Friday 22 November 2013

ಪತಿಯನ್ನು ಕಳೆದುಕೊಂಡ  ಮಹಿಳೆ ಅಮಂಗಲೆಯಲ್ಲ-ಆಕೆ ಸುಮಂಗಲೆ

ಕುದ್ರೋಳಿಯಲ್ಲಿ ಇಬ್ಬರು ವಿಧವೆಯರು ಶಾಶ್ವತ ಅರ್ಚಕಿಯರಾಗಿ ನೇಮಕ-ಪೂಜಾರಿ ಸಾಧನೆ.

ಯತ್ರನಾರ್ಯಸ್ತು ಪೂಜ್ಯಂತೆ ರಮಂತೆ ತತ್ರದೇವತಾ' ಎಲ್ಲಿ ಸ್ತ್ರೀಯರು ಸಂತೋಷದಿಂದ ಬದುಕುತ್ತಾರೋ ಅಲ್ಲಿ ದೇವತೆಗಳು ನೆಲೆಯಾಗುತ್ತಾರಂತೆ. ಭಾರತೀಯ ಪರಂಪರೆಯಲ್ಲಿ ಮಹಿಳೆಗೆ ಮಹತ್ವದ ಸ್ಥಾನವಿದೆ. ಹೆಣ್ಣು ಪ್ರತಿಯೊರ್ವನ ಜೀವನದಲ್ಲಿಯೂ ಪ್ರಥಮವಾಗಿ ತಾಯಿಯಾಗಿ ಮಗುವಿಗೆ ಎದೆಹಾಲಿನೊಂದಿಗೆ ಮಾತೃಪ್ರೀತಿ ಉಣಬಡಿಸುತ್ತಾಳೆ. ಸ್ತ್ರೀಯು ವ್ಯಕ್ತಿಯೊರ್ವನ ಬಾಳಿನಲ್ಲಿ ಹೆಂಡತಿಯಾಗಿ, ಅಕ್ಕ, ತಂಗಿ, ದೊಡ್ಡಮ್ಮ, ಚಿಕ್ಕಮ್ಮ, ಅತ್ತೆ, ಅಜ್ಜಿ, ಸ್ನೇಹಿತೆಯಾಗಿ ಕಾಣಿಸಿಕೊಳ್ಳುತ್ತಾಳೆ. ಪ್ರತಿಯೊಂದು ಶುಭ ಕಾರ್ಯಕ್ಕೂ ತಾಯಿ, ಅಮ್ಮನ ಹಾರೈಕೆಯೊಂದಿದ್ದರೆ ಯಶಸ್ಸು ದಾಖಲಿಸಬಹುದು ಎನ್ನುವುದು ಎಲ್ಲರ ನಂಬಿಕೆ ಮಾತ್ರವಲ್ಲ ಅದು ನಿಜವು ಕೂಡ.
ಇಷ್ಟೆಲ್ಲಾ ಹೊಗಳಿಕೆಗೆ ಅರ್ಹವಾಗುವ ಮಹಿಳೆಯು ಸಮಾಜದಲ್ಲಿಂದು ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಶೋಷಣೆಗಳಿಗೆ ತುತ್ತಾಗುವುದು ಮಾತ್ರವಲ್ಲದೇ ಪ್ರತಿಯೊರ್ವರ ದೃಷ್ಟಿಯಲ್ಲಿಯೂ ಕಾಮದ ಬಿಂದುವಾಗಿ ಬಿಂಬಿಸಿಕೊಳ್ಳುತ್ತಾಳೆ ಅಲ್ಲಾ ನೋಡುಗ ಕಾಮುಕರ ದೃಷ್ಟಿಯಲ್ಲಿ ಆ ರೀತಿ ಕಾಣಿಸಿಕೊಳ್ಳುತ್ತಾಳೆ. ಮದುವೆಯಾಗಿ ಗಂಡನೊಂದಿಗೆ ಸುಖಸಂಸಾರ ಸಾಗಿಸುತ್ತಿರುವಾಗ ಹೆಣ್ಣಿಗೆ ಎಲ್ಲಿಲ್ಲದ ಮಾನ್ಯತೆ, ಸಮಾಜದಲ್ಲಿ, ಕುಟುಂಬದಲ್ಲಿ ಯಾವುದೇ ಶುಭ ಕಾರ್ಯವಾಗುವುದಿದ್ದರೂ, ಮಹಿಳೆಗೆ ಪ್ರಥಮ ಆದ್ಯತೆಯೊಂದಿಗೆ ಆಕೆಯೇ ಶುಭ ಮೂಹೂರ್ತ ನಿಗದಿಗೊಳಿಸುತ್ತಾಳೆ. ಹೆಣ್ಣು ಅಥವಾ ಪುರುಷನಿಗೆ ಮದುವೆ ಎನ್ನುವುದು ಒಂದು ಸಂಸ್ಕಾರ. ಹಿಂದು ಪದ್ದತಿಯಂತೆ ಸಪ್ತಪದಿ ತುಳಿದು ಮದುವೆಯಾಗುವ ಗಂಡು ಹೆಣ್ಣುಗಳು ಮುಂದಿನ ದಿನದಲ್ಲಿ ಸಮಾಜದ ಕಣ್ಣಿಗೆ ಗಂಡ-ಹೆಂಡಿರಾಗಿ ಬಾಳುವೆ ನಡೆಸುತ್ತಾರೆ. ಮದುವೆಯಾಗುವುದಕ್ಕಿಂತ ಮುಂಚೆ ಹೆಣ್ಣಿಗೆ  ಗೌರವ ಸಿಗುತ್ತದೆ. ಮದುವೆ ಎನ್ನುವ ಮೂರಕ್ಷರದ ಸಂಸ್ಕಾರದಲ್ಲಿ ಮಾಂಗಲ್ಯ ಎನ್ನುವ ಕರಿಮಣಿಯ ಬಂಧನದೊಂದಿಗೆ ಗಂಡ-ಹೆಂಡಿರಾಗಿ ಸಮಾಜದ ಕಣ್ಣಿನಲ್ಲಿ ಆಕೆ ಸುಮಂಗಲಿಯಾಗುತ್ತಾಳೆ. ವಿಧಿವಷಾತ್ ಆಕಸ್ಮಿಕವಾಗಿ ಗಂಡ ಮಡಿದರೆ ಆಕೆ ಅಮಂಗಲಿಯಾಗುತ್ತಾಳಂತೆ? ಅಲ್ಲಿಯವರೆಗೆ ಸಮಾಜದಲ್ಲಿ ದೊರಕುತ್ತಿದ್ದ ಮಾನ-ಮರ್ಯಾದೆಗಳು ಹೆಣ್ಣಿಗೆ ಗಂಡ ಇಹಲೋಕ ತೊರೆದ ಮೇಲೆ ಇಲ್ಲವಾಗುತ್ತದೆ. ಯಾವುದೇ ಶುಭಕಾರ್ಯದಲ್ಲಿ ಭಾಗವಹಿಸುವ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ತಾನು ಹೆತ್ತ ಮಕ್ಕಳಿಗೆ ಮದುವೆ ಮಾಡುವಾಗಲೂ ಕೂಡ ಗಂಡನನ್ನು ಕಳೆದುಕೊಂಡ ಹೆಂಗಳೆಯರು ವೇದಿಕೆಯಲ್ಲಿ ಕಂಗೊಳಿಸುವ ಅವಕಾಶವಿಲ್ಲದೆ, ಸಮಾರಂಭದಲ್ಲಿ ಯಾವುದೋ ಮೂಲೆಯಲ್ಲಿಯೋ ನಿಂತು ಅಥವಾ ಅಲ್ಲಿಗೆ ಬರದೆ ದುಃಖದಿಂದ ಸಂತೋಷ ಅನುಭವಿಸಬೇಕಾದ ಪರಿಸ್ಥಿತಿ. ಸಮಾಜದಲ್ಲಿರುವ ಇಂತಹ ದುಸ್ಥಿತಿ ಮನಗಂಡ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರು ಛಲಬಿಡದೆ ಅವರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ಶ್ರಮಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನವರಾತ್ರಿಯ ಶುಭ ಮಹೂರ್ತದಲ್ಲಿ ಪತಿಯನ್ನು ಕಳೆದುಕೊಂಡ ಜಿಲ್ಲೆಯ ಇಬ್ಬರು ಮಹಿಳೆಯರಿಗೆ ಗೋಕರ್ಣನಾಥೇಶ್ವರ ಹಾಗೂ ಅನ್ನಪೂರ್ಣೇಶ್ವರಿ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿ, ಪೂಜೆ-ಆರತಿಯೊಂದಿಗೆ ಪ್ರಸಾದ ವಿತರಣೆಗೆ ಅವಕಾಶ ಕಲ್ಪಿಸಿ, ದೇಶದಲ್ಲಿಯೇ ಪ್ರಥಮ ಬಾರಿಗೆ ವಿಧವೆಯರಿಗೆ ದೇವಳದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆಯಲಾಯಿತು.
ಸಾಮಾಜಿಕ ಸುಧಾರಕ ನಾರಾಯಣಗುರುಗಳ ಮೂಲಕ ಬಿಲ್ಲವ ಸಮಾಜವಿಂದು ಬದಲಾವಣೆಯ ಬೆಳಕು ಕಾಣುತ್ತಿದೆ. ಕುದ್ರೋಳಿಯಲ್ಲಿ ನಾರಾಯಣಗುರುಗಳು ಗೋಕರ್ಣನಾಥೇಶ್ವರನ್ನು ಪ್ರತಿಷ್ಠಾಪಿಸಿ, ಸ್ವಚ್ಚತೆಗೆ ಪ್ರತಿದ್ದವಾಗಿರುವ ಈ ಕ್ಷೇತ್ರದಲ್ಲಿ ಈಗ ಬದಲಾವಣೆಯ ಬೆಳಕು ಕಾಣಿಸುತ್ತಿದೆ. ಇತಿಹಾಸ ಪ್ರಸಿದ್ಧಿ ಪಡೆದ ಈ ಕ್ಷೇತ್ರ ಈಗ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಗೆ ನಾಂದಿಯಾಗಿದೆ.
ಮನುಷ್ಯರೆ ಹಾಕಿಕೊಂಡಿರುವ ಬಂಧನದಲ್ಲಿ ವಿಧವೆಯರು ಸಾಮಾಜಿಕವಾಗಿ ಯಾವುದೇ ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಸಮಾಜದಿಂದ ಸಮ್ಮತವಾಗಿಲ್ಲ. ಪುರಾತನವಾದ ಬಂಧನವನ್ನು ಕಳಚಿಕೊಂಡು ವಿಧವೆಯರು ಕೂಡ ಪುಣ್ಯಕಾರ್ಯದಲ್ಲಿ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಬಹುದು ಎನ್ನುವುದಕಷ್ಟೆ ಸೀಮಿತವಾಗಿರದೆ, ದೇವರ ಪೂಜೆ ಮಾಡುವ ಅರ್ಚಕರ ಸ್ಥಾನಕ್ಕೂ ಅರ್ಹರು ಎನ್ನುವುದನ್ನು ಸಾಧಿಸಿ ತೋರಿಸಿದವರು ಪೂಜಾರಿ.
ಇಬ್ಬರು ವಿಧವೆಯರಿಗೆ ಕುದ್ರೋಳಿ ಕ್ಷೇತ್ರದಲ್ಲಿ ಶಾಶ್ವತ ಅರ್ಚಕರಾಗಿ ದೇವರ ಪೂಜಾ ಕೈಂಕರ್ಯ ಕೈಗೊಳ್ಳಲಿದ್ದಾರೆ ಎಂದಾಗ ಪತ್ರಿಕಾ ಹೇಳಿಕೆಗಳ ಮೂಲಕ ಖಂಡಿಸಿದ್ದರು. ಎರಡು ವರ್ಷದ ಹಿಂದಿನ ನವರಾತ್ರಿಯಲ್ಲಿ ವಿಧವೆಯರು ರಥ ಎಳೆದಾಗ ಸಂಪ್ರದಾಯವಾದಿಗಳು ಹೌಹಾರಿದ್ದರು. ಮತ್ತೊಮ್ಮೆ ಈ ಕ್ಷೇತ್ರದಲ್ಲಿ ವಿಧವೆಯರೆ ಚಂಡಿಕಾಯಾಗದಲ್ಲಿ ಪಾಲ್ಗೊಳ್ಳುವ ಮೂಲಕ ವಿಧವೆಯರು ಅಮಂಗಳೆಯರಲ್ಲ ಎನ್ನುವ ಸಂದೇಶ ಸಾರಿದ್ದರು. ಪೂಜಾರಿಯವರ ತೀರ್ಮಾನಕ್ಕೆ ಸಮಾಜದಿಂದ ಹಲವಾರು ವಿರೋಧಗಳು ಬಂದಿದ್ದರೂ, ಪೂಜಾರಿಯವರ ಛಲ ಮತ್ತು ಸ್ವತಂತ್ರ ನಿಲುವಿನಿಂದಾಗಿ ವಿಧವೆಯರಿರ್ವರನ್ನು ಶಾಶ್ವತ ಅರ್ಚಕಿಯರಾಗಿ ಬಹುವಿರೋಧದ ನಡುವೆಯೂ ಸಮರ್ಥವಾಗಿ ನೇಮಕಗೊಳಿಸಿದ್ದಾರೆ.
ಶೂದ್ರರಿಗೆ ದೇವಸ್ಥಾನದ ಮೆಟ್ಟಿಲು ತುಳಿಯುವ ಅವಕಾಶವಿಲ್ಲ ಎನ್ನುವ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ಹಿಂದುಳಿದವರು, ಅಸ್ಪೃಶ್ಯರಿಗೂ ದೇವಸ್ಥಾನಕ್ಕೆ ಹೋಗುವ ಹಕ್ಕಿದೆ, ದೇವರನ್ನು ಪೂಜಿಸುವ ಅವಕಾಶವಿದೆ ಎನ್ನುವ ಮೂಲಕ ಶ್ರೀ ಕ್ಷೇತ್ರದ ಸ್ಥಾಪನೆಗೈದ ನಾರಾಯಣಗುರುಗಳು ಮಾನವತಾವಾದದ ಪ್ರತಿಪಾದಕರಾಗಿದ್ದಾರೆ. ಮೇಲು-ಕೀಳು ಎನ್ನುವ ಮನುಷ್ಯ ನಿರ್ಮಿತ ಗೋಡೆಯನ್ನು ಕೆಡವಿ ಕೆಳವರ್ಗದವರಲ್ಲೂ ಸ್ವಾಭಿಮಾನದ ಬೀಜ ಬಿತ್ತಿದ್ದು, ಶ್ರೀಕ್ಷೇತ್ರ ಕೇವಲ ಆರಾಧನಾ ಸ್ಥಳವಾಗಿರದೆ ಸ್ವಾಭಿಮಾನದ ಪ್ರತೀಕವಾಗಿ ಬೆಳೆಯಿತು. ಸಾಮಾಜಿಕ ಅಸಮಾನತೆಯ ಕಂದಾಚಾರದ ಬೆಂಕಿಯಲ್ಲಿ ಬೇಯುವ ವಿಧವೆಯರ ಮುಖದಲ್ಲಿ ಮುಗುಳು ನಗು ಅರಳಲು ಕಾರಣರಾದವರು ಪೂಜಾರಿ. ಹೆತ್ತ ತಾಯಿ ವಿಧವೆಯಾದರೂ ಕೂಡ ಮಕ್ಕಳಿಗೆ ಆಕೆ ಪೂಜ್ಯಳು ಎಂದು ಪ್ರತಿಪಾದಿಸುತ್ತೇವೆ. ಆದರೆ ಆಕೆಯನ್ನು ನಾವು ಮಂಗಳ ಕಾರ್ಯಗಳಿಂದ ದೂರ ಇಟ್ಟು ಸಂಪ್ರದಾಯದ ಹೆಸರಲ್ಲಿ ಪ್ರತ್ಯೇಕಿಸುತ್ತೇವೆ. ಮಾನಸಿಕವಾಗಿ ವಿಧವೆಯರನ್ನು ಕುಬ್ಜರಾಗಿಸುವ ನಮ್ಮ ನಂಬಿಕೆ, ಆಚರಣೆಗಳು ಅಮಾನವೀಯ ಎನ್ನುವ ಪರಿವೆಯೇ ಇಲ್ಲದವರಂತೆ ವರ್ತಿಸುತ್ತೇವೆ.
ಗುಲ್ವಾಡಿ ವೆಂಕಟರಾಯರ ಕನ್ನಡದ ಮೊಟ್ಟಮೊದಲ ಕಾದಂಬರಿಯಲ್ಲಿ ಓರ್ವ ವಿಧವೆಯ ಬದುಕನ್ನು ಮನಮಿಡಿಯುವಂತೆ ಜನತೆಗೆ ತಲುಪಿಸಿ, ಆಕೆಗೆ ಮರು ಮದುವೆ ಮಾಡಿಸುವ ಮೂಲಕ ನಿಜವಾದ ಧರ್ಮದ ವಿಜಯ ಎನ್ನುವ ಸಂದೇಶ ಸಾರಿದ್ದರು. ಶತಮಾನಗಳ ಹಿಂದೆಯೇ ಇಂತಹ ಕ್ರಾಂತಿಕಾರಿ ನಿಲುವು ತಳೆಯುವ ಎದೆಗಾರಿಕೆ ಓರ್ವ ಲೇಖಕರು ತೋರಿಸಿದ್ದಾರೆ. ಸಂಪ್ರದಾಯ,ಆಚರಣೆಗಳೇ ಅತಿ ಮುಖ್ಯ ಎನ್ನುವ ಕಾಲಘಟ್ಟದಲ್ಲಿ ಲೇಖಕ ಗುಲ್ವಾಡಿ ಸಂಪ್ರದಾಯದ ಗೋಡೆ ಕೆಡಹುವ ಸಾಹಸ ಮಾಡಿದ್ದರು.
ಪೂಜಾರಿ ಓರ್ವ ರಾಜಕಾರಣಿಯಾಗಿ ಸಾಲಮೇಳ ನಡೆಸುವ ಮೂಲಕ ಬಡವರು, ಮಹಿಳೆಯರು ಸ್ವಾವಲಂಬಿಯಾಗಲು ಸಹಕಾರಿಯಾದರು. ಸಾರ್ವಜನಿಕವಾಗಿ ಸಾಲಮೇಳ ನಡೆಸುವ ಮೂಲಕ ಬ್ಯಾಂಕಿನ ಬಾಗಿಲುಗಳು ಬಡವರಿಗೆ ಮುಕ್ತವಾಗುವಂತೆ ಮಾಡಿದ್ದಾರೆ. ಕ್ಷೇತ್ರದಲ್ಲಿ ವಿಧವೆಯರಿಗೆ ಪೂಜಾರಿ ಅವರು ಕಲ್ಪಿಸಿ ಕೊಟ್ಟಿರುವ ಹೊಸ ಅವಕಾಶಗಳು ಮತ್ತು ತೆಗೆದುಕೊಂಡಿರುವ ನಿಲುವುಗಳು ನಾರಾಯಣಗುರುಗಳ ತತ್ವ, ಆದರ್ಶ ಮತ್ತು ಅವರು ಪ್ರತಿಪಾದಿಸಿದ ಮೌಲ್ಯಗಳಿಗೆ ಪೂರಕ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಮನುಷ್ಯರು ನಿರ್ಮಿಸಿದ ಕಟ್ಟುಪಾಡುಗಳಿಗೆ ದೇವರು ಪರಿಹಾರ ಕೊಡಲು ಸಾಧ್ಯವಿಲ್ಲ, ಮನುಷ್ಯರೇ ಅದಕ್ಕೆ ಪರಿಹಾರ ನೀಡಬೇಕು. ಮನುಷ್ಯತ್ವ, ಮಾನವೀಯತೆಯನ್ನು ಪ್ರತಿಪಾದಿಸುವವರು ಪೂಜಾರಿ ಅವರ ಕಾರ್ಯವನ್ನು ಮೆಚ್ಚಿದರೆ ಅತಿಶಯೋಕ್ತಿಯಲ್ಲ.
ಅಂದು ಸೆಪ್ಟೆಂಬರ್ ೮ ರ ಭಾನುವಾರದಂದು ಕರಾವಳಿಯ ಜನತೆಯ ಕಿವಿಗಳು ಚುರುಕಾಗಿದ್ದು, ಮೈಯೆಲ್ಲಾ ಕಣ್ಣಾಗಿ ಕುದ್ರೋಳಿ ಕ್ಷೇತ್ರದಲ್ಲಿ ಏನಾಗುತ್ತದೆ ಎನ್ನುವ ಕುತೂಹಲಕ್ಕೆ ಒಳಗಾಗಿದ್ದರು. ಬೆಳಿಗ್ಗೆ ೧೦.೨೦ರ ಸುಮಾರಿಗೆ ಪತಿಯನ್ನು ಕಳೆದುಕೊಂಡ ಇಬ್ಬರು ಸಮವಸ್ತ್ರಧಾರಿ ಮಹಿಳೆಯರನ್ನು ಚೆಂಡೆ, ವಿವಿಧ ವಾದ್ಯಘೋಷಗಳೊಂದಿಗೆ ಆವರಣ ದ್ವಾರದಿಂದ ನೆರೆದ ಗಣ್ಯರೊಂದಿಗೆ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ಶ್ರೀ ಕ್ಷೇತ್ರಕ್ಕೆ ಸಂಪೂರ್ಣವಾಗಿ ಪ್ರದಕ್ಷಿಣೆ ಬಂದು, ದೇವಳದ ಒಳಗಿನ ನಾರಾಯಣ ಗುರುಗಳ ಮೂರ್ತಿಗೆ ನಮಿಸಿದ ಅವರು ಶನೀಶ್ವರ, ಗಣಪತಿ, ಸುಬ್ರಹ್ಮಣ್ಯಸ್ವಾಮಿ, ಅನ್ನಪೂರ್ಣೇಶ್ವರಿ, ಕಾಲಭೈರವ, ನವಗ್ರಹಗಳಿಗೆ ನಮಿಸಿದರು. ಬೆ.೧೦.೪೭ ರ ಶುಭಮೂಹೂರ್ತದಲ್ಲಿ ಗೋಕರ್ಣನಾಥೇಶ್ವರನ ಗರ್ಭಗುಡಿ ಪ್ರವೇಶ ಮಾಡಿದರು. ಶಿವಲಿಂಗಕ್ಕೆ ಪುಷ್ಪವನ್ನು ಅರ್ಚಿಸಿ, ವಿವಿಧ ಆರತಿ ಗೈದ ಇಂದಿರಾ ಶಾಂತಿ ಹಾಗೂ ಲಕ್ಷ್ಮೀ ಶಾಂತಿಯರು ಎಲ್ಲರಿಗೂ ತೀರ್ಥ ಪ್ರಸಾದ ವಿತರಿಸಿದರು.
ನಂತರ ೧೧.೦೮ಕ್ಕೆ ಅವರು ಗರ್ಭಗುಡಿಯ ಹಿಂಬಾಗದಲ್ಲಿರುವ ಅನ್ನಪೂರ್ಣೇಶ್ವರಿ ಗುಡಿ ಪ್ರವೇಶಿಸಿ, ಪೂಜೆ ಸಲ್ಲಿಸಿ, ತೀರ್ಥ ಪ್ರಸಾದ ವಿತರಿಸಿದರು. ನವಗ್ರಹ ಪೂಜೆ, ಹನುಮಾನ್ ಪೂಜೆ, ಶ್ರೀಕೃಷ್ಣ ಮಂದಿರ ಪ್ರವೇಶಿಸಿ ಆರತಿ ಬೆಳಗಿದರು. ದೇವಳದ ಆವರಣದಲ್ಲಿರುವ ಅಶ್ವತ್ಥಕಟ್ಟೆಯಲ್ಲಿ ನೂತನವಾಗಿ ಸ್ಥಾಪಿಸಿದ ದತ್ತಾತ್ರೇಯ ವಿಗ್ರಹ ಅನಾವರಣಗೊಳಿಸಿ, ಪೂಜೆ ಸಲ್ಲಿಸಿ, ಪ್ರಸಾದ ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಅವರು ನವದುರ್ಗೆಯರು, ಗಣಪತಿ, ಶಾರದಾ ಮಾತೆಗೆ ಪೂಜೆ ಸಲ್ಲಿಸಿದರು. ನಂತರ ಮಹಿಳಾ ಅರ್ಚಕರು ನಾರಾಯಣಗುರುಗಳ ಸನ್ನಿದಿಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸುತ್ತಿದ್ದರು.
ಪುತ್ತೂರು ಬನ್ನೂರು ಗ್ರಾಮದ ಇಂದಿರಾ ಶಾಂತಿ, ಬಂಟ್ವಾಳ ಮೂಡ ಬಿಸಿರೋಡ್‌ನ ಲಕ್ಷ್ಮೀ ಶಾಂತಿ ಅವರುಗಳು ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸಿದ ಅರ್ಚಕರು. ಇಂದಿರಾ ಶಾಂತಿ ಕಳೆದ ನಾಲ್ಕು ತಿಂಗಳಿನಿಂದ ತರಬೇತಿ ಪಡೆದಿದ್ದು, ಲಕ್ಷ್ಮೀಶಾಂತಿ ೩ ದಿನದಿಂದ ತರಬೇತಿ ಪಡೆದುಕೊಂಡಿದ್ದಾರೆ. ಬೆಳ್ತಂಗಡಿಯ ಗ್ರಾ.ಪಂ.ಸದಸ್ಯೆಯೊರ್ವರು ೪ ತಿಂಗಳು ತರಬೇತಿ ಪಡೆದಿದ್ದರು. ಕೊನೆಯಲ್ಲಿ ಅವರಿಗೆ ಆಯ್ಕೆಗೆ ಅವಕಾಶ ನೀಡಿದಾಗ, ಪಂಚಾಯತ್ ಸದಸ್ಯೆಯಾಗಿ ಮುಂದುವರಿಯುವುದಾಗಿ ಹೇಳಿದ್ದರು. ಅವರ ಸದಸ್ಯತನದ ಅವದಿ ಮುಗಿದ ನಂತರ ಮನಸ್ಸಿದ್ದರೆ ಅರ್ಚಕರಾಗಿ ಬರುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಿಲ್ಲವ ಸಮಾಜಕ್ಕೆ ಸೇರಿದ ಇವರುಗಳು ಬಿ.ಸಿ.ರೋಡ್‌ನಲ್ಲಿರುವ ಗುರುಮಂದಿರದಲ್ಲಿ ಲೋಕೇಶ್ ಶಾಂತಿ ಅವರಲ್ಲಿ ತರಬೇತಿ ಪಡೆದಿದ್ದಾರೆ. ಅವರು ಅರ್ಚಕರಾಗಿರುವಾಗ ಹಳದಿ ಬಣ್ಣದ ಸೀರೆ-ಕುಪ್ಪಸ ತೊಡುವುದು ಸಂಪ್ರದಾಯವಾಗಿದೆ. ಮಹಿಳಾ ಅರ್ಚಕರಿಗೆ ರಿಯಾಯಿತಿಯಿದ್ದು, ವೇತನವನ್ನು ನೀಡಲಾಗುತ್ತದೆ ಎನ್ನುವುದು ಪೂಜಾರಿಯವರ ಅಭಿಪ್ರಾಯ.
ಸಮಾಜದಲ್ಲಿರುವ ಅಂಧಕಾರವನ್ನು ತೊಲಗಿಸಲು ಕುದ್ರೋಳಿ ಕ್ಷೇತ್ರದಲ್ಲಿ ಉತ್ತಮ ಕಾರ್ಯವನ್ನು ಕೈಗೊಂಡಿದ್ದಾರೆ. ಪತಿಯನ್ನು ಕಳೆದುಕೊಂಡ ಮಹಿಳೆಯು ಅಮಂಗಲೆಯಾಗದೆ ಸುಮಂಗಲಿ ಎನ್ನುವುದು ಕುದ್ರೋಳಿ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಅವರಿಗೆ ಸಿಗುವ ಗೌರವ, ಮಾನ್ಯತೆಗಳಿಂದ ಸಾಬೀತಾಗುತ್ತಿದೆ. ವಿರೋಧಗಳ ನಡುವೆಯು ಸಮಾನತೆಯ ತತ್ವವನ್ನು ಸಾರಿದ ನಾರಾಯಣಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಮಾಜಕ್ಕೆ ತೋರ್ಪಡಿಸಿದ ಪೂಜಾರಿ ಅವರ ಕಾರ್ಯವನ್ನು ಬುದ್ದಿವಂತ ಸಮಾಜವಿಂದು ಒಪ್ಪಿಕೊಳ್ಳಲೆ ಬೇಕಿದೆ. ಅಂತೂ ವಿಧವೆಯರ ಮುಖದಲ್ಲಿಯೂ ಮಂದಹಾಸ ಮೂಡಿಸಿದ್ದಾರೆ ಎನ್ನುವುದು ಸ್ಪಷ್ಟ..ಏನಂತಿರಾ

ಭಯ ಹುಟ್ಟಿಸುವವರೆ ಅಧಿಕವಾಗಿರುವ ಸಮಾಜದಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯರಿಗೆ ಶಕ್ತಿ ತುಂಬಬೇಕು. ಪ್ರತಿ ಮನೆಯಲ್ಲಿಯೂ ಗಂಡನನ್ನು ಕಳೆದುಕೊಂಡ ಮಹಿಳೆಯಿದ್ದಾಳೆ ಎನ್ನುವುದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು. ನಾರಾಯಣಗುರುಗಳ ತತ್ವವನ್ನು ಅಳವಡಿಸಿಕೊಂಡು ಕ್ಷೇತ್ರದಲ್ಲಿ ಇಂತಹ ಕಾರ್ಯ ಹಮ್ಮಿಕೊಳ್ಳಲಾಗಿದೆ. ಪತಿಯನ್ನು ಕಳೆದುಕೊಂಡ ಮಹಿಳೆಯರಿಗೆ ಆತ್ಮಶಕ್ತಿ ತುಂಬುವ ಕೆಲಸ ಸಮಾಜದಿಂದಾಗಬೇಕು.
ಬಿ.ಜನಾರ್ದನ ಪೂಜಾರಿ-ಕೇಂದ್ರ ಮಾಜಿ ಸಚಿವ, ಕ್ಷೇತ್ರದ ನವೀಕರಣದ ರೂವಾರಿ. 

ವಿಧವಾ ಅರ್ಚಕಿಯರಿವರು: 
ಬಂಟ್ವಾಳ ಮೂಡ ಬಿ.ಸಿ.ರೋಡ್‌ನ ೬೫ ವರ್ಷದ ಲಕ್ಷ್ಮೀಶಾಂತಿ ೨೦ ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡಿದ್ದರು. ಇವರು ೨ ಗಂಡು ಹಾಗೂ ೩ ಹೆಣ್ಣು ಮಕ್ಕಳನ್ನು ಹೊಂದಿದ್ದು, ಎಲ್ಲರಿಗೂ ಮದುವೆಯಾಗಿದೆ. 
ಪುತ್ತೂರು ಬನ್ನೂರು ಗ್ರಾಮದ ೪೫ ವರ್ಷದ ಇಂದಿರಾ ಶಾಂತಿ ಐದು ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಇವರಿಗೆ ೨ ಗಂಡು ಹಾಗೂ ೧ ಹೆಣ್ಣು ಮಗುವಿದೆ. 













No comments:

Post a Comment