Monday 2 July 2012

ವಿಶೇಷ ಮಕ್ಕಳಿಗಾಗಿ ಶಾಲಾ ಸಿದ್ದತಾ ಕೇಂದ್ರ:

ಉಡುಪಿ ಜಿಲ್ಲೆಯ ೩೭ ಕೇಂದ್ರಗಳಲ್ಲಿ ಜುಲೈ ೨ರಿಂದ ಕಾರ್ಯಾರಂಭ

ಮಂಗಳೂರು: ಹುಟ್ಟುವ ಪ್ರತಿಯೊಂದು ಮಗು ಶಿಕ್ಷಿತರಾಗುವುದರೊಂದಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಬೇಕು ಎನ್ನುವುದು ಶಿಕ್ಷಣ ಇಲಾಖೆಯ ಉದ್ದೇಶವಾಗಿದೆ. ಸಾಮಾನ್ಯ ಮಕ್ಕಳಿಗಿಂತ ನೋಡುವುದಕ್ಕೆ ಭಿನ್ನವಾಗಿರುವ ವಿಕಲಚೇತನ ಮಕ್ಕಳಿಗೂ ಅವಕಾಶ ಕಲ್ಪಿಸಬೇಕು ಅವರಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಸಮಾಜ ಮುಖಿಯಾಗಿಸಬೇಕು. ಆ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವ ಉದ್ದೇಶದಿಂದ ಈ ಬಾರಿ ರಾಜ್ಯ ಸರಕಾರವು ಶಾಲಾ ಸಿದ್ದತಾ ಕೇಂದ್ರ ಪ್ರಾರಂಬಿಸಿದೆ. ಸಾಮಾನ್ಯ ಮಕ್ಕಳಂತೆ ಅವರು ಕಲಿಯುತ್ತಿರುವ ಶಾಲೆಯಲ್ಲಿಯೇ ವಿಶೇಷ ಮಕ್ಕಳಿಗೆ ಈ ಬಾರಿ ಶಿಕ್ಷಣ ಕಲಿಯುವ ಅವಕಾಶ ಲಭ್ಯವಾಗಿದೆ. ೭ ವರ್ಷದ ಹಿಂದೆ ಪ್ರಾರಂಭವಾದ ವಿಶೇಷ ಮಕ್ಕಳ ಗೃಹಧಾರಿತ ಶಿಕ್ಷಣದ ಮುಂದಿನ ರೂಪವೇ ಶಾಲಾ ಸಿದ್ದತಾ ಕೇಂದ್ರ.
ಎಸ್‌ಆರ್‌ಪಿ ಜಾರಿಗೆ ಬರಲು ಕಾರಣ:
ಗೃಹಾಧಾರಿತ ಶಿಕ್ಷಣದ ಕಾರಣಕ್ಕಾಗಿ ಶೈಕ್ಷಣಿಕ ಮುಖ್ಯವಾಹಿನಿಯಿಂದ ದೂರವೇ ಉಳಿದಿದ್ದ ವಿಕಲಚೇತನ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆನ್ನುವ ಉದ್ದೇಶದಿಂದ ಶಾಲಾ ಸಿದ್ದತಾ ಕೇಂದ್ರವನ್ನು ಪ್ರಾರಂಬಿಸಿಲಾಗಿದೆ. ರಾಜ್ಯದಲ್ಲಿ ೨೦೧೨-೧೩ ನೇ ಸಾಲಿನಲ್ಲಿ ೨೦೬೦ ಶಾಲಾ ಸಿದ್ದತಾ ಕೇಂದ್ರ(ಎಸ್‌ಆರ್‌ಪಿ) ತೆರೆದು, ನಿರ್ವಹಣೆಗೆ ಸೂಕ್ತ ಶೈಕ್ಷಣಿಕ ಅರ್ಹತೆಯಿರುವ ವಿಶೇಷ ಸಂಪನ್ಮೂಲ ಶಿಕ್ಷಕರ ನೇಮಕಾತಿ ಮಾಡಲಾಗುವುದು. ಐ.ಇ.ಆರ್.ಟಿ ಹಾಗೂ ವಿಶೇಷ ಸಂಪನ್ಮೂಲ ಶಿಕ್ಷಕರು ಮತ್ತು ಸಂಬಂಧಿಸಿದ ಅಧಿಕಾರಿಗಳು ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಕೇಂದ್ರ ತೆರೆಯಲು ನಿರ್ಧರಿಸಿದ ಕ್ಲಸ್ಟರ್ ಅಥವಾ ಶಾಲೆಗಳಲ್ಲಿ ಲಭ್ಯವಿರುವ ಹೆಚ್ಚುವರಿ ಕೊಠಡಿ ಅಥವಾ ಒಂದು ವಿಶೇಷ ಕೊಠಡಿ ವ್ಯವಸ್ಥೆಗೊಳಿಸಿ ಕೇಂದ್ರವನ್ನು ಪ್ರಾರಂಬಿಸಲಾಗುವುದು.
ಎಸ್‌ಆರ್‌ಪಿ ವಿಶೇಷತೆ:
ವಿಶೇಷ ಬಿ.ಇಡಿ ತರಬೇತಿ ಪಡೆದಿರುವ ಅಥವಾ ಬ್ಲಾಕ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐ.ಇ.ಆರ್.ಟಿ/ವಿಶೇಷ ಶಿಕ್ಷಕರ ಮೂಲಕ ಗುರುತಿಸಲಾಗಿರುವ ಕೇಂದ್ರಗಳನ್ನು ಪ್ರಾರಂಭ ಮಾಡಲಾಗುತ್ತದೆ. ಕೇಂದ್ರಕ್ಕೆ ಬರುವ ಮಕ್ಕಳಿಗೆ ಮಾಸಿಕ ರೂ.೩೦೦ ಸಾರಿಗೆ ಭತ್ಯೆ ಜೂನ್‌ನಿಂದಲೇ ಪ್ರಾರಂಭವಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಗೃಹಾಧಾರಿತ ಶಿಕ್ಷಣಕ್ಕಾಗಿ ಮಕ್ಕಳಿಗೆ ನೀಡಲಾದ ರೂ.೨೦೦೦ ಮೌಲ್ಯದ ಕಿಟ್‌ನ್ನು ಈ ಬಾರಿ ಶಾಲೆಯಲ್ಲಿ ಕಲಿಕೋಪಕರಣವಾಗಿ ಬಳಸಿಕೊಳ್ಳಲಾಗುತ್ತದೆ.
ಸ್ವಯಂ ಸೇವಕರಿಗೆ ನೀಡುವ ಗೌರವ ಧನ:
೨೦೧೨-೧೩ನೇ ಸಾಲಿನಲ್ಲಿ ಎಸ್‌ಆರ್‌ಪಿ ಯಲ್ಲಿ ಸ್ವಯಂ ಸೇವಕರಿಗೆ ಮಾಸಿಕ ರೂ.೧೦೦೦ವನ್ನು ಪ್ರತಿಯೊಂದು ಮಗುವಿಗೆ ನೀಡಲಾಗುವುದು. ಇದನ್ನು ೧೦ ತಿಂಗಳ ಅವಧಿಗೆ ನೀಡಲಾಗುತ್ತದೆ. ಒಬ್ಬ ಸ್ವಯಂ ಸೇವಕರು ಗರಿಷ್ಟ ೩ ಮಕ್ಕಳ ಜವಾಬ್ದಾರಿಯನ್ನು ನೋಡಿಕೊಳ್ಳಬಹುದು. ಎಸ್‌ಆರ್‌ಪಿಯಂತೆ ಗೃಹಾಧಾರಿತ ಶಿಕ್ಷಣವು ಮುಂದುವರಿಯಲಿದ್ದು ಇದರಲ್ಲಿ ಶಿಕ್ಷಕರಿಗೆ ಮಾಸಿಕ ರೂ.೩೦೦೦ಗೌರವಧನ ನಿಡಲಾಗುವುದು. ೮ ಕಿ.ಮೀ. ವ್ಯಾಪ್ತಿಯಲ್ಲಿ ಗರಿಷ್ಟ  ೩ ಗೃಹಾಧಾರಿತ ಕೇಂದ್ರದಲ್ಲಿರುವ ಮಕ್ಕಳ ಜವಾಬ್ದಾರಿಯನ್ನು ನಿರ್ವಹಿಸಲು ಅವಕಾಶವಿದೆ. ಶಿಕ್ಷಕರನ್ನು ನೇಮಕ ಮಾಡುವಾಗ ಎಂ.ಸಿ.ಟಿ.ಟಿ ತರಬೇತಿ ಪಡೆದಿರುವ ಆಧ್ಯತೆಯಲ್ಲಿ ಸ್ವಯಂ ಸೇವಕರನ್ನು  ನೇಮಿಸಿಕೊಳ್ಳಬಹುದು. ವಿಶೇಷ ಶಿಕ್ಷಣದಲ್ಲಿ ೯೦ ದಿನಗಳ ಬುನಾದಿ ತರಬೇತಿ ಪಡೆದಿರುವ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗುವುದು. ೧೦ ನೇ ತರಗತಿಯಲ್ಲಿ ಅನುತ್ತಿರ್ಣರಾದವರನ್ನು ನೇಮಿಸಿಕೊಳ್ಳುವ ಅವಕಾಶವಿಲ್ಲ.
ದಕ್ಷಿಣ ಕನ್ನಡದಲ್ಲಿ ಶಾಲಾ ಸಿದ್ದತಾ ಕೇಂದ್ರ:
೨೦೧೨-೧೩ರ ಸಪ್ಟ್ಟೆಂಬರ್‌ನಲ್ಲಿ ಜಿಲ್ಲೆಯ ೧೧೪ ಕ್ಲಸ್ಟರ್‌ಗಳಲ್ಲಿ ೯೪ ಸ್ಥಳದಲ್ಲಿ ಎಸ್‌ಆರ್‌ಪಿ ಆರಂಭವಾಗುತ್ತದೆ. ಕಳೆದ ಬಾರಿಯ ೬೦೨ ಗೃಹಾಧಾರಿತ ಮಕ್ಕಳಲ್ಲಿ ೯೨ ಮಕ್ಕಳು ಆ ಶಿಕ್ಷಣದಲ್ಲಿಯೇ ಮುಂದುವರಿಯುತ್ತಾರೆ. ಉಳಿದ ಎಲ್ಲಾ ಮಕ್ಕಳು ಶಾಲಾ ಸಿದ್ದತಾ ಕೇಂದ್ರಕ್ಕೆ ಆಗಮಿಸುತ್ತಾರೆ. ಬ್ಲಾಕ್‌ಗಳಲ್ಲಿ ೫ ಶಿಕ್ಷಕರನ್ನು ನೇಮಿಸಲಾಗುವುದು ಅದರಲ್ಲಿ ೩ ಖಾಯಂ ಶಿಕ್ಷಕರು ಹಾಗೂ ೨ ಎನ್‌ಜಿಒಗಳ ನೇಮಕ ಮಾಡಲಾಗುತ್ತದೆ. ಜಿಲ್ಲೆಯ ೭ ಕಡೆ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರದಲ್ಲಿ ಈ ಕುರಿತು ಮಾಹಿತಿ ನೀಡಲಾಗುವುದು.
ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ಎಸ್‌ಆರ್‌ಪಿ ಪ್ರಾರಂಭ:
ಉಡುಪಿ ಜಿಲ್ಲೆಯ ೫ ಶೈಕ್ಷಣಿಕ ವಲಯಗಳಾದ ಬ್ರಹ್ಮಾವರ, ಬೈಂದೂರು, ಕಾರ್ಕಳ, ಕುಂದಾಪುರ, ಉಡುಪಿಯಲ್ಲಿ ೭೯ ಕ್ಲಸ್ಟರ್‌ಗಳಲ್ಲಿ ೨೪೬ ಮಕ್ಕಳು ಈ ಪ್ರಯೋಜನ ಪಡೆಯಲಿದ್ದಾರೆ. ೩೭ ಕೇಂದ್ರಗಳಲ್ಲಿ ಎಸ್‌ಆರ್‌ಪಿ ಇಂದಿನಿಂದ ಪ್ರಾರಂಭಗೊಂಡು ವಾರದಲ್ಲಿ ೨ ದಿನಗಳು ಕಾರ್ಯ ನಿರ್ವಹಿಸುತ್ತದೆ. ಜಿಲ್ಲಾ ಶಿಕ್ಷಣ ಕೇಂದ್ರದ ಮೂಲಕ ಸರಕಾರಿ ಶಾಲೆಗಳಲ್ಲಿರುವ ಹೆಚ್ಚುವರಿ ಕೊಠಡಿಯ ಅನುಮತಿ ಪಡೆದು ಎಸ್‌ಆರ್‌ಪಿ ಕೇಂದ್ರದ ಮೂಲಕ ವಿಶೇಷ ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗುತ್ತದೆ. ಸಾಮಾನ್ಯ ಮಕ್ಕಳಂತೆ ಇವರಿಗೂ ಬಿಸಿಯೂಟ, ಸಮವಸ್ತ್ರ ಇತ್ಯಾದಿ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಬಾಕ್ಸ್:
ಉಡುಪಿ ಜಿಲ್ಲೆ
ಶೈಕ್ಷಣಿಕ ವಲಯ    ಬ್ರಹ್ಮಾವರ    ಬೈಂದೂರು    ಕಾರ್ಕಳ    ಕುಂದಾಪುರ    ಉಡುಪಿ    ಒಟ್ಟು   
ಗೃಹಧಾರಿತ     ೧೨    ೧೩    ೦೭    ೦೫    ೧೫    ೫೨   
ಶಿಕ್ಷಕರು    ೪    ೪    ೩    ೨    ೫    ೧೮   
ಎಸ್‌ಆರ್‌ಪಿ ಕೇಂದ್ರ     ೭    ೯    ೭    ೭    ೭    ೩೭   
ಎಸ್‌ಆರ್‌ಪಿ ಮಕ್ಕಳು    ೫೩    ೫೨    ೫೧    ೫೫    ೩೫    ೨೪೬    

೫ ಕಿ.ಮೀ. ವ್ಯಾಪ್ತಿಗೆ ಶಾಲೆಯಲ್ಲಿ ವಿಶೇಷ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಸಾಮಾನ್ಯ ಮಕ್ಕಳಂತೆ  ಇವರು ಸಮಾಜದ ಮುಖ್ಯವಾಹಿನಿಗೆ ಬರಬೇಕೆನ್ನುವ ನಿಟ್ಟಿನಲ್ಲಿ ಎಸ್‌ಆರ್‌ಪಿ ಕೇಂದ್ರಗಳನ್ನು ಆರಂಬಿಸಲಾಗಿದೆ.ಕೇಂದ್ರದಲ್ಲಿ ಶ್ರವಣ ಸಾಧನ, ಬ್ರೈಲ್ ಲಿಫಿ, ಪಿಸಿಯೋಥೆರಪಿಯಂತಹ ಸೌಲಭ್ಯಗಳನ್ನು ಒದಗಿಸಲಾಗುವುದು.
ನಾಗರಾಜ-ಉಡುಪಿ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ
ವಿಕಲಾಂಗತೆಯಿಂದ ಬಳಲುತ್ತಿರುವ ಮಗು ಇತರ ಮಕ್ಕಳಂತೆ ಶಾಲಾ ಜೀವನವನ್ನು ಅನುಭವಿಸಿ ಅವರೊಂದಿಗೆ ಬೆರೆಯಬೇಕು ಎನ್ನುವ ಉದ್ದೇಶದಿಂದ ರಾಜ್ಯಾದಾದ್ಯಂತ ಕೇಂದ್ರಗಳನ್ನು ಆರಂಬಿಸಲಾಗಿದೆ. ೮ರಿಂದ ೧೪ ವರ್ಷದ ವಿಶೇಷ ಮಕ್ಕಳು ಈ ಸೌಲಭ್ಯವನ್ನು ಪಡೆದುಕೊಳ್ಳುವಲ್ಲಿ ಪೋಷಕರು ಹಾಗೂ ನಾಗರಿಕರು ಸಹಕರಿಸಬೇಕು.
ಪೀತಾಂಬರ ಕೆ. -ಸಹಾಯಕ ಯೋಜನಾ ಸಮನ್ವಯಾಧಿಕಾರಿ ದ.ಕ.ಜಿಲ್ಲೆ.

No comments:

Post a Comment