Thursday 30 January 2014

ನಾಗನ ದೋಷಗಳಿಗೆ ಕುಡುಪು ದೇವಳದಲ್ಲಿಯೂ ಪರಿಹಾರ ಸಾಧ್ಯ..ಸುಬ್ರಹ್ಮಣ್ಯದಷ್ಟೆ ಪ್ರಖ್ಯಾತಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಪವಿತ್ರ ಯಾತ್ರಾ ಸ್ಥಳಗಳಿದ್ದು, ಅಂತಹ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಶ್ರೀ ಕ್ಷೇತ್ರ ಕುಡುಪು ಕೂಡ ಒಂದಾಗಿದ್ದು ಬಹಳ ಪ್ರಾಮುಖ್ಯತೆ ಪಡೆದಿದೆ. ಜಿಲ್ಲೆಯಲ್ಲಿನ ಪ್ರಮುಖ ನಾಗ ದೇವರ ದೇವಸ್ಥಾನಗಳಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನ ಶ್ರೀ ಕ್ಷೇತ್ರ ಕುಡುಪುವಿಗೆ ಸಲ್ಲುತ್ತದೆ. ನಾಗದೇವರ ಶ್ರೀಕ್ಷೇತ್ರದಲ್ಲಿ ಸಕಲ ಶಾಪಗಳಿಗೂ ಪರಿಹಾರವಿದ್ದು ನಿತ್ಯವು ನೂರಾರು ಜನರು ದೇವರ ಸೇವೆಯನ್ನು ಪಡೆದು ಕೃತಾರ್ಥರಾಗುತ್ತಾರೆ.
ಕ್ಷೇತ್ರದ ಇತಿಹಾಸ:
ಶ್ರೀ ಕ್ಷೇತ್ರ ಕುಡುಪು ದೇವಸ್ಥಾನವು ಸುಮಾರು ೨,೦೦೦ ವರ್ಷಗಳಿಗಿಂತಲೂ ಹಿಂದಿನ ಇತಿಹಾಸ ಹೊಂದಿದೆ. `ಕುಡುಪು' ಎಂದರೆ ತುಳು ಭಾಷೆಯಲ್ಲಿ ಅನ್ನ ಬಸಿಯುವ ಸಲಕರಣೆಯೆಂದರ್ಥ. ಶತ-ಶತಮಾನಗಳ ಹಿಂದೆ ಈಗಿನ ಕುಡುಪು ಮತ್ತು ಸುತ್ತಮುತ್ತಲಿನ ಪ್ರದೇಶವು ಕದಲೀವನ ಎನ್ನುವ ಅರಣ್ಯ ಪ್ರದೇಶವಾಗಿತ್ತು. ಈ ಅರಣ್ಯದ ಮಧ್ಯಭಾಗದಲ್ಲಿ ಈಗಿನ ಕುಡುಪು ಕ್ಷೇತ್ರದಲ್ಲಿರುವ 'ಭದ್ರಾ ಸರಸ್ವತಿ' ಸರೋವರವಿತ್ತು. ಈ ಸರೋವರದಲ್ಲಿ ದೇವಾದಿ-ದೇವತೆಗಳು, ಋಷಿ ಮುನಿಗಳು ಸ್ನಾನ ಮಾಡುತ್ತಿದ್ದರು ಎನ್ನುವ ಉಲ್ಲೇಖವಿದೆ.
ಸರೋವರದ ಸಮೀಪದ ಊರಿನಲ್ಲಿ ಸುಮಂತು ಹೆಸರಿನ ಬ್ರಾಹ್ಮಣ ತನ್ನ ಮಗ ಕೇದಾರನೊಂದಿಗೆ ವಾಸವಾಗಿದ್ದ. ಕೇದಾರನು ವಿವಾಹವಾಗಿ ವರ್ಷಗಳು ಸಂದರೂ, ಮಕ್ಕಳಾಗದೇ ಕೊರಗುತ್ತಿದ್ದನು. ಒಂದು ದಿನ ಮಕ್ಕಳಾಗದ ಚಿಂತೆಯಲ್ಲಿ ಸಾಗುತ್ತಾ ಭದ್ರಾ ಸರಸ್ವತಿ ಸರೋವರದ ಪಕ್ಕ ಬಂದಾಗ ಧ್ಯಾನದಲ್ಲಿ ನಿರತರಾಗಿರುವ ಋಷಿಶೃಂಗರನ್ನು ಕಾಣುತ್ತಾನೆ. ಶೃಂಗ ಮುನಿಯಲ್ಲಿ ತನ್ನ ಸಮಸ್ಯೆಯನ್ನು ಕೇದಾರ ತಿಳಿಸಿದಾಗ, ಭದ್ರಾ ಸರಸ್ವತಿ ತೀರ್ಥ ಸರೋವರದಲ್ಲಿ ನಿತ್ಯವೂ ಸ್ನಾನ ಮಾಡಿ ಸುಬ್ರಹ್ಮಣ್ಯನ್ನು ಭಜಿಸಿದರೆ ಸುಬ್ರಹ್ಮಣ್ಯ ಪ್ರತ್ಯಕ್ಷನಾಗಿ ಅನುಗ್ರಹ ನೀಡುವನು ಎನ್ನುವ ಪರಿಹಾರ ಸೂಚಿಸಿದರು.
ತಪಸ್ಸು ಆಚರಿಸಿ ದಿನಗಳು ಕಳೆದರೂ ಸುಬ್ರಹ್ಮಣ್ಯ ದೇವರು ಪ್ರತ್ಯಕ್ಷರಾಗದಿದ್ದಾಗ ಕೇದಾರನು ತನ್ನ ತಪಸ್ಸನ್ನು ಮತ್ತಷ್ಟು ಕಠಿಣಗೊಳಿಸಿದ್ದನು. ಕೊನೆಯಲ್ಲಿ ಕೇದಾರನಿಗೆ ಒಲಿದ ಸುಬ್ರಹ್ಮಣ್ಯ ಸ್ವಾಮಿ ಮಕ್ಕಳಾಗುವಂತೆ ವರ ನೀಡುತ್ತಾನಂತೆ. ಕೇದಾರನು ವರ ಪಡೆದು ವರ್ಷವಾಗಲು ಆತನ ಮಡದಿ ಗರ್ಭವತಿಯಾಗಿ ಮಗುವಿನ ಬದಲು ಮೂರು ಹಾವಿನ ಮೊಟ್ಟೆಗಳಿನ್ನು ಹಡೆಯುವಳು. ಇದರಿಂದ ಕೇದಾರನು ಬೇಸರಗೊಳ್ಳಲು ಆಕಾಶದಲ್ಲಿ ಅಶರೀರವಾಣಿಯು ಕೇಳುತ್ತದೆ. ಹುಟ್ಟಿದ ಮೂರು ಹಾವಿನ ಮೊಟ್ಟೆಗಳು ಮಹಾಶೇಷ, ಮಹಾವಿಷ್ಣು ಮತ್ತು ಸುಬ್ರಹ್ಮಣ್ಯ ರೂಪವಾಗಿದ್ದು ಲೋಕ ಕಲ್ಯಾಣಕ್ಕಾಗಿ ಕೇದಾರನ ಮಡದಿ ಹೊಟ್ಟೆಯಲ್ಲಿ ಹುಟ್ಟಿದಾಗಿ ತಾನು ತಪಸ್ಸಚರಿಸಿದ ಭದ್ರಾ ಸರಸ್ವತಿ ಸರೋವರದಲ್ಲಿ ಮೊಟ್ಟೆಗಳನ್ನು ಗುಪ್ತವಾಗಿ ಪ್ರತಿಷ್ಠಾಪಿಸುವಂತೆ ತಿಳಿಸುತ್ತದೆ. ಅಲ್ಲದೆ ಅಲ್ಲಿ ಪದ್ಮನಾಭ ಸ್ವಾಮಿಯನ್ನು ಪೂಜಿಸುವಂತೆ ಹಾಗೂ ಅಲ್ಲಿ ಭಕ್ತಿಯಿಂದ ಪೂಜಿಸಿದವರಿಗೆ ಸಂತಾನ, ಶಾಪ ವಿಮೋಚನೆ ಲಭಿಸುವ ಬಗ್ಗೆ ತಿಳಿಸುತ್ತದೆ. ನಂತರ ಕೇದಾರನು ಮೂಟ್ಟೆಗಳನ್ನು ಕಾಡುಬಳ್ಳಿಗಳಿಂದ ಹೆಣೆದಿರುವ ತಟ್ಟೆಯಲ್ಲಿ (ಕುಡುಪುವಿನಲ್ಲಿ) ಕೊಂಡು ಹೋಗಿ ತಾನು ತಪಸ್ಸಾಚರಿಸಿದ ಸ್ಥಳದಲ್ಲಿ ಗುಪ್ತವಾಗಿ ಪ್ರತಿಷ್ಠಾಪಿಸುವನು. ಮುಂದೆ ಆ ಸ್ಥಳದಲ್ಲಿ ಹುತ್ತ ಬೆಳೆಯುವುದು, ಕೇದಾರ ಅನಂತಪದ್ಮನಾಭ ದೇವರನ್ನು ಪ್ರಾರ್ಥಿಸುತ್ತ ಮುಕ್ತಿ ಹೊಂದುವನು.
ಅದೇ ಸಮಯದಲ್ಲಿ ಶೂರಸೇನಾ ಎಂಬ ರಾಜ ಆಳ್ವಿಕೆ ಮಾಡುತ್ತಿದ್ದ. ಧರ್ಮದಲ್ಲಿ ನಿಷ್ಟೆ, ಶ್ರದ್ಧೆ ಹೊಂದಿದ ಶೂರಸೇನನಿಗೆ ವೀರಬಾಹು ಹೆಸರಿನ ಮಗನಿದ್ದ. ತಂದೆಯಂತೆ ದೈವ ಭಕ್ತನಾದ ವೀರಬಾಹು ಒಂದಿರುಳು ತನ್ನ ಹಾಸಿಗೆಯಲ್ಲಿ ಮಲಗಿರುವ ಪುತ್ರಿಯನ್ನು ಮಡದಿಯೆಂದು ಭಾವಿಸಿ ತಪ್ಪು ಕೆಲಸ ಮಾಡುತ್ತಾನೆ. ಕಡೆಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುತ್ತಾ ತನ್ನ ತಪ್ಪಿಗೆ ಪರಿಹಾರವನ್ನು ಅರಮನೆಯ ಬ್ರಾಹ್ಮಣರಲ್ಲಿ ಕೇಳುತ್ತಾನೆ. ಬ್ರಾಹ್ಮಣರು ಈ ಮೊದಲು ಇಂತಹ ಕೃತ್ಯ ಎಲ್ಲೂ ನಡೆದಿಲ್ಲ. ಈ ಘೋರ ಕೃತ್ಯ ಮಾಡಿದ ತಪ್ಪಿಗಾಗಿ ವೀರಬಾಹು ಬಾಹುಗಳನ್ನು ಕಡಿದು ಪ್ರಾಯಶ್ಚಿತ ಮಾಡಿಕೊಳ್ಳುವಂತೆ ಸೂಚಿಸುವರು. ಅಂತೆಯೇ ವೀರಬಾಹು ವಿಷ್ಣುವನ್ನು ಪ್ರಾರ್ಥಿಸುತ್ತ ತನ್ನ ಎರಡು ಬಾಹುಗಳನ್ನು ತುಂಡರಿಸುವನು. ಕಡಿದ ಬಾಹುಗಳ ಜಾಗದಲ್ಲಿ ಬಂಗಾರದ ಬಾಹುಗಳನ್ನು ತೊಟ್ಟುಕೊಳ್ಳುತ್ತಾ 'ಸ್ವರ್ಣಬಾಹು' ಎಂದು ಪ್ರಖ್ಯಾತನಾಗುತ್ತಾನೆ.
ಕೈಗಳಿಲ್ಲದ ಕೊರಗು ಸ್ವರ್ಣಬಾಹುವನ್ನು ಅತಿಯಾಗಿ ಕಾಡುತಿತ್ತು. ಒಂದಿನ ಪರಿವಾರ ಸಮೇತವಾಗಿ ವಿಹಾರಕ್ಕೆ ತೆರಳುವಾಗ ಭದ್ರಾ ಸರಸ್ವತಿ ತೀರ್ಥ ಸರೋವರವನ್ನು ಕಂಡು ಪುಳಕಿತನಾಗಿ, ಸ್ನಾನ ಮಾಡಿ ಅಲ್ಲಿ ವಿಷ್ಣುವನ್ನು ಕುರಿತು ಧ್ಯಾನ ಮಾಡುವನು. ಪ್ರತ್ಯಕ್ಷನಾದ ವಿಷ್ಣು ಲೋಕ ಕಲ್ಯಾಣಕ್ಕಾಗಿ ಮಹಾವಿಷ್ಣು, ಆದಿಶೇಷ ಮತ್ತು ಸುಬ್ರಹ್ಮಣ್ಯ ಗುಪ್ತವಾಗಿ ಇಲ್ಲಿ ನೆಲೆಸಿದ್ದು ಈ ಸ್ಥಳದಲ್ಲಿ ದೇವಾಲಯ ಕಟ್ಟುವಂತೆ ಹಾಗೂ ಮುಂಜಾನೆಯೊಳಗೆ ಗರ್ಭ ಗುಡಿಯನ್ನು ನಿರ್ಮಾಣ ಮಾಡಿದರೆ ಎಲ್ಲಾ ಪಾಪವು ಪರಿಹಾರವಾಗಿ ಬಾಹುಗಳು ಮತ್ತೆ ಬರುವುದಾಗಿ ತಿಳಿಸುವರು. ರಾಜನು ಕೂಡಲೇ ತನ್ನ ಪರಿವಾರ ಸಮೇತನಾಗಿ ಗರ್ಭಗುಡಿ ನಿರ್ಮಾಣದಲ್ಲಿ ತೊಡಗುವನು. ಆದೇ ಸಮಯದಲ್ಲಿ ರಾಜ ದೇವಸ್ಥಾನ ಕಟ್ಟುವ ವಿಚಾರ ತಿಳಿದ ಶತ್ರು ಕಡೆಯವನು ಮುಂಜಾನೆ ಮೂರು ಗಂಟೆಗೆ ಕೋಳಿಯಂತೆ ಕೂಗಿ ದೇವಸ್ಥಾನ ನಿರ್ಮಾಣಕ್ಕೆ ಆಡಚಣೆ ಮಾಡಲು ನೋಡುವನು. ಇದರಿಂದ ವಿಚಲಿತರಾಗದ ರಾಜನ ಪರಿವಾರವು ನಿರ್ಮಾಣ ಕಾರ್ಯವನ್ನು ಬಿರುಸಿನಿಂದ ಮಾಡುವರು. ಮುಂಜಾನೆ ಸೂರ್ಯ ಕಿರಣಗಳು ಆಕಾಶದಿಂದ ಹೊರ ಹೊಮ್ಮಲು ಆಕಾಶದಿಂದ ದೇವಸ್ಥಾನ ನಿರ್ಮಾಣ ಕಾರ್ಯ ನಿಲ್ಲಿಸುವಂತೆ ಆಶರೀರ ಧ್ವನಿ ಕೇಳಿ ಬರುತ್ತದೆ. ಹಾಗಾಗಿ ದೇವಸ್ಥಾನದ ಶಿಖರ (ಮುಗುಳಿ) ಪ್ರತಿಷ್ಠಾಪನೆಯಾಗದೇ ಕಾರ್ಯ ನಿಲ್ಲುತ್ತದೆ. ಸ್ವರ್ಣ ಬಾಹುವಿಗೆ ಮತ್ತೆ ಕೈಗಳು ಬರುತ್ತವೆ. ಇಂದಿಗೂ ಶ್ರೀ ಕ್ಷೇತ್ರ ಕುಡುಪು ದೇವಸ್ಥಾನದಲ್ಲಿ ಮುಗುಳಿ ಇಲ್ಲದಿರುವುದನ್ನು ಕಾಣಬಹುದಾಗಿದೆ.
ದೇಗುಲದ ವೈಶಿಷ್ಟ್ಯತೆ:
ಕ್ಷೇತ್ರದ ಮುಖ್ಯ ದೇವರಾದ ಅನಂತ ಪದ್ಮನಾಭನ ಮೂರ್ತಿಯು ಸುಂದರವಾಗಿದ್ದು ಪಶ್ವಿಮಾಭಿಮುಖವಾಗಿದೆ. ದೇವಾಲಯದ ಹಿಂಭಾಗದಲ್ಲಿ ನಾಗಬನವಿದ್ದು ಸುಮಾರು ೩೦೦ಕ್ಕೂ ಹೆಚ್ಚು ನಾಗಬಿಂಬಗಳಿವೆ. ದೇವಸ್ಥಾನದ ಎಡಭಾಗದಲ್ಲಿ ಭದ್ರಾ ಸರಸ್ವತಿ ತೀರ್ಥವಿದ್ದು ಮನಮೋಹಕವಾಗಿದೆ. ಇತ್ತೀಚಿಗೆ ಈ ಸರೋವರವು ನವೀಕರಣಗೊಂಡಿದೆ. ದೇವಾಲಯದ ಮುಂಭಾಗ ಜಾರಂದಾಯ ದೈವಸ್ಥಾನವಿದೆ. ದೇವಾಲಯದ ಒಳಗಿನ ಹುತ್ತದಲ್ಲಿ ಸುಬ್ಯಹ್ಮಣ್ಯ ವಿಗ್ರಹ, ಪ್ರಧಾನ ದೇವರ ಎಡಭಾಗದಲ್ಲಿ ಜಯ ವಿಜಯ ಶಿಲಾ ವಿಗ್ರಹ, ಹೊರಗೆ ವಲ್ಮೀಕ ಮಂಟಪ, ನವಗ್ರಹ ಹಾಗೂ ಅಯ್ಯಪ್ಪ ಗುಡಿಗಳಿವೆ.

ದೇವಾಲಯದ ವಾರ್ಷಿಕ ಉತ್ಸವವು ಮಾರ್ಗಶಿರ ಶುದ್ಧ ಪಾಡ್ಯದಿಂದ ಮಾರ್ಗಶಿರ ಶುದ್ಧ ಷಷ್ಠಿಯವರೆಗೆ ನಡೆಯುತ್ತದೆ. ಧನುರ್ಮಾಸದ ಶುದ್ಧ ಚತುರ್ದಶಿಯಂದು ನಾಲ್ಕು ದಿನಗಳ ಉತ್ಸವ ನಡೆಯುತ್ತದೆ. ಕುಡುಪು ಕ್ಷೇತ್ರದಲ್ಲಿ ಆಶ್ಲೇಷಾ ಬಲಿಯು ಮುಖ್ಯ ಸೇವೆಯಾಗಿದೆ. ಅಲ್ಲದೆ ಪ್ರತಿದಿನವೂ ಅನ್ನದಾನ ಸೇವೆಯು ನಡೆಯುತ್ತದೆ. ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಷ್ಟೇ ಪಾವಿತ್ಯತೆ ಹೊಂದಿರುವ ಕುಡುಪು ಕ್ಷೇತ್ರದಲ್ಲಿ ನಾಗ ಸಂಬಂದಿತ ಎಲ್ಲಾ ದೋಷಗಳಿಗೆ ಪರಿಹಾರ ಕಾಣಬಹುದಾಗಿದೆ.
ಶಿಲಾ ಶಾಸನಗಳು:
ದೇವಾಲಯದ ಹಿಂದೆ ಬಲಭಾಗದಲ್ಲಿ ಮತ್ತು ನಾಗಬನದ ಎಡಭಾಗದಲ್ಲಿ ಪುರಾತನ ಶಿಲಾಶಾಸನಗಳಿವೆ. ಈ ಶಾಸನಗಳಲ್ಲಿ ಹಲವಾರು ಅಮೂಲ್ಯ ವಿಷಯಗಳು ಇದ್ದರೂ ಈ ಶಾಸನವನ್ನು ಇಂದಿಗೂ ಓದಲಾಗಿಲ್ಲ. ಈ ಶಾಸನಗಳು ಓದಲ್ಪಟ್ಟರೆ ಸುತ್ತಮುತ್ತಲಿನ ಊರಿನ  ಇತಿಹಾಸ, ದೇವಸ್ಥಾನ ವಿಚಾರಗಳನ್ನು ತಿಳಿಯಲು ಸಹಾಯವಾಗಬಹುದು ಎನ್ನುವುದು ಹಿರಿಯರ ಅಂಬೋಣ.
ಹೋಗುವುದು ಬಗೆ:
ಶ್ರೀ ಕ್ಷೇತ್ರ ಕುಡುಪು ದೇವಸ್ಥಾನವು ಮಂಗಳೂರಿನಿಂದ ೧೦ಕಿ.ಮೀ ದೂರದ ಕುಡುಪು ಗ್ರಾಮದಲ್ಲಿದೆ. ಮಂಗಳೂರಿನಿಂದ ಗುರುಪುರ ಕೈಕಂಬವಾಗಿ ಮೂಡಬಿದ್ರೆ, ಕಾರ್ಕಳ ಸಾಗುವ ದಾರಿಯಲ್ಲಿ ಪ್ರಯಾಣಿಸಿ ದೇವಸ್ಥಾನ ಸೇರಬಹುದು. ಮಂಗಳೂರಿನಿಂದ ಅನೇಕ ಬಸ್ಸುಗಳು ಶ್ರೀ ಕ್ಷೇತ್ರ ಕುಡುಪು ದೇವಸ್ಥಾನ ಮಾರ್ಗವಾಗಿ ಸಾಗುತ್ತದೆ.



No comments:

Post a Comment