Sunday, 22 July 2012
ಬಡವರ, ನಿರಕ್ಷರಿಗಳ ಪಾಲಿನ ನಂದಾದೀಪ: ಕೆ.ಕೆ.ಪೈ
ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನು ಯಾವುದಾದರೂ ಒಂದು ಸಂದರ್ಭದಲ್ಲಿ ಗುರುತಿಸುತ್ತೇವೆ. ಆತ ಸಮಾಜಮುಖಿ ಕಾರ್ಯ ಮಾಡುತ್ತಾ ಒಳ್ಳೆಯತನದಿಂದ ಜೀವನ ಸಾಗಿಸಿದರೆ ಅವರ ಸ್ಮರಣೆಯನ್ನು ದಿನನಿತ್ಯ ಮಾಡುತ್ತಾರೆ. ಸಮಾಜದ ಗಣ್ಯರು ಸೇರಿ ಆಚರಿಸುತ್ತಾರೆ. ಈ ರೀತಿಯಾಗಿ ಸ್ಮರಣೆ ಮಾಡುವುದಕ್ಕೂ ಆತ ಜೀವಿತದಲ್ಲಿ ಮಾಡಿದ ಕಾರ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಅಂತಹ ಒಂದು ಕಾರ್ಯಕ್ರಮ ದಿ.ಕೆ.ಕೆ.ಪೈ ಅವರ ೯೨ನೇ ಜನ್ಮದಿನಚರಣೆ ನಡೆದಿರುವುದು ಸಾಕ್ಷಿಯಾಗಿದೆ. ಅವರು ನಮ್ಮನ್ನಗಲಿ ಮೂರುವರೆ ವರ್ಷಗಳು ಕಳೆದಿವೆ.ಆದರೂ ಸಮಾಜದಲ್ಲಿ ಅಸಾಮಾನ್ಯ ವ್ಯಕ್ತಿಯಾಗಿ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದು, ಜನರ ಆಹ್ವಾನದಂತೆ ಮದುವೆ, ಉಪನಯನ, ವಾರ್ಷಿಕೋತ್ಸವ ಸಮಾರಂಭ, ಸತ್ಯನಾರಾಯಣ ಪೂಜೆ, ಯಕ್ಷಗಾನ ಹೀಗೆ ಎಲ್ಲಾ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಲ್ಲರನ್ನೂ ಮಾತನಾಡಿಸುವ ಪರಿ ಹಾಗೂ ಜನರೊಂದಿಗೆ ಬೆರೆತು ಬದುಕುತ್ತಿದ್ದ ಕೆ.ಕೆ.ಪೈ ಅವರ ವ್ಯಕ್ತಿತ್ವವನ್ನು ಎಂದು ಮರೆಯಲು ಸಾಧ್ಯವಿಲ್ಲ. ಕೆ.ಕೆ.ಪೈ ಅವರ ಜೀವನ ಜನರ ವ್ಯಕ್ತಿಯಾಗಿ ಜನರ ನಡುವೆ ಬದುಕಿರುವ ಜನಪ್ರೇಮಿಯಾಗಿ ಗುರುತಿಸಬಹುದು.
೧೯೨೧ರ ಜೂನ್ ೨೬ ರಂದು ಜನಿಸಿದ ಅವರು ತಾನು ಕೊನೆಯುಸಿರೆಳೆದ ದಿನವಾದ ಜ.೧೪ರವರೆಗೂ ಸದಾ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಮತ್ತು ದುಡಿಮೆಗಳಲ್ಲಿ ಉನ್ನತ ಸ್ಥಾನ ಪಡೆದ ದೊಡ್ಡ ವ್ಯಕ್ತಿಗಳಲ್ಲಿ ಅವರೊಬ್ಬರಾಗಿದ್ದರು. ೧೯೯೮ರಲ್ಲಿ ಉಡುಪಿಯಲ್ಲಿ ನಡೆದ ಅವರ ೭೮ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸೇರಿದ ಬೃಹತ್ ಜನಸಮೂಹ ಮತ್ತು ೨೦೦೯ರ ಜ.೧೫ರಂದು ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಜನಸಮೂಹ ಅವರು ಜನರ ಹೃದಯಗಳಲ್ಲಿ ಪಡೆದಿದ್ದ ಉನ್ನತ ಸ್ಥಾನಕ್ಕೆ ಸಾಕ್ಷಿಯಾಗಿತ್ತು.
ಕೆ.ಕೆ.ಪೈ ನಿರ್ವಹಿಸಿದ ಜವಾಬ್ದಾರಿಯುತ ಹುದ್ದೆಗಳು ಹಲವಾರು. ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷರಾಗಿ ಎಂಟು ವರ್ಷ ಸೇವೆ ಸಲ್ಲಿಸಿದ್ದ ಅವರು ಬ್ಯಾಂಕಿನಲ್ಲಿಯೂ ಜನರ ವ್ಯಕ್ತಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದರು. ಬ್ಯಾಂಕಿನ ಅಧ್ಯಕ್ಷರಾಗಿದ್ದಾಗ ಯಾರು ಪತ್ರ ಬರೆದರೂ ಅದಕ್ಕೆ ಉತ್ತರಿಸಿದ್ದರು. ಜನಸಾಮಾನ್ಯರಿಗೆ ಬ್ಯಾಂಕ್ ಸಾಲ ನೀಡುವುದರ ಮೂಲಕ ಮತ್ತು ಬಡ ಕುಟುಂಬಗಳ ಹುಡುಗ-ಹುಡುಗಿಯರಿಗೆ ಬ್ಯಾಂಕಿನಲ್ಲಿ ಉದ್ಯೋಗ ನೀಡುವ ಮೂಲಕ ಅವರು ಜನರ ವ್ಯಕ್ತಿಯಾಗಿ ಮೆರೆದರು. ಸಾಮಾಜಿಕ ಜವಾಬ್ದಾರಿಯ ನಿರ್ವಹಣೆಗೆ ಹೆಚ್ಚು ಹೆಚ್ಚು ಒತ್ತು ನೀಡುವ ಮೂಲಕ ಅವರು ಜನರ ವ್ಯಕ್ತಿಯಾಗಿ ಮೆರೆದರು. ವಿವಿಧ ಶಿಕ್ಷಣ ಸಂಸ್ಥೆಗಳ ಸಂಚಾಲಕರಾಗಿ ಕಾಲೇಜುಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ಅಕಾಡೆಮಿ ರಿಜಿಸ್ಟ್ರಾರ್‌ರಾಗಿ ಡಾ.ಟಿ.ಎಂ.ಎ.ಪೈ ಫೌಂಡೇಶನ್ ಅಧ್ಯಕ್ಷರಾಗಿ ಮತ್ತು ಟಿ.ಎ.ಪೈ. ಮ್ಯಾನೇಜ್ ಮೆಂಟ್ ಸಂಸ್ಥೆಯ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದ ವೇಳೆ ಕೂಡ ಕೆ.ಕೆ.ಪೈ ಮಾತ್ರ ತಂದೆ ತಾಯಿಯನ್ನು ಕಳೆದುಕೊಂಡ ವ್ಯಕ್ತಿಗಳಿಗೆ ಪತ್ರ ಬರೆದು ಸಂತಾಪ ಸೂಚಿಸಿ ಧೈರ್ಯ ನೀಡುವುದು, ಒಳ್ಳೆಯ ಕಾರ್ಯ ಮಾಡಿದವರನ್ನು ಅಭಿನಂಧಿಸಿ ಪ್ರೋತ್ಸಾಹಿಸುವುದು ಇತ್ಯಾದಿ ಕೆಲಸಗಳನ್ನು ಜೀವನ ಪರ್ಯಂತ ಮಾಡಿದರು.
ಪ್ರತಿಫಲವನ್ನು ಬಯಸದೇ ಕಾರ್ಯವನ್ನು ಮಾಡಬೇಕು. ಇದರಿಂದ ಆತ್ಮತೃಪ್ತಿಯುಂಟಾಗುತ್ತದೆ. ಈ ರೀತಿಯಾಗಿ ಕೆ.ಕೆ. ಪೈ ಅವರ ಕೆಲಸಗಳಿಗೆ ಯಾವ ಪ್ರತಿಫಲವನ್ನು ಬಯಸದೇ ಕೆಲಸ ಮಾಡಿದ್ದಾರೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳದೆ ಉಡುಪಿಯ ಜನತೆ ೧೯೯೮ರಲ್ಲಿ ಪೈ ಅವರ ೭೮ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿತ್ತು. ಬಡವರ ಅನ್ನದಾತರೆಂದೆ ಪರಿಗಣಿಸಲ್ಪಟ್ಟಿದ್ದ ಕೆ.ಕೆ.ಪೈ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಸ್ಮರಣಿಕೆಯ ರೂಪದಲ್ಲಿ ಚಿನ್ನದ ಬಟ್ಟಲನ್ನು ಸಮರ್ಪಿಸಲಾಯಿತು. ವಿದೇಶದಲ್ಲಿ ಉದ್ಯಮಿಯಾಗಿರುವ ಬಿ.ಆರ್.ಶೆಟ್ಟಿ ಅವರಿಗೆ ಬ್ಯಾಂಕಿನಿಂದ ಸಾಲವನ್ನು ಒದಗಿಸಿಕೊಟ್ಟು ಸಮಾಜದಲ್ಲಿ ಈ ರೀತಿಯಾಗಿ ಉದ್ಯಮಿಯಾಗಿ ಬೆಳೆಯಲು ಸಹಾಯವಾಗಿದೆ ಎಂದು ಸ್ವತಃ ಶೆಟ್ಟರು ಸ್ಮರಿಸಿಕೊಳ್ಳುತ್ತಾರೆ. ಈ ಸಮಾರಂಭ ನಿಜವಾಗಿಯೂ ಅರ್ಥಪೂರ್ಣವಾಗಿದ್ದು ಅಲ್ಲದೇ ಮಹತ್ವದ ಸ್ಮರಣಿಕೆಯಾಗಿತ್ತು.
ಕೆ.ಕೆ.ಪೈ ಅವರು ಬದುಕಿರುವಾಗಲೇ ಉಡುಪಿಯ ಜನತೆ ಸತೀಶ್ಚಂದ್ರ ಹೆಗ್ಡೆ ಅವರ ನಾಯಕತ್ವದಲ್ಲಿ ಕೆ.ಕೆ.ಪೈ ಟ್ರಸ್ಟನ್ನು ಸ್ಥಾಪಿಸಿದ್ದು ಅವರ ಜನಪ್ರಿಯತೆಗೆ ಮತ್ತೊಂದು ಸಾಕ್ಷಿಯಾಗಿದೆ. ಪ್ರತಿ ವರ್ಷ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಮಾತ್ರವಲ್ಲದೇ ಬಡ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಟ್ರಸ್ಟ್ ಹಣವನ್ನು ನೀಡುತ್ತಿದೆ. ೩.೬೦ ಲಕ್ಷದಷ್ಟು ಹಣವನ್ನು ಇದಕ್ಕಾಗಿ ಬಳಸಲಾಗಿದೆ. ಜನರ ವ್ಯಕ್ತಿಯಾಗಿದ್ದ ಕೆ.ಕೆ.ಪೈ ಅವರ ಹೆಸರಿನಲ್ಲಿ ನಿರಂತರವಾಗಿ ಅನುಷ್ಠಾನಗೊಳ್ಳುತ್ತಿರುವ ಈ ಕಾರ್ಯಕ್ರಮ ನಿಜವಾಗಿಯೂ ಜನಹಿತ ಸಾಧಿಸುವ ಕಾರ್ಯಕ್ರಮವಾಗಿದೆ.
ಕೆ.ಕೆ.ಪೈ ಅವರ ಹೆಸರಿನಲ್ಲಿ ಕೆ.ಕೆ.ಪೈ ಟ್ರಸ್ಟ್ ಬ್ಯಾಂಕಿಂಗ್ ಸೇವೆಯಲ್ಲಿ ಉನ್ನತ ಸಾಧನೆ ತೋರಿಸಿದ ಬ್ಯಾಂಕರುಗಳಿಗೆ ರಾಷ್ಟ್ರೀಯ ಬ್ಯಾಂಕಿಂಗ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಟ್ರಸ್ಟ್ ಈವರೆಗೆ ಉನ್ನತ ಸಾಧನೆ ತೋರಿಸುವ ಏಳು ಬ್ಯಾಂಕರುಗಳಿಗೆ ಕೆ.ಕೆ.ಪೈ ಪ್ರಶಸ್ತಿ ನೀಡಿ ಗೌರವಿಸಿದೆ. ಈ ವರ್ಷದ ಪ್ರಶಸ್ತಿಯನ್ನು ಐಸಿಐಸಿಐ ಬ್ಯಾಂಕಿನ ಅಧ್ಯಕ್ಷ ಕೆ.ವಿ.ಕಾಮತ್‌ರಿಗೆ ನೀಡಲಾಗುವುದು. ಭಾರತದಲ್ಲಿ ಬ್ಯಾಂಕರುಗಳಿಗೆ ಪ್ರತ್ಯೇಕ ಪ್ರಶಸ್ತಿಗಳಿಲ್ಲ, ಪದ್ಮಭೂಷಣ, ಪದ್ಮವಿಭೂಷಣ ಇತ್ಯಾದಿ ಪ್ರಶಸ್ತಿಗಳು ಬ್ಯಾಂಕರುಗಳಿಗೆ ಸಿಗುವುದು ಅಪರೂಪ. ಕೆ.ಕೆ.ಟ್ರಸ್ಟ್ ಈ ಪ್ರಶಸ್ತಿಯನ್ನು ಸ್ಥಾಪಿಸಿದ ಫಲವಾಗಿ ಈ ಕೊರತೆ ನಿವಾರಣೆಯಾಗಿದೆ.
ಜನರ ವ್ಯಕ್ತಿಯಾಗಿ ತಮ್ಮ ಜೀವಮಾನವನ್ನು ಕಳೆದ ಕೆ.ಕೆ.ಪೈ ೧೪ ವರ್ಷ ಕಾಲ ಜನರ ಪ್ರತಿನಿಧಿಯಾಗಿ ಉಡುಪಿ ನಗರಸಭೆಯಲ್ಲಿ ಸೇವೆ ಸಲ್ಲಿಸಿದ್ದರು. ೧೯೪೭ರಲ್ಲಿ ಉಡುಪಿ ನಗರಸಭೆಗೆ ಆಯ್ಕೆಯಾದರು. ೫ ವರ್ಷ ಅಧ್ಯಕ್ಷರಾಗಿದ್ದ ಅವರು ಜನರಿಗಾಗಿ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದರು. ಎರಡು ವಾರ್ಡ್‌ಗಳಿಂದ ಏಕಕಾಲದಲ್ಲಿ ನಗರ ಸಭೆಗೆ ಆಯ್ಕೆಯಾದುದು ಅವರ ಜನಪ್ರಿಯತೆಗೆ ದ್ಯೋತಕವಾಗಿತ್ತು. ಜನರ ಹಬ್ಬ ಉಡುಪಿ ಪರ್ಯಾಯದಲ್ಲೂ ಕೆ.ಕೆ.ಪೈ ಅಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ವಿವಿಧ ದೇವಸ್ಥಾನಗಳ ಜೀರ್ಣೋದ್ದಾರ ಸಮಿತಿ ಅಧಕ್ಷರಾಗಿ ಹಲವಾರು ಸಾಧಕರುಗಳ ಸಮಿತಿಯ ಅಧ್ಯಕ್ಷರಾಗಿ ಮತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಜನರ ಬಯಕೆಯಂತೆ ಕೆ.ಕೆ.ಪೈ ಸೇವೆ ಸಲ್ಲಿಸಿದ್ದರು.
ಕೆ.ಕೆ.ಪೈ ಅತೀ ಬಡವರು, ಸಮಾಜದ ವಂಚಿತ ವರ್ಗಗಳ ಜನರು ಸೇರಿದಂತೆ ಎಲ್ಲರನ್ನೂ ಪ್ರೀತಿಸಿದರು. ಎಲ್ಲರಿಗೂ ಅವರ ಮನೆಯ ಬಾಗಿಲು ಸದಾ ತೆರೆದಿರುತ್ತಿತ್ತು. ಯಾರು ಬೇಕಾದರೂ ಅವರ ಮನೆಗೆ ಹೋಗಿ ಅವರನ್ನು ಬೇಟಿಯಾಗಿ ಕಷ್ಟ ಸುಖ ಹೇಳಿಕೊಂಡು ತಮ್ಮ ಸಮಸ್ಯೆಗಳ ನಿವಾರಣೆಗೆ ನೆರವು ಕೋರುವ ಅವಕಾಶವಿತ್ತು. ಯಾವುದೇ ವ್ಯಕ್ತಿ ಮದುವೆ, ಉಪನಯನ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಅದರಲ್ಲಿ ಕೆ.ಕೆ.ಪೈ ಭಾಗವಹಿಸಿದ್ದರು.
ಜನರ ವ್ಯಕ್ತಿಯಾಗಿ ಸಮಾಜದ ಎಲ್ಲಾ ವರ್ಗಗಳ ಜನರೊಂದಿಗೆ ಬೆರೆತು ಜೀವಿಸುತ್ತಿದ್ದ ಉಡುಪಿಯಲ್ಲಿ ನಡೆಯುತ್ತಿದ್ದ ಎಲ್ಲಾ ಸಭೆ-ಸಮಾರಂಭ ಸಾಮಾಜಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸಿ ಎಲ್ಲರಲ್ಲಿ ಮಾತನಾಡಿ ಅವರ ಮನೆಯವರ ಯೋಗಕ್ಷೇಮ ವಿಚಾರಿಸಿಸುತ್ತಿದ್ದ ಕೆ.ಕೆ.ಪೈ ಭೌತಿಕವಾಗಿ ಬದುಕಿಲ್ಲ. ಜನಹೃದಯಗಳಲ್ಲಿ ಈಗಲೂ ಜೀವಂತವಾಗಿದ್ದಾರೆ. ಅವರು ಬಿಟ್ಟು ಹೋದ ಅವರ ಚಿಂತನೆಗಳು ವಿಚಾರಧಾರೆಗಳು ಆದರ್ಶಗಳು ಈಗಿನ ಜನರಿಗೆ ಮತ್ತು ಮುಂದಿನ ತಲೆಮಾರಿಗೆ ದಾರಿದೀಪಗಳಾಗಿವೆ. ಇಂತಹ ಸಮಾಜ ಸುಧಾರಕರ ಹಾಗೂ ಯುವಜನತೆಗೆ ಮಾರ್ಗದರ್ಶಕರಾಗಿರುವ ಸಂತತಿ ಸಾವಿರವಾಗಲಿ. ಆಗಲೇ ಭವಿತವ್ಯದ ನಾಡಿನ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲಾ.
Subscribe to:
Post Comments (Atom)
No comments:
Post a Comment