Saturday 1 December 2012

ಪುರಾಣದ ಸತ್ವ ಸಾರುತ್ತಾ ಯಕ್ಷರಸಿಕರ ಮನಸ್ಸು ಸೂರೆಗೊಳ್ಳಲು ತಿರುಗಾಟಕ್ಕೆ ಸಿದ್ದಗೊಂಡಿವೆ-ಯಕ್ಷಗಾನ ಮೇಳಗಳು.
ಪತ್ತನಾಜೆ ಸಂದರ್ಭ ತಮ್ಮ ಬೆಚ್ಚನೆಯ ಗೂಡಿನೊಳಗೆ ಸೇರಿದ ಸಾಗರ ತೀರದ ಸಮೃದ್ದ ಕಲೆಯಾದ ಯಕ್ಷಗಾನ ಮೇಳಗಳಿಂದು ಗೂಡುಬಿಟ್ಟು ಹೊರಡುವ ಹಕ್ಕಿಯಂತೆ ನವೆಂಬರ್ ತಿಂಗಳಿಂದ ಮೊದಲ್ಗೊಂಡು ಕರಾವಳಿ, ಮಲೆನಾಡಿನಾದ್ಯಂತ ಸಂಚರಿಸಿ ಕಲಾರಸಿಕರ ಮನ ತಣಿಸಲು ಸಿದ್ದಗೊಂಡಿವೆ. ಕನ್ನಡದ ಕಂಪು, ಸಂಸ್ಕೃತದ ಇಂಪು, ಹಳೆಗನ್ನಡದ ಮಹಿಮೆಯನ್ನು ಬಿತ್ತರಿಸುವ ಯಕ್ಷಗಾನ ಡೇರೆ ಮತ್ತು ಹರಕೆ ಮೇಳಗಳು ಹೊಸ ಕಲಾವಿದರೊಂದಿಗೆ, ವಿವಿದ ರಂಗಸಜ್ಜಿಕೆಯೊಂದಿಗೆ ನಮ್ಮನ್ನು ಇದಿರುಗೊಳ್ಳುಲು ಕ್ಷಣಗಣನೆಯಲ್ಲಿವೆ.
ಯಕ್ಷಗಾನದ ಸೊಬಗೆ ಅಂಥದ್ದು..ನಿರರ್ಗಳ ಭಾಷೆಯಿಂದ ಪುರಾಣದ ಸಾರವನ್ನು ಮನಸ್ಸಿಗೆ ನಾಟುವಂತೆ ಮಾಡುವ ಕಲಾಮಾತೆಯ ಕುಸುಮಗಳ ಅವಿರತ ಸಾಧನೆ ರಂಗದಲ್ಲಿ ಮೇಳೈಸುತ್ತದೆ. ಹಿಂದೆ ಕೇವಲ ಗಂಡಸರಿಗೆ ಮಾತ್ರ ಸೀಮಿತವಾಗಿದ್ದ ಸಾಗರ ತೀರದ ಗಂಡುಕಲೆಯನ್ನು ಮಕ್ಕಳು, ಹೆಂಗಸರು ನಮ್ಮಲ್ಲಿಯೂ ಕೂಡ ಸಾಮರ್ಥ್ಯವಿದೆ ಎಂದು ಸಾಧಿಸಿ ತೋರಿಸಿದ್ದಾರೆ. ಯಕ್ಷಗಾನವೆನ್ನುವುದು ಹಿಂದೂ ಸಂಸ್ಕೃತಿಯ ಸಂಜೀವಿನಿ. ಇದು ಕರಾವಳಿಗೆ ಮಾತ್ರ ಸೀಮಿತವಾಗಿರದೆ, ಕನ್ನಡ ಸಂಸ್ಕೃತಿಯನ್ನು ದೇಶದ ಮೂಲೆಗಳಿಗೂ ಪಸರಿಸಿದ್ದು ಮಾತ್ರವಲ್ಲದೆ, ಅಮೇರಿಕಾದಲ್ಲಿ ೨೦೧೨ರಲ್ಲಿ ನಡೆದ ಅಕ್ಕಾ ಕನ್ನಡ ಸಮ್ಮೇಳನದಲ್ಲಿ ಯಕ್ಷಗಾನ ಪ್ರದರ್ಶನ ಮಾಡಿದ ಕೀರ್ತಿ. ಆದರೆ ಹವ್ಯಾಸಿಗಳಾಗಿ ಮಹಿಳೆಯರು ಯಕ್ಷಗಾನ ಕಲಿಯಬಹುದಾದರೂ ವೃತ್ತಿ ಯಕ್ಷಗಾನ ಮೇಳಗಳು ಮಾತ್ರ ಪುರುಷರಿಗೆ ಸೀಮಿತವಾಗಿದೆ.
ಯಕ್ಷಗಾನ ಮೇಳಕ್ಕೊಂದು ಹೆಸರು:
ತೆಂಕುತಿಟ್ಟು ಅಥವಾ ಬಡಗುತಿಟ್ಟು ಯಾವುದೆ ಮೇಳವಾದರೂ, ತಿರುಗಾಟ ಹೊರಡುವುದು ಮಾತ್ರ ದೇವರ ಹೆಸರಿನಲ್ಲಿಯೇ? ಕಲೆ ಕಾಸಿಗಾಗಿ, ಕಾಲಯಾಪನೆಗಾಗಿ ಎನ್ನುವ ಜನರಿಗೆ ಮುದ ನೀಡುವುದಕ್ಕಾಗಿ ಮುಂದಾದ ಡೇರೆ ಹಾಗೂ ಕಾಲಮಿತಿ ಮೇಳಗಳು ತಿರುಗಾಟ ನಡೆಸುವುದು ದೇವರ ಹೆಸರಿನಿಂದ ಮತ್ತು ದೇವಸ್ಥಾನದ ನಾಮಮುದ್ರೆಯಿಂದ. ಪ್ರತಿ ಮೇಳಗಳು ದೇವರ ಗುಡಿಯಿಂದಲೇ ಹೊರಟು, ಕೊನೆಗೆ ಬಂದು ಸೇರುವುದು ಅದೇ ಸುಂದರ ಭೂರಮೆಯ ಮಡಿಲಿಗೆ ಅಂದರೆ ಶ್ರೀ ಕ್ಷೇತ್ರಗಳಿಗೆ.
ಯಕ್ಷಗಾನದ ಮಹಿಮೆ:
ಎಷ್ಟೇ ಹಠಮಾರಿ ಗಂಡನಾದರೂ, ಹೆಂಡತಿಯ ಮಮತೆಯ ಮುಂದೆ ಮುಗುಳುನಗುವಿನ ಮುಗ್ದ  ಮಗುವಿನಂತಾಗುತ್ತಾನೆ. ಯಕ್ಷಗಾನದ ಅಭಿರುಚಿಯೇ ಅಂತದ್ದು, ಮನಸ್ಸಿನಲ್ಲಿ ಎಂತಹ ದುಗುಡ, ದುಮ್ಮಾನಗಳಿದ್ದರೂ ಕ್ಷಣಮಾತ್ರದಲ್ಲಿ ಪರಿಹರಿಸುವ ಸಾಧನ. ಯಕ್ಷಗಾನದ ಯಾವುದೇ ಮೇಳವಿದ್ದರೂ ಅವುಗಳು ಪ್ರಪಂಚದ ಅನುಭವದೊಂದಿಗೆ ಹಿಂದು ಸಂಸ್ಕೃತಿಯ ಸಾರವನ್ನು ಲೋಕಮುಖಕ್ಕೆ ಬಿತ್ತರಿಸುತ್ತಾ ಚಲಿಸುವ ವಿಶ್ವವಿದ್ಯಾಲಯದಂತೆ ಕಾರ್ಯ ನಿರ್ವಹಿಸುತ್ತದೆ. ಈಗಿನ ಯಾವುದೇ ಮಾದ್ಯಮಗಳಿಗಿಂತ ಮಿಗಿಲಾದ ಸಾಧನವೇ ಯಕ್ಷಗಾನ.
ಕಲಾವಿದರ ಬದುಕು:
ಕನ್ನಡದ ಕಂಪನ್ನು, ಸಂಸ್ಕೃತದ ಇಂಪನ್ನು , ಹಳೆಗನ್ನಡದ ಮಹಿಮೆಯನ್ನು ನಿರರ್ಗಳವಾದ ಮಾತುಗಳಿಂದ ಭಾಷೆಯ ಸಾರವನ್ನು ಮನಸ್ಸಿಗೆ ನಾಟುವಂತೆ ಮಾಡುವ ಕಲಾಮಾತೆಯ ಕುಸುಮಗಳು ತಮ್ಮ ತಿರುಗಾಟ ಮಾಡಿ, ಜಗತ್ತು ಮಲಗಿರುವಾಗ ಇವರ ಕಾಯಕ ಪ್ರಾರಂಭವಾಗುತ್ತದೆ. ಜನರೊಂದಿಗೆ ಬೆರೆಯುವ ಹಗಲಿನಲ್ಲಿ ನಿದ್ರಾದೇವಿಯ ಮಡಿಲಲ್ಲಿ ಪವಡಿಸುತ್ತಾರೆ. ಕಲಾಮಾತೆಯ ಸೇವೆಗೆ ತಮ್ಮ ಬದುಕನ್ನು ಮೀಸಲಿಟ್ಟು, ಅದರಲ್ಲೇ ತಮ್ಮ ಜೀವನದ ಗೋಪುರವನ್ನು ಕಟ್ಟುವಲ್ಲಿ ಯಶಸ್ಸು ಕಂಡ ಕಲಾವಿದರು ಅನೇಕ. ತಮ್ಮ ಜೀವನದಲ್ಲಿ ನೋವುಗಳನ್ನು ತುಂಬಿಕೊಂಡಿದ್ದರೂ ಅದನ್ನು ರಂಗದಲ್ಲಿ ತೋರಗೊಡದೆ, ಜೀವನಮೌಲ್ಯ, ನವರಸಾದಿಗಳನ್ನು ಮೇಳವಿಸಿ ಮಹಾನ್ ಪುರುಷರ ಜೀವನದೊಳಗೆ ಪರಾಕಾಯ ಪ್ರವೇಶ ಮಾಡಿ, ತಾನು ತಾನಾಗಿರದೆ, ಕಥಾವಸ್ತುವಿನ ಪ್ರಮುಖ ಪಾತ್ರವಾಗಿ, ಮನರಂಜನೆ ನೀಡುವಲ್ಲಿ ಸತತ ಪ್ರಯತ್ನ ಮಾಡುತ್ತಾನೆ.
ತೆಂಕು ತಿಟ್ಟಿನಲ್ಲಿ ಮರೆಯಾದ ಡೇರೆ ಮೇಳಗಳು:
ಧರ್ಮಸ್ಥಳ ಡೇರೆ ಮೇಳ ಮರೆಯಾಗಿ ಹರಕೆ ಮೇಳವಾಗಿದ್ದು, ಕೂಡ್ಲು, ಮೂಲ್ಕಿ, ಬಪ್ಪನಾಡು, ಪುತ್ತೂರು,  ಕದ್ರಿ, ಕುಂಬಳೆ, ಬೆಳ್ಮಣ್ಣ, ಅರುವ, ಕರ್ನಾಟಕ, ಇರಾ, ಸುರತ್ಕಲ್, ಮಂಗಳಾದೇವಿ ತೆಂಕುತಿಟ್ಟಿನ ಡೇರೆ ಮೇಳಗಳು ಕಾಲನ ಮರೆಗೆ ಸಂದಿವೆ. ಬಡಗು ತಿಟ್ಟಿನಲ್ಲಿ ಸಾಲಿಗ್ರಾಮ, ಪೆರ್ಡೂರು ಮೇಳವನ್ನು ಹೊರತು ಪಡಿಸಿ ಉಳಿದ ಮೇಳಗಳು ಹರಕೆ ಮೇಳವಾಗಿ ತಿರುಗಾಟಕ್ಕೆ ಸಜ್ಜಾಗಿವೆ. ಎಡನೀರು, ಹೊಸನಗರ ಕಾಲಮಿತಿಯಲ್ಲಿ ಪ್ರದರ್ಶನ ನೀಡುತ್ತಿದ್ದು, ಬಡಗು ತಿಟ್ಟಿನಲ್ಲಿ ಉಮೇಶ ಸುವರ್ಣ ನೇತೃತ್ವದ ಅತಿಥಿ ಕಲಾವಿದರನ್ನೊಳಗೊಂಡ ಯಕ್ಷಶ್ರೀ ಪ್ರವಾಸಿ ಮೇಳ ಹಂಗ್ಲೂರು ಎನ್ನುವ ನಾಮಾಂಕಿತದೊಂದಿಗೆ ೩ ಗಂಟೆಗಳ ಪ್ರದರ್ಶನ ನೀಡಲು ತಂಡವೊಂದು ಸಿದ್ದಗೊಂಡಿದೆ. ಪೆರ್ಡೂರು ಮೇಳದ ಪ್ರಖ್ಯಾತ ಭಾಗವತರಾದ ಸುಬ್ರಹ್ಮಣ್ಯ ದಾರೇಶ್ವರ ತಿರುಗಾಟಕ್ಕೆ ವಿದಾಯ ಹೇಳಿದ್ದು ಅತಿಥಿ ಭಾಗವತರಾಗಿ ಭಾಗವಹಿಸುವ ನಿರೀಕ್ಷೆಯಿದೆ. ತೆಂಕುತಿಟ್ಟಿನ ಪ್ರಖ್ಯಾತ ಪುಂಡುವೇಷಧಾರಿ ಪುತ್ತೂರು ಶ್ರೀಧರ ಭಂಡಾರಿ ಮಂಡಿನೋವಿನ ನಡುವೆಯು ತಿರುಗಾಟಕ್ಕೆ ಸಿದ್ದರಾಗಿದ್ದಾರೆ. ಬಡಗಿನ ಚೆಂಡೆವಾದಕ ರಾಮಭಂಡಾರಿ ಕರ್ಕಿ ಸೇರಿದಂತೆ ಅನೇಕ ಸಣ್ಣ ಕಲಾವಿದರು ಯಕ್ಷಗಾನ ತಿರುಗಾಟಕ್ಕೆ ವಿದಾಯ ಹೇಳಿದ್ದಾರೆ. ಕಳೆದ ವರ್ಷ ಬೇರೆ-ಬೇರೆ ಮೇಳದಲ್ಲಿ ಸಂಚಾರ ಮಾಡಿದ್ದ ಕಲಾವಿದರುಗಳು ನೂತನ ಮೇಳದಲ್ಲಿ ತಮ್ಮ ವೃತ್ತಿಜೀವನಕ್ಕೆ ಅಣಿಯಾಗಿದ್ದಾರೆ.
ಯಕ್ಷಗಾನದ ಸಾರ ಉಳಿಸುವಲ್ಲಿ ಯಜಮಾನರು ಹಾಗೂ ಪ್ರಸಂಗಕರ್ತರ ಕರ್ತವ್ಯ:
ಯಾವುದೇ ಹರಕೆ ಮೇಳ ಅಥವಾ ಡೇರೆ ಮೇಳಗಳಾದರೂ, ತಾವು ಮಾಡುತ್ತಿರುವುದು ಕಲಾಮಾತೆಯ ಸೇವೆ ಎನ್ನುವುದನ್ನು ಮನಗಾಣಬೇಕು. ಕಾಲಕ್ಕೆ ತಕ್ಕ ಬದಲಾವಣೆ ಸಹಜವಾಗಿರಬೇಕು. ಬದಲಾವಣೆಯೊಂದಿಗೆ ಆಧುನಿಕ ಜೀವನ ಮೌಲ್ಯಗಳು ಪ್ರಸಂಗದಲ್ಲಿ ಬಂದಾಗ ಸಾರ್ಥಕತೆ ಪಡೆಯುತ್ತದೆ. ಅಲ್ಲಿಯೂ ಕೂಡ ಎಚ್ಚರಿಕೆಯ ಅಗತ್ಯತೆಯಿದೆ. ಯಕ್ಷಗಾನಕ್ಕೆ ಅದರದೇ ಆದ ವೇಷಭೂಷಣ, ಸಂಪ್ರದಾಯದ ಕಟ್ಟುಪಾಡುಗಳಿವೆ. ಅದನ್ನು ಬಿಟ್ಟು ಆಧುನಿಕತೆಯಂತೆ ವೇಷಭೂಷಣಗಳನ್ನು ತಂದರೆ ಅಪಹಾಸ್ಯವಾಗುವುದರೊಂದಿಗೆ ವಾತಾವರಣವನ್ನು ಕೆಡಿಸುವ ಮತ್ತು ಪ್ರೇಕ್ಷಕನನ್ನು ತಪ್ಪು ದಾರಿಗೆಳೆಯುವ ಸಾದ್ಯತೆಗಳೆ ಹೆಚ್ಚು. ಕಾಲಕ್ಕೆ ತಕ್ಕಂತೆ ಎಂತಹ ಬದಲಾವಣೆಗಳಾದರೂ ಸಹ ಸಿದ್ದ ಶೈಲಿಗೆ ಹಾಗೂ ಅದರ ನಿಯಮಿತವಾದ ಚೌಕಟ್ಟಿಗೆ ಬದ್ದವಾಗಿರಬೇಕೆ ಹೊರತು ಅವುಗಳನ್ನು ಅತಿಕ್ರಮಿಸಿ ಅಲ್ಲ. ಯಕ್ಷಗಾನದ ಸಂಪ್ರದಾಯ, ರೀತಿ ನೀತಿ ನಿಯಮಗಳನ್ನು ಪಾಲಿಸಿ, ಬಾನಿನೆತ್ತರಕ್ಕೆ ಏರಿಸುವ ಗುರಿ ಪ್ರಸಂಗಕರ್ತರ ಮತ್ತು ಕಲಾವಿದರ ಧ್ಯೇಯವಾಗಬೇಕು ಎನ್ನುವ ಅಂಶವನ್ನು ಮನಗಾಣಬೇಕು. ಸಂಗತವಲ್ಲದ ಮೌಲ್ಯ ಕೈಬಿಟ್ಟು, ಸಂಗತವಾದ ಜೀವನಮೌಲ್ಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಂಡು ಯಕ್ಷಗಾನದ ಕಂಪನ್ನು ದಿಗಂತದೆಡೆಗೆ ಸಾಗಿಸುವಂತಾಗಲಿ ಈ ತಿರುಗಾಟ.
ಯಕ್ಷಗಾನದತ್ತ ಮಕ್ಕಳ ಆಸಕ್ತಿ ಕಡಿಮೆಯಾಗುತ್ತಿದೆ ಎನ್ನುವ ಚಿಂತೆ ಒಂದೆಡೆಯಾದರೆ ಯಕ್ಷಗಾನದ ಕುರಿತು ಆಸಕ್ತಿ ತಳೆದು ಹಲವಾರು ಮಕ್ಕಳು ಯಕ್ಷಗಾನದ  ಆಸಕ್ತಿ ತಳೆದು ಹೆಜ್ಜೆಯನ್ನು ಕಲಿಯುತ್ತಿದ್ದಾರೆ. ಅಲ್ಲದೇ ಯಕ್ಷಗಾನ ಅಕಾಡೆಮಿ ವತಿಯಿಂದ ಶಾಸ್ತ್ರೀಯ ಪಠ್ಯಕ್ರಮದ ಪುಸ್ತಕ ತಯಾರಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.
ಯಕ್ಷಗಾನಂ ಗೆಲ್ಗೆ
ಬಾಕ್ಸ್:
೨೦೧೨-೧೩ರಲ್ಲಿ ತಿರುಗಾಟಕ್ಕೆ ಸಿದ್ದಗೊಂಡ ವೃತ್ತಿ-ಮೇಳಗಳು:
ಬಡಗು ತಿಟ್ಟು:
ಮಂದಾರ್ತಿ ೫ಮೇಳ, ಮಾರಣಕಟ್ಟೆ (೨), ಮಡಾಮಕ್ಕಿ, ಹಾಲಾಡಿ, ಸೌಕೂರು, ಗೋಳಿಗರಡಿ, ಕಮಲಶಿಲೆ, ನೀಲಾವರ, ಆಜ್ರಿ ಚೋನಮನೆ, ಸಿಗಂದೂರು, ಅಮೃತೇಶ್ವರಿ, ಹಿರಿಯಡ್ಕ, ಗುತ್ಯಮ್ಮ ಬಯಲಾಟ ಮೇಳಗಳು. ಪೆರ್ಡೂರು, ಸಾಲಿಗ್ರಾಮ  (ಡೇರೆ ಮೇಳಗಳು).
ತೆಂಕುತಿಟ್ಟು:
ಧರ್ಮಸ್ಥಳ, ಕಟೀಲು (೫), ಹೊಸನಗರ, ಎಡನೀರು, ಬಪ್ಪನಾಡು, ಉಳ್ಳಾಲ, ತಳಕಲ, ಸುಂಕದಕಟ್ಟೆ, ಸಸಿಹಿತ್ಲು, ಕಾಸರಗೋಡಿನಲ್ಲಿರುವ ಮಲ್ಲ  ಮತ್ತು ಕೊಲ್ಲಂಗಾನ ಮೇಳ (ಬಯಲಾಟದ್ದು)





No comments:

Post a Comment