ಕನ್ನಡ ನಾಡು-ನುಡಿ ಸಂಸ್ಕೃತಿಯ ವಿಶ್ವಸಮ್ಮೇಳನ-ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್-೨೦೧೩
ಸಾಂಸ್ಕೃತಿಕತೆಯ ವಿರಾಟ್ ಸ್ವರೂಪ ತೆರೆದಿಟ್ಟ ವಿದ್ಯಾಗಿರಿ-ಜೈನಕಾಶಿ ಮೂಡಬಿದಿರೆ
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಮಿಜಾರುಗುತ್ತು ಮೋಹನ ಆಳ್ವರ ನೇತೃತ್ವದ ವಿಶ್ವ ನುಡಿಸಿರಿ ವಿರಾಸತ್ ಕನ್ನಡ ನಾಡು-ನುಡಿ ಸಂಸ್ಕೃತಿಯ ವಿಶ್ವಸಮ್ಮೇಳನಕ್ಕೆ ಡಿ.೧೯ ರಂದು ಮಧ್ಯಾಹ್ನ ಭವ್ಯ ಮೆರವಣಿಗೆಯೊಂದಿಗೆ ಆರಂಭ. ಜಾನಪದ ಕ್ಷೇತ್ರದ ಕಣಜ ಸುಕ್ರಿ ಬೊಮ್ಮಗೌಡ ಅಭೂತಪೂರ್ವ ಮೆರವಣಿಗೆ ಅರ್ಥಪೂರ್ಣ ಚಾಲನೆ. ಮೆರವಣಿಗೆಯಲ್ಲಿ ಭಾಗವಹಿಸಿದ ನೂರಾರು ತಂಡಗಳ ಸಾವಿರಾರು ಕಲಾವಿದರು ಮೂಡುಬಿದಿರೆಯಲ್ಲಿ ಮಿನಿ ಭಾರತವನ್ನು ಸೃಷ್ಠಿಸಿ, ಪ್ರೇಕ್ಷಕರನ್ನು ದಂಗುಬಡಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಡಾ.ಹೆಗ್ಗಡೆ:
ರಾಜ್ಯದ ಶಾಲೆ ಕಾಲೇಜುಗಳಲ್ಲಿ ಕಲೆ ಮತ್ತು ಕ್ರೀಡೆಗೆ ಹೆಚ್ಚು ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು. ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಎರಡು ವರ್ಷಗಳ ಪದವಿ ಪೂರ್ವ ತರಗತಿಗಳಿಗೆ ನಾವು ಸಂಸ್ಕೃತಿ ಮತ್ತು ಕ್ರೀಡೆಗೆ ನಿರ್ಬಂಧ ವಿದಿಸಿ, ಪಠ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಡ ಹಾಕುತ್ತೇವೆ. ಇಲ್ಲಿ ಅಂಕಗಳಿಕೆಯೇ ಪ್ರಧಾನ ಉದ್ದೇಶವಾಗಿರುತ್ತದೆ. ಕ್ರೀಡೆ ಮತ್ತು ಸಾಂಸ್ಕೃತಿಕ ವಿಷಯಗಳಲ್ಲಿ ತೊಡಗಿಸಿಕೊಂಡರೆ ಎಲ್ಲಿ ಅನುತ್ತೀರ್ಣರಾಗುತ್ತಾರೋ ಎನ್ನುವ ಭಯ ಹೆತ್ತವರನ್ನು ಕಾಡುತ್ತದೆ. ಆದರೆ ಆಳ್ವಾಸ್ ಶಿಕ್ಷಣ ಸಂಸ್ಥೆ ತನ್ನ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡೆಯಲ್ಲಿ ತೊಡಗಿಸಿಕೊಂಡು ಪ್ರತಿಶತ ಶೇ.೯೬ ರಷ್ಟು ಪಲಿತಾಂಶ ದಾಖಲಿಸಿ, ಯಶಸ್ವಿಯಾಗಿರುವುದು ಒಂದು ಅತ್ಯುತ್ತಮ ಮಾದರಿ ಎಂದು ಡಾ.ಹೆಗ್ಗಡೆ ಹೇಳಿದರು. ಎರಡು ಮಹಾಯುದ್ದಗಳ ಆತಂಕ ಸಾವು-ನೋವು ಮತ್ತು ಆರ್ಥಿಕ ನಷ್ಟ ವಿಶ್ವದ ಕಲ್ಪನೆಯನ್ನು ಬೆಳೆಸುತ್ತದೆ. ಅಲ್ಲಿ ಆಗ ಶಾಂತಿಯ ಪಾಠ ಸಾಧ್ಯವಾಗುವುದು ಕಲೆಯಿಂದ. ಎಂ.ಎಸ್.ಸುಬ್ಬುಲಕ್ಷ್ಮಿಯಂತಹ ಮೇರು ಕಲಾವಿದರು ವಿಶ್ವಸಂಸ್ಥೆಯಲ್ಲಿ ಸಂಗೀತದ ಹೊಳೆ ಹರಿಸುವ ಮೂಲಕ ಕಲೆಗೆ ಶಾಂತಿಯ ಗುಣವಿದೆ ಎನ್ನುವುದನ್ನು ತೋರಿಸಿಕೊಟ್ಟರು. ಕಲಾವಿದರೆಲ್ಲರೂ ಒಟ್ಟು ಸೇರಿದರೆ ಪ್ರಪಂಚವನ್ನು ಪ್ರಕಾಶಿಸಬಹುದು. ಕಲೆ ಸಂಸ್ಕೃತಿಗಳಿಂದ ಹೃದಯ-ಹೃದಯಗಳಿಂದ ಬೆಸೆಯಬಹುದು ಎನ್ನುವುದು ಆಗ ಜಗತ್ತಿಗೆ ಮನದಟ್ಟಾಯಿತು ಎಂದು ಕಲೆಯ ಮಹತ್ವದ ಕುರಿತು ಧರ್ಮಾಕಾರಿ ಬೆಳಕು ಚೆಲ್ಲಿದರು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗುತ್ತದೆಯೇ ಹೊರತು ಎಂದೂ ತೊಡಕಾಗುವುದಿಲ್ಲ ಎನ್ನುವುದು ಡಾ.ಮೋಹನ್ ಆಳ್ವರ ಪ್ರಯೋಗದಿಂದ ಖಚಿತವಾಗಿದೆ. ಹಾಗಾಗಿ ಈ ಪ್ರಯೋಗ ವಿಸ್ತಾರಗೊಳ್ಳುವುದು ಮತ್ತು ಮಕ್ಕಳನ್ನು ಆ ದಿಸೆಯಲ್ಲಿ ಪ್ರೋತ್ಸಾಹಿಸುವುದು ಅಗತ್ಯ ಎನ್ನುವುದು ಹೆಗ್ಗಡೆ ಅವರ ಉದ್ಘಾಟನಾ ನುಡಿ.
ಕೇವಲ ಭಾಷೆಯಲ್ಲ!
ಕನ್ನಡವೆಂಬುದು ಕೇವಲ ಭಾಷೆಯಲ್ಲ. ಅದೊಂದು ಕೃಷಿ, ಜಾನಪದ, ಸಂಸ್ಕೃತಿ, ಜಾತಿ, ಧರ್ಮ ಮತ್ತು ಮತಗಳ ಸಮ್ಮಿಲನವು ಹೌದು. ಇವೆಲ್ಲ ಜೊತೆಗೂಡಿ ಕನ್ನಡವನ್ನು ಶ್ರೀಮಂತಗೊಳಿಸಿದೆ ಎಂದು ನುಡಿದ ಡಾ.ಡಿ.ಹೆಗ್ಗಡೆ ಕನ್ನಡವನ್ನು ವಿಶ್ವಾತ್ಮಕವಾಗಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಯುವಜನಾಂಗ ಭಾರತೀಯ ಸಂಸ್ಕೃತಿಯಿಂದ ದೂರವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಹಾಗಿಲ್ಲ. ಭಾರತೀಯ ಸಂಸ್ಕೃತಿಯ ಪರಿಶುದ್ದವಾದ ಮುಖವನ್ನು ಪರಿಚಯಿಸಿದರೆ ಅದನ್ನು ನಮ್ಮ ಯುವಜನಾಂಗ ಅತ್ಮೀಯವಾಗಿ ಸ್ವೀಕರಿಸುತ್ತದೆ ಎಂದು ಹೇಳಿದ ಡಾ.ಹೆಗ್ಗಡೆಯವರು ಜಾಗತಿಕರಣದ ಓಟದಲ್ಲಿ ಜನವಿರೋದಿ, ಪರಿಸರ ವಿರೋದಿ ನಿಲುವುಗಳ ಜಾರಿ ಮತ್ತು ಆ ಮೂಲಕ ನಮ್ಮ ಹಳ್ಳಿಗಳು, ಅಲ್ಲಿನ ಸಂಸ್ಕೃತಿಗಳು ನಾಶವಾಗದಂತೆ ಎಚ್ಚರವಹಿಸುವ ಅಗತ್ಯ ಮನಗಾಣಿಸಿದ್ದರು.
ಅಭೂತಪೂರ್ವ ನುಡಿ ಜಾತ್ರೆಯ ಮೆರವಣಿಗೆ:
ಪೂರ್ವಾಂಬುದಿಯಲ್ಲಿ ಉದಯಿಸಿದ ಸೂರ್ಯ ಪಶ್ಚಿಮದಲ್ಲಿ ಅಸ್ತಂಗತನಾಗುವ ಹೊತ್ತು. ವಿದ್ಯಾಕಾಶಿ ವಿದ್ಯಾಗಿರಿಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿತ್ತು. ಬೃಹತ್ ಸೂರ್ಯ ರಶ್ಮಿಯಿಂದ ಒಂದೆಡೆ ಬಿಸಿಲ ಬೇಗೆ..ಆ ಬೇಗೆಯನ್ನೂ ಕೂಡ ನೀಗಿಸುವ ಬೃಹತ್ ಜಾನಪದ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆಯ ವೈಭವದ ಘಳಿಗೆ. ಸಮಯಕ್ಕೆ ಆದ್ಯತೆ ನೀಡುವ ಮೋಹನ ಆಳ್ವರ ಸಮಯ ಪ್ರಜ್ಞೆ ಇಲ್ಲಿಯೂ ಕೂಡ ಮೆರೆದಿತ್ತು. ಕಲೆ, ಸಾಹಿತ್ಯಗಳ ಬಣ್ಣದ ಲೋಕಕ್ಕೆ ಕೊಂಡೊಯ್ಯುವ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ನ ಜಾನಪದ ಸಾಂಸ್ಕೃತಿಕ ಮೆರವಣಿಗೆಗೆ ನಾಡೋಜ ಸುಕ್ರಿ ಬೊಮ್ಮಗೌಡ ಅವರು ಕನ್ನಡದ ಧ್ವಜ ಹಾರಿಸುವ ಮೂಲಕ, ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ವಿವಿಧ ಕಲಾತಂಡಗಳು ಮೂಡುಬಿದಿರೆಯ ಹನುಮಂತನ ದೇವಸ್ಥಾನದ ಸಮೀಪ ಆಗಮಿಸಿದ್ದವು. ನುಡಿಸಿರಿಯ ರೂವಾರಿ ಡಾ.ಎಂ.ಮೋಹನ್ ಆಳ್ವರು ಸುಮಾರು ೨.೫೫ಕ್ಕೆ ಅಲ್ಲಿಗೆ ಆಗಮಿಸಿ ದೇವಳದಲ್ಲಿ ಪ್ರಾರ್ಥಿಸಿದರು. ೩ ಗಂಟೆಗೆ ಪ್ರಾರಂಭವಾದ ಮೆರವಣಿಗೆಯು ಮೂಡಬಿದಿರೆ ಪೇಟೆಯ ಮೂಲಕ ಸಾಗಿತ್ತು. ವಿವಿಧ ಕಲಾತಂಡಗಳ ಮೆರವಣಿಗೆಯಲ್ಲಿದ್ದು, ಮೊದಲ ತಂಡವು ವಿದ್ಯಾಗಿರಿಯ ಆವರಣಕ್ಕೆ ಸುಮಾರು ೪ ಗಂಟೆಗೆ ಆಗಮಿಸಿತ್ತು.
ಮುಗಿಲು ಮುಟ್ಟಿದ ಕೊಂಬು-ಕಹಳೆಗಳ ನಾದ:
ಮೆರವಣಿಗೆಯಲ್ಲಿ ಕೊಂಬು ಕಹಳೆಗಳ ನಾದವು ಮುಗಿಲನ್ನು ಮುಟ್ಟಿದರೆ, ವಿವಿಧ ಚೆಂಡೆಗಳ ವಾದನವು ರಣಭೂಮಿಯಲ್ಲಿದ್ದ ವಾತಾವರಣವನ್ನು ಸೃಷ್ಠಿಸಿತ್ತು. ರಸ್ತೆಯ ಇಕ್ಕೆಲಗಳಲ್ಲೂ ಕಲಾಸಕ್ತರು ಜನಪದ ತಂಡಗಳನ್ನು ಆಶ್ಚರ್ಯ ಚಕಿತರಾಗಿ ನೋಡುತ್ತಿದ್ದರು ಮಾತ್ರವಲ್ಲದೇ ತಮ್ಮಲ್ಲಿರುವ ಮೊಬೈಲು, ಟ್ಯಾಬ್ಲೆಟ್‌ಗಳ ಮೂಲಕ ಮನಮೋಹಕ ದೃಶ್ಯವನ್ನು ಸೆರೆಹಿಡಿಯುತ್ತಿದ್ದರು. ಬಾಯಾರಿಕೆಯಿಂದ ಬಳಲಿದ್ದ ತಂಡಗಳಿಗೆ ಸ್ಥಳೀಯರು ನೀರು ಕೊಟ್ಟು ದಣಿವು ಆರಿಸುತ್ತಿದ್ದ ದೃಶ್ಯವೂ ಕಂಡುಬಂದಿದೆ. ಪ್ರತಿಯೊರ್ವ ನಾಗರಿಕರು, ಪ್ರತಿನಿದಿಗಳು ಕಲಾ ತಂಡಗಳನ್ನು ಸ್ವಾಗತಿಸುತ್ತಿದ್ದರು. ಕೊಂಬು-ಕಹಳೆಯ ವಾದನವು ನುಡಿಸಿರಿಗೆ ಮೆರುಗು ನೀಡುತ್ತಿರುವುದು ಒಂದೆಡೆಯಾದರೆ, ಸಿಡಿಮದ್ದುಗಳ ಪ್ರದರ್ಶನವು ಪ್ರೇಕ್ಷಕರ ಎದೆಯನ್ನು ಝಲ್ಲೆನ್ನಿಸುತ್ತಿತ್ತು. ಪಕ್ಕಿ ನಿಶಾನೆ, ಆರು ಮಂದಿಯ ತಂಡದಲ್ಲಿ ನಾಲ್ಕು ಬಸವಗಳು, ರಾಜನ ಓಲಗವನ್ನು ನೆನಪಿಸುವ ಸುಮಾರು ೫೦ಕ್ಕಿಂತ ಅಕ ಛತ್ರಿ ಚಾಮರಗಳು, ಸಮವಸ್ತ್ರಧಾರಿಗಳಾಗಿ ಕನ್ನಡ ಬಾವುಟಗಳನ್ನು ಹಿಡಿದ ಪುಟಾಣಿ ಮಕ್ಕಳು, ದಾಸ ಸಾಹಿತ್ಯವನ್ನು ನೆನಪಿಸುವ ಭಜನಾ ತಂಡದಿಂದ ಭಜನೆ ಮೆರವಣಿಗೆಯಲ್ಲಿ ಕಂಡು ಬಂದಿದೆ.
ಶಂಖದ ನಿನಾದ, ದಾಸಯ್ಯರ ವೇಷಗಳೊಂದಿಗೆ ಹಾಡುಗಳು, ಕೊಂಬು, ಚೆಂಡೆಗಳ ಅಬ್ಬರದ ವಾದನ, ಮುಗಿಲು ಮುಟ್ಟಿಸುವ ತೆರದಲ್ಲಿ ತಟ್ಟಿರಾಯನ ವೇಷಗಳು, ನಂದಿಧ್ವಜ, ಕೊರಗರ ಗಜಮೇಳ, ಕೀಲುಕುದುರೆ ನೃತ್ಯ, ಕಲ್ಲಡ್ಕದ ಗೊಂಬೆ ಬಳಗ, ಕಂಸಾಳೆ ನೃತ್ಯ, ಹಾವೇರಿಯ ಜನಜೀವನವನ್ನು ಬೆಂಬಿಸುವ ಬೆಂಡರ ಕುಣಿತ, ತುಳು ನಾಡಿನ ಸಂಸ್ಕೃತಿಯ ಪ್ರತೀಕ ಆಟಿ ಕಳೆಂಜ, ಕೇರಳದ ಚೆಂಡೆ, ಮುಸ್ಲಿಂ ಸಮುದಾಯದ ದಪ್ಪು, ಪೂಕವಾಡಿ, ಹೊನ್ನಾವರದ ಬ್ಯಾಂಡ್ ಸೆಟ್, ಹಾಲಕ್ಕಿ ಕುಣಿತ, ಸೃಷ್ಠಿಗೊಂಬೆ, ಜಗ್ಗಳಿಕೆ ಮೇಳ, ಕುಡುಬಿ ನೃತ್ಯ(ಹೋಳಿಹಬ್ಬ), ಶಾರ್ದೂಲ, ಸಮರ ಕಲೆ, ತಾಲೀಮು ಕಾಸರಗೋಡು, ಕೋಲಾಟ, ಗೊರವರ ಕುಣಿತ, ಪಟದ ಕುಣಿತ, ನಗಾರಿ, ಕೊರಗರ ಡೋಲು, ಕಂಗೀಲು ಕುಣಿತ, ಗಾರುಡಿ ಗೊಂಬೆ, ಸೋಮನ ಕುಣಿತ, ಕೇರಳದ ದೇವರ ವೇಷ, ಡ್ರ್ಯಾಗನ್, ಶ್ರೀಲಂಕಾದ ನೃತ್ಯ, ಮಣಿಪುರದ ನೃತ್ಯ, ದೇಶದ ವಿವಿಧ ರಾಜ್ಯದ ವಿವಿಧ ಬಂಜಾರ ನೃತ್ಯ ತಂಡಗಳು, ಸಮವಸ್ತ್ರಧಾರಿ ಮಹಿಳಾ ಚೆಂಡೆ ವಾದನ, ಮೋಹಿನಿಯಾಟ್ಟಂ, ಕಥಕ್, ಮಹಿಳಾ ಡೊಳ್ಳು, ಗುಜರಾತ್ ನೃತ್ಯ, ರಾಜಸ್ತಾನ್ ನೃತ್ಯ, ಕಣಿ ಮಜಲು, ಮಹಿಳಾ ಪಟದ ಕುಣಿತ, ಸಿದ್ಧವೇಷ, ರೇಂಜರ್‍ಸ್ ಮತ್ತು ರೋವರ್‍ಸ್, ಅಲಂಗಾರ್ ಬ್ಯಾಂಡ್‌ಸೆಟ್, ವೀರಗಾಸೆ, ಗಿಡ್ಡ ಮನುಷ್ಯರನ್ನು ಬಿಂಬಿಸುವ ತಂಡಗಳು, ಕಲ್ಲಡ್ಕದ ಕರಗ ನೃತ್ಯ, ಕೇಸರಿ, ಬಿಳಿ, ಹಸಿರು ವಸ್ತ್ರಧಾರಿ ಆಳ್ವಾಸ್ ವಿದ್ಯಾರ್ಥಿ ಸಮೂಹಗಳು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದ್ದವು.
ಲಯಭರಿತವಾಗಿ ಜೈನ್ ಶಾಲೆಯ ಮಕ್ಕಳಿಂದ ಬ್ಯಾಂಡ್‌ಸೆಟ್‌ನ ಘೋಷ, ಶಿವರಾಮ ಕಾರಂತರ ಕಾದಂಬರಿ ಚೋಮನ ದುಡಿಯನ್ನು ನೆನಪಿಸುವ 'ದುಡಿ ಕುಣಿತ', ಕೊಡಗಿನ ಉಮ್ಮತ್ತಾಟ್, ಹುಲಿವೇಷ, ತಾಸೆ, ಕುಂದಗನ್ನಡ ಸಾರವನ್ನು ಬಿಂಬಿಸುವ ಕುಂದಾಪುರ ಕೊರಗರ ಡೋಲು ಕುಣಿತ, ಪೂಜಾ ಕುಣಿತ, ರಾಜ್ಯ ಪ್ರಶಸ್ತಿ ವಿಜೇತ ತಂಡಗಳಾದ ಮುನಿವೆಂಕಟಪ್ಪ, ಮಂಡ್ಯ ನಾಗಮಂಡಲದ ವೀರಗಾಸೆ ಹಾಗೂ ವೀರಭದ್ರ ವೇಷಧಾರಿಗಳ ಮೈ ನವಿರೇಳಿಸುವ ಕುಣಿತಗಳು ಸಾಹಿತ್ಯಾಸಕ್ತರನ್ನು ತುದಿಗಾಲಲ್ಲಿ ನಿಲ್ಲಿಸಿದ್ದವು. ೧೦ ಕ್ಕಿಂತಲೂ ಅಕ ಮರಗಾಲು ಕುಣಿತ, ಕಿಂದರಿ ಜೋಗಿ, ಮುನಿವೆಂಕಟೇಶ್ವರ ತಂಡಗಳಿಂದ ತಮಟೆವಾದನ, ಆಳ್ವಾಸ್ ವಿದ್ಯಾರ್ಥಿಗಳ ಎನ್‌ಸಿಸಿ, ಸೇವಾದಳ, ಸ್ಕೌಟ್ ಅಂಡ್ ಗೈಡ್ಸ್ ಸೇರಿದಂತೆ ಅಳಕೆಯ ಬ್ಯಾಂಡ್, ರೋಟರಿ ಬ್ಯಾಂಡ್, ಪುರವಂತಿಕೆ, ಕಲರಿ ಫೈಯಟ್, ಕೇರಳದ ಪಂಚವಾದ್ಯ, ಚಿತ್ರದುರ್ಗದ ದುರ್ಗಾಬ್ಯಾಂಡ್ ಸೆಟ್, ಕರಡಿ ಮಜಲು, ದಟ್ಟಿ ಕುಣಿತ, ಸೈನಿಕರ ನೆನಪನ್ನು ಸ್ಮರಿಸುವ ನಿಟ್ಟಿನಲ್ಲಿ ಸೈನಿಕ ವೇಷದಲ್ಲಿ ವಿದ್ಯಾರ್ಥಿ ಸಮೂಹ, ತಮಿಳುನಾಡಿನ ಕರಗ ನೃತ್ಯ, ಹೆಜ್ಜೆ ಕುಣಿತ, ಮಂಗಳೂರಿನ ಕೇರಳ ಶೈಲಿಯ ಚೆಂಡೆ, ಅಸಾದಿ ಮೇಳ, ಮಂಡ್ಯದ ನಂದಿಧ್ವಜ, ಅಲಂಗಾರು ಬ್ಯಾಂಡ್, ಚಿಲಿಪಿಲಿ ಗೊಂಬೆ ಬಳಗ, ಪುರವಂತಿಕೆ, ರಂಗಾಯಣ ಕಲಾವಿದರು, ರೈತರು, ತುಳುನಾಡ ವಾದ್ಯಗಳು, ಕೇರಳದ ತಯ್ಯಮ್, ಡೊಳ್ಳು ಕುಣಿತ, ಪೂರ್ಣಕುಂಭ, ಪಲ್ಲಕ್ಕಿ, ಟ್ರಕ್ ಯಕ್ಷಗಾನ ಬಡಗು, ತೆಂಕು, ಮಣಿಪುರಿ ರಾಸಲೀಲೆ, ಪುರೂಲಿಯೊ ಛಾವೊ, ಕೆನೆಡಿಯನ್ ಹಾಗೂ ರಬೋನ್ ಡ್ಯಾನ್ಸ್, ಮೂಡಲಪಾಯ ಇತ್ಯಾದಿ ಸುಮಾರು ೧೦೦ ಕ್ಕೂ ಮಿಕ್ಕಿದ ಕಲಾತಂಡಗಳು ನುಡಿಸಿರಿಯ ಮೆರವಣಿಗೆಗೆ ಸಾಕ್ಷಿಯಾಗಿದ್ದವು.
೩೪ ನೇ ರಾಜ್ಯಮಟ್ಟದ ಕೃಷಿ ಸಮ್ಮೇಳನ: ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ..ಆಳ್ವಾಸ್ ನುಡಿಸಿರಿಯಲ್ಲಿರುವ ಸೌಭಾಗ್ಯ:
ಆಳ್ವಾಸ್ ವಿಶ್ವ ನುಡಿಸಿರಿಯ ಆಕರ್ಷಣೆಯಾಗಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ೩೪ ನೇ ಕೃಷಿ ಮೇಳ ಸೇರ್ಪಡೆಗೊಂಡಿರುವುದು ವಿದ್ಯಾಗಿರಿಗೆ ಮೆರುಗು ತಂದಿತ್ತು. ಕಳೆದ ಬಾರಿ ಕುಮಟಾದಲ್ಲಿ ನಡೆದ ಕೃಷಿ ಮೇಳವೂ ಆಳ್ವಾಸ್ ನುಡಿಸಿರಿಯಲ್ಲಿ ಕೃಷಿಕರಿಗಾಗಿ ಕೃಷಿ ಸಲಕರಣೆಗಳ ಪ್ರದರ್ಶನ, ಮಾರಾಟ ಮಳಿಗೆಯನ್ನು ತೆರೆದಿಟ್ಟಿದೆ. ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿರದೆ, ಕೊಡಗು, ಕರಾವಳಿ, ಮಲೆನಾಡು ಜಿಲ್ಲೆಗಳಿಂದ ವಿವಿಧ ಮಳಿಗೆಗಳು ಕೃಷಿ ಮೇಳದಲ್ಲಿ ಪಾಲ್ಗೊಳ್ಳುತ್ತಿರುವುದೇ ಒಂದು ವಿಶೇಷ.
ನುಡಿಸಿರಿ ಕೃಷಿಮೇಳದಲ್ಲಿ ೫೦೦ಕ್ಕೂ ಮಿಕ್ಕಿದ ಕೃಷಿ ಮಳಿಗೆಗಳು ಭಾಗವಹಿಸಿವೆ. ಕೃಷಿ ಇಲಾಖೆ, ಸಣ್ಣ, ಮಧ್ಯಮ ಹಾಗೂ ದೊಡ್ಡ ಕೃಷಿಕರಿಗೆ ಉಪಯೋಗವಾಗುವ ಕೃಷಿ ಯಂತ್ರೋಪಕರಣ, ತೋಟಗಾರಿಕೆ ಇಲಾಖೆ, ಹೂವಿನ ಗಿಡಗಳ ಪ್ರದರ್ಶನ, ಮಾರಾಟ, ಕೃಷಿ ಕುಟುಂಬದ ಮಾದರಿ, ಜಲಾನಯನ ಇಲಾಖೆಯ ಯೋಜನೆಯ ಮಾದರಿಗಳು ಈಗಾಗಲೇ ಕೃಷಿ ಮೇಳಕ್ಕೆ ಸಿದ್ದಗೊಂಡಿವೆ. ವಿಶೇಷವಾಗಿ ಗ್ರಾಮಾಭಿವೃದ್ಧಿಯ ಸ್ವಸಹಾಯ ಸಂಘಗಳ ಉತ್ಪನ್ನಗಳು ಆಕರ್ಷಣೆಯಾಗಿವೆ. ವಿಶೇಷವಾಗಿ ವಿವಿಧ ಜಿಲ್ಲೆಯ ಕೃಷಿ ಚಟುವಟಿಕೆಗಳ ಕುರಿತಾಗಿ ಮಾದರಿ ರಥಗಳನ್ನಾಗಿ ಮಾಡಿದ್ದರು. ಉತ್ತರ ಕನ್ನಡ ಜಿಲ್ಲೆಯ ಭತ್ತದ ರಥ, ಅನಾನಸ್‌ನಿಂದ ರಚಿತವಾದ ಕಣ್ಮನ ಸೆಳೆಯುವ ರಥ, ಶಿವಮೊಗ್ಗದ ಜೋಳದ ಗೋಪುರಾಕೃತಿ, ಚಿಕ್ಕಮಗಳೂರಿನ ಪಾರಮ್ಯವನ್ನು ಸಾರುವ ಕಾಫಿ ಗಿಡಗಳ ಮಾದರಿ, ಕೊಡಗಿನ ಜೀವನದಿ ಕಾವೇರಿಯನ್ನು ಧರೆಗಿಳಿಸಿದ ಮಾದರಿಗಳು ಜನಾಕರ್ಷಕವಾಗಿದ್ದವು. ಮೈಸೂರು ಅರಮನೆ, ಉಡುಪಿಯ ಎಳನೀರು ರಥ, ಕುಂದಾಪುರ ತಾಲೂಕು ಕೊಲ್ಲೂರಿನ ಕೊಡಚಾದ್ರಿ ಬೆಟ್ಟದ ವೈಭವ, ಮೀನುಗಾರಿಕೆಯ ಮಾದರಿಗಳು ಸೇರಿದಂತೆ ನಾಗನ ನೆಲೆವೀಡು ಕರಾವಳಿಯ ಚಿತ್ರಣವನ್ನು ಕಾರ್ಕಳ ತಾಲೂಕಿನ ವತಿಯಿಂದ ರಚಿಸಲಾಗಿತ್ತು. ೩೦ಕ್ಕೂ ಹೆಚ್ಚು ತಳಿಯ ಗೋವುಗಳ ಪ್ರದರ್ಶನ. ಆಳ್ವಾಸ್ ನುಡಿಸಿರಿಯ ಕೃಷಿ ಮೇಳದಲ್ಲಿ ವಿಶೇಷವಾಗಿ ಕಂಬಳದ ಗದ್ದೆ ನಿರ್ಮಾಣ ಮಾಡಿದ್ದರು. ಈ ಗದ್ದೆಯಲ್ಲಿ ಭತ್ತದ ಕೃಷಿ ನಾಟಿ, ಜಾನಪದ ಸ್ಪರ್ಧೆ, ಕೋಣಗಳನ್ನು ಬಳಸಿ ಉಳುಮೆ ವಿಧಾನ ತೊರಿಸುವ ವಿಶೇಷ ಕಾರ್ಯಕ್ರಮ ಜೋಡಿಸಲಾಗಿತ್ತು.
ಸಂಘದ ಸ್ವಗೃಹ ಯೋಜನೆ-
ಮಾದರಿ ರೈತನ ಕುಟುಂಬ ಹೇಗಿರಬೇಕು ಎನ್ನುವ ಕಲ್ಪನೆಯೇ ಸ್ವಗೃಹ ಯೋಜನೆಯ ಮೂಲಸ್ವರೂಪ. ಇದು ಮೂರ್ತರೂಪ ತಳೆದದ್ದು ಕೃಷಿಮೇಳದಲ್ಲಿ. ಮನೆಯ ಮುಂಬಾಗದಲ್ಲಿ ಸಣ್ಣದಾಗಿ ರಚಿತವಾದ ಗದ್ದೆಯಲ್ಲಿ "ಶ್ರೀ ಪದ್ದತಿ" ಒಂದೆಡೆಯಾದರೆ ಇನ್ನೊಂದೆಡೆ ಮಾಮೂಲಿ ರೈತನ ಕೃಷಿ ಚಟುವಟಿಕೆಗಳು, ದನದ ಕೊಟ್ಟಿಗೆ, ಅಡಿಕೆ-ತೆಂಗಿನ ತೋಟಗಳು, ಹೂವಿನ ತೋಟ, ಮನೆಯ ಮಾಂಗಲ್ಯವಾಗಿರುವ ತುಳಸಿಕಟ್ಟೆ, ಕುಡಿಯುವ ನೀರಿಗಾಗಿ ಬಾವಿಗಳಿರಬೇಕು ಎನ್ನುವುದರ ಸಾಕಾರ ರೂಪವೇ ಸ್ವಗೃಹ ಯೋಜನೆ.
ತೀರ್ಥಹಳ್ಳಿಯ ಆಲೆಮನೆ-
೩೫ ವರ್ಷದಿಂದ ಆಲೆಮನೆಯನ್ನು ನಡೆಸುತ್ತಾ ಹಲವಾರು ಕೃಷಿ ಮೇಳ, ಜಾತ್ರೆಗಳಲ್ಲಿ ಭಾಗವಹಿಸಿ, ಈ ಬಾರಿ ನುಡಿಸಿರಿಯಲ್ಲಿ ಭಾಗವಹಿಸಿದ ತೀರ್ಥಹಳ್ಳಿ ಆರಗದ ಕಡೆಗದ್ದೆ ಉಮೇಶ ಅವರ ತಂಡವು ಗುರುವಾರದಿಂದಲೇ ಶುದ್ದ ಕಬ್ಬಿನ ಹಾಲಿನ ಮಾರಾಟ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಕೋಣವನ್ನು ಕಟ್ಟಿ ಕಬ್ಬಿನ ಹಾಲನ್ನು ತೆಗೆದು ಕೇವಲ ೧೦ ರೂ ಗೆ ಶುದ್ದ ಕಬ್ಬಿನ ರಸವನ್ನು ನೀಡುವುದು ಮಾತ್ರವಲ್ಲ. ಸ್ಥಳದಲ್ಲಿಯೇ ರಚಿತವಾದ ಜೋನಿಬೆಲ್ಲದ ಮಾರಾಟವು ಕೂಡ ಲಭ್ಯವಿತ್ತು. ಆರೋಗ್ಯಕ್ಕೆ ಉತ್ತಮವಾದ, ರಕ್ತ ಶುದ್ಧಿಕರಣಕ್ಕೆ ಯೋಗ್ಯವಾದ ಶುದ್ದ ಕಬ್ಬಿನ ಹಾಲು ಆಲೆಮನೆಯಲ್ಲಿ ಸಿಗುತ್ತಿತ್ತು.
ಅಡಿಕೆ, ತೆಂಗು, ಅಲಂಕಾರಿಕ ಗಿಡಗಳು ಲಭ್ಯ ಮಾರಾಯ್ರೆ...
ಧ.ಗ್ರಾ.ಯೋಜನೆಯ ವತಿಯಿಂದ ವಿವಿಧ ಬಣ್ಣದ ಗುಲಾಬಿ ಗಿಡಗಳು, ಅಲಂಕಾರಿಕ ವಸ್ತುಗಳು, ತೋಟಗಾರಿಕೆಯ ಗಿಡಗಳು ಮಾರಾಟಕ್ಕಿವೆ. ಸರ್ವಋತುಗಳಲ್ಲಿಯೂ ಫಲವನ್ನುಕರಾವಳಿ ಹಾಗೂ ಬಯಲು ಸೀಮೆಯ ಹಲಸಿನ ತಳಿಗಳು, ಜಾಯಿಕಾಯಿ, ಚಕೋತ, ಎಳನೀರಿಗಾಗಿಯೇ ಇರುವ ತೆಂಗಿನ ಗಿಡಗಳು, ನೇರಳೆ, ೬ ತಿಂಗಳಲ್ಲಿ ಫಲವನ್ನುನೀಡುವ ತೈವಾನ್‌ನ ಲೇಡಿರೆಡ್ ಹೆಸರಿನ ಪಪ್ಪಾಯಿ, ಕಾಳು ಮೆಣಸು ಬಳ್ಳಿಗಳು ಮಾತ್ರವಲ್ಲದೇ ಎರೆಹುಳ ಗೊಬ್ಬರಗಳು ಮಾರಾಟಕ್ಕಿವೆ. ಉಪವನ ಗಾರ್ಡನ್, ಬ್ರಹ್ಮಾವರದ ಕ್ಲಾಸಿಕ್ ನರ್ಸರಿಯಲ್ಲಿ ಅಂಜೂರ ಗಿಡಗಳು ಮಾರಾಟಕ್ಕಿರುವುದು ಕೃಷಿಮೇಳದ ಸೌಂದರ್ಯವನ್ನು ವೃದ್ಧಿಸಿದೆ. ಕರಾವಳಿಯ ಜನತೆ ಮಾತ್ರವಲ್ಲದೇ, ನಾಡಿನ ಎಲ್ಲಾ ಜನತೆಯು ಕೃಷಿ ಮೇಳದಲ್ಲಿ ಭಾಗವಹಿಸಿ, ಮೇಳದ ಸೊಬಗನ್ನು ಸವಿಯಲು ನುಡಿಸಿರಿಯಲ್ಲಿ ಮಾತ್ರ ಅವಕಾಶವಾಗಿತ್ತು.
ಕುಂದಾಪ್ರ ಕನ್ನಡ್ದ ಸೊಬಗ್ ಕಾಣಿಯೇ..
ಜೀವನ್ದಂಗ್ ಒಂದ್ಸಾಲ್ ಆರೂ ಆಳ್ವಾಸ್ ನುಡಿಸಿರಿ ಕಾಣ್ಕ್ ಮರ್ರೆ..
ಹ್ವಾಯ್ ಎಂತಾ ಚಳಿ ಮರ್ರೆ...ಚಳಿ ಆರೂ ಕಾಂತಿಲ್ಯೆ ಕಾಲಿಡುಕೂ ಜಾಗ ಇಲ್ದಿದಂಗ್ ಮಾಡಿ ಬಿಟ್ಟಿರ್ ಮರ್ರೆ. ಎಲ್ ಕಂಡ್ರೂ ಜನವೇ, ಕುಂದಾಪ್ರದ ಕೊಡಿ ಹಬ್ಬದಕ್ಕಿಂತ ಹತ್‌ಪಟ್ ಜಾಸ್ತಿ ಇತ್ತೆ. ಕುಡುಕೆ ನೀರ್ ಕೆಂಡ್ರ ಕೂಡ್ಲೆ ಸಿಕ್ಕತ್ತ್, ಊಂಬಕಂತ್ತು ಮೂರ್‍ನಾಲ್ಕ್ ಕಡಿ ಹಾಕ್ತಿದ್ರೆ..ಡೋಲು, ಯಕ್ಷಗಾನ್ದ ಚೆಂಡಿ, ಹೋಳಿ ಹಬ್ಬದ ಕುಣ್ತ, ಯಬ್ಯಾ ನಾನ್ ಕಂಡದ್ ಮೊದ್ಲ ಕುಂದಾಪ್ರ ಮಾತ್ರ ಅಲ್ದಾ..ಅಲ್ಲ ಹೋಯ್ ಎಂತಾ ಕಾಂಬದ್, ಯಾವ್ದನ್ ಕಾಂಬದ್, ಯಾವ್ದನ್ ಬಿಡೂದ್ ಅಂತಾ ಗೊತ್ತಾಲ್ಯೆ. ನೂರ್ ಎಕ್ರಿ ಜಾಗ್ ಇತ್ತ್ ಅಂಬ್ರ ಕಾಣಿ..ಎಲ್ ಕಂಡ್ರೂ ವೇದಿಕೆ ಮಾಡಿರೆ..ಒಂದ್ಕಿಂತ್ ಒಂದ್ ಒಳ್ಳೆ ಕಾರ್ಯಕ್ರಮ...ಹ್ವಾಯ್ ನಾನ್ ಹೇಳೂಕೆ ಹೊರಟದ್ ಡಾ.ಮೋನಣ್ಣ ಮಾಡಿರಲ್ದಾ ಆಳ್ವಾಸ್ ವಿಶ್ವನುಡಿಸಿರಿ ಬಗ್ಗೆ ಮರ್ರೆ.
ಮೋನಣ್ಣ ಇಷ್ಟ್ ವರ್ಷ ನುಡಿಸಿರಿ, ವಿರಾಸತ್ ಎರ್‍ಡೂ ಬ್ಯಾರೆ ಬ್ಯಾರೆ ಮಾಡ್ತಿದ್ರ ಅಂಬ್ರ. ಒಂದ್ ವಿದ್ಯಾಗಿರಿಯಂಗ್..ಇನ್ನೊಂದ್ ಶೋಭಾವನ್ದಂಗ್ ಅಂಬ್ರ. ಆರೆ ಈ ಸರ್ತಿ ಎರ್‍ಡೂ ಒಟ್ಟಿಗೆ ಮಾಡಿ, ವಿಶ್ವ ಆಳ್ವಾಸ್ ನುಡಿಸಿರಿ ಅಂದೇಳಿ ಮಾಡಿರೆ. ಹೆಸ್ರಿಗೆ ಸರಿಯಾಯಿ ತುಂಬಾ ಜನ ಬಂದಿರ್ ಮರ್ರೆ. ಆ ಬೆಳಿ ಬೆಳಿ, ಕೆಂಚ್ ಕೂದಲ್ ಬಿಟ್ಟಕಂಡ್, ಗೋಣಿಚೀಲ್ದ ಕಂಡಂಗಿದ್ ಬ್ಯಾಗ್ ಹೈಕಂಡ್ ಬತ್ರಲ್ದ ವಿದೇಶಿಯರ್ ಕೂಡ ಅಲ್ಲಿದ್ರ್ ಮರ್ರೆ. ಹ್ವಾಯ್ ಗಮ್ಮತ್ ಅಂದ್ರೆ ಇದ್ ಕಾಣಿ ಅವ್ರಿಗೆ ಕನ್ನಡ ಬರ್‍ದಿದ್ರೂ ಇಲ್ಲಿನ ಜನಗಳ ಮಾತ್, ಜನಪದ ತಂಡಗಳ ಕೊಣಿಯುದ್‌ನ್ ಫೋಟೊ ತೆಕ್ಕಂಡ್ ಹೊತ್ ಇದ್ರೆ. ನಾನ್ ಯಾಕ್ ಅಂತಾ ಅವ್ರತ್ರ ಕುಂದಾಪ್ರದ ಇಂಗ್ಲಿಷ್ಂಗ್ ಕೆಂಡ್ ಕೂಡ್ಲೆ ಅವ್ರ್ ನಾವ್ ಸಂಶೋಧನೆ ಮಾಡೊ ವಿದ್ಯಾರ್ಥಿಗಳ್ ಅಂದ್ರೆ. ನಂಗಂತೂ ಎಷ್ಟ್ ಖುಷಿ ಆಯ್ತ್ ಅಂದ್ರೆ ನಮ್ ಕನ್ನಡ ನೆಲದ್ ಸಂಸ್ಕೃತಿನ, ಜನಜೀವನವನ್ನು ವಿದೇಶಿಗಳ್ ಬಂದ್ ಅಭ್ಯಾಸ್ ಮಾಡ್ತ್ರ್ ಅಂದ್ರೆ ನಮ್ ದೇಶದ್ ಹಿರಿಮೆ ಸಾಗರದಾಚೆಗೂ ಹೊತ್ತ್ ಅಲ್ದಾ. ಅದ್ಕಿಂತ್ಲೂ ಅವ್ರ ವೇದಿಕ್ಯಾಂಗ್ ಭಾರತೀಯ ಉಡುಪಂಗೆ ಮಿಂಚ್ತಾ ಇದದ್ ಕಾಂಬಕೆ ಎಷ್ಟ್ ಖುಷಿ ಆತಿತ್ ಗೊತ್ತಾ! ಇದ್ಕೆಲ್ಲಾ ಕಾರಣ್ ಆದ್ ಮೋನಣ್ಣ ನಡೆಸುವ ನುಡಿಸಿರಿ ಮರ್ರೆ
ಎಲ್ ಕಂಡ್ರೂ ಜನ..ಅಂಗಡಿ, ಜನಪದ ತಂಡಗಳು-
ನುಡಿಸಿರಿಯಂಗೆ ಕಾಲಿಡೂಕು ಜಾಗ ಇಲ್ಯೆ. ವಿದ್ಯಾರ್ಥಿಗಳ್ ಜಾಸ್ತಿ ಇತ್ ಅಂದೆಳಿ ತಿಳ್ಕಂಡ್ ಧರ್ಮಸ್ಥಳದ ಕೃಷಿಮೇಳಕ್ಕೆ ಹೋಯ್ ಕಂಡ್ರೆ ಅಲ್ಲಂತೂ ರೈತ್ರೆ ಇದ್ರ್ ಮರ್ರೆ. ಸಣ್ ಸಣ್ ಕೋಣ್ಯಂಗ್ ಬಟ್ಟಿ ತಕಂಬರಿಗೆ ಬಟ್ಟಿ, ತಿಂಡಿ ತಿಂಬರಿಗೆ ತಿಂಡಿ, ಬಾಯಾರಿಕೆ ಆರೆ ಕಬ್ಬಿನ ಹಾಲ್ ಇತ್ತೆ. ಇದೆಲ್ಲಾ ಬಹಳ ಪಿರಿಯಾ ಮರ್ರೆ. ದೊಡ್ಡ ವೇದಿಕ್ಯಾಂಗ್ ಕೃಷಿ ವಿಷಯಕ್ಕೆ ಸರಿಯಾಯಿ ಮಾರ್ಗದರ್ಶನ ಮಾಡ್ತಾ ಇದ್ರೆ. ಅಲ್ಲ್ ಭತ್ತ್‌ದಂಗೆ, ಪರಂಗಿ ಹಣ್ಣಂಗೆ, ಕಾಫಿ ಬೀಜದಂಗೆ, ಮೆಣ್ಸಿನ್ ಕಾಯಂಗೆ ಮಾಡದ್ ಗೋಪುರಗಳಿತ್ ಮರ್ರೆ. ಅಡ್ಕಿ, ಬೊಂಡ್ದಂಗ್ ಮಾಡಿದ್ ರಥದ್ ಶೈಲಿ ಕಾಂಬ್ಕೆ ಖುಷಿ ಆತಿತ್ತೆ. ಒಂದ್ಸಲಾ ನಾನ್ ಎಲ್ಲಿಗೆ ಹೊಯ್ದಿ ಅಂದೇಳಿ ನಂಗೆ ಗೊತ್ತಾಯ್ಲ್ಯೆ..ನಾಗಮಂಡಲದ ಚಪ್ಪರ ಇತ್, ನಮ್ ಕೊಲ್ಲೂರ್ ಕೊಡಚಾದ್ರಿ ಬೆಟ್ಟ ಇತ್, ಕಂಬಳ ಗೆದ್ದಿ ಇತ್, ದೊಡ್ಡ್ ದೊಡ್ ದನಗಳಿದ್ದೊ. ಕೃಷಿ ಮೇಳ ಅಂತೂ ನುಡಿಸಿರಿಂಗೆ ಜೋಡ್ಸಕಂಡದ್ ರೈತ್ರಿಗೆ, ಮಕ್ಳಿಗೆ ಒಳ್ಳೆದಾಯ್ತ್.
ಅದನ್ ಮುಗ್ಸಿ ಗುಡ್ಡಿನ ಕೊರದ್ ಜಾಗದ್ ಮೇಲ್ ನಡ್ಕಂಡ್ ಹೋರ್ ಕೂಡ್ಲೆ ಪುಸ್ತಕ ಮಳಿಗೆ ಇತ್ ಮರ್ರೆ..ಪುಸ್ತಕದ್ ಮಳಿಗ್ಯಾಂಗ್ ಎಲ್ಲಾ ತರದ್ ಪುಸ್ತಕ ಇತ್. ನಾಲ್ಕಾಣಿ, ೫೦ಪೈಸಿಯಿಂದ್ ಶುರು ಆಯಿ ೫೦೦ ರೂಪ್ಯಾ ತನ್ಕ್ ಇತ್ ಮರ್ರೆ. ಹೆಚ್ಚಿನವ್ರ ಅಂತೂ ಪುಸ್ತಕ್ ಬ್ಯಾಗಂಗ್ ತುಂಬ್ಸಕಂಡ್ ಹೊತ್ ಕಂಡ್ರೆ ಮೀನ್ ತುಂಬ್ಸಕಂಡ್ ಹೋದ್ಹಂಗೆ ಇತ್ ಮರ್ರೆ. ಹೂಗಳ ಪ್ರದರ್ಶನ ಅಂತೂ ಕಾಂಬುಕೆ ಖುಷಿ ಆತಿತ್ತೆ. ಪಕ್ಕದಂಗೆ ಆಹಾರ್‌ದ್ ಅಂಗಡಿಗಳಿತ್. ಕನ್ನಡದ್ ಸಾಹಿತಿ, ಮನಸುಗಳನ್ ಬೆಸೆಯುವ ಮೋಹನ್ ಆಳ್ವರ ಕಾರ್ಯ ಯಾರಿಂದ್ಲೂ ಮಾಡೂಕೆ ಆತಿಲ್ಯ.. ಆಳ್ವಾಸ್‌ನ ವಿದ್ಯಾರ್ಥಿಗಳ್ ಮಾತ್ರ ರಾತ್ರಿ-ಹಗಲ್ ಅಂತಾ ಕಾಣ್ದೆ ಬಂದವರ ಬೇಕು ಬೇಡಗಳನ್ ಪೂರೈಸುತ್ತಿದ್ರ್ ಮರ್ರೆ..ಜೀವನ್ದಂಗ್ ಒಂದ್ ಸಲವಾರೂ ಇದನ್ ಕಾಣ್ಕೆ ಇಲ್ದಿದ್ರೆ ನುಡಿಸಿರಿಯ ವಿಶೇಷ ತಿಳ್ಕಂಬಕೆ ಆತಿಲ್ಯೆ..
ಸಾಂಸ್ಕೃತಿಕತೆಯ ವಿರಾಟ್ ಸ್ವರೂಪ: ಸಿ.ಟಿ.ರವಿ
ಕನ್ನಡಿಗರಲ್ಲಿ ಆತ್ಮವಿಶ್ವಾಸ, ಸಾಂಸ್ಕೃತಿಕ ಮನಸ್ಸು, ಒಲವನ್ನು ಮೂಡಿಸುವ ಚಿಂತನೆಯ ಸಾಂಸ್ಕೃತಿಕತೆಯ ವಿರಾಟ ಸ್ವರೂಪದ ದರ್ಶನವನ್ನು ಡಾ.ಮೋಹನ್ ಆಳ್ವ ಮೂಡಿಸಿದ್ದಾರೆ. ಸರಕಾರಿ, ಸಾಹಿತ್ಯ ಪರಿಷತ್ ನಡೆಸುವ ಸಾಹಿತ್ಯ ಸಮ್ಮೇಳನಕ್ಕಿಂತ ವಿಭಿನ್ನವಾಗಿ ಕನ್ನಡ ಮನಸುಗಳನ್ನು ಜೋಡಣೆ ಮಾಡಿದ್ದಾರೆ. ವ್ಯಕ್ತಿಯಾಗಿ ಸೃಷ್ಠಿಯ ಅನಾವರಣಗೊಳಿಸಿದ್ದಾರೆ. ಇತ್ತೀಚಿಗೆ ಸರಕಾರ ಮತ್ತು ಸಾಹಿತ್ಯ ಪರಿಷತ್‌ಗಳ ಸಮ್ಮೇಳನ ಆದ್ವಾನಗಳ ಬೀಡಾಗುತ್ತಿರುವುದು ಕಂಡು ಬರುತ್ತಿದೆ. ಕಲಿಕೆಯ ದೃಷ್ಟಿಯಿಂದ ರೂಪಿತವಾದ ಜಾನಪದ, ಸಾಹಿತ್ಯ, ಸಾಂಸ್ಕೃತಿಕತೆಯ ರೂಪವಾಗಿದೆ. ನೋಡಿದ ಕನಸನ್ನು ನನಸಾಗಿಸಲು ಸಾಮರ್ಥ್ಯವಿರಬೇಕು. ಈ ನಿಟ್ಟಿನಲ್ಲಿ ಡಾ.ಆಳ್ವ ಸಫಲವಾಗಿದ್ದಾರೆ.
---
ಡಾ.ಮೋಹನ್ ಆಳ್ವ ಭಾನುವಾರ (ಡಿ.೨೨)ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿದಾಗ ಪತ್ರಿಕೆಯೊಂದಿಗೆ ಆಡಿದ ಮನದಾಳದ ಮಾತುಗಳಿವು:
ವಿಶ್ವನುಡಿಸಿರಿಯ ಸೂಕ್ಷ್ಮತೆ ಅರಿತಾಗ ಆಡಿದ ಮಾತು-ಕೃತಿ ಒಂದುಗೂಡಿದ ಸಂತೋಷ ನನ್ನಪಾಲಿಗಾಗಿದೆ. ಸಾಹಿತ್ಯ, ಭಾಷೆ, ಮುಗ್ದಕೃಷಿಕರು, ಚಂಚಲತೆಯಿದ್ದರೂ, ಕನಸುಗಳನ್ನು ಹೊತ್ತ ಯುವಸಮೂಹ, ಜಾನಪದ ವಿದ್ವಾಂಸರು, ಕಲಾವಿದರನ್ನು ಕಂಡಾಗ ನುಡಿಸಿರಿಯ ಸಾರ್ಥಕತೆಯ ನೆನೆದು ಮನಸ್ಸಿಗೆ ನೆಮ್ಮದಿಯ ಭಾವ ಮೂಡಿದೆ. ನುಡಿಸಿರಿಯ ಕುರಿತು ಮುಂದಿನ ೧೫ ದಿನಗಳಲ್ಲಿ ಸಮಿತಿಯವರೊಂದಿಗೆ ಚರ್ಚಿಸಲಾಗುವುದು. ಗೌಜಿ-ಗಮ್ಮತ್‌ನ ವೈಭವೀಕರಣ ಸಾಧ್ಯವಿಲ್ಲ. ನುಡಿಸಿರಿ-ವಿರಾಸತ್‌ನ್ನು ಕೊಂಡೊಯ್ಯುವ ಪರಿಕಲ್ಪನೆಯನ್ನು ಗಂಭೀರವಾಗಿ ಆಲೋಚನೆ ಮಾಡುವ ಅಗತ್ಯವಿದೆ.
ಬಂಡಾಯವೆನ್ನುವ ಮಾತು ಬೇಸರ ತಂದಿದೆ:
ಬರಗೂರು ರಾಮಚಂದ್ರ ಅವರ ಮಾತಿನ ಬಗ್ಗೆ ನನಗೆ ಸಂಶಯವಿದೆ. ಅವರ ವಿಚಾರಗಳು ಬೇರೆಯಾದರೂ, ವೈಯಕ್ತಿಕವಾಗಿ ಅವರೊಂದಿಗೆ ನನ್ನ ಬಾಂಧವ್ಯ ಚೆನ್ನಾಗಿದೆ. ನುಡಿಸಿರಿ ಪ್ರಾರಂಭಿಸಿದ ದಿನದಿಂದಲೂ ಅವರೊಂದಿಗೆ ದೂರವಾಣಿ ಸಂಪರ್ಕ ನಿರಂತರವಾಗಿತ್ತು. ಅವರೇ ಹುಟ್ಟುಹಾಕಿದ ನುಡಿಸಿರಿಯ ಕುರಿತು ಬಂಡಾಯವೆನ್ನುವ ಮಾತುಗಳಿಂದ ಬೇಸರವಾಗಿದೆ. ಕನ್ನಡ ಮನಸುಗಳನ್ನು ಒಂದುಗೂಡಿಸುವ ಚಿಂತನೆಗಳಾಗಬೇಕೆ ಹೊರತು ಬಂಡಾಯವೆನ್ನುವ ಮಾತು ಸರಿಯಲ್ಲ.
೧೫ದಿನದಲ್ಲಿ ಕನ್ನಡ ಭವನಕ್ಕೆ ಶಂಕುಸ್ಥಾಪನೆ:
ಯುವಪೀಳಿಗೆಗೆ ಒತ್ತು ನೀಡುವ ನಿಟ್ಟಿನಲ್ಲಿ ನುಡಿಸಿರಿ-ವಿರಾಸತ್ ಮುಂದುವರಿಯಲಿದೆ. ಪ್ರಶಸ್ತಿಗಳನ್ನು ನೀಡುವ ಕುರಿತ ಚಿಂತನೆ ನಡೆಸಲಾಗುವುದು. ಪ್ರಾರಂಭದ ೨೦೦೩ರ ನುಡಿಸಿರಿ ಹಾಗೂ ವಿಶ್ವ ನುಡಿಸಿರಿಯಲ್ಲಿ ಬಹಳಷ್ಟು ವ್ಯತ್ಯಾಸಗಳಾಗಿವೆ. ಸ್ವರಾಜ್ ಮೈದಾನವನ್ನು ರಕ್ಷಣೆ ಮಾಡಿದ್ದು ಮಾತ್ರವಲ್ಲದೆ ಪಕ್ಕದಲ್ಲಿಯೇ ೧ ಎಕ್ರೆ ಭೂಮಿಯನ್ನು ಖರೀದಿಸಿದ್ದು, ಕನ್ನಡ ಭವನಕ್ಕೆ ಮುಂದಿನ ೧೫ದಿನದೊಳಗೆ ಪಂಚಾಂಗ ಹಾಕಲಾಗುವುದು. ಇದು ಆಳ್ವಾಸ್‌ನ ಭಾಗವಾಗಿ ಸಾರ್ವಜನಿಕ ವಲಯವಾಗಿ ಕಂಗೊಳಿಸಲಿದೆ.
No comments:
Post a Comment