Saturday 1 December 2012

ಅಲ್ಲಿ ಮಕ್ಕಳ ದಿನಾಚರಣೆ ಅಬ್ಬರ
ಇಲ್ಲಿ ಮಕ್ಕಳ ಭವಿಷ್ಯ ಅರಳುತ್ತಿದೆ ಹೀಗೆ...

ಪ್ರಥಮ ಪ್ರಧಾನಿ ನೆಹರೂ ಅವರ ಬದುಕಿನಲ್ಲಿ ಮಕ್ಕಳ ಕುರಿತ ವಿಶೇಷ ಕಾಳಜಿ ವಹಿಸಿದ್ದಾರೆಂದು ಈ ದಿನವನ್ನು ಮಕ್ಕಳ ದಿನವೆಂದು ಆಚರಿಸಲಾಗುತ್ತಿದೆ. ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಅವರ ಬದುಕಿನ ಸತ್ಯದ ಬೆಳಕಿನಲ್ಲಿ ಈ ದಿನಾಚರಣೆಯ ಬಗೆಗೇ ಪ್ರಶ್ನೆಗಳನ್ನು ಹುಟ್ಟುಹಾಕುವಂತಿದೆ. ಏನೇ ಆದರೂ ಮಕ್ಕಳ ದಿನಾಚರಣೆಯನ್ನು ನಾವು ಕ್ರಮವಾಗಿ ಆಚರಿಸುತ್ತಲೇ ಬಂದಿದ್ದೇವೆ.ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಆಚರಿಸುವ  ಇಂತಹ ದಿನಗಳು ಮಕ್ಕಳ ಬಗ್ಗೆ ನಮ್ಮಲ್ಲಿ ಭಾವ ಸಂವೇದನೆ ಮೂಡಿಸಿದ್ದೇ ಆದರೆ ಅಂತಹ ದಿನಾಚರಣೆ ಪ್ರಸ್ತುತವೇ . ಈ ಹಿನ್ನೆಲೆಯಲ್ಲಿ ಮಕ್ಕಳ ಬಗೆಗೆ ಅವಲೋಕನ ನಡೆಸಲು ಇದು ಸಕಾಲವೇನೋ.
ಮಕ್ಕಳ ದಿನಾಚರಣೆಯಂದು ಎಲ್ಲಾ ಪತ್ರಿಕೆಗಳಲ್ಲಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪುಟಾಣಿ ಮಕ್ಕಳ ವೇಷದ ಸ್ಪರ್ಧೆ, ಚಿತ್ರ ಬಿಡಿಸುವುದು, ಹಾಡು, ನೃತ್ಯ, ಭಾಷಣ ಒಂದೆ ಎರಡೇ ಅನೇಕ ಸ್ಫರ್ಧೆಯನ್ನು ವಿವಿಧ ಸಂಸ್ಥೆಗಳು ಆಯೋಜಿಸಿ ಜಾಹಿರಾತುಗಳನ್ನು ನೀಡುತ್ತವೆ. ಸ್ಪರ್ಧೆ ಆಯೋಜಿಸಿದ ಸಂಸ್ಥೆ ಹೆಸರು ಗಳಿಸಬೇಕೆನ್ನುವ ಉದ್ದೇಶ ಇದರಲ್ಲಿ ಎದ್ದು ಕಂಡರೂ, ಮಕ್ಕಳ ಪ್ರತಿಭೆ ಪ್ರದರ್ಶಿಸಲು ಇದೊಂದು ವೇದಿಕೆ ಎಂಬುದೂ ಸರಿಯೇ.
 ಆದರೆ ನಮ್ಮ ದೇಶದಲ್ಲಿ ಇಂದು ಮಕ್ಕಳ ಬದುಕಿನತ್ತ ಒಂದು ನೋಟ ಹರಿಸಿದ್ದೇ ಆದರೆ , ಒಂದೆಡೆ ಆಧುನಿಕ ಶಿಕ್ಷಣದ ಭರಾಟೆಯಲ್ಲಿ ಮಕ್ಕಳಿಗ ಬಾಲ್ಯವೇ ಕಳೆದುಹೋಗುತ್ತಿದೆಯೇನೋ ಎನಿಸುತ್ತಿದೆ. ಮಕ್ಕಳಿಗೆ ಹೋಮ್‌ವರ್ಕ್(ಭವಿಷ್ಯ ಜೀವನದಲ್ಲಿ ಕಷ್ಟಸಹಿಷ್ಣುತೆಯನ್ನು ಕಲಿಸುವ  ಮನೆಗೆಲಸ ಮಾಡಿಸಿದ್ದೇ ಆದರೆ ಅಪರಾಧ !)ನ ಒತ್ತಡ.ಓದುವ , ಇಂಜಿನಿಯರ್ ಆಗುವ , ಡಾಕ್ಟರ್, ಐಟಿ, ಬಿಟಿ ಆಗಿ ಕೈ ತುಂಬ ಸಂಬಳ ಪಡೆಯುವ , ಫಾರೀನ್‌ಗೆ ಹಾರುವ ಭ್ರಮಾ ಲೋಕದಲ್ಲಿ ಬಾಲ್ಯದ ಖುಷಿ , ಬದುಕಿನ ತಳಪಾಯ ಕಳೆದುಹೋಗುತ್ತಿದೆ  ಎಂಬ ಆತಂಕ ಇಂದು ಅನೇಕರಲ್ಲಿ ಮೂಡುತ್ತಿದ್ದರೆ ಅದರಲ್ಲಿ ತಥ್ಯವಿದೆ.
ಇನ್ನೊಂದೆಡೆ ,ದೇಶದ ಅನೇಕ ನಗರಗಳ ಸೇವಾಬಸ್ತಿಗಳು ಸೇರಿದಂತೆ ಸಮಾಜದಲ್ಲಿ ಎಷ್ಟೋ ಮಕ್ಕಳಿಗೆ ಓದಲು ಅವಕಾಶವಿಲ್ಲ.ಬದುಕಿನ ಕೂಳಿಗೂ ಬಡಿದಾಡಬೇಕಾದ ಅಧ್ವಾನ. ಇವರ ಬದುಕಿಗೇನು?
  ಬಡತನದ ಬೇಗೆಯಲ್ಲಿ ದಿನಕಳೆಯುತ್ತಿರುವ ಸ್ಲಮ್‌ಗಳಲ್ಲಿರುವ ಮಕ್ಕಳನ್ನು ಬಹಳ ಸುಲಭವಾಗಿ ದುಷ್ಟಕೃತ್ಯಗಳಿಗೆ ತಮ್ಮ ದಾಳವನ್ನಾಗಿ ಬಳಸಿಕೊಳ್ಳುತ್ತಿವೆ ದುಷ್ಟಶಕ್ತಿಗಳು. ಇಂತಹ  ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ.ಇಂತಹ ಆಮಿಷಕ್ಕೆ ಬಲಿಯಾಗಿ ಮಕ್ಕಳ ಸುಂದರ ಭವಿಷ್ಯ ಹಾಳುಗೆಡಹುವುದು ಒಂದೆಡೆಯಾದರೆ ಅವರ ಪೋಷಕರು ಕುಡಿತದ ದಾಸರಾಗಿರುವುದರಿಂದ ಅವರನ್ನು ಸುಲಭವಾಗಿ ವಂಚಿಸಲು ಇನ್ನಷ್ಟು ಅವಕಾಶ. ಇಂದು ಸ್ಲಮ್‌ಗಳಲ್ಲಿ ಬಳಪ-ಲೇಖನಿ ಹಿಡಿಯಬೇಕಾದ ಸಣ್ಣ ಮಕ್ಕಳು ಗಾಂಜಾ, ಅಫಿಮು, ಚರಸ್‌ನಂಥ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಚಕ್ರವ್ಯೂಹದಲ್ಲಿ ಸಿಕ್ಕಿ ಹೊರಬರಲಾರದೆ ವಿಲವಿಲ ಒದ್ದಾಡುತ್ತಿದ್ದಾರೆ. ಮೊದಲಿಗೆ ಸಣ್ಣ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿ ಕೊಳ್ಳುವ ಮಕ್ಕಳು, ಬೆಳೆದು ದೊಡ್ಡವರಾದಾಗ, ಜೀವನದಲ್ಲಿ ಗುರಿಯಿಲ್ಲದೆ, ಬೇರೆ ದಾರಿ ಕಾಣದೆ ಇಂತಹ ನರಕದಲ್ಲಿಯೆ ಬದುಕನ್ನು ಅಂತ್ಯಗೊಳಿಸುವ ದಾರುಣ ಸ್ಥಿತಿ.
ಮುಗ್ಧಮನಸುಗಳಿಗೆ ತಮ್ಮ ಜೀವನ ಮೃತ್ಯುಕೂಪದಲ್ಲಿ ಬೀಳುತ್ತವೆ ಎಂದು ತಿಳಿಯುವುವಾಗ ಕಾಲ ಕೈ ಮೀರಿ ಹೋಗಿರುತ್ತದೆ. ಆದರೂ ಕೆಲವೊಂದು ಕಾಯಿಲೆಗೆ ಪ್ರಾರಂಭದಲ್ಲಿಯೇ ಔಷದಿ ಮಾಡಿದರೆ ನಿವಾರಿಸಬಹುದು ಅಥವಾ ರೋಗದ ಪ್ರಖರತೆ ಹತೋಟಿಗೆ ತರಬಹುದು. ಸ್ಲಮ್‌ನಲ್ಲಿರುವ ಮಕ್ಕಳ -ಜನರ ಬದುಕನ್ನೇ   ಬಂಡವಾಳವಾಗಿಸಿಕೊಂಡ ಮತೀಯವಾದಿ ಗುಂಪುಗಳು  ಈ ಕುಟುಂಬಗಳನ್ನು ಮತಾಂತರ ಮಾಡಿದ ಘಟನೆಗಳೂ ಸಾಕಷ್ಟಿವೆ.
ಮನೆಯ ಬಡತನ, ತಂದೆ ತಾಯಿಯ ಕಿರುಕುಳ, ಮಾನಸಿಕ ಬೆಳವಣಿಗೆಯ ಕೊರತೆ, ಅನಕ್ಷರತೆ, ಅತಿಯಾಸೆ ಹೀಗೆ ಅನೇಕ ಸಮಸ್ಯೆಗಳಿಂದ ಮಕ್ಕಳು ಸಮಾಜ ಘಾತುಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತವೆ.  ಗಂಡು ಮಕ್ಕಳು ಈ ರೀತಿಯಾಗಿ ಜೀವನ ಹಾಳುಮಾಡಿಕೊಳ್ಳುತ್ತಿದ್ದರೆ ಪಾಪ ಹೆಣ್ಣು ಮಕ್ಕಳ ಸ್ಥಿತಿ ಇನ್ನಷ್ಟೂ ಶೋಚನೀಯ. ಅಪ್ರಾಪ್ತ ಬಾಲೆಯರು ಕಾಮಾಂಧರ ಭೋಗದ ವಸ್ತುಗಳಾಗುತ್ತಿದ್ದಾರೆ. ಮೈಕಲ್ ಜಾಕ್ಸನ್ ಕಾಮತೃಷೆ ತೀರಿಸಿಕೊಳ್ಳಲು ಅಪ್ರಾಪ್ತೆಯರನ್ನೆ ಬಳಸುತ್ತಿದ್ದ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಮುಂಬೈನ ಅಂದೇರಿಯಲ್ಲಿ ವಾಸವಾಗಿದ್ದ ಮಧ್ಯಮ ವರ್ಗದ ಹೆಣ್ಣಿನ ಮೇಲಾದ ಲೈಂಗಿಕ ದೌರ್ಜನ್ಯ,  ಸೌಜನ್ಯಳಂತಹ ನೂರಾರು ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಬಲಿಯಾಗುತ್ತಿರುವುದನ್ನು   ಕಂಡಾಗ, ನಮ್ಮ ದೇಶದಲ್ಲಿಯೂ ಕೂಡ ಇಂತಹ ಪಾಪಿಗಳಿರುವುದು ವ್ಯಕ್ತ.
 ವಾಮಾಚಾರವೆಂಬ ಮಾಯೆಗೆ ಬಲಿಯಾಗಿ ಪುಟಾಣಿಗಳನ್ನೆ ಬಲಿಕೊಡುವಂಥ ಕಟುಕರೂ ಸಮಾಜದಲ್ಲಿದ್ದಾರೆ. ಎನ್‌ಸಿಆರ್‌ಬಿಯು ೨೦೧೧ರಲ್ಲಿ ನಮ್ಮ ದೇಶದಲ್ಲಿನ ಮಕ್ಕಳ ಸಮಾಜ ವಿರೋಧಿ ಚಟುವಟಿಕೆಯನ್ನು ವರದಿ ಮಾಡಿದೆ. ಜೈಪುರದಲ್ಲಿ ೩೬೯ ಕ್ರೈಮ್ ಮತ್ತು ಬಲಾತ್ಕಾರದ ದೂರು ದಾಖಲಾಗಿದೆ. ರಾಜಸ್ಥಾನ-೧,೩೧೮, ಮಧ್ಯಪ್ರದೇಶ-೪,೯೧೨, ಮಹಾರಾಷ್ಟ್ರ-೩,೬೨೪, ಉತ್ತರ ಪ್ರದೇಶ-೨,೩೩೨ ದೂರು ದಾಖಲಾಗಿದೆ. ೧೫-೨೯ ವರ್ಷದೊಳಗಿನ ಆತ್ಮಹತ್ಯೆ ಪ್ರಕರಣದಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ೬೫೭ ಪ್ರಕರಣಗಳಲ್ಲಿ ೩೨೯ ಮಹಿಳೆಯರು, ದೆಹಲಿ-೬೫೧, ಮುಂಬೈ-೫೮೨, ಚೆನೈ-೪೭೨ ಈ ರೀತಿಯಾಗಿ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಸ್ಲಮ್‌ಗಳಲ್ಲಿರುವ ಮಕ್ಕಳಿಗೆ ಹಾಗೂ ಬಡತನದಲ್ಲಿರುವ ಮಕ್ಕಳಿಗೆ ವಿದ್ಯೆ ಕಲಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸೇವಾಸಂಸ್ಥೆಗಳು ಶ್ರಮಿಸುತ್ತಿವೆ. ೧೯೮೦ರ ದಶಕದಲ್ಲಿ ಒರಿಸ್ಸಾದಲ್ಲಿ ಫ್ಲಾಟ್‌ಫಾರಂ ಶಾಲೆಗಳು ಪ್ರಾರಂಭಗೊಂಡವು. ನಿವೃತ್ತ ಸೇನಾಧಿಕಾರಿಯ ಪತ್ನಿ ಇಂದರ್‌ಜಿತ್ ಖುರಾನ ರುಚಿಕಾ ಸೋಷಿಯಲ್ ಸರ್ವಿಸ್ ಆರ್ಗನೈಜೇಷನ್ ಪ್ರಾರಂಭ ಮಾಡಿ, ಈಗ ಆ ಸಂಸ್ಥೆ ೮೨೦ ಫ್ಲಾಟ್‌ಫಾರಂ ಶಾಲೆ, ೭೫ ಸೇವಾ ಬಸ್ತಿ ಶಾಲೆ, ೨೫ ನರ್ಸರಿ ಶಾಲೆಗಳನ್ನು ಯಾವುದೇ ಸ್ವಾರ್ಥವಿಲ್ಲದೆ ಯಶಸ್ವಿಯಾಗಿ ನಡೆಸುತ್ತಿದೆ. ಸರ್ಕಾರ ಮಕ್ಕಳ ವಿಕಾಸಕ್ಕೆಂದು ಹಲವಾರು ಯೋಜನೆಗಳನ್ನು, ಸ್ವಯಂಸೇವಾ ಸಂಸ್ಥೆಗಳು, ಅಂಗನವಾಡಿಗಳು, ಶಾಲಾಪೂರ್ವ ಚಟುವಟಿಕೆಗಳು ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ಕಾಪಾಡುತ್ತಿವೆ. ೧೯೫೨ರಲ್ಲಿ ಭಾರತೀಯ ಮಕ್ಕಳ ಕಲ್ಯಾಣ ಸಂಸ್ಥೆಯಡಿಯಲ್ಲಿ ಬಾಲವಿಕಾಸ ಕೇಂದ್ರ ಹಾಗೂ ೧೯೫೫ ಮಕ್ಕಳ ಕಲ್ಯಾಣವನ್ನೇ ಗುರಿಯಾಗಿಸಿ ರಾಷ್ಟ್ರೀಯ ಮಕ್ಕಳ ಮಂಡಳಿಯನ್ನು ಪ್ರಾರಂಭ ಮಾಡಿದೆ.
ಸಂಘ ಪರಿವಾರದ ಸಾರ್ಥಕ ಕಾರ್ಯ:
ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರೇರಿತ ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗೆ ಪ್ರೋತ್ಸಾಹ ನೀಡಲು ಅನೇಕ ಕಾರ್ಯಕ್ರಮ ಆಯೋಜಿಸುತ್ತಿದೆ. ಬೆಂಗಳೂರಿನಲ್ಲಿ  ೩ ಗಂಡು ಮಕ್ಕಳಿಗಾಗಿ ನಡೆಯುವ ನರೇಂದ್ರ ನೆಲೆ(೬೫ಮಕ್ಕಳು), ನಮ್ಮ ಮನೆ(೨೨ಮಕ್ಕಳು), ಚಂದನ ನೆಲೆ(೩೩ಮಕ್ಕಳು) ಮತ್ತು ಹೆಣ್ಣು ಮಕ್ಕಳಿಗಾಗಿ ನಿವೇದಿತಾ (೨೮), ಆಶಾಕಿರಣ (೨೫), ವಸುಧಾ ನೆಲೆ (೨೫), ಶಿವಮೊಗ್ಗದಲ್ಲಿ (೨೫), ಮೈಸೂರು(೧೨)ತುಮಕೂರು(೧೬),ಬಾಗಲಕೋಟೆಯಲ್ಲಿ ವಸತಿ ಕೇಂದ್ರಗಳನ್ನು ಸ್ಥಾಪಿಸಿದೆ. ನೆಲೆಯಲ್ಲಿ ಚಿಂದಿ ಆಯುವ, ಅನಾಥರು, ಸಿಂಗಲ್ ಪೇರೆಂಟ್ ಹೀಗೆ ಹಲವಾರು ನಿರ್ವಸಿತ ಮಕ್ಕಳಿಗೆ ಆಶ್ರಯವನ್ನು ಕಲ್ಪಿಸಿಕೊಟ್ಟು ಉಚಿತ ಶಿಕ್ಷಣ ವ್ಯವಸ್ಥೆ ಮಾಡುತ್ತಿದೆ.
ಸೇವಾ ಕಿರಣದ ವತಿಯಿಂದ ೭೦ ಟ್ಯೂಶನ್ ಕೇಂದ್ರಗಳಲ್ಲಿ ೧,೨೦೦ ಮಕ್ಕಳಿಗೆ ೭೦ ಶಿಕ್ಷಕರು ಉಚಿತ ಮನೆಪಾಠ ವ್ಯವಸ್ಥೆ ಮಾಡುತ್ತಿದ್ದಾರೆ. ಅಲ್ಲದೆ ಮನೋನಂದನ, ಅರುಣ ನಂದನ ಅಂಗವಿಕಲ ಮಕ್ಕಳ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಯೂತ್ ಫಾರ್ ಸೇವಾದ ವತಿಯಿಂದ ಬಡ ಮಕ್ಕಳಿಗೆ ಶಿಕ್ಷಣದ ವೆಚ್ಚದೊಂದಿಗೆ ಉಚಿತವಾಗಿ ಶಿಕ್ಷಣಕ್ಕೆ ಅಗತ್ಯ ಸಲಕರಣೆಗಳನ್ನು ಒದಗಿಸುತ್ತಿವೆ. ಆಪ್ತ ಸಲಹಾ ಕೇಂದ್ರದಿಂದ ಮಕ್ಕಳಿಗೆ ಕೌನ್ಸೆಲಿಂಗ್ ಕೂಡ ಮಾಡಲಾಗುತ್ತಿದೆ.
ರಾಷ್ಟ್ರೋತ್ಥಾನ ಪರಿಷತ್‌ನ ವತಿಯಿಂದ ದಿನದಲ್ಲಿ ೨ ಗಂಟೆಗಳ ತರಬೇತಿಯನ್ನು ೨೨೭ ಕೇಂದ್ರಗಳಲ್ಲಿ ೨೨೭ ಶಿಕ್ಷಕರು ೫ಸಾವಿರಕ್ಕೂ ಅಧಿಕ ಮಕ್ಕಳಿಗೆ ಗಣಿತ, ಆಂಗ್ಲ, ವಿಜ್ಞಾನ ಪಠ್ಯವನ್ನು ಬೋಧಿಸುತ್ತಿದ್ದಾರೆ. ಕೇಶವ ಸೇವಾ ಸಮಿತಿಯಿಂದ ೩೦೦೦ ವಿದ್ಯಾರ್ಥಿಗಳಿಗೆ ಮನೆಪಾಠ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಬಡಮಕ್ಕಳನ್ನು ಗುರುತಿಸಿ ಅವರಿಗೆ ಉಚಿತ ಶಿಕ್ಷಣ ವ್ಯವಸ್ಥೆ ಮಾಡಲಾಗುತ್ತಿದ್ದು ೬೦ ಮಕ್ಕಳಿಗೆ ಈರೀತಿಯ ಸೌಲಭ್ಯ ದೊರಕಿದೆ. ಸ್ನೇಹ ಸೇವಾ ಟ್ರಸ್ಟ್‌ನ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ  ವಿದ್ಯಾರ್ಥಿಗಳಿಗೆ ೭ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ``ವಿದ್ಯಾವಾಹಿನಿ" ಯೋಜನೆಯಲ್ಲಿ ಉಚಿತ ಶಿಕ್ಷಣ ನೀಡುತ್ತಿದೆ. ವಿದ್ಯಾವಾಹಿನಿಯಲ್ಲಿ ೮೬ ಮಕ್ಕಳು ಈ ಸೌಲಭ್ಯ ಪಡೆದುಕೊಂಡಿದ್ದಾರೆ. ಸ್ಲಮ್‌ಗಳಲ್ಲಿ ವಿದ್ಯಾರ್ಥಿಗಳಿಗಾಗಿ ೧೧ಕೇಂದ್ರಗಳಲ್ಲಿ ೨೧೬ ಮಕ್ಕಳಿಗೆ ಉಚಿತ ಮನೆಪಾಠ ಕಲಿಸಲಾಗುತ್ತಿದೆ. ಸಂಸ್ಕಾರ ಕೇಂದ್ರದಿಂದ ಮಕ್ಕಳಿಗೆ ಸಂಸ್ಕಾರವನ್ನು ಕಲ್ಪಿಸಲಾಗಿದೆ. ವಿಶ್ವಹಿಂದೂ ಪರಿಷತ್ತಿನ ವನಿತಾಶ್ರಮ ಹಾಗೂ ಕುತ್ತಾರು ಆಶ್ರಮದಲ್ಲಿ ಅನೇಕ ನಿರಾಶ್ರಿತ ಮಕ್ಕಳು ತಮ್ಮ ಜೀವನ ಸಾರ್ಥಕ್ಯ ಮಾಡಿ ಕೊಳ್ಳುತ್ತಿರುವುದನ್ನು ಗಮನಿಸಬೇಕಾದ ಅಂಶ. ಯಾವುದೆ ಸ್ವಾರ್ಥ ಬಯಸದೆ ಬಡಮಕ್ಕಳಿಗೆ ಶಿಕ್ಷಣ ನೀಡುತ್ತಾ ಅನೇಕ ಸ್ವಯಂಸೇವಕರು  ಸೇವಾ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಮತಾಂತರದ ಗುರಿಯಿರಿಸಿ, ಸ್ವಾರ್ಥಸಾಧಿಸುವ ಮತೀಯವಾದಿ ಶಕ್ತಿಗಳಿಗೆ  ಸೆಕ್ಯುಲರ್  ಸಿಗುತ್ತಿದೆ. ಯಾವುದೇ ಸ್ವಾರ್ಥಾಪೇಕ್ಷೆಯಿಲ್ಲದೆ ಸೇವೆ ಕರ್ತವ್ಯ ಎಂಬ ನೆಲೆಯಲ್ಲಿ ೮೬ ವರ್ಷಗಳಿಂದ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಸೇವಾ ಪ್ರಕಲ್ಪಗಳನ್ನು  ನಡೆಸುತ್ತಿರುವ   ಸಂಘಪರಿವಾರಗಳಿಗೆ ಕೋಮುಸಂಘಟನೆ ಎನ್ನುವ ಪಟ್ಟ !
 ಹಿಂದು ಸಮಾಜದ ಎಲ್ಲ ಬಂಧುಗಳಿಗೆ ನೆಲೆಯನ್ನು ಕಲ್ಪಿಸಬೇಕು ಹಾಗೂ ಭವ್ಯಭಾರತದ ನಿರ್ಮಾಣ ಮಾಡಬೇಕೆನ್ನುವ ಮನೋಭಿಲಾಷೆಯು  ಎಲ್ಲಿಯಾದರೂ ಕೋಮುವಾದಕ್ಕೆ ಆಸ್ಪದ ಕೊಡುತ್ತದೆಯೇ? ಸ್ವಾರ್ಥ, ಕೀರ್ತಿ ಬಯಸದೆ ಸೇವಾ ಬಸ್ತಿಯಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾ, ಸಂಸ್ಕಾರವನ್ನು ಬೆಳೆಸುತ್ತಾ ಸಮಾಜದ ಮುಖ್ಯವಾಹಿನಿಗೆ ತಂದು ಸತ್ಪ್ರಜೆಗಳನ್ನಾಗಿ ಮಾಡಬೇಕೆನ್ನುವುದು ಸಂಘಪರಿವಾರದಂತಹ ಅನೇಕ ಸಂಘ ಸಂಸ್ಥೆಗಳು ಮಕ್ಕಳ ಬದುಕಿಗೆ ಬೆಳಕಾಗುತ್ತಿರುವುದು ಅರ್ಥಪೂರ್ಣವೆಂದೆನಿಸದೇ?


No comments:

Post a Comment