ಅವಳು ನನಗೆ ಬೇಕೇ ಬೇಕು ಎನ್ನುವ ತಿಕ್ಕಲುತನದ ಅಪಾಯ..!ಅನಾಹುತ..!
ಪ್ರೀತಿ-ಪ್ರೇಮದ ಗುಂಗಿನಲ್ಲಿ ತಂದೆ-ತಾಯಿಯನ್ನು ಬೇರೆ ಮಾಡುವ ಯುವಜನಾಂಗ
ವೈಜ್ಞಾನಿಕ ಯುಗದಲ್ಲಿ ನಾವಿದ್ದೇವೆ ಎಂದು ಎದೆಯುಬ್ಬಿಸಿ ಹೇಳಿಕೊಳ್ಳುತ್ತೇವೆ. ನಾವು ಮಾಡಬೇಕಾದ ಹೆಚ್ಚಿನ ಕೆಲಸವನ್ನು ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸುವ ಕಂಪ್ಯೂಟರ್, ರೊಬೋಟ್‌ಗಳು, ವಿಷಯಗಳ ತಾಣ ಇಂಟರ್ನೆಟ್, ಸಂಬಂಧಗಳನ್ನು ಬೆಳೆಸುವ ಜಾಲತಾಣಗಳು ಅನೇಕವಿದ್ದರೂ, ನಾವೆಲ್ಲೋ ಕಳೆದು ಹೋಗುತ್ತಿದ್ದೇವೆ ಎನ್ನುವ ಭಾವನೆ ನಮಗೆ ಬರುವುದೇ ಇಲ್ಲಾ. ಹಿಂದಿನ ಕಾಲದಲ್ಲಿ ಪತ್ರದ ಮೂಲಕ ಸಂಪರ್ಕಿಸಬೇಕಿದ್ದ ಮಾನವೀಯ ಕೌಟುಂಬಿಕ ಸಂಬಂಧಗಳಿಂದು, ಕ್ಷಣಮಾತ್ರದಲ್ಲಿ ಅವರನ್ನು ಸಂಪರ್ಕಿಸುವ, ಅವರೊಂದಿಗೆ ಗಂಟೆಗಟ್ಟಲೆ ಹರಟೆ ಹೊಡೆಯುವ ಸಾಧನಗಳು ಮನುಷ್ಯ ಕೈ ಸೇರಿವೆ. ಇದರಿಂದಾಗಿ ಮನುಷ್ಯನಿಗೆ ಸ್ವಂತವಾಗಿ ಆಲೋಚಿಸುವ ಬುದ್ದಿ ಕಡಿಮೆಯಾಗಿದೆ ಎನ್ನುವುದಂತೂ ಸ್ಪಷ್ಟ.
ಮೊಬೈಲ್ ಮೂಲಕ ಹತ್ತಾರು ರೋಮ್ಯಾಂಟಿಕ್ ಮೆಸೇಜ್‌ಗಳು ರವಾನೆಯಾಗಿದ್ದೇ ತಡ ಪ್ರೀತಿ ಪ್ರೇಮದ ಪುರಾಣವೇ ಆರಂಭವಾಗುವ ಈ ದಿನದಲ್ಲಿ ಮುಂದಾಗುವ ಪರಿಣಾಮದ ಪರಿವಿಲ್ಲದೇ ದುಡುಕುವ ಹುಡುಗಾಟದ ಹುಡುಗ-ಹುಡುಗಿಯರು ಏನೇನೋ ಅನಾಹುತ ಅನುಭವಿಸುವುದಿದೆ. ``ಕಾಮಾತುರಾಣಾಂ ನ ಭಯಂ ನ ಲಜ್ಜಾ" ಎನ್ನುವ ಮಾತಿನಂತೆ ಬರೀ ಮೋಹವನ್ನೆ ಪ್ರೀತಿಯೆಂದು ಪರಿಭಾವಿಸುವ ಹುಚ್ಚು ಖೊಡಿ ಮನಸ್ಸಿನ ಬೆನ್ನಿಗೆ ಬಿದ್ದವರು ಮಾಡಬಾರದ್ದನ್ನೆಲ್ಲಾ ಮಾಡಿ, ತಮ್ಮ ಬದುಕನ್ನೇ ನರಕವಾಗಿಸಿಕೊಳ್ಳುತ್ತಾರೆ. ನಮ್ಮೂರಿನ ಎರಡು ಘಟನೆಯನ್ನು ನೀವು ತಿಳಿದಾಗ ಕೌಟುಂಬಿಕ ಸಂಬಂಧಗಳ ಸೂಕ್ಷ್ಮತೆಯ ಅರಿವು ನಿಮ್ಮ ಪಾಲಿಗೂ ತಿಳಿಯುತ್ತದೆ.
ಘಟನೆ-೧:
ಬಂಟ ಸಮುದಾಯದ ದಂಪತಿಗೆ ನಾಲ್ವರು ಮಕ್ಕಳಲ್ಲಿ ಬದುಕಿದ್ದು ಆರತಿಗೊರ್ವ ಮಗ(ಚಂದ್ರ), ಕೀರ್ತಿಗೊರ್ವಳು ಮಗಳು ಲತಾ(ಹೆಸರು ಬದಲಿಸಲಾಗಿದೆ). ಇವರ ತಂದೆ ಎಲ್ಲರಂತೆ ಕುಡಿತದ ಹವ್ಯಾಸಕ್ಕೆ ತೊಡಗಿ, ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಡುಕ ಗಂಡ ಉಪಟಳವಿದ್ದರೂ, ತಾಯಿ ಮಾತ್ರ ಮಕ್ಕಳನ್ನು ಕಷ್ಟ ಪಟ್ಟು ಓದಿಸುತ್ತಿದ್ದರು. ತಾಯಿಯ ಆಸೆಗೆ ಮಗ ಚಂದ್ರ ಮಸಿ ಬಳಿಯದೆ ಚೆನ್ನಾಗಿ ಓದಿ ಉದ್ಯೋಗಗಿಟ್ಟಿಸಿಕೊಂಡು ಸಂತೋಷದ ಜೀವನ ನಡೆಸಬೇಕು ಎನ್ನುವ ಆಸೆ ಚಿಗುರೊಡೆದಿತ್ತು. ತಂಗಿಯಾದ ಲತಾ ಅಣ್ಣನಂತೆ ಚೆನ್ನಾಗಿ ಓದು ಮುಗಿಸುವ ಬದಲು ಪ್ರಥಮ ಪಿಯುಸಿಗೆ ಹೋಗುವಾಗಲೇ ಪ್ರೀತಿ ಪ್ರೇಮದ ಸುಳಿಗೆ ಸಿಲುಕಿ, ಅದು ಮನೆಯವರಿಗೆ ವಿಷಯ ತಿಳಿಯುವುದರೊಂದಿಗೆ ಶಿಕ್ಷಣಕ್ಕೆ ತೀಲಾಂಜಲಿಯನ್ನಿಟ್ಟುಕೊಂಡಿದ್ದಳು. ಇಷ್ಟಾದ ಮೇಲೆಯೂ ಕೂಡ ಆಕೆಗೆ ಬುದ್ದಿ ಬರಬೇಕಿತ್ತು. ಆದರೆ ಮನೆಯ ಹತ್ತಿರದ ದೇವಸ್ಥಾನಕ್ಕೆ ಆರೂಢ ಪ್ರಶ್ನೆ ಕೇಳಲು ಕೇರಳದ ಪುದುವಾಳರು ಬಂದಿದ್ದು, ಅವರನ್ನು ಕರೆದುಕೊಂಡು ಬಂದ ಕಾರಿನ ಚಾಲಕನೊಂದಿಗೆ ಪ್ರೇಮಾಂಕುರವಾಗಿತ್ತು. ಅಲ್ಲಿನ ಇವರಿಬ್ಬರ ಸಂಭಾಷಣೆ ಮುಂದುವರಿದು, ರಿಜಿಸ್ಟರ್ ಮದುವೆಯಲ್ಲಿ ಕೊನೆಗೊಂಡಿತ್ತು. ಆದರೆ ಲತಾಳನ್ನು ಮದುವೆಯಾದವನಿಗೆ ಅದು ಪ್ರಥಮ ಮದುವೆಯಾಗಿರಲಿಲ್ಲ. ಸತ್ಯ ತಿಳಿಯುವುದರೊಳಗೆ ಕಾಲ ಮಿಂಚಿ ಹೋಗಿದ್ದು, ಆಕೆ ಸಂಪೂರ್ಣವಾಗಿ ತವರಿನ ಸಂಬಂಧ ಕಡಿದುಕೊಂಡಿದ್ದಳು. ಕಷ್ಟದ ಜೀವನ ಸಾಗಿಸುತ್ತಿದ್ದ ಲತಾ ಕೊನೆಗೊಂದು ದಿನ ಮನೆಯವರೊಂದಿಗೆ ನನಗಿಲ್ಲಿ ಕಷ್ಟವಾಗುತ್ತಿದೆ ಎಂದು ಹೇಳಿದವಳು ಇತ್ತೀಚಿಗೆ ಹೆಣವಾಗಿ ಮನೆಗೆ ಬಂದಿದ್ದಳು. ಆಕೆ ಆತ್ಮಹತ್ಯೆ ಮಾಡಿಕೊಂಡಳೇ? ಕೊಲೆಯೋ? ಎನ್ನುವುದು ಇನ್ನೂ ಕೂಡ ಪ್ರಶ್ನಾತೀತ.
ಘಟನೆ:೨:
ಇವರು ಕೂಡ ಮಧ್ಯಮ ವರ್ಗದ ಬಂಟ ಸಮುದಾಯದ ತಂದೆ ತಾಯಿಗೆ ಮೂವರು ಮಕ್ಕಳು. ಇಬ್ಬರು ಗಂಡು ಹಾಗೂ ಓರ್ವ ಹುಡುಗಿ. ಹಿರಿಯವ ಅಣ್ಣ, ನಂತರದಲ್ಲಿ ಹೆಣ್ಣು ಕೊನೆಯವನೇ ಹರ್ಷರಾಜ್(ಹೆಸರು ಬದಲಿಸಲಾಗಿದೆ). ತಂದೆ-ತಾಯಿ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಚೆನ್ನಾಗಿ ಓದಿಸಿದ್ದರು. ಅಣ್ಣ ಒಳ್ಳೆಯ ಉದ್ಯೋಗ ಪಡೆದು ತಂಗಿಗೆ ಮದುವೆ ಮಾಡಿಸಲು ಹೆಣ್ಣನ್ನು ನೋಡುತ್ತಿರುವಾಗಲೇ ಹವ್ಯಾಸಿ ಫೋಟೋಗ್ರಫಿ ಕೆಲಸ ನಿರ್ವಹಿಸುತ್ತಿದ್ದ ತಮ್ಮ ರಾಯನ ಪ್ರೀತಿಯಲ್ಲಿ ಮೋಹವೇ ಜಾಸ್ತಿಯಾಗಿ ಅದು ಕಾಮವಾಗಿ ಮಾರ್ಪಟ್ಟಿತ್ತು. ಅಕ್ಕನಿಗೆ ಮದುವೆ ಮಾಡಿಸಬೇಕು, ತಂದೆ ತಾಯಿಗೆ ಬೆನ್ನೆಲುಬಾಗಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಕಿಂಚಿತ್ ಯೋಚನೆಯೇ ಇಲ್ಲದೇ ತಾನು ಪ್ರೀತಿಸಿದ ಹೆಣ್ಣಿನೊಂದಿಗೆ ಮನೆ-ಸಂಬಂಧವನ್ನು ತೊರೆದು ಬೇರೆ ಊರಿನಲ್ಲಿ ನೆಲೆಯಾಗಿ ಬಿಟ್ಟ. ಇಂತಹ ಪರಿಸ್ಥಿತಿಯಲ್ಲಿ ಮನೆಯ ವಾತಾವರಣ ಹೇಗಿರುತ್ತದೆ ಎನ್ನುವುದನ್ನು ಊಹಿಸಲು ಕಷ್ಟಸಾಧ್ಯ. ಮದುವೆಯಾಗದ ಅಕ್ಕನಿಗೆ ಗಂಡು ನೋಡಲು ಹೆಣಗುವ ಅಣ್ಣ, ಕಷ್ಟಪಟ್ಟು ಸಾಕಿ ಬೆಳೆಸಿ, ಅನಾರೋಗ್ಯದಲ್ಲಿರುವ ಪೋಷಕರನ್ನು ಲೆಕ್ಕಿಸದೇ ಪ್ರೀತಿಯ ಮೋಹಕ್ಕೆ ಸಿಲುಕಿ ಮನೆಬಿಟ್ಟು ತೆರಳಿದ ವಿದ್ಯಾವಂತ ಯುವಕ ಹರ್ಷರಾಜ್.
ಹೀಗೆ ಅನೇಕ ಘಟನೆಗಳು ಸಮಾಜದಲ್ಲಿ ನಡೆಯುತ್ತಿರುತ್ತವೆ. ಪ್ರೀತಿ ಮಾಡುವುದು ತಪ್ಪಲ್ಲ. ಅದನ್ನು ಪಡೆದುಕೊಳ್ಳಬೇಕು ಎನ್ನುವ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ ಹುಚ್ಚು ಪ್ರೀತಿಗೆ ಬಲಿಯಾಗಿ, ಹಿಂದೆ ಮುಂದೆ ಆಲೋಚಿಸದೆ ತನ್ನ ಜೀವನವನ್ನೇ ಕೊನೆಗಾಣಿಸಿದ ಲತಾ ಒಂದೆಡೆಯಾದರೆ, ಮುತ್ತು ಕೊಡೊಳು ಸಿಕ್ಕಾಗ ತುತ್ತನ್ನ ನೀಡಿದ ಪೋಷಕರನ್ನು ತೊರೆದ ಹರ್ಷರಾಜ್ ಇವರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ನಿರೀಕ್ಷಿಸಲು ಸಾಧ್ಯವೇ? ಪೋಷಕರು ನೋಡಿದ ಗಂಡು-ಹೆಣ್ಣನ್ನು ಮದುವೆ ಮಾಡಿಕೊಂಡಾಗ ಸಂತೋಷದ ಜೀವನ ಸಾಗಿಸಬಹುದಾಗಿದ್ದರೂ, ಎಲ್ಲಿಯೋ ಒಂದು ಕಡೆ ನಾವು ಎಡವುತ್ತಿದ್ದೇವೆ ಎನ್ನುವುದು ಸತ್ಯ.
ಈ ವಿಷಯ ಪ್ರಸ್ತಾಪಿಸುವಾಗ ನನ್ನ ಸ್ನೇಹಿತನೊರ್ವ ಕರೆ ಮಾಡಿ, ತಂದೆ-ತಾಯಿಯರ ಮಾತಿಗೆ ಮನ್ನಣೆ ನೀಡಿ, ಹಿಂದು ಸಂಪ್ರದಾಯದಂತೆ ತಂಗಿಯರಿಗೆ ಮದುವೆ ಮಾಡಿಸಿದ ನಂತರವೇ ಮದುವೆಯಾಗಲು ತೀರ್ಮಾನಿಸಿ ವರ್ಷ ಮೂವತ್ತು ಕಳೆದರೂ ಮದುವೆ ಯಾಗುವುದು ಬಿಡು. ಪ್ರೀತಿಯ ಬಲೆಯಲ್ಲಿ ಸಿಲುಕಲು ಸಾಧ್ಯವಾಗಿಲ್ಲ ಎಂದಾಗ ಆತನ ಮಾತಿನಲ್ಲೂ ಸತ್ಯಾಂಶವಿದೆ ಎನಿಸಿತು. ಆತ ಪ್ರೀತಿ ಮಾಡಲು ಸಾಧ್ಯವಿಲ್ಲದೆ ಇಲ್ಲಿಯವರೆಗೆ ಕುಳಿತಿರುವುದಲ್ಲ. ಆತನ ಮೇಲಿರುವ ಘನತರ ಜವಾಬ್ದಾರಿ ಮುಗಿಸಿದ ನಂತರ ಮದುವೆಯಾಗಬೇಕು ಎನ್ನುವ ನೆಲೆಯಲ್ಲಿ ತಂದೆ ತಾಯಿಗೆ ಆಸರೆಯಾಗಬೇಕು ಎನ್ನುವ ಉನ್ನತವಾದ ಗುರಿಯಿದೆಯಲ್ಲ. ಪ್ರಸ್ತುತ ವೈಜ್ಞಾನಿಕ ಯುಗದಲ್ಲಿ ಇಂತಹ ಉದಾತ್ತವಾದ ಗುರಿ, ಉದ್ದೇಶಗಳು ಮರೆಯಾಗುತ್ತಿದೆ ಎನ್ನುವ ಸತ್ಯ ಅರಿಯಬೇಕಿದೆ.
ಪ್ರೀತಿ ಎನ್ನುವುದು ಸಹಜವಾದುದೇ? ಆದರೆ ಇದೇ ಪ್ರೀತಿಯು ಹಲವು ರೀತಿಯ ಗೊಂದಲದ ಸಂಗತಿಗಳಿಗೆ ಎಡೆಮಾಡುತ್ತದೆ. ಎರಿಕ್ ಫ಼್ರಾಮ್ ಎನ್ನುವ ಸಮಾಜಶಾಸ್ತ್ರಜ್ಞ ಹೇಳುವ ಹಾಗೆ ನಿಜವಾದ ಪ್ರೀತಿಯಲ್ಲಿ ಕೊಡುವ ಗುಣವಿದೆಯೇ ಹೊರತು ಕಸಿಯುವ, ಕಿತ್ತುಕೊಳ್ಳುವ, ವಿರೂಪಗೊಳಿಸುವ ಭಂಜನೆಯ ಗುಣವಿರುವುದಿಲ್ಲ. ಪೊಸ್ಸೆಸ್ಸಿವ್ ಗುಣ ಒಂದು ಹಂತದವರೆಗೆ ಓಕೆ. ಆದರೆ ಅದು ಅತಿರೇಕಕ್ಕೆ ತಿರುಗಿ ಏನೇ ಆಗಲಿ ಅವಳು ನನಗೆ ಬೇಕೆ ಬೇಕು, ಪಡೆದೆ ತೀರುತ್ತೇನೆ ಎನ್ನುವ ಹಠ ಪ್ರಯೋಗದ ನಡುವೆ ಅವಳು ಒಂದೊಮ್ಮೆ ಒನ್‌ವೇ ಪ್ರೀತಿಯನ್ನು ನಿರಾಕರಿಸಿದ್ದೆಯಾದರೆ ಈತ ಇದ್ದಕ್ಕಿದ್ದಂತೆ ಸೈತಾನ ರೂಪ ತಾಳುತ್ತಾನೆ. ಅಷ್ಟರವರೆಗೆ ಚಿನ್ನ, ರನ್ನ ಎಂದು ಕೊಂಡಾಡಿದ ವ್ಯಕ್ತಿ ಆಕೆಯ ಸುಂದರ ಮುಖಕ್ಕೆ ಆಸಿಡ್ ಎರಚುವುದೋ, ಕತ್ತು ಕೊಯ್ಯುವ ಇಲ್ಲವೇ ಹಲ್ಲೆ ಮಾಡುವ ಹುಂಬತನಕ್ಕಿಳಿಯುತ್ತಾನೆ. ಇಂಥಾ ತಿಕ್ಕಲು ಮನ:ಸ್ಥಿತಿಯನ್ನೇ ಸಿನೆಮಾ ಮಾಡಿ ದುಡ್ಡು ಮಾಡಿಕೊಂಡವರಿಗೂ ನಮ್ಮಲ್ಲಿ ಕೊರತೆಯೆನಿಲ್ಲಾ.
ತಿಕ್ಕಲು ಹುಡುಗನೊಬ್ಬನ ಅತಿಯಾದ ಪೊಸೆಸ್ಸಿವ್‌ನಿಂದಾಗಿ ಅನೇಕ ಸುಂದರ ಯುವತಿಯರಿಂದು ವಿಕಾರವಾಗಿದ್ದಾರೆ. ೧೯೯೯ ರ ಎಪ್ರಿಲ್ ೨೦ರಂದು ಹಸೀನಾ, ೨೦೦೧ರ ಫೆಬ್ರವರಿಯಲ್ಲಿ ನೂರಜಹಾನ್, ೨೦೦೨ರ ಆಗಸ್ಟ್ ೧೨ರಂದು ಶ್ರುತಿ ಸತ್ಯನಾರಾಯಣ, ೨೦೦೭ರ ಜೂನ್ ೨೪ರಂದು ಸರೋಜಿನಿ ಕಲಭಾಗ, ೨೦೦೭ರ ಅಗಸ್ಟ್ ೮ ರಂದು ಹಿನಾ ಫ಼ಾತಿಮಾ, ೨೦೦೮ರ ಅಕ್ಟೋಬರ್ ೨೧ರಂದು ಕಾರ್ತಿಕಾ ಹೀಗೆ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ಇವರೆಲ್ಲರೂ ಆಸಿಡ್ ಧಾಳಿಗೆ ತುತ್ತಾದವರು. ಇದು ನಿಜವಾದ ಪ್ರೀತಿಯೇ? ಖಂಡಿತಾ ಅಲ್ಲಾ. ನಿಜವಾದ ಪ್ರೀತಿಯು ಹೀಗೆ ಹಿಂಸೆ-ಸೇಡಿಗೆ ಪುಷ್ಟಿ ನೀಡುವುದಿಲ್ಲ ಎನ್ನುವ ಸತ್ಯಾಂಶ ತಿಳಿದಿರಬೇಕು.
ಈಚೆಗೆ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ಆಕಾಶ ಎನ್ನುವ ಹುಡುಗ ರೋಷನಿ ಗುಪ್ತಾ ಎನ್ನುವ ಹುಡುಗಿಯನ್ನು ಕೊಡಲಿಯಿಂದ ಹಲ್ಲೆ ಮಾಡಿದ್ದು ಅಲ್ಲದೆ ಮರಣಪತ್ರ ಬರೆದಿಟ್ಟು ತಾನೂ ಕೂಡಾ ಕತ್ತು ಕತ್ತರಿಸಿಕೊಂಡಿದ್ದಾನೆ. ರೋಷನಿಯ ತಲೆಬುರುಡೆಗೆ ತೀವ್ರ ಪೆಟ್ಟು ಬಿದ್ದು ಈಗ ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಕೊಡಲಿಯ ಪೆಟ್ಟು ಕೊಟ್ಟಾತ ಅದಾಗಲೇ ಇಹಲೋಕ ತ್ಯಜಿಸಿದ್ದಾನೆ. ಬಿಹಾರ ಗಯಾ ಮೂಲದ ಆಕಾಶ ಒಬ್ಬ ಬಡ ರೈತನ ಮಗ. ಓದಲೆಂದು ದೆಹಲಿಗೆ ಬಂದವನು ಮಾಡಿರುವ ಕಿಸಾಮತಿ ಇದು. ಆತ ಬರೆದಿರುವ ಮರಣ ಪತ್ರದಲ್ಲಿ ನನ್ನನ್ನು ಕ್ಷಮಿಸಿ, ಪ್ರತಿ ಬಾರಿಯೂ ಹುಡುಗರದೆ ತಪ್ಪಿರುವದಿಲ್ಲ.. ನಾನು ಎಂಥವನು ಎನ್ನುವದನ್ನು ನನ್ನ ಗೆಳೆಯರಿಂದ ಕೇಳಿ ತಿಳಿಯಿರಿ ಹೀಗೆ ಇನ್ನೂ ಅನೇಕ ವಿಷಯಗಳನ್ನು ನಾಲ್ಕು ಪುಟದ ಪತ್ರದಲ್ಲಿ ಬರೆದಿದ್ದ ಆಕಾಶ್. ಸ್ನೇಹಿತರು ಹೇಳುವಂತೆ ಆಕಾಶ್ ಅಂತರ್ಮುಖಿಯಾಗಿದ್ದು, ಕಡಿಮೆ ಮಾತನಾಡುತ್ತಿದ್ದ. ತನ್ನದೆ ಸಹಪಾಠಿಯನ್ನು ಭೀಕರವಾಗಿ ಕೊಡಲಿಯಿಂದ ಹಲ್ಲೆ ಮಾಡಿ, ತಾನೂ ಸಾವಿಗೀಡಾಗಿದ್ದು ಸರಿಯಾದ ನಿಲುವಂತೂ ಅಲ್ಲವೇ ಅಲ್ಲಾ.
ಮೇ ತಿಂಗಳಲ್ಲಿ ಮುಂಬೈನ ಬಾಂದ್ರಾದಲ್ಲಿ ಒಬ್ಬ ಯುವಕ ೨೩ ವರ್ಷ ವಯಸ್ಸಿನ ಯುವತಿಯ ಮುಖಕ್ಕೆ ಆಸಿಡ್ ಎರಚಿ ಪರಾರಿಯಾದ. ಆ ಹುಡುಗಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾಳೆ ಅವಳ ಮೊಬೈಲನ್ನು ಪೋಲಿಸರು ಪರಿಶೀಲಿಸಿದಾಗ ಅದರಲ್ಲಿ ಸುಮಾರು ೨೫೦ ರಷ್ಟು ರೋಮ್ಯಾಂಟಿಕ್ ಸಂದೇಶಗಳಿದ್ದವು. ಆ ಸಂದೇಶಗಳು ದೆಹಲಿಯ ಅನಾಮಿಕನೊಬ್ಬನಿಂದ ಬಂದಿತ್ತು. ಕಳೆದ ತಿಂಗಳು ಚೆನೈನ ಎಮ್‌ಜಿಆರ್ ಸ್ವಾಯತ್ತ ವಿಶ್ವವಿದ್ಯಾಲಯದಲ್ಲಿ ಜಾರ್ಖಂಡ್ ಮತ್ತು ಬಿಹಾರದ ಇಬ್ಬರು ವಿದ್ಯಾರ್ಥಿಗಳು ಪ್ರೀತಿ-ಪ್ರೇಮದ ವಿಷಯವಾಗಿ ಜಗಳಾಡಿ ಒಬ್ಬಾತ ಪಿಸ್ತೂಲಿನಿಂದ ಇನ್ನೊಬ್ಬನ ತಲೆಗೆ ಗುರಿಯಿಟ್ಟಿದ್ದ. ಹೊಡೆದವನು ತಾನು ಪ್ರೀತಿಸುತ್ತಿರುವ ಹುಡುಗಿಯೊಂದಿಗೆ ಮಾತನಾಡಬೇಡ ಎನ್ನುವುದು ಕಡಕ್ ವಾರ್ನಿಂಗ್ ಆಗಿತ್ತು. ವಿಚಿತ್ರವೆಂದರೆ ಆ ಹುಡುಗಿ, ಈ ಇಬ್ಬರು ಯುವಕರು ಒಂದೇ ತರಗತಿಯಲ್ಲಿ ಓದುವವರು.
ಕಳೆದ ಎಪ್ರಿಲ್‌ನಲ್ಲಿ ಮುಂಬೈನ ಠಾಣಾದಲ್ಲಿ ಒಂದು ಘಟನೆ ನಡೆದಿತ್ತು. ೧೯ ವರ್ಷದ ಓರ್ವ ಯುವತಿಯನ್ನು ೨೨ ವರ್ಷದ ಒಬ್ಬ ಯುವಕ ಪ್ರೀತಿಸುತ್ತಿದ್ದ. ಅದು ಬಹುತೇಕ ಒನ್‌ವೇ ಲವ್ ಆಗಿತ್ತು. ಆ ಹುಡುಗಿ ಅವನನ್ನು ಮದುವೆಯಾಗಲು ಇಷ್ಟವಿಲ್ಲ ಎಂದದ್ದೇ ಆತ ನೇರವಾಗಿ ಅವರ ಮನೆಗೆ ತೆರಳಿ, ಕಲಹಕ್ಕಿಳಿದು ಆ ಹುಡುಗಿಯ ಕತ್ತಲ್ಲಿ ಚಾಕು ಹಾಕಿ ಬಿಟ್ಟ ಹಾಗೆಯೇ ತಾನೂ ಕತ್ತನ್ನು ಸೀಳಿಕೊಂಡ. ಸುದೈವಕ್ಕೆ ಇಬ್ಬರೂ ಬದುಕಿ ಉಳಿದರು. ಇಂತಹ ಅದೆಷ್ಟೋ ಘಟನೆಗಳು ಪ್ರೇಮ ವೈಫ಼ಲ್ಯ ಇಲ್ಲವೆ ನಿರಾಕರಣೆಯ ಹೆಸರಲ್ಲಿ ನಮ್ಮೂರಲ್ಲಿಯೂ ನಡೆಯುತ್ತಿವೆ.
ಅದರಲ್ಲಿಯೂ ಈಗೀಗ ಮೊಬೈಲ್ ಮೂಲಕ ಪ್ರೇಮ ಪ್ರಕರಣ ಆರಂಭವಾಗುತ್ತಿವೆ. ಮೊಬೈಲ್‌ಗಳ ಮೂಲಕವೇ ಎಲ್ಲಾ ಸಂಬಂಧಗಳಿಗೂ ಅವಕಾಶ ಕಲ್ಪಿಸುವುದರಿಂದ ಪ್ರಬುದ್ಧತೆ ಮತ್ತು ಪರಸ್ಪರರನ್ನು ಅರಿಯಲು ಅಲ್ಲಿ ಅವಕಾಶವೇ ಇಲ್ಲದಂತಾಗಿದೆ. ಮೊಬೈಲ್ ಪರಿಚಯದ ಹುಡುಗಾಟವೇ ಪ್ರೇಮವಾಗಿ ಅನೇಕ ಅನಾಹುತಗಳಿಗೆ ಕಾರಣವಾಗಿದೆ. ಹಗಲಿರುಳೆನ್ನದೇ ನಿರಂತರ ರೋಮ್ಯಾಂಟಿಕ್ ಮೆಸೇಜ್‌ಗಳನ್ನು ರವಾನಿಸುವುದೇ ಪ್ರೀತಿ ಎನ್ನುವುದನ್ನು ತಿಳಿದುಕೊಂಡಿದ್ದಾರೆ. ಪ್ರೇಮ ಎನ್ನುವುದು ತರಾತುರಿಯಲ್ಲಿ ಕುದುರುವ ವ್ಯವಹಾರವಲ್ಲ. ಹಾಗೆಯೇ ಮೋಹ ಸೆಳೆತಗಳನ್ನೇ ಹಂಬಲಿಸಿ ಪ್ರೀತಿಸುವದು ಸರಿಯೂ ಅಲ್ಲ. ಆದರೆ ಪ್ರೀತಿಯ ಮೌಲ್ಯವನ್ನು ಅರಿಯದೇ ಸಿಕ್ಕಾಪಟ್ಟೆ ಪ್ರೀತಿಸಿ, ಯುವಸಮೂಹ ಅನಾಹುತಕ್ಕೆ ನಾಂದಿಯಾಗಿರುವ ಅನೇಕ ಘಟನೆಗಳು ನಮ್ಮ ಕಣ್ಣಮುಂದಿದೆ. ಆದರೂ ನೈಜಪ್ರೀತಿಯನ್ನು ಅರಿಯುವ ತಾಳ್ಮೆ ಕಳೆದುಕೊಂಡಿದ್ದಾರೆ.
ಪ್ರೀತಿಯನ್ನು ಒಂದು ಮೌಲ್ಯ ಎಂದು ಪರಿಗಣಿಸುವ ಮನೋಭಾವ ಬೆಳೆಯಬೇಕು. ಆ ದಿಶೆಯಲ್ಲಿ ನಮ್ಮ ಯುವಕರಿಗೆ ಸುತ್ತಲಿನ ಪರಿಸರ ಮಾರ್ಗದರ್ಶನ ನೀಡಬೇಕು. ಅದಕ್ಕೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಿರಬೇಕು. ಹಣವಿದ್ದಾಕ್ಷಣ ದೇಗುಲಗಳಿಗೆ ದಾನ ಧರ್ಮ ಮಾಡುತ್ತಾ, ಊರಿನಲ್ಲಿ ಗಣ್ಯ ವ್ಯಕ್ತಿಗಳೆಂದು ಗುರುತಿಸಿಕೊಳ್ಳುವ ವ್ಯಕ್ತಿಗಳ ಕಾಮಪುರಾಣವು ಹೆಚ್ಚಾದೊಡನೆ ಆ ಊರಿನ ಸಾಮಾನ್ಯ ಯುವಸಮೂಹವು ಕೂಡ ದೃತಿಗೆಡುತ್ತದೆ. ಮದುವೆಯಾಗಿ ಮಕ್ಕಳಿರುವ ಪುರುಷ ಅಥವಾ ಮಹಿಳೆಯೇ ಸಮಾಜದಲ್ಲಿ ಅನೈತಿಕ ವ್ಯವಹಾರದಲ್ಲಿ ಭಾಗಿಯಾಗುತ್ತಾನೆ/ಳೆ ಎಂದರೆ ಅವರಿಂದ ನಾವು ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಎನ್ನುವ ಪ್ರಶ್ನೆ ಸಹಜವಾದುದು. ಇವುಗಳ ನಡುವೆಯೇ ಪ್ರೀತಿ ಪ್ರೇಮದ ಹೆಸರಿನಲ್ಲಿ ತಲೆಕೆಡಿಸಿಕೊಂಡು ಅದು ಫಲಿಸದೇ ಹೋದಾಗ ಹೀನ ಕೃತ್ಯಗಳಿಗೂ ಮುಂದಾಗುತ್ತಾನೆ. ಪ್ರೀತಿಸಿದವರು ಬೇರಾದಾಗ ಕತ್ತು ಕತ್ತರಿಸಿಕೊಳ್ಳುವ ಇಲ್ಲವೇ ಕೊಯ್ಯುವ, ವಿಷ ಸೇವಿಸುವ ಇಲ್ಲವೇ ಆಸಿಡ್ ಎರಚುವ ಕ್ರಿಯೆಗಳಿಗಿಂತಲೂ ಈ ಪ್ರೀತಿ ಎನ್ನುವುದು ಅಗಾಧವಾದುದು. ನಿಜವಾದ ಪ್ರಾಮಾಣಿಕ ಪ್ರೀತಿ ಪರಸ್ಪರರ ಖುಷಿ ಮತ್ತು ಏಳ್ಗೆಯನ್ನು ಬಯಸುತ್ತದೆಯೇ ಹೊರತು ಪರಸ್ಪರರ ದುರಂತ ಕತೆಗಳನ್ನಲ್ಲ ಎನ್ನುವುದನ್ನು ಎಲ್ಲಾ ಯುವ ಪ್ರೇಮಿಗಳು ಅರಿತುಕೊಳ್ಳಬೇಕು. ಪ್ರೀತಿಯೆನ್ನುವುದು ಪ್ರೀತಿಸಿದ ವ್ಯಕ್ತಿಯನ್ನು ಬಲವಂತವಾಗಿ ಪಡೆದು, ಅನುಭವಿಸುವುದಲ್ಲ. ಪ್ರೀತಿಸುವ ಜೀವಗಳು ಒಂದಾಗಬೇಕು, ಪ್ರತಿನಿತ್ಯ ಜೊತೆಗಿರಬೇಕು, ಪ್ರತಿಕ್ಷಣ ಮಾತನಾಡುತ್ತಿರಬೇಕು ಎನ್ನುವುದು ಮಾತ್ರ ಪ್ರೀತಿಯಲ್ಲ. ಅನಿವಾರ್ಯ ಕಾರಣದಿಂದ ಪ್ರೀತಿಸುವವರು ದೂರಾದಾಗ ಅವರನ್ನು ಹಿಂಸಿಸದೇ, ಅವರು ಸಂತೋಷವಾಗಿರಬೇಕು ಎಂದು ಬಯಸುವುದೇ ನಿಜವಾದ ಪ್ರೀತಿ..ಏನಂತಿರಾ
No comments:
Post a Comment