ಗ್ರಾಮಾಭಿವೃದ್ಧಿಯ ಹರಿಕಾರ-ಬಡವರು-ಕುಡುಕರ ಪಾಲಿನ ನಂದಾದೀಪ
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಶ್ರೀಕ್ಷೇತ್ರಕ್ಕೆ ಕಳಂಕ ತಂದ ದುಷ್ಟ ಶಕ್ತಿಗಳ ಸಂಚು ಬಹಿರಂಗಗೊಳ್ಳಲಿ
ವಿದ್ಯಾ ವಿವಾದಾಯ ಧನಂ ಮದಾಯ, ಶಕ್ತಿಃ ಪರೇಷಾಂ ಪರಪೀಡನಾಯ/
ಖಲಸ್ಯ ಸಾಧೋರ್ವಿಪರೀತ ಮೇತತ್ ಜ್ಞಾನಾಯ ದಾನಾಯ ಚ ರಕ್ಷಣಾಯ//
ಸುಂದರವಾದ ಸೂಕ್ತಿಯ ನಿಜವಾದ ಅರ್ಥ ಮನಗಂಡಾಗ ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳಲ್ಲಿನ ಸೂಕ್ಷ್ಮತೆ ಅರ್ಥೈವಿಸಿಕೊಳ್ಳಲು ಸಾಧ್ಯ. ತಾತ್ಪರ್ಯವಿಷ್ಟೆ ``ದುಷ್ಟನಿಗೆ ವಿದ್ಯೆಯೆನ್ನುವುದು ವಿವಾದಗಳಿಗೂ, ಧನವು ಅಹಂಕಾರಕ್ಕೂ ಶಕ್ತಿಯು ಇನ್ನೊಬ್ಬರನ್ನು ಪೀಡಿಸಲು ಉಪಯೋಗಕ್ಕೆ ಬರುತ್ತದೆ. ಆದರೆ ಸಜ್ಜನರಿಗೆ ಹೀಗಲ್ಲ. ವಿದ್ಯೆ-ಧನ-ಶಕ್ತಿಗಳು ಜ್ಞಾನ-ದಾನ-ರಕ್ಷಣೆಗಳಿಗಾಗಿಯೇ ಸಮಾಜಕ್ಕೆ ಅವರಿಂದ ಮೀಸಲಾಗುತ್ತದೆ". ಇದು ಸಜ್ಜನ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಬಾಳಿನಲ್ಲಿ ಅಕ್ಷರಶಃ ಸತ್ಯವೆನ್ನುವುದು ನನ್ನ ಭಾವನೆ. ಮಾತ್ರವಲ್ಲ ಶ್ರೀಕ್ಷೇತ್ರ ಭಕ್ತಾಭಿಮಾನಿಗಳೆಲ್ಲರದು. ದುಷ್ಟ ಶಕ್ತಿಗಳು ತಮ್ಮ ತಂತ್ರವನ್ನು ಸಜ್ಜನರ ಮೇಲೆಯೇ ಪ್ರಯೋಗಿಸಿದರಲ್ಲ ಎನ್ನುವಾಗ ನಾವು ಎಲ್ಲಿದ್ದೇವೆ ಎನ್ನುವ ಸಂಶಯ ಕಾಡುತ್ತದೆ.
ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ದುರುದ್ದೇಶ ಪೂರ್ವಕ ಟೀಕೆಗಳಿಂದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮನಸ್ಸು ನೋಯಿಸುವಂತ ಘಟನೆ ವರದಿಯಾಗುತ್ತಿರುವುದು ಕಲಿಯುಗದ ಸಾರ್ವಭೌಮತೆ ತಿಳಿಸುತ್ತಿವೆಯೊ ಎನ್ನುವಂತಾಗಿದೆ. ಪರಶುರಾಮ ಸೃಷ್ಟಿಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೂಲ ಲಿಂಗಾತ್ಮನಾಗಿ ಮಂಜುನಾಥ ಸ್ವಾಮಿ ಪ್ರಸಿದ್ದಿ ಪಡೆದರೂ, ಕ್ಷೇತ್ರದ ಮಹಿಮೆ ಮಾತ್ರ ಪುಣ್ಯಭೂಮಿಯ ಪಟ್ಟಾಭಿಷಿಕ್ತ ಖಾವಂದರ ಧೀಮಂತ ವ್ಯಕ್ತಿತ್ವದಿಂದಲೇ ಜಗ-ದ್ವಿಖ್ಯಾತವಾಗಿದೆ ಎನ್ನುವುದು ನೂರರಷ್ಟು ಸತ್ಯ. ಹೆಗ್ಗಡೆಯವರ ದಕ್ಷತೆಯ ದಿಟ್ಟ ನಾಯಕತ್ವ ಗುಣ ಅಸಾಮಾನ್ಯವಾದುದು. ಪ್ರಶಸ್ತಿ, ಪುರಸ್ಕಾರಗಳನ್ನು ಹಣ ನೀಡಿ ಕೊಂಡುಕೊಳ್ಳುವ ಜನರಿರುವ ಸಾಮಾನ್ಯ ಜಗತ್ತಿನಲ್ಲಿ ಸೇವೆಯ ಮೂಲಕ ವಿಶ್ವಮಾನ್ಯತೆಗೆ ಪಾತ್ರರಾಗಿ ಡಾಕ್ಟರೇಟ್, ಪದ್ಮಶ್ರೀಗಳಂತಹ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
ಧರ್ಮಕ್ಷೇತ್ರ, ಪುಣ್ಯಕ್ಷೇತ್ರದ ಧರ್ಮಾಧಿಕಾರಿಯಾಗಿ ಬಡವರ ಪಾಲಿಗೆ ಬೆಳಕಾಗಿರುವ ಪೂಜ್ಯ ಖಾವಂದರ ಕುರಿತು ಇಲ್ಲದ ಸಲ್ಲದ ಆರೋಪ ಮಾಡಿರುವುದು, ಧರ್ಮವೇ ಘನತೆವೆತ್ತ ಧರ್ಮದ ನೆಲೆಬೀಡು ಧರ್ಮಸ್ಥಳದ ಪರಿಸರದಲ್ಲಿ ವಾಸವಾಗಿರುವ ನಾಗರಿಕರಿಗೆ ಇದು ಸಭ್ಯತೆಯೆನಿಸುತ್ತದೆಯೇ? ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಸಿಐಡಿ ತನಿಖೆ ಪ್ರಗತಿಯಲ್ಲಿರುವಾಗ ಗೌರವಯುತ ವ್ಯಕ್ತಿಯ ಹಾಗೂ ಘನತೆಯ ಶ್ರೀಕ್ಷೇತ್ರದ ಮೇಲೆ ಆರೋಪ ಮಾಡಿ ಜನತೆಯ ದೃಷ್ಟಿಯಲ್ಲಿ ತಪ್ಪಿತಸ್ಥರು ಎನ್ನುವ ಭಾವನೆ ಮೂಡಿಸುವುದು ಎಷ್ಟರಮಟ್ಟಿಗೆ ಸರಿ?
ಹಿಂಸೆಯೇ ನಿಷಿದ್ದವಾದ ಜೈನಕುಲದಲ್ಲಿ ಜನಿಸಿದ ವೀರೇಂದ್ರ ಹೆಗ್ಗಡೆಯವರು ಸಮಾಜದಲ್ಲಿ ನ್ಯಾಯ, ನೀತಿ, ಧರ್ಮಕ್ಕಾಗಿ ಅವಿರತ ಶ್ರಮಿಸಿದವರು. ಕರಾವಳಿ ಜಿಲ್ಲೆಗಳು ಮಾತ್ರವಲ್ಲದೇ ರಾಜ್ಯದಲ್ಲಿರುವ ಅನೇಕ ಪ್ರದೇಶಗಳಲ್ಲಿ ಸಾಮಾಜಿಕ-ಶೈಕ್ಷಣಿಕ ಸೇವೆಯೊಂದಿಗೆ ಗ್ರಾಮಾಭಿವೃದ್ಧಿಯ ಹರಿಕಾರರಾಗಿ, ಬಡವರ-ಮದ್ಯಮ ವರ್ಗದ ಜನತೆಯ ಸಮೃದ್ಧಿಯುತ ಜೀವನಕ್ಕೆ ಪ್ರೇರಕರಾಗಿದ್ದಾರೆ. ಕುಡಿತವೇ ಜೀವನವೆಂದು ಸುರಪಾನ ಮುಕ್ತರಾಗಿರುವ ಕುಟುಂಬದ ಯಜಮಾನರಿಗೆ ಮಧ್ಯವರ್ಜನಾ ಶಿಬಿರಗಳನ್ನು ಆಯೋಜಿಸಿ, ಸಮಗ್ರ ಜನತೆಗೆ ಶಾಂತಿ-ಸಮಾಧಾನ-ನೆಮ್ಮದಿಯ ಬಾಳ್ವೆಗೆ ಪಾತ್ರವಾಗಿರುವ ಹೆಗ್ಗಡೆಯವರ ಮೇಲಿನ ಆರೋಪಗಳ ಹಿಂದೆ ದುರುದ್ದೇಶ ಅಡಗಿದೆ ಎನ್ನುವುದು ಸತ್ಯ. ಘಟನೆಯ ಹಿಂದಿನ ಎಲ್ಲಾ ಮನಸ್ತಾಪ ಶೀಘ್ರವೇ ಶಮನಗೊಂಡು ಧರ್ಮಸ್ಥಳ ಕ್ಷೇತ್ರ ಹಾಗೂ ಪೂಜ್ಯ ಖಾವಂದರನ್ನು ನಂಬಿದ ಭಕ್ತ ಸಮೂಹದಲ್ಲಿ ಶಾಂತಿಯುತ, ನೆಮ್ಮದಿಯ ಬಾಳಿಗೆ ಮಂಜುನಾಥ ದೇವರು ಅನುಗ್ರಹಿಸಬೇಕು ಎನ್ನುವುದು ಸಕಲರ ಅಭಿಪ್ರಾಯ.
ಹೆಗ್ಗಡೆಯವರ ಮನಸ್ಸಿಗೆ ನೋವಾಗುವ ಘಟನೆಯಾದರೂ ಯಾವುದು?
ದೇಶದ ರಾಜಧಾನಿ ದೂರದ ದೆಹಲಿಯಲ್ಲಿ ಅಮಾನುಷವಾಗಿ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಅತ್ಯಾಚಾರ ಪ್ರಕರಣ ನಡೆದಾಗ ದೇಶ-ವಿದೇಶದ ಜನತೆ ತಮ್ಮಲ್ಲಿರುವ ಅಕ್ರೋಶ ವ್ಯಕ್ತಪಡಿಸಿದ್ದರು. ಆದರೆ ನಮ್ಮ ರಾಜ್ಯದ ಧರ್ಮದ ನೆಲೆಬೀಡು ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ ಪ್ರಕರಣ ರಾಜ್ಯದ ಕೆಲವು ಕಡೆ ಸುದ್ದಿ ಮಾಡಿತೇ ಹೊರತು ರಾಜ್ಯದ ಗಡಿಯನ್ನು ಕೂಡ ದಾಟಿಲ್ಲ. ದೆಹಲಿ ಹಾಗೂ ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿನ ಭೀಕರತೆಗೇನು ಕಡಿಮೆಯಿರಲಿಲ್ಲ. ದೆಹಲಿಯ ೨೩ ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಎನ್ನುವ ಹುಡುಗಿಯ ಸಾವಿಗೆ ಕಣ್ಣಿರು ಸುರಿಸಿದ, ನಮ್ಮ ಜನ ಧರ್ಮಸ್ಥಳದ ೧೭ ವರ್ಷದ ಸೌಜನ್ಯಾಳ ಸಾವಿಗೆ ಮಾತ್ರ ಅಷ್ಟೊಂದು ಪ್ರಾಮುಖ್ಯತೆ ನೀಡಿಲ್ಲದಿರುವುದು ಬೇಸರದ ಸಂಗತಿ? ದೆಹಲಿಯ ಜೀವಕ್ಕೊಂದು ನ್ಯಾಯ, ಹಳ್ಳಿಯ ಜೀವಕ್ಕೊಂದು ನ್ಯಾಯವನ್ನು ಒದಗಿಸಿದ ನಾಗರಿಕರಲ್ಲಿಗ ಸಂಶಯದ ವಿಷಬೀಜವನ್ನು ಬಿತ್ತಲು ದುಷ್ಟಶಕ್ತಿಗಳು ಶ್ರಮಿಸುತ್ತಿವೆ.
ನ್ಯಾಯಕ್ಕೊಸ್ಕರ ಹೋರಾಡಿದ ಬಡ ಸೌಜನ್ಯಾಳ ಹೆತ್ತವರ ಹೋರಾಟಕ್ಕೆ ಪ್ರಕರಣ ನಡೆದು ವರ್ಷ ಒಂದಾದರೂ, ನ್ಯಾಯ ಸಿಕ್ಕಿಲ್ಲ. ಬಡ ಕುಟುಂಬದ ನೋವಿಗೆ ನ್ಯಾಯ ದೊರಕಿಸಿ ಕೊಡಬೇಕಾದ ನಮ್ಮ ಕಾನೂನು ಪಾಲಕರು ಹಾಗೂ ಕಾನೂನು ರಕ್ಷಕರು ಪ್ರಕರಣದ ನೈಜತೆಯನ್ನು ಭೇದಿಸುವಲ್ಲಿ ವಿಫಲರಾಗಿದ್ದಾರೆ ಎನ್ನುವಾಗ ಸಮಾಜದ ವ್ಯವಸ್ಥೆಯ ಕುರಿತು ಪ್ರಶ್ನೆಗಳು ಎದುರಾಗುತ್ತದೆ. ದಿನದಿಂದ ದಿನಕ್ಕೆ ಸಂಶಯಾತ್ಮಕ ಪ್ರಶ್ನೆಗಳು ಹೆಚ್ಚುತ್ತಿವೆಯೇ ಹೊರತು ಉತ್ತರ ಮಾತ್ರ ಶೂನ್ಯವಾಗಿದೆ. ಹಣ, ಅಧಿಕಾರ ಬಲದಿಂದ ನ್ಯಾಯ ದೇವತೆಯ ಕಣ್ಣಿಗೆ ಶಾಶ್ವತವಾಗಿ ಬಟ್ಟೆ ಕಟ್ಟಲಾಗಿದೆ. ದೇಶದ ಅನೇಕ ಪ್ರಕರಣಗಳಲ್ಲಿ ಕಾನೂನು ದ್ವಿಮುಖವಾಗಿ ಸಾಗಿ ನ್ಯಾಯ ದೊರಕದ ಸ್ಥಿತಿ ನಿರ್ಮಾಣವಾಗಿದೆ. ಉಜಿರೆಯ ಸೌಜನ್ಯ ಪ್ರಕರಣದಲ್ಲೂ ನೈಜಅಪರಾಧಿಗಳು ಸಿಗದೆ, ಪೊಲೀಸರ ವಿಳಂಭದಿಂದ ಪೂಜ್ಯ ಹೆಗ್ಗಡೆ ಹಾಗೂ ಕ್ಷೇತ್ರದ ಹೆಸರನ್ನು ಕೆಡಿಸುವ ಷಡ್ಯಂತ್ರ ರೂಪುಗೊಂಡಿವೆ ಎನ್ನುವುದು ಮೇಲ್ಮುಖವಾಗಿ ಗೋಚರವಾಗುತ್ತದೆ.
ಅಂದು ನಡೆದದ್ದಾದರೂ ಏನು ಸ್ವಾಮಿ?
ಅಂದು ೨೦೧೨ ರ ಅ.೯ ರಂದು ಸಂಜೆ ಕಾಲೇಜಿನಿಂದ ಮನೆಗೆ ಹೊರಟ ಸೌಜನ್ಯಾ (೧೭) ಮನೆಗೆ ತಲುಪಲೇ ಇಲ್ಲ . ಮನೆಯಲ್ಲಿ ಮಗಳಿಗೋಸ್ಕರ ಕಾಯುತ್ತಿದ್ದ ಹೆತ್ತವರು ದಿನಂಪ್ರತಿ ಕಾಲೇಜಿನಿಂದ ಕ್ಲಪ್ತ ಸಮಯದಲ್ಲಿ ಆಗಮಿಸುತ್ತಿದ್ದ ಮಗಳು ಆಗಮಿಸದಿದ್ದಾಗ ಆತಂಕಗೊಂಡಿದ್ದರು. ಸ್ಥಳಿಯರ ಜೊತೆಗೂಡಿ ರಾತ್ರಿಯಿಡಿ ಹುಡುಕಿದರೂ ಮಗಳು ಮಾತ್ರ ಸಿಗಲೇ ಇಲ್ಲಾ. ಮರುದಿನ ಬೆಳಿಗ್ಗೆಯೂ ಹುಡುಕಾಟ ಮುಂದುವರಿಸಿದಾಗ ಮಧ್ಯಾಹ್ನದ ವೇಳೆಗೆ ನೇತ್ರಾವತಿ ಸ್ನಾನ ಘಟ್ಟದಿಂದ ಸ್ವಲ್ಪ ದೂರದಲ್ಲಿ ಮುಖ್ಯ ರಸ್ತೆಯಿಂದ ಬಲ ತಿರುವು ಮೂಲಕ ಪಾಂಗಾಳಕ್ಕೆ ಹೋಗುವ ರಸ್ತೆ ಬದಿಯ ಕಾಡಿನಲ್ಲಿ ಸೌಜನ್ಯಳ ಮೃತದೇಹ ಸಿಕ್ಕಿತ್ತು. ಹೆತ್ತ ಜೀವಗಳಿಗೆ ತಮ್ಮ ಮಗಳನ್ನು ಆ ಪರಿಸ್ಥಿತಿಯಲ್ಲಿ ನೋಡಿ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು. ಆದರೆ ಹೆತ್ತವರ ನೋವು ಯಾರ ಮನಸ್ಸಿಗೂ ಅರ್ಥವಾಗಿಲ್ಲ. ಆ ಹೊತ್ತಿಗಾಗಲೇ ಅಪರಾಧಿಗಳು ತಮ್ಮ ರಕ್ತದ ಕೈಗಳನ್ನು ಪ್ರಸನ್ನೆಯಾಗಿ ಹರಿಯುತ್ತಿರುವ ನೇತ್ರಾವತಿಯಲ್ಲಿ ತೊಳೆದುಕೊಂಡು ಮನೆ ಸೇರಿದ್ದರು. ಆದರೆ ಸೌಜನ್ಯಳ ಹೆತ್ತ ಜೀವಗಳ ಪರಿಸ್ಥಿತಿಯನ್ನು ಓರ್ವ ತಂದೆಯಾಗಿಯೊ, ತಾಯಿಯಾಗಿಯೊ, ಅಣ್ಣ, ಅಕ್ಕ, ಬಂಧುವಾಗಿಯೋ ಮಾನವೀಯ ನೆಲೆಯಲ್ಲಿ ಯೋಚಿಸಿ ನೋಡಿದರೆ ಘಟನೆಯ ತೀವ್ರತೆ ಅರ್ಥವಾಗುತ್ತದೆ. ಆ ಮುಗ್ದ ಜೀವದ ಸಾವಿಗೆ ನ್ಯಾಯ ಒದಗಿಸಿಕೊಡ ಬೇಕಾಗಿದ್ದ ಆಗಿನ ಬಿಜೆಪಿ ಸರಕಾರ ಸರಿಯಾಗಿ ಆ ಘಟನೆಗೆ ನ್ಯಾಯ ಒದಗಿಸಿಕೊಡುವ ಕಿಂಚಿತ್ ಪ್ರಯತ್ನ ಕೂಡ ಮಾಡಿಲ್ಲ. ಈ ಪ್ರಕರಣದಲ್ಲಿ ಪೋಲಿಸರ ನಡೆಯೂ ಕೂಡ ಅನುಮಾನಕ್ಕೆ ದಾರಿ ಮಾಡಿ ಕೊಡುತ್ತಿದೆ. ಬಿಜೆಪಿ ಸರಕಾರ ಹಾಗೂ ಪೊಲೀಸ್ ಇಲಾಖೆ ಪ್ರಕರಣದ ಸೂಕ್ತ ತನಿಖೆ ಮಾಡಿದ್ದರೆ ಇಂದು ಧರ್ಮಸ್ಥಳ ಹಾಗೂ ಧರ್ಮವನ್ನು ಮೈಗೂಡಿಸಿಕೊಂಡ ವೀರೇಂದ್ರ ಹೆಗ್ಗಡೆಯವರ ಮೇಲೆ ವೃಥಾ ಆರೋಪಗಳು ಬರುತ್ತಿರಲಿಲ್ಲ ಎನ್ನುವುದು ಸ್ಪಷ್ಟ.
ಪ್ರಕರಣವನ್ನು ಆರಂಭದಲ್ಲಿಯೇ ಮುಚ್ಚಿಹಾಕುವ ಪ್ರಯತ್ನ ನಡೆದಿದ್ದವು ಅನ್ನೋದು ಸೌಜನ್ಯಾಳ ಹೆತ್ತವರ ಆರೋಪ. ಪ್ರಕರಣದಲ್ಲಿ ಕೆಲವೊಂದು ಪ್ರಭಾವಿ ವ್ಯಕ್ತಿಗಳ ಹೆಸರನ್ನು ತಳುಕು ಹಾಕಲಾಗಿದೆ. ಆರೋಪಿಗಳು, ಮೃತ ಸೌಜನ್ಯ ಹಾಗೂ ದೇವರಿಗೆ ಹೊರತಾಗಿ ಎಲ್ಲರೂ ಪ್ರಕರಣವನ್ನು ಕೇಳಿದ್ದಾರೆಯೇ ಹೊರತು ನೈಜತೆ ಏನೆಂಬುದು ಒಬ್ಬರಿಗೂ ತಿಳಿದಿಲ್ಲ. ಪ್ರಕರಣದ ತನಿಖೆ ನಡೆದು ನಿಜವಾದ ಆರೋಪಿಗಳಿಗೆ ಶಿಕ್ಷೆಯಾದರೆ ಸೌಜನ್ಯ ಎನ್ನುವ ಮುಗ್ದ ಆತ್ಮಕ್ಕೆ ಶಾಂತಿ ಸಿಗುತ್ತದೆ ಮಾತ್ರವಲ್ಲದೇ ಶ್ರೀ ಕ್ಷೇತ್ರದ ಮೇಲಿನ ಆರೋಪ ಹಾಗೂ ಹೆಗ್ಗಡೆಯವರ ಮೇಲಿನ ಕಳಂಕ ದೂರಾಗುತ್ತವೆ. ದೆಹಲಿ ಘಟನೆಯಂತೆ ಸೌಜನ್ಯಳ ಪ್ರಕರಣವನ್ನು ಕೇಂದ್ರ ಸರಕಾರ ಹಾಗೂ ಈಗಿನ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದಾಗ ಮಾತ್ರ ಈ ಘಟನೆಗೆ ನ್ಯಾಯ ಸಿಗಲು ಸಾಧ್ಯವಿದೆ.
ಸಿಕ್ಕಿಹಾಕಿಕೊಂಡ ಅಪರಾಧಿ?
ಸೌಜನ್ಯ ಕೊಲೆ ಪ್ರಕರಣ ಸಂಬಂಧ ಇನ್ನೊಂದು ವಾರದಲ್ಲಿ ಸರ್ಕಾರಕ್ಕೆ ಅಂತಿಮ ವರದಿ ನೀಡಲು ಸಿಐಡಿ ನಿರ್ಧರಿಸಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಕುಟುಂಬ ವರ್ಗದ ಪಾತ್ರವಿದೆ ಎಂದು ಕೆಲವರು ಆಪಾದನೆ ಮಾಡಿದ ಹಿನ್ನೆಲೆಯಲ್ಲಿ, ಸರ್ಕಾರದ ಸೂಚನೆ ಪ್ರಕಾರ, ಹೆಚ್ಚುವರಿ ತನಿಖೆ ನಡೆಸಿದ ಸಿಐಡಿ ಈಗ ಅಂತಿಮ ಹಂತ ತಲುಪುತ್ತಿದೆ. ಪ್ರಾರಂಭಿಕ ತನಿಖೆಯಲ್ಲಿ ಸಿಐಡಿ ೨೦೧೩ ರ ಜನವರಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆ ವರದಿಯಲ್ಲಿ ಆರೋಪಿ ಸಂತೋಷ್ ರಾವ್ ಸೌಜನ್ಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದಾನೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹೆಚ್ಚುವರಿ ತನಿಖೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತಪಡಿಸಿರುವ ಸಿಐಡಿ ಅಧಿಕಾರಿಗಳು, ಈಗ ಕೆಲವರು ಆರೋಪ ಮಾಡುತ್ತಿರುವ ವ್ಯಕ್ತಿಗಳು ಘಟನೆ ನಡೆದ ಸಂದರ್ಭದಲ್ಲಿ ಉಜಿರೆಯಲ್ಲಿ ಇರಲಿಲ್ಲ ಎಂಬ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಈ ಎಲ್ಲ ಅಂಶಗಳನ್ನು ಆಧರಿಸಿ, ಇನ್ನೊಂದು ವಾರದಲ್ಲಿ ಅಂತಿಮ ವರದಿ ನೀಡಲಿದೆ. ಪ್ರಕರಣದಲ್ಲಿ ಹೆಗ್ಗಡೆ ಕುಟುಂಬ ವರ್ಗದವರ ಕೈವಾಡವಿದೆ ಎನ್ನುವ ಆರೋಪ ವ್ಯಕ್ತವಾದ ನಂತರ ದಕ್ಷ ಅಧಿಕಾರಿ ಡಿಐಜಿ ಸೌಮೇಂದು ಮುಖರ್ಜಿ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್‌ಪಿ ಸಿರಿಗೌರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಆದರೆ ಹೊಸ ಆರೋಪ ಸಾಬೀತು ಮಾಡುವುದಕ್ಕೆ ಅಗತ್ಯವಾದ ಯಾವುದೇ ಅಂಶಗಳು ತನಿಖೆ ಸಂದರ್ಭದಲ್ಲಿ ಪತ್ತೆಯಾಗಿಲ್ಲ ಎನ್ನುವುದು ಅಧಿಕಾರಿಗಳ ಹೇಳಿಕೆ.
ವೈಜ್ಞಾನಿಕ ಪರೀಕ್ಷೆಯಲ್ಲಿ ರಾವ್ ಆರೋಪಿ:
ಮುಖ್ಯವಾಗಿ ಆರೋಪಿ ಸಂತೋಷ್ ರಾವ್ ಹಾಗೂ ಸೌಜನ್ಯ ಮೃತ ದೇಹದಲ್ಲಿ ದೊರೆತ ಅಂಶಗಳನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದಾಗ ಆತನೇ ಈ ಕೃತ್ಯ ಎಸಗಿದ್ದಾನೆ ಎನ್ನುವುದು ದೃಢಪಟ್ಟಿದೆ. ಈ ವಿಚಾರದ ಕುರಿತಾಗಿ ಸಿಐಡಿ ದೋಷಾರೋಪ ಪಟ್ಟಿಯಲ್ಲೂ ಹೇಳಿರುವುದನ್ನು ಗಮನಿಸಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆರೋಪಿ ಸಂತೋಷ್ ಕುಮಾರ್ ವಿಕೃತ ಮನಸ್ಥಿತಿಯವನಾಗಿದ್ದು, ಅಸಹಾಯಕ ಸ್ಥಿತಿಯಲ್ಲಿ ಸಿಕ್ಕ ಸೌಜನ್ಯಳ ಮೇಲೆ ಅತ್ಯಚಾರ ಎಸಗಿ ಕೊಲೆ ಮಾಡಿದ್ದ. ಪೊಲೀಸರು ಆತನನ್ನು ಬಂಧಿಸಿದಾಗ ಮೊದಲು ಕೊಲೆ ಮಾಡಿದ್ದು ಮಾತ್ರ ಹೌದು ಎಂದು ಒಪ್ಪಿದ್ದ. ನಂತರ ಹೆಚ್ಚಿನ ವಿಚಾರಣೆ ನಡೆಸಿದಾಗ ಅತ್ಯಾಚಾರದ ಸಂಗತಿಯನ್ನೂ ಬಾಯ್ಬಿಟ್ಟಿದ್ದ ಎಂದು ಸಿಐಡಿ ಮೂಲಗಳು ತಿಳಿಸಿವೆ. ಆತ ಅತ್ಯಂತ ವಿಕೃತವಾಗಿ ಅತ್ಯಾಚಾರ ಎಸಗಿದ್ದ. ಆ ಸಂದರ್ಭ ಆತನ ಮರ್ಮಾಂಗಕ್ಕೂ ಗಾಯವಾಗಿತ್ತು. ನಂತರ ಆತ ಸೌಜನ್ಯಳ ಗುಪ್ತಾಂಗದೊಳಗೆ ಮರಳನ್ನು ಹಾಕಿ ಪರಾರಿಯಾಗಿದ್ದ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಸೌಜನ್ಯ ಹತ್ಯೆಯನ್ನು ಸಂತೋಷ್ ರಾವ್ ಮಾಡಿದ್ದಾನೆ ಎನ್ನುವುದಕ್ಕೆ ಬೇಕಾದ ಸಾಕ್ಷ್ಯಗಳು ನಮ್ಮ ಬಳಿ ಇದೆ. ಸಿಬಿಐ ಸೇರಿದಂತೆ ಬೇರೆ ಯಾವುದೇ ತನಿಖಾ ಸಂಸ್ಥೆ ತನಿಖೆ ನಡೆಸಿದರೂ, ಇದಕ್ಕಿಂತ ಭಿನ್ನವಾದ ಸಂಗತಿ ಹೊರಬರಲು ಸಾಧ್ಯವಿಲ್ಲ ಎನ್ನುವುದನ್ನು ಸಿಐಡಿ ಅಧಿಕಾರಿಗಳು ಬಹಿರಂಗವಾಗಿ ಸವಾಲು ಹಾಕಬಲ್ಲರು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎನ್ನುವಾಗ ಹೆಗ್ಗಡೆಯವರ ಮೇಲಿನ ಆರೋಪ ಷಡ್ಯಂತ್ರ ಎನ್ನುವುದು ಸ್ಪಷ್ಟ ತಾನೇ?
ಪ್ರಕರಣದ ನಂತರದಲ್ಲಿ ಹೆಗ್ಗಡೆಯವರು ಏನೆನ್ನುತ್ತಾರೆ?
ಸೌಜನ್ಯಾ ಅತ್ಯಾಚಾರ -ಕೊಲೆ ಪ್ರಕರಣ ಹಾಗೂ ಧರ್ಮಸ್ಥಳದಲ್ಲಿ ನಡೆದ ಜೋಡಿ ಕೊಲೆಯು ಕ್ಷೇತ್ರದಿಂದ ಹೊರಗೆ ನಡೆದಿದ್ದರೂ ಈ ಬಗ್ಗೆ ಸಮರ್ಪಕವಾದ ತನಿಖೆ ನಡೆಸುವಂತೆ ಘಟನೆಯ ಬೆನ್ನಲ್ಲೇ ಆಗಿನ ಗೃಹ ಸಚಿವರಿಗೆ ದೂರವಾಣಿ ಕರೆ ಮಾಡಿ ಒತ್ತಾಯಿಸಿದ್ದೆ. ಮುಂದೆ ಸಿಐಡಿ ತನಿಖೆಗೆ ಆಗ್ರಹಿಸಿದ್ದೆ. ತಾನಾಗಲಿ, ತನ್ನ ಕುಟುಂಬದವರಾಗಲಿ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ತನ್ನ ತಮ್ಮನ ಮಗ ನಿಶ್ಚಲನ ಹೆಸರನ್ನು ಎಳೆಯಲಾಗಿದೆ. ಆತ ನ್ಯೂಯಾರ್ಕ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದಾನೆ. ಘಟನೆ ನಡೆದ ಸಂದರ್ಭದಲ್ಲೂ ಆತ ಅಲ್ಲಿಯೇ ಇದ್ದ ಎಂದು ಸ್ಪಷ್ಟಪಡಿಸಿದ ಹೆಗ್ಗಡೆ ಪಾಸ್‌ಪೋರ್ಟ್ ಮತ್ತು ಬ್ಯಾಂಕ್ ವ್ಯವಹಾರದ ದಾಖಲೆಗಳನ್ನು ಮುಂದಿಟ್ಟಿದ್ದರು. ಸೌಜನ್ಯಾ ಕೊಲೆ ನಡೆದ ಬಳಿಕ ಮನೆಯವರು ತನ್ನ ಬಳಿ ಬಂದಿದ್ದರು. ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದೆ. ಆ ಬಳಿಕ ಅವರ ಮನೆಗೆ ನಾಗರಿಕ ಸೇವಾ ಟ್ರಸ್ಟ್‌ನವರು, ತಿಮರೋಡಿ ಮಹೇಶ್ ಶೆಟ್ಟಿ, ಕೇಮಾರು ಶ್ರೀಗಳು ಭೇಟಿ ನೀಡಿದ ಬಳಿಕ ಇಡೀ ಪ್ರಕರಣ ತಿರುವು ಪಡೆದಿದೆ.
ನನ್ನ ಸೇವಾ ಕಾರ್ಯಗಳನ್ನು ಎಂದಿಗೂ ನಿಲ್ಲಿಸುವುದಿಲ್ಲ. ನನ್ನಲ್ಲಿ ಆತ್ಮವಿಶ್ವಾಸ, ಆತ್ಮಾಭಿಮಾನದ ಕೊರತೆ ಆಗಿಲ್ಲ. ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆ ಬಗ್ಗೆ ಸಂಪೂರ್ಣ ಜವಾಬ್ದಾರಿ ಸರ್ಕಾರ, ಬೆಳ್ತಂಗಡಿ ಶಾಸಕರದ್ದು. ನಾನು ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಶ್ರೀಕ್ಷೇತ್ರದ ಅಭಿಮಾನಿಗಳ ಬೃಹತ್ ಸಮಾವೇಶದಲ್ಲಿ ಹೇಳಿಕೆ ನೀಡಿದ್ದಾರೆ.
ಸೌಜನ್ಯಾ ಪ್ರಕರಣದ ತನಿಖೆಗೆ ಪೂರ್ಣ ಸಹಕಾರ ನೀಡಿದ್ದೇನೆ. ಆಕೆ ಕಾಲವಾದಾಗ ಹೃದಯ ಪೂರ್ವಕವಾಗಿ ಅವರ ಮನೆಯವರೊಂದಿಗೆ ಸ್ಪಂದಿಸಿದ್ದೇನೆ. ತನಿಖೆ ಮಾಡುವುದು ಸರ್ಕಾರ ಹಾಗೂ ಪೊಲೀಸರ ಕೆಲಸ. ತನಿಖೆಯಾಗಿಲ್ಲ ಎಂದರೆ ಅದು ಪೊಲೀಸರು ಹಾಗೂ ಸರ್ಕಾರಕ್ಕೆ ಅವಮಾನ. ಆರಂಭದಲ್ಲೇ ಸಿಐಡಿ ತನಿಖೆ ನಡೆಸಿದ್ದು, ತನಿಖೆಯ ವಿಚಾರಗಳನ್ನು ಅವರು ಬಹಿರಂಗ ಪಡಿಸಿರಲಿಲ್ಲ. ಈ ಬಗ್ಗೆ ಅವರನ್ನು ಕೇಳಿದಾಗ ತನಿಖಾ ಸಂದರ್ಭ ಮಾಹಿತಿಗಳನ್ನು ಬಹಿರಂಗ ಪಡಿಸಲು ಕಾನೂನು ಪ್ರಕಾರ ಸಾಧ್ಯವಿಲ್ಲ ಎಂದಿರುವುದೇ ಜನರಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಮುಂದೆ ಸಿಬಿಐ ಅಥವಾ ಯಾವುದೇ ತನಿಖೆಗಳಾಗಲಿ ಅದನ್ನು ನಡೆಸುವುದು ಮತ್ತು ಸತ್ಯ ಹೊರತರುವ ಜವಾಬ್ದಾರಿ ಎಂದು ಸ್ಪಷ್ಟವಾಗಿ ನುಡಿದಿದ್ದರು.
ಧರ್ಮಸ್ಥಳದಲ್ಲಿ ಯಾವುದೇ ಭೂ ಮಾಫಿಯಾ ಇಲ್ಲ. ಯಾಕೆ ತಪ್ಪು ಅಭಿಪ್ರಾಯಗಳು ಮೂಡುತ್ತಿವೆ ಎನ್ನುವುದು ತಿಳಿಯುತ್ತಿಲ್ಲ. ಶ್ರೀಮಂತರು ನಮ್ಮಿಂದ ದೂರ ಇದ್ದಾರೆ ಎಂದು ತಿಳಿದುಕೊಂಡಿದ್ದೆ. ಆದರೆ ಇಂದು ಬಡವರನ್ನೂ ದೂರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಕೆಲವು ಶಕ್ತಿಗಳು ಅನಗತ್ಯ ಗೊಂದಲ ಹುಟ್ಟಿಸುವ ಪ್ರಯತ್ನ ನಡೆಸಿದ್ದಾರೆ. ನನ್ನ ಕೆಲಸ ನಾನು ನಿಲ್ಲಿಸುವುದಿಲ್ಲ. ಇಂದಿನಿಂದ ಹೊಸ ಹುರುಪಿನಿಂದ, ಹೊಸ ಯೋಜನೆಗಳನ್ನು ಸಾಕಾರಗೊಳಿಸಲು ಶ್ರಮಿಸುತ್ತೇನೆ.
ಧರ್ಮದ ನೆಲೆಬೀಡು ಧರ್ಮಸ್ಥಳದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ಇಲ್ಲಿಯವರೆಗೆ ಪೊಲೀಸರ, ಸರಕಾರದ ವೈಫಲ್ಯದಿಂದಾಗಿ ತನಿಖೆ ನಡೆದಿಲ್ಲದಿರುವುದೇ ಇಂದು ಹೆಗ್ಗಡೆ ಹಾಗೂ ಶ್ರೀಕ್ಷೇತ್ರಕ್ಕೆ ಮಸಿ ಬಳಿಯುವ ಕಾರ್ಯವಾಗಿದೆ. ಇಲಾಖೆ ಸೂಕ್ತ ರೀತಿಯಲ್ಲಿ ಪ್ರಕರಣವನ್ನು ಬೇದಿಸಿ, ಮುಗ್ದೆಯ ಆತ್ಮಕ್ಕೆ ಶಾಂತಿ ದೊರಕಿಸುವುದರೊಂದಿಗೆ ಅಂಟಿಕೊಂಡಿರುವ ಕಳಂಕವನ್ನು ಹೋಗಲಾಡಿಸಬೇಕು. ಸತ್ಯತೆ ಜಗತ್ತಿನ ಜನತೆಗೆ ತಿಳಿಯಬೇಕು. ತಪ್ಪು ಯಾರು ಮಾಡಿದ್ದರೂ, ಕಾನೂನಿನ ಮಟ್ಟಿಗೆ ಎಲ್ಲರೂ ಸಮಾನ ಎನ್ನುವ ಭಾವನೆ ನಮ್ಮದು. ಆದ್ದರಿಂದ ಈ ಪ್ರಕರಣವು ಶೀಘ್ರದಲ್ಲಿ ಇತ್ಯರ್ಥವಾಗಲಿ. ಮುಗ್ದೆ ಸೌಜನ್ಯಳ ಆತ್ಮಕ್ಕೆ ಶಾಂತಿ ದೊರಕಲಿ. ಕ್ಷೇತ್ರಕ್ಕೆ ಅಂಟಿದ ಕಪ್ಪು ಕಲೆ ಹಾಗೂ ಹೆಗ್ಗಡೆಯವರ ಮೇಲಿನ ಕಳಂಕಗಳು ದೂರಾಗಲಿ ಎನ್ನುವುದು ಎಲ್ಲರ ಹಾರೈಕೆ.
ಗಣ್ಯರು ಏನಂತಾರೆ?
ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ಅಪನಂಬಿಕೆ ಬರುವಂತಹ ಸಂಚುಗಳು ನಡೆಯುತ್ತಿದೆ. ಧರ್ಮಸ್ಥಳದಂತಹ ಕ್ಷೇತ್ರಗಳ ಮೇಲಿನ ನಂಬಿಕೆ ಹೊರಟು ಹೋದರೆ ಶ್ರದ್ಧಾ ಕೇಂದ್ರಗಳೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.
ಡಾ.ಡಿ.ವೀರೇಂದ್ರ ಹೆಗ್ಗಡೆ-ಧರ್ಮಾಧಿಕಾರಿ, ಧರ್ಮಸ್ಥಳ
ಕ್ಷುಲ್ಲಕ ವಿಚಾರವನ್ನು ಮುಂದಿಟ್ಟು, ಕೆಲವು ದುಷ್ಕರ್ಮಿಗಳು ಮಾತನಾಡುತ್ತಿದ್ದು, ಸಿಐಡಿ ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕ್ಷೇತ್ರದ ಚಾರಿತ್ರ್ಯಹರಣ ಮಾಡುವುದಕ್ಕೆ ಪೂರ್ಣ ವಿರಾಮ ಹಾಕಬೇಕು. ಈ ಕುರಿತು ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳ ಗಮನಕ್ಕೆ ತಂದು ಸತ್ಯಾಂಶ ಹೊರತರುವಲ್ಲಿ ಪ್ರಯತ್ನಿಸುತ್ತೇನೆ.
ವಿನಯಕುಮಾರ್ ಸೊರಕೆ-ನಗರಾಭಿವೃದ್ಧಿ ಸಚಿವ
ತುಳುನಾಡಿನ ಧಾರ್ಮಿಕ ಕ್ಷೇತ್ರಕ್ಕೆ ಧಕ್ಕೆ ತರುವಂತಹ ಶಕ್ತಿಗಳನ್ನು ಧೈರ್ಯವಾಗಿ ಎದುರಿಸುತ್ತೇವೆ. ಸಮಾಜವು ಕ್ಷೇತ್ರದೊಂದಿಗಿದೆ. ಪ್ರತಿಭಟನೆಗಳು ಪೊಲೀಸರ ವಿರುದ್ಧ ನಡೆದು ಸತ್ಯ ಹೊರಬರಲಿ. ಎಂದೆಂದಿಗೂ ಸತ್ಯದ ಜೊತೆ ನಾವಿದ್ದೇವೆ.
ಡಾ.ಎಂ.ಎನ್.ರಾಜೇಂದ್ರಕುಮಾರ್-ಅಧ್ಯಕ್ಷ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್.
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಡಾ.ಹೆಗ್ಗಡೆಯವರ ಹೆಸರನ್ನು ಎಳೆತಂದು ಅವರ ಗೌರವಕ್ಕೆ ಚ್ಯುತಿ ತರಲು ಪ್ರಯತ್ನಿಸಿರುವುದು ಖಂಡನೀಯ. ಧರ್ಮಾಧಿಕಾರಿಯವರ ನೋವು ನಮ್ಮೆಲ್ಲರ ನೋವಾಗಿದೆ. ಅವರು ನಂಬಿದಂತ ಸತ್ಯ ಅವರನ್ನು ಕಾಪಾಡಿಕೊಂಡು ಬರುತ್ತದೆ. ಡಾ.ಎಂ.ಮೋಹನ್ ಆಳ್ವ-ಅಧ್ಯಕ್ಷ, ಆಳ್ವಾಸ್ ಶಿಕ್ಷಣ ಸಂಸ್ಥೆ.
No comments:
Post a Comment