ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್...ಶಿಕ್ಷಕಿಯರ ಅಳಲು
ಕೇಂದ್ರದ ಗ್ಯಾಸ್ ನೀತಿ..ಅಂಗನವಾಡಿಗೂ ತಟ್ಟಿದ ಬಿಸಿ
ಕನ್ನಡ ಉಳಿಸಬೇಕೆಂದು ಕನ್ನಡ ಪರ ಸಂಘಟನೆಗಳು, ರಾಜ್ಯ ಸರಕಾರ ವಿಪರೀತ ಹೋರಾಟ ನಡೆಸುತ್ತಿದ್ದರೂ, ಕನ್ನಡವನ್ನೆ ಮೂಲವಾಗಿಸಿಕೊಂಡು ರಾಜ್ಯದಲ್ಲಿ ಕಾರ್ಯಚರಿಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಕೇಂದ್ರ ಸರಕಾರ ಗ್ಯಾಸ್ ಸಿಲಿಂಡರ್ ಮೇಲಿನ ಬೆಲೆ ಏರಿಕೆ ಮಾಡಿರುವುದರ ಬಿಸಿ ತಟ್ಟಿದೆ. ಶಿಕ್ಷಣ ಕಲಿಕೆಯ ಮೊದಲ ಮೆಟ್ಟಿಲು ಅಂಗನವಾಡಿಯಲ್ಲಿ ಚಿಕ್ಕ ಮಕ್ಕಳಿಗೆ ನೀಡುತ್ತಿದ್ದ ಬೆಳಗ್ಗಿನ ತಿಂಡಿ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರಕಾರವು ಅಂಗನವಾಡಿ ಕೇಂದ್ರಗಳಿಗೆ ಉರುವಲು ವೆಚ್ಚವಾಗಿ ತಿಂಗಳಿಗೆ ರೂ.೧೦೦ ರಂತೆ ವರ್ಷಕ್ಕೆ ೧,೨೦೦ ನೀಡುತ್ತಿತ್ತು. ನಂತರ ಸತತ ಹೋರಾಟದ ಫಲವಾಗಿ ರೂ.೮೦೦ಜಾಸ್ತಿ ಮಾಡಿದೆ. ಈ ಸಂದರ್ಭ ಅಂಗನವಾಡಿ ಕೇಂದ್ರಗಳಲ್ಲಿ ಒಂದು ಹೊತ್ತು ಮಕ್ಕಳಿಗೆ ಬೇಯಿಸಿದ ಆಹಾರ ನೀಡುತ್ತಿದ್ದರಿಂದ ಗ್ಯಾಸ್ ಸಿಲಿಂಡರ್ ೩ರಿಂದ ಮೂರುವರೆ ತಿಂಗಳವರೆಗೆ ಬರುತ್ತಿದ್ದು ವರ್ಷಕ್ಕೆ ೪ ಗ್ಯಾಸ್ ಸಿಲಿಂಡರ್ ಸಾಲುತ್ತಿತ್ತು. ಇದು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಾಮರ್ಥ್ಯವನ್ನಾಧರಿಸಿ ಗ್ಯಾಸ್ ಸಿಲಿಂಡರ್ ಸಾಗಾಟ-ವೆಚ್ಚ ಹೆಚ್ಚಿದಾಗ ಅಲ್ಪಸ್ವಲ್ಪ ಹಣವನ್ನು ಶಿಕ್ಷಕಿಯರೇ ಭರಿಸುತ್ತಿದ್ದರು. ಈಗ ಕೇಂದ್ರ ಸರಕಾರ ಏಕಾಏಕಿ ಗ್ಯಾಸ್ ಸಿಲಿಂಡರ್‌ಗಳ ಮೇಲಿನ ಬೆಲೆ ಏರಿಸಿದ್ದರಿಂದ ಶಿಕ್ಷಕರಿಯರಿಗೆ ದಿಕ್ಕು ತೋಚದಂತಾಗಿದೆ.
ಬದಲಾದ ಅಂಗನವಾಡಿ ಆಹಾರ ಪಟ್ಟಿ:
ಎಪ್ರಿಲ್ ತಿಂಗಳಿನಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುವ ಆಹಾರ ಪಟ್ಟಿಯಲ್ಲಿ ಬದಲಾವಣೆಯಾಗಿದೆ. ಬೆಳಿಗ್ಗೆ ಮತ್ತು ಮದ್ಯಾಹ್ನ ಗಂಜಿ ಹಾಗೂ ಚಟ್ನಿ ನೀಡಬೇಕು ಎನ್ನುವ ಆದೇಶವಿದೆ. ಚಟ್ನಿಗೆ ಸರಕಾರದ ವತಿಯಿಂದ ಹುರುಳಿ, ಮೆಣಸು, ಉಪ್ಪುಗಳನ್ನು ಮಾತ್ರ ಬಳಸಬೇಕಿದ್ದು ಅಷ್ಟು ಸಾಮಾಗ್ರಿ ಮಾತ್ರ ನೀಡುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಆಹಾರ ವ್ಯವಸ್ಥೆಗೊಳಿಸಬೇಕು ಎನ್ನುವ ಸಂಪೂರ್ಣ ಜವಾಬ್ದಾರಿ ವಹಿಸಿದ್ದರಿಂದ ಕರಾವಳಿ ಬಾಗದಲ್ಲಿ ಎರಡು ಹೊತ್ತು ಗಂಜಿ ನೀಡುವುದನ್ನು ಕಡಿತಗೊಳಿಸಿ ವಾರದಲ್ಲಿ ೨ ದಿನ ಗಂಜಿಯೂಟ ಸೇರಿದಂತೆ ಉಳಿದ ದಿನದಲ್ಲಿ ಬೇಯಿಸಿದ ಕಡ್ಲೆಕಾಳು ನೀಡುವಂತೆ ಸೂಚಿಸಲಾಗಿದೆ. ಬೆಳಿಗ್ಗೆ ಹೆಸರುಕಾಳು, ಗಂಜಿ-ಚಟ್ನಿ, ಮದ್ಯಾಹ್ನ ಅನ್ನಸಾಂಬಾರು (ಕುಚ್ಚಲು ಅಕ್ಕಿ)ನೀಡಬೇಕು.
ಅಂಗನವಾಡಿ ಕೇಂದ್ರಗಳಿಗೆ ಗ್ಯಾಸ್‌ಕೊರತೆ:
ಜಿಲ್ಲೆಯಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಬೆಳಗ್ಗಿನ ತಿಂಡಿಗೆ ಕಡ್ಲೆಕಾಳನ್ನು ಬೇಯಿಸಿ ನೀಡಬೇಕು. ಅಲ್ಲದೇ ತೊಗರಿಬೇಳೆ, ಕುಚ್ಚಲು ಅಕ್ಕಿ ಅನ್ನ, ಕಡ್ಲೆ, ಮಕ್ಕಳಿಗೆ ಕುದಿಸಿದ ನೀರು ಎಲ್ಲವು ಕೂಡ ಗ್ಯಾಸ್‌ನಲ್ಲಿ ಆಗಬೇಕಿರುವುದರಿಂದ ಮಕ್ಕಳ ಸಂಖ್ಯೆ ಆದರಿಸಿ ಗ್ಯಾಸ್ ೨ತಿಂಗಳು ಬರುವುದು ಕಷ್ಟಕರ. ಜಿಲ್ಲೆಯ ೩೦ಕ್ಕಿಂತಲೂ ಕಡಿಮೆ ಅಂಗನವಾಡಿ ಕೇಂದ್ರಗಳಲ್ಲಿ ಪ್ರೆಶರ್ ಕುಕ್ಕರ್ ಸೌಲಭ್ಯವಿದ್ದರಿಂದ ಗ್ಯಾಸ್ ಸ್ವಲ್ವ ದಿನ ಹೆಚ್ಚು ಬಳಕೆ ಮಾಡಬಹುದಾಗಿದೆ. ಶಿಕ್ಷಕಿಯರ ಸತತ ಹೋರಾಟದ ಬಳಿಕ ಆಗಸ್ಟ್ ತಿಂಗಳಿನಿಂದ ೩ ತಿಂಗಳಿಗೆ ರೂ.೨೦೦ ಜಾಸ್ತಿ ಮಾಡಿದ್ದು, ವರ್ಷಕ್ಕೆ ರೂ.೮೦೦ ಹೆಚ್ಚಳವಾಗಿ ಉರುವಲು ವೆಚ್ಚ ವರ್ಷಕ್ಕೆ ರೂ. ೨೦೦೦ ಸಿಗುತ್ತಿದೆ. ಇದರಿಂದ ಸ್ವಲ್ಪ ಸುಧಾರಿಸಿ ಕೊಳ್ಳುವುದರಲ್ಲಿ ಕೇಂದ್ರದ ಬೇಲೆಯೇರಿಕೆಯಿಂದಾಗಿ ಪ್ರತಿ ಗ್ಯಾಸ್‌ಗೆ ರೂ.೧,೧೫೦ ನೀಡಿ ಖರೀದಿಸುವುದು ಮಾತ್ರವಲ್ಲ, ಸಿಲಿಂಡರ್‌ನ ಸಾಗಾಟ ವೆಚ್ಚ ಭರಿಸಬೇಕಿದೆ. ನಗರ ಪ್ರದೇಶದಲ್ಲಿ ಸಾಗಾಟ ವೆಚ್ಚ ಸ್ವಲ್ಪ ಕಡಿಮೆಯಾಗಿದ್ದು, ಗ್ರಾಮೀಣ ಪರಿಸರದಲ್ಲಿ ವೆಚ್ಚ ವಿಪರೀತವಾಗಿದೆ. ಸರಕಾರದಿಂದ ಉರುವಲು ವೆಚ್ಚವಾಗಿ ರೂ. ೨,೦೦೦ ಮಾತ್ರ ಸಿಗುತ್ತಿದ್ದು, ಒಂದು ಅಂಗನವಾಡಿಯಲ್ಲಿ ೩೦ ರಂತೆ ಮಕ್ಕಳ ಸಂಖ್ಯೆಯನ್ನಾದರಿಸಿ ಕನಿಷ್ಟ ೫ ಸಿಲಿಂಡರ್‌ನ ಅವಶ್ಯಕತೆಯಿದೆ. ಗ್ಯಾಸ್ ಸಿಲಿಂಡರ್‌ಗೆ ರೂ.೧,೧೫೦ರಂತೆ ೫ ಸಿಲಿಂಡರ್‌ಗೆ ರೂ.೫,೭೫೦ ಆಗುತ್ತಿದ್ದು ಸರಕಾರದಿಂದ ಸಿಗುವ ಉರುವಲು ವೆಚ್ಚ ಕೇವಲ ರೂ.೨೦೦೦ವಾಗಿದೆ. ಉಳಿದಂತೆ ೩,೭೫೦ನ್ನು ಶಿಕ್ಷಕಿಯರು ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಯಾವುದೇ ಅಧಿಕಾರಿಗಳು ಕೇಳುತ್ತಿಲ್ಲ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಾರ್ಚ್ ತಿಂಗಳಿನಿಂದ ಅಂಗನವಾಡಿ ಶಿಕ್ಷಕಿಯರ ಅಹವಾಲು ಸ್ವೀಕರಿಸದಿರುವುದು ಮಕ್ಕಳ ಹಾಗೂ ಅಂಗನವಾಡಿಯ ಕುರಿತಾಗಿರುವ ಕಾಳಜಿ ಸೂಚಿಸುತ್ತದೆ.
ಅಂಗನವಾಡಿ ಕೇಂದ್ರಗಳ ಅನ್ಯವೆಚ್ಚ:
ಜಿಲ್ಲೆಯಲ್ಲಿರುವ ಕೆಲವೊಂದು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲದೇ ಕ್ಲಬ್, ಸಂಘಸಂಸ್ಥೆಗಳಲ್ಲಿ ನಡೆಸಲಾಗುತ್ತಿದೆ. ಕ್ಲಬ್‌ಗಳಲ್ಲಿ ನಡೆಸುವ ಅಂಗನವಾಡಿ ಕೇಂದ್ರದ ಕರೆಂಟ್ ಬಿಲ್‌ಗಳನ್ನು ಅವರು ತುಂಬಿಸಿಕೊಂಡು ಹೋಗುತ್ತಿದ್ದು, ಇತರೆಡೆಯಲ್ಲಿ ಶಿಕ್ಷಕಿಯರು ಭರಿಸಬೇಕಾದ ದುಸ್ಥಿತಿಯಿದೆ. ಅಲ್ಲದೆ ಸಿಲಿಂಡರ್ ಸಾಗಾಟದ ವೆಚ್ಚವನ್ನು ನೀಡಬೇಕಿದೆ. ಸರಕಾರ ಗಂಜಿ-ಚಟ್ನಿ ವ್ಯವಸ್ಥೆ ಮಾಡಿದ್ದರೂ ತೆಂಗಿನ ಕಾಯಿ ನೀಡುವುದಿಲ್ಲ. ಅದನ್ನು ಕೆಲವೊಮ್ಮೆ ನಿಭಾಯಿಸಬೇಕು. ಚಟ್ನಿ ರುಬ್ಬಲು ಸರಿಯಾದ ವ್ಯವಸ್ಥೆಯಿಲ್ಲ. ಕೇಂದ್ರ ಸರಕಾರದಿಂದ ರೂ. ೩೦೦೦ಹಾಗೂ ರಾಜ್ಯ ಸರಕಾರದಿಂದ ರೂ.೧೫೦೦ ಗೌರವಧನ ಪಡೆಯುವ ನಾವು ರೂ.೩೭೫೦ ಮತ್ತು ಇತರ ವೆಚ್ಚವನ್ನು ಭರಿಸಿದರೆ ನಮ್ಮ ಸಂಸಾರ ಗತಿಯೇನು? ಎನ್ನುವ ಪ್ರಶ್ನೆ ರಾಜ್ಯದ ಎಲ್ಲಾ ಅಂಗನವಾಡಿ ಶಿಕ್ಷಕಿಯರದಾಗಿದೆ. ಇದಕ್ಕೆ ಅಧಿಕಾರಿಗಳು ಹಾಗೂ ಸರಕಾರ ಉತ್ತರ ನೀಡಬೇಕಿದೆ. ಅಧಿಕಾರಿಗಳು ಈ ಸಮಸ್ಯೆ ಬಗೆ ಹರಿಸಿದರೆ ಮಾತ್ರ ಅಂಗನವಾಡಿಗಳಲ್ಲಿ ಚಿಕ್ಕ-ಚಿಕ್ಕ ಮಕ್ಕಳ ತೊದಲು ನುಡಿಗಳು ಪುನಃ ಕೇಳುವಂತಾಗುತ್ತದೆ.
ಬಾಕ್ಸ್:
ಗ್ಯಾಸ್ ಬೆಲೆಯೇರಿಕೆಯಿಂದ ರಾಜ್ಯದ ಎಲ್ಲಾ ಅಂಗನವಾಡಿಯಲ್ಲೂ ಕೊರತೆ ಕಾಣಿಸಿದೆ. ಕಡ್ಲೆಕಾಳನ್ನು ಬೇಯಿಸದೆ ಮಕ್ಕಳಿಗೆ ನೀಡಲು ಸಾಧ್ಯವಿಲ್ಲ. ಸರಕಾರವು ಸಂಜೆಯವರೆಗೆ ಅಂಗನವಾಡಿಯಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವಂತೆ ಆದೇಶ ಹೊರಡಿಸಿದ್ದರೂ ಯಾವುದೇ ಸೌಕರ್ಯ ಒದಗಿಸಿಲ್ಲ. ಕೆಲವು ಕಡೆ ದಾನಿಗಳ ಸಹಕಾರದಿಂದ ಮಕ್ಕಳು ಮಲಗಲು ಚಾಪೆಯ ವ್ಯವಸ್ಥೆ ಮಾಡಿಕೊಂಡಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಮೂಲಭೂತ ಸೌಕರ್ಯ ಒದಗಿಸಲು ಗಮನ ಹರಿಸಬೇಕು.
ವಿಶಾಲಾಕ್ಷಿ-ಜಿಲ್ಲಾ ಕಾರ್ಯದರ್ಶಿ ಅಂಗನವಾಡಿ ಕಾರ್ಯಕರ್ತೆಯರ ಸಂಘ.
ಬಾಕ್ಸ್:
ದ.ಕ.ಜಿಲ್ಲೆಯಲ್ಲಿರುವ ಅಂಗನವಾಡಿಗಳು:
*ಮಂಗಳೂರು ನಗರ-೨೨೮
*ಗ್ರಾಮಾಂತರ -೪೮೦
*ಬೆಳ್ತಂಗಡಿ-೩೩೦
*ಪುತ್ತೂರು-೩೮೪
*ಸುಳ್ಯ-೧೬೫
* ಬಂಟ್ವಾಳ-೫೦೦ಕ್ಕೂ ಅಧಿಕ
No comments:
Post a Comment