ವನಸಿರಿಯ ನಡುವೆ ಭಕ್ತಿ-ಭಾವದ ಸುಬ್ರಹ್ಮಣ್ಯನ ಆಲಯ
ಸುತ್ತಲೂ ವನಸಿರಿ ಸೊಬಗಿನ ನಡುವೆ ಭವ್ಯ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕಂಗೊಳಿಸುತ್ತಿದೆ. ಎಂಟು ನೂರು ವರ್ಷಗಳಿಂದ ಆಸ್ತಿಕ ಜನಕೋಟಿಯ ಆಶೋತ್ತರ ಈಡೇರಿಸುತ್ತಾ ಶ್ರೀ ಸುಬ್ರಹ್ಮಣ್ಯ ಸ್ವಾಮಿ ನೆಲೆ ನಿಂತಿರುವುದು ಇಲ್ಲಿನ ವಿಶೇಷ. ಶ್ರೀ ಸುಬ್ರಹ್ಮಣ್ಯ ದೇವರ ವಿಗ್ರಹ ಐದು ಹೆಡೆಗಳಿರುವ ಸರ್ಪದ ಆಕೃತಿಯಲ್ಲಿದೆ. ಕರಿಶಿಲೆಯ ಈ ವಿಗ್ರಹವೇ ಅಪೂರ್ವ ಕಲಾಕೃತಿ. ವಿಗ್ರಹದ ಶಿರೋಭಾಗದ ಹಿಂಭಾಗದಲ್ಲಿರುವ ಕಮಲ ಪುಷ್ಪದ ಚಿಹ್ನೆ ದಕ್ಷಿಣ ಭಾರತದಲ್ಲೇ ಅಪೂರ್ವವಾಗಿದೆ. ದೇವಸ್ಥಾನದ ಗೋಪುರದಲ್ಲಿರುವ ಗುಡಿಗಳಲ್ಲಿ ಸ್ಥಾಪಿಸಲ್ಪಟ್ಟಿರುವ ಶ್ರೀ ಮಹಾಗಣಪತಿ ಮತ್ತು ಶ್ರೀ ದುರ್ಗಾ ಮಾತೆಯ ಪಂಚಲೋಹದ ವಿಗ್ರಹಗಳು ಕೂಡ ಪ್ರಾಚೀನ ಕಾಲದ್ದಾಗಿದೆ.
ಷಷ್ಠಿ ಮಹಿಮೆ:
ಷಷ್ಠಿ ಮಹೋತ್ಸವ ಇಲ್ಲಿನ ಪ್ರಮುಖ ಉತ್ಸವ. ಐದು ದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತದೆ. ಸಾವಿರಾರು ಮಂದಿ ಈ ಉತ್ಸವದಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ. ಈ ಸಂದರ್ಭ ದೈವಗಳ ನೇಮೋತ್ಸವ ನಡೆಯುತ್ತದೆ. ಅಲ್ಲದೆ ದೇವಳದಲ್ಲಿ ಪ್ರತಿನಿತ್ಯ ಮೂರು ಹೊತ್ತು ಪೂಜೆ ನೆರವೇರುತ್ತದೆ. ಪ್ರತಿ ತಿಂಗಳೂ ಸಂಕ್ರಾತಿ, ವರ್ಷಂಪ್ರತಿ ನಾಗರ ಪಂಚಮಿ, ನೂಲಹುಣ್ಣಿಮೆ, ಗಣೇಶ ಚೌತಿ, ನವರಾತ್ರಿ, ಪ್ರತಿಷ್ಠಾ ವಾರ್ಷಿಕೋತ್ಸವ, ವಿಷು, ಪತ್ತನಾಜೆ, ತಂಬಿಲ ಇತ್ಯಾದಿ ವಿಶೇಷ ದಿನಗಳ ಆಚರಣೆ ಪೂಜೆ ನಡೆಯುತ್ತದೆ. ಸೇವಾಸಕ್ತರಿಗೆ ಪ್ರತಿದಿನ ಸೇವಾವಕಾಶವಿದೆ.
ಬಲಿವಾಡು ತಂದವರಿಗೆ ಭೋಜನ ಪ್ರಸಾದದ ವ್ಯವಸ್ಥೆಯು ಇದೆ. ಭಕ್ತಾದಿಗಳ ಅನುಕೂಲಕ್ಕಾಗಿ ವಿವಾಹ, ಉಪನಯನ ಇತ್ಯಾದಿ ಶುಭ ಕಾರ್ಯಗಳಿಗೆ ಅವಕಾಶವಿದ್ದು, ವೇದಪಾಠವೂ ಇಲ್ಲಿ ನಡೆಯುತ್ತದೆ.
ಕೋಟೆ, ವಾರಣಾಶಿ, ಕೆದಿಲ ಈ ಮೂರು ಮನೆತನದವರು ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಳದ ಅನುವಂಶಿಕ ಮೊಕ್ತೇಸರರಾಗಿದ್ದಾರೆ. ಮೋಟುಕಾನ, ಮುಂಡುಗಾರು, ಬಾಳಿಲ, ಕಳಂಜಗುತ್ತು, ಮುಪ್ಪೇರ್ಯ, ಕಜೆಮೂಲೆ, ಪಟ್ಟೆ, ಭಜನಿ ಮನೆತನದವರು ಶ್ರೀ ದೇವಳದ ನಿಕಟ ಸಂಪರ್ಕ ಹೊಂದಿದ್ದರು. ಮೊಕ್ತೇಸರರು ಅರ್ಚಕರು ಸಹಿತ ಒಟ್ಟು ೧೨ ಮಂದಿಗೆ ಗೌರ ಪ್ರಸಾದ ಈಗಲೂ ಸಲ್ಲುತಿದೆ. ಇಲ್ಲಿನ ದೈವಗಳ ನುಡಿಗಟ್ಟಿನಲ್ಲಿಯೂ ಈ ಹೆಸರುಗಳು ಕೇಳಿ ಬರುತ್ತಿವೆ. ಕಳೆದ ೩೦ ವರ್ಷಗಳಿಂದ ಶ್ರೀ ದೇವಾಲಯ ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ. ಗರ್ಭಗುಡಿ ಮತ್ತು ಗೋಪುರಗಳ ಜೀರ್ಣೋದ್ಧಾರ, ದೈವಗಳ ಗುಡಿ ನಿರ್ಮಾಣ, ಮಹಾದ್ವಾರ, ಪಾಕಶಾಲೆ ನಿರ್ಮಾಣವಾಗಿದ್ದು, ಕಲ್ಯಾಣ ಮಂಟಪ ಕಾಮಗಾರಿ ಶೇ.೭೫ರಷ್ಟು ಪೂರ್ಣಗೊಂಡಿದೆ.
ಮಾರ್ಗಸೂಚಿ:
ಸುಳ್ಯ ತಾಲೂಕು ಕಳಂಜ ಗ್ರಾಮದಲ್ಲಿರುವ ಕೋಟೆ ಶ್ರೀ ಸುಬ್ರಹ್ಮಣ್ಯ ದೇವಳ ತಾಲೂಕು ಕೇಂದ್ರದಿಂದ ೧೫ ಕಿ.ಮೀ, ಪುತ್ತೂರಿನಿಂದ ೩೨ ಕಿ.ಮೀ ಹಾಗೂ ಕುಕ್ಕೆ ಸುಬ್ರಹ್ಮಣ್ಯದಿಂದ ೩೩ ಕಿ.ಮೀ ದೂರದಲ್ಲಿದೆ.
ಸಂತಾನ ಪ್ರಾಪ್ತಿ, ಕೌಟುಂಬಿಕ ಸಮಸ್ಯೆ ಪರಿಹಾರ ಕೋಟೆ ಶ್ರೀ ಸುಬ್ರಹ್ಮಣ್ಯ ದೇವರ ಅನುಗ್ರಹದಿಂದ ಸಾಧ್ಯವಾಗಿದೆ. ಅಸಂಖ್ಯಾತ ಭಕ್ತರ ಸಹಕಾರದಲ್ಲಿ ದೇವಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಕಲ್ಯಾಣ ಮಂಟಪ ಕಾಮಗಾರಿ ಶೀಘ್ರ ಮುಗಿಯಲಿದೆ.
*ಸತ್ಯನಾರಾಯಣ ಕೋಟೆ-ಆಡಳಿತ ಧರ್ಮದರ್ಶಿ.
ಕೋಟೆ ಶ್ರೀ ಸುಬ್ರಹ್ಮಣ್ಯ ದೇವರ ಜತೆಗೆ ಪ್ರತಿನಿತ್ಯ ಶ್ರೀ ಗಣಪತಿ, ಶ್ರೀ ದುರ್ಗಾದೇವಿ, ಶ್ರೀ ನೇರಳತ್ತಾಯ, ಶ್ರೀ ರಕ್ತೇಶ್ವರಿ, ಶ್ರೀ ಉಳ್ಳಾಕಳು ದೈವಗಳಿಗೂ ಪೂಜೆ ನಡೆಯುತ್ತದೆ. ಇತರ ಕಡೆಗಳಲ್ಲಿ ಗಣಪತಿ ದೇವರ ವಾಹನ ಮೂಷಿಕ ಆದರೆ ಕೋಟೆ ದೇವಸ್ಥಾನದ ಗಣಪತಿ ದೇವರ ವಾಹನ ವೃಷಭ.
*ವಾರಣಾಶಿ ಗೋಪಾಲಕೃಷ್ಣ-ಧರ್ಮದರ್ಶಿ.
No comments:
Post a Comment