿಟ್ಟಿದ್ದಳು. ಆಕ್ರೋಶದಿಂದ ಬೆಂಕಿಚೆಂಡಿನಂತೆ ಹೊಳೆಯುತ್ತಿದ್ದ ಆದಿ ಪರಾಶಕ್ತಿ  ಕ್ಷಣದಲ್ಲೇ ಚಂಡ ಮುಂಡ ವೇಷಧಾರಿಗಳ  ಶಿರಗಳನ್ನು ಕಡಿದೇ ಬಿಟ್ಟಿದ್ದಳು. ಅದೇ ಕೊನೆ. ಇಂದಿಗೂ ಈ ಚೆಂಡಾಟದ ಗದ್ದೆಯಲ್ಲಿ ಮಾತ್ರವಲ್ಲ , ಪೊಳಲಿ ಮಾಗಣೆಯ ಯಾವ ಗ್ರಾಮಗಳಲ್ಲೂ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನವಾಗುವುದಿಲ್ಲ . ಊರಿನ ಹಿರಿಯರು ಅಂದಿನ ಘಟನೆಯನ್ನು ನೆನಪಿಸಿಕೊಳ್ಳುವಾಗ ಈಗಲೂ ರೋಮಾಂಚನಗೊಳ್ಳುತ್ತಾರೆ. ಭಾವ ಪರವಶರಾಗುತ್ತಾರೆ.
ನಾಸ್ತಿಕನನ್ನೂ ಆಸ್ತಿಕನಾಗಿಸುವ ಅಪೂರ್ವ ಚೈತನ್ಯಶಕ್ತಿ
ನಾನೆಂಬ ಅಹಂ ಬಿಟ್ಟು ಬಾ ನನ್ನ ಬಳಿಗೆ ಎಂಬ ಸಂದೇಶ ನೀಡುತ್ತಿರುವಂತಿದೆ ಮಕ್ಕಳಿಗೆ. ಹಾಗಾಗೇ ಈ ಕ್ಷೇತ್ರಕ್ಕೆ ಭೇಟಿ ಕೊಡುವ ಭಕ್ತರಿಗೆ ವಿಶಿಷ್ಟ ನೆಮ್ಮದಿಯ ಅನುಭವವಾಗುವುದು ಮೊದಲಂಶವಾದರೆ, ಭಕ್ತರು ಆರಾಮ ನಿಂತುಕೊಂಡು ತಾಯಿಯನ್ನು ಕಾಣುವ ಹಾಗಿಲ್ಲ. ಸಂಪೂರ್ಣ ಬಗ್ಗಿದರೆ ಅಥವಾ ಪದ್ಮಾಸನ ಹಾಕಿ ಕುಳಿತರೆ ಮಾತ್ರ ಅಮ್ಮನನ್ನು ನೋಡಬಹುದು.ಸಂಪೂರ್ಣ ಶರಣಾಗತಿಯಿಂದಲೇ ಭಗವತ್‌ದರ್ಶನ ಸಾಧ್ಯ.

ವೀರಾಗ್ರಣಿ ಅಮ್ಮ ನ ಕದನ ಕ್ಷಣಗಳನ್ನು ನೆನಪಿಸುವ ದಂಡಮಾಲೆ
ಪೊಳಲಿಯ ಶ್ರೀ ರಾಜರಾಜೇಶ್ವರಿ ಕೇಪುಳಾಲಂಕಾರ ಪ್ರಿಯೆ. ಉತ್ಸವದ ಸಂದರ್ಭ ಅಮ್ಮನಿಗೆ ಸಲ್ಲುವ  ಪ್ರಮುಖ ಸೇವೆಗಳಲ್ಲಿ  ದಂಡಮಾಲೆ ಗಮನಾರ್ಹ. ಉತ್ಸವ ಬಲಿ ಪ್ರಭಾವಳಿಯ ಸುತ್ತ ಬಿಗಿಯುವ ಕೆಂಪನೆ ಕೇಪುಳಗಳ ದಪ್ಪನೆ ಹಾರವನ್ನು ಐದು ದಿನಗಳಿಗೊಮ್ಮೆ ಬದಲಾಯಿಸುವ ವಿಶಿಷ್ಟ ವಿಧಿಯನ್ನು  ದಂಡಮಾಲೆ ಎಂದು ಕರೆಯಲಾಗಿದೆ.ಆದರೂ ಈ ದಂಡಮಾಲೆ ಸೇವೆಯ ಹಿನ್ನೆಲೆ ಏನೆಂಬ  ಬಗ್ಗೆ  ಸ್ಪಷ್ಟ ಮಾಹಿತಿಯಿಲ್ಲ. ಆದಿ ಪರಾಶಕ್ತಿಯು ರಕ್ಕಸರ ವಿರುದ್ಧ  ಸಮರ ಸಾರಿದ್ದ  ಆ ದಿನಗಳಲ್ಲಿ, ನಿರ್ದಿಷ್ಟ ರಕ್ಕಸರ ಅವಸಾನದ ದ್ಯೋತಕವಾಗಿ ಕೇಪುಳ ಹಾರಗಳನ್ನು ಧರಿಸಿದ್ದಳೇ ಅಥವಾ ಯುದ್ಧಕ್ಕೆ ಹೊರಡುವಾಗ ವೀರಾಗ್ರಣಿಯ ಸಂಕೇತವಾಗಿ ಕೇಪುಳ ಹಾರ ಸ್ವೀಕರಿಸಿದಳೇ ಎಂಬ ಜಿಜ್ಞಾಸೆಯೂ ಇದೆ.
ಲೇಪಾಷ್ಟಗಂಧ ತಯಾರಿ ವಿಧಾನ ಇಂದಿಗೂ ರಹಸ್ಯ
ಶ್ರೀ ಕ್ಷೇತ್ರದ ಗರ್ಭಗೃಹದೊಳಗೆ ಒಂದೆಡೆ ಹಲವು ಶತ ಶತಮಾನಗಳಿಗೂ ಬಳಕೆಯಾಗಿ ಉಳಿಯಬಲ್ಲ ಲೇಪಾಷ್ಟಗಂಧ ದಾಸ್ತಾನಿದೆ. ಪೂರ್ವಜರ ವೈಜ್ಞಾನಿಕ ಪರಿಣತಿಗೆ ಉತ್ತಮ ಸಾಕ್ಷಿ ಈ ಲೇಪಾಷ್ಟಗಂಧ. ಹಾಗೆಂದು ಇದನ್ನು ತಯಾರಿಸುವ ವಿಧಾನ ಮಾತ್ರ ಇಂದಿನ ಪೀಳಿಗೆಯ ಯಾರಿಗೂ ಗೊತ್ತಿಲ್ಲ. ಶ್ರೀಕ್ಷೇತ್ರದ ಪ್ರಧಾನ ದೇವಿಯಾದ ಶ್ರೀ ರಾಜರಾಜೇಶ್ವರಿ ಒಳಗೊಂಡಂತೆ ಎಲ್ಲಾ ಪರಿವಾರ ದೇವರುಗಳದೂ ಮಣ್ಣಿನ ಪ್ರತಿಮೆ. ಸುಮಾರು ೧೨ವರುಷಗಳಿಗೊಮ್ಮೆ ಈ ಮೂರ್ತಿಗಳಿಗೆ ಲೇಪಾಷ್ಟಗಂಧ ಲೇಪನ ಪ್ರಕ್ರಿಯೆ ನಡೆಯುತ್ತದೆ. ಸಂಬಂಧಪಟ್ಟ ತಂತ್ರಿಗಳೇ ಈ ಕಾರ್ಯ ನೆರವೇರಿಸುತ್ತಾರೆ. ವಿವಿಧ  ಮರಗಳ ವಿಶಿಷ್ಟ ರಸ  ಬಳಸಿ, ಅವನ್ನು ಪಾಕ ಮಾಡಿ ತಯಾರಿಸಲಾಗಿದೆ ಲೇಪಾಷ್ಟಗಂಧವನ್ನು . ಮಣ್ಣಿಗೂ ಕಲ್ಲಿನ  ಬಲ ಕೊಡುವ ಶಕ್ತಿಯಿದೆ ಇದಕ್ಕೆ. ವಿಶಿಷ್ಟವಾಗಿ ಪರಿಪಾಕಗೊಂಡ ಈ ಮಣ್ಣಿನ ತಯಾರಿ ಹೇಗೆಂಬ ಬಗ್ಗೆ  ಸದ್ಯ ಯಾರಿಗೂ ಏನೇನೂ ಮಾಹಿತಿ ಇಲ್ಲದಿರುವುದು ಮಾತ್ರ ಋಣಾತ್ಮಕ ಅಂಶ.
ಉತ್ಸವ ತಾಯಿ ಹೆಸರಲ್ಲಿ...ಜಾತ್ರೆ ಪುತ್ರ ಕಾರ್ತಿಕೇಯನಿಗೆ
ಶ್ರೀ ದೇವಿ ರಾಜರಾಜೇಶ್ವರಿಯು ಶ್ರೀ ಕ್ಷೇತ್ರದ ಪ್ರಧಾನ ದೇವಿಯಾದರೂ ಇಲ್ಲಿ ನಡೆಯುವ ನಿತ್ಯಬಲಿ, ಉತ್ಸವ ಬಲಿ,ರಥಾರೋಹಣವಾಗುವುದು ಕುಮಾರಸ್ವಾಮಿಗೆ. ಅಮ್ಮನವರು ನಿರ್ಲಿಪ್ತೆಯಾಗಿ ಕುಳಿತು ಮಗನ ವೈಭವದ -ಆನಂದೋಲ್ಲಾಸದ ಜಾತ್ರೆ ಕಂಡು ಸಂಭ್ರಮಿಸುವ ಮಹಾಮಾತೆ. ಉತ್ಸವವೆಲ್ಲ  ತಾಯಿ ರಾಜರಾಜೇಶ್ವರಿ ಹೆಸರಲ್ಲಿ. ವೈಭವದ ,ಸಂಭ್ರಮದ ಮೆರವಣಿಗೆಯೆಲ್ಲಾ ಕಾರ್ತಿಕೇಯನಿಗೆ. ಜನಸಾಗರದ ಮುಂದೆ ಮೆರೆಯುವ ಮಗನ ವೈಭವ ಕಂಡೇ ಸಂತೃಪ್ತಳಾಗುವ ಅಪೂರ್ವ ಮಾತೆಯಿವಳು.
ದಕ್ಷ ಆಡಳಿತ ಮಂಡಳಿ
ಉಳಿಪಾಡಿ ಗುತ್ತು ತಾರಾನಾಥ  ಆಳ್ವರು  ಆಡಳಿತ ಮೊಕ್ತೇಸರರಾಗಿರುವ ಆಡಳಿತ ಮಂಡಳಿಯು ಶ್ರೀ ಕ್ಷೇತ್ರದಲ್ಲಿ ಈಗಾಗಲೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಜಾರಿಗೆ ಅಹರ್ನಿಶಿ ಶ್ರಮಿಸುತ್ತಿದೆ. ಸೇವಾ ಕೌಂಟರ್‌ಗಳ ಕಂಪ್ಯೂಟರೀಕರಣ, ರಸ್ತೆ ಡಾಮರೀಕರಣ, ಸೂಕ್ತ ನೀರಿನ ವ್ಯವಸ್ಥೆ ಹೀಗೆ ಹಲವು ಮೂಲಭೂತ ಸೌಕರ್ಯಗಳನ್ನು ಸರ್ಕಾರ -ದಾನಿಗಳ ನೆರವಿನಿಂದ ಆಡಳಿತ ಮಂಡಳಿ ನಿರ್ವಹಿಸಿದೆ. ಭಕ್ತರ ಅನುಕೂಲಕ್ಕಾಗಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಆಶಯವಿದೆ.
ಅಮ್ಮುಂಜೆ ಗುತ್ತು ಡಾ.ಮಂಜಯ್ಯ ಶೆಟ್ಟಿ, ಅಡಿಗಳಾದ ಮಾಧವ ಭಟ್ (ಪವಿತ್ರ ಪಾಣಿ),  ಚೇರ ಸೂರ್ಯನಾರಾಯಣ ರಾವ್ ಇವರು ಮೊಕ್ತೇಸರರಾಗಿದ್ದುಕೊಂಡು ಆಳ್ವರ ಪ್ರಯತ್ನಗಳಲ್ಲಿ ಸಂಪೂರ್ಣ ಕೈಜೋಡಿಸುತ್ತಿದ್ದಾರೆ.ಜತೆಗೆ ಕಾರ್ಯನಿರ್ವಹಣಾಧಿಕಾರಿಯಾಗಿ ಹರಿಶ್ಚಂದ್ರ ಇದ್ದಾರೆ.                                                                                                                                                    (ದಿ. ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು ರಚಿಸಿ, ಇವರ ಪುತ್ರ ಪೊಳಲಿ ನಿತ್ಯಾನಂದ ಕಾರಂತರು ಪ್ರಕಟಿಸಿರುವ `ಶ್ರೀ ಕ್ಷೇತ್ರ ಪೊಳಲಿ' ಕೃತಿಯೇ ಈ ಲೇಖನದ ಪ್ರೇರಣೆ. ಈ ಹಿರಿಯರಿಗೆ ನಾನು ಅಭಾರಿ .)
















No comments:

Post a Comment