Saturday, 1 December 2012


ಗೋ ಮಾತೆ ರಕ್ಷಣೆಯ ಅಳಿಲು ಸೇವೆ ನಮ್ಮದಾಗಲಿ
 ಹಿಂದುಗಳ ಹಬ್ಬ ದೀಪಾವಳಿಯಲ್ಲಿ ಹಣತೆಯ ಬೆಳಕಿನೊಂದಿಗೆ ಪಟಾಕಿಗಳ ಸದ್ದು ಕಳೆದ ಮರುದಿನವೇ ತಾಯಿಯ ಸ್ಥಾನದಲ್ಲಿರುವ ಗೋಮಾತೆಯನ್ನು ಪೂಜಿಸುವ ದಿನವೇ ಗೋಪೂಜೆ. ಗೋವನ್ನು ಸ್ವಚ್ಛಗೊಳಿಸಿ ಹೂವು-ಹಾರಗಳಿಂದ ಶೃಂಗರಿಸಿ, ಶ್ರದ್ಧೆ-ಭಕ್ತಿಯಿಂದ ಆರಾಧಿಸಿ ಸಂತಸಪಡುವ ದಿನ.
ಕೃಷಿ ಭೂಮಿಯಿರುವ ಮನೆಯಲ್ಲಿ ಗೋವುಗಳಿಗೆ ವಿಶೇಷ ಪೂಜೆ ಮಾಡುವುದರೊಂದಿಗೆ ಅವುಗಳಿಗೆ ಅರಶಿನ ಎಲೆಯಲ್ಲಿ ಮಾಡಿದ ಕಡಬು ನೀಡುವುದು ಕ್ರಮ. ಅಲ್ಲದೇ ಗದ್ದೆಯಿಂದ ತೆಗೆದ ಫಸಲನ್ನು ಗೋವುಗಳಿಗೆ ನೀಡುವ ಪುಣ್ಯದಿನ. ಗೋವು ಅದನ್ನು ತಿಂದು ಸಂತೋಷದಿಂದ ಅಂಬಾ ಎಂದು ಕೂಗಿದಾಗಲೇ ಕುಟುಂಬದ ಸದಸ್ಯರೆಲ್ಲರ ಮನಸ್ಸಿಗೆ ನೆಮ್ಮದಿಯ ಭಾವ.
ನಮ್ಮ ಜೀವನದಲ್ಲಿ ಬೇರೆ ಬೇರೆ ರೂಪದಲ್ಲಿ ನಮಗೆ ಸಹಕಾರಿಯಾಗುವ ಗೋವು ಅಳಿವಿನಂಚಿನಲ್ಲಿರುವುದು ದುಃಖಕರ. ಇದೇ ರೀತಿ ಕೃಷಿ ಭೂಮಿ-ಗೋವುಗಳು ಕ್ಷೀಣಿಸುತ್ತಿದ್ದರೆ ಮುಂದೊಂದು ದಿನ ಗೋವನ್ನು ಮೃಗಾಲಯದಲ್ಲಿ ನೋಡಲು ಮಾತ್ರ ಸಾಧ್ಯ!
ಪುರಾಣದಲ್ಲಿ ಗೋವು
ಗೋವುಗಳನ್ನು ರಕ್ಷಣೆ ಮಾಡಿದ ಶ್ರೀಕೃಷ್ಣ ಗೋ-ಸಂರಕ್ಷಕ ಎನ್ನುವ ಬಿರುದು ಪಡೆದಿದ್ದಾನೆ. ನಮ್ಮ ಸಂಸ್ಕೃತಿಯಲ್ಲಿ ಗಾ,ಗೀ,ಗೋ (ಗಾ-ಗಾಯತ್ರಿ ಮಂತ್ರ, ಗೀ-ಗೀತೆ, ಗೋ-ಗೋವು) ಎನ್ನುವ ಮೂರು ಅಕ್ಷರಕ್ಕೆ ಮಹತ್ವವಿದೆ. ಸವಿತ್ರನಾರಾಯಣನನ್ನು ಸ್ಮರಿಸುವ ಗಾಯತ್ರಿ ಮಂತ್ರ, ಜೀವನದ ಏರು-ಪೇರುಗಳನ್ನು ಸಮತೋಲನಕ್ಕೆ ತರಬಲ್ಲ ಭಗವಂತನ ನುಡಿಯಾದಾರಿತ ಭಗವದ್ಗೀತೆ ಮತ್ತು ಮನಸ್ಸು ಹಾಗೂ ಶರೀರಕ್ಕೆ ಬೇಕಾದ ಆಹಾರ ನೀಡುವ ಗೋಮಾತೆಗೆ ಗೌರವವಿದೆ. ಕ್ಯಾನ್ಸರ್‌ನಂತ ಮಹಾಮಾರಿಯನ್ನು ಗೋಮೂತ್ರ ದೂರಿಕರಿಸುತ್ತದೆ. ಗೋವಿನ ಉತ್ಪನ್ನಗಳಿಂದ ಜೀವಕೋಶಗಳು ಹೊಸ ಹುಮ್ಮಸ್ಸು ಪಡೆಯಲು ಸಹಕಾರಿ. ಆಯುರ್ವೇದದಲ್ಲಿ ಪಂಚಗವ್ಯ ಘೃತವು ಮಾನಸಿಕ ಔಷಧವೆಂದು ತಿಳಿಸಲಾಗಿದೆ. ದೇವಸ್ಥಾನದ ಶಿಖರ ಚಲನೆಯಲ್ಲಿ ಗೋವೃಷಭ ಬಳಸುತ್ತಾರೆ. ಬಿಂಬ ಚಲನೆಯಲ್ಲಿ ಗೋಮಾತೆಯನ್ನು ಬಳಸಲಾಗುತ್ತದೆ. ನೇರವಾಗಿ ದೇವರ ಮೂರ್ತಿ ಹೊರತರುವ ಸಾಮರ್ಥ್ಯ ಮನುಷ್ಯರಿಗಿಲ್ಲಾ. ಗೋವಿಗೆ ಮಾತ್ರ ಎಲ್ಲಾ ದೋಷ ತಡೆದುಕೊಳ್ಳುವ ಶಕ್ತಿ ಇರುವುದರಿಂದಲೇ ಅವುಗಳನ್ನು ಬಳಸುತ್ತಾರೆ. ಗೋವಿನ ಪರೋಪಕಾರ ಗುಣವೇ ಅವುಗಳಿಗೆ ದೋಷಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ನೀಡಿದೆ. ಆದ್ದರಿಂದಲೇ ಗೋವಿನ ಕಾರ್ಯ ನೋಡಿ ಪರೋಪಕಾರಾರ್ಥಾಯ ಇದಂ ಶರೀರಂ ಎನ್ನುವ ಮಾತು ಸಮಂಜಸ ಎನ್ನುವುದು ನನ್ನ ಭಾವನೆ. 
ಹಿಂದು ಸಂಸ್ಕೃತಿಯಲ್ಲಿ ಗೋವಿನ ಮಹತ್ವ:
ಹಿಂದೆ ಗೋವಿಲ್ಲದ ಮನೆಯಿರಲಿಲ್ಲಎಂದು ಹೆಮ್ಮೆಯಿಂದ ಹೇಳುವ ನಾವಿಂದು ಗೋವಿರುವ ಮನೆ ವಿರಳ ಎನ್ನುವ ವಿಷಾದದ ನುಡಿಯಾಡಬೇಕಿದೆ. ಗೋವು ಮೂರು ಮುಖ್ಯ ಅಂಶಗಳಿಂದ ಹಿಂದು ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ದೇವಸ್ಥಾನದ ಆಗಮ ಕಾರ್ಯ, ಮಾನುಷ ಕಾರ್ಯ ಮತ್ತು ಗೃಹಗಳ ಚಲನೆಯಿಂದ ಜೀವನದಲ್ಲಾಗುವ ಬದಲಾವಣೆಗಳಲ್ಲಿ ಇವುಗಳ ಪಾತ್ರ ಮುಖ್ಯವಾಗಿದೆ. ಗೋವು ಸಹಜವಾಗಿ ವಾಸಿಸುವ, ಫಲಪುಷ್ಪಗಳಿಂದ ಆವೃತವಾದ ಜಾಗದಲ್ಲಿ ದೇವಸ್ಥಾನ ಕಟ್ಟಬಹುದು ಎನ್ನುವ ಶಾಸ್ತ್ರೋಕ್ತಿಯಿದೆ. ಇವುಗಳ ಸಂಚರಿಸಿದ ಸ್ಥಳದಲ್ಲಿ ವಿಷಯುಕ್ತ ಅಂಶಗಳು ನಾಶವಾಗಿರುತ್ತವೆ. ಸ್ಥಳ ಶುದ್ಧಿ ಹಾಗೂ ಸಪ್ತಶುದ್ಧಿಯಲ್ಲಿ ಮತ್ತು ಮನೆಕಟ್ಟಿದ ಸಂದರ್ಭ ಗೋಮಾತೆಯ ಪ್ರವೇಶದ ನಂತರ ಮಾನವನಿಗೆ ಅವಕಾಶ ನೀಡುವಾಗಲೇ ಗೋವಿನ ಮಹತ್ವ ತಿಳಿಯಬಹುದು. ಹಿಂದೆ ಅಮವಾಸ್ಯೆ ಹಾಗೂ ಮುನ್ನಾದಿನ, ಗೃಹಣ, ಮೂಲ ನಕ್ಷತ್ರದಲ್ಲಿ ಜನಿಸಿದವರಿಗೆ ಗೋಪ್ರಸವ ಶಾಂತಿ ಮಾಡಿದ ಜಾತಕದಿಂದ ಜನ್ಮಾಂತರದ ಕರ್ಮಫಲವನ್ನು ತಡೆಯುವ ಶಕ್ತಿ ಗೋಮಾತೆಗೆ ಇದ್ದುದರಿಂದ ಅವುಗಳನ್ನು ಸಾಕುತ್ತಿದ್ದರು. ಇಂದು ಒತ್ತಡದ ಪ್ರಪಂಚದಲ್ಲಿ ಗೋವುಗಳಿಲ್ಲದಿದ್ದರೂ ಅವುಗಳ ಸೇವೆಗೆ ಒಂದಷ್ಟು ನಿಧಿ ಸಮರ್ಪಿಸಲು ಅವಕಾಶ ಕಲ್ಪಿಸಲಾಗಿದೆ.
ಬದಲಾದ ಪ್ರಪಂಚದಲ್ಲಿ ಮಾನವನ ಮಾನಸಿಕತೆ:
ಗೋವಿನ ಧೂಳು ಆವರಿಸಿರುವ ಗೋಧೂಳಿ ಮೂಹೂರ್ತದಲ್ಲಿ ಎಲ್ಲಾ ಅನಿಷ್ಟ ದೂರವಾಗುವುದರಿಂದ ಆ ಸಂದರ್ಭ ಉತ್ತಮ ಕಾರ್ಯಗಳಿಗೆ ಸೂಕ್ತ ಕಾಲ ಎನ್ನುವ ನಂಬಿಕೆ. ಪರಿಸ್ಥಿತಿ ಬದಲಾಗಿದ್ದು ಇಂದು ಗೋವಿನ ದೂಳುಗಳಿಲ್ಲದೆ ರಸ್ತೆಗಳೆಲ್ಲಾ ಕಾಂಕ್ರೀಟಿಕರಣಗೊಂಡು ವಾಹನದ ಧೂಳು ಹೆಚ್ಚಾಗಿವೆ. ಹಿಂದೆ ಧಾರ್ಮಿಕ ಕಾರ್ಯದಲ್ಲಿ ಗೋದಾನ ಮಾಡುವ ಸಂಪ್ರದಾಯವಿತ್ತು ಆದರೆ ಅದು ಇಂದು ವಿರಳವಾಗುತ್ತಿದೆ. ಪ್ರಸ್ತುತ ಸಮಾಜದಲ್ಲಿ ಗೋವುಗಳನ್ನು ರಕ್ಷಣೆ ಮಾಡುತ್ತಾರೆ ಎನ್ನುವ ನಂಬಿಕೆಯ ಒಸರು ಬತ್ತಿಹೋಗಿದೆ. ದಿನದಿಂದ ದಿನಕ್ಕೆ ಹಲವಾರು ದನ-ಕರುಗಳು ಕಸಾಯಿಖಾನೆ ಪ್ರವೇಶ ಮಾಡುತ್ತಿವೆ.  ಮನೆಯ ವಾಸ್ತುದೋಷ ನಿವಾರಣೆಗೆ ನಿತ್ಯ ತುಪ್ಪದ ದೀಪ ಹಚ್ಚುವುದು, ದೇವತೆಗಳ ಆಹಾರ ತುಪ್ಪವಾದ್ದರಿಂದ ಎಲ್ಲಾ ಧಾರ್ಮಿಕ ಕಾರ್ಯ ತುಪ್ಪದಿಂದಲೇ ನಡೆಯುತ್ತಿತ್ತು. ಅದನ್ನು ಮನೆಯಲ್ಲಿ ತಯಾರಿಸುತ್ತಿದ್ದರು. ಮನೆಯಲ್ಲಿ ಹೇರಳವಾಗಿ ದೊರೆಯುತ್ತಿದ್ದ ಗೋ-ಉತ್ಪನ್ನಗಳು ಇಂದು ಮರೆಯಾಗಿ ಪೊಟ್ಟಣಗಳಲ್ಲಿ ಸಿಗುವ ವಸ್ತುಗಳಿಗೆ ಅವಲಂಬಿತರಾಗಿದ್ದೇವೆ.
ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ನಾವಿದ್ದೇವೆ. ದೃಶ್ಯಮಾಧ್ಯಮ, ಅಂತರ್ಜಾಲ, ಮೊಬೈಲ್,ಕಂಪ್ಯೂಟರ್‌ಗಳಲ್ಲಿ ಕಾರ್ಯಮಗ್ನರಾಗಿ ಗೋಸಂರಕ್ಷಣೆಯಲ್ಲಿ ನಿರಾಸಕ್ತಿ ತಳೆದಿದ್ದೇವೆ. ಸಮಾಜದಲ್ಲಿ ಜೀವ ತಳೆದಾಗ ತಾಯಿಯ ಎದೆಹಾಲು ಅವಲಂಬಿಸುವ ನಾವು ಬೆಳೆದು ದೊಡ್ಡವರಾಗುತ್ತಾ ಗೋ-ಮಾತೆ ನೀಡುವ ಹಾಲನ್ನು ಅವಲಂಬಿಸುತ್ತೇವೆ. ಆದರೆ ದಿನಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಕಸಾಯಿಖಾನೆ ಸೇರುವ ಗೋಮಾತೆಯ ರಕ್ಷಣೆ ನಮ್ಮಿಂದಾಗಬೇಕಿದೆ. ೨೦೧೨ರಲ್ಲಿ ದೇಶವ್ಯಾಪಿ ರಾಷ್ಟ್ರೀಯ ಜಾನುವಾರು ಗಣತಿಗೆ ಚಾಲನೆ ನೀಡಲಾಗಿದ್ದು ಈ ನಿಟ್ಟಿನಲ್ಲಿ ಕಸಾಯಿಖಾನೆಗೆ ಸೇರುತ್ತಿರುವ ಗೋವುಗಳ ರಕ್ಷಣೆಗೆ ನಮ್ಮ ಅಳಿಲಿನ ಸೇವೆ ಮುಖ್ಯವಾಗಿದೆ. ಗೋವುಗಳ ಮಹತ್ವ ತಿಳಿದುಕೊಂಡು ಅದನ್ನು ಮುಂದಿನ ಪೀಳಿಗೆಗೆ ತಿಳಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.




No comments:

Post a Comment