Friday, 22 November 2013

ಹೆಣ್ಣು ಮಕ್ಕಳೇ ಮಾನಸಿಕ ಎಚ್ಚರಿಕೆಯೊಂದಿಗೆ ಧೈರ್ಯ ತಂದುಕೊಳ್ಳಿ
   -ಭವಿಷ್ಯದ ಅಪಾಯಕಾರಿ ಘಟನೆಗಳಿಗೆ ಇದುವೇ ಮಹಾನ್ ಆಯುಧ
ದೆಹಲಿಯ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ, ಉಜಿರೆಯ ಸೌಜನ್ಯಳ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣಗಳು ಮನದಿಂದ ಮಾಸುವ ಮೊದಲೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಣಿಪಾಲದಲ್ಲಿ ಇಂತದೊಂದು ಘಟನೆ ನಡೆಯಿತಲ್ಲ ಎಂದು ಜನಸಾಮಾನ್ಯರು ಒಮ್ಮೆ ಆತಂಕಿತರಾಗಿದ್ದರು. ಆದರೆ ಇಂತಹ ಘಟನೆಗಳು ಸರ್ವೇ ಸಾಮಾನ್ಯವಾಗಿದೆ ಎನ್ನುವುದು ಜನತೆಯ ಬಾಯಿಯಿಂದ ಕೇಳಿಬರುತ್ತಿದೆ.
ಜೂ.೨೦ ರಂದು ರಾತ್ರಿ ಹೆಸರಾಂತ ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದ ಕೇರಳ ಮೂಲದವಳಾದ ಆಕೆ ಗ್ರಂಥಾಲಯದಿಂದ ತನ್ನ ಫ್ಲ್ಯಾಟಗೆ ಹಿಂತಿರುಗುತ್ತಿದ್ದಾಗ ಅಪಹರಿಸಿ ಸಾಮೂಹಿಕ ಅತ್ಯಾಚಾರ ವೆಸಗಿದ್ದರು ಎನ್ನುವುದಾಗಿ ಬಿಂಬಿತವಾಗಿತ್ತು. ಇದು ಎಷ್ಟರಮಟ್ಟಿಗೆ ಸರಿಯಾಗಿದೆ ಎನ್ನುವುದು ನಾವು ಅರಿಯಬೇಕಿದೆ. ನಿಜವಾಗಿ ಆಕೆಯನ್ನು ಅಪಹರಿಸಿರುವುದೇ? ಅಪಹರಿಸಿ ಆಕೆಯನ್ನು ಬಲತ್ಕಾರ ಮಾಡಿದ್ದಾರೆಯೇ? ಯಾವ ರೀತಿ, ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಹೀಗೆ ಹಲವಾರು ಪ್ರಶ್ನೆಗಳು ಮೂಡುವುದು ಸಹಜ. ಅಲ್ಲದೇ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ನಡೆಸಲಾಗಿದ್ದರೂ, ಸುಮಾರು ೧೨ ದಿನಗಳವರೆಗೆ ಆಕೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಸಂಶಯಕ್ಕೆ ಎಡೆಮಾಡಿದೆ. ಇಂತಹ ಅತ್ಯಾಚಾರಗಳು ಮಣಿಪಾಲದಲ್ಲಿ ಸಾಮಾನ್ಯವೇನಲ್ಲ. ಆದರೆ ಅವತ್ತು ಮಾತ್ರ ರಾತ್ರಿ ಪಾಳಿಯಲ್ಲಿ ಕಾವಲು ಕಾಯುತ್ತಿದ್ದ ವ್ಯಕ್ತಿಯಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಮೆಡಿಕಲ್ ವಿದ್ಯಾರ್ಥಿನಿ ಗ್ರಂಥಾಲಯದಿಂದ ಹೊರಗೆ ಬರುವುದಕ್ಕಿಂತ ಶಂಕಿತ ಆರೋಪಿ ಆನಂದನ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದು, ತಾನೀಗ ಲೈಬ್ರೆರಿಯಿಂದ ಹೊರಟಿದ್ದೇನೆ ಎನ್ನುವ ಸಂದೇಶದ ಜಾಡನ್ನು ಹಿಡಿದು ಪೊಲೀಸರು ತನಿಖೆ ನಡೆಸಿದ್ದರು. ವೈದ್ಯಕೀಯ ವಿದ್ಯಾರ್ಥಿನಿಯೊರ್ವಳು ಸಾಮಾನ್ಯ ಆಟೋ ಚಾಲಕನಾಗಿರುವ ಆನಂದನಿಗೆ ಸಂದೇಶ ಕಳುಹಿಸಿದ್ದಾಳೆ ಎಂದರೆ ಅವರಿಬ್ಬರೂ ಪ್ರೇಮಿಗಳೇ ಎನ್ನುವ ಸಂಶಯ ಎಲ್ಲರಲ್ಲೂ ಮೂಡುತ್ತದೆಯಲ್ಲವೇ? ಹೀಗೆ ಪ್ರಕರಣವನ್ನು ಭೇದಿಸಿದ್ದಾರಂತೆ? ಸಂದೇಶ ಸ್ವೀಕರಿಸಿದ ಆಕೆಯನ್ನು ಕರೆದುಕೊಂಡು ಹೋಗಲು ಆನಂದ ಆಟೋದಲ್ಲಿ ಬಂದಿದ್ದಾಗ ಆಟೋದೊಳಗಿದ್ದ ಆತನ ಇಬ್ಬರು ಸ್ನೇಹಿತರು ಕಂಠಪೂರ್ತಿ ಕುಡಿದಿರುವುದನ್ನು ಗಮನಿಸಿ, ಅವನೊಂದಿಗೆ ಹೋಗಲು ನಿರಾಕರಿಸಿದ್ದಳು. ಈ ಸಂದರ್ಭದಲ್ಲಿ ಬಲವಂತವಾಗಿ ಆಕೆಯನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋದ ಅವರು ಆಕೆಯನ್ನು ಬಲತ್ಕರಿಸಿದ್ದರಂತೆ? ನಂತರ ಅವಳನ್ನು ಜೀವಂತವಾಗಿ ಆಕೆಯ ವಾಸವಾಗಿರುವ ಅಪಾರ್ಟ್‌ಮೆಂಟ್ ಸಮೀಪ ತಂದು ಬಿಟ್ಟು ಹೋಗಿದ್ದಾರಂತೆ? ಅಬ್ಬಾ ಏನಿದು ಅಂತೆ ಕಂತೆಗಳ ಸಂತೆ ಎನ್ನುವುದಾಗಿ ಎಲ್ಲರಿಗೂ ಸಂಶಯ, ಕುತೂಹಲ ಜಾಸ್ತಿಯಾಗುತ್ತಿದೆ ಅಲ್ಲವೇ? ಖಂಡಿತಾ ಆ ರೀತಿ ಆಗಲೇ ಬೇಕು. ಇಂತಹ ವಿಷಯವನ್ನು ತಿಳಿದುಕೊಳ್ಳುವಾಗಲೂ ಎಲ್ಲರಿಗೂ ಆತುರವಿದ್ದೆ ಇರುತ್ತದೆ. ಆ ನಿಟ್ಟಿನಲ್ಲಿಯೇ ಕೆಲವೊಂದು ಪ್ರಶ್ನೆಗಳನ್ನು ವಿಷಯದ ಮಧ್ಯದಲ್ಲಿ ತುರುಕಿದ್ದೇನೆ. ಈ ಪ್ರಕರಣದ ಕುರಿತು ತಿಳಿದುಕೊಳ್ಳುವಾಗ ನನಗೆ ಹುಟ್ಟಿದ ಕೆಲವೊಂದು ಅನುಮಾನಗಳೇ ಇಂದು
ಪ್ರಶ್ನಾ ರೂಪತಾಳಿದೆ.
ಮಣಿಪಾಲ ವಿಶ್ವವಿದ್ಯಾನಿಲಯ ದೇಶ-ವಿದೇಶದಲ್ಲಿಯೇ ಪ್ರಸಿದ್ಧಿ ಪಡೆದಿದ್ದು, ಹಳ್ಳಿಯ ಜನತೆಗೆ ಫ್ಯಾಶನ್ ಹಾಗೂ ಎಂ ಟಿವಿಯ ಸೊಬಗನ್ನು ಉಣಬಡಿಸಿದ ಕೀರ್ತಿ ಏನಿದ್ದರೂ, ಮಣಿಪಾಲ ವಿವಿಯ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ. ಮನೆಯಲ್ಲಿ ಬೇಕಾದಷ್ಟು ಹಣವಿದ್ದರೂ, ಬಿಕ್ಷುಕನಿಗಿಂತಲೂ ಕಡೆಯಾದ ಬಟ್ಟೆಯನ್ನು ಧರಿಸಿ, ರಾಜರೋಷವಾಗಿ ಜನರ ಮಧ್ಯದಲ್ಲಿ ಓಡಾಡುವುದು, ಸಾರ್ವಜನಿಕ ಸ್ಥಳದಲ್ಲಿಯೇ ಸಿಗರೇಟುಗಳಿಂದ ಯಾವ ಕಾರ್ಖಾನೆಗಳಿಗೂ ಕಡಿಮೆಯಿಲ್ಲವೆನ್ನುವಂತೆ ಹೊಗೆ ಬಿಡುವುದು, ಅನೇಕ ಬಾರ್ ಅಂಡ್ ರೆಸ್ಟೋರೆಂಟ್‌ಗಳು ತಡರಾತ್ರಿಯವರೆಗೂ ಕಾರ್ಯನಿರ್ವಹಿಸುವುದು, ಇವರ ಅನೈತಿಕ ವ್ಯವಹಾರಕ್ಕಾಗಿಯೇ ಅನೇಕ ಲಾಡ್ಜ್‌ಗಳು ಪಲ್ಲಂಗವನ್ನು ತಯಾರಿಸಿರುವುದು. ಇಲ್ಲಿ ಅಭ್ಯಾಸ ಮಾಡುತ್ತಿದ್ದ ಶೇ.೮೦ರಷ್ಟು ವಿದ್ಯಾರ್ಥಿಗಳು ಮೇಲೆ ತಿಳಿಸಿದ ಎಲ್ಲಾ ಸುಖವನ್ನು ಅನುಭವಿಸಿದವರೇ? ಇದಕ್ಕೆ ತಲೆಯಾಡಿಸುತ್ತಾ ಮಣಿಪಾಲ ವಿಶ್ವವಿದ್ಯಾನಿಲಯ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಅನೇಕ ಬಾರಿ ಇಂತಹ ಪ್ರಕರಣಗಳು ನಡೆದಿದ್ದರೂ, ಆಡಳಿತ ಮಂಡಳಿಯ ಪ್ರಬಾವದಿಂದ ಅವುಗಳು ಬೆಳಕಿಗೆ ಬರಲೇ ಇಲ್ಲಾ. ಈ ಪ್ರಕರಣವೂ ಕೂಡ ಬೆಳಕಿಗೆ ಬರುತ್ತಿರಲಿಲ್ಲ. ಎಂದಿನಂತೆ ಕಾರ್ಯನಿರ್ವಹಿಸುವ ವಾಚ್‌ಮೆನ್ ಅಂದು ಇದ್ದಿದ್ದರೆ ಸದ್ದಿಲ್ಲದೇ ಈ ಪ್ರಕರಣ ಮುಚ್ಚಿಹೋಗುತ್ತಿತ್ತು. ಆದರೆ ಅತ್ಯಂತ ಗಂಭೀರವಾದ ಗ್ಯಾಂಗ್‌ರೇಪ್ ಪ್ರಕರಣ ಬಯಲಿಗೆ ಬರಲು ಮೂಲ ಕಾರಣಕರ್ತ ಮಣಿಪಾಲ ವಿವಿ ಗ್ರಂಥಾಲಯದ ಸೆಕ್ಯುರಿಟಿ ಸಿಬ್ಬಂದಿ. ಆದರೆ ಒಬ್ಬಳು ಹೆಣ್ಣು ಮಗಳಿನ ಅಪಹರಣ ಪ್ರಕರಣ ಬೆಳಕಿಗೆ ತರಲು ಯತ್ನಿಸಿದ ಈ ಸಿಬ್ಬಂದಿಯ ಕರ್ತವ್ಯ ದಕ್ಷತೆ, ಪ್ರಾಮಾಣಿಕತೆ, ಸಾಮಾಜಿಕ ಕಾಳಜಿ, ಜೀವಪರ ನಿಲುವುಗಳ ಪ್ರಶ್ನಿಸದೆ, ಸರಕಾರ, ಪೊಲೀಸ್ ಇಲಾಖೆಯನ್ನು ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ. ಆದರೆ ಸತ್ಯಾಂಶವೆನೆಂದರೆ ಇವರ ಹೊಗಳಿಕೆಗೆ ಕಾರಣೀಕರ್ತ, ಮೂಲಬಿಂದು ಸೆಕ್ಯುರಿಟಿ ಸಿಬ್ಬಂದಿ ಮಾತ್ರ ಇಂದು ಯಾರಿಗೂ ಬೇಡವಾಗಿದ್ದಾನೆ.
ಸತ್ಯ ಎಷ್ಟು ಕಹಿಯಾಗಿರುತ್ತದೆ. ತಾನು ಪ್ರಾಮಾಣಿಕವಾಗಿ ಇರುತ್ತೇನೆ. ಪ್ರಪಂಚವನ್ನು ಸರಿಮಾಡುತ್ತೇನೆ ಎಂದು ಬಡವನಾದವ ಮನ ಮಾಡಿದರೆ ಆತ ಎಲ್ಲರಿಂದ ನಿರ್ಲಕ್ಷ್ಯಕ್ಕೊಳಗಾಗುತ್ತಾನೆ ಎನ್ನುವುದು ಆತ ಅರಿಯಬೇಕಿತ್ತು. ಆತ ಅದನ್ನು ಅರಿಯದೇ ಸತ್ಯಾಂಶವನ್ನು ಜನತೆಗೆ ಬಿತ್ತರಿಸುವ ಮನಮಾಡಿದ. ಪರಿಣಾಮವಾಗಿ ಆತ ಇಂದು ಕೆಲಸ ಕಳೆದು ಕೊಳ್ಳುವಂತ ಪರಿಸ್ಥಿತಿ. ಮೊದಲಿನ ಘಟನೆಗಳು ಇದೇ ರೀತಿ ಮುಚ್ಚಿ ಹೋಗಿವೆ ಎನ್ನುವುದು ಸಾಮಾನ್ಯನಿಗೂ ಅರಿವಿಗೆ ಬರುತ್ತದೆ. ಅತ್ಯಾಚಾರ ಪ್ರಕರಣ ನಡೆದು ಸಿಸಿ ಕ್ಯಾಮರಾದ ಮೂಲದ ಆರೋಪಿಗಳ ಜಾಡನ್ನು ಹಿಡಿದ ಪೊಲೀಸರು ಮೂವರನ್ನು ಬಂದಿಸಿದ್ದಾರೆ. ಪ್ರಮುಖ ಆರೋಪಿ ಯೋಗೀಶ್ ಪೂಜಾರಿ, ಹರಿಪ್ರಸಾದ ಹಾಗೂ ಆನಂದನನ್ನು ಬಂಧಿಸಲಾಗಿದೆ. ಇತ್ತೀಚಿಗೆ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿದ್ದಾರೆ ಎನ್ನುವ ನೆಲೆಯಲ್ಲಿ ಹರೀಂದ್ರ ಪೂಜಾರಿ, ಬಾಲಚಂದ್ರ ಪೂಜಾರಿ ಅವರುಗಳನ್ನು ಬಂಧಿಸಿದ್ದಾರೆ ಎನ್ನುವಾಗ ಪೊಲೀಸರು ಕಾರ್ಯತತ್ಪರತೆಗೆ ಮೆಚ್ಚಲೇ ಬೇಕು ಅಲ್ಲವೇ?
ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು, ಮಣಿಪಾಲ ವಿವಿ ಆಡಳಿತ ಮಂಡಳಿ, ಮಾಹಿತಿದಾರರು, ಪೊಲೀಸ್ ಸಿಬ್ಬಂದಿಯನ್ನು ಕೊಂಡಾಡುವ ಪೊಲೀಸ್ ಅಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರನ್ನು ಕೊಂಡಾಡುತ್ತಿದ್ದಾರೆಯೇ ವಿನಃ ಯಾರೊಬ್ಬರೂ ವಿದ್ಯಾರ್ಥಿನಿಯ ಅಪಹರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಸೆಕ್ಯೂರಿಟಿ ಸಿಬ್ಬಂದಿಯನ್ನು ಈ ನಡುವೆ ಮರೆತು ಬಿಟ್ಟಿದ್ದಾರೆ. ಮಣಿಪಾಲ ವಿವಿ ಆಡಳಿತ ಮಂಡಳಿ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ೩ ಲಕ್ಷ ರೂ.ಬಹುಮಾನ ನೀಡುತ್ತೇವೆ ಎಂದು ಪೊಲೀಸ್ ಇಲಾಖಾಧಿಕಾರಿಗಳ ಮೂಲಕ ಘೋಷಣೆ ಮಾಡಿದೆ. ಇಲಾಖೆಯು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೨ಲಕ್ಷ ರೂ ಬಹುಮಾನ ಘೋಷಿಸಿದೆ. ಆದರೆ ಪ್ರಕರಣ ಬೆಳಕಿಗೆ ಬರಲು ಕಾರಣಕರ್ತನಾದ ತನ್ನದೇ ಸಂಸ್ಥೆಯ ಗ್ರಂಥಾಲಯದ ಸೆಕ್ಯೂರಿಟಿ ಸಿಬ್ಬಂದಿಗೆ ಬಹುಮಾನವಾಗಲೀ, ಭಡ್ತಿ ನೀಡುವುದರ ಬದಲು ಅಮಾನತಿನಂಥ ಶಿಕ್ಷೆ ವಿಧಿಸಿದೆ. ವಿವಿಯ ಈ ಕೃತ್ಯದಿಂದಾಗಿ ಪ್ರಕರಣ ಬಯಲಾಗದೇ, ಅಲ್ಲಿಯೇ ಮುಚ್ಚಿ ಹೋಗಬೇಕಾಗಿತ್ತು ಎನ್ನುವ ಉದ್ದೇಶವಿತ್ತು ಎಂದು ನಾಗರಿಕ ಸಮಾಜದಲ್ಲಿ ಸಂಶಯ ಹರಡುವಂತೆ ಮಾಡಿದೆ.
ವಿವಿಧ ಪಕ್ಷಗಳ ರಾಜಕಾರಣಿಗಳು, ಜನಪ್ರತಿನಿಧಿಗಳು, ಕೆಲವು ಸಂಘ-ಸಂಸ್ಥೆಗಳು ಆರೋಪಿಗಳನ್ನು ಪತ್ತೆಹಚ್ಚಿದ ಪೊಲೀಸ್ ಇಲಾಖೆಯನ್ನು ಅಭಿನಂದಿಸಿದರು. ಆದರೆ ಯಾರು ಕೂಡ ಅಪ್ಪಿ ತಪ್ಪಿಯೂ ಸಾಮಾನ್ಯರಲ್ಲಿ ಸಾಮಾನ್ಯನಾದ ಸೆಕ್ಯೂರಿಟಿ ಸಿಬ್ಬಂದಿಯನ್ನು ಸೌಜನ್ಯಕ್ಕೂ ಕನಿಷ್ಟ ನೆನಪೂ ಕೂಡ ಮಾಡಿಕೊಂಡಿಲ್ಲ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳ ನಿಜವಾದ ಆಶಯವನ್ನು ನಾಗರಿಕ ಸಮಾಜ ಪ್ರಶ್ನಿಸುವಂತೆ ಮಾಡಿದೆ ಎನ್ನುವುದು ಸತ್ಯ. ಕೆಲವರಿಗೆ ಪ್ರಚಾರ ಮುಖ್ಯ. ಇನ್ನು ಕೆಲವರಿಗೆ ಉನ್ನತ ಅಧಿಕಾರಿಗಳ ಗಮನ ಸೆಳೆಯುವ, ಆ ಮೂಲಕ ಅವರಿಗೆ ಹತ್ತಿರವಾಗುವ ಪ್ರಯತ್ನ. ಮತ್ತೆ ಕೆಲವರಿಗೆ ಪ್ರಕರಣದ ಹಿನ್ನೆಲೆ ಮತ್ತು ನಿಜವಾದ ಮುಖವನ್ನು ಮರೆ ಮಾಚುವುದು ಮುಖ್ಯ. ಇವರಿಗೆಲ್ಲ ಮಣಿಪಾಲದ ಮತ್ತು ಆಡಳಿತ ಪಕ್ಷದ ಹಿತಾಸಕ್ತಿ ಕಾಪಾಡುವುದರಲ್ಲಿ ಇರುವಷ್ಟು ಆಸಕ್ತಿ ಇಡೀ ಪ್ರಕರಣ ಬಹಿರಂಗಕ್ಕೆ ಬರಲು ಕಾರಣಕರ್ತನಾದ ಸಾಮಾನ್ಯರಲ್ಲಿ ಸಾಮಾನ್ಯನಾದ ಸೆಕ್ಯೂರಿಟಿ ಸಿಬ್ಬಂದಿಯ ನೆನಪು ಮಾಡಿಕೊಳ್ಳದೇ ಇರುವುದು ಸರಕಾರ, ಜನಪ್ರತಿನಿಧಿಗಳು, ರಾಜಕಾರಣಿಗಳು, ಸರಕಾರಿ ಅಧಿಕಾರಿಗಳ ನಡವಳಿಕೆಗಳು ಹಾಗೂ ವಿವಿ ಮತ್ತು ಆಸ್ಪತ್ರೆ ಸಿಬ್ಬಂದಿಯ ಧೋರಣೆ, ವಿದ್ಯಾರ್ಥಿನಿಯ ಮೌನ ಸಾರ್ವಜನಿಕರಲ್ಲಿ ಪ್ರಕರಣದ ಕುರಿತಾಗಿ ಬಗ್ಗೆ ಅನುಮಾನ ಮೂಡಿಸುತ್ತಿದೆ.
ಯೋಗೀಶ್ ಪೂಜಾರಿ, ಹರಿಪ್ರಸಾದ್, ಆನಂದ ಪಾಣಾರ ಅವರುಗಳು ಆರೋಪಿಗಳೇ ನಿಜವಾಗಿರುವುದಾದರೆ ಅವರಿಗೆ ಶಿಕ್ಷೆ ನೀಡಲು ಯಾಕೆ ಹಿಂಜರಿಯುತ್ತಿದ್ದಾರೆ. ಸಾಕ್ಷ್ಯಗಳನ್ನು ನಾಶ ಮಾಡಲು ಪ್ರಚೋದನೆ ನೀಡಿದ ಹರೀಂದ್ರ ಪೂಜಾರಿ, ಬಾಲಚಂದ್ರ ಪೂಜಾರಿ ಅವರುಗಳು ಯಾಕೆ ಯಾರ ಪ್ರಚೋದನೆಯಿಂದ ಈ ಕೃತ್ಯ ಎಸಗಿದ್ದಾರೆ. ಅತ್ಯಾಚಾರಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿಯ ಮೌನಕ್ಕೆ ಕಾರಣಗಳಾವು? ಆಕೆಗೆ ಯಾರಾದರೂ ಒತ್ತಡ ಹೇರಿದ್ದಾರೆಯೇ? ವಿವಿಯ ಧೋರಣೆಯೇನು? ಇಲಾಖೆಯ ನಿಲುವುಗಳೇನು? ಹೀಗೆ ಹಲವಾರು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದರೂ, ಪೊಲೀಸರು ಆರೋಪಿಗಳನ್ನು ಬಂದಿಸಿದ್ದರೂ, ಇವರೇ ನಿಜವಾದ ಆರೋಪಿಗಳಾ? ಆದರೂ ಒಂದಂತೂ ಸತ್ಯ. ಪ್ರಕರಣ ಮಾತ್ರ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದು, ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಅತ್ಯಾಚಾರ ನಡೆದಿರುವುದಂತೂ ಹೌದು. ಈ ಪ್ರಕರಣದ ಅಂತ್ಯ ಯಾವ ರೀತಿ ಎನ್ನುವುದೇ ಕಾದು ನೋಡಬೇಕಿದೆ. ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆಯೇ? ಹಿಂದಿನ ಪ್ರಕರಣದಂತೆ ಈ ಕಡತಗಳು ಕೊಠಡಿಯ ಅಟ್ಟಕ್ಕೆ ಸೇರಿ ಧೂಳು ಹಿಡಿಯುತ್ತದೆಯೇ?
ಅದೇನೇ ಇರಲಿ ಪದೇ ಪದೇ ರಾಜ್ಯದಲ್ಲಿ, ದೇಶದಲ್ಲಿ ನಮ್ಮ ಮನೆಯ ಪಕ್ಕದಲ್ಲಿಯೇ ಇಂತಹ ಪ್ರಕರಣಗಳು ನಡೆಯುತ್ತಿರುವುದರಿಂದ ಹೆಣ್ಣುಮಕ್ಕಳು ದೈರ್ಯದಿಂದ ತಿರುಗಾಡುವುದೇ ಕಷ್ಟಸಾದ್ಯ. ಗಾಂಧೀಜಿ ಕಂಡ ಕನಸು ನನಸಾಗುವುದು ಸಾಧ್ಯವೇ ಇಲ್ಲ ಎನ್ನುವಂತ ಪರಿಸ್ಥಿತಿ. ಹೆಣ್ಣು ಮಗಳೊರ್ವಳು ಮಧ್ಯರಾತ್ರಿ ಯಾವುದೇ ಅಂಜಿಕೆಯಿಲ್ಲದೇ ತಿರುಗಾಡುತ್ತಾಳೆ ಎಂದಾಗ ನಮಗೆ ನಿಜವಾಗಿ ಸ್ವಾತಂತ್ರ್ಯ ಸಿಕ್ಕಿದೆ ಎಂದು ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದ್ದರೂ, ಹಗಲಿನಲ್ಲಿಯೇ ಹೆಣ್ಣು ಮಗಳು ತಿರುಗಾಡುವುದೇ ಕಷ್ಟ. ಇನ್ನೂ ರಾತ್ರಿಯಲ್ಲಿ ಕಲ್ಪನೆ ಮಾಡಿಕೊಳ್ಳುವುದೇ ಕಷ್ಟ. ಕರಾವಳಿಯಲ್ಲಿ ಇಂತಹ ಘಟನೆಗಳು ಹಲವಾರು ನಡೆಯುತ್ತಿದೆ. ಅವುಗಳಲ್ಲಿ ಬೆಳಕಿಗೆ ಬರುವುದು ಕೆಲವೊಂದು ಪ್ರಕರಣಗಳು ಮಾತ್ರ. ಜೀವನ ನಿರ್ವಹಣೆಗಾಗಿ, ಮನೆಯಲ್ಲಿರುವ ಬಡತನವನ್ನು ನಿವಾರಿಸಲು ಒಬ್ಬಂಟಿಯಾಗಿ ಪಟ್ಟಣಗಳಲ್ಲಿ ಕಾರ್ಯ ನಿರ್ವಹಿಸುವ, ಒಂಟಿಯಾಗಿ ತಿರುಗುವ ಮಹಿಳೆಯರಿಗಾಗಿ ಟೈಮ್ಸ್ ಆಫ್ ದೀನಬಂಧು ಪತ್ರಿಕೆಯ ನಿಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬಿಸಲು ಕೆಲವೊಂದು ಸಲಹೆಗಳನ್ನು ನೀಡುತ್ತಿದೆ.

ಹೆಣ್ಣುಮಕ್ಕಳೇ ಜಾಗರೂಕರಾಗಿರಿ: 

೧.ಬಹುಮಹಡಿ ಅಪಾರ್ಟ್‌ಮೆಂಟ್ ಅಥವಾ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುವ ಮಹಿಳೆ ಅನಿವಾರ್ಯವಾಗಿ ತಡರಾತ್ರಿಯಲ್ಲಿ ಅಲ್ಲಿನ ಲಿಫ್ಟ್‌ನಲ್ಲಿ ಪುರುಷರೊಂದಿಗೆ ಸಂಚರಿಸಬೇಕಿದ್ದರೆ? 
*ಲಿಫ್ಟ್‌ನೊಳಗೆ ಹೋದಾಗ ಮಹಿಳೆ ಮೊದಲಿಗೆ ಮಾಡಬೇಕಾದ ಕಾರ್ಯವೆಂದರೆ ಉದಾಹರಣೆಗೆ ಆಕೆಗೆ ೧೩ ನೇ ಮಹಡಿಗೆ ತೆರಳ ಬೇಕಿದ್ದರೆ ಕೇವಲ ೧೩ನೇ ಬಟನ್‌ನ್ನು ಮಾತ್ರ ಒತ್ತಬೇಡಿ. ೧ರಿಂದ ೧೩ ಮಹಡಿಯ ಎಲ್ಲಾ ಬಟನ್‌ಗಳನ್ನು ಒತ್ತಿ ಪ್ರತಿ ಮಹಡಿಯಲ್ಲಿಯೂ ಲಿಫ್ಟ್ ನಿಲ್ಲುತ್ತದೆ. ಎದುರಿಗಿರುವ ಪುರುಷನ ಕುರಿತಾಗಿ ಭಯ ಕಡಿಮೆಯಾಗಬಹುದು.

೨. ನಿಮ್ಮ ಮನೆಯಲ್ಲಿ ಒಬ್ಬರೇ ಇದ್ದಾಗ ಅಪರಿಚಿತನೊರ್ವ ದಾಳಿಗೆ ಬಂದಾಗ?
*ಧೈರ್ಯಗೆಡಬೇಡಿ. ನೀವು ಅಡುಗೆ ಮನೆಗೆ ಓಡಬೇಕು. ಮೆಣಸಿನ ಹುಡಿ ಮತ್ತು ಅರಶಿನ ಪುಡಿ ಎಲ್ಲಿದೆ ಎಂದು ನಿಮಗೆ ಮಾತ್ರ ತಿಳಿದಿದೆ. ಅಲ್ಲದೇ ಚಾಕು ಮತ್ತು ತಟ್ಟೆಗಳಿರುವುದನ್ನು ನೋಡಿ ಅವುಗಳು ಮುಗಿಯುವರೆಗೆ ಆತನೆಡೆಗೆ ಎಸೆಯಬೇಕು. ಈ ಸಂದರ್ಭದಲ್ಲಾದ ಶಬ್ದ ಹಾಗೂ ಬೊಬ್ಬೆಯಿಂದ ಎದುರಾಳಿ ಭಯಗೊಳ್ಳುತ್ತಾನೆ. ಆತ ಸಿಕ್ಕಿಹಾಕಿಕೊಳ್ಳಲು ಇಷ್ಟಪಡುವುದಿಲ್ಲ. ಅಲ್ಲಿಂದ ಆತ ಓಡಿಹೋಗುತ್ತಾನೆ. 

೩.ರಾತ್ರಿ ಸಮಯದಲ್ಲಿ ಆಟೋ ಅಥವಾ ಟ್ಯಾಕ್ಸಿ ಪಡೆಯುವಾಗ?
*ರಾತ್ರಿ ಆಟೋ ಅಥವಾ ಟ್ಯಾಕ್ಸಿ ಹಿಡಿದು ಕುಳಿತುಕೊಳ್ಳುವುದಕ್ಕಿಂತ ಮುಂಚಿತವಾಗಿ ಅದರ ನೋಂದಣಿ ಸಂಖ್ಯೆಯನ್ನು ಗಮನಿಸಿ, ಕೂಡಲೇ ನಿಮಗೆ ಗೊತ್ತಿರುವ ನಂಬರ್‌ಗೆ ಸಂದೇಶ ರವಾನಿಸಿ. ನಂತರ ನಿಮ್ಮ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ಚಾಲಕನಿಗೆ ಅರ್ಥ ಆಗುವ ಭಾಷೆಯಲ್ಲಿ ಮೊಬೈಲ್‌ನಿಂದ ಕರೆ ಮಾಡಿ. ಯಾರೂ ನಿಮ್ಮ ಕರೆಗೆ ಉತ್ತರವನ್ನು ನೀಡದಿದ್ದರೂ ಸಂಭಾಷಣೆಯಲ್ಲಿರುವಂತೆ ನಟಿಸಿ. ಚಾಲಕ ತನ್ನ ವಿವರಗಳು ಇತರರಿಗೆ ತಿಳಿದಿದೆ ಎನ್ನುವ ಭಯದಿಂದ ತಾನು ಯಾವುದೇ ತಪ್ಪು ಕಾರ್ಯಗಳಿಗೆ ಮನ ಮಾಡಿದರೆ ಗಂಭೀರ ಸಮಸ್ಯೆಯಾಗಬಹುದು ಎಂದು ತಿಳಿಯುತ್ತಾನೆ. ಆಗ ಆತನೇ ಸುರಕ್ಷಿತವಾಗಿ ನಿಮ್ಮನ್ನು ಮನೆಗೆ ತಲುಪಿಸುತ್ತಾನೆ. ಸಂಭಾವ್ಯ ಆಕ್ರಮಣಕಾರರೊಂದಿಗೆ ನೀವು ನಡೆಸುವ ಚಟುವಟಿಕೆಯೇ ನಿಮ್ಮ ರಕ್ಷಕನಾಗಿರುತ್ತದೆ. ಎಲ್ಲಕ್ಕಿಂತ ಮೊದಲು ಕುಡಿದುಕೊಂಡಿದ್ದಾನೆಯೇ ಎನ್ನುವುದನ್ನು ಗಮನಿಸಿಕೊಳ್ಳಿ. 

೪.ಚಾಲಕ ರಸ್ತೆ ಬದಲಾವಣೆ ಮಾಡಿದಾಗ?
*ಎಚ್ಚರದಲ್ಲಿದ್ದು, ನೀವು ಸೇರಬೇಕಾದ ಸ್ಥಳ ಅದಲ್ಲವೆನ್ನುವುದನ್ನು ಮನಗಂಡು ಅಪಾಯದ ವಲಯ ತಲುಪುತ್ತಿದ್ದೇವೆ ಎನ್ನುವುದನ್ನು ಅರಿತುಕೊಳ್ಳಬೇಕು. ಈ ಸಂದರ್ಭದಲ್ಲಿ ನಿಮ್ಮ ಪರ್ಸ್‌ನ ಹ್ಯಾಂಡಲ್ ಅಥವಾ ನಿಮ್ಮ ದುಪ್ಪಟ್ಟಾವನ್ನು ಆತನ ಕುತ್ತಿಗೆಗೆ ಸುತ್ತಿ, ಹಿಂದುಗಡೆ ಎಳೆಯಬೇಕು. ಸೆಕೆಂಡುಗಳ ಅಂತರದಲ್ಲಿ ಈ ಕ್ರಿಯೆ ನಡೆಯುವುದರಿಂದ ಆತ ಅಸಹಾಯಕನಾಗುತ್ತಾನೆ. ಕೆಲವು ಸಂದರ್ಭದಲ್ಲಿ ನಿಮ್ಮಲ್ಲಿ ಪರ್ಸ್ ಅಥವಾ ದುಪ್ಪಟ್ಟಾ ಇಲ್ಲದಾಗ ಅವನು ಧರಿಸಿದ ಶರ್ಟ್‌ನ ಕಾಲರ್ ಹಿಡಿದು ಹಿಂದಕ್ಕೆ ಎಳೆಯಬೇಕು. ಮೇಲಿನ ಬಟನ್ ಧರಿಸಿರುವುದರಿಂದ ಕುತ್ತಿಗೆ ಬಿಗಿದು ಅಸಹಾಯಕನಾಗುತ್ತಾನೆ.

೫.ರಾತ್ರಿಯ ಸಮಯದಲ್ಲಿ ನಿಮ್ಮನ್ನು ಯಾರಾದರೂ ಅನುಸರಿಸುತ್ತಿದ್ದರೆ...
*ದಾರಿಯ ಪಕ್ಕದಲ್ಲಿರುವ ಅಂಗಡಿ ಅಥವಾ ಮನೆಯನ್ನು ಗುರುತಿಸಿ ನಿಮ್ಮ ಪರಿಸ್ಥಿತಿಯನ್ನು ವಿವರಿಸಿ. ಕೆಲವೊಂದು ಸಂದರ್ಭದಲ್ಲಿ ರಾತ್ರಿ ಸಮಯದಲ್ಲಿ ಅಂಗಡಿಗಳು ಮುಚ್ಚಿರುತ್ತವೆ. ಈ ಸಂದರ್ಭದಲ್ಲಿ ನೇರವಾಗಿ ಎಟಿಎಂ ನೊಳಗೆ ಹೋಗಬೇಕು. ಎಟಿಎಂ ಕೇಂದ್ರದಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳು ಇರುತ್ತಾರೆ. ಅಲ್ಲದೇ ಕ್ಲೋಸ್ ಸರ್ಕ್ಯೂಟ್ ಟೆಲಿವಿಷನ್ ಮೂಲಕ ಎಲ್ಲವನ್ನು ಪರೀಕ್ಷಿಸಲಾಗುತ್ತದೆ. ಗುರುತು ಹಿಡಿಯಬಹುದು ಎನ್ನುವ ನೆಲೆಯಲ್ಲಿ ದಾಳಿಗೆ ಮುಂದಾಗುವುದಿಲ್ಲ.
ಮಾನಿನಿಯರೇ, ಇದೆಲ್ಲದಕ್ಕಿಂತ ಮುಖ್ಯವಾಗಿ ಮಾನಸಿಕ ಎಚ್ಚರಿಕೆಯನ್ನು ಹೊಂದಿ, ಧೈರ್ಯವನ್ನು ತಂದುಕೊಂಡಾಗ ಅದುವೇ ನಿಮ್ಮ ಪಾಲಿಗೆ ಮಹಾನ್ ಆಯುಧವಾಗುತ್ತದೆ. ಯಾವುದೇ ಸಂದರ್ಭದಲ್ಲಿಯೂ ಧೈರ್ಯಗೆಡದಿರಿ..ಸ್ನೇಹಿತರೇ ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಪ್ರೀತಿ-ಪಾತ್ರ ಸಹೋದರಿಯರೊಂದಿಗೆ ಹಂಚಿಕೊಂಡಾಗ ಭವಿಷ್ಯದಲ್ಲಿ ಸಂಭವಿಸುವ ಘಟನೆಗಳಿಗೆ ಧೈರ್ಯ ತುಂಬಬಹುದು ಏನಂತಿರಾ...



No comments:

Post a Comment