Monday, 31 December 2012

ಯುವಜಾಗೃತಿ ಸಮ್ಮೇಳನದಲ್ಲಿ ಗಣ್ಯ ವ್ಯಕ್ತಿಗಳಿಂದ ಯುವಜನತೆಗೆ ಕರೆ..
ದೇಶದ ಉಳಿವಿಗೆ ವಿವೇಕಾನಂದರ ಆದರ್ಶ ಪಾಲನೆ ಅಗತ್ಯ:
ಮಂಗಳೂರಿನ ಸಂಘನಿಕೇತನದಲ್ಲಿ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಹಾಗೂ ಬೇಲೂರು ಮಠದ ಆಶ್ರಯದಲ್ಲಿ ಎರಡು ದಿನಗಳು ನಡೆದ ಅಖಿಲ ಕರ್ನಾಟಕ ಯುವ ಜಾಗೃತಿ ಸಮ್ಮೇಳನಕ್ಕೆ ರಾಜ್ಯದ ಅನೇಕ ಕಾಲೇಜುಗಳಿಂದ ಯುವ ಸಮೂಹವೇ ಹರಿದುಬಂದಿತ್ತು. ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮದಿನಾಚರಣೆಯ ಅಂಗವಾಗಿ ಆಚರಿಸುತ್ತಿದ್ದ ಈ ಕಾರ್ಯಕ್ರಮದಲ್ಲಿ ವಿವೇಕಾನಂದರ ಆದರ್ಶಗಳಿಂದ ಪ್ರೇರಿತರಾದ ಯುವಸಮೂಹ ಎನ್ನುವುದು ಸ್ಪಷ್ಟವಾಗಿದೆ. ವಿವೇಕಾನಂದರು ಭೌತಿಕವಾಗಿ ನಮ್ಮೊಂದಿಗೆ ಇರದಿದ್ದರೂ ಅವರ ನುಡಿಗಳನ್ನು ಹಿರಿಯರ ಬಾಯಿಯಿಂದ ಕೇಳಿ ಅನುಭವಿಸಲು ಯುವಸಮೂಹ ಬಂದಿರುವಾಗ ಅವರ ಜೀವಿತದಲ್ಲಿ ದೇಶದಲ್ಲಿ-ಅಮೇರಿಕಾದ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ  ಜನಸಾಗರವೇ ನೆರೆದಿರಬೇಕು ಎನ್ನುವುದು ನನ್ನ ಭಾವನೆ.
ಸುಂದರ ಕಾರ್ಯಕ್ರಮವನ್ನು ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಉದ್ಘಾಟಿಸಿ, ಭ್ರಷ್ಟಾಚಾರ ಮತ್ತು ದುರ್ವ್ಯಸನ ಈ ದೇಶಕ್ಕಂಟಿದ ದೊಡ್ಡ ಪಿಡುಗು. ಅದನ್ನು ತೊಡೆದು ಹಾಕುವಲ್ಲಿ ಯುವಜನತೆ ಕಟಿಬದ್ಧವಾಗಬೇಕು. ಆಧ್ಯಾತ್ಮಿಕತೆ ಮತ್ತು ರಾಷ್ಟ್ರ ನಿಷ್ಠೆ ಬೆಳೆಸಿಕೊಂಡಾಗ ಮಾತ್ರ ಸಶಕ್ತ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಕರೆ ನೀಡಿದರು.
ದೇಶದಲ್ಲಿ ವ್ಯಾಪಿಸುತ್ತಿರುವ ಭ್ರಷ್ಟಾಚಾರ ಒಂದೆಡೆಯಾದರೆ ಚಾರಿತ್ರ್ಯಪತನ ಇನ್ನೊಂದು ರೀತಿಯಲ್ಲಿ ಆಗುತ್ತಿದೆ. ಇದರ ತಡೆ ಯುವ ಶಕ್ತಿಯಿಂದ ಮಾತ್ರ ಸಾಧ್ಯವಾಗಿದ್ದರೂ ದೇಶದಲ್ಲಿ ಯುವಜನತೆ ನಿದ್ರಿಸಿದ ಸ್ಥಿತಿಯಲ್ಲಿದ್ದಾರೆ. ವಿವೇಕಾನಂದರ ಸಂದೇಶ ಸಾರುವುದರೊಂದಿಗೆ ಯುವಕರನ್ನು ಬಡಿದೆಬ್ಬಿಸುವ ಕೆಲಸವಾಗಬೇಕು. ಸ್ವಚ್ಛ ನೀರಿದ್ದರೂ ಒಡಲಲ್ಲಿ ಬಚ್ಚಿಟ್ಟುಕೊಂಡಿರುವ ಬೇಸಿಗೆಯ ನದಿಯಂತೆ ಯುವಕರ ಮನಸ್ಸು. ಆ ಸುಪ್ತ ಮನಸ್ಸನ್ನು ಜಾಗೃತಗೊಳಿಸಿ ದೇಶದ ಶಕ್ತಿಯನ್ನಾಗಿ ಪರಿವರ್ತಿಸುವ ಕೆಲಸವಾಗಬೇಕು. ರಾಷ್ಟ್ರ ನಿಷ್ಠೆ ಚಾರಿತ್ರ್ಯಶುದ್ಧಿಗೆ ವಿವೇಕಾನಂದರು ನಮಗೆ ಆದರ್ಶ. ಯುವಜನತೆಯ ಮೇಲೆ ನಂಬಿಕೆಯಿದೆ. ಮನಸ್ಸು ಮಾಡಿದರೆ ಯುವ ಪಡೆ ದೇಶದ ಚಿತ್ರಣ ಬದಲಿಸಬಲ್ಲುದು. ಪ್ರತಿಯೊಬ್ಬ ಯುವಕರಲ್ಲೂ ವಿವೇಕಾನಂದ, ನ್ಯೂಟನ್, ಗಾಂಧೀಜಿಯವರಂತಹ ಶ್ರೇಷ್ಠರ ಅಂತಃಶಕ್ತಿ ಅಡಗಿದೆ. ಪುರಾಣದಲ್ಲಿ ಜಾಂಬವಂತ ಹನುಮಂತನ ಶಕ್ತಿ ಎಚ್ಚರಿಸಿದಂತೆ ಯುವಕರನ್ನು ಜಾಗೃತಗೊಳಿಸಬೇಕು. ಕೆಲವೇ ದಿನ ಬದುಕಿದರೂ ಸಾರ್ಥಕ ಬದುಕು ನಮ್ಮದಾಗಬೇಕು. ಸಮಾಜದ ದುಃಖಿತರ ಕಣ್ಣೀರೊರೆಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ತೊಡಗಿಕೊಳ್ಳಬೇಕು. ಆಗ ಮಾತ್ರ ಬದುಕಿಗೆ ನಿಜವಾದ ಅರ್ಥ ಬರಲು ಸಾಧ್ಯ ಎಂದರು.  (ಸ್ವಾಮೀಜಿ ಹೇಳಿದ್ದರೂ ಯುವಜನತೆ ಕೆಟ್ಟ ಸಂಸ್ಕೃತಿಗಳ ವಿರುದ್ದ ಕಿಡಿಕಾರಿ ಎಚ್ಚೆತ್ತುಕೊಂಡು ಪ್ರತಿಭಟನೆಯಲ್ಲಿ ತೊಡಗಿದರೆ ರಾಜಕೀಯ ಶಕ್ತಿಗಳು ಅವರನ್ನು ತಡೆಯುವ ಕಾರ್ಯದಲ್ಲಿ ನಿಗೂಢವಾಗಿ ಕಾರ್ಯ ನಿರ್ವಹಿಸುತ್ತವೆ. ಉದಾ: ಸೌಜನ್ಯ ಪ್ರಕರಣ, ದೆಹಲಿಯ ಬಲತ್ಕಾರ ಒಂದೆ ಎರಡೆ...ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ ಅಲ್ಲವೇ?)
ನಂಬಿಕೆ ಇಲ್ಲದಿದ್ದರೆ ಸಮಾಜ ಉಳಿಯಲ್ಲ : ನ್ಯಾ.ಎನ್.ಸಂತೋಷ್ ಹೆಗ್ಡೆ.
ಮೊದಲು ಮಾನವರಾಗಿ ಬದುಕುವುದನ್ನು ಕಲಿಯಬೇಕು. ನಂಬಿಕೆ, ಮಾನವೀಯತೆಯೇ ಇಲ್ಲದಿದ್ದರೆ ಬದುಕಿಗೆ ಅರ್ಥವಿಲ್ಲ. ಈ ಸಮಾಜವೂ ಉಳಿಯಲ್ಲ. ದುರಾಸೆಯಿಂದ ಸಂಪತ್ತಿನ ಕ್ರೋಢೀಕರಣ ಮಾಡುವುದು, ಮೋಸ, ವಂಚನೆ ಇತ್ಯಾದಿಗಳಿಂದ ಈ ಸಮಾಜ ಮುಕ್ತವಾಗಬೇಕು. ಸ್ವಾಮಿ ವಿವೇಕಾನಂದರ ಸಂದೇಶ ಸಾರುವ ಕೆಲಸ ಅಗತ್ಯವಾಗಿ ಆಗಬೇಕು. ನೈತಿಕ ಶಿಕ್ಷಣದ ಮೂಲಕ ಸಮಾಜ ಪರಿವರ್ತನೆಯಾಗಬೇಕು. ತಾನು ಕಳೆದ ೬ ವರ್ಷಗಳಲ್ಲಿ ೫೨೦ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ತುಂಬುವ ಕೆಲಸ ಮಾಡಿದ್ದೇನೆ. ಯುವ ಜನಾಂಗ ಎಚ್ಚೆತ್ತುಕೊಂಡಲ್ಲಿ ಮಾತ್ರ ಭ್ರಷ್ಟಾಚಾರದಂತಹ ಅನಿಷ್ಠಗಳನ್ನು ದೂರ ಮಾಡಲು ಸಾಧ್ಯ.
`ಜನ ಸೇವೆಗಾಗಿ ಜನರಿಂದ ಆಯ್ಕೆಯಾಗುತ್ತಿದ್ದೇವೆ. ಗೆದ್ದ ನಂತರ ನಾವು ಅವರ ಸೇವಕರು, ಮಾಲೀಕರಲ್ಲ' ಇಂತಹ ಮನಸ್ಥಿತಿ ಉಳ್ಳವರನ್ನು ಚುನಾವಣೆಗಳಲ್ಲಿ ಪ್ರತಿನಿಧಿಗಳಾಗಿ ಆರಿಸೋಣ. ಗೆದ್ದ ನಂತರ ಕಾಲು ಕಸದಂತೆ ಕಾಣುವವರನ್ನಲ್ಲ....ಇದು ಹೆಗ್ಡೆಯವರು ಯುವಜನತೆಗೆ ನೀಡಿದ ಕರೆ. ಭ್ರಷ್ಟಾಚಾರವಲ್ಲದೆ ರಾಜಕೀಯ, ಅಭಿವೃದ್ಧಿ, ಹಗರಣಗಳು, ನ್ಯಾಯಾಂಗ ವ್ಯವಸ್ಥೆ ಬಲಗೊಳಿಸುವಿಕೆ, ಸಾಮಾನ್ಯ ನಾಗರಿಕರ ಹತಾಶೆ, ಯುವಕರ ಹೊಣೆಗಾರಿಕೆ, ಪ್ರಜಾಪ್ರಭುತ್ವದ ನೈಜ ಅರ್ಥ ಕುರಿತು ಯುವಕರ ಪ್ರಶ್ನೆಗಳಿದ್ದದ್ದು ವಿಶೇಷ. ನ್ಯಾಯದಾನ ಪದ್ಧತಿಯಲ್ಲಿ ವಿಳಂಬ ಹಾಗೂ ಗಂಭೀರ ಅಪರಾಧಗಳಿದ್ದಾಗ್ಯೂ ಸಾಮಾನ್ಯ ಶಿಕ್ಷೆಗೆ ಆರೋಪಿಗಳು ಗುರಿಯಾಗುತ್ತಿರುವ ಆತಂಕಕ್ಕೆ ಸಂತೋಷ್ ಹೆಗ್ಡೆಯವರೂ ದನಿಗೂಡಿಸಿ ದೇಶದಲ್ಲಿ ನ್ಯಾಯಾಲಯಗಳ ಸಂಖ್ಯೆ ಹೆಚ್ಚಿಸಬೇಕು, ಕಾನೂನುಗಳನ್ನು ಬಲಗೊಳಿಸಬೇಕು, ಕಾನೂನು ಕ್ಷೇತ್ರಕ್ಕೆ ಸರ್ಕಾರ ಹೆಚ್ಚು ಹಣ ವೆಚ್ಚ ಮಾಡುವುದರೊಂದಿಗೆ, ಅಗತ್ಯ ಕಾನೂನು ತಿದ್ದುಪಡಿಗಳನ್ನು ತರಲು ಸರ್ಕಾರ ಮುಂದಾಗಬೇಕೆನ್ನುವುದು ಅವರ ಆಗ್ರಹವಾಗಿತ್ತು. ವಿವಿಧ ಭ್ರಷ್ಟಾಚಾರ, ಹಗರಣಗಳಲ್ಲಿ ವರ್ಷಾನುಗಟ್ಟಲೆ ವಿಚಾರಣೆ ನಡೆದರೂ ಶಿಕ್ಷೆಯಾಗದ, ಶಿಕ್ಷೆಯನ್ನು ತಗ್ಗಿಸಿಕೊಂಡ, ತಪ್ಪು ಮಾಡಿಯೂ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಂಡಿದ್ದಾರೆ. ನ್ಯಾಯಾಂಗದ ಕುರಿತಾಗಿರುವ ಜನರಲ್ಲಿನ ಅಪನಂಬಿಕೆಯನ್ನು ಹೋಗಲಾಡಿಸಲು ಈ ತುರ್ತು ಕ್ರಮಗಳು ಅನಿವಾರ್ಯವಾಗಿದೆ. ಪ್ರತಿ ರಾಜಕೀಯ ಪಕ್ಷಕ್ಕೂ ಅನ್ವಯವಾಗುವಂತೆ ಅವುಗಳ ನಡವಳಿಕೆಗಳ ಮೇಲೆ ಕಾವಲು ನಾಯಿಯಂತೆ ನಿಗಾ ಇರಿಸುವ ಶಾಶ್ವತ ಸಮಿತಿಯ ಅಗತ್ಯವಿದೆ. ಅಣ್ಣಾ ಟೀಂನ ಪ್ರಾಥಮಿಕ ಆಶಯವೂ ಇದೇ ಆಗಿತ್ತು. ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತರಲು ಪ್ರಬಲ ಲೋಕಪಾಲ್ ಮಸೂದೆ ಜಾರಿಗೊಳಿಸುವ ಉದ್ದೇಶದಿಂದ ಕಾರ್ಯಾರಂಭಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಈ ಮಸೂದೆ ಅನುಷ್ಠಾನದಲ್ಲಿ ತಳೆದ ಅಸಡ್ಡೆ ಕ್ರಮೇಣ ಅರವಿಂದ ಕೇಜ್ರಿವಾಲ್ ಅವರು ಸಂಸತ್ತಿನಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸದೆ ಈ ಕಾರ್ಯ ಅಸಾಧ್ಯವೆಂದು ಪಕ್ಷ ಕಟ್ಟುವ ನಿರ್ಧಾರ ಕೈಗೊಳ್ಳುವಂತಾಯಿತು. ಆದರೆ ಪಕ್ಷ ಸ್ಥಾಪನೆಯ ಮೂಲಕ ಹೋರಾಟದಲ್ಲಿ ತನಗೆ ನಂಬಿಕೆ ಇಲ್ಲ. ಚುನಾವಣಾ ವೆಚ್ಚ ತಗ್ಗಿಸುವ, ಪೊಲೀಸ್ ವ್ಯವಸ್ಥೆ ಸುಧಾರಿಸುವ, ಪ್ರತಿ ಕ್ಷೇತ್ರದ ಸುಧಾರಣೆಯ ಅಗತ್ಯವಿದೆ. ಆದರೆ ಇದು ರಾಜಕೀಯೇತರ ಸಮಿತಿಯಿಂದ ಮಾತ್ರ ಸಾಧ್ಯ.
ಭ್ರಷ್ಟಾಚಾರ ನಿಯಂತ್ರಣ ಹೇಗೆ?
ದೇಶದಲ್ಲೆಡೆ ಭ್ರಷ್ಟಾಚಾರವೇ ತುಂಬಿ ತುಳುಕುತ್ತಿದೆ. ನಾವು ಹೇಗೆ ಅದನ್ನು ನಿಯಂತ್ರಿಸಬಹುದು ಎಂದಾಗ ಹೆಗ್ಡೆ, ೧೦೦೦ಮೈಲುಗಳ ಪಯಣವೂ ಕೂಡ ಮೊದಲ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ಅದೇ ರೀತಿ ಯುವಜನತೆ ನಾನೆಂದೂ ಲಂಚ ಸ್ವೀಕರಿಸಲ್ಲ, ಯಾರಿಗೂ ಲಂಚ ಕೊಡುವುದಿಲ್ಲ ಎಂದು ಪ್ರತಿe ಮಾಡಿ, ಅದರಂತೆ ನಡೆದಾಗ ಭ್ರಷ್ಟಾಚಾರ ಹತೋಟಿಗೆ ತರಬಹುದು. ಪೂರ್ಣ ನಿರ್ಮೂಲನೆ ಅಸಾಧ್ಯ. ಇದು ನಾಗರಿಕತೆಯ ಉಗಮದಿಂದಲೇ ಪ್ರಾರಂಭಗೊಂಡಿದೆ. ದೇಶದಲ್ಲಿ ಈವರೆಗೆ ನಡೆದ ಸಾಲು ಸಾಲು ಲಕ್ಷ, ಕೋಟಿಗಳ ಹಗರಣಗಳೆಲ್ಲ ಯುವಜನತೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಸ್ವಾಮಿ ವಿವೇಕಾನಂದರು ಯುವಕರು ಏಳಿ ಎದ್ದೇಳಿ ಎಂದ ಮಾತಿನಂತೆ ಎಚ್ಚೆತ್ತುಕೊಳ್ಳಬೇಕು. ಬದ್ಧತೆ, ತ್ಯಾಗ, ಮಾನವೀಯತೆ ನಮ್ಮ ಗುಣಗಳಾಗಬೇಕು.
ಜ್ವಲಂತ ಆದರ್ಶಮಯ  ಜೀವನ- ಇಂದಿನ ಅವಶ್ಯಕತೆ: ಮಾತಾಜಿ ವಿವೇಕಮಯಿ
ಸ್ವಾಮಿ ವಿವೇಕಾನಂದರು ಬಹುಮುಖ ವ್ಯಕ್ತಿಯಾದರೂ ಪರಿಪೂರ್ಣರು. ಮಹಿಮಾನ್ವಿತ ವ್ಯಕ್ತಿಯಾಗಿದ್ದರೂ ಸರಳತೆ ಪ್ರತಿಪಾದಿಸಿದವರು. ಭವ್ಯ ಜೀವನವೆಂದರೆ ಗಗನಚುಂಬಿ ಕಟ್ಟಡಗಳು, ರಸ್ತೆ, ಐಶಾರಾಮಿ ವಸ್ತುಗಳಲ್ಲ. eನಪೂರ್ಣ, ಅಂತರಂಗದ ಸೌಂದರ್ಯ ಜೀವನದ ಭವ್ಯತೆ ಎಂದು ಭಾರತೀಯರು ಸಾರಿದ್ದಾರೆ. ಭಾರತದಲ್ಲಿ ಆದರ್ಶಗಳಿಗೆ ಕೊರತೆಯಿಲ್ಲ. ಆದರ್ಶಗಳು ಬದುಕನ್ನು ಔನ್ನತ್ಯಕ್ಕೆ ಕೊಂಡೊಯ್ಯುತ್ತವೆ. ದೌರ್ಬಲ್ಯಗಳನ್ನು ಬದಿಗೊತ್ತಿ ಧೀರರಾಗಬೇಕೆಂದರು. ವಿವೇಕರದು ತ್ರಿಕರಣ ವ್ಯಕ್ತಿತ್ವ. ಮಾತು, ಕೃತಿ, ಪಾಂಡಿತ್ಯ , ವೈಚಾರಿಕ ಪ್ರಬುದ್ಧತೆ ಅಪಾರ. ಗುರು ರಾಮಕೃಷ್ಣರೇ ಅವರಿಗೆ ಮನಸೋತಿದ್ದರು. ಯಾವುದೇ ದೃಷ್ಟಿಕೋನದಿಂದ ಅಳೆದರೂ ಅವರು ಪರಿಪೂರ್ಣರು. ಇಂತಹ ಜ್ವಲಂತ ಆದರ್ಶ ವ್ಯಕ್ತಿ. ಅವರ ಆದರ್ಶ ಪಾಲನೆಯಿಂದ ನಮ್ಮ ಜೀವನ ಔನ್ನತ್ಯಕ್ಕೇರಲು ಸಹಕಾರಿ. ಆ ಮೂಲಕ ನಮ್ಮಲ್ಲಡಗಿರುವ ಪರಿಪೂರ್ಣ ವ್ಯಕ್ತಿತ್ವ ಅಭಿವ್ಯಕ್ತಿಗೊಳ್ಳುತ್ತದೆ. ಜಗತ್ತು ಭಾರತಡೆಗೆ ನೋಡುವಾಗ ಪ್ರಸ್ತುತ ವಿವೇಕಾನಂದರ ಆದರ್ಶ ಜೀವನ ಬೇಕಾಗಿದೆ. ಭಾರತದಲ್ಲಿ ಆದರ್ಶಗಳಿಗೆ ಕೊರತೆ ಇಲ್ಲದಿದ್ದರೂ ಪಾಲಿಸುವವರು ವಿರಳವಾಗಿದ್ದಾರೆ. ವಿವೇಕಾನಂದರ ಋಷಿಪರಂಪರೆಯ ಜೀವನ ಜಾಗೃತಗೊಳ್ಳಬೇಕು. ಆಗ ಮಾತ್ರ ಭಾರತೀಯರ ಆದರ್ಶ ಜೀವನ ಸಾಕಾರಗೊಳ್ಳುವುದು.
ದೇಹಪ್ರೇಮ ಬೇಡ; ದೇಶಪ್ರೇಮವಿರಲಿ: ಸೂಲಿಬೆಲೆ
ವೈಯುಕ್ತಿಕ ಜೀವನ, ಕುಟುಂಬ ಮತ್ತು ಸಮಾಜ ಹಾಗೂ ರಾಷ್ಟ್ರದ ಸಮಸ್ಯೆಗಳಿಂದ ನಾವಿಂದು ಬಲಳುತ್ತಿದ್ದೇವೆ. ನೈತಿಕ ಅಧಃಪತನದತ್ತ ಭಾರತ ಸಾಗುತ್ತಿದೆ. ಈ ಎಲ್ಲಾ ಸಮಸ್ಯೆಗೆ ನಾವೇ ಕಾರಣರಾಗಿದ್ದೇವೆ. ಪರಿಹಾರವು ನಮ್ಮಿಂದಲೇ ಆಗಬೇಕಿದೆ. ಪರಿವರ್ತನಶೀಲ ಸಮಾಜದಲ್ಲಿ ಯುವಜನರ ಜವಾಬ್ದಾರಿ' ಮುಖ್ಯವಾಗಿದೆ. ಯೌವನದಲ್ಲಿ ಬೇಕಾಗಿರುವುದು ದೇಹಪ್ರೇಮವಲ್ಲ ,ದೇಶಪ್ರೇಮ. ಆಕರ್ಷಣೆ ದೇಹ ಸೌಂದರ್ಯಕ್ಕಲ್ಲ , ಆಂತರಿಕ ಸೌಂದರ್ಯದಲ್ಲಿದೆ. ಜ್ಞಾನಾರ್ಜನೆಯ ಹಂತದಲ್ಲಿ  ಖರ್ಚು, ಮೋಜು ಸಲ್ಲದು. ಅದು ಜ್ಞಾನಾರ್ಜನೆಯ ಬಳಿಕವೇ. ಯುವಜನತೆ ದೇಶದ ಬಹುದೊಡ್ಡ ಆಸ್ತಿ. ಅವರೇ ಭವಿಷ್ಯದ ನಿರ್ಣಾಯಕರಾಗಿದ್ದಾರೆ. ಆದರೆ ದೇಶದಲ್ಲಿ ಜಾತೀಯತೆ ಬಹುದೊಡ್ಡ ಸಮಸ್ಯೆಯಾಗಿದೆ. ವಿದೇಶಿಗರು ಕೂಡಾ ಜಾತೀಯತೆಯಲ್ಲಿ ನರಳಾಡುವ ಭಾರತವನ್ನು ಬೊಟ್ಟು ಮಾಡುತ್ತಿದ್ದಾರೆ. ಇದರಿಂದ ಸಮಾಜ ಹಾಗೂ ರಾಷ್ಟ್ರದ ಭದ್ರತೆಗೆ ಭಾರೀ ಅಪಾಯವಿದೆ ಎನ್ನುವುದನ್ನು ಮನಗಾಣಬೇಕಿದೆ. ವಿವೇಕಾನಂದರು ಭಾರತದ ಬಡಜನರ ಪ್ರತಿನಿಧಿಯಾಗಿ ವಿದೇಶದಲ್ಲಿ ಸಂಚರಿಸಿದರು. ಪಶ್ಚಿಮದ ಸುಖದ ಸುಪ್ಪತ್ತಿಗೆಗೆ, ಭೋಗದ ಜೀವನಕ್ಕೆ ಒಂದಿಷ್ಟು ಮೈಯೊಡ್ಡಲಿಲ್ಲ.
ಜಗತ್ತು ಸಂಕಟದಲ್ಲಿ ತೊಳಲಾಡುತ್ತಿದೆ. ಭಾರತ ಅದಕ್ಕೆ ಮಾರ್ಗದರ್ಶಿಯಾಗಬೇಕಿದೆ. ಅದಕ್ಕಾಗಿ ಬಲಿಷ್ಠ ರಾಷ್ಟ್ರ ನಿರ್ಮಾಣವಾಗಬೇಕು. ಭಾರತಕ್ಕೀಗ ಪರ್ವಕಾಲ, ಈಗಲೇ ಜಾಗೃತಿಯ ಕಹಳೆ ಊದಬೇಕು. ತಮ್ಮೆಲ್ಲಾ ಶಕ್ತಿಗಳನ್ನು ಏಕಮುಖವಾಗಿ ಪ್ರವಹಿಸಿ ಸಮಾಜ, ರಾಷ್ಟ್ರಜೀವನದಲ್ಲಿ ಮುನ್ನಡೆದಾಗ ಪರಿವರ್ತನೆಯಾಗುತ್ತದೆ. ಸಮಾಜದ ಕೆಲಸದಲ್ಲಿ ಅಡೆತಡೆಯುಂಟಾಗುವ ದುಃಖವನ್ನು ಮರೆತುಬಿಡಬೇಕು. ಅದಕ್ಕೆ ಸ್ವಾಮಿ ವಿವೇಕಾನಂದರು ಸ್ಪೂರ್ತಿ.
ಮಾತೃಭಾವದ ಜಾಗೃತಿ ಮೂಡಬೇಕು: ಪ್ರಕಾಶ್ ಮಲ್ಪೆ
ಜಗತ್ತಿನಲ್ಲಿ ಎಲ್ಲಾ ಮತ ಧರ್ಮದವರಿಗೂ ಶಾಂತಿ ದೊರೆಯುವ ಏಕೈಕ ರಾಷ್ಟ್ರ ಭಾರತ. ಭಾರತ ನೆಲದ ಪಾವಿತ್ರ್ಯತೆಗೂ ವಿದೇಶದಲ್ಲಿನ ಪಾವಿತ್ರ್ಯತೆಗೂ ವ್ಯತ್ಯಾಸವಿದೆ. ಆದ್ದರಿಂದಲೇ ಇಲ್ಲಿ ಎಲ್ಲಾ ಸುಖಶಾಂತಿ ಸಮೃದ್ಧಿಗಳೆಲ್ಲವೂ ಸಾಧ್ಯ. ಪ್ರತಿಯೊರ್ವರ ಹೃದಯದಲ್ಲೂ ಮಾತೃಭಾವದ ಜಾಗೃತಿಯಿದೆ. ಭಾರತ ಹೊರತುಪಡಿಸಿ ಉಳಿದೆಲ್ಲಾ ರಾಷ್ಟ್ರಗಳಿಗೆ ಭೂಮಿ ಜಡವಸ್ತು ಮಾತ್ರ, ಆದರೆ ಭಾರತದಲ್ಲಿ ಪವಿತ್ರಭೂಮಿ, ಪುಣ್ಯಭೂಮಿ. ಉಳಿದ ರಾಷ್ಟ್ರಗಳಲ್ಲಿ ದೇವದೂತರ ಆಗಮನವಾದರೆ ಭಾರತ ಮಾತ್ರ ಸಾಕ್ಷಾತ್ ಭಗವಂತನ ಲೀಲೆಯಿಂದಲೇ ಪುಣ್ಯಪ್ರದವಾಗಿದೆ. ಆದ್ದರಿಂದ ಇಲ್ಲಿನ ಪ್ರತಿಯೊಂದು ವಸ್ತುಗಳಲ್ಲಿ ಜೀವ ಚೈತನ್ಯವಿದೆ. ಭಾರತದಲ್ಲಿ ಹೆತ್ತ ತಾಯಿ, ಹೊತ್ತ ನೆಲ, ನದಿ, ವೃಕ್ಷ, ಗೋವು ಎಲ್ಲವೂ  ಪೂಜ್ಯನೀಯ. ಇದುವೇ ಸ್ವಾಮಿ ವಿವೇಕಾನಂದರು ಕಂಡ ಭಾರತ. ಜಗತ್ತಿನೆದುರು ಇದೇ ಭಾರತವನ್ನು ಅವರು ಪ್ರತಿಪಾದಿಸಿದರು. ಅಮೇರಿಕಾದವರಿಗೆ ನೀರು ಕೇವಲ ವೈಜ್ಞಾನಿಕ ಪರಿಭಾಷೆಗಷ್ಟೆ ಸೀಮಿತವಾಗಿದೆ. ಆದರೆ ಇಲ್ಲಿನ ಪ್ರತಿಯೊಬ್ಬರಲ್ಲೂ ಸಂಸ್ಕಾರ ಪವಿತ್ರತೆ ಇದೆ. ಆದುದರಿಂದಲೇ ಅದು ಪೂಜ್ಯನೀಯ, ಜೀವಜಲ. ಉಳಿದೆಲ್ಲಾ ನಾಗರಿಕತೆಗಳಲ್ಲಿ ಒಂದೋ ಎರಡು ನದಿಗಳಿಗೆ ಸೀಮಿತವಾದರೆ ಹಿಂದೂ ನಾಗರೀಕತೆ ಒಡಲಲ್ಲಿ ನೂರಾರು ನದಿಗಳಿವೆ. ಗಂಗಾ, ಸಿಂಧು, ಯುಮುನಾ, ಸರಸ್ವತಿ, ಗಂಡಕೀ, ಬೇಡ್ತಿ,ಕಾಳಿ, ಶರಾವತಿ, ತಪತಿ .... ಹೀಗೆ ನೂರಾರು ಹೆಸರನ್ನು ಪಟಪಟನೇ ಉದಾಹರಿಸುತ್ತಾ ಕೊನೆಗೆ ಕಾವೇರಿ ಎಂದಾಗ ನಿಶ್ಯಬ್ಧವಾಗಿ ಆಲಿಸುತ್ತಿದ್ದ ಸಾವಿರಾರು ಯುವಸಮೂಹ ಕೇಳುವಿಕೆಯ ಎಚ್ಚರದೊಂದಿಗೆ ಚಪ್ಪಾಳೆಯ ಧ್ವನಿಗೂಡಿಸಿದರು. ಇಲ್ಲಿನ ಮಾತೃಸಂಸ್ಕೃತಿಯ ಜೀವನ ಎಳೆಯ ಮಗುವಿನಿಂದಲೇ ಸಂಸ್ಕಾರ ತುಂಬಿಕೊಟ್ಟಿದೆ. ಸಾಮಾನ್ಯ ವ್ಯಕ್ತಿಯೋರ್ವನಿಂದ ಹಿಡಿದು ಹುತಾತ್ಮ ಆದರ್ಶ ಪುರುಷಗಳೆಲ್ಲರಲ್ಲೂ ರಾಷ್ಟ್ರಭಾವದ ಜಾಗೃತಿಯಿದೆ. ಸ್ವಾತಂತ್ರ್ಯಹೋರಾಟಕ್ಕೆ ಹುತಾತ್ಮದ ಕಿಚ್ಚನ್ನು ಹಚ್ಚಿದ  ಮದನಲಾಲ್ ದೀಂಗ್ರ, ಭಗತ್‌ಸಿಂಗ್, ಬಿಸ್ಮಿಲ್‌ಖಾನ್‌ನಿಂದ ಹಿಡಿದು ಕಾರ್ಗಿಲ್ ಕದನದ ಕಲಿಗಳಾದ ಹುತಾತ್ಮ ಪದ್ಮಾಪಾಣಿ ಆಚಾರ್ಯ, ರಾಜೇಶ್ ಅಧಿಕಾರಿ ಮೊದಲಾದವರು ಮಾತೃಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಇಂತಹ ಆದರ್ಶಗಳ ನಡುವೆಯೇ ರಾಷ್ಟ್ರಜೀವನದ ದುರಂತ, ವಿಭಜನೆಯ ದುರಂತಗಳನ್ನು ಮೆಲುಕು ಹಾಕಿದರು. ಮತೀಯ ವಿಷಭೀಜದೊಂದಿಗೆ ರಾಷ್ಟ್ರಗೀತೆ ವಂದೇಮಾತರಂನ ಕನಸಿಗೆ ವಿರೋಧ -ವಿಭಜನೆ, ರಾಷ್ಟ್ರ-ರಾಷ್ಟ್ರಧ್ವಜದ ವಿಭಜನೆಗಳು ಮಹಾನ್ ನಾಯಕರ ಕಣ್ಮುಂದೆಯೇ ಘಟಿಸಿ ಹೋಯಿತು. ಸಮಾಜದಲ್ಲಿಂದು ಆದರ್ಶಗಳು ಮರೆಯಾಗುತ್ತಿವೆ.  ಭಾರತಮಾತೆ ದುರ್ಗೆಯಾಗಿ ಅವತರಿಸುವ ಮೂಲಕ ಇವೆಲ್ಲಾ ಅಪಸವ್ಯ,ಅಪಶುತಿಗಳು  ನಾಶವಾಗಬೇಕಿದೆ. ಸರಸ್ವತಿಯಾಗುವ ಮೂಲಕ ಅಜ್ಞಾನದ ಅಂದಕಾರ ತೊಲಗಿಸಬೇಕು.
ಸ್ವಶಿಸ್ತು ಅಳವಡಿಸಿಕೊಳ್ಳಬೇಕು: ರಘೋತ್ತಮರಾವ್
ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದೆಡೆಗೆ ಮುಖ ಮಾಡುತ್ತಿರುವಾಗ ಭಾರತ ಮಾತ್ರ ಪಾಶ್ಚಿಮಾತ್ಯಕರಣದೆಡೆಗೆ ಜಾರುತ್ತಿದೆ. ಭಾರತದ ಮಹಿಳೆಯೋರ್ವಳಿಗೆ ಅಮೇರಿಕಾ ಶ್ರೀಮಂತನೋರ್ವನ ಮದುವೆಯಾಗಿ ಬದುಕು ಕಟ್ಟಿಕೊಳ್ಳುವ ಆಸೆ. ಕೊನೆಗೂ ಧನಿಕನೋರ್ವನೊಂದಿಗೆ ಮದುವೆ. ದಂಪತಿಗಳಿಗೆ ಭಾರತವನ್ನೊಮ್ಮೆ ಸುತ್ತಾಡುವ ಆಸೆ. ಆದರೆ ಪತ್ನಿಗೆ ಭಾರತದ ಬಗ್ಗೆ ಕೀಳರಿಮೆ, ಮಾತು ಮಾತಿಗೂ ಪತಿಯೊಂದಿಗೆ `ಡರ್ಟಿ ಇಂಡಿಯಾ'ಎಂದೇ ಮೂದಲಿಕೆ. ಒಮ್ಮೆ ಸುತ್ತಾಡುವಾಗ ಅದೇನೋ ವೃದ್ಧನೋರ್ವ ಈತನಿಗೆ ಸಹಾಯ ಮಾಡಿದಾಗ ಪ್ರತಿಯಾಗಿ ನೋಟಿನ ಕಂತೆಗಳನ್ನು ಕೈಗಿತ್ತಾಗ ಭಾರತದಲ್ಲಿ ಪರೋಪಕಾರ, ನೆರವಿನ ಬಗ್ಗೆ ತಿಳಿಸಿ ನಯವಾಗಿ ತಿರಸ್ಕರಿಸಿದ ಹಿರಿಜೀವದ  ಕುರಿತು ಅಮೇರಿಕಾದ ಪತಿ ಆಕೆಗೆ ಭಾರತದ ಕುರಿತಂತೆ ನನಗೆ ಗೌರವ ಹೆಚ್ಚುತ್ತಿದೆ ಎಂದಾಗ ಮಹಿಳೆ ಪೆಚ್ಚುಮೋರೆ ಹಾಕಿದ್ದಳು. ಭಾರತದಲ್ಲಿ ಶ್ರೀಮಂತಿಕೆ, ಬುದ್ಧಿವಂತಿಕೆ, ಸಂಸ್ಕಾರಗಳಿಗೇನೂ ಕೊರತೆ ಇಲ್ಲ. ವಿದೇಶಿಯರಿಗೂ ಕೂಡಾ ಭಾರತೀಯರ ಬಗ್ಗೆ ಗೌರವವಿದೆ. ಆದರೆ ಭಾರತೀಯರು ಯೋಗ್ಯ ಮಾರ್ಗದಲ್ಲಿ ಮುನ್ನಡೆಯುವ ಬದಲು ನಿರ್ಲಕ್ಷ್ಯ, ಸೋಮಾರಿತನದಿಂದ ಹಾದಿ ತಪ್ಪುತಿದ್ದಾರೆ. ಪಾಶ್ಚಾತ್ಯ ರಾಷ್ಟ್ರಗಳು ಅಭಿವೃದ್ಧಿಯೆಡೆಗೆ ಸಾಗುತ್ತಿರುವಾಗ ನಾವು ಯೋಗ್ಯಮಾರ್ಗದಲ್ಲಿ ಅವರೊಂದಿಗೆ ಹೆಜ್ಜೆಯಿಡಬೇಕು. ಜೊತೆಗೆ ಮುನ್ನಗುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬುದ್ಧಿವಂತಿಕೆಯ ಸದುಪಯೋಗವಾಗಬೇಕು. ಆಗಲೇ ಭಾರತದ ಪುನರುತ್ಥಾನ ಸಾಧ್ಯ. ಜೀವನದಲ್ಲಿ ಸ್ವಯಂಶಿಸ್ತು, ಹಿರಿಯರ ಬಗ್ಗೆ ಗೌರವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಪಾಶ್ಚಿಮಾತ್ಯ ಜೀವನಶೈಲಿಯ ಅನುಕರಣೆ ದೂರಮಾಡಿ ನಮ್ಮ ಜೀವನ ಸಂಸ್ಕೃತಿಗಳನ್ನು ಬೆಳೆಸಿಕೊಳ್ಳಬೇಕು.
ಬಾಕ್ಸ್:
 ದೇಶದ ನುಂಗಣ್ಣರು...ಅಧೋಗತಿಯೂ...
*೬೦ ವರ್ಷಗಳಿಂದ ದೇಶದಲ್ಲಿ ೯ ಸಾವಿರ ಕೋ, ಕೋಟಿ ರೂ. ಖರ್ಚಾಗಿದೆ. ಆದರೆ ಇದು ಎಲ್ಲಿ ಖರ್ಚಾಗಿದೆ ಎಂಬುದನ್ನು ಹುಡುಕಬೇಕಷ್ಟೆ. ಅಧಿಕಾರದಲ್ಲಿರುವವರು, ಅವರನ್ನು ಅಧಿಕಾರಕ್ಕೆ ತಂದವರು ಹಣ ನುಂಗುತ್ತಿದ್ದಾರೆ.
*ನಮ್ಮ ಜನಪ್ರತಿನಿಧಿಗಳು ನಮ್ಮ ಸೇವಕರು, ಸವಾರಿ ಮಾಡುವವರಲ್ಲ. ಗೆದ್ದ ನಂತರ ಅವರೇನು ಮಾಡುತ್ತಾರೆಂಬ ಮಾಹಿತಿ ಇಲ್ಲ
* ಸಂಸತ್ತಿನಲ್ಲಿ ೫೪೬ ಸದಸ್ಯರ ಪೈಕಿ ೧೭೦ ಮಂದಿ ೫ ವರ್ಷದಲ್ಲಿ ಚರ್ಚೆಯಲ್ಲಿ ಭಾಗವಹಿಸಿದರು. ಉಳಿದವರೇನು ಮಾಡ್ತಿದಾರೆ ಎಂಬ ಮಾಹಿತಿ ಬೇಕು.
*೫ ಕೋ.ರೂ.ಗಿಂತಲೂ ಹೆಚ್ಚು ಹಣ ದಿನದ ಅಧಿವೇಶನಕ್ಕೆ ಖರ್ಚಾಗುತ್ತಿದೆ. ಆದರೆ  ಮಸೂದೆಗಳು ಅಂಗೀಕಾರಗೊಳ್ಳುತ್ತಿಲ್ಲ. ಬಹಿಷ್ಕಾರ ಮಾತ್ರ ನಡೆಯುತ್ತಿದೆ. ಪ್ರತಿನಿಧಿಗಳ ಸಂಭಾವನೆ ಸಿಕ್ಕೇ ಸಿಗುತ್ತದೆ.

ಬಾಕ್ಸ್:
೨೩ ಜಿಲ್ಲೆಗಳಿಂದ ೧,೮೦೦ ವಿದ್ಯಾರ್ಥಿಗಳು



No comments:

Post a Comment