Friday 22 June 2012




ಮಂಗಳೂರಿನಲ್ಲಿ  ಸರಕಾರಿ ಬಸ್ ಸಂಚಾರ ಸಾಧ್ಯವೇ?
*ಸಂದೇಶ ಶೆಟ್ಟಿ ಆರ್ಡಿ
ಮಂಗಳೂರು: ದಿನದಿಂದ ದಿನಕ್ಕೆ  ನಗರದ ಅಭಿವೃದ್ಧಿಯೊಂದಿಗೆ ಜನಸಂಖ್ಯೆಯು ವಿಪರೀತವಾಗುತ್ತಿದೆ. ನಗರದಲ್ಲಿ ಸಾವಿರಾರು ವಾಹನಗಳು  ಹೆಚ್ಚಾಗುತ್ತಿದ್ದು, ಬಸ್ಸುಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಜನಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಂತಹ ಸೂಕ್ಷ್ಮ ಸಂಗತಿ ಗಮನಿಸಿದ ಸರಕಾರ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯು ನಗರದಲ್ಲಿ ಸರಕಾರಿ ಬಸ್ಸುಗಳ ಸಂಚಾರಕ್ಕೆ ತೀರ್ಮಾನಿಸಿದ್ದರೂ ಹಲವಾರು ಅನಾನುಕೂಲತೆಯಿಂದ ವಿಳಂಬವಾಗುತ್ತಿದೆ. ಬೆಂಗಳೂರು ನಗರದಂತೆ ಮಂಗಳೂರಿನಲ್ಲಿ ಸರಕಾರಿ ಬಸ್ಸುಗಳ ಸಂಚಾರ ಆರಂಭಗೊಂಡರೆ ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ಜನತೆಯ ಪಾಲಿಗೆ ವರವಾಗಿ ಪರಿಣಮಿಸುತ್ತದೆ.
ಪ್ರಾದೇಶಿಕ ಸಾರಿಗೆ ಅಕಾರಿ ಶೀಘ್ರದಲ್ಲಿಯೇ ಸರಕಾರಿ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದ್ದರೂ ರೀಜ್‌ನಲ್ ಟ್ರಾನ್ಸ್‌ಫೋರ್ಟ್ ಅಥಾರಿಟಿ(ಆರ್‌ಟಿಎ) ಮೀಟಿಂಗ್‌ನಲ್ಲಿ ಒಪ್ಪಿಗೆಯಾದರೆ ನಗರದಲ್ಲಿ ಸರಕಾರಿ ಬಸ್‌ಗಳು ಓಡಾಡಲಿವೆ.ಆರ್‌ಟಿಎ ಮೀಟಿಂಗ್‌ನಲ್ಲಿ ಜಿಲ್ಲಾಕಾರಿ ಕಾರ್ಯಾಧ್ಯಕ್ಷರಾಗಿರುತ್ತಾರೆ. ಸೂಪರಿಂಟೆಂಡೆಂಟ್ ಆಫ್ ಪೊಲೀಸ್, ಆರ್‌ಟಿಒ ಸೇರಿದಂತೆ ಇತರ ಅಕಾರಿಗಳು ಈ ಆರ್‌ಟಿಎ ಕಮಿಟಿಯಲ್ಲಿ ಇರುತ್ತಾರೆ.
ಮ್ಯಾಜಿಸ್ಟ್ರೇಟ್ ನೋಟಿಫಿಕೇಶನ್ ಬರಲು ಕಾರಣವಾದ ಅಂಶ?
೧೯೯೧ಜನವರಿ ೫ ರಂದು ಆಗಿನ ದಂಡಾಕಾರಿಯಾದ ಕೆ.ಪಿ.ಕೃಷ್ಣನ್ ಅವರು ಸಿಟಿ ಬಸ್‌ನ್ನು ಮ್ಯಾಜಿಸ್ಟ್ರೀ ನೋಟಿಫಿಕೇಶನ್ ಅಡಿಯಲ್ಲಿ ತಂದ ನಂತರದಲ್ಲಿ  ನಗರದಲ್ಲಿ ಸಿಟಿ ಬಸ್ ಸಂಚಾರಕ್ಕೆ ಅನುಮತಿ ನಿಲ್ಲಿಸಲಾಗಿದೆ. ೧೯೯೩ ಎಪ್ರಿಲ್ ೬ ರಂದು ಜಿಲ್ಲಾಕಾರಿಯಾದ ವಿ. ಮಧು ಅವರು ಸರ್ವಿಸ್ ಬಸ್‌ಗಳಿಗೆ ರೂಟ್ ಪರ್ಮೀಟ್ ಕೊಡುವುದನ್ನು ನಿಲ್ಲಿಸಿದ್ದರು. ೧೯೯೨ ಸಪ್ಟ್ಟೆಂಬರ್ ೧೩ ರಂದು ಟ್ರಾಫಿಕ್ ಪೊಲೀಸ್‌ನವರಿಂದ  ನಗರದ ಹಳೆ ಬಸ್‌ನಿಲ್ದಾಣ ಹಂಪನಕಟ್ಟೆ ವೃತ್ತದಲ್ಲಿ ಸರ್ವೇಯನ್ನು ನಡೆಸಿ ವರದಿಯನ್ನು ತಯಾರಿಸುತ್ತಾರೆ. ವೃತ್ತದಲ್ಲಿ ಪ್ರತಿ ಒಂದು ನಿಮಿಷಕ್ಕೆ ೧೫೬ ವಾಹನಗಳು ಬೆಳಿಗ್ಗೆ ೯ರಿಂದ ೧೦ ಗಂಟೆಯ ಅವಯಲ್ಲಿ ಸಂಚರಿಸುತ್ತದೆ. ನಿಮಿಷಕ್ಕೆ ೧೪೭ ವಾಹನಗಳು ೧೦ ರಿಂದ ೧೧ಗಂಟೆಯ ಅವಯಲ್ಲಿಯೂ ಹಾಗೂ ನಿಮಿಷಕ್ಕೆ ೧೪೧ ವಾಹನಗಳು  ೧೧ರಿಂದ ೧೨ರ ಅವಯಲ್ಲಿ ಸಂಚರಿಸುತ್ತಿದ್ದವು. ಆ ವಾಹನಗಳಲ್ಲಿ ಪ್ರತಿ ನಿಮಿಷಕ್ಕೆ ೧೩ ಬಸ್‌ಗಳು ಸಂಚರಿಸುತ್ತವೆ ಎಂದು ವರದಿ ಹೇಳಿದೆ. ಆರ್‌ಟಿಎ ಕಾರ್ಯದರ್ಶಿ ೧೯೯೩ ಮಾರ್ಚ್ ೨೬ರಂದು ಮತ್ತೊಂದು ವರದಿಯನ್ನು ತಯಾರಿಸಿದ್ದು ಅದರಲ್ಲಿ ೧೫೦೬ ಬಸ್‌ಟ್ರಿಪ್‌ಗಳಿದ್ದು, ೩೭೪ ಪರ್ಮಿಟ್‌ಗಳು ಹಂಪನಕಟ್ಟೆಯನ್ನು ತಲುಪುತ್ತಿದೆ. ಇದರಲ್ಲಿ  ೨೦೬ ಸಿಟಿ ಬಸ್ ಸೇವೆಗಳಿದ್ದು, ೨೦೦೨ ಟ್ರಿಪ್‌ಗಳು ಪ್ರತಿದಿನ ಹಂಪನಕಟ್ಟೆಯಲ್ಲಿ ವರದಿಯಾಗಿದೆ ಎನ್ನಲಾಗಿದೆ. ನಗರದಲ್ಲಿ ವಾಹನ ಸಂಖ್ಯೆ ಹೆಚ್ಚಾಗಿದ್ದರಿಂದ ವೆನ್ಲಾಕ್ ಆಸ್ಪತ್ರೆ ವೃತ್ತದ ಸಮೀಪದಲ್ಲಿರುವುದರಿಂದ ಜನಸಂಚಾರಕ್ಕೆ ತೊಂದರೆಯುಂಟಾಗುತ್ತದೆ ಎಂದು ತೀರ್ಮಾನಿಸಿ  ಜಿಲ್ಲಾಕಾರಿ ವಿ. ಮಧು ರೂಟ್ ಪರ್ಮೀಟ್ ಕೊಡುವುದನ್ನು ನಿಲ್ಲಿಸಲಾಗಿದೆ ಎನ್ನುವ ಆದೇಶವನ್ನು ಹೊರಡಿಸುತ್ತಾರೆ. ೧೯೯೩ ರಿಂದ ನಗರದಲ್ಲಿ ಯಾವುದೇ ಬಸ್ ಸಂಚಾರಕ್ಕೆ ಅನುಮತಿಯನ್ನು ನೀಡಲಾಗುತ್ತಿಲ್ಲ.
ಮ್ಯಾಜಿಸ್ಟ್ರೇಟ್ ನೋಟಿಫಿಕೇಶನ್ ಏನು ಹೇಳುತ್ತೆ?
ನಗರ ಪ್ರದೇಶದಲ್ಲಿ ಅನುಮತಿ ನೀಡುವುದನ್ನು ನಿಲ್ಲಿಸಲಾಗಿದ್ದರೂ, ನಗರ ಹೊರಭಾಗದಲ್ಲಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದ್ದರೂ ಮ್ಯಾಜಿಸ್ಟ್ರೇಟ್ ನೋಟಿಫಿಕೇಶನ್ ನಿಯಮದಂತೆ ಮರವೂರು, ಬೊಂದೇಲ್ ನಗರ ಸಾರಿಗೆ ಬಸ್‌ಗಳು ಕೆ.ಪಿ.ಟಿ ವೃತ್ತದಲ್ಲಿ ನಿಲುಗಡೆಯಾಗಬೇಕು. ಗುರುಪುರ, ಕುಲಶೇಖರದಿಂದ ಬರುವ ಬಸ್‌ಗಳು ಮಲ್ಲಿಕಟ್ಟೆಯಲ್ಲಿ ನಿಲುಗಡೆ, ತಲಪಾಡಿ, ಉಳ್ಳಾಲ, ಕೊಣಾಜೆ, ತೊಕ್ಕೊಟ್ಟು, ಪಡೀಲ್ ಮತ್ತು ನಾಗೂರಿ, ಕಂಕನಾಡಿಯಿಂದ ಬರುವ ಬಸ್‌ಗಳು ಕಂಕನಾಡಿಯಲ್ಲಿಯೂ, ಸುರತ್ಕಲ್, ಕೂಳೂರು, ಕೊಟ್ಟಾರ, ಉರ್ವಸ್ಟೋರ್, ಉರ್ವಮಾರ್ಕೇಟ್‌ನಿಂದ ಬಸ್‌ಗಳು ಲೇಡಿಹಿಲ್ ಸರ್ಕಲ್‌ನಲ್ಲಿ ನಿಲುಗಡೆಯಾಗಬೇಕು ಎಂದು ವರದಿಯಲ್ಲಿತ್ತು. ವಾಹನ ದಟ್ಟಣೆ ವಿಪರೀತವಾಗಿದ್ದು, ಶಬ್ದಮಾಲಿನ್ಯ ನಿವಾರಿಸುವ ದೃಷ್ಟಿಯಿಂದ ಆಗಿನ ಜಿಲ್ಲಾಕಾರಿ ಈ ಕಾರ್ಯವನ್ನು ಕೈಗೊಂಡು ನಗರದ ಒಳಗೆ ಬಸ್ ಸಂಚಾರದ ಅನುಮತಿಯನ್ನು ನಿರ್ಬಂಸಿದ್ದರು.
ನಗರದಲ್ಲಿ ಕೆಎಸ್‌ಆರ್‌ಟಿಸಿ
ಮ್ಯಾಜಿಸ್ಟ್ರೇಟ್  ನೋಟಿಫಿಕೇಶನ್, ವಾಹನಗಳ ದಟ್ಟಣೆಯಿಂದ ಹೊಸ  ಬಸ್ ಸಂಚಾರಕ್ಕೆ ಅನುಮತಿ ನೀಡುವುದು ಕಷ್ಟವೆನ್ನುವ ಒಂದು ಅಂಶ ಮೇಲ್ನೋಟಕ್ಕೆ ಕಾಣ ಸಿಕ್ಕಿದರೂ, ಜಿಲ್ಲಾಕಾರಿ ಶುಭೋಧಯ್ ಯಾದವ್ ಹಾಗೂ ಎಸ್‌ಪಿಯಾಗಿದ್ದ ಸುಬ್ರಹ್ಮಣ್ಯೇಶ್ವರ ರಾವ್ ಬಸ್‌ನಿಲ್ದಾಣ ಬದಲಾವಣೆ ವರದಿಯಂತೆ ತೊಕ್ಕೊಟ್ಟು - ಪಂಪ್‌ವೆಲ್‌ನ ರಸ್ತೆ ಅಗಲೀಕರಣವಾಗಿ ಪಂಪ್‌ವೆಲ್‌ನಲ್ಲಿ ಬಸ್ ನಿಲ್ದಾಣವಾದರೆ ಸರಕಾರಿ ಬಸ್‌ಗಳು ಸಂಚರಿಸುತ್ತವೆ. ನಗರದ ಹೊರಭಾಗದಲ್ಲಿ ಬಸ್ ಸಂಚಾರಕ್ಕೆ ರಸ್ತೆ ಪರವಾನಿಗೆ ನೀಡುತ್ತಿರುವುದರಿಂದ ಇದು ಸಾಧ್ಯವಿದೆ.
ಕೆಎಸ್ಸಾರ್ಟಿಸಿ ಬಸ್ಸುಗಳು ಆರಂಭಗೊಂಡದ್ದೇ ಆದರೆ ಸರಕಾರಿ ಮತ್ತು ಖಾಸಗಿ ಬಸ್ಸು ಸೇವೆಗಳ ನಡುವೆ ಆರೋಗ್ಯಕರ ಸ್ಪರ್ಧೆ ಉಂಟಾಗಿ ಜನರಿಗೆ ಉತ್ತಮ ಸೇವೆ ಲಭಿಸುವಂತಾದರೆ ಅದು ಜನರಿಗೆ ವರದಾನವಾಗಲಿದೆ.
ಈಗಾಗಲೇ ಕೆ.ಎಸ್.ಆರ್.ಟಿ.ಸಿ ವತಿಯಿಂದ ೪೧ ಅರ್ಜಿಗಳು ಇದ್ದು ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಕಾರಿ, ಎಸ್‌ಪಿ ಇತರ ಅಕಾರಿಗಳು ಸೇರುವ ಆರ್‌ಟಿಎ ಮೀಟಿಂಗ್‌ನಲ್ಲಿ ಅನುಮತಿ ದೊರಕಿದರೆ ನಗರದಲ್ಲಿ ಸರಕಾರಿ ಬಸ್‌ಗಳು ಸಂಚರಿಸುತ್ತವೆ.  ಜಿಲ್ಲಾಕಾರಿ ಯಾವ ಕಾರ್ಯ ಕೈಗೊಳ್ಳುತ್ತಾರೆ ಎನ್ನುವುದನ್ನು ಅವಲಂಬಿಸಿ ಸರಕಾರಿ ನಗರ ಸಾರಿಗೆ ಬಸ್‌ಗಳ ಸೇವೆ ನಿರ್ಧಾರವಾಗಲಿದೆ.
ಸಿ.ಮಲ್ಲಿಕಾರ್ಜುನ್- ಆರ್‌ಟಿಒ ಮಂಗಳೂರು.

ರಾಜ್ಯ ಸಾರಿಗೆ ಸಚಿವರು ಮಂಗಳೂರು ನಗರದಲ್ಲಿ ಸಾರಿಗೆ ಬಸ್‌ಗಳನ್ನು ಹಾಕುವ ಕುರಿತು ಆಲೋಚಿಸುತ್ತಿದ್ದಾರೆ. ನಗರ ಪ್ರದೇಶದಲ್ಲಿ ಸರಕಾರಿ ಬಸ್‌ಸೇವೆ ಆರಂಭವಾದರೆ ಸರಕಾರಕ್ಕೆ ಆದಾಯ ಹೆಚ್ಚಾಗಲಿದೆ. ನಗರದಲ್ಲಿ ಬಸ್ ಸಂಚಾರಕ್ಕೆ ಮಾರ್ಗ ಅನುಮತಿಗಾಗಿ ಮನವಿಯನ್ನು ನೀಡಿದ್ದು ಆರ್‌ಟಿಎ ಮೀಟಿಂಗ್‌ನಲ್ಲಿ ತೀರ್ಮಾನವಾಗಲಿದೆ. ಪ್ರಯಾಣಿಕರಿಗಾಗಿ ಉತ್ತಮ ಸೇವೆಯನ್ನು ಕೆಎಸ್‌ಆರ್‌ಟಿಸಿ ನೀಡುತ್ತಿದ್ದು ನಗರ ಸಾರಿಗೆಗೆ ಅನುಮತಿ ನೀಡಿದರೆ ಇದಕ್ಕಿಂತಲೂ ಹೆಚ್ಚಿನ ಸೇವೆ ನೀಡುತ್ತೇವೆ.
ರಮೇಶ್- ಡಿ.ಸಿ. ಕೆಎಸ್‌ಆರ್‌ಟಿಸಿ.

ಬೆಂಗಳೂರಿನಲ್ಲಿ ಬಿಎಂಟಿಸಿ ಇರುವಂತೆ ಮಂಗಳೂರಿನಲ್ಲಿಯೂ ಸರಕಾರಿ ಬಸ್‌ಸೇವೆ ಅಗತ್ಯ ಇದೆ.  ಸಾಮಾನ್ಯ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸರಕಾರಿ ಬಸ್ ಸೇವೆ ಬೇಕಾಗಿದೆ.
ಸಂತೋಷ ಪೂಜಾರಿ-ಚಿಲಿಂಬಿ ನಿವಾಸಿ



No comments:

Post a Comment