Thursday 30 January 2014

ಪರಶುರಾಮ ಸೃಷ್ಠಿಯ ವೈಶಿಷ್ಟ್ಯಗಳು:-
ಪಶ್ಚಿಮದಲ್ಲಿ ಬೋರ್ಗರೆಯುವ ಅರಬ್ಬಿಸಮುದ್ರ-ಪೂರ್ವದಲ್ಲಿ ಸುತ್ತುವರಿದಿರುವ ಪಶ್ಚಿಮಘಟ್ಟಗಳ ನಡುವಿನ ಸುಂದರ ತಾಣ-ನಮ್ಮ ಕರಾವಳಿ
ಪಶ್ಚಿಮ ಘಟ್ಟದ ತಪ್ಪಲಿನ ಭಾಗವನ್ನೊಮ್ಮೆ ಕಣ್ಣಾಯಿಸಿದಾಗ ಅನೇಕ ದೇಗುಲಗಳು, ಶಿಕ್ಷಣ ಕೇಂದ್ರಗಳು, ಗದ್ದೆ-ತೋಟಗಳಿಂದಾವೃತವಾದ ಭೂಭಾಗ ಕಣ್ಮುಂದೆ ತನ್ನದೇ ರೂಪದೊಂದಿಗೆ ಬಿಂಬಿತವಾಗುತ್ತದೆ. ಪ್ರಕೃತಿ ರಮಣೀಯ ಆಗುಂಬೆಯಲ್ಲಿ ನಿಂತು ದೃಷ್ಟಿ ಹಾಯಿಸಿದರೆ, ಪಶ್ಚಿಮದಲ್ಲಿ ಕಣ್ಣಾಲಿಗಳೇ ನಿಲುಕದಷ್ಟು ದೂರದವರೆಗೆ ಶಾಂತ ಸ್ವರೂಪಿಯಾಗಿ ಬೃಹತ್ ಅಲೆಗಳ ಅಬ್ಬರದೊಂದಿಗೆ ಭೂಭಾಗಕ್ಕೆ ಅಪ್ಪಳಿಸುವ ಅರಬ್ಬಿ ಸಮುದ್ರ ಕಂಡುಬರುತ್ತದೆ. ಪರಶುರಾಮನ ಸೃಷ್ಠಿಯ ಕರಾವಳಿಗೆ ಯಾವುದೇ ತೊಡಕಾಗುವುದಿಲ್ಲ ಎನ್ನುವ ನಂಬಿಕೆ ಇಲ್ಲಿಯ ನಿವಾಸಿಗಳದು. ನ್ಯಾಯ-ಧರ್ಮಗಳಿಗೆ ಪ್ರಸಿದ್ದಿ ಪಡೆದ ಕರಾವಳಿಯ ಚಿತ್ರಣವನ್ನು ನಿಮ್ಮ ಮುಂದೆ ತರುವ ಒಂದು ಸಣ್ಣ ಪ್ರಯತ್ನವೇ ಈ ಲೇಖನ.
ಕರಾವಳಿ ಕರ್ನಾಟಕವು ಹಿಂದು ಹಾಗೂ ಜೈನ ಸಮುದಾಯದ ಯಾತ್ರಾ ಸ್ಥಳಗಳ ಭದ್ರಕೋಟೆಯಾಗಿದೆ ಎಂದರೂ, ತಪ್ಪಿಲ್ಲ. ದ್ವೈತ ತತ್ವಶಾಸ್ತ್ರದ ಕೇಂದ್ರಗಳಾದ ಉಡುಪಿಯ ಅಷ್ಟಮಠಗಳು, ವೇದ-ಮಂತ್ರಗಳ ಅಭ್ಯಾಸಕ್ಕೆ ಗೋಕರ್ಣ, ಕಾರ್ಕಳ-ಮೂಡಬಿದ್ರೆ ವರಂಗ-ಧರ್ಮಸ್ಥಳದ ಜೈನ ಮಂದಿರಗಳು ಹಾಗೂ ವಿವಿದೆಡೆಗಳಲ್ಲಿ ವೈಷ್ಣವ ಆಚರಣೆಗಳ ಪ್ರಸಿದ್ದ ತಾಣವಾಗಿ ಮಾರ್ಪಟ್ಟಿದೆ. ಚಾಲುಕ್ಯರು ನಿರ್ಮಿಸಿದ ವಿಜಯನಗರ ಶೈಲಿಯ ದೇವಾಲಯಗಳು ಭಟ್ಕಳ, ಕುಮಟಾ, ಶಿರಾಲಿಯಲ್ಲಿ ಮೂಡಿ ಬಂದಿರುವುದು ಕರಾವಳಿಗೆ ವಿಜಯನಗರದ ಕಳೆಯನ್ನು ತಂದಿಟ್ಟಿದೆ.
ಪರಶುರಾಮ ಸೃಷ್ಠಿಗೆ ಸುಮಾರು ೩೦೦ ಕಿ.ಮೀ ವ್ಯಾಪ್ತಿಯ ಪ್ರಾಚೀನ ಕರಾವಳಿಯ ಆಶೀರ್ವಾದವಿದೆ. ಉತ್ತರ ಕನ್ನಡದ ಹವಳದ ದ್ವೀಪ ನೇತ್ರಾಣಿ, ಕಂದುಬಣ್ಣದ ಅಗ್ನಿಶಿಲೆಯಿಂದಾವೃತವಾದ ಸೇಂಟ್ ಮೇರಿಸ್ ದ್ವೀಪ, ಸೂರ್ಯಾಸ್ತಮಾನದ ಹೃದಯಂಗಮ ಸವಿಯನ್ನುಣಬಡಿಸುವ ಮಲ್ಪೆ, ಮುರ್ಡೆಶ್ವರ, ಮರವಂತೆ, ಗೋಕರ್ಣ, ಕುಮಟಾ ಸ್ಥಳಗಳಲ್ಲಿನ ಬೀಚ್‌ಗಳು, ಅತ್ಯದ್ಬುತ ಪರ್ವತ ಶ್ರೇಣಿಗಳು, ಆಗುಂಬೆ, ಕೊಡಚಾದ್ರಿ, ಕೆಮ್ಮಣ್ಣುಗುಂಡಿ ಗಿರಿಧಾಮಗಳು ಪ್ರವಾಸಿಗರಿಗೆ ಅಪಾರವಾದ ಸೂರ್ಯನ ಬೆಳಕು ಹಾಗೂ ಹಸಿರನ್ನು ಒದಗಿಸುವ ತಾಣವಾಗಿದೆ. ಇವೆಲ್ಲವೂ ಕಣ್ಣಿಗೆ ಕಾಣುವ, ಜನರ ಬಾಯಿಯಿಂದ ಸಾಮಾನ್ಯವಾಗಿ ಕೇಳಿಬರುವಂತ ಗಿರಿಧಾಮಗಳಾಗಿದ್ದು, ಬೆಳಕಿಗೆ ಬಾರದ ಅನೇಕ ಗಿರಿಧಾಮಗಳು ಕರಾವಳಿಯಲ್ಲಿದೆ.
ಕರಾವಳಿಯ ಪ್ರೇಕ್ಷಣಿಯ ತಾಣಗಳಿವು:
*ಗೋಕರ್ಣ:
ಕಾರವಾರದಿಂದ ೫೬ಕಿ.ಮೀ ದೂರದಲ್ಲಿರುವ ಯಾತ್ರಾಸ್ಥಳ ಗೋಕರ್ಣ ಸಂಸ್ಕೃತ ಕಲಿಕೆಯ ಕೇಂದ್ರ. ಇದು ಮಹಾಬಲೇಶ್ವರ ದೇವಸ್ಥಾನವಾಗಿದ್ದು, ಶಿವನಿಗೆ ಮೀಸಲಾದ ಆತ್ಮಲಿಂಗ. ಶಿವನ ಹುಟ್ಟುಹಬ್ಬ ಫೆಬ್ರವರಿಯಂದು ಶಿವನ ರಥದ ಮೆರವಣಿಗೆ ನಡೆಯಲಿದೆ. ಇಲ್ಲಿನ ತಂಬ್ರಪರ್ಣಿ ತೀರ್ಥದಲ್ಲಿ ಮೃತರ ಅಂತ್ಯಸಂಸ್ಕಾರ ಮಾಡಿದಾಗ ಸದ್ಗತಿ ದೊರಕುತ್ತದೆ ಎನ್ನುವ ಅಪಾರವಾದ ನಂಬಿಕೆ ಹಿಂದುಗಳದು. ಸಮೀಪದಲ್ಲಿಯೇ ಓಂ ಬೀಚ್ ಇದೆ.
*ಉಡುಪಿ:
ಮಂಗಳೂರಿನಿಂದ ೫೮ ಕಿ.ಮೀ ದೂರದಲ್ಲಿರುವ ಉಡುಪಿಯು ಕರಾವಳಿಯ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ೧೪ನೇ ಶತಮಾನದಲ್ಲಿ ಆಚಾರ್ಯ ಮಧ್ವರು ದೇವಾಲಯ ಸ್ಥಾಪಿಸಿ, ಕೃಷ್ಣನ ಸೇವೆಗಾಗಿ ಎಂಟು ಮಠವನ್ನು ರಚಿಸಿದ್ದರು. ಎರಡು ವರ್ಷಗಳಿಗೊಮ್ಮೆ ಪರ್ಯಾಯ ಉತ್ಸವ ನಡೆಯುತ್ತದೆ. ದೇವಳದ ಸಮೀಪದಲ್ಲಿ ಕಡಿಯಾಳಿ ದುರ್ಗಾ ದೇವಸ್ಥಾನ, ಅಂಬಲ್ಪಾಡಿ ಶಕ್ತಿ ದೇವಾಲಯ, ರಾಘವೇಂದ್ರ ಮಠ, ವೆಂಕಟರಮಣ ಸ್ವಾಮಿ ದೇವಾಲಯವಿದೆ. ಹತ್ತಿರದಲ್ಲಿಯೇ ಮಲ್ಪೆ ಬಂದರು ಇದ್ದು, ವಡಬಾಂಡೇಶ್ವರ ಬಲರಾಮ ದೇವಾಲಯ ಹಾಗೂ ಬೀಚ್ ಹೊಂದಿದೆ.
*ತಂತ್ರಾಡಿ:
ಉಡುಪಿಯಿಂದ ೨೨ ಕಿ.ಮೀ ದೂರದಲ್ಲಿನ ತಂತ್ರಾಡಿ ಪವಿತ್ರ ಸ್ಥಳಗಳಲ್ಲಿ ಒಂದು. ರಾಮಣ್ಣ ಬಾಯರಿ ನಿರ್ಮಿಸಿದ ಬ್ರಹ್ಮಸ್ಥಾನ ದೇವಸ್ಥಾನವು ಪ್ರಸಿದ್ದಿಯಾಗಿದ್ದು, ಇದು ಅಷ್ಟಬಂಧ ಬ್ರಹ್ಮನಾಗಿದೆ.
*ಕಾರ್ಕಳ: 
ಮಂಗಳೂರಿನಿಂದ ೫೦ ಕಿ.ಮಿ ಮತ್ತು ಮೂಡಬಿದ್ರೆಯಿಂದ ೨೦ ಕಿ.ಮೀ ಉತ್ತರಕ್ಕಿರುವ ಕಾರ್ಕಳ ಜೈನ ಧರ್ಮದ ಪ್ರಮುಖ ಕೇಂದ್ರ. ಹಲವಾರು ದೇವಾಲಯಗಳಿದ್ದು, ಸಣ್ಣ ಬೆಟ್ಟದ ಮೇಲೆ ೧೭ ಮೀಟರ್ ಎತ್ತರದ ಬಾಹುಬಲಿ(ಗೋಮಟೇಶ್ವರ)ಯ ಪ್ರತಿಮೆ. ಪ್ರಮುಖ ಜೈನ ಬಸದಿಗಳಲ್ಲಿ ಚತುರ್ಮುಖ ಬಸದಿ (೧೫೮೭), ನೇಮಿನಾಥ ಬಸದಿ, ಅನಂತಪದ್ಮನಾಭ ದೇವಾಲಯ (೧೫೬೭) ಮತ್ತು ವೆಂಕಟರಮಣ ದೇವಸ್ಥಾನ (ಪಡು ತಿರುಪತಿ)ವಿದೆ.
*ವೇಣೂರು:
ಮಂಗಳೂರಿನಿಂದ ೫೦ ಕಿ.ಮೀ ಈಶಾನ್ಯಕ್ಕಿರುವ ವೇಣೂರಿನಲ್ಲಿ ಎಂಟು ಬಸದಿಗಳು ಹಾಗೂ ಮಹಾದೇವ ದೇವಸ್ಥಾನದ ಅವಶೇಷಗಳಿವೆ. ಶಾಂತಿನಾಥನ ೧೭ ಸಿ ಕಲ್ಲಿಬಸದಿಯಿದ್ದು, ಗೋಮಟೇಶ್ವರನ ಏಕಶಿಲಾ ಮೂರ್ತಿಯಿದೆ.
*ಮಲ್ಪೆ ಬೀಚ್:
ಮಂಗಳೂರಿನಿಂದ ೬೬ ಕಿ.ಮೀ ಉತ್ತರಕ್ಕಿರುವ ಮಲ್ಪೆ ಬೀಚ್ ಮಣಿಪಾಲ, ಉಡುಪಿಯ ಸಮೀಪದಲ್ಲಿದೆ. ಪ್ರವಾಸಿ ತಾಣವಾಗಿದ್ದು, ದೋಣಿಯಲ್ಲಿ ತೆರಳಿ ಸೈಂಟ್ ಮೇರಿಸ್ ದ್ವೀಪಕ್ಕೆ ಸಾಗಬಹುದು. ಕಂದುಬಣ್ಣದ ಅಗ್ನಿಶಿಲೆಯಿಂದಾವೃತವಾದ ದ್ವೀಪವು ಅತ್ಯದ್ಬುತ ಭೂವೈಜ್ಞಾನಿಕ ರಚನೆಯನ್ನೊಳಗೊಂಡಿದೆ.
*ಧರ್ಮಸ್ಥಳ:
ಮಂಗಳೂರಿನಿಂದ ೭೫ ಕಿ.ಮೀ ದೂರದಲ್ಲಿರುವ ಧರ್ಮಸ್ಥಳವು ಬೆಟ್ಟದ ನಡುವಿನ ಎತ್ತರದ ಸ್ಥಳದಲ್ಲಿದೆ. ದೇವಳದ ಅಕ್ಕಪಕ್ಕದಲ್ಲಿಯೂ ಗದ್ದೆಗಳು, ನೇತ್ರಾವತಿಯಿಂದಾವೃತವಾದ ಆಕರ್ಷಕ ತಾಣ. ಪ್ರೇಕ್ಷಣಿಯ ಸ್ಥಳವಾಗಿದ್ದು, ಬೆಟ್ಟದ ಮೇಲೆ ೧೯೭೩ ರಲ್ಲಿ ನಿರ್ಮಿಸಿದ ೧೪ ಮೀಟರ್‌ಎತ್ತರದ ಏಕಶಿಲೆಯ ಬಾಹುಬಲಿ ಮೂರ್ತಿಯಿದೆ. ದೇವಳದ ಅಧಿಕಾರದಲ್ಲಿ ಉಚಿತ ವಸತಿ ಮತ್ತು ಊಟವನ್ನು ಭಕ್ತಾದಿಗಳಿಗೆ ನೀಡಲಾಗುತ್ತದೆ. ಸಣ್ಣ ವಸ್ತು ಸಂಗ್ರಹಾಲಯ, ಮಂಜೂಷಾ ಮ್ಯೂಸಿಯಂ, ಗೋದಾಮು, ಎರಡು ದೇವಾಲಯದ ರಥಗಳಲ್ಲಿ ಫಲಕಗಳು, ಕಂಚಿನ ಶಿಲ್ಪಗಳು ಧಾರ್ಮಿಕ ವಸ್ತುಗಳನ್ನು ಕೆತ್ತಲಾಗಿದೆ.
*ಕೊಲ್ಲೂರು:
ಮಂಗಳೂರಿನಿಂದ ೧೪೭ ಕಿ.ಮೀ. ದೂರದಲ್ಲಿದೆ. ಮೂಕಾಂಬಿಕೆಯ ತಾಣವು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿದೆ. ಮೂಕಾಂಬಿಕೆಯು ಕೊಡಚಾದ್ರಿ ಬೆಟ್ಟದ ಮೇಲೆ ನೆಲೆಯಾಗಿದ್ದಾಳೆ. ದೇವತೆಯು ಶಿವ ಮತ್ತು ಶಕ್ತಿಯ ಅಂಶಗಳನ್ನೊಳಗೊಂಡ ಜ್ಯೋತಿರ್ಲಿಂಗವಾಗಿದ್ದು, ದಿನನಿತ್ಯ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದೆ.
*ಮೂಡಬಿದ್ರೆ:
ಮಂಗಳೂರಿನಿಂದ ೩೫ ಕಿ.ಮೀ ದೂರದಲ್ಲಿರುವ ಮೂಡಬಿದ್ರೆಯು ಜೈನ ಬಸದಿಯ ತಾಣ. ೧೮ ಜೈನ ದೇವಾಲಯಗಳಿದ್ದು, ೧೪೨೯ರಲ್ಲಿ ರಚಿತವಾದ ಚಂದ್ರನಾಥ ಬಸದಿಯು ೧೦೦೦ ಕಂಬಗಳನ್ನು ಹೊಂದಿರುವ ಪುರಾತನ ಬಸದಿಯಾಗಿದೆ. ಜೈನ್ ಮಾಥಾ ಎನ್ನುವ ಹಸ್ತಪ್ರತಿಗಳ ಪ್ರಮುಖ ಸಂಗ್ರಹವಿದೆ. ಇತರ ಪುಣ್ಯಕ್ಷೇತ್ರಗಳಾದ ಶಾಂತಿನಾಥ, ಸೆಟ್ಟರಾ, ದೆರಾಮಾ ಸೆಟ್ಟಿ ಬಸದಿ, ಗುರುಬಸದಿ, ಕೋಟೆ ಹಾಗೂ ವಿಕ್ರಮ ಸೆಟ್ಟಿ ಬಸದಿ ಮುಖ್ಯವಾಗಿದೆ.
*ಭಟ್ಕಳ: 
ಕಾರವಾರದಿಂದ ೧೩೫ಕಿ.ಮೀ ದೂರದ ಭಟ್ಕಳವು ೧೬ ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಮುಖ್ಯ ಬಂದರಾಗಿತ್ತು. ಪ್ರಾಚೀನ ಪಟ್ಟಣದ ವಿಜಯನಗರ ಶೈಲಿ ಮತ್ತು ಅನೇಕ ಆಸಕ್ತಿದಾಯಕ ಜೈನ ಸ್ಮಾರಕ ದೇವಸ್ಥಾನಗಳಿವೆ. ೧೭ ನೇ ಶತಮಾನದಲ್ಲಿ ಹಿಂದು ದೇವಾಲಯದ ವಿಜಯನಗರ ಶೈಲಿಯ ಪ್ರಾಣಿ ಕೆತ್ತನೆಗಳಾಗಿವೆ.
*ಹೊನ್ನಾವರ:
ಕಾರವಾರದಿಂದ ೯೦ಕಿ.ಮೀ ದೂರದಲ್ಲಿರುವ ಹೊನ್ನಾವರವು ಪೋರ್ಚುಗೀಸರ ಬಂದರಾಗಿತ್ತು. ಬಸವರಾಜ ದುರ್ಗಾ ದ್ವೀಪವು ಸಮೀಪದಲ್ಲಿದ್ದು, ಶರಾವತಿ ನದಿಯ ತಟದಲ್ಲಿದೆ.
*ಅಂಕೋಲಾ:
ಕಾರವಾರದಿಂದ ೩೭ಕಿ.ಮೀ ದಕ್ಷಿಣಕ್ಕೆ ಅಂಕೋಲಾವಿದ್ದು, ಸಣ್ಣ ನಗರವಾಗಿದೆ. ೧೫ನೇ ಶತಮಾನದ ರಾಜ ಸರ್ಪಮಲ್ಲಿಕಾ ಕೋಟೆ ಹಾಗೂ ಪ್ರಾಚೀನತೆ ಸಾರುವ ಶ್ರೀ ವೆಂಕಟರಮಣ ದೇವಾಲಯದ ಪಾಳುಬಿದ್ದ ಗೋಡೆಗಳ ಅವಶೇಷಗಳು ಲಭ್ಯವಿದೆ. ದೇವಳದ ಬಳಿ ರಾಮಾಯಣದ ದೃಶ್ಯಗಳನ್ನು ಕೆತ್ತಿದ ಎರಡು ದೈತ್ಯ ಮರದ ರಥಗಳಿವೆ.
*ಮುರ್ಡೆಶ್ವರ ದೇವಾಲಯ:
ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ದೇವಾಲಯವು ೨೪೯ ಅಡಿ ರಾಜಾ ಗೋಪುರ ಹೊಂದಿದೆ. ದೇವಾಲಯ ಸಂಕೀರ್ಣದಲ್ಲಿರುವ ಶಿವನ ಮೂರ್ತಿಯು ೧೨೩ ಅಡಿ ಎತ್ತರವನ್ನು ಹೊಂದಿದೆ. ದೇವಾಲಯಕ್ಕೆ ಸೇರ್ಪಡೆಯಾಗಿರುವ ರಾಜಗೋಪುರವನ್ನು ಉದ್ಯಮಿ ಆರ್.ಎನ್.ಶೆಟ್ಟಿ ಕೊಡುಗೆ ನೀಡಿದ್ದು, ಪ್ರಪಂಚದಲ್ಲಿಯೇ ಅತಿ ಎತ್ತರದ ಹಿಂದೂ ದೇವಸ್ಥಾನದ ಗೋಪುರದಲ್ಲೊಂದಾಗಿದೆ. ಗೋಪುರವು ಹಿಂದೂ ದೇವಾಲಯಗಳಿಗೆ ಸಂಬಂದಿಸಿದ ಅನನ್ಯ ಅಲಂಕೃತ ರಚನೆಯನ್ನೊಳಗೊಂಡಿದೆ. ರಾಜಗೋಪುರದ ನೆಲಅಂತಸ್ತು ಸೇರಿದಂತೆ ೨೧ ಮಹಡಿಯನ್ನು ಹೊಂದಿದೆ. ೧೦೫ ಅಡಿ ಉದ್ದ ಮತ್ತು ೫೧ಅಡಿ ಅಗಲವಿದೆ. ಗೋಪುರಕ್ಕೆ ಲಿಫ್ಟ್ ಸೌಲಭ್ಯವಿದ್ದು, ಪ್ರವಾಸಿಗರು ಮೇಲೆ ಹೋಗಿ ಅರಬ್ಬಿ ಸಮುದ್ರದ ವೈಮಾನಿಕ ನೋಟ ಹಾಗೂ ಶಿವನ ಪ್ರತಿಮೆ ವೀಕ್ಷಿಸಬಹುದಾಗಿದೆ. ಗೋಪುರದ ತಳದಲ್ಲಿ ಎರಡು ಆನೆಗಳ ಪ್ರತಿಮೆಗಳನ್ನು ಹೊಂದಿದೆ. ವಿಶ್ವದ ಅತಿ ಎತ್ತರದ ಶಿವನ ಮೂರ್ತಿಯಾಗಿದೆ.
ಕಣ್ಮನ ಸೆಳೆಯುವ ಕಡಲತೀರಗಳು: 
ರವೀಂದ್ರನಾಥ್ ಟಾಗೋರ್ ಕವಿತೆಗಳಲ್ಲಿ ಕಾರವಾರದ ಬೀಚ್‌ಗಳನ್ನು ವರ್ಣಿಸಿದ್ದು, ಬ್ಲೂ ಲಗೂನ್ ಬೀಚ್, ಲೇಡಿಸ್ ಬೀಚ್‌ಗಳು ಮುಖ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಓಂ ಬೀಚ್, ಮುರ್ಡೆಶ್ವರ ಬೀಚ್, ನೇತ್ರಾಣಿ ದ್ವೀಪ, ೧೬ ಮತ್ತು ೧೭ ನೇ ಶತಮಾನದ ಕೆಳದಿ ಅರಸರು ನಿರ್ಮಿಸಿದ ದ್ವೀಪ ಕೋಟೆ ಬಸವರಾಜ ದುರ್ಗಾಗಳು ಸೇರಿವೆ. ಅಲ್ಲದೇ ದೇವಘಡ ಮತ್ತು ಕುರ್ಮಾಘಡ ಎನ್ನುವ ಎರಡು ದ್ವೀಪಗಳು ಕಾರವಾರದ ಸಮೀಪವಿದೆ. ಸುಮಾರು ೩೨೦ಕಿ.ಮೀ ದೀರ್ಘ ಕರಾವಳಿಯನ್ನು ಹೊಂದಿದ್ದು, ಕರಾವಳಿಯ ಜಾನಪದ ಸೊಗಡು, ಅಪ್ಯಾಯಮಾನ ತಿನಿಸುಗಳ ಸ್ವಾಭಾವಿಕತೆ ಇತರೆಡೆಗಳಲ್ಲಿ ಸಿಗಲು ಸಾಧ್ಯವಿಲ್ಲ. ಪ್ರವಾಸಿಗರ ಆಕರ್ಷಣೀಯ ತಾಣವಾಗಿರುವ ಕರಾವಳಿ ಕಾರವಾರ, ಮಲ್ಪೆ, ಮರವಂತೆ, ಮುರ್ಡೆಶ್ವರ, ಭಟ್ಕಳ, ಉಳ್ಳಾಲ, ಕಾಪು, ಗೋಕರ್ಣ, ಪಣಂಬೂರು, ತಣ್ಣೀರುಬಾವಿ ಇತ್ಯಾದಿ ಬೀಚ್‌ಗಳು ಜನಾಕರ್ಷಣೀಯವಾಗಿದೆ.
ದಕ್ಷಿಣ ಕನ್ನಡದಲ್ಲೇನಿದೆ...?  
ದಕ್ಷಿಣ ಕನ್ನಡ ಜಿಲ್ಲೆಯು ಉತ್ತರಕ್ಕೆ ಉಡುಪಿ, ಈಶಾನ್ಯದಲ್ಲಿ ಚಿಕ್ಕಮಗಳೂರು,
ಪೂರ್ವಕ್ಕೆ ಹಾಸನ, ಆಗ್ನೇಯದಲ್ಲಿ ಕೊಡಗು, ದಕ್ಷಿಣದಲ್ಲಿ ಕಾಸರಗೋಡು ಕೇರಳವನ್ನು ಗಡಿಯನ್ನಾಗಿ ಹೊಂದಿದೆ. ಪಶ್ಚಿಮದಲ್ಲಿ ಅರಬ್ಬಿ ಸಮುದ್ರವನ್ನು ಹೊಂದಿದ್ದು, ಮಂಗಳೂರು ಜಿಲ್ಲಾ ಕೇಂದ್ರವಾಗಿದೆ. ಜಿಲ್ಲೆಯು ೪,೮೬೬ ಚದರ ಕಿ.ಮೀ೨ ವಿಸ್ತೀರ್ಣವನ್ನು ಹೊಂದಿದ್ದು, ಪ್ರತಿ ಚ.ಕಿ.ಮೀಗೆ ೩೯೦ ಜನಸಾಂದ್ರತೆಯಿದ್ದು, ೩೫೪ ಹಳ್ಳಿಗಳಿವೆ. ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ಎನ್ನುವ ಐದು ತಾಲೂಕುಗಳಿದ್ದು, ೮ ವಿಧಾನಸಭಾ ಕ್ಷೇತ್ರವನ್ನೊಳಗೊಂಡಿದೆ. ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮಂಗಳೂರು, ಮೂಡಬಿದ್ರೆ, ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಪುತ್ತೂರುಗಳೆಂದು ವಿಂಗಡಿಸಲಾಗಿದೆ. ಕನ್ನಡ, ಕೊಂಕಣಿ, ತುಳು, ಬ್ಯಾರಿ ಅಧಿಕೃತ ಭಾಷೆಯಾಗಿದ್ದು, ವಾಹನ ನೋಂದಣಿ ಸಂಖ್ಯೆಯು ಕೆ.ಎ-೨೧, ಕೆ.ಎ-೧೯ಆಗಿದೆ.
ದಕ್ಷಿಣ ಕನ್ನಡವು ೧೮೬೦ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಏಕೈಕ ಆಡಳಿತದಲ್ಲಿದ್ದು, ಬ್ರಿಟಿಷರು ದಕ್ಷಿಣ ಕೆನರಾ ಮತ್ತು ಉತ್ತರ ಕೆನರಾವೆಂದು ವಿಂಗಡಿಸಿ ಆಳ್ವಿಕೆ ನಡೆಸುತ್ತಿದ್ದರು. ೧೮೬೨ರಲ್ಲಿ ಬಾಂಬೆ ಪ್ರಾಂತ್ಯಕ್ಕೆ ಸೇರಲ್ಪಟ್ಟಿದ್ದು, ಕುಂದಾಪುರ ತಾಲೂಕು ಮೊದಲು ಉತ್ತರ ಕೆನರಾದಲ್ಲಿ ಸೇರ್ಪಡೆಯಾಗಿದ್ದು, ನಂತರ ದಕ್ಷಿಣ ಕೆನರಾಕ್ಕೆ ಸೇರಿತ್ತು. ೧೯೫೬ ರಲ್ಲಿ ಸಂಸ್ಥಾನದ ಪುನರ್ವಿಂಗಡಣೆ ಸಂದರ್ಭ ಕಾಸರಗೋಡು ಬೇರ್ಪಟ್ಟು ಕೇರಳ ರಾಜ್ಯಕ್ಕೆ ಹಾಗೂ ದಕ್ಷಿಣ ಕನ್ನಡವು ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು. ನಂತರ ಕರ್ನಾಟಕ ಸರಕಾರವು ಬೃಹತ್ ಆಗಿರುವ ದಕ್ಷಿಣ ಕನ್ನಡವನ್ನು ಪುನರ್‌ವಿಂಗಡನೆ ಮಾಡಿ, ೧೯೯೭ರ ಆಗಸ್ಟ್ ೧೫ ರಂದು ಉಡುಪಿ ಜಿಲ್ಲೆಯನ್ನಾಗಿ ವಿಂಗಡಿಸಿತ್ತು. ಮಂಗಳೂರು ಕೆಂಪು ಮಣ್ಣಿನ ಛಾವಣಿ ಹೆಂಚುಗಳು, ಗೇರು ಬೀಜದ ಉತ್ಪನ್ನಗಳು, ಬ್ಯಾಂಕಿಂಗ್, ಶಿಕ್ಷಣ ಮತ್ತು ಸಹಜವಾಗಿರುವ ವಿಲಕ್ಷಣ ತಿನಿಸುಗಳು ಪ್ರಸಿದ್ದವಾಗಿದೆ.
ಕೆನರಾ ಜಿಲ್ಲೆಯು ೧೯೪೭ರಲ್ಲಿ ದಕ್ಷಿಣ ಕನ್ನಡವಾಗಿ ಮರುನಾಮಕರಣವಾಗಿತ್ತು. ಧರ್ಮಕ್ಕನುಗುಣವಾಗಿ ಜಿಲ್ಲೆಯಲ್ಲಿ ಹಿಂದು ಶೇ.೬೮.೫೯; ಮುಸ್ಲಿಂ-ಶೇ.೨೨.೦೭; ಕ್ರೈಸ್ತ-ಶೇ.೮.೬೯; ಜೈನ-ಶೇ.೧ ಹಾಗೂ ಇತರರು ಶೇ.೦.೫೫ ರಷ್ಟಿದ್ದಾರೆ. ೨೦೧೧ರಲ್ಲಿ ಜಿಲ್ಲೆಯ ಜನಸಂಖ್ಯೆಯು ೨೦,೮೩,೬೨೫ ಹೊಂದಿದೆ. ಜನಸಂಖ್ಯಾ ಬೆಳವಣಿಗೆ ದರವು ಶೇ.೯.೮ ಆಗಿದ್ದು, ಪ್ರತಿ ೧೦೦೦ ಪುರುಷರಿಗೆ ೧೦೧೮ ಹೆಣ್ಣು ಒಂದು ಲಿಂಗ ಅನುಪಾತವಿದೆ. ಶೇ.೮೮.೬೨ ಸಾಕ್ಷರತಾ ದರ ಹೊಂದಿದೆ. ಜಿಲ್ಲೆಯಲ್ಲಿ ಸಾಗುವ ನೇತ್ರಾವತಿ, ಕುಮಾರಾಧಾರ, ಫಲ್ಗುಣಿ, ಶಾಂಭವಿ, ನಂದಿನಿ, ಪಯಸ್ವಿನಿ ನದಿಗಳು ಅರೇಬಿಯನ್ ಸಮುದ್ರವನ್ನು ಸೇರುತ್ತವೆ.
ವೇಣೂರು ಬಾಹುಬಲಿ, ಕದ್ರಿ ಮಂಜುನಾಥ, ಮೂಡಬಿದ್ರೆ ಜೈನ ಬಸದಿ, ಕೃಷ್ಣಾಪುರ ಮಠ, ಧರ್ಮಸ್ಥಳ ಮಂಜುನಾಥೇಶ್ವರ, ಕಟೀಲು ದುರ್ಗಾಪರಮೇಶ್ವರಿ, ಕುದ್ರೋಳಿ ಗೋಕರ್ಣನಾಥೇಶ್ವರ, ಮುಂಡ್ಕೂರು ದುರ್ಗಾಪರಮೇಶ್ವರಿ, ಕಾರಿಂಜೇಶ್ವರ ದೇವಸ್ಥಾನ, ಉಳ್ಳಾಲ ಬೀಚ್, ಕುಕ್ಕೆ ಸುಬ್ರಹ್ಮಣ್ಯ, ಮೂಲ್ಕಿ ದುರ್ಗಾಪರಮೇಶ್ವರಿ, ಸಂತ ಅಲೋಶಿಯಸ್ ಚಾಪೆಲ್, ಮಿಲಾಗ್ರಿಸ್ ಚರ್ಚ್ ಮಂಗಳೂರು, ಸಯ್ಯದ್ ಮದನಿ ಮಸೀದಿ ಮತ್ತು ದರ್ಗಾ ಉಳ್ಳಾಲ, ಸುಲ್ತಾನ್ ಬತ್ತೇರಿ ಮಂಗಳೂರು, ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ಕೇಪು, ಅನಂತಾಡಿ, ಬಲ್ನಾಡಿನ ಉಳ್ಳಾಲ್ತಿ ದೇವಳ, ಉಳ್ಳಾಲ ಸೋಮೇಶ್ವರ ದೇವಸ್ಥಾನ, ಸಮ್ಮರ್ ಸ್ಯಾಂಡ್ ಉಳ್ಳಾಲ ಬೀಚ್, ಪಿಲಿಕುಳ ನಿಸರ್ಗಾಲಯ, ಕುಡುಪು ದೇವಸ್ಥಾನಗಳಿವೆ. ಜಿಲ್ಲೆಯಲ್ಲಿ ಎಂಸಿಎಫ್, ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್, ಎಂಆರ್‌ಪಿಎಲ್, ಬಿಎಎಸ್‌ಎಫ್, ಭಾರತಿ ಶಿಪ್‌ಯಾರ್ಡ್, ಕ್ಯಾಂಪ್ಕೋ ಇತ್ಯಾದಿ ಕೈಗಾರಿಕೆಗಳು ಪ್ರಮುಖವಾಗಿದೆ.
ಅನೇಕ ಶಿಕ್ಷಣ ಸಂಸ್ಥೆ-ಸಂಶೋಧನಾ ಕೇಂದ್ರಗಳಿವೆ. ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ, ಎಸ್‌ಡಿಎಂ ಸಮೂಹ ಶಿಕ್ಷಣ ಸಂಸ್ಥೆಗಳು, ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳು, ಶ್ರೀದೇವಿ ಶಿಕ್ಷಣ ಸಂಸ್ಥೆ, ಎ.ಜೆ.ಶೆಟ್ಟಿ ದಂತ ವೈದ್ಯಕೀಯ ವಿದ್ಯಾಲಯ, ಕೆ.ಎಸ್.ಹೆಗ್ಡೆ, ಯೆನಪೋಯ, ಕೆಂಎಂಸಿ ವೈದ್ಯಕೀಯ ಸಂಸ್ಥೆಗಳು ಸೇರಿದಂತೆ, ಫಿಶರಿಸ್ ಕಾಲೇಜುಗಳಿಂದಾವೃತವಾಗಿರುವ ದ.ಕ.ಜಿಲ್ಲೆಯು ಶಿಕ್ಷಣ ಕಾಶಿಯೆಂದು ಪ್ರಸಿದ್ದಿ ಪಡೆದಿದೆ.
ಉಡುಪಿ ಜಿಲ್ಲೆ ಹೆಮ್ಮೆಯ ತಾಣಗಳಿವು: 
೧೯೯೭ರ ನಂತರ ವಿಭಜನೆಗೊಂಡ ಉಡುಪಿ ಜಿಲ್ಲೆಯು ಕುಂದಾಪುರ, ಕಾರ್ಕಳ, ಉಡುಪಿ ತಾಲೂಕುಗಳನ್ನೊಳಗೊಂಡು ಒಟ್ಟು ೩,೮೮೦ ಕಿಮಿ ೨ (೧,೫೦೦ ಚ. ಮೈಲಿ)
ವಿಸ್ತೀರ್ಣವನ್ನು ಹೊಂದಿದೆ. ಕಾರ್ಕಳ, ಕಾಪು, ಉಡುಪಿ, ಕುಂದಾಪುರ, ಬೈಂದೂರು ಎನ್ನುವ ಐದು ವಿಧಾನಸಭಾ ಕ್ಷೇತ್ರವನ್ನು ಹೊಂದಿದೆ. ೨೦೦೧ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯು ೧೧,೧೨,೨೪೩ಆಗಿದ್ದು, ತುಳು, ಕನ್ನಡ, ಕೊಂಕಣಿ, ಕುಂದಗನ್ನಡ ಅಧಿಕೃತ ಭಾಷೆಯಾಗಿದೆ. ೯೮ ಕಿ.ಮೀ ಕರಾವಳಿ ಹೊಂದಿರುವ ಉಡುಪಿ ಜಿಲ್ಲೆಯು ೮೬.೨೫ಸಾಕ್ಷರತೆ ಪ್ರಮಾಣ ಹೊಂದಿದೆ. ಕೆ.ಎ.೨೦ ಇಲ್ಲಿನ ವಾಹನ ನೋಂದಾವಣೆ ಸಂಖ್ಯೆಯಾಗಿದ್ದು, ಉತ್ತರದಲ್ಲಿ ಉತ್ತರ ಕನ್ನಡ, ದಕ್ಷಿಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿದೆ. ಈಶಾನ್ಯ ಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಗಡಿಯಿದ್ದು, ಪೂರ್ವಕ್ಕೆ ಚಿಕ್ಕಮಗಳೂರು ಜಿಲ್ಲೆ ಸುತ್ತುವರಿದಿದೆ.
ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರ ಹೊಂದಿರುವ ಜಿಲ್ಲೆಯು ಅಷ್ಟಮಠಗಳಿಂದ ಪ್ರಸಿದ್ದಿ ಪಡೆದಿದೆ. ಉಡುಪಿಯು ಪ್ರಾಚೀನ ಶಿಕ್ಷಣ ಕೇಂದ್ರವೂ ಆಗಿದ್ದು, ಯಕ್ಷಗಾನ, ನಾಟಕ, ಜಾನಪದ ನೃತ್ಯ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿದೆ.
ಸಣ್ಣ ಸಣ್ಣ ಬೆಟ್ಟಗಳು, ತೆಂಗು, ಅಡಿಕೆ, ಗೇರು ತೋಟಗಳು ವಿಸ್ತಾರವಾಗಿದ್ದು, ಪ್ರಸ್ತುತ ರಬ್ಬರ್ ತೋಟಗಳನ್ನು ಕಾಣಬಹುದು. ಕೃಷಿ ಭೂಮಿಗಳಲ್ಲಿ ತೆನೆಭರಿತ ಭತ್ತದ ಫಸಲುಗಳು ಹೃದಯಂಗಮ ನೋಟವಾಗಿದೆ. ಹೆಬ್ರಿಯ ಸಮೀಪದಲ್ಲಿ ಸೋಮೇಶ್ವರ ಅಭಯಾರಣ್ಯ, ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯವಿದೆ. ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳು ಮಲೆನಾಡಿಗೆ ಸರಿಸಾಟಿಯಾಗಿ ಅರಣ್ಯದಿಂದಾವೃತವಾಗಿದ್ದು, ಹಸಿರು ಗಿಡಮರಗಳು ಸುಂದರ ಗಾಳಿ ಪಸರಿಸುತ್ತವೆ. ಅಪರೂಪದ ಗಿಡಮರಗಳು, ಪ್ರಾಣಿಪಕ್ಷಿಗಳು ಹುಲಿ, ಕಾಳಿಂಗ ಸರ್ಪ, ಜಿಂಕೆ, ಕಾಡೆಮ್ಮೆ ಇತರ ಪ್ರಾಣಿಗಳ ವಿಹಂಗಮ ನೋಟದ ಸವಿ ಸವಿಯಬಹುದು. ಜಿಲ್ಲೆಯು ಉಷ್ಣವಲಯದ ಹವಾಗುಣವನ್ನು ವಿಶೇಷವಾಗಿದೆ. ಉಡುಪಿಯು ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತಮ ಸಾಕ್ಷರತೆ ದರ ಹೊಂದಿದ್ದು, ರಾಜ್ಯದ ಶಿಕ್ಷಣ ಮಂಡಳಿಯು ನಡೆಸುವ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ಫಲಿತಾಂಶದಲ್ಲಿ ಉಡುಪಿಯೇ ಅಗ್ರಸ್ಥಾನದಲ್ಲಿರುವುದು ಇದಕ್ಕೆ ಸಾಕ್ಷಿ. ಜಿಲ್ಲೆಯು ಅಂತರಾಷ್ಟ್ರೀಯವಾಗಿ ಪ್ರಸಿದ್ದಿ ಪಡೆದ ಶೈಕ್ಷಣಿಕ ಸಂಸ್ಥೆಗಳ ತವರೂರಾಗಿದ್ದು, ಉನ್ನತ ಶಿಕ್ಷಣದ ಮಣಿಪಾಲ್ ಅಕಾಡೆಮಿ ಶಾಲಾ, ಕಾಲೇಜುಗಳು ಮತ್ತು ನಿಟ್ಟೆ ಶಿಕ್ಷಣ ಸಮೂಹ ಸಂಸ್ಥೆಗಳು ಸೇರಿದಂತೆ ಕೃಷಿ, ಕಾನೂನು, ತೋಟಗಾರಿಕೆ ಕಾಲೇಜುಗಳನ್ನೊಳಗೊಂಡಿದೆ. ಜಿಲ್ಲೆಯಲ್ಲಿ ಅಕ್ಕಿ, ತೆಂಗಿನಕಾಯಿ, ಅಡಿಕೆ ತೋಟಗಳನ್ನು ಕಾಣಬಹುದಾಗಿದ್ದು, ಗೋಡಂಬಿಯು ವಾಣಿಜ್ಯ ವ್ಯವಹಾರವಾಗಿದೆ. ಹಾಲು ಖರೀದಿ ಮತ್ತು ಸಂಸ್ಕರಣಾ ಘಟಕ ಮಣಿಪಾಲದಲ್ಲಿದೆ.
ಜಿಲ್ಲೆಯಲ್ಲಿ ಒಳನಾಡು ಮೀನುಗಾರಿಕೆ ಮತ್ತು ಆಳಸಮುದ್ರದ ಮೀನುಗಾರಿಕೆಗೆ ಮಲ್ಪೆ ಮತ್ತು ಗಂಗೊಳ್ಳಿ ಕೇಂದ್ರವಾಗಿದೆ. ನಂದಿಕೂರಿನಲ್ಲಿ ಯುಪಿಸಿಎಲ್ ಪವರ್ ಪ್ರಾಜೆಕ್ಟ್ ಇದೆ.
ಸಾಹಿತ್ಯ ಕೃಷಿಗೆ ಪೂರಕ: 
ಜಿಲ್ಲೆಯಲ್ಲಿ ಅನೇಕರು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕೋಟ ಶಿವರಾಮ ಕಾರಂತರು ಕುಂದಾಪುರ ತಾಲೂಕಿನ ಕೋಟದಲ್ಲಿ ವಾಸವಾಗಿದ್ದರು.
ಕವಿ ಗೋಪಾಲಕೃಷ್ಣ ಅಡಿಗ, ಪ್ರೊ.ಎ.ವಿ.ನಾವಡ, ಖ್ಯಾತ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ, ಸಾಹಿತ್ಯ ವಿಮರ್ಶಕ ಜನಾರ್ದನ ಭಟ್, ಕವಿ ಜಯರಾಮ್ ಭಟ್ ಕೊಡುಗೆ ನೀಡಿದ್ದಾರೆ. ಉದ್ಯಮಿಗಳಾದ ಟಿಎಂಎ ಪೈ, ಟಿ.ಎ.ಪೈ, ಡಾ.ಬಿ.ಆರ್.ಶೆಟ್ಟಿ, ರಾಜ್ ಶೆಟ್ಟಿ ಹೆಸರು ಮಾಡಿದ್ದಾರೆ. ಕಲೆ  ಮತ್ತು ಸಂಸ್ಕೃತಿಗೆ ಪ್ರಸಿದ್ದವಾಗಿದ್ದು, ಕೋಣಗಳ ಓಟ ವಂಡಾರು ಕಂಬಳ, ಯಡ್ತಾಡಿ, ತೊನ್ನಾಸೆ, ಕಾರ್ಕಳ ತಾಲೂಕಿನ ಲವ-ಕುಶ ಜೋಡು ಕಂಬಳಗಳು ಪ್ರಸಿದ್ದ. ಬಡಗು ಶೈಲಿಯ ಯಕ್ಷಗಾನ ಕೇಂದ್ರವೂ ಉಡುಪಿಯ ಇಂದ್ರಾಳಿಯಲ್ಲಿದೆ. ನಾಗರಾಧನೆಗೆ ಪ್ರಸಿದ್ದವಾಗಿರುವ ಕರಾವಳಿಯಲ್ಲಿ ನಾಗನಿಗೆ ವಿಶೇಷ ಗೌರವ, ಪೂಜ್ಯತಾ ಭಾವನೆಯಿದೆ. ಭೂತಕೋಲ, ಆಟಿಕಳೆಂಜ, ಕಾಡ್ಯನಾಟ ಎನ್ನುವ ನಂಬಿಕೆಯೊಂದಿಗೆ ಪ್ರಕೃತಿ ಪೂಜೆಯನ್ನು ನಡೆಸಲಾಗುತ್ತದೆ. ಕೋಳಿ ಅಂಕಗಳು ಜನರು ಮನಸ್ಸಿನ ಬೇಸರ ಕಳೆಯಲು ಸಹಕಾರಿ. ಯಕ್ಷಗಾನ ಕ್ಷೇತ್ರಕ್ಕೆ ಅನೇಕ ಕಲಾವಿದರು ಕೊಡುಗೆ ನೀಡಿದ್ದು, ದಿವಂಗತ ಕಾಳಿಂಗ ನಾವುಡ, ದಿ.ನಾರಣಪ್ಪ ಉಪ್ಪೂರು, ವಂಡಾರು ಬಸವ ಇತರರು ಪ್ರಖ್ಯಾತರಾಗಿದ್ದಾರೆ.
ನೋಡಬೇಕಾದ ಸ್ಥಳಗಳು: 
ಸೇಂಟ್ ಮೇರೀಸ್ ದ್ವೀಪ, ಕಾಪು ದೀಪಸ್ತಂಭ, ಮರವಂತೆ ಬೀಚ್, ಒತ್ತಿನೆಣೆ ಬೀಚ್‌ಗಳಿವೆ. ಧಾರ್ಮಿಕ ಸ್ಥಳಗಳಾದ ಕೊಲ್ಲೂರು, ಕಾರ್ಕಳ ಗೋಮಟೇಶ್ವರ, ಆನೆಗುಡ್ಡೆ ಮಹಾಗಣಪತಿ, ಹಟ್ಟಿಯಂಗಡಿ ಗಣಪತಿ, ಮಂದಾರ್ತಿ ದುರ್ಗಾಪರಮೇಶ್ವರಿ, ಉಡುಪಿಯಿಂದ ೨೫ ಕಿ.ಮೀ.ದೂರದಲ್ಲಿ ಅತ್ತೂರ್ ಚರ್ಚ್, ಕಾಪು ಮಾರಿಯಮ್ಮ ದೇವಸ್ಥಾನ, ೧೫ ಕಿ.ಮೀ.ದೂರದಲ್ಲಿ ಬಾರ್ಕೂರು ಸಂಸ್ಥಾನದ ಅವಶೇಷಗಳು, ಸಾಲಿಗ್ರಾಮ ದೇವಸ್ಥಾನ, ಪೆರ್ಣಂಕಿಲ ಗಣಪತಿ, ಪೆರ್ಡೂರು ಅನಂತಪದ್ಮನಾಭ, ಹಿರಿಯಡ್ಕ ವೀರಭದ್ರ, ಶಂಕರನಾರಾಯಣ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ, ಸೌಕೂರು ದುರ್ಗಾಪರಮೇಶ್ವರಿ ಇತ್ಯಾದಿ ದೇವಸ್ಥಾನಗಳಿವೆ.
ಉಡುಪಿಯಿಂದ ೪೨ ಕಿ.ಮೀ ದೂರದಲ್ಲಿ ಹೆಬ್ರಿಯ ಸಮೀಪ ಕೂಡ್ಲುತೀರ್ಥ, ಸೀತಾ ಫಾಲ್ಸ್, ೫೪ ಕಿ.ಮೀ.ದೂರದಲ್ಲಿ ಬರ್ಕಣ ಫಾಲ್ಸ್, ೫೦ ಕಿ.ಮೀ ದೂರದಲ್ಲಿ ಬೆಲ್ಕಲ್ ತೀರ್ಥ ಫಾಲ್ಸ್, ಕೊಲ್ಲೂರು ಸಮೀಪದ ಅರಿಸಿನ ಗುಂಡಿ, ಹೆಬ್ರಿ ಸಮೀಪದ ಜೋಮ್ಲು ತೀರ್ಥ, ಕೋಸಳ್ಳಿ ವಾಟರ್ ಫಾಲ್ಸ್‌ಗಳನ್ನು ಹೊಂದಿದೆ.
ಕುದ್ರುಗಳೆಂದು ಕರೆಯಲ್ಪಡುವ ದ್ವೀಪಗಳು:
ಸೌಪರ್ಣಿಕ, ಸ್ವರ್ಣ, ಚಕ್ರ, ಸೀತಾ, ವರಾಹಿ ಮತ್ತು ಕುಬ್ಜಾ ನದಿಗಳು ಸುಂದರ ಹಾಗೂ ಸಾಮಾನ್ಯವಾದ ನದಿ ದ್ವೀಪಗಳನ್ನು ಸೃಷ್ಟಿಸಿದ್ದು, ಇವುಗಳನ್ನು ಕುದ್ರುಗಳೆಂದು ಕರೆಯಲಾಗುತ್ತದೆ. ಅನೇಕ ಸ್ಥಳಗಳಿಗೆ ಕುಡಿಯುವ ನೀರು, ವಿದ್ಯುತ್ ಮತ್ತು ಸಾರಿಗೆ ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಉದಾಹರಣೆಗೆ ಸುಳ್ ಕುದ್ರು, ಕನ್ನಡ ಕುದ್ರು, ಬಬ್ಬು ಕುದ್ರು, ಕಟ್ಟೆ ಕುದ್ರು, ಬೆಣ್ಣೆ ಕುದ್ರು, ಕುಕ್ಕುದೆ ಕುದ್ರು, ಉಪ್ಪಿನ ಕುದ್ರು, ತಿಮ್ಮಣ್ಣ ಕುದ್ರು, ಪಡು ಕುದ್ರು, ಹಟ್ಟಿಕುದ್ರು, ಬಾಳಕುದ್ರು, ಬವಳಿ ಕುದ್ರು, ಶೆಟ್ಟಿ ಕುದ್ರು, ಜಾರುಕುದ್ರು ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತಿವೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯು ಯಕ್ಷಗಾನಕ್ಕೆ ಪ್ರಸಿದ್ದಿಯನ್ನು ಪಡೆದಿದ್ದು, ತೆಂಕು-ಬಡಗುಗಳೆನ್ನುವ ಎರಡು ವಿಧದೊಂದಿಗೆ ಹಲವಾರು ದೇವಳದ ನಾಮಾಂಕಿತದೊಂದಿಗೆ ಕನ್ನಡದ ಸೊಬಗನ್ನು, ಪುರಾಣದ ತತ್ವವನ್ನು ಸಾರುತ್ತಿವೆ. ಕರಾವಳಿಯಲ್ಲಿ ಅನೇಕ ಪ್ರೇಕ್ಷಣಿಯ ಸ್ಥಳಗಳಿದ್ದುಕೆಲವನ್ನು ಪರಿಚಯಿಸಲಾಗಿದೆ. ಒಮ್ಮೆ ಸ್ಥಳಗಳಿಗೆ ಭೇಟಿ ನೀಡಿದಾಗ ಸ್ಥಳದ ಮಹತ್ವಿಕೆಯನ್ನು ತಿಳಿದು ಸ್ವ-ಅನುಭವ ಪಡೆಯಬಹುದು..ಏನಂತಿರಾ.

No comments:

Post a Comment