Thursday 21 June 2012





ಕರಾವಳಿಯಲ್ಲಿ ಮುಂಗಾರು ಆರಂಭ...ಮೀನುಗಾರರಿಗೆ ಜೂ.೧೪ರಿಂದ ನಿರ್ಬಂಧ
-ಸಂದೇಶ ಶೆಟ್ಟಿ ಆರ್ಡಿ
ಮುಂಗಾರು ಮಳೆ ಆಗಮನವಾದಾಗ ಅನೇಕ ಕಾರ್ಯಚಟುವಟಿಕೆಗಳು ಭರದಿಂದ ಪ್ರಾರಂಭವಾಗುತ್ತವೆ. ಮಕ್ಕಳು ಶಾಲಾ ಜೀವನಕ್ಕೂ, ರೈತರು ಕೃಷಿ ಕಾರ್ಯಕ್ಕೂ ಅಣಿಯಾಗುತ್ತಾರೆ. ನಿಶ್ಚಿತ ಅವಧಿಯವರೆಗೆ ವೃತ್ತಿಯನ್ನು ಅವಲಂಬಿಸಿದ್ದ ಯಕ್ಷಗಾನ ಮೇಳ ತಿರುಗಾಟವನ್ನು ಮುಗಿಸಿದ್ದು, ಮೀನುಗಾರರು ಕೂಡ ತಮ್ಮ ಯೋಜನಾಬದ್ದ ಕಾಯಕಕ್ಕೆ ವಿರಾಮ ಹೇಳುತ್ತಿದ್ದಾರೆ.  ಪ್ರತಿವರ್ಷದಂತೆ ಮುಂಗಾರು ಮಳೆ ಕರಾವಳಿಗೆ ಆಗಮನವಾಗಿದ್ದು ಸಮುದ್ರದ ತೀವ್ರತೆರನಾದ ಅಲೆಗಳಿಗೆ ತಮ್ಮ ಅಮೂಲ್ಯ ಜೀವವನ್ನು ಒತ್ತೆಯಿಟ್ಟು ಕುಟುಂಬದವರೊಡನೆ ನೆಮ್ಮದಿ ಜೀವನ ಕಂಡುಕೊಂಡ ಮೀನುಗಾರರು ಮಳೆಗಾಲದ ರಜೆಗಾಗಿ ತಮ್ಮ ಬೋಟುಗಳನ್ನು ದಡ ಸೇರಿಸುತ್ತಿದ್ದ ದೃಶ್ಯ ನಗರದ ಬಂದರಿನ ದಕ್ಕೆಯಲ್ಲಿ ಕಂಡುಬಂದಿದೆ. ಮೀನುಗಾರರಿಗೆ ಜೂ.೧೪ರಿಂದ ಮೀನು ಹಿಡಿಯುವುದಕ್ಕೆ ನಿರ್ಬಂಧ ಹೇರಲಾಗಿದೆ.
ದಕ್ಷಿಣ ಕನ್ನಡದಲ್ಲಿರುವ ೧,೧೦೬ ಯಾಂತ್ರಿಕೃತ ದೋಣಿ, ೧೦೧೯ ಸಣ್ಣ ಇಂಜಿನ್, ೩೭೧ ನಾಡದೋಣಿಗಳಲ್ಲಿ ಹಲವರು ಈಗಾಗಲೇ ದಡವನ್ನು ಸೇರಿದ್ದು,ಉಳಿದಂತೆ  ಜೂನ್ ೧೪ರ ಒಳಗೆ ದಡವನ್ನು ಸೇರಬೇಕಾಗಿದೆ. ಇವರು ವರ್ಷದ ೯ ತಿಂಗಳುಗಳ ಕಾಲ ಸಮುದ್ರದಲ್ಲಿ ಸುಮಾರು ೧೫೦ ಕಿ.ಮೀ.ಗಳವರೆಗೆ ಸಾಗಿ ಮೀನನ್ನು ಹಿಡಿಯುತ್ತಾರೆ. ದಕ್ಷಿಣ ಕನ್ನಡದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ  ಈ ಬಾರಿ ಹಿಡಿದ ಮೀನಿನ ಪ್ರಮಾಣ ಕಡಿಮೆಯಾಗಿದೆ. ೨೦೧೦-೧೧ರಲ್ಲಿ ೧.೩೪ ಲಕ್ಷ ಟನ್ ಆಗಿದ್ದು ೨೦೧೧-೧೨ನೇ ಸಾಲಿನಲ್ಲಿ ೧.೨೬ ಲಕ್ಷ ಟನ್ ಮೀನು ಸಂಗ್ರಹಿಸಲಾಗಿದೆ. ಹಿಡಿದಿರುವ ಹೆಚ್ಚಿನ ಮೀನುಗಳೆಲ್ಲಾ ಹರಾಜಿನ ಮೂಲಕ ಸ್ಥಳೀಯ ಮಾರುಕಟ್ಟೆಯನ್ನು ಪ್ರವೇಶಿಸುವುದು ಹಾಗೂ ಉಳಿದಂತೆ ಕೊಚ್ಚಿನ್, ಗೋವಾ ಇತರ ರಾಜ್ಯಗಳಿಗೆ ರಪ್ತು ಆಗಿದೆ.  ಸಾಮಾನ್ಯವಾಗಿ ಮೀನಿನ ಸಂಗ್ರಹಣೆಯು  ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕಡಿಮೆಯಾಗುತ್ತದೆ. ತಾಪಮಾನದ ವೈಪರಿತ್ಯದಿಂದಾಗಿಯೋ ಅಥವಾ ಪರಿಸರದ ಕಾರಣದಿಂದ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ. ಈ ಬಾರಿ ಜೂನ್ ೧೫ರಿಂದ ಆಗಸ್ಟ್ ೧೫ರವರೆಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
೨೦೧೧-೧೨ರ ವಿಶೇಷತೆ:
ಈ ಬಾರಿ ಸಮುದ್ರದಲ್ಲಿ ಬಂಗುಡೆ, ಬೂತಾಯಿ, ರಾಣಿ ಮೀನು (ಮದುಮಗಳು),  ಕಪ್ಪೆ ಬೊಂಡಾಸ್ ಸಿಕ್ಕಿದ್ದವು. ಬೇರೆ ವಿಶೇಷವಾದ ಮೀನುಗಳು ಯಾವುದು ಸಿಕ್ಕಿರುವುದಿಲ್ಲ. ಕಪ್ಪೆ ಬೊಂಡಾಸ್ ಲಾಭದಾಯಕವಾಗಿದ್ದರೂ, ಇವುಗಳು ಸುಮಾರು  ೧೨೫ರಿಂದ ೧೪೦ ಮೀಟರ್ ಆಳದಲ್ಲಿ ಇರುವುದರಿಂದ ಹಿಡಿಯುವುದು ತುಂಬಾ ಕಷ್ಟಕರವಾಗಿದೆ. ಅಕ್ರಮ ಹಾಗೂ ಅವೈಜ್ಞಾನಿಕವಾಗಿ ಕಪ್ಪೆ ಬೊಂಡಾಸ್‌ನ್ನು ಹಿಡಿಯುವುದರಿಂದ ಅವುಗಳ ಸಂತತಿ ನಾಶವಾಗುವ ಭೀತಿಯಿದೆ. ಕೇರಳ ಮತ್ತು ತಮಿಳ್ನಾಡಿನಲ್ಲಿ ಕಪ್ಪೆ ಬೊಂಡಾಸ್‌ನ್ನು ಅಕ್ರಮವಾಗಿ ಹಿಡಿಯುವುದನ್ನು ನಿಷೇಧಿಸಲಾಗಿದೆ.  ತೆಂಗಿನ ನಾರನ್ನು ಬಂಡೆಗಳ ಸಮೀಪದಲ್ಲಿ ಹಾಕಿ ಕೊಳೆಯುವಂತೆ ಮಾಡಿದಾಗ ಬೊಂಡಾಸ್‌ಗಳು ಬಂದು ಮೊಟ್ಟೆ ಹಾಕುತ್ತವೆ.  ಮೊಟ್ಟೆ ಮರಿಯಾಗಿ ಬೆಳೆಯುವುದಕ್ಕಿಂತ ಮೊದಲೆ ಅವುಗಳನ್ನು ಹಿಡಿಯುವುದರಿಂದ ಮುಂದಿನ ದಿನದಲ್ಲಿ ಕಪ್ಪೆ ಬೊಂಡಾಸ್‌ನ ಹೆಸರನ್ನು ಹೇಳುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಬೇಸರ ವ್ಯಕ್ತ ಪಡಿಸುತ್ತಾರೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಶ್ಮಿತಾ.
ಇಲಾಖೆಯ ವತಿಯಿಂದ ಮೀನುಗಾರರಿಗೆ ಸೌಲಭ್ಯ:
ರಾಜ್ಯದಲ್ಲಿ ಮೀನುಗಾರರಿಗೆ ೧ಲಕ್ಷ ಲೀ. ಡಿಸೇಲ್‌ನ್ನು ತೆರೆಗೆ ರಹಿತವಾಗಿ ನೀಡಲಾಗುತ್ತಿದೆ. ೨೦೧೧-೧೨ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರರಿಗೆ ೩೬ ಸಾವಿರ ಲೀಟರ್ ತೆರಿಗೆ ರಹಿತ ಡಿಸೇಲ್‌ನ್ನು ನೀಡಲಾಗಿದೆ. ಮೀನುಗಾರರಿಗೆ ಪ್ರತಿ ಲೀಟರ್‌ಗೆ ೬ ರೂಪಾಯಿ ರಿಯಾಯಿತಿ ದೊರೆಯುತ್ತಿದೆ. ಜಿಲ್ಲಾ ಪಂಚಾಯತ್‌ನ ವತಿಯಿಂದ ಜಿಪಿಎಸ್-ಫಿಶ್ ಫೈಂಡರ್ ರೆಡಿಯೋ ಟೆಲಿಫೋನ್ ಯೋಜನೆಯಡಿ ೩೪ ಸಾವಿರ ರೂ.ಗಳ ಸಬ್ಸಿಡಿ ನೀಡಲಾಗಿದೆ.
ತಾತ್ಕಾಲಿಕವಾಗಿ ನಿರ್ಬಂಧ ಹೇರಿದ್ದು, ರಜಾ ದಿನದಲ್ಲಿ ಬೋಟ್‌ಗಳ ರಿಪೇರಿ, ಬಲೆ ರೀಪೆರಿ ಕಾರ್ಯ ಮಾಡಲಾಗುತ್ತದೆ. ಉಡುಪಿ ಜಿಲ್ಲೆಗೆ ಹೋಲಿಸಿದರೆ ದಕ್ಷಿಣ ಕನ್ನಡದಲ್ಲಿ ಮೀನಿನ ಸಂಗ್ರಹಣೆ ಹೇಳುವಂಥ ವ್ಯತ್ಯಾಸವೇನು ಆಗಿಲ್ಲ. ಉಡುಪಿಯಲ್ಲಿ ೨೦೧೦-೧೧ರಲ್ಲಿ ೧.೧೭ ಲ.ಟನ್ ಆಗಿದ್ದು, ೨೦೧೧-೧೨ನೇ ಸಾಲಿನಲ್ಲಿ ೧.೦೭ಲ.ಟನ್ ಸಂಗ್ರಹಿಸಲಾಗಿದೆ.

ಕಾರವಾರ ಬೋಟ್ ಎಜೆನ್ಸಿಯಲ್ಲಿ ಮೀನು ಹಿಡಿಯುವ ಕಾರ್ಯ ನಿರ್ವಹಿಸುತ್ತಿದ್ದೇನೆ. ತಮಿಳ್ನಾಡು ಮೂಲದವನಾದ ನಾನು ೨೫ ವರ್ಷಗಳಿಂದ ಈ ಕಾಯಕವನ್ನೇ ನಂಬಿಕೊಂಡಿದ್ದೇನೆ. ಈ ಬಾರಿ ಸುಮಾರು ೧.೫ ಕೋಟಿಯ ಮೀನನ್ನು ಹಿಡಿದಿದ್ದೇವೆ.
ಸುಬ್ರಹ್ಮಣ್ಯ ತಮಿಳ್ನಾಡು -ಕಾರವಾರ ಬೋಟ್ ಕಂಪೆನಿ
ದೇವಿ ಕಂಪೆನಿಯಲ್ಲಿ ೬ ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಈ ಬಾರಿ ಸಮುದ್ರಕ್ಕೆ ಹೋದಾಗ ರಾಣಿ ಮೀನು, ಬಂಗಡೆ, ಬೂತಾಯಿಗಳಲ್ಲದೇ ಕಪ್ಪೆ ಬೊಂಡಾಸ್‌ಗಳನ್ನು ಸಂಗ್ರಹಿಸಿದ್ದೇವೆ. ೩೦ರಿಂದ ೬೦ ಮೀಟರ್ ಆಳದವರೆಗೆ ಬಲೆಯನ್ನು ಬೀಸಿ ಮೀನುಗಳನ್ನು ಹಿಡಿದಿದ್ದೇವೆ. ೨೬ ವರ್ಷಗಳಿಂದ ಕುಲಕಸುಬನ್ನು ಮಾಡುತ್ತಾ ಜೀವನವನ್ನು ಮಾಡುತ್ತಿದ್ದೇವೆ. ಇಲ್ಲಿ ೯ ತಿಂಗಳುಗಳ ಕಾಲ ಕೆಲಸವಿದ್ದು ಮಳೆಗಾಲದ ಮೂರು ತಿಂಗಳು ಬೇರೆ ಕೆಲಸವನ್ನು ಮಾಡುತ್ತೇವೆ.
ಹೊನ್ನಪ್ಪ ಹೊನ್ನಾವರ -ಶ್ರೀದೇವಿ ಬೋಟ್ ಕಂಪೆನಿ
೨೦೧೦-೧೧ನೇ ಸಾಲಿನ ದ.ಕ.ಜಿಲ್ಲೆಯ ಮೀನಿನ ಅಂಕಿ-ಅಂಶ:
ತಿಂಗಳು:               ಪ್ರಮಾಣ                  ಮೌಲ್ಯ
ಎಪ್ರಿಲ್-              ೪೮೦೦.೦೦                  ೧೪೫೦.೬೮
ಮೇ  --              ೮೦೨೦.೦೦                  ೨೨೮೦.೫೬
ಜೂನ್-               ೨೩೫.೦೦                    ೧೦೮.೦೫
ಜುಲೈ-                 ೨೯೦.೦೦                    ೧೪೧.೪೨
ಆಗಸ್ಟ್-               ೧೦೧೩೪.೦೦                 ೮೨೪೦.೫೯
ಸಪ್ಟಂಬರ್-          ೨೪೯೫೮.೦೦                 ೧೩೪೪೮.೩೬
ಅಕ್ಟೋಬರ್-        ೨೦೫೬೨.೦೦                 ೧೦೨೪೩.೩೩
ನವೆಂಬರ್-          ೧೪೩೫೮.೦೦                 ೫೭೯೧.೧೨
ಡಿಸೆಂಬರ್-          ೨೧೮೩೬.೦೦                  ೬೭೭೯.೧೭
ಜನವರಿ-              ೯೩೫೦.೦೦                   ೨೧೮೪.೮೯
ಫೆಬ್ರವರಿ-            ೧೦೩೩೫.೦೦                  ೨೭೧೧.೮೫
ಮಾರ್ಚ್-           ೯೮೬೧.೦೦                    ೨೭೧೧.೮೫
ಒಟ್ಟು-             ೧೩೪೭೩೯.೦೦              ೫೬೦೯೦.೧೭

೨೦೧೧-೧೨ ನೇ ಸಾಲಿನ ದ.ಕ.ಜಿಲ್ಲೆಯ ಮೀನಿನ ಅಂಕಿ-ಅಂಶ:
ತಿಂಗಳು                 ಪ್ರಮಾಣ                   ಮೌಲ್ಯ          
ಎಪ್ರಿಲ್                 ೪೧೭೩.೦೦                  ೧೦೭೨.೬೬
ಮೇ                     ೫೦೩೨.೦೦                  ೧೩೯೩.೮೮
ಜೂನ್                 ೨೮೫೮.೦೦                   ೯೬೦.೪೬
ಜುಲೈ                   ೨೫೯೮.೦೦                   ೨೧೦೮.೬೦
ಆಗಸ್ಟ್                  ೭೩೩೬.೦೦                   ೩೮೫೫.೭೫
ಸಪ್ಟಂಬರ್             ೭೯೨೪.೦೦                   ೪೫೯೨.೩೯
ಅಕ್ಟೋಬರ್           ೧೯೫೯೯.೦೦                 ೧೦೨೭೧.೮೩
ನವೆಂಬರ್             ೧೬೩೩೫.೦೦                  ೪೧೫೯.೨೨
ಡಿಸೆಂಬರ್             ೧೯೦೪೯.೦೦                  ೮೩೩೧.೦೦
ಜನವರಿ                 ೧೦೨೯೪.೦೦                 ೮೬೦೧.೯೩
ಫೆಬ್ರವರಿ                ೧೬೫೯೮.೦೦                 ೯೦೬೩.೮೪
ಮಾರ್ಚ್             ೧೪೯೨೫.೦೦                 ೭೬೬೩.೩೪
ಒಟ್ಟು                ೧೨೬೭೨೧.೦೦             ೬೨೦೭೪.೯೦


No comments:

Post a Comment