Thursday, 21 June 2012



ಮನಪಾ ವತಿಯಿಂದ ಮಲೇರಿಯಾ ನಿಯಂತ್ರಣಕ್ಕೆ `ಆಕ್ಷನ್ ಪ್ಲ್ಯಾನ್'
ಸಂದೇಶ ಶೆಟ್ಟಿ ಆರ್ಡಿ
ಮಂಗಳೂರು: ಮಳೆಗಾಲ ಪ್ರಾರಂಭವಾಗಿದೆ ಎಂದು ಸಂತೋಷ ಪಡುತ್ತಿರುವಾಗಲೇ ನಗರದಲ್ಲಿ ಮಲೇರಿಯಾದ ಭೀತಿ ಎದುರಾಗಿದೆ. ಮಂಗಳೂರಿನಲ್ಲಿ ವಾಸವಾಗಿ ಜ್ವರ ಬಂದಿದೆ ಎಂದಾಕ್ಷಣ ಮಲೇರಿಯಾವೇ ಎನ್ನುವ ಮಾತು ಸಾಮಾನ್ಯವಾಗಿದೆ. ಮಲೇರಿಯಾ ಹಾಗೂ  ಮಂಗಳೂರಿಗೆ  ಬಿಡದ ನಂಟು ಎಂಬಂತಾಗಿದೆ.
ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರದಲ್ಲಿ  ಬಹುಮಹಡಿ ಕಟ್ಟಡಗಳು ದಿನಕ್ಕೊಂದರಂತೆ ತಲೆಎತ್ತುತ್ತಿವೆ. ನಿರ್ಮಾಣವಾದ ಹಾಗೂ ನಿರ್ಮಾಣವಾಗುತ್ತಿರುವ ಕಟ್ಟಡದ ಸಮೀಪದಲ್ಲಿ ಹಾಗೂ ಚರಂಡಿಗಳಲ್ಲಿ ನಿಂತ ನೀರಿನಿಂದ ಮಲೇರಿಯಾ ರೋಗಾಣುಗಳು ಉತ್ಪತ್ತಿಯಾಗುತ್ತವೆ. ಈ ಸೊಳ್ಳೆಗಳು ಒಮ್ಮೆಲೆ ಸುಮಾರು ೨೦೦೦ದಷ್ಟು ಮೊಟ್ಟೆಗಳಿಟ್ಟು ಮರಿಮಾಡುತ್ತವೆ.  ಮಳೆ ನಿರಂತರವಾಗಿದ್ದರೆ  ಮಲೇರಿಯಾ ಕಡಿಮೆಯಾಗಿರುತ್ತದೆ. ಈ ಸೊಳ್ಳೆಗಳು ಮನುಷ್ಯನಿಗೆ ಕಚ್ಚುವುದರಿಂದ ಮಲೇರಿಯಾ ಸೋಂಕು ಹರಡುತ್ತವೆ.
ಮಹಾನಗರ ವ್ಯಾಪ್ತಿಯಲ್ಲಿ ಮೇ ತಿಂಗಳಲ್ಲಿ ವರದಿಯಾದ ಮಲೇರಿಯಾ:
ಪಾಲಿಕೆ ವ್ಯಾಪ್ತಿಯಲ್ಲಿ ಮೇ ತಿಂಗಳಲ್ಲಿ ೫೦೦ಪ್ರಕರಣಗಳು  ವರದಿಯಾಗಿದೆ. ಅತಿ ಹೆಚ್ಚು ಕದ್ರಿ ವಠಾರ ಹಾಗೂ ಉರ್ವ-೫೦, ದೇರೆಬೈಲ್ ಪಶ್ಚಿಮ ವಲಯ -೪೯, ಅತ್ತಾವರ-೪೩, ಕಂಕನಾಡಿ-೪೨ ವರದಿಯಾಗಿದೆ. ಅತಿ ಕಡಿಮೆ ದೇರೆಬೈಲ್ ದಕ್ಷಿಣ -೧, ಪಂಜಿನಮೊಗೆರು-೫,  ಕೂಳೂರು-೬, ಕಾವೂರು-೭ ವರದಿಯಾಗಿದೆ. ಡೆಂಗ್ಯೂ ಜ್ವರ ನಗರದಲ್ಲಿ ಜನವರಿಯಿಂದ ಜೂನ್‌ವರೆಗೆ-೩೨ ಪ್ರಕರಣಗಳು ವರದಿಯಾಗಿದೆ.
ಏನಿದು ಆಕ್ಷನ್ ಪ್ಲ್ಯಾನ್?
ಪಾಲಿಕೆ ವತಿಯಿಂದ ಮಲೇರಿಯಾ ನಿಯಂತ್ರಣಕ್ಕೆ ಒಂದು ವಾರದಲ್ಲಿ ಕಾರ್ಯರಂಭ ಮಾಡುವ ಯೋಜನೆಯಾಗಿದೆ. ವಿವಿಧ ಆರೋಗ್ಯ ಇಲಾಖೆಗಳ ೪೩ ಕಾರ್ಯಕರ್ತರು, ಪಾಲಿಕೆಯ ಸಿಬ್ಬಂದಿಗಳು ಸೇರಿ ೭೫ ಮಂದಿಯ ತಂಡ ಇದಾಗಿದೆ. ಲೇಡಿಹಿಲ್, ಅತ್ತಾವರ, ಜೆಪ್ಪು, ಕದ್ರಿ ನಾಲ್ಕು ಕಡೆಗಳಲ್ಲಿ ಸಬ್‌ಸೆಂಟರ್‌ಗಳನ್ನಾಗಿ ಮಾಡಲಾಗುವುದು. ಮಲೇರಿಯಾದ ಕುರಿತು ಮಾಹಿತಿ ನೀಡುವವರು, ಔಷಧಿ ಸಿಂಪಡಿಸುವ ಹಾಗೂ ಕ್ಲೀನ್ ಮಾಡುವವರು ಸೇರಿ ಮೂರು ಜನರ ತಂಡವಿರುತ್ತದೆ. ಮಹಾನಗರ ಪಾಲಿಕೆಯ ೬೦ ವಾರ್ಡ್ ಪೈಕಿ  ೪೫ ವಾರ್ಡ್‌ಗಳಲ್ಲಿ ತಂಡ ಕಾರ್ಯ ನಿರ್ವಹಿಸುತ್ತದೆ. ಉಳಿದಂತೆ  ೧೫ ವಾರ್ಡ್‌ಗಳಲ್ಲಿ ಗ್ರಾಮೀಣ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸುತ್ತದೆ.
ಆಕ್ಷನ್ ಪ್ಲ್ಯಾನ್ ಕಾರ್ಯಕರ್ತರು ಬಹುಮಹಡಿ ಕಟ್ಟಡ, ನಿರ್ಮಾಣ ಹಂತದಲ್ಲಿರುವ ಕಟ್ಟಡ ಸೇರಿದಂತೆ ಪ್ರತಿಯೊಂದು ಮನೆಗೂ ತೆರಳಿ ರಕ್ತ ತಪಾಸಣೆ, ಮದ್ದು ಸಿಂಪಡಣೆಯನ್ನು ಮಾಡುತ್ತಾರೆ. ಪ್ರತಿ ಎಂಟು ದಿನಗಳಿಗೊಮ್ಮೆ ನಿಂತ ನೀರನ್ನು ಖಾಲಿ ಮಾಡುವ ಹಾಗೂ ಔಷಧಿಯನ್ನು ಸಿಂಪಡಿಸುವ ಕಾರ್ಯವನ್ನು ಇವರು ಮಾಡುತ್ತಾರೆ. ಪಾಲಿಕೆಯ ವತಿಯಿಂದ ಹೊಟೇಲ್, ವಲಸೆ ಕಾರ್ಮಿರನ್ನು ಮುಖ್ಯವಾಗಿ ಗಮನಿಸಿ ಮಾಹಿತಿಯನ್ನು ನೀಡಲಾಗುವುದು. ಕಮಿಷನರ್ ಈಗಾಗಲೇ ಬಹುಮಹಡಿ ಕಟ್ಟಡ ಮಾಲಕರಿಗೆ ಸ್ವಚ್ಚತೆಯನ್ನು ಕಾಪಾಡುವಂತೆ ಮನವಿಯನ್ನು ಮಾಡಿದ್ದು, ನಿರ್ಲಕ್ಷಿಸಿದಲ್ಲಿ  ಮುಂದಿನ ದಿನದಲ್ಲಿ ಹಂತ-ಹಂತವಾಗಿ ಪರವಾನಿಗೆ ರದ್ದುಮಾಡುವ ಕುರಿತಂತೆ ತಿಳಿಸಿದ್ದಾರೆ.
ಆಕ್ಷನ್ ಪ್ಲ್ಯಾನ್‌ಗೆ ಕಾರಣವಾದ ಅಂಶ:
ಮಲೇರಿಯಾ ಕುರಿತು ಈಗಾಗಲೇ ಜಾಗೃತಿ ಮೂಡಿಸುವ ಕಾರ್ಯವನ್ನು ಆಯೋಜಿಸಿದ್ದರು ಕೆಲವೊಂದು ಅಧಿಕಾರಿಗಳ  ನಿರ್ಲಕ್ಷ್ಯದಿಂದಾಗಿಯೇ ರೋಗಗಳು ಹೆಚ್ಚಾಗಿವೆ. ಪ್ರತಿಯೊಂದು ಸ್ಥಳಕ್ಕೆ ಅಧಿಕಾರಿಗಳನ್ನು ನೇಮಿಸಿದ್ದರೂ ನಗರದಲ್ಲಿರುವ ಬಂದರು ಪ್ರದೇಶದ ಮಹಿಳಾ ಅಧಿಕಾರಿಯೊಬ್ಬರ  ನಿರ್ಲಕ್ಷ್ಯದಿಂದಾಗಿ ಹಲವಾರು ಮಲೇರಿಯಾ ರೋಗಿಗಳು ಇದ್ದರೂ ಅದರ ಕುರಿತಂತೆ ಮಾಹಿತಿ ಸಂಗ್ರಹಿಸಲಾಗಿಲ್ಲವೆಂದು ದೂರಲಾಗಿದೆ.  ಮಲೇರಿಯಾ ರೋಗಾಣುಗಳ ಹೊಡೆದೊಡಿಸುವ ಹೊಗೆಯಂತ್ರಕ್ಕೆ ಬಳಲಾಗುವ ಡೀಸೆಲ್ ಹಾಗೂ ಪೆಟ್ರೋಲ್‌ನ್ನು ಕೆಲವೊಂದು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡ ಕಾರಣದಿಂದಲೇ ಪಾಲಿಕೆ ಅನಿವಾರ್ಯ ಸ್ಥಳಗಳಿಗೆ ಮಾತ್ರ ಈ ಕಾರ್ಯವನ್ನು ವ್ಯವಸ್ಥೆಗೊಳಿಸಲಾಗಿದೆ. ನಗರ ಪ್ರದೇಶದಲ್ಲಿ ಮಲೇರಿಯಾ ಕುರಿತ ಮಾಹಿತಿ ಹಾಗೂ ಪಾರದರ್ಶಕ ಚಿಕಿತ್ಸೆಗಾಗಿ ಆಕ್ಷನ್ ಪ್ಲ್ಯಾನ್ ತಯಾರಾಗಿದೆ. ಇದರಿಂದ ರೋಗಿಗಳ ಮಾಹಿತಿ ಹಾಗೂ ಅವ್ಯವಹಾರವನ್ನು  ತಡೆಗಟ್ಟಬಹುದಾಗಿದೆ. ಮೇ ತಿಂಗಳಲ್ಲಿ ೩೨೮ ವರದಿ ದಾಖಲಾಗಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಗುರಿಯಾಗಿಟ್ಟುಕೊಂಡು ಮಲೇರಿಯಾ ನಿಯಂತ್ರಣಕ್ಕಾಗಿ ಶ್ರಮಿಸಲಾಗುವುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
ಜ್ವರ ಬಂದಾಗ ರಕ್ತ ತಪಾಸಣೆ ಹಾಗೂ ಚಿಕಿತ್ಸೆಯ ಸ್ಥಳ:
*ಲಾಲ್‌ಬಾಗ್‌ನ ಮನಪಾ ಮಹಡಿ
*ಬಿಜೈ ಪತಂಜಲಿ ಯೋಗ ಕೇಂದ್ರದ  ಮುಂಭಾಗ
*ಲೇಡಿಹಿಲ್ ಹಾಗೂ ಜೆಪ್ಪು ವೃತ್ತದ ಸಮೀಪ
* ಕದ್ರಿ ಸಿಟಿ ಆಸ್ಪತ್ರೆ ಮುಂಬಾಗ
* ದೇರೆಬೈಲು-ಉರ್ವಮಾರ್ಕೆಟ್
ಸಮಯ: ಬೆ.೯ರಿಂದ ಮಧ್ಯಾಹ್ನ ೧ರವರೆಗೆ
            ಮ: ೩ರಿಂದ ಸಂಜೆ ೫.೩೦ರವರೆಗೆ

No comments:

Post a Comment