Thursday, 21 June 2012
ದಕ್ಷಿಣ ಕನ್ನಡದಲ್ಲಿ ಸರಕಾರಿ ಶಾಲೆಯ ಗುಣಮಟ್ಟದ ಶಿಕ್ಷಣಕ್ಕಾಗಿ ವಿಶೇಷ ಯೋಜನೆ
-ಕೆ.ಎಸ್.ಶೆಟ್ಟಿ
ಕಳೆದ ಎರಡು ತಿಂಗಳಿನಿಂದ ವಾರಕ್ಕೆ ರೂ.೧೦೦ರಂತೆ ಸಂಪಾದನೆ ಮಾಡಿ ಬೆಳಿಗ್ಗೆ ೯ರಿಂದ ಸಂಜೆ ೫ ರವರೆಗೆ ದುಡಿದು ಶಾಲಾ ಶುಲ್ಕವನ್ನು ಹೊಂದಿಸಿಕೊಂಡು ಶಾಲೆಯ ಮೆಟ್ಟಿಲನ್ನೇರಿದ ಕಾಟಿಪಳ್ಳದ ಶಿವಕುಮಾರ್ ಈಗ ೮ನೇ ತರಗತಿ ವಿದ್ಯಾರ್ಥಿ. ಬಡತನದ ಬೇಗುದಿಯಲ್ಲಿ ಶಾಲಾ ಶುಲ್ಕವನ್ನು ಹೊಂದಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಟೈಯ್ಲರಿಂಗ್ ಅಂಗಡಿಯಲ್ಲಿ ದುಡಿದ ಶಿವ ಪ್ರತಿಭಾವಂತ. ಶಾಲೆ ಪ್ರಾರಂಭವಾದಾಗ ಆತನ ಮುಖದಲ್ಲಿ ಏನೋ ಒಂದು ರೀತಿಯ ಸಂತೃಪ್ತತೆ. ಹಲವಾರು ಮಕ್ಕಳು ರಜೆಯಲ್ಲಿ ಛ್ಞ್ಜಿಟqs ಮಾಡಿದ್ದರೆ ಶಿವಕುಮಾರ್ ಮಾತ್ರ ತಂದೆ- ತಾಯಿಗೆ ಸಹಾಯ ಮಾಡಬೇಕು ಎನ್ನುವ ಗುಣವನ್ನು ತನ್ನ ೮ನೇ ತರಗತಿಯ ವಿದ್ಯಾರ್ಜನೆ ಕಾಲಘಟ್ಟದಲ್ಲಿಯೇ ಬೆಳೆಸಿಕೊಂಡಿದ್ದಾನೆ. ಆತನ ಕಪಟವಿಲ್ಲದ ಪುಟ್ಟ ಮನಸ್ಸಿನಲ್ಲಿ ಉದ್ಬವವಾದ ಗುಣವನ್ನು ಇಲ್ಲಿ ಪ್ರಶಂಸಿಸಲೇ ಬೇಕು. ಶಿಕ್ಷಣದೊಂದಿಗೆ ಮುಂದಿನ ದಿನದಲ್ಲಿ ವೃತ್ತಿಯನ್ನಾಗಿ ಕಸೂತಿ ಕೆಲಸವನ್ನು ಕಲಿಯುವ ಮಹತ್ವಾಕಾಂಕ್ಷೆ ಆತನದು. ತಂದೆ-ತಾಯಿಯರಿಗೆ ಸಹಾಯ ಮಾಡಬೇಕು ಎನ್ನುವ ಗುಣ ಒಂದೆಡೆಯಾದರೆ ಶಾಲಾ ಶುಲ್ಕವನ್ನು ಹೊಂದಿಸಿಕೊಂಡ ವಿದ್ಯಾರ್ಥಿ. ಈತ ಕೆಲಸ ಮಾಡಿರುವುದು ಕಾನೂನು ಬಾಹಿರ ಎನಿಸಬಹುದು. ೮ನೇ ತರಗತಿ ವಿದ್ಯಾರ್ಥಿಯು ೧೪ ವರ್ಷ ತಲುಪಿರುತ್ತಾನೆ. ಅದು ಕಾನೂನು ಬಾಹಿರವಂತೆನಿಸುವುದು ಶಾಲಾ ಜೀವನವನ್ನು ತೊರೆದು ಖಾಯಂ ಆಗಿ ವೃತ್ತಿ ಜೀವನವನ್ನು ಅವಲಂಬಿಸಿದ್ದರೆ ತಾನೇ? ಆದರೆ ಆತ ತನ್ನ ವಿದ್ಯಾದೆಸೆಯ ರಜಾ ಸಮಯದಲ್ಲಿ ಬಿಡುವಿನ ವೇಳೆಯನ್ನು ಸದುಪಯೋಗ ಪಡಿಸಿಕೊಂಡಿದ್ದಾನೆ. ಇಂಥಹ ಹಲವಾರು ಮಕ್ಕಳು ರಾಜ್ಯದೆಲ್ಲೆಡೆ ಕಂಡುಬರುತ್ತಾರೆ.
ನಗರದ ಶಾರದಾ ವಿದ್ಯಾಲಯದಲ್ಲಿ ಕಲಿಯುತ್ತಿರುವ ಅವಳಿ ಮಕ್ಕಳಾದ ಪ್ರತೀಕ್ಷಾ, ಪ್ರೀತಮ್ ರಜೆಯಲ್ಲಿ ಬೆಂಗಳೂರು, ನಕ್ಸಲೈಟ್ ತಾಣವಾದ ಪಶ್ಚಿಮ ಘಟ್ಟಗಳ ಬುಡದಲ್ಲಿರುವ ಮದ್ರಾಡಿ, ತಾಯಿಯ ಊರು ಮೂಡಿಗೆರೆ, ಎಂಡೋಸಲ್ಫಾನ್ ಪೀಡಿತ ಪ್ರದೇಶ ಅಜ್ಜನ ಮನೆಯಾದ ಕೊಕ್ಕಡವನ್ನು ಸುತ್ತಿ ಬಂದಿದ್ದೇವೆ. ಹಿಂದು ಸೇವಾ ಪ್ರತಿಷ್ಠಾನ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ಭಜನೆ, ಶ್ಲೋಕ, ಮಂಕುತಿಮ್ಮನ ಕಗ್ಗ, ಯೋಗಾಸನವನ್ನು ಕಲಿತು ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಆಟೋಟ, ವನ್ಯಜೀವಿ ತಾಣ ಪಿಲಿಕುಳಕ್ಕೂ ಹೋಗಿದ್ದೇವೆ. ಆದರೂ ಶಾಲೆ ಪ್ರಾರಂಭವಾಗುವುದು ಬೇಸರವಾಗುತ್ತಿದೆ. ಒಂದು ವಾರ ರಜೆ ಇದ್ದರೆ ಚೆನ್ನಾಗಿರುತ್ತಿತ್ತು ಎನ್ನುವುದು ಅವಳಿ ಮಕ್ಕಳ ಅನಿಸಿಕೆ.
ಈ ರೀತಿಯಾಗಿ ಯಾವುದೇ ಮಕ್ಕಳನ್ನು ಕೇಳಿದರೂ ಶಾಲೆ ಪ್ರಾರಂಭವಾಗಿಯೇ ಬಿಟ್ಟಿತಾ...! ಎನ್ನುವ ಉದ್ಗಾರ ಬರುವುದು ಸಹಜ. ಬೇಸಿಗೆ ರಜೆಯನ್ನು ಸಂತೋಷದಿಂದ ಕಳೆದು ಶಾಲಾ ಜೀವನಕ್ಕೆ ಅಣಿಯಾಗಿ ರಾಜ್ಯ ಹಾಗೂ ಕೇಂದ್ರೀಯ ಶಿಕ್ಷಣ ಸಂಸ್ಥೆಯ ಮಕ್ಕಳೆಲ್ಲಾ ಶಾಲೆಯ ಕಡೆ ಮುಖ ಮಾಡಿದ್ದಾರೆ. ಅನೇಕ ಮಕ್ಕಳು ಕಳೆದ ಬಾರಿಯ ಪರೀಕ್ಷೆಯನ್ನು ಉತ್ತಮವಾಗಿ ಮಾಡಿ ಫಲಿತಾಂಶ ಬಂದು ಶಾಲಾ ಜೀವನದ ಸಮಯ ಸಾರಿಣಿಯನ್ನು ಮರೆತು ಬೇಸಿಗೆಯ ರಜೆಯಲ್ಲಿ ತಮ್ಮದೇ ಆದ ಆಟದಲ್ಲಿ ತಲ್ಲೀನರಾಗಿ ಬಿಟ್ಟಿದ್ದರು. ಕೆಲವು ಮಕ್ಕಳು ಶಾಲೆಯಲ್ಲಿ ಬೇಸಿಗೆ ರಜೆ ಘೋಷಿಸಿದ್ದರೂ ಕೂಡ ಶಾಲೆಗೆ ಬಂದಿದ್ದಾರೆ ಆದರೆ ಸರಕಾರದ ಅಧಿನಿಯಮದಂತಲ್ಲ. ಮನೆಯವರ ಒತ್ತಾಯಕ್ಕೆ ಮಣಿದೋ ಅಥವಾ ಸ್ವ-ಇಚ್ಚೆಯಿಂದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಲ್ಲಿಯೂ ಕೂಡ ರಜೆಯನ್ನು ಸಂತೋಷವಾಗಿ ಕಳೆದುವೆಂಬ ಆನಂದ. ಉಳಿದ ಮಕ್ಕಳು ಕಳೆದ ಬಾರಿಯ ಬೇರೆ ಶಾಲೆಯ ಸ್ನೇಹಿತರೊಂದಿಗೆ ಆಟವಾಡಿದ ಸುಸಂದರ್ಭವನ್ನು ಮೆಲುಕು ಹಾಕುತ್ತಿದ್ದಾರೆ.
ನಗರದ ಮಕ್ಕಳು ಅಜ್ಜ-ಅಜ್ಜಿಯ ಮನೆಗೂ ಹಾಗೂ ಹಳ್ಳಿಯ ಮಕ್ಕಳು ಒಮ್ಮೆಯಾದರೂ ಪೇಟೆ ನೋಡುವ ಆಸೆಯಿಂದ ನೆಂಟರಿಷ್ಟರ ಮನೆಗೋ ಬಂದಿರುತ್ತಾರೆ. ಆದರೆ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳು ಹೇಗಾದರೂ ಮಾಡಿ ಮುಂದಿನ ಶಾಲಾ ಜೀವನಕ್ಕೆ ಅನುಕೂಲವಾಗುವ ದೃಷ್ಠಿಯಿಂದ ಹೋಟೆಲ್‌ನಲ್ಲಿಯೋ, ಗ್ಯಾರೇಜ್‌ಗಳಲ್ಲಿಯೋ, ಗೇರು ಬೀಜ ತೋಟದಲ್ಲಿ ಅವರಿಗೆ ಇಷ್ಟವಾದ ಅಥವಾ ಇಷ್ಟವಿಲ್ಲದ ಕೆಲಸವನ್ನು ಕಷ್ಟವಾದರೂ ಮಾಡುತ್ತಾರೆ. ತಿಂಗಳಾಂತ್ಯದಲ್ಲಿ ಸಿಗುವ ಅತ್ಯಲ್ಪ ಮೊತ್ತವನ್ನು ಹಿಡಿದು ತಂದೆ-ತಾಯಿಯೊಂದಿಗೆ ಅವರಿಗೆ ಬೇಕಾದ ಶಾಲಾ ಬ್ಯಾಗ್, ಪುಸ್ತಕ, ಮಳೆಗಾಲಕ್ಕೆ ಅನುಕೂಲವಾಗುವ ಛತ್ರಿ, ಹೊಸ ಚಪ್ಪಲಿಯನ್ನು ಕೊಂಡು-ಕೊಂಡು ಶಾಲೆಗೆ ಬರುವ ಸಂಭ್ರಮ ತುಂಬಿದೆ.
ಇದರೆಡೆಯಲ್ಲಿ ತಂದೆ ತಾಯಿಗೆ ಆರ್‌ಟಿಐ ಕಾಯ್ದೆಯನ್ವಯ ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸುವುದೆಂಬ ಚಿಂತೆಯಾದರೆ, ಮಕ್ಕಳಿಗೆ ಎರಡು ತಿಂಗಳು ತಮ್ಮಿಂದ ದೂರವಿದ್ದ ಗೆಳೆಯ-ಗೆಳೆತಿಯರನ್ನು ನೋಡುವ ತವಕ. ಕೆಲವರಿಗೆ ಹೊಸ ಶಾಲೆಯಲ್ಲಿ ಹೊಸ ಗೆಳೆತನ ಅಪೇಕ್ಷಿಸುವ ತುಮುಲ. ದಿನ ಬೆಳಗಾದರೆ ಶಾಲೆಗೆ ಹೋಗಬೇಕು ಎನ್ನುವ ಆತಂಕ. ಸವಿನೆನಪುಗಳು ಮಾಸುವುದರೊಳಗೆ ಮತ್ತೆ ಮರುಕಳಿಸಿತು ಅದೇ ದಿನಚರಿ ಎನ್ನುವ ನಿರಾಸೆ.
ರಜೆಯಲ್ಲಿ ತಂದೆ ತಾಯಿಯ ಮಾತಿಗೆ ಕಿವಿಕೊಡದೆ ಬೆಟ್ಟದ ನೆಲ್ಲಿಕಾಯಿ, ಮಾವಿನಹಣ್ಣು, ಹಲಸಿನ ಹಣ್ಣು ಕೊಯ್ಯಲು ಹೋದದ್ದು, ಒಟ್ಟಿಗೆ ನದಿಯಲ್ಲಿ ಈಜಿದ್ದು ಒಂದೆ ಎರಡೇ ಹೀಗೆ ಅನೇಕ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಮಕ್ಕಳ ಮನದಲ್ಲಿ ಪುನಃ ರಗಳೆ ಪ್ರಾರಂಭವಾಯ್ತಲ್ಲ ಎನ್ನುವ ಭಾವನೆಯಾದರೆ, ತಂದೆ ತಾಯಿ ಮಾತ್ರ ಅಬ್ಬಾ ಎಂದು ನಿಟ್ಟುಸಿರು ಬಿಟ್ಟು ರಗಳೆ ಮುಗಿಯಿತಲ್ಲ ಎನ್ನುವ ಕಾಲ. ಸ್ವಚ್ಚಂದವಾಗಿ ಊರಿನ ಸುತ್ತಲೂ ಓಡಾಡುತ್ತಿದ್ದ ಮಕ್ಕಳಿಗೆ ಮಾತ್ರ ಇನ್ನೂ ಸ್ವಲ್ಪ ದಿನ ರಜೆ ಇರಬಾರದೆ ಎನ್ನುವ ಆಸೆ.
ಗುರುಗಳು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣದಲ್ಲಿ ಕಳಕಳಿಯನ್ನು ಹೊಂದಿದ್ದಾರೆ ಎನ್ನುವುದು ಸ್ಪಷ್ಟ. ಮಕ್ಕಳಿಗೆ ರಜೆ ನೀಡಿದ್ದರೂ ತಾವು ಮಾತ್ರ ಮಕ್ಕಳ ಸರ್ವತೋಮುಖ ಏಳ್ಗೆಗಾಗಿ ಶ್ರಮಿಸಿ,ಅವರ ಜೀವನದಲ್ಲಿ ತಮ್ಮ ಪ್ರಭಾವವನ್ನು ಬೀರಿ, ಸುಂದರ ಜೀವನವನ್ನು ಹಾಗೂ ಶಾಲೆಯ ಕೀರ್ತಿಯನ್ನು ಏರಿಸುವುದು ಹೇಗೆ ಎನ್ನುವ ದೃಷ್ಟಿಯಿಂದಲೇ ಒಂದು ದಿನ ಮುಂಚಿತವಾಗಿ ಶಾಲೆಗೆ ಆಗಮಿಸಿದ್ದಾರೆ. ಮಕ್ಕಳು ಮಾತ್ರ ಭಾರದ ಪುಸ್ತಕದ ಮೂಟೆಯನ್ನು ಹೊತ್ತು ಶಾಲೆಗೆ ಹೊರಡುವಾಗ ಬೈಯ್ಯುವುದು ಸುಳ್ಳಲ್ಲ..ಆದಷ್ಟೂ ಬೇಗ ಬರಲಿ ರಜೆ ಎನ್ನುತ್ತಾ ಶಾಲೆಗೆ ಹೋಗುವ ಸಂಭ್ರಮ ಮಕ್ಕಳ ಮನದಲ್ಲಿ....ಅನೇಕ ಬಾರಿ ಶಾಲೆ ಪ್ರಾರಂಭದಂದು ವರುಣನ ಆಗಮನವಾಗುತ್ತಿತ್ತು. ಆದರೆ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ವರುಣದೇವನ ಆಗಮನವಾಗಿ ಶುಭ ಹರಸಿದ್ದಾನೆ.
ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ದಕ್ಷಿಣ ಕನ್ನಡದಲ್ಲಿ ವಿಶೇಷ ಯೋಜನೆ:
ಬಹುತೇಕ ಮಂದಿ ಖಾಸಗಿ ಶಾಲೆಯ ಭರಾಟೆಯಲ್ಲಿ ಸರಕಾರಿ ಶಾಲೆಗಳು ಗುಣಮಟ್ಟ ಕ್ಷೀಣಿಸುತ್ತಿದೆ ಎಂದು ಬೊಬ್ಬಿಡುತ್ತಿದ್ದಾರೆ. ಇದು ನಿಜವಾದರೂ ಎಸ್.ಎಸ್.ಎಲ್.ಸಿ ದ್ವಿತೀಯ ಹಾಗೂ ಪಿಯುಸಿಯಲ್ಲಿ ಪ್ರಥಮ ಶ್ರೇಣಿಯನ್ನು ಪಡೆದ ದಕ್ಷಿಣ ಕನ್ನಡದಲ್ಲಿ ಹಲವಾರು ಮದ್ಯಮ ವರ್ಗದ ಜನತೆಯು ಆಶ್ರಯಿಸಿರುವುದು ಸರಕಾರಿ ಶಾಲೆಗಳನ್ನೇ ಎನ್ನುವುದು ಸ್ಪಷ್ಟ. ಸರಕಾರಿ ಶಾಲೆಗಳೇ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದು ಖಾಸಗಿ ಶಾಲೆಗೆ ಸಡ್ಡು ಹೊಡೆದಿರುವುದು ಗಮನಿಸಬೇಕಾದ ಅಂಶವಾಗಿದೆ. ದ.ಕ.ಜಿಲ್ಲೆಯಲ್ಲಿ ೨೦೧೨-೧೩ನೇ ಸಾಲಿನಲ್ಲಿ ೧ನೇ ತರಗತಿಗೆ ಸೇರ್ಪಡೆಯಾದ ಪುಟಾಣಿ ಮಕ್ಕಳಿಗೆ ಶೈಕ್ಷಣಿಕ ತೇರನ್ನು ಏರಿಸುವ ವಿಶಿಷ್ಟ ಕಾರ್ಯಕ್ರಮವನ್ನು ವಿವಿಧ ಶಾಲೆಗಳಲ್ಲಿ ಆಯೋಜಿಸಲಾಗಿದೆ. ಅಂಥ ಒಂದು ಶಾಲೆಯಲ್ಲಿ ನಡೆದ ಕಾರ್ಯಕ್ರಮವಿದು:
ಕುಳಾಯಿ ಮೈರ್‍ಪಾಡಿಯ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಖಲಾದ ಒಂದನೇ ತರಗತಿ ಪುಟಾಣಿಗಳಿಗೆ ಶೈಕ್ಷಣಿಕ ರಥವೇರುವ ಸಂಭ್ರಮದೊಂದಿಗೆ ಬ್ಯಾಂಡ್ ವಾಲಗದೊಂದಿಗೆ ಹಿರಿಯ ವಿದ್ಯಾರ್ಥಿಗಳು ಶಾಲಾ ಆವರಣಕ್ಕೆ ಬರಮಾಡಿಕೊಂಡರು. ಶಾಲಾ ಮುಖ್ಯದ್ವಾರದಲ್ಲಿ ಶಿಕ್ಷಕರು ಹೂ-ಪನ್ನೀರ ಸಿಂಚನದೊಂದಿಗೆ ಸ್ವಾಗತಿಸಿದರು. ಹೊಸದಾಗಿ ಸೇರ್ಪಡೆಯಾದ ಮಕ್ಕಳಿಗೆ ವಿಶೇಷವಾಗಿ ಗೌರವಿಸಿ ದಾನಿಗಳಿಂದ ಪುಸ್ತಕ ವಿತರಣೆ ಹಾಗೂ ಸಮವಸ್ತ್ರ ವಿತರಣೆ ಮಾಡಿಸಿದರು. ರಜೆಯ ಮಜವನ್ನು ಅನುಭವಿಸಿ ಬಂದ ಮಕ್ಕಳಲ್ಲಿ ಕುಶಲೋಪಚರಿಯನ್ನು ನಡೆಸಿ ಅಕ್ಷರ ದಾಸೋಹದ ಬಿಸಿಯೂಟದೊಂದಿಗೆ ಮೌನವಾಗಿದ್ದ ಶಾಲಾ ಆವರಣವು ಮಕ್ಕಳ ಸ್ವರದ ಅನುರಣನದೊಂದಿಗೆ ಎರಡು ತಿಂಗಳ ಮೌನ ಮುರಿದಿದೆ. ಈ ರೀತಿಯಾಗಿ ಮಕ್ಕಳಿಗೆ ವಿಶೇಷ ಆಹ್ವಾನ ನೀಡಿ ಶಾಲೆಗೆ ಶಿಕ್ಷಕರು ಬರಮಾಡಿಕೊಂಡಿದ್ದಾರೆ. ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಹೊಸ ಉತ್ಸಾಹದೊಂದಿಗೆ ಗುರುವೃಂದ ಕಾಯುತ್ತಿದೆ.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮೂಡಿಸಲು ಸಿದ್ದವಾಗಿರುವ ದಕ್ಷಿಣ ಕನ್ನಡದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂತಹುದೇ ಕ್ರಾಂತಿಯಾಗಲಿ.. ಆಲ್ ದಿ ಬೆಸ್ಟ್
ಅಭಿಪ್ರಾಯ:
ಪ್ರತಿಯೊಂದು ಶಾಲೆಯನ್ನು ಅಲಂಕಾರ ಮಾಡಿ ಹೊಸದಾಗಿ ಶಾಲೆಗೆ ಸೇರ್ಪಡೆಗೊಳ್ಳುವ ಮಕ್ಕಳಿಗೆ ಸ್ವಾಗತ ಮಾಡಲಾಗುವುದು. ಶಾಲಾಭಿವೃದ್ದಿ ಸಮಿತಿಯ ಸಭೆ ಕರೆದು ಶಾಲೆಯ ಅಭಿವೃದ್ಧಿಯ ಕುರಿತು ಚರ್ಚಿಸಲಾಗುವುದು. ಶಾಲಾ ಶಿಕ್ಷಕರು ಹಾಗೂ ಅಧಿಕಾರಿಗಳು ಶೈಕ್ಷಣಿಕ ಯೋಜನೆಗಳನ್ನು ರೂಪಿಸಿ ಉತ್ತಮ ಫಲಿತಾಂಶವನ್ನು ಪಡೆಯಲು ಪ್ರಯತ್ನಿಸಲಾಗುವುದು.
-ಮೋಸೆಸ್ ಜಯಶೇಖರ್-ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ
ದ.ಕ.ಜಿಲ್ಲೆಯಲ್ಲಿನ ೫೦೦೦ವಿದ್ಯಾರ್ಥಿಗಳಿಗೆ ಕೃಷಿ ದರ್ಶನವೆನ್ನುವ ಆಧುನಿಕ ಕೃಷಿ, ಹೈನುಗಾರಿಕೆಯ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ, ಆಯ್ದ ಶಾಲೆಗಳಲ್ಲಿ ೪ ನೇ ತರಗತಿಯಲ್ಲಿಯೂ ಕೂಡ ನಲಿ ಕಲಿಯನ್ನು ಅಳವಡಿಸಲಾಗುವುದು. ಜಿಲ್ಲೆಯಲ್ಲಿರುವ ಎಲ್ಲಾ ಸರಕಾರಿ ಶಾಲೆಗಳಲ್ಲಿ ಆವರಣ ಗೋಡೆಯನ್ನು ನಿರ್ಮಿಸಲಾಗುವುದು. ಪೀಠೋಪಕರಣಗಳನ್ನು ಒದಗಿಸಲಾಗುವುದು. ೬ನೇ ತರಗತಿಯಿಂದ ಇಂಗ್ಲೀಷ್ ಶಿಕ್ಷಣಕ್ಕಾಗಿ ೫೦ ಶಾಲೆಗಳನ್ನು ಗುರುತಿಸಿ ಸರಕಾರಕ್ಕೆ ಮನವಿಯನ್ನು ನೀಡಲಾಗಿದೆ. ಆದಷ್ಟು ಶೀಘ್ರದಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು.
ಎನ್.ಶಿವಪ್ರಕಾಶ-ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ
Subscribe to:
Post Comments (Atom)
No comments:
Post a Comment