Friday, 22 November 2013

ಅಂತರಂಗದಲ್ಲಿ ಕಾಮ ತುಂಬಿಕೊಂಡು ಬಾಹ್ಯದಲ್ಲಿ ರಾಮ ರಾಮ
ವೈಜ್ಞಾನಿಕತೆಯ ಗುಂಗಿನಲ್ಲಿ ಕಾಮಪಶರಾಗುವ ನೀಚರಿಂದ ಮರ್‍ಯಾದಸ್ಥರಿಗೂ ಅವಮಾನ
ಯುಕ್ತಿಯುಕ್ತಂ ಪ್ರಗೃಹ್ಣೀಯಾತ್ ಬಾಲಾದಪಿ ವಿಚಕ್ಷಣಃ/
ರವೇರವಿಷಯಂ ವಸ್ತು ಕಿಂ ನ ದೀಪಃ ಪ್ರಕಾಶಯೇತ್?//
ವಿವೇಕವಿರುವ ಯಾವುದನ್ನಾದರೂ ಯಾರಿಂದಲಾದರೂ (ಮಕ್ಕಳಿಂದಾದರೂ)ಪ್ರಾಜ್ಞರು ಸ್ವೀಕರಿಸಬೇಕು. ಸೂರ್ಯನಿಂದ ಬೆಳಗಿಸಲಾಗದ ವಸ್ತುಗಳನ್ನು ಇರುಳಿನಲ್ಲಿ ದೀಪವು ಬೆಳಗಿಸಿ ತೋರಿಸುವುದಿಲ್ಲವೇ!
ಎಂತಹ ಅರ್ಥಪೂರ್ಣ ಮಾತುಗಳಿವು. ನನಗೆ ಎಲ್ಲವೂ ತಿಳಿದಿದೆ ಎಂದು ಸಮಾಜದಲ್ಲಿ ವ್ಯಕ್ತಿಯೊರ್ವ ಮಾಡಿದ ತಪ್ಪುಗಳನ್ನೆಲ್ಲಾ ಒಪ್ಪಿಕೊಂಡು ಮೌನಮುದ್ರೆ ತಾಳಿ ಸಮಾಜದಲ್ಲಿ ನಾವಿಂದು ಅಹುದು ಅಹುದು ಎಂದು ತಲೆಯಾಡಿಸುವ ಬಸವ ನಂತಾಗಿದ್ದೇವೆಯೊ ಎನ್ನುವ ಸಂದೇಹ. ಇದಕ್ಕೆ ಪೂರಕವೆನ್ನುವಂತೆ ಅನೇಕ ಘಟನೆಗಳು ನಮ್ಮ ಕಣ್ಣಮುಂದೆ ನಡೆಯುತ್ತಿದೆ.                                                                                                     ವೈಜ್ಞಾನಿಕ  ಯುಗದಲ್ಲಿ ನಾವಿದ್ದೇವೆ ಎನ್ನುವ ಹೆಮ್ಮೆ ಒಂದೆಡೆ. ಇನ್ನೊಂದೆಡೆ ವೈಜ್ಞಾನಿಕತೆಯ ಸೋಗಿನಲ್ಲಿ ನಮ್ಮತನವನ್ನೇ ಕಳೆದುಕೊಳ್ಳುತ್ತಿದ್ದೇವೆಯೇ ಎನ್ನುವ ಆತಂಕ. ಹಿರಿಯರ ಕಾಲದಲ್ಲಿದ್ದ ಮಾನವೀಯ ಸಂಬಂಧಗಳು ಎತ್ತ ಹೋಗಿವೆ. ಸಮಾಜದಲ್ಲಿಂದು ನೀತಿ ಹೇಳುವವರು ಮಾಡುವ ಅನ್ಯಾಯಗಳ ಕುರಿತು ನಾವೆಲ್ಲಾ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದಂತು ಸತ್ಯ. ಮೈಯೆಲ್ಲಾ ಕಾಮ ತುಂಬಿಕೊಂಡು ಮೇಲ್ನೋಟಕ್ಕೆ ರಾಮ ಕೃಷ್ಣ--ಗೋವಿಂದ, ಅಲ್ಲಾ, ಏಸು ಎಂದು ದೇವರ ಹೆಸರನ್ನು ಹೇಳುತ್ತಾ, ಕುತ್ತಿಗೆಯಲ್ಲಿ ಜ್ಯೋತಿಷಿಗಳು ಹೇಳಿದ ಮಾರುದ್ದದ ಮಾಲೆ ಧರಿಸಿರುತ್ತಾರೆ. ಹಣೆಯ ಮೇಲೆ ನಾಮ, ವಿಭೂತಿಗಳು ರಾರಾಜಿಸುತ್ತವೆ. ಆದರೆ ಹುಡುಗಿಯ ವಿಷಯದಲ್ಲಿ ಮಾತ್ರ ಮೂರು ಬಿಟ್ಟವರ ಥರ ಅವರ ವರ್ತನೆ.
ಯಾವುದೇ ಊರಿನಲ್ಲಿ ಉತ್ತಮ ರಾಜಕೀಯ ನಾಯಕರ ಉದಯವಾಗದಿದ್ದರೂ, ಪುಡಾರಿ ನಾಯಕರಿಗಂತೂ ಕೊರತೆಯೆನ್ನುವುದಿಲ್ಲ. ತಾವೇ ದೊಡ್ಡ ಸಂಭಾವಿತರೆನ್ನುವ ನಿಟ್ಟಿನಲ್ಲಿ ಸಮಾಜದಲ್ಲಿ ನಡೆಯುವ ಅನ್ಯಾಯಗಳಿಗೆ ಹೈಕೋರ್ಟುಗಳ ನ್ಯಾಯಾದೀಶರಂತೆ ನ್ಯಾಯ ತೀರ್ಮಾನ ಮಾಡುವ ಇವರುಗಳಿಂದಲೇ ಸಮಾಜದಲ್ಲಿ ಅತ್ಯಾಚಾರ, ಅನಾಚಾರಗಳು ನಡೆಯುತ್ತಿವೆ.
ಬಡ ಕುಟುಂಬದ ಹೆಣ್ಣುಮಕ್ಕಳು ಜೀವನದಲ್ಲಿ ಕಷ್ಟಕೋಟಲೆ ಅನುಭವಿಸುತ್ತಾ, ಟಿ.ವಿ.ಮಾಧ್ಯಮಗಳ ಪ್ರಭಾವದಿಂದ ಆದಷ್ಟು ಬೇಗ ಸಿರಿವಂತರಾಗಬೇಕು. `ಸಾಲ ಮಾಡಿಯಾದರೂ ತುಪ್ಪ ತಿನ್ನು' ಎನ್ನುವ ನಾಣ್ಣುಡಿಯಂತೆ ಮಾನ ಮರ್ಯಾದೆ, ಶೀಲ ಕಳೆದುಕೊಂಡಾದರೂ ತಾನು ಹಣಗಳಿಸಬೇಕು. ಮೈತುಂಬಾ ಬಂಗಾರದ ಒಡವೆಗಳನ್ನು ಧರಿಸಿ ಮೆರೆದಾಡಬೇಕು ಎನ್ನುವ ನೆಲೆಯಲ್ಲಿ ಮೈಮುರಿದು ದುಡಿಯಲು ಮನಸ್ಸು ಬಾರದೆ, ದೇಹವನ್ನೇ ಪರಪುರುಷನಿಗೆ ಒಪ್ಪಿಸುವ ಮಾನಸಿಕತೆ ಹೆಣ್ಣುಮಕ್ಕಳಲ್ಲಿ ಬೆಳೆಯುತ್ತಿದೆ ಎನ್ನುವುದು ಕರ್ಣ ಕಠೋರವಾದರೂ, ವಾಸ್ತವ ಸಂಗತಿ..!
ಎರಡು ಕೈ ಸೇರಿದಾಗ ಮಾತ್ರ ಚಪ್ಪಾಳೆಯಾಗುತ್ತದೆಯೇ ವಿನಃ ಒಂದು ಕೈ ಸೇರಿದರೆ ಅದು ಚಪ್ಪಾಳೆಯಾಗುವುದಕ್ಕೆ ಸಾಧ್ಯವೇ ಇಲ್ಲಾ. ಸಮಾಜದಲ್ಲಿ ಹೆಣ್ಣನ್ನು ಗುರುತಿಸುವುದು ಆಕೆ ತೊಟ್ಟ ಉಡುಗೆ ತೊಡುಗೆ, ಧರಿಸಿದ ಆಭರಣಗಳಿಂದಲ್ಲ. ಹೆಣ್ಣಿಗೆ ಶೀಲವೆ ಶೋಭೆ ಎನ್ನುವ ಮಾತು ಸರ್ವಕಾಲಕ್ಕೂ ಅನ್ವಯವಾಗುವಂತದ್ದು. ವೈಜ್ಞಾನಿಕವಾಗಿ ನಾವು ತಂತ್ರಜ್ಞಾನಗಳಿಗೆ ಹೊಂದಿಕೊಂಡು, ಅದುವೇ ನಮ್ಮ ಜೀವನವೆಂದು ಸಾಗಿದ್ದರೂ, ಹೆಣ್ಣಿನ ವಿಷಯ ಬಂದಾಗ ಆಕೆ ರೂಪವತಿಯಾಗಿಲ್ಲದಿದ್ದರೂ ಶೀಲವಂತಳಾಗಿರಬೇಕು ಎನ್ನುವ ಮಾನಸಿಕತೆ ಗಂಡು ಮಕ್ಕಳದಾಗಿರುತ್ತದೆ. ಪ್ರಸ್ತುತ ಸಮಾಜದಲ್ಲಿ ಮದುವೆಯಾದ ನವದಂಪತಿಗಳ ಮೂಹೂರ್ತ ಮುಗಿದು, ಸಭಾಭವನದಿಂದ ಹೊರಹೋಗುವ ಮೊದಲೇ ಕೋರ್ಟ್ ಮೆಟ್ಟಿಲು ಹತ್ತಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುತ್ತಾರೆಂದರೆ ಅವರಲ್ಲಿನ ಭಿನ್ನಮತಕ್ಕೆ ಕಾರಣವೇನು ಎನ್ನುವುದನ್ನು ತಿಳಿದುಕೊಳ್ಳುವ ಅಗತ್ಯವಿದೆಯಲ್ಲವೇ? ಹೆಚ್ಚಿನ ಹೆಣ್ಣುಮಕ್ಕಳ ಶೀಲ, ಚಾರಿತ್ರ್ಯಗಳ ಸತ್ಯಾಂಶ ತಿಳಿದುಕೊಂಡ ವರ ಮಹಾಶಯ ಆಕೆಯೊಂದಿಗೂ ಹಾಗೂ ವರನ ವಿಷಯ ತಿಳಿದ ವಧುವು ವಿಚ್ಛೇದನಕ್ಕೆ ಮನ ಮಾಡುತ್ತಿರುವುದು ದಾಂಪತ್ಯ ಜೀವನಕ್ಕೆ ಆವರಿಸಿಕೊಂಡ ವಿಲಕ್ಷಣತೆಯ ವೈರಸ್ ಅಂತಲ್ಲವೇ?
ದರಿದ್ರತಾ ಧೀರತಯಾ ವಿರಾಜತೇ ಕುರೂಪತಾ ಶೀಲತಯಾ ವಿರಾಜತೇ/
ಕುಭೋಜನಂ ಚೋಷ್ಣತಯಾ ವಿರಾಜತೇ ಕುವಸ್ತ್ರತಾ ಶುಭ್ರತತಾ ವಿರಾಜತೇ//
ಬಡತನದಲ್ಲಿಯೂ ಕೂಡ ಬುದ್ಧಿ ವಿವೇಕವು ಸ್ಥಿರತೆ-ಶೋಭೆ ಕೊಡುತ್ತದೆ. ಕುರೂಪವಿದ್ದರೂ ಒಳ್ಳೆಯ ನಡತೆ ಶೋಭೆ ತರುತ್ತದೆ. ಕೆಟ್ಟ ಅಡಿಗೆಯೂ ಬಿಸಿಯಾಗಿದ್ದಲ್ಲಿ ರುಚಿಸುತ್ತದೆ. ಹರಕು ಬಟ್ಟೆಯೂ ಶುಭ್ರವಾಗಿದ್ದರೆ ಶೋಭಿಸುತ್ತದೆ. ಸಮಾಜದಲ್ಲಿರುವ ವಸ್ತುಸ್ಥಿತಿಯು ನಮ್ಮ ಅಭಿರುಚಿಯ ಮೇಲಿನ ಮಾನಸಿಕತೆಯ ನೆಲೆಯಾಗಿದೆ. ಕಾಮಾತುರಾಣಾಂ ನ ಭಯಂ ನ ಲಜ್ಜಾ ಎನ್ನುವ ನಾಣ್ಣುಡಿಯಂತೆ ಕಾಮ ಅತಿಯಾದವನಿಗೆ ಭಯ, ನಾಚಿಕೆಯೆನ್ನುವುದು ಆತನ ಹತ್ತಿರಕ್ಕೆ ಸುಳಿಯುವುದಿಲ್ಲ. ಮೂರು ಬಿಟ್ಟವರಿಗೆ ನಾಚಿಕೆಯೆನ್ನುವುದಿಲ್ಲವಾದರೂ, ಇಂತಹವರಿಂದ ಮರ್‍ಯಾದಸ್ತರಿಗೂ ಮುಖವೆತ್ತಿ ನಡೆದಾಡುವುದು ಕಷ್ಟವಾಗುತ್ತಿರುವುದು ಪ್ರಸ್ತುತ ಸಮಾಜದ ದುರಂತ. ಇದನ್ನು ಯಾವುದೇ ಇಲಾಖೆ ತಡೆಯಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ಬಂದಾಗ ಒಪ್ಪಿಗೆಯಿಂದ ನಡೆಯುವ ಕೆಲಸಗಳಿಗೆ ಯಾವ ಇಲಾಖೆ ಏನು ತಾನೆ ಮಾಡಲು ಸಾಧ್ಯ? ಲೇಖನದಲ್ಲಿ ಕೆಲವೊಂದು ಉದಾಹರಣೆ ನೀಡುವುದರೊಂದಿಗೆ ಸಾಮಾನ್ಯವಾಗಿರುವ ಅಂಶಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. (ಇಲ್ಲಿನ ಘಟನೆಗಳು ನಿರ್ದಿಷ್ಟವಾದ ವ್ಯಕ್ತಿಗೆ ಸೇರಿದ್ದಲ್ಲ-ಸಂದರ್ಭಕ್ಕೆ ತಕ್ಕಂತೆ ಹೆಸರುಗಳನ್ನು ಸೇರಿಸಲಾಗಿದೆ) ದೃಢಕಾಯದ ವ್ಯಕ್ತಿಯೊರ್ವ ಸಮಾಜದಲ್ಲಿ ಉದ್ದಿಮೆ ನಡೆಸುತ್ತಾ `ಪ್ರಶಾಂತ'ತೆಯ ಜೀವನ ನಡೆಸಬೇಕಿದ್ದವ, ಕೆಲಸಕ್ಕೆ ಬರುವ ಬಡ ಹೆಣ್ಣು ಮಕ್ಕಳನ್ನು ತನ್ನ ಹಣಬಲದಿಂದ ಕಾಮಪಿಪಾಸುವಾಗಿ ಮಂಚಕ್ಕೆ ಕರೆಯುತ್ತಾನೆಂದರೆ ಇಂತಹವರು ದೇವಳಗಳಿಗೆ ಹಣ ನೀಡಿದಾಕ್ಷಣ ಹಿರಿಯ ವ್ಯಕ್ತಿಯಾಗಲು ಸಾಧ್ಯವೇ? ಆಚಾರ-ವಿಚಾರ, ತಾನು ಮಾಡುವ ಕಾರ್ಯದಿಂದ ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಬೇಕೆ ಹೊರತು ಸಮಾಜದಲ್ಲಿ ಬಡವರ ಪಾಲಿಗೆ ಬೆಳಕಾಗಿರಬೇಕಾದ ವ್ಯಕ್ತಿಯೇ ಮುಗ್ದ ಹೆಣ್ಣು ಮಕ್ಕಳನ್ನು ಹಣಬಲದಿಂದ ಕಾಮದಾಟಕ್ಕೆ ಬಳಸಿಕೊಳ್ಳುವ ದುರ್ದರ ಸ್ಥಿತಿ ಬೇರೆ ಬೇಕೆ? ಹೆಣ್ಣು ಮಕ್ಕಳಿಗೆ ಅನ್ಯಾಯವಾದಾಗ ಅವರ ಬಾಳಿನಲ್ಲಿ `ಸಂತೋಷ' ದ ಬೆಳಕು ಮೂಡಿಸಲು ನ್ಯಾಯಪಂಚಾಯ್ತಿಕೆ ಮಾಡುವ ವ್ಯಕ್ತಿಯೇ ಮುಖವಾಡ ಕಳಚಿಕೊಂಡು, ಆ ಹೆಣ್ಣುಮಕ್ಕಳ ಅಸಹಾಯಕತೆ, ದೌರ್ಬಲ್ಯವನ್ನು ತನಗೆ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾನೆಂದರೆ ಇವರಿಂದ ಸಮಾಜ ಏನನ್ನು ನಿರೀಕ್ಷೆ ಮಾಡಬಹುದು. ಹಿಂದುಗಳ ಪವಿತ್ರ ಗ್ರಂಥ ರಾಮಾಯಣದ ನಾಯಕ ಏಕಪತ್ನಿ ವೃತಸ್ಥ `ಸೀತಾರಾಮ' ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆತನ ಹೆಸರು ಇರಿಸಿಕೊಂಡ ವ್ಯಕ್ತಿಗಳು ರಾಮನಂತೆ ವ್ಯವಹರಿಸಬೇಕಿತ್ತು. ಆದರೆ ಆಧುನಿಕ ಜಗತ್ತಿನಲ್ಲಿ ಮಾತ್ರ ಅವರ ವ್ಯವಹಾರಗಳು ತದ್ವಿರುದ್ದ. ಗೋವು ಅಪಹರಣ, ಲವ್‌ಜಿಹಾದ್, ಪ್ರತಿಭಟನೆ ಎಂದು ಬ್ಯಾನರ್ ಹಿಡಿದುಕೊಂಡು ಪ್ರಚಾರಕ್ಕಾಗಿ ಹಾತೊರೆಯುವ ವ್ಯಕ್ತಿಯ ಮನೆಯ ಹೆಣ್ಣುಮಕ್ಕಳ ಮೊಬೈಲ್ ಸಂಖ್ಯೆ ಪಡೆದುಕೊಂಡು ಅವರಿಗೆ ನಿರಂತರ ಕರೆ ಮಾಡಿ, ನಿನ್ನನ್ನು ಅತ್ಯಂತ ಸಿರಿವಂತೆಯನ್ನಾಗಿ ಮಾಡುತ್ತೇನೆ ಎನ್ನುವ ನೀಚನ ವಿರುದ್ದ ಧ್ವನಿ ಹೊರಬರದ ಸಮಾಜದ ಪ್ರಮುಖ ಸಂಘಟನೆಯ ಮುಖಂಡನಿಂದ ಸಮಾಜದಲ್ಲಿ ಯಾವ ಹೆಣ್ಣನ್ನು ತಾನೇ ರಕ್ಷಣೆ ಮಾಡಲು ಸಾಧ್ಯ?
ಇವರೆಲ್ಲಾ ಸಮಾಜದಲ್ಲಿ ಗಣ್ಯವ್ಯಕ್ತಿಗಳೆಂದು ತಾವೇ ಬಿಂಬಿಸಿಕೊಳ್ಳುತ್ತಾರೆ. ಉದ್ಯಮಿ, ಸಾಮಾಜಿಕ ಕಾರ್ಯಕರ್ತ, ಸಂಘಟನೆಯ ಮುಖಂಡನೆಂದು ಬಿಂಬಿಸಿಕೊಳ್ಳುವ ಇವರುಗಳು ಮಾಡುವ ಅನಾಚಾರಗಳಿಂದ ಸಮಾಜದ ಉನ್ನತಿಯಂತೂ ಸಾಧ್ಯವೇ ಇಲ್ಲಾ. ಇಷ್ಟು ಮಾತ್ರವಲ್ಲ. ಅಜ್ಞಾನದ ಅಂದಕಾರ ತೊಲಗಿಸಿ ಸುಜ್ಞಾನದ ಬೆಳಕನ್ನು ಹರಿಸಲು ತಾಯಿಯ ನಂತರದ ಸ್ಥಾನವಿರುವುದು ಗುರುವಿಗೆ ಮಾತ್ರ. Teachers is like the candle which lights others in consuming itself. ಗುರು ಚಲಿಸುವ ಗ್ರಂಥಾಲಯವಿದ್ದಂತೆ. ಮೊಗೆದಷ್ಟು ವಿಷಯಗಳು ಹೊರಜಗತ್ತಿಗೆ ತಿಳಿಯುತ್ತದೆ. ಗುರುವಿನ ಸ್ಥಾನಕ್ಕೆ ಅಷ್ಟು ಮಹತ್ವವಿದೆ. ಪುರಾಣದಲ್ಲಿ ಬ್ರಹ್ಮದೇವ ಹುಟ್ಟಿಸಿದ ಮಗಳನ್ನೆ ಮದುವೆಯಾಗಿದ್ದ ಎನ್ನುವ ಘಟನೆ ಕೇಳಿ ತಿಳಿದಿದ್ದೆವು. ಆದರೆ ಪ್ರಸ್ತುತ ಸಮಾಜದಲ್ಲಿ ಗುರು ಆಧುನಿಕ ಬ್ರಹ್ಮರಾಗಲು ಹೊರಟಿದ್ದಾರೆ. ಮುದಿಗೂಬೆ `ಚಿನ್ನಯ್ಯ', ನಾಮಾಂಕಿತ ಗುರು ಸ್ಥಾನದಲ್ಲಿರುವ ಉದ್ಯಮಿ `ಮುದ್ದು', ಹೆಂಡತಿಯಿದ್ದರೂ ಆಕೆಯೊಂದಿಗೆ ಜಗಳವಾಡಿ ಕುಡುಬಿ ಸಮಾಜದ ವಿವಾಹಿತೆ ಹೆಂಗಸಿನೊಂದಿಗೆ ಸಂಪರ್ಕವಿಟ್ಟುಕೊಂಡಿರುವ `ವಿಜಯ'...ಸಮಾಜದಲ್ಲಿರುವ ಅಲ್ಪಗುರುಗಳ ಪಟ್ಟಿ ಮುಂದುವರಿಯುತ್ತಾ ಹೋಗುತ್ತದೆ. ಇವರನ್ನೆಲ್ಲಾ ಶಿಕ್ಷಕರು ಎಂದು ಹೇಳಿದರೆ ನಮ್ಮ ಬಾಯಿ ಹೊಲಸಾಗುತ್ತದೆ. ಮೇಲೆ ನೋಡಿ ಉಗುಳಿದ ಎಂಜಲು ನಮ್ಮ ಮುಖದ ಮೇಲಲ್ಲದೇ ಬೇರೆ ಕಡೆ ಬೀಳುವುದಕ್ಕೆ ಸಾಧ್ಯವಿಲ್ಲವೆ? ಇಂತಹ ಅನೇಕ ಶಿಕ್ಷಕರುಗಳ ಕಾಮಪುರಾಣಗಳು ದಾಖಲಾಗಿದ್ದು, ಸಮಾಜದಲ್ಲಿ ಎಲ್ಲರಿಗೂ ತಿಳಿದಿರುವ ಸತ್ಯತೆಯಾದರೂ ಇಂತಹವರ ಮಧ್ಯೆ ಒಳ್ಳೆಯ ಶಿಕ್ಷಕರುಗಳು ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ತಾನು ಕಲಿಸಿದ ವಿದ್ಯಾರ್ಥಿಗಳನ್ನೆ ಕಾಮದಾಟಕ್ಕೆ ಬಳಸಿಕೊಂಡ ಕಾಮಾಂಧರು. ಶಾಲೆಯಲ್ಲಿ ಲೈಂಗಿಕ ಶಿಕ್ಷಣದ ಜಾಗೃತಿ ಮೂಡಿಸಬೇಕು ಎನ್ನುವ ಆಗ್ರಹ ಒತ್ತಾಯಗಳು ಕೇಳಿಬರುತ್ತಿದ್ದರೆ, ಇಂತಹ ಶಿಕ್ಷಕರುಗಳು ಪ್ರ್ಯಾಕ್ಟಿಕಲ್ ಆಗಿ ಮಾಡಿತೋರಿಸುತ್ತಿದ್ದಾರೆ ಎಂದಾಗ ಕಾನೂನು ಹಾಗೂ ಶಿಕ್ಷಣ ಇಲಾಖೆಗೆ ಸವಾಲಾಗಿ ನಮ್ಮಗಳ ನಡುವೆಯಿದ್ದಾರೆ.
ಲೈಂಗಿಕ ಭಾವನೆಗಳೇ ಅರ್ಥವಾಗದ ಮುಗ್ದ ಹೆಣ್ಣುಮಕ್ಕಳ ಗುಪ್ತಾಂಗಳ ಸ್ಪರ್ಶ ಮಾಡುವ ನೀಚ ಶಿಕ್ಷಕರು ಇಲಾಖೆಯಲ್ಲಿ ವಕ್ಕರಿಸಿಕೊಂಡಿದ್ದರೂ, ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಇಂತಹವರನ್ನು ಗುರುತಿಸಿ, ಕಿತ್ತೆಸೆಯುವುದರ ಮೂಲಕ ಶಿಕ್ಷಕ ವೃತ್ತಿಯ ಶಿಕ್ಷಣವನ್ನು ಮುಗಿಸಿ, ಬಯಸಿದ ಕೆಲಸ ಸಿಗದೆ, ನಗರಗಳನ್ನು ಸೇರಿ ಜೀವನ ನಿರ್ವಹಣೆಗಾಗಿ ಸಿರಿವಂತರ ಮನೆಯ ಸೆಕ್ಯೂರಿಟಿಗಳಾಗಿಯೊ, ಹೊಟೇಲ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಕಡಿಮೆ ಸಂಬಳಕ್ಕೆ ಶಿಕ್ಷಕ ವೃತ್ತಿಯನ್ನೆ ಮಾಡುತ್ತಿರುವ ಯುವಸಮೂಹವಿಂದು ಉತ್ಸುಕರಾಗಿದ್ದಾರೆ. ಅಂತಹ ಜೀವಗಳಿಗೆ ಜೀವನದ ಕಷ್ಟ ನಷ್ಟಗಳ ಅರಿವಿದೆ. ಅವರಿಂದ ನಾವು ಉತ್ತಮ ಪುಷ್ಪಗಳನ್ನು ರೂಪಿಸುವ ಘನತರ ಜವಾಬ್ದಾರಿ ನಿರೀಕ್ಷಿಸಲು ಸಾಧ್ಯವಿದೆ ಎನ್ನುವ ಮಾತು ಅತಿಶಯೋಕ್ತಿಯೆನಿಸುವುದಿಲ್ಲ.
ಇತ್ತೀಚಿಗೆ ಮಣಿಪಾಲದ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ನಾಲ್ವರು ಅತ್ಯಾಚಾರ ನಡೆಸಿರುವುದು ರಾಜ್ಯವ್ಯಾಪಿ ಪ್ರಚಾರಗೊಂಡು, ಅನೇಕ ಹೋರಾಟಗಳು ನಡೆದಿದ್ದವು. ಅದು ಹೋರಾಟಗಳಾಗಿಯೇ ಉಳಿದು, ಪ್ರಚಾರ ಪಡೆದುಕೊಂಡು ಕಡತಗಳಲ್ಲಿ ಉಳಿದಿದೆ. ಆರೋಪಿಗಳು ಮಾತ್ರ ಸದ್ಯದಲ್ಲಿಯೇ ಹೊರಗಡೆ ಬರಲಿದ್ದಾರೆ ಎನ್ನುವುದಂತೂ ಕಹಿ ಸತ್ಯ. ಇಂತಹ ಘಟನೆಗಳು ನಮ್ಮ ನೆನಪಿನಿಂದ ಮಾಸುವ ಮುನ್ನವೇ ಏನು ಅರಿಯದ ಖಾಸಗಿ ಶಾಲೆಯ ೪ ನೇ ತರಗತಿಯ ಮುಗ್ದ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನಡೆಯಿತಲ್ಲ. ಅದು ಕೂಡ ಮಣಿಪಾಲದಲ್ಲಿಯೆ ಎನ್ನುವಾಗ ಹೆಣ್ಣುಮಕ್ಕಳು ಮತ್ತಷ್ಟು ಭಯಕ್ಕೆ ಒಳಗಾಗಿದ್ದಾರೆ.
ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಕ್ಕರೆ ಮಾತ್ರ ಸಾಲುವುದಿಲ್ಲ. ಭಯದ ವಾತಾವರಣ ಮುಕ್ತಗೊಂಡು ಪೋಷಕರು ಕೂಡ ಮಕ್ಕಳು ಸುರಕ್ಷಿತವಾಗಿದ್ದಾರೆ ಎನ್ನುವ ನಿಟ್ಟುಸಿರುವ ಬಿಡುವಂತೆ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಪಾಠ ಬೋಧನೆ ಮಾತ್ರವಲ್ಲ ಶಿಕ್ಷಕರಿಗಿರುವ ನೀತಿ ಸಂಹಿತೆ ಪಾಲನೆಯೊಂದಿಗೆ ಮಕ್ಕಳ ಸುರಕ್ಷತೆ, ಭದ್ರತೆ ನಿಟ್ಟಿನಲ್ಲಿ ಹೆತ್ತವರ ಬಳಿಕದ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಸಾಕಷ್ಟು ಹೊರೆಯಿದ್ದರೂ, ಜವಾಬ್ದಾರಿಯುತವಾಗಿ ನಿಭಾಯಿಸುವ ಅಗತ್ಯವಿದೆ. ಸರಕಾರಿ-ಖಾಸಗಿ ಯಾವುದೇ ಶಾಲೆಯಿರಲಿ, ಶಿಕ್ಷಕ ರಕ್ಷಕ ಸಂಘದ ರಚನೆಯಾಗಬೇಕು. ಕನಿಷ್ಟ ಮೂರು ತಿಂಗಳಿಗೊಮ್ಮೆ ಸೇರಬೇಕು. ಪಾಠ ಮಾತ್ರವಲ್ಲ ಶಾಲೆಯ ಒಳ ಹೊರಗಿನ ವ್ಯವಸ್ಥೆಯಲ್ಲಿನ ಲೋಪ ಕಂಡು ಹುಡುಕಿ ಬಗೆಹರಿಸುವುದರೊಂದಿಗೆ ಶಾಲಾ ಬಸ್ಸುಗಳಲ್ಲಿರುವ ಸಿಬ್ಬಂದಿ ಬಗ್ಗೆ ಹೆತ್ತವರೂ ಕೂಡ ಮಾಹಿತಿ ಪಡೆದುಕೊಳ್ಳಬೇಕು. ಅಲ್ಲಿ ಕೆಲಸ ನಿರ್ವಹಿಸುವ ವ್ಯಕ್ತಿಗಳು ಮಕ್ಕಳನ್ನು ಸ್ಪರ್ಶಿಸದೆ ವ್ಯವಹರಿಸುವಂತಾಗಬೇಕು.
ಅಂತರ್ಜಾಲ, ಆಧುನಿಕ ಮಾಧ್ಯಮ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ಬಿಗಿ ಕ್ರಮ ಅಗತ್ಯವನ್ನು ಪೋಷಕರು ಮನಗಾಣಬೇಕಿದೆ. ಕಚೇರಿ ಮತ್ತು ಶಾಲೆಗಳಲ್ಲಿ ಹೆಣ್ಮಕ್ಕಳ ಮೇಲಾಗುವ ಲೈಂಗಿಕ ಕಿರುಕುಳ ದೌರ್ಜನ್ಯ ತಡೆ ಹಾಗೂ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಸಹಿತ ಸರಕಾರದಿಂದ ಕಾಲಕಾಲಕ್ಕೆ ಹೊರಡಿಸುವ ಸುತ್ತೋಲೆ ಕಟ್ಟು ನಿಟ್ಟಾಗಿ ಪಾಲಿಸಬೇಕು. ಇಂತಹ ನಿರ್ಲಕ್ಷ್ಯತನಗಳು ಕಂಡುಬಂದಲ್ಲಿ ಯಾವುದೇ ಆಮಿಷ, ಒತ್ತಡಗಳಿಗೆ ಒಳಗಾಗದೆ ಕರ್ತವ್ಯ ನಿಭಾಯಿಸಬೇಕು. ಸಮಾಜದಲ್ಲಿ ಪ್ರತಿಷ್ಠೆ, ಅನಿವಾರ್ಯತೆ ಹೆಸರಲ್ಲಿ ಮನೆ ಹತ್ತಿರದಲ್ಲೇ ಶಾಲೆ ಇದ್ದರೂ ಮಕ್ಕಳನ್ನು ಬಸ್ಸಿನಲ್ಲಿ ದೂರದ ಶಾಲೆಗೆ ಕಳಿಸಲಾಗುತ್ತಿದೆ. ಮನೆಯಿಂದ ಹೊರಗಿನ ಮಕ್ಕಳ ಬಾಲ್ಯವಿಂದು ಅಸುರಕ್ಷಿತವಾಗಿದೆ. ಇದಕ್ಕೆ ಸಮಾಜದ ಎಲ್ಲರೂ ಕಾರಣ. ಅಮೂಲಾಗ್ರವಾಗಿ ಬದಲಾವಣೆ , ಪರಿವರ್ತನೆ ಆಗಬೇಕು. ಈ ನಿಟ್ಟಿನಲ್ಲಿ ಚರ್ಚೆ ಚಿಂತನೆ, ಸಾಮಾಜಿಕ ಮೌಲ್ಯವರ್ಧನೆ ಆಗಬೇಕು.
ಸಮಾಜದಲ್ಲಿ ಇನ್ನೊರ್ವರಿಗೆ ಬುದ್ದಿ ಹೇಳುವುದು, ಬೆರಳಿಟ್ಟು ತೋರಿಸುವುದಕ್ಕಿಂತ ನಾವು ಸರಿಯಾಗಿರಬೇಕು. ಗಣ್ಯವ್ಯಕ್ತಿಗಳಂತೆ ಬಿಂಬಿಸಿಕೊಳ್ಳುವುದಕ್ಕಿಂತ ತಮ್ಮ ಮನೆಯಲ್ಲಿಯೂ ಹೆಂಡತಿ, ಮಕ್ಕಳು, ಅಕ್ಕ-ತಂಗಿಯರು ಇದ್ದಾರೆ ಎನ್ನುವ ಭಾವನೆ ಯಾಕೆ ಮೂಡಿಸಿಕೊಳ್ಳುತ್ತಿಲ್ಲ. ಸರಸ್ವತಿ, ವಿಮಲ, ಸೀತಾ, ಲಕ್ಷ್ಮೀ, ಸೀತಾರಾಮ, ಈಶ್ವರ, ನಾರಾಯಣ, ಕೃಷ್ಣ ಎನ್ನುವ ದೇವರುಗಳ ಹೆಸರನ್ನಿರಿಸಿಕೊಂಡು ಹೆಸರಿನ ಮೌಲ್ಯಕ್ಕೆ ಕುಂದು ತರುವಂತ ಕಾರ್ಯದಲ್ಲಿ ನಿರತರಾಗುವ ಬದಲು `ಮಾನ'ಯುತ ಜೀವನ ನಡೆಸಲು ಸಾಧ್ಯವಿದೆ ಎನ್ನುವ ಸತ್ಯ ಅರಿಯಬೇಕು. ಇನ್ನೊರ್ವರ ಮನೆಯ ಹೆಣ್ಣು ಮಕ್ಕಳ ಕುರಿತು ಕೀಳಾಗಿ ವ್ಯವಹರಿಸುವಾಗ, ನನ್ನಂತೆ ಇನ್ನೊರ್ವ ತನ್ನ ಹೆಂಡತಿ, ಮಗಳನ್ನು ಕೂಡ ಕಾಮದೃಷ್ಠಿಯಿಂದ ನೋಡುತ್ತಾನೆ ಎನ್ನುವ ಸತ್ಯ ಅರಿತಾಗ ಸಮಾಜದಲ್ಲಿ ಇಂತಹ ಕೃತ್ಯಗಳನ್ನು ತಡೆಗಟ್ಟಬಹುದು. ಮುಖವಾಡ ಕಳಚಿ ಸುಂದರ ಸಮಾಜ ನಿರ್ಮಾಣ ಮಾಡಲು ಮರ್‍ಯಾದೆಯ ಜೀವನ ನಡೆಸಿದಾಗ ಸಿಗುವ ಗೌರವ ನೂರ್ಕಾಲ ಇರುವುದರಲ್ಲಿ ಸಂಶಯವೇ ಇಲ್ಲಾ. ಹಣದಿಂದ ಪಡೆಯುವ ಗೌರವ ಕ್ಷಣಿಕವೆನ್ನುವುದನ್ನು ಅರಿತಾಗ ನಮ್ಮ ಬದುಕು ಹಸನಾಗುತ್ತದೆ. ಜೀವನದಲ್ಲಿ ಮಾನ-ಮರ್ಯಾದೆಯೇ ಮುಖ್ಯಎನ್ನುವುದು ನನ್ನ ಭಾವನೆ. ಏನಂತಿರಾ..



No comments:

Post a Comment