Tuesday, 15 May 2012












ಅಭಾವಿಪನ ವತಿಯಿಂದ ಸಾಕಾರಗೊಂಡ ಯುವವಿಜ್ಞಾನಿಗಳ ಪ್ರತಿಭಾ ಪ್ರದರ್ಶನ ಸೃಷ್ಟಿ-೨೦೧೨
-ಕೆ.ಎಸ್.ಶೆಟ್ಟಿ
 ಅತೀ ಕಡಿಮೆ ವೆಚ್ಚದಲ್ಲಿ ವಿನೂತನ ಮಾದರಿ, ರೈತಸ್ನೇಹಿ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಸೌರಶಕ್ತಿ ಮೂಲಕ ನವೀಕರಿಸಬಹುದಾದ ಇಂಧನ ಹಾಗೂ ಕೈಗಾರಿಕೆಗಳ ಅನುಪಯೋಗಿ ವಸ್ತುಗಳ ಪುನರ್ಬಳಕೆ ಮಾಡುವ ಸಾಧನಗಳನ್ನು ಪ್ರದರ್ಶಿಸುವ ಯುವವಿಜ್ಞಾನಿಗಳ  ಸೃಜನಶೀಲತೆ  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ವತಿಯಿಂದ ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ಏರ್ಪಡಿಸಿರುವ `ಸೃಷ್ಟಿ'ಯಲ್ಲಿ ಅನಾವರಣಗೊಂಡಿದೆ.
ಪ್ರಸಕ್ತ ವರ್ಷ ರಾಜ್ಯದ ವಿವಿಧ ತಾಂತ್ರಿಕ ಸಂಸ್ಥೆಗಳ ಒಟ್ಟು ೧೪೦೦ ವಿದ್ಯಾರ್ಥಿಗಳ ಪ್ರತಿಭೆಯಲ್ಲಿ ರೂಪುಗೊಂಡ ೨೬೦ ಮಾದರಿಗಳು ರೂಪುಗೊಂಡಿವೆ.  ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಯುದ್ದಭೂಮಿಗೆ ಸಾಧನವಾಗಬಲ್ಲ ಸಾಧನಗಳು ಪ್ರದರ್ಶನಲ್ಲಿವೆ. ಕರಾವಳಿ ಭಾಗದ ವಿದ್ಯಾರ್ಥಿಗಳು ಕೃಷಿ ಕ್ಷೇತ್ರಕ್ಕೆ ಪೂರಕವಾಗಿ ನಿರ್ಮಿಸಿದ ಪ್ರಾಜೆಕ್ಟ್‌ಗಳಾದರೆ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಕೃಷಿ ಕ್ಷೇತ್ರಕ್ಕೆ ಸಹಾಯವಾಗಬಲ್ಲ ಅಪರೂಪದ ಸಾಧನಗಳನ್ನು ಆವಿಷ್ಕರಿಸಿದ್ದಾರೆ. ಬೆಂಗಳೂರಿನ ವಿದ್ಯಾರ್ಥಿಗಳು ವಾಹನ ತಂತ್ರಜ್ಞಾನಕ್ಕೆ ಸಹಾಯಕವಾಗಬಲ್ಲ ಆವಿಷ್ಕಾರದಲ್ಲಿ ಸಾಧನೆ ಮಾಡಿದ್ದಾರೆ. ಬಹುತೇಕ ಮಾದರಿಗಳು ಅತೀ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿವೆ. ಅಂತಿಮ ವರ್ಷದ ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ರೂಪಿಸುವ ಪ್ರಾಜೆಕ್ಟ್‌ಗಳು, ಅಂತಿಮ ವರ್ಷವಲ್ಲದ ವಿದ್ಯಾರ್ಥಿಗಳು ಹವ್ಯಾಸಿಯಾಗಿ ನಿರ್ಮಿಸುವ ಪ್ರಾಜೆಕ್ಟ್‌ಗಳನ್ನು ಸೃಷ್ಟಿ-೨೦೧೨ರಲ್ಲಿ ಪ್ರದರ್ಶಿಸಿದ್ದಾರೆ. ೨೩ ಇಂಜಿನಿಯರಿಂಗ್ ಕಾಲೇಜ್‌ಗಳಿರುವ ಕರಾವಳಿಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸುವುದಕ್ಕೆ ಉತ್ತಮ ವೇದಿಕೆಯಾಗಿ ನಿರ್ಮಾಣವಾಗಿದೆ. ಕೇವಲ ಕರಾವಳಿಯ ವಿದ್ಯಾರ್ಥಿಗಳಲ್ಲದೆ ರಾಜ್ಯದ ವಿವಿದೆಡೆಯಿಂದ ಹಲವಾರು ವಿದ್ಯಾರ್ಥಿಗಳು ಮೂರು ದಿನಗಳ ಕಾಲ ತಮ್ಮ ಪ್ರತಿಭೆಯನ್ನು ಓರಣವಾಗಿ ವೀಕ್ಷಿಸಲು ಬಂದ ಪ್ರೇಕ್ಷಕರಿಗೆ ಅದರ ಮಾಹಿತಿಯನ್ನು ನೀಡುತ್ತಾ ಸಾಧನೆ ಮಾಡಿದ ವಿಜಯದ ನಗೆ ಪ್ರತಿಯೊಬ್ಬರ ಮುಖದಲ್ಲಿ ಮೂಡಿದೆ.
ಬಾಗಲಕೋಟೆಯ ಬಿವಿಸಿ  ಸಂಸ್ಥೆಯ ವಿದ್ಯಾರ್ಥಿಗಳು ಅತೀ ಹೆಚ್ಚಿನ ಮಾದರಿ ನಿರ್ಮಿಸಿ ಕೌಶಲ್ಯ ಮೆರೆದಿದ್ದಾರೆ. `ರೋಬೋಸ್ಟ್ ಇ -ಅಗ್ರಿ, ಸೋಲಾರ್ ಚಾಲಿತ ಸುಗರ್‌ಕೇನ್ ಕಟ್ಟರ್, ಧಾನ್ಯಗಳ ಹುಡಿಮಾಡುವ `ಅಕ್ಷಯ ಪಾತ್ರೆ', ಕೈಗಾರಿಕಾ ಕ್ಷೇತ್ರಕ್ಕೆ ಉಪಯೋಗಿಸುವ `ಒಮ್ನಿ ವೈರಸ್ ವೆಹಿಕಲ್' ಗಳ ಸಹಿತ ೨೫ ಕ್ಕೂ ಅಧಿಕ ಮಾದರಿಗಳನ್ನು ನಿರ್ಮಿಸಿ ಸಾಧನೆಯಲ್ಲಿ ಮುಂದಿದ್ದಾರೆ. ಅದೇ ಕಾಲೇಜಿನ ವಿದ್ಯಾರ್ಥಿಯೋರ್ವ ಈಗಾಗಲೇ ಲಿಮ್ಕಾ ದಾಖಲೆಗೆ ಸೇರ್ಪಡೆಗೊಂಡಿದ್ದು ಇದೀಗ ತಮ್ಮ ಸಂಸ್ಥೆಯ ಹೆಸರನ್ನು `ಸೃಷ್ಟಿ'ಯೊಂದಿಗೆ ಗುರುತಿಸಿಕೊಂಡು ತಮ್ಮ ಸಂಸ್ಥೆಯ ಪರಿಚಯ ಮಾಡಿಕೊಳ್ಳುವಾಗ  `ಸೃಷ್ಟಿ'ಯನ್ನು ಬೊಟ್ಟು ಮಾಡುತ್ತಾರೆ ಎಂದು ಸಂಘಟಕರೊರ್ವರು ನೆನಪಿಸಿಕೊಳ್ಳುತ್ತಾರೆ.
ಬೆಂಗಳೂರಿನ ಬಿವಿಜಿ ಸಂಸ್ಥೆಯಿಂದ ಯಾವುದೇ ರಸ್ತೆಯಲ್ಲಿ ಚಲಿಸಬಲ್ಲ ವಾಹನ, ದಾವಣಗೆರೆಯ ಬಾಪೂಜಿ ಸಂಸ್ಥೆಯ ಕ್ಯಾನ್ಸರ್ ರೋಗಕ್ಕೆ ಔಷಧಿ ತಯಾರಿಸುವ ತಂತ್ರಜ್ಞಾನ, ಸಹ್ಯಾದ್ರಿ ಕಾಲೇಜಿನ ಸಿಂಗಲ್ ಆರ್ಮ್‌ಡ್ ವಾಲ್‌ಪೈಂಟಿಂಗ್ ರೋಬೋ, ದೇಶದ ಭದ್ರತೆಗೆ ಉಪಯೋಗಿಸುವ ನೀರಿನಲ್ಲಿ ಚಲಿಸಿ ರೇಡಿಯೇಷನ್ ಮೂಲಕ ಶತ್ರುಗಳ ನಾಶಗೊಳಿಸುವ ಸಾಧನ, ನಿಟ್ಟೆ ಎನ್‌ಎಂಎಎಂಐಟಿ ವಿದ್ಯಾರ್ಥಿಗಳಿಂದ ಸ್ಟೂಡೆಂಟ್ ಸ್ಯಾಟಲೈಟ್ ಪ್ರಾಜೆಕ್ಟ್ ನಿರ್ಮಿಸಿದ್ದು ಅದಕ್ಕೆ ಇಸ್ರೋ ಸಹಕಾರ ನೀಡಿದ್ದು ಇಂತಹ ನೂರಾರು ಪ್ರಾಜೆಕ್ಟ್‌ಗಳು ಪ್ರದರ್ಶನದಲ್ಲಿದ್ದವು.
ವಿದ್ಯಾರ್ಥಿಗಳು ರೇಷ್ಮೆ ನೂಲು ಬಿಚ್ಚಣಿಕೆಯಲ್ಲಿ ಸಾಯುವ ಹುಳುಗಳನ್ನು ಒಣಗಿಸಿ ಅವುಗಳಿಂದ ಬಯೋಡೀಸೆಲ್ ಕಂಡುಹಿಡಿಯುವ ಮೂಲಕ ರೇಷ್ಮೆ ಬೆಳೆಗಾರರಿಗೆ ಹೊಸ ದಿಶೆ ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಇವರ ಪ್ರಯತ್ನ ಸಫಲವಾಗಿ ಅಳವಡಿಸಿಕೊಂಡರೆ ರಾಜ್ಯಕ್ಕೆ ಸಾವಿರಾರು ಕೋಟಿ ರೂ. ಹರಿದುಬರಲಿದೆಯಂತೆ. ೪ ಕೆಜಿ ಸತ್ತ ಹುಳುವಿನಿಂದ ೧.೫ ಲೀ. ಇಂಧನ ತಯಾರಿಸುವ ತಂತ್ರಗಾರಿಕೆಯದು. ಮಾತ್ರವಲ್ಲ ಅದರ ಹುಡಿಯಿಂದ ನಾಯಿ ಬಿಸ್ಕತ್‌ನಂತಹ ಪ್ರಾಣಿಗಳ ಆಹಾರ ತಯಾರಿಸಲು ಸಹಕಾರಿ ಎಂಬುದು ಅವರ ಅಂಬೋಣ.
-ಬಾಗಲಕೋಟೆ ಬಸವೇಶ್ವರ ತಾಂತ್ರಿಕ ಕಾಲೇಜು ವಿದ್ಯಾರ್ಥಿ ರಾಜೇಶ್ ಗುರಾಣಿ ನಿರ್ಮಿಸಿದ `ಒಮ್ನಿ ವೈರಸ್ ವೆಹಿಕಲ್' ಕೈಗಾರಿಕೆಗಳಿಗೆ ಉಪಯೋಗವಾಗುವ ಯೋಜನೆಯಾಗಿದೆ. ಕೈಗಾರಿಕೆಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಸ್ತುಗಳನ್ನು ಬಹುಸರಳ, ಅತೀ ಕಡಿಮೆ ಅವದಿಯಲ್ಲಿ ಕೊಂಡೊಯ್ಯಲು ಬಹಳ ಜನರು ಹಾಗೂ ತುಂಬಾ ಸಮಯ ವ್ಯಯವಾಗುತ್ತದೆ. ಕೈಗಾರಿಕೆ ಕ್ಷೇತ್ರದಲ್ಲಿ ವಸ್ತುಗಳನ್ನು ಕೊಂಡೊಯ್ಯಲು ಅನುಕೂಲವಾಗುವಂಥ ಯೋಜನೆಯ ಮಾದರಿಯನ್ನು ಕೇವಲ ರೂ.೫ ಸಾವಿರಕ್ಕೆ ಮಾಡಿದ್ದಾರೆ. ಸಾಮಾನ್ಯವಾಗಿ ಈ ಮಾದರಿಯಲ್ಲಿ ೫ ರಿಂದ ೧೦ ಕೆ.ಜಿ.ಯಷ್ಟು ಭಾರದ ವಸ್ತುಗಳನ್ನು ಸುಲಭವಾಗಿ ಸಾಗಿಸಬಹುದು. ಇದು ಸಂಪೂರ್ಣವಾಗಿ ವಿದ್ಯುತ್‌ದ್ದಿಕರಣವಾಗಿದೆ. ಈ ಯೋಜನೆಯ ಅಭಿವೃದ್ಧಿ ಪಡಿಸಿದ್ದೆ ಆದರೆ ಕೈಗಾರಿಕೆಗಳಿಗೆ ಅನೂಕೂಲವಾಗಲಿದೆ. ತಂಡದಲ್ಲಿ ಮಹಾಂತೇಶ, ಜಹೀರ್, ಅಜಯ್‌ಕುಮಾರ್ ಸಹಕರಿಸಿದ್ದಾರೆ.
-ನಿಟ್ಟೆ ಎನ್‌ಎಂಎಎಂಐಟಿನ ವಿದ್ಯಾರ್ಥಿಗಳು ದೇಗುಲ ದರ್ಶನವೆನ್ನುವ ವೆಬ್‌ಸೈಟ್‌ನ್ನು ಮೇ  ತಿಂಗಳ ಅಂತ್ಯದಲ್ಲಿ ಚಾಲನೆಗೊಳಿಸಲಿದ್ದಾರೆ. ಸೃಷ್ಟಿ ೨೦೧೨ರಲ್ಲಿ ಇವರು ಡಮ್ಮಿ ವೆಬ್‌ಸೈಟ್ ತಯಾರಿಸಿ ಕರ್ನಾಟಕದಲ್ಲಿರುವ ಎಲ್ಲಾ ದೇವಸ್ಥಾನಗಳ ಮಾಹಿತಿ, ರೂಟ್ ಮ್ಯಾಪ್, ಆನ್‌ಲೈನ್ ಪಂಚಾಂಗ, ಭವಿಷ್ಯ, ಇ-ಕಾಣಿಕೆ, ದೇಗುಲ ಚಿತ್ರಗಳ ವೀಕ್ಷಣೆ ವಿವಿಧ ಸೇವೆಗಳ ಮಾಹಿತಿಯನ್ನು ಕಲೆಹಾಕಿದ್ದಾರೆ. ಮೊಬೈಲ್ ಎಸ್‌ಎಂಎಸ್ ಹಾಗೂ ಇಮೈಲ್‌ಗಳ  ಮಾಹಿತಿಯನ್ನು ನೀಡಲಾರುವುದು. bಛಿಜ್ಠ್ಝZbZoeZZ.Zಟ್ಝZbಛಿಠಿಛ್ಚಿeoಟ್ಝ್ಠಠಿಜಿಟ್ಞ.ಟಞ ಲಾಗ್‌ಇನ್ ಆದರೆ ರಾಜ್ಯದಲ್ಲಿರುವ ದೇಗುಲಗಳ ಪಟ್ಟಿ ದೊರೆಯುತ್ತದೆ. ಆವಿಷ್ಕಾರ ಮಾಡಿದ ವಿದ್ಯಾರ್ಥಿಗಳು ಅಕ್ಷಯ್, ಕಾರ್ತಿಕ್, ಹರ್ಷಿತಾ, ಅರ್ಚನಾ.
-ಎಸ್‌ಡಿಎಂಜೆಸಿಇಸಿಯ ವಿದ್ಯಾರ್ಥಿಗಳಾದ ಫಾರುಖ್ ಪಾಶಾ ತಂಡದವರು ರೈತರಿಗೆ ಅನುಕೂಲವಾಗುವಂಥ ಹೊಸ ಪ್ರಾಜೆಕ್ಟ್ ರೂಪುಗೊಳಿಸಿರುವುದು ವಿಶೇಷವಾಗಿದೆ. ಸಾಮಾನ್ಯವಾಗಿ ರೈತರಿಗೆ ಬೆಳೆ ಬೆಳೆಯುವಾಗ ಮಣ್ಣಿಗೆ ಯಾವ ಗೊಬ್ಬರ ಎಷ್ಟು ಪ್ರಮಾಣದಲ್ಲಿ  ಬಳಸಬೇಕು ಎನ್ನುವ ಅಂಶ ತಿಳಿದಿರುವುದಿಲ್ಲ. ಅವರಿಗೆ ಬಳಸುವ ಪ್ರಮಾಣದ ಅರಿವಿಲ್ಲದೆ ಬಳಸುವುದರಿಂದ ಮಣ್ಣಿನ ಸಾರ ಕಡಿಮೆಯಾಗಿ ಬೆಳೆಯ ನಾಶವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಜೈನ್ ಕಾಲೇಜಿನ ವಿದ್ಯಾರ್ಥಿಗಳು ದೇಶದಲ್ಲಿರುವ ಕೃಷಿಕರ ಮಾಹಿತಿ ಸಂಗ್ರಹಿಸಿ ``ಸ್ಮಾರ್ಟ್ ಸೋಯಿಲ್ ಅನಾಲೈಜರ್" ತಂತ್ರಜ್ಞಾನ ಕಂಡುಹಿಡಿದಿದ್ದಾರೆ. ವಿವಿಧ ಬೆಳೆಗಳಿಗೆ ಬೇಕಾದ ರಸಗೊಬ್ಬರಗಳ ಬಳಕೆ ಯಾವ ಕಾಲಕ್ಕೆ ಯಾವ ರೀತಿ ಬಳಸಬೇಕು ಎನ್ನುವ ಅಂಶ ಸರ್ವೆ ಮಾಡಿ ಕ್ರೋಡಿಕರಿಸಲಾಗಿದೆ. ಉದಾ: ರಾಗಿ ಬೆಳೆಯಲು ಬೇಕಾದ ಅಂಶವನ್ನು ಎಷ್ಟು ಸಲ ಯಾವ ರೀತಿ ಕೊಡಬೇಕು ಎನ್ನುವುದನ್ನು ಸುಲಭವಾಗಿ ಮಾಹಿತಿ ನೀಡಲಾಗುವುದು. ಆಂಗ್ಲ ಭಾಷೆಯಲ್ಲಿರುವ ಈ ವ್ಯವಸ್ಥೆಯನ್ನು ಮುಂದಿನ ದಿನದಲ್ಲಿ ಸ್ಥಳೀಯ ರೈತರಿಗೆ ಅನೂಕೂಲವಾಗುವಂತೆ ಸ್ಥಳೀಯ ಭಾಷೆಯಲ್ಲಿ ಬಳಸಲಾಗುವುದು. ತಂಡದಲ್ಲಿ ಚೌರಾರೆಡ್ಡಿ ಪಿ.ಜಿ, ರಾಘವೇಂದ್ರ ಎಸ್.ಕೆಂಚಣ್ಣನವರ, ಸೋಮಶೇಖರಪ್ಪ ಆವಿಷ್ಕರಿಸಿದ್ದಾರೆ.
-ತುಮಕೂರಿನ ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ಭ್ರಷ್ಟಾಚಾರ ಹಾಗೂ ಸಮಾಜದಲ್ಲಿ ತೋರುತ್ತಿರುವ ಅಸಮಾನತೆ ತೊಲಗಿಸಲು ಕಂಡುಹಿಡಿದ ಇ-ರೇಶನ್ ಮೆಜರ್‌ಮೆಂಟ್ ಸಿಸ್ಟಮ್ ಎಲ್ಲರ ಗಮನವನ್ನು ಅತ್ತ ಕಡೆ ಸೆಳೆಯುತ್ತಿದೆ. ನ್ಯಾಯ ಬೆಲೆ ಅಂಗಡಿಗಳಲ್ಲಿ ಕಂಡುಬರುವ ದೌರ್ಜನ್ಯ ತಡೆಗಟ್ಟಲು ಈ ಯೋಜನೆ ಪ್ರಯೋಜನಕಾರಿಯಾಗಲಿದೆ. ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ಗಳಿಗೆ ನ್ಯಾಯಬೆಲೆ ಅಂಗಡಿಯಲ್ಲಿ ನೀಡುವ ಗೋಧಿ, ಅಕ್ಕಿ ಹಾಗೂ ಎಣ್ಣೆಯ ತಾರತಮ್ಯ ನೋಡಿದ ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಹೊಸದೊಂದು ಆವಿಷ್ಕಾರ ಸೃಷ್ಟಿಸಿದ್ದಾರೆ. ಕುಟುಂಬದ ಎಲ್ಲಾ ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ಕ್ರೋಡಿಕರಿಸಿ,ಎಟಿಎಂ ಕಾರ್ಡ್‌ನಂತಿರುವ ಕಾರ್ಡ್‌ನ್ನು ನೀಡಿ ಅದನ್ನು ಸ್ವೈಫ್ ಮಾಡುವುದರಿಂದ ಅಸಮಾನತೆಯ ತಡೆಗಟ್ಟಬಹುದು. ಪ್ರತಿಯೊಂದು ಕಾರ್ಡ್‌ಗೂ ಪ್ರತ್ಯೇಕವಾದ ಪಾಸ್‌ವರ್ಡ್ ನೀಡಲಾಗಿದ್ದು, ತಿಂಗಳಿಗೆ ಒಮ್ಮೆ ಮಾತ್ರ ಪಡೆಯಲಾಗುವ ಹಾಗೂ ಮೋಸದಿಂದ ತೆಗೆಯಲು ವರ್ತಿಸಿದಾಗ ಮಾಹಿತಿಯನ್ನು ನೀಡುವ ಹಾಗೂ ಪ್ರತಿಯೊಂದು ವಸ್ತುವನ್ನು ತೆಗೆದಾಗ ಎಸ್‌ಎಂಎಸ್ ಮೂಲಕ  ಮಾಹಿತಿ ನೀಡುವ ಯಂತ್ರ ಕೆಎಸ್‌ಸಿಎಸ್‌ಟಿಯೊಂದಿಗೆ ಸಹಕಾರವಿರಿಸಿದೆ. ೨೪*೭ ಮಾದರಿಯಲ್ಲಿ  ವಿಲೇವಾರಿ ಮಾಡುವ ಈ ಯಂತ್ರದಿಂದ ಭ್ರಷ್ಟಾಚಾರ ದೂರಮಾಡಬಹುದು. ತಂಡದಲ್ಲಿ ರಘುನಾಥ್, ಅಶೋಕ್‌ಕುಮಾರ್, ಪ್ರದೀಪ ಕುಮಾರ್, ದನ್ಯಕುಮಾರ್ ಶ್ರಮ ಎರಕವಾಗಿದೆ.
-ಯುಬಿಡಿಟಿ ದಾವಣಗೆರೆಯ ವಿದ್ಯಾರ್ಥಿಗಳು ಆವಿಷ್ಕಾರ ಮಾಡಿದ ಆಪ್ಟಿಮಮ್ ಸ್ಪೀಡ್ ಡಿಸ್ಚಾರ್ಜ್ ಟಾಯ್ಲೇಟ್ ಸಿಸ್ಟಮ್‌ನ್ನು ರೈಲ್ವೆಯಲ್ಲಿ ಬಳಕೆ ಮಾಡಿದರೆ ರೈಲ್ವೆ ಕೇಂದ್ರದಲ್ಲಿರುವ ಈಗಿನ ಅವ್ಯವಸ್ಥೆ  ಸರಿಪಡಿಸಬಹುದಾಗಿದೆ. ಈ ಯಂತ್ರವನ್ನು ರೈಲ್ವೇಯಲ್ಲಿರುವ  ಟಾಯ್ಲೇಟ್‌ಗೆ ಫಿಕ್ಸ್ ಮಾಡಿಕೊಂಡು ರೈಲು ೪೦ ಕಿ.ಮೀ.ವೇಗದಲ್ಲಿ ಇಲ್ಲಿಯ ಕಂಟೈನರ್ ತನ್ನಷ್ಟಕ್ಕೆ ಬಂದ್ ಆಗುವುದರಿಂದ ಮಲವಿಸರ್ಜನೆಯು ರೈಲ್ವೆ ಟ್ರ್ಯಾಕ್‌ನಲ್ಲಿ ಬೀಳುವುದನ್ನು ತಡೆಗಟ್ಟಬಹುದು. ವೇಗ ೪೦ ಕಿ.ಮಿ.ಗಿಂತ ಜಾಸ್ತಿಯಾದಾಗ ಓಪನ್ ಆಗುತ್ತದೆ. ಸಾಮಾನ್ಯವಾಗಿ ರೈಲ್ವೆ ಸ್ಟೇಷನ್ ಹಾಗೂ ಹಳ್ಳಿಯ ಪ್ರದೇಶದಲ್ಲಿ ರೈಲಿನ ವೇಗವು ಕಡಿಮೆ ಇರುವುದರಿಂದ ಕಂಟೈನರ್ ಮುಚ್ಚುತ್ತದೆ. ಇದರಿಂದ ರೈಲ್ವೆ ಕೇಂದ್ರದಲ್ಲಿ ಮಲವಿಸರ್ಜನೆ ಮಾಡಿದರೂ ಟ್ರ್ಯಾಕ್‌ನ ಮೇಲೆ ಬೀಳುವುದನ್ನು ತಪ್ಪಿಸಬಹುದು.ಇದು  ಸುನೀಲ್, ಪ್ರಶಾಂತ ಪಿ, ಪ್ರಶಾಂತ ಕುಮಾರ್, ಸಂತೋಷ್ ತಯಾರಿಸಿದ ಯೋಜನೆಯಾಗಿದೆ.
ಸೃಷ್ಟಿಯಿಂದ ಲಿಮ್ಕಾ ದಾಖಲೆ:
ಬಾಗಲಕೋಟೆಯ ನಿವಾಸಿ ನವೀನ್ ರಾಘವೇಂದ್ರ ಶಿರೂರು ಸಂಶೋಧಿಸಿದ `ಸ್ಮಾಲೇಸ್ಟ್ ಆರ್‌ಎಫ್ ರಿಮೋಟ್ ಕಂಟ್ರೋಲ್ಡ್ ಸರ್ವೈವಲೆನ್ಸ್ ರೋಬೋಟ್' ೧೩ ಮಾರ್ಚ್ ೨೦೧೨ಗೆ ಲಿಮ್ಕಾ ದಾಖಲೆಯಾಗಿದೆ.  ಎಪ್ರಿಲ್ ೧೭ ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಆಗಿದೆ. ಇವರ ಈ ಪ್ರಾಜೆಕ್ಟ್ ೬೧*೫೪*೫೧ ಮಿ.ಮಿ ಗಾತ್ರವನ್ನು ಹೊಂದಿದೆ. ರೋಬೋಟ್ ಸರ್ವೇಕ್ಷಣೆ ಮತ್ತು ಆತ್ನಾಹುತಿಯಾಗಿದ್ದು ಮಿಲಿಟರಿಯಲ್ಲಿ ಉಪಯೋಗಿಸಲು ಸೂಕ್ತವಾಗಿದೆ.  ಕ್ಯಾಮರಾ, ಆಡಿಯೋ ಮತ್ತು ವೀಡಿಯೋ ಗಳನ್ನು ಒಳಗೊಂಡು ರಿಮೋಟ್‌ನಿಂದ ನಿಯಂತ್ರಣ ಮಾಡುವುದಾಗಿದೆ. ರೋಬೋಟ್ ನೆಲದ ಸಂಪರ್ಕದಿಂದ ಮೇಲೆ ಹೋದಾಗ ಗುರುತ್ವಾಕರ್ಷಣಾ ಶಕ್ತಿ ಕಡಿಮೆಯಾಗಿ ಸಿಡಿಯುತ್ತದೆ. ಇದು ಸೈನ್ಯದಲ್ಲಿ ಶತ್ರುಗಳ ಮೇಲೆ ಧಾಳಿ ನಡೆಸಲು ಬಹು ಅನೂಕೂಲವಾಗಿದೆ. ಭಾರತೀಯ ಸೈನ್ಯದ ಡಿಜಿಎಂ ರಮೇಶ್ ಹಲಗಲಿ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೈನ್ಯದಲ್ಲಿ ಬಳಸಲು ಯೋಗ್ಯವಾಗಿದೆ. ಇಂತಹ ಯೋಜನೆಗಳು ಸೈನ್ಯದಲ್ಲಿ ಅವಶ್ಯಕತೆಯಿದೆ ಎಂದಿದ್ದಾರೆ. ಭಾರತೀಯ ಸೈನ್ಯ ತಂತ್ರಜ್ಞಾನಧಾರಿತ ವ್ಯವಸ್ಥೆಯಲ್ಲಿ ಬಹಳ ಹಿಂದಿದ್ದು ಮುಂದಿನ ದಿನದಲ್ಲಿ ಇಂತಹ ಯೋಜನೆಗಳ ಆವಿಷ್ಕಾರದಿಂದ ಸುದೃಡ ಮಾಡುವ ಗುರಿಯನ್ನು ಹೊಂದಿದ್ದೇನೆ ಎನ್ನುವುದು ನವೀನ್ ಅವರ ಅಭಿಪ್ರಾಯವಾಗಿದೆ. ಇವರು ಬಾಗಲಕೋಟೆಯ ರಾಘವೇಂದ್ರ ಶಿರೂರು ಮತ್ತು ಅರ್ಚನಾ ಶಿರೂರವರ ಪುತ್ರರಾಗಿದ್ದಾರೆ.
ಸೃಷ್ಟಿ ಯ ಉದ್ದೇಶ ?
ಪ್ರತೀ ವರ್ಷ ವಿದ್ಯಾರ್ಥಿಗಳು ಪ್ರೊಜೆಕ್ಟ್, ರಿಪೋರ್ಟ್‌ಗಾಗಿ ಶ್ರಮಪಡುತ್ತಾರೆ. ಉಪನ್ಯಾಸಕರು ಶ್ರಮವಹಿಸುತ್ತಾರೆ. ಅದಕ್ಕಾಗಿ ಸಮಯ, ಕೌಶಲ್ಯ,ಪ್ರತಿಭೆಗಳನ್ನು ಸುರಿದು ತಯಾರಿಸಿದ ಮಾದರಿಗಳು ಮತ್ತೆ ಕಸದ ತೊಟ್ಟಿಯಾಗುತ್ತಿವೆ. ಆದರೆ ಅವು ಸಮಾಜಮುಖಿಯಾಗಿ ದೇಶದ ಅಭಿವೃದ್ಧಿಗೆ ಉಪಯೋಗಿಸುವಲ್ಲಿ ನಾವು ಎಡವುತ್ತಿದ್ದೆವು. ಅದಕ್ಕೊಂದು ಪರಿಹಾರ ಅಗತ್ಯವಿತ್ತು. ಅದಕ್ಕಾಗಿ ತಾಂತ್ರಿಕ ಕೌಶಲ್ಯಗಳ ಪ್ರದರ್ಶನದೊಂದಿಗೆ ಭಾಗವಹಿಸುವ ವಿದ್ಯಾರ್ಥಿಗಳಿಗೆ ಹಿರಿಯ, ಪ್ರತಿಷ್ಠಿತ ಸಂಸ್ಥೆಗಳ ಪ್ರಮುಖರ ಅನುಭವ, ಮಾರ್ಗದರ್ಶನ ನೀಡುವ ಮೂಲಕ ಇನ್ನಷ್ಟು ಪ್ರೇರಣೆ ನೀಡುವುದು. ಪ್ರತಿವರ್ಷ ರೂಪುಗೊಳ್ಳುವ ಮಾದರಿಗಳನ್ನು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ವೇದಿಕೆ ನಿರ್ಮಿಸಿ ಅಭಿವೃದ್ಧಿಯ ಬಗ್ಗೆ ಪರಿಕಲ್ಪನೆ ಮೂಡಿಸುವುದೇ ` ಸೃಷ್ಟಿ'ಯ ಗುಟ್ಟು. ಆ ಮೂಲಕ ಇಲ್ಲಿನ ಪ್ರತಿಭೆಗಳಿಗೆ ಇಲ್ಲಿಯೆ ಅವಕಾಶ ಒದಗಿಸಿ  ವಿದೇಶಗಳತ್ತ ಮುಖಮಾಡುವ ಯುವಸಮೂಹದ `ಪ್ರತಿಭಾ ಪಲಾಯನಕ್ಕೆ' ತಡೆಯೊಡ್ಡುವ ಗುರಿಯನ್ನಿಟ್ಟು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ `ಡಿಪೆಕ್ಸ್' ಆಯೋಜಿಸುತ್ತಿದ್ದು ಇದರಿಂದ ಪ್ರೇರಣೆ ಪಡೆದು ಅಭಾವಿಪ ಮೂಲಕ ಕರ್ನಾಟಕದಲ್ಲಿ `ಸೃಷ್ಟಿ' ಹುಟ್ಟು ಹಾಕಲಾಗಿದೆ. ಕರ್ನಾಟಕದಲ್ಲಿ ಯಶಸ್ಸನ್ನು ಕಂಡು ಇದೀಗ ಆಂದ್ರಪ್ರದೇಶದಲ್ಲಿ ತಾಂತ್ರಿಕ ಕೌಶಲ್ಯ ಪ್ರದರ್ಶನ `ಸೃಜನ್' ಆರಂಭಗೊಂಡಿದೆ. ಈಗಾಗಲೇ ೯ ವರ್ಷಗಳ ನಿರಂತರ `ಕೌಶಲ್ಯ ಪ್ರದರ್ಶನ' ಹಮ್ಮಿಕೊಳ್ಳುವ ಮೂಲಕ  ಗೆಲುವು ಸಾಧಿಸಿರುವ `ಸೃಷ್ಟಿ' ಯಶಸ್ಸಿನ ಎರಡನೇ ಹಂತದತ್ತ ಮುಖಮಾಡಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಪ್ರೆಸೆಂಟೆಶನ್ ಹಂತಕ್ಕೆ ತಲುಪಿದೆ. ಯಶಸ್ಸಿನ ಕೊನೆಯ ಮೆಟ್ಟಿಲಾಗಿ ಸಾಧನೆಯ ಬೆನ್ನೇರುವ ಛಲವಿಟ್ಟುಕೊಂಡಿರುವುದಾಗಿ `ಸೃಷ್ಟಿ'  ಆರಂಭಿಕ ಸಲಹೆಗಾರರಾಗಿರುವ ಐಟಿಐಇಯ ಸಂಜೀವ ಕುಲಕಡ್ಡಿ ಯಶಸ್ಸಿನ ಗುರಿಯನ್ನು ತೆರೆದಿಟ್ಟಿದ್ದಾರೆ.
ಸೃಷ್ಟಿ -೨೦೧೨ರ ವೈಶಿಷ್ಟ್ಯತೆ:
ಪ್ರತಿಷ್ಠಿತ ಕಾಲೇಜಿನ ಹಾಗೂ ಸಂಶೋಧನಾ ಕೇಂದ್ರದ ೭೦ ಜನ ತೀರ್ಪುಗಾರರು
 ೮ ಸೆಮಿನಾರ್‌ಗಳಲ್ಲಿ ೧ ಆವಿಷ್ಕಾರ ಹಾಗೂ ೭ ತಾಂತ್ರಿಕ ಸಂಶೋಧನಾ ಪ್ರಬಂಧ ಮಂಡನೆ
೨೧ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ, ೨೧ ತಾಂತ್ರಿಕ ಸಂಶೋಧನಾ ಪ್ರಬಂಧ ಮಂಡನೆಗೆ, ೨೧ ಆವಿಷ್ಕಾರ ಸಹಿತ ಒಟ್ಟು ೯೦ ಬಹುಮಾನಗಳ ಮೊತ್ತ ರೂ. ೩ ಲಕ್ಷ
ವಿವಿಧ ಪ್ರತಿಷ್ಠಿತ  ೭ ಕಂಪೆನಿಗಳು (ಟಿಸಿಐ, ಇನ್‌ಫೋ,ಐಟಿಐ, ಜ್ಯುಬಿಲಿಯೆಂಟ್, ಐಐಸಿ ಸಹಿತ)ಏಳು ಕಂಪೆನಿಗಳು ಭಾಗವಹಿಸಿದ್ದವು.
 (ಬಾಕ್ಸ್  ಮಾಡಿ:)
ಭಾವಿ ವಿಜ್ಞಾನಿಗಳ ತಯಾರಿ ಹಾಗೂ ಹೊಸ ಸಂಶೋಧನೆಗೆ ಪ್ರೇರಣೆ ನೀಡುವ ಕಾರ್ಯ ಸೃಷ್ಟಿಯಿಂದಾಗಿದೆ. ಅಂಕ ಹಾಗೂ ಪ್ರಾಜೆಕ್ಟ್‌ಗಳಿಗಾಗಿ ಮಾಡಿದ ಸಂಶೋಧನೆಗಳಾಗಿರದೆ ಅವುಗಳು ನಮ್ಮ ಮುಂದಿರುವ ಸಮಸ್ಯೆ ನಿವಾರಣೆ ಹಾಗೂ ಕೃಷಿ ಮತ್ತು ಸಾಂಪ್ರಾದಾಯಿಕ ಜನೋಪಯೋಗಿ ಸಂಶೋಧನೆಗಳಾಗಬೇಕಾಗಿದೆ. ಯುವಜನತೆ ವೃತ್ತಿ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಬಳುವಳಿಯಾಗಿ ಬಂದ ಜ್ಞಾನವನ್ನು ಜನತೆಗೆ ಲಾಭವಾಗುವ ನಿಟ್ಟಿನಲ್ಲಿ ಸಂಶೋಧನೆ ಮುಂದುವರಿಸುವ ಅಗತ್ಯತೆ ಇದೆ. ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗೆ ಮಾರ್ಗದರ್ಶನ ನೀಡುವ ವಿಭಾಗದೊಂದಿಗೆ ಸ್ವಾವಲಂಬನೆಯ  ಸಂಶೋಧನೆಗಳು ಸಾಮಾಜಿಕ ಸ್ಥರದಲ್ಲಿ ಲಾಭವಾಗುವಂತೆ ಕಾರ್ಯನಿರ್ವಹಿಸಬೇಕಾದ ಅವಶ್ಯಕತೆ ಇದೆ.
-ಎನ್.ಯೋಗೀಶ್ ಭಟ್ ವಿಧಾನ ಸಭಾ ಉಪಾಧ್ಯಕ್ಷ

ನಮ್ಮ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಜೊತೆಯಲ್ಲಿಯೆ ವ್ಯಕ್ತಿತ್ವ ವಿಕಸನ ಹಾಗೂ ಬೆಳವಣಿಗೆಯೊಂದಿಗೆ ತಾಂತ್ರಿಕ ಪ್ರತಿಭೆಗಳಿಗೆ ಅವಕಾಶ ನೀಡುವುದು. ಮನಸ್ಸಿನಲ್ಲಿ ವ್ಯಕ್ತವಾದ ಅಂಶಗಳನ್ನು ಪ್ರಾಜೆಕ್ಟ್‌ಗಳ ಮೂಲಕ ಸೃಷ್ಟಿಸಿದ  ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಎಬಿವಿಪಿಯ ಕಾರ್ಯಕ್ರಮ ಶ್ಲಾಘನೀಯ. ನಿರಂತರ ಕಾರ್ಯಕ್ರಮದ ಮೂಲಕ ವಿಶ್ವವಿದ್ಯಾಲಯ ಹಾಗೂ ಶೈಕ್ಷಣಿಕ ಸಂಶೋದನಾ ಚಟುವಟಿಕೆಗಳು ಸೃಷ್ಟಿಸಿದೆ. ಪಠ್ಯಕ್ಕೆ ಸೀಮಿತವಾದ ಅದ್ಬುತ ಸಂಗತಿಯನ್ನು ತಾಂತ್ರಿಕ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುವಲ್ಲಿ ಸಹಕಾರಿಯಾಗುವ ಕಾರ್ಯಕ್ರಮ.
-ಕ್ಯಾ.ಗಣೇಶ್ ಕಾರ್ಣಿಕ್

Saturday, 12 May 2012

ಯುವವಿಜ್ಞಾನಿಗಳ ಕೌಶಲ್ಯ ಪ್ರದರ್ಶನ ಹಾಗೂ ಸ್ಪರ್ಧೆಗೆ  ಕ್ಷಣಗಣನೆ:
ಸಂದೇಶ ಶೆಟ್ಟಿ ಆರ್ಡಿ
ವಿಜ್ಞಾನ ತಂತ್ರಜ್ಞಾನ ಕ್ಷೇತ್ರವು ನಾಗರೀಕತೆ ಹಾಗೂ ಸಂಸ್ಕೃತಿ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿ ವೈಜ್ಞಾನಿಕ ವೇಗ ಪಡೆಯಲು ಕಾರಣವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳು ಅಂಕಗಳಿಗಾಗಿ ಮಾಡುವ ಪ್ರಾಜೆಕ್ಟ್‌ಗಳು ಹಾಗೇ ಉಳಿಯದೆ ಅವರ ಪ್ರತಿಭೆ ಸಮಾಜಕ್ಕೆ ತೋರ್ಪಡಿಸಬೇಕು. ಅವು ಪ್ರಾಜೆಕ್ಟ್‌ಗಳಾಗಿ ಉಳಿಯದೆ ವಸ್ತುರೂಪದಲ್ಲಿ ಸಮಾಜದಲ್ಲಿ ಗುರುತಿಸುವಂತಾಗಬೇಕು ಎನ್ನುವ ಪರಿಕಲ್ಪನೆಯಿಟ್ಟು  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ೨೦೦೨ರಲ್ಲಿ ಸೃಷ್ಟಿಯನ್ನು ಪ್ರಾರಂಬಿಸಿದೆ. ಪ್ರತಿವರ್ಷ ತಾಂತ್ರಿಕ ವಿದ್ಯಾರ್ಥಿಗಳಿಂದ ೧೦ ಕೋ.ರೂ.ವೆಚ್ಚದಲ್ಲಿ ೧೫ ಸಾವಿರ ಪ್ರಾಜೆಕ್ಟ್ ರೂಪುಗೊಳ್ಳುತ್ತಿದೆ. ಅಂತಿಮ ವರ್ಷವಲ್ಲದ ವಿದ್ಯಾರ್ಥಿಗಳು ತಮ್ಮಲ್ಲಿರುವಂಥ ಪ್ರತಿಭಾಪ್ರದರ್ಶನ ಮಾಡಲು ಹವ್ಯಾಸಿಯಾಗಿಯೂ ಸಂಶೋಧನೆಯಲ್ಲಿ ತೊಡಗುತ್ತಾರೆ. ಕವಿಯೊಬ್ಬ ಕವಿತೆ ರಚಿಸಿದ್ದರೂ ಮಹತ್ವ ಪಡೆಯದೆ ಅದಕ್ಕೆ ಸೂಕ್ತ ವೇದಿಕೆ ನಿರ್ಮಾಣವಾಗಿ ತುಂಬಿದ ಸಭೆಯಲ್ಲಿ ವಾಚಿಸಿದಾಗ ಕೃತಿಗೆ ಮಹತ್ವದೊರೆಯುತ್ತದೆ. ವಿದ್ಯಾರ್ಥಿಗಳಲ್ಲಿರುವ ಸುಪ್ತಪ್ರತಿಭೆಯನ್ನು ಪ್ರದರ್ಶಿಸುವುದಕ್ಕಾಗಿ ಸೂಕ್ತ ವೇದಿಕೆಯ ನಿರ್ಮಾಣ ಎಬಿವಿಪಿಯಿಂದಾಗಿದೆ.
ಸೃಷ್ಟಿಯ ಮೂಲ ಎಬಿವಿಪಿ:
ಜಾಗತಿಕರಣದ ಸಂದರ್ಭದಲ್ಲಿ ವೃತ್ತಿಶಿಕ್ಷಣದ ಮೇಲೆ ಕವಿದಿರುವ ಕರಿನೆರಳಿನ ಪ್ರಸ್ತುತತೆಯನ್ನು ವಿಶ್ಲೇಷಿಸುವ ಚರ್ಚೆ ಅವಶ್ಯಕವೆನ್ನುವ ಅಂಶ ಹಾಗೂ ಉದ್ದಿಮೆ ಮತ್ತು ವೃತ್ತಿಪರ ಶಿಕ್ಷಣದ ನಡುವೆ ಪರಸ್ಪರ ಚರ್ಚೆಯ ಸೇತು ಸಂಬಂಧಕ್ಕೆ ಅನುಗುಣವಾದ ಬೇಡಿಕೆ ಮತ್ತು ಜವಾಬ್ದಾರಿ ನಿರ್ವಹಣೆಯ ಅಗತ್ಯತೆಯನ್ನು ಮನಗಂಡ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೈಗೊಂಡ ಕಾರ್ಯವೇ ಸೃಷ್ಟಿಯ ಹುಟ್ಟು. ಯುವ ವಿಜ್ಞಾನಿಗಳ ಮನೋಸ್ಥೈರ್ಯ ಹೆಚ್ಚಿಸಿ ವಿದ್ಯಾರ್ಥಿ ಮತ್ತು ಕೈಗಾರಿಕೆಗಳ ಮಧ್ಯೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ರಿಸರ್ಚ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಮಾಡಬೇಕಾಗಿದ್ದ ಕಾರ್ಯವನ್ನು ವಿದ್ಯಾರ್ಥಿ ಪರಿಷತ್ ಮಾಡುತ್ತಿದೆ. ಸೃಷ್ಟಿಯಲ್ಲಿ ಪ್ರತಿವರ್ಷ ಪ್ರದರ್ಶನಗೊಂಡ ಪ್ರಾಜೆಕ್ಟ್‌ಗಳು ದಾಖಲೆಗೊಂಡಿರುವುದರಿಂದ ನಕಲು ಮಾಡಲು ಅವಕಾಶವಿಲ್ಲ. ಕರ್ನಾಟಕ ಸರ್ಕಾರ, ತಾಂತ್ರಿಕ ಶಿಕ್ಷಣ ಇಲಾಖೆಯು ಇವರ ಕಾರ್ಯವನ್ನು ಶ್ಲಾಘಿಸಿ ಸಹ ಪ್ರಾಯೋಜಕರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಭಾರತೀಯ ಸೈನ್ಯದಲ್ಲಿ ಉಪಯೋಗಿಸುವ ಎಕ್ಸ್‌ಪ್ಲೋಸಿವ್ ಡಿಟೆಕ್ಟರ್, ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಉಪಯೋಗಿಸುವ ಟಿಕೆಟ್ ವೆಂಡಿಂಗ್ ಮಶೀನ್ ಇಂಥ ಹಲವಾರು ಪ್ರಾಜೆಕ್ಟ್‌ಗಳು ದಾಖಲೆಯಾಗಿವೆ.
ಸೃಷ್ಟಿಯ ಬೆಳೆದು ಬಂದ ಹಾದಿ:
೨೦೦೨ರಲ್ಲಿ ಬೆಳಗಾವಿಯ ಕರ್ನಾಟಕ ಲಿಂಗಾಯಿತ ಎಜುಕೇಶನ್ ಸೊಸೈಟಿಯಲ್ಲಿ ಪ್ರಾರಂಭವಾದ ಸೃಷ್ಟಿ ನಂತರದಲ್ಲಿ  ಪಿಇಎಸ್ ಇಂಜಿನಿಯರಿಂಗ್ ಬೆಂಗಳೂರು, ಶ್ರೀ ಜಯಚಾಮರಾಜೇಂದ್ರ ಕಾಲೇಜು ಮೈಸೂರು, ಬಿವಿಬಿ ಇಂಜಿನಿಯರಿಂಗ್ ಕಾಲೇಜು ಹುಬ್ಬಳ್ಳಿ, ಜಿ.ಎಂ.ಐ.ಟಿ. ದಾವಣಗೆರೆ, ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಬಾಗಲಕೋಟೆ, ಮಲ್ನಾಡ್ ಇಂಜಿನಿಯರಿಂಗ್ ಹಾಸನ, ಎಸ್‌ಎಸ್‌ಐಟಿ ತುಮಕೂರು ಹೀಗೆ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಗೊಂಡಿದೆ. ಇಂದು ನಗರದ ಹೊರವಲಯದ ಅಡ್ಯಾರಿನ ಇಂಜಿನಿರಿಂಗ್ ಕಾಲೇಜಿನಲ್ಲಿ ೩ ದಿನಗಳ ಸೃಷ್ಟಿಯ ೯ನೇ ಸರಣಿ ಕ್ಷಣಗಣನೆಯಲ್ಲಿದೆ.
ಮಹತ್ವದ ಸಾಧನೆ:
ವಿದ್ಯಾರ್ಥಿಗಳ ಮಹತ್ವದ ಸಂಶೋಧನೆಗಳು ಹಣಕಾಸಿನ ನೆರವಿಲ್ಲದೆ ಅಭಿವೃದ್ಧಿಯಾಗದೆ ಉಳಿಯುವುದನ್ನು ತಪ್ಪಿಸಲು ಎ.ಬಿ.ವಿ.ಪಿ.ನೇತೃತ್ವದಲ್ಲಿ ಭಾರತ ಸರಕಾರ ಮತ್ತು ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಸರ್ವಿಸ್ ಇನ್‌ಸ್ಟಿಟ್ಯೂಟ್ (ಎಸ್‌ಐಎಸ್‌ಐ), ನ್ಯಾಶನಲ್ ರಿಸರ್ಚ್ ಡೆವಲಪ್‌ಮೆಂಟ್ ಕೌನ್ಸಿಲ್ (ಎನ್‌ಆರ್‌ಡಿಸಿ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಬಿಲ್ಡಿಂಗ್ ಮೆಟಿರಿಯಲ್ಸ್ ಆಂಡ್ ಟೆಕ್ನಾಲಜಿ ಪ್ರೊಮೋಷನ್ ಕೌನ್ಸಿಲ್(ಬಿಎಂಟಿಸಿ) ಸಹಭಾಗಿತ್ವದಲ್ಲಿ ಸೃಷ್ಟಿ ಪ್ರೊಡಕ್ಟ್ ಡೆವಲಪ್‌ಮೆಂಟ್ ನೆಟ್‌ವರ್ಕ್ ಸಂಪರ್ಕ ಜಾಲ ರಚಿಸಲಾಗಿ ಈಗಾಗಲೇ ಕಾರ್ಯ ಪ್ರಾರಂಬಿಸಿದೆ. ಸೃಷ್ಟಿ ೨೦೦೫ರಲ್ಲಿ ಭಾಗವಹಿಸಿದ ಅತ್ಯುತ್ತಮ ೩೦ ಪ್ರಾಜೆಕ್ಟ್‌ಗಳನ್ನು ಎಸ್‌ಐಎಸ್‌ಐ ಹಾಗೂ ಡಿಎಸ್‌ಟಿ ಇಲಾಖೆಗಳು ಪರಿಗಣಿದ್ದು, ಅವರಿಗೆ ಮೂರು ತಿಂಗಳ ಮೌಲ್ಯವರ್ಧಿತ ತರಬೆತಿಗಾಗಿ ಆಹ್ವಾನಿಸಲಾಗಿದ್ದು, ಸುರತ್ಕಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ  ವ್ಯವಸ್ಥೆ ಮಾಡಲಾಗಿದೆ. ಜಾಲಕ್ಕೆ ಹೆಚ್ಚಿನ ಧೃಡತೆ ನೀಡಲು ೨೦೦೫ ಡಿ.೫ರಂದು ರಾಜ್ಯದ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಹಾಗೂ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳು ಒಂದು ಒಪ್ಪಂದಕ್ಕೆ ಸಹಿ ಹಾಕಿ ಇದಕ್ಕೆ ಅವಶ್ಯಕವಾದ ಹಣಕಾಸಿನ ನೆರವನ್ನು ಒದಗಿಸಿವೆ.
ಸೃಷ್ಟಿ-೨೦೧೨ರ ವಿಶೇಷ:
೨೩ ಇಂಜಿನಿಯರಿಂಗ್ ಕಾಲೇಜ್‌ಗಳಿರುವ ಕರಾವಳಿಯಲ್ಲಿ ಪ್ರಥಮ ಬಾರಿಗೆ ಸೃಷ್ಟಿ-೨೦೧೨ ನಗರದ ಹೊರವಲಯದಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ರಾಜ್ಯದ ೧೦೦ಕ್ಕೂ ಹೆಚ್ಚಿನ ಕಾಲೇಜಿನಿಂದ ೭೦೦ಕ್ಕೂ ಹೆಚ್ಚಿನ ಪ್ರಾಜೆಕ್ಟ್‌ಗಳು ಬಂದಿದ್ದು, ೨೫೦ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಗುವುದು. ೧೦೦ ಹವ್ಯಾಸಿಯಾಗಿಯೂ ಹಾಗು ೨೦೦ ಟೆಕ್ನಿಕಲ್ ಪೇಪರ್ ಪ್ರೆಸೆಂಟೆಶನ್ ೭ಗುಂಪುಗಳಲ್ಲಿ ವಿಂಗಡಿಸಲಾಗಿದೆ. ೩ಲಕ್ಷದ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕದೊಂದಿಗೆ ೯೦ಕ್ಕೂ ಹೆಚ್ಚು ಬಹುಮಾನವನ್ನು ನೀಡಲಾಗುವುದು. ಸಾಮಾಜಿಕ ಬದಲಾವಣೆ, ಕೃಷಿ ಸುಧಾರಣೆ, ಮೂಲವಿಜ್ಞಾನಕ್ಕೆ ಒತ್ತು ನೀಡುವ ದೃಷ್ಟಿಯಿಂದ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡಲಾಗಿದೆ. ಅಂಡರ್ ಸ್ಟ್ಯಾಂಡಿಂಗ್ ಇಂಡಿಯಾ ಎನ್ನುವ ವಿಷಯದಲ್ಲಿ ಶ್ರದ್ದಾಳು ರಾನಡೆ ಮೇ ೧೪ರಂದು ಹಾಗೂ ಔಷಧ ಮತ್ತು ವೈದ್ಯಕೀಯ ವಿಜ್ಞಾನದ ಸಬಲೀಕರಣ-ಅಭಿವೃದ್ಧಿಯ ದೃಷ್ಠಿ ಕುರಿತು ಪ್ರವೀಣ್ ಭಟ್ ಮೇ ೧೩ರಂದು ಉಪನ್ಯಾಸ ನೀಡಲಿದ್ದಾರೆ.
ಸೃಷ್ಟಿಯಿಂದಾಗಿ ಪ್ರತಿಭಾನ್ವಿತ ಯುವ ಮಸ್ತಿಷ್ಕದಿಂದ ಹೊಮ್ಮುವ ಪ್ರತಿಯೊಂದು ಪ್ರಕಲ್ಪಗಳ ಮಾದರಿಗೂ ಮಾನ್ಯತೆ ಸಿಗಲಿದೆ. ದೇಶದ ಜನಸಾಮಾನ್ಯನ ಅವಶ್ಯಕತೆಗಳಿಗೆ ಸ್ಪಂದಿಸುವ ಕೆಲಸವನ್ನು ತಾಂತ್ರಿಕ ವಿದ್ಯಾರ್ಥಿಗಳು ಮಾಡಬೇಕಾಗಿದೆ. ಹೊಸ ಆವಿಷ್ಕಾರವನ್ನು ತರುವುದರ ಜೊತೆಯಲ್ಲಿಯೇ ರಾಷ್ಟ್ರಭಕ್ತಿ, ಸಮಾಜಸೇವೆಯ ಚಿಂತನೆಗಳನ್ನು ಅಳವಡಿಕೊಳ್ಳುವ ಗುಣವನ್ನು ಯುವವಿಜ್ಞಾನಿಗಳು ಬೆಳೆಸಿಕೊಳ್ಳಬೇಕಾದ ಅವಶ್ಯಕತೆಯಿದೆ.


೬ ವರ್ಷಗಳಿಂದ ಸೃಷ್ಟಿಯ ಕಾರ್ಯದಲ್ಲಿ ಪಾಲ್ಗೊಂಡಿದ್ದೇನೆ. ವಿದ್ಯಾರ್ಥಿ ಸಂಘಟನೆಗಾಗಿ ವಿದ್ಯಾರ್ಥಿಗಳ ಕೌಶಲ್ಯ ಗುರುತಿಸುವ ಜೊತೆಗೆ ಸಮಾಜದ ಅವಶ್ಯಕತೆಗಳ ಪೂರೈಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಪರಿಷತ್‌ನ ಈ ಕಾರ್ಯ ಉತ್ಕೃಷ್ಟವಾಗಿದೆ. ವಿದ್ಯಾರ್ಥಿಗಳು ಕೇವಲ ಅಂಕಗಳಿಸುವ ಯಂತ್ರಗಳಾಗದೇ ಸಮಾಜವನ್ನು ಮುನ್ನಡೆಸುವ ನಿಟ್ಟಿನಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಕ್ರಿಯಾಶೀಲರಾದಾಗ, ಇವತ್ತಿನ ನಿರುದ್ಯೋಗ, ಭ್ರಷ್ಟಾಚಾರದಂತ ಸಾಮಾಜಿಕ ಸಮಸ್ಯೆಗಳ ನಿವಾರಣೆ ಜೊತೆಯಲ್ಲಿ ಹಲವಾರು
ಶಿಕ್ಷಣದೊಂದಿಗೆ  ಕೈಗಳಿಗೆ ಕೆಲಸ ನೀಡಬಹುದಾದ ಮಹತ್ ಸಾಧನೆ ಮಾಡಬಹುದು.
ವಿನಯ್ ಬಿದರೆ- ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ

ಅಭಾವಿಪ ಕಾರ್ಯಕರ್ತರಲ್ಲಿರುವ ಉತ್ಸಾಹ, ಕಾರ್ಯತತ್ಪರತೆ, ದೇಶಭಕ್ತಿ, ಉತ್ತಮ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಮನಸ್ಸನ್ನು ಪ್ರಚೋದಿಸಿದಾಗ ಫಲಿತಾಂಶ ಹೊರಹೊಮ್ಮುತ್ತದೆ ಎನ್ನುವುದಕ್ಕೆ ಸೃಷ್ಟಿಯೇ ಸಾಕ್ಷಿಯಾಗಿದೆ. ಕ್ರಿಯಾತ್ಮಕ ಹಾಗೂ ಸಂಶೋಧನಾತ್ಮಕ ಗುಣವುಳ್ಳ ವಿದ್ಯಾರ್ಥಿಗೆ ಇದು ತಳಪಾಯವಾಗಿದೆ. ದೇಶದ ವಿಜ್ಞಾನಿಗಳು ವಿದೇಶದಲ್ಲಿ ಸಾಧನೆ ಮಾಡಿದ್ದಾರೆ. ದೇಶದಲ್ಲಿ ಅಂತಹ ವಾತಾವರಣ ಸೃಷ್ಟಿಗಾಗಿ ಅವರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿ ಧನಾತ್ಮಕ ಚಿಂತನೆಯತ್ತ ಮುನ್ನುಗ್ಗಲು ಸಹಕಾರಿಯಾಗಲಿದೆ.
ಸುಧೀರ್ ಪಿ.ಘಾಟೆ- ಮ್ಯಾಗ್ನಮ್ ಇಂಟರ್‌ಗ್ರಾಫಿಕ್ಸ್‌ನ ಅಧ್ಯಕ್ಷ

ಪ್ರಥಮ ಬಾರಿಗೆ ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮವಿದು.ಹಲವಾರು ವಿದ್ಯಾರ್ಥಿಗಳು ಒಂದು ತಿಂಗಳಿನಿಂದ ಪೂರ್ವಭಾವಿ ಸಿದ್ದತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಮತ್ತು ಕೈಗಾರಿಕೋಧ್ಯಮಿಗಳು ಯುವ ವಿಜ್ಞಾನಿಗಳನ್ನು ಆಯ್ಕೆ ಮಾಡಿ ಪ್ರೋತ್ಸಾಹ ನೀಡುವ ಕಾರ್ಯಕ್ರಮವಾಗಿದೆ. ಪತ್ರಿಕೆಗಳಲ್ಲಿ ಹೋರಾಟ ಮಾಡಲು ಮಾತ್ರ ಎಂದು ಬಿಂಬಿತವಾದ ಎಬಿವಿಪಿಯ ಈ ಕಾರ್ಯಕ್ರಮ ಹುಸಿಗೊಳಿಸಿದೆ. ಜಗತ್ತಿನ ಭೂಪಟದಲ್ಲಿ ಭಾರತದ ವಿದ್ಯಾರ್ಥಿ ಸಮೂಹವನ್ನು  ಗುರುತಿಸಬೇಕೆನ್ನುವ ಆಸೆ ಎಬಿವಿಪಿಯದಾಗಿದೆ.
ರಮೇಶ ಕೆ- ಎಬಿವಿಪಿ ರಾಜ್ಯ ಕಾರ್ಯದರ್ಶಿ




Thursday, 10 May 2012

ಮಧ್ಯವರ್ತಿಗಳ ಶೋಷಣೆ: ಬಡವಾಯಿತೆ ಬೀಡಿ ಕಾರ್ಮಿಕರ ಜೀವ...!
-ಸಂದೇಶ ಶೆಟ್ಟಿ ಆರ್ಡಿ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ಸ್ಥಿತಿ ನಿಯಂತ್ರಣ ಮಾಡುತ್ತಿದ್ದ ಬೀಡಿಚಟುವಟಿಕೆಗಳು ಇಂದು ಕಾರ್ಮಿಕರಿಲ್ಲದೆ ಸೊರಗಿಹೋಗಿದೆ. ಇರುವಂಥ  ಕಾರ್ಮಿಕರಿಗೆ ಸಿಗಬೇಕಾಗಿದ್ದ  ಮೂಲಭೂತ ಸೌಲಭ್ಯಗಳು ದೊರಕದೆ ಬೀಡಿ ಚಟುವಟಿಕೆಗಳು ಕುಸಿತಗೊಂಡಿದೆ. ದೈನಂದಿನ ಜೀವನ ನಿರ್ವಹಣೆಗಾಗಿ ಕಾಯಕ ಆರಂಬಿಸಿದ್ದರೂ  ಮಧ್ಯವರ್ತಿಯ ದೌರ್ಜನ್ಯದಿಂದ ಕಾರ್ಮಿಕ ಮಾತ್ರ ಬಳಲಿ ಬೆಂಡಾಗಿ ದಿನನಿತ್ಯ ಹೈರಣಾಗುತ್ತಿದ್ದಾನೆ.
ರಾಜ್ಯದಲ್ಲಿ ೮ ಲಕ್ಷ ಬೀಡಿ ಕಾರ್ಮಿಕರಿದ್ದು, ಅವಿಭಜಿತ ದಕ್ಷಿಣ ಕನ್ನಡದಲ್ಲಿ ೪ ಲಕ್ಷ ಬೀಡಿ ಕಾರ್ಮಿಕರಿದ್ದಾರೆ. ತಮ್ಮ ಜೀವನ ನಿರ್ವಹಣೆಗಾಗಿ ಬೀಡಿ ಕಟ್ಟುವುದನ್ನೆ ವೃತ್ತಿಯನ್ನಾಗಿಸಿಕೊಂಡ ಇವರಿಗೆ ೧೦೦೦ಕ್ಕೆ ಸಿಗುತ್ತಿರುವುದು ಕೇವಲ ೯೩.೨೩ ರೂ. ಹಾಗೂ ತುಟ್ಟಿ ಭತ್ಯೆ ೧ ಪಾಯಿಂಟ್‌ಗೆ ೨.೫೦ ಪೈಸೆ ನೀಡುತ್ತಿದ್ದಾರೆ. ರಾಜ್ಯ ಬಿಜೆಪಿ ಸರಕಾರ ಈ ಹಿಂದೆಯೇ ಯಡಿಯೂರಪ್ಪ  ಸಿಎಂ ಆಗಿದ್ದಾಗ ಸಾವಿರ ಬೀಡಿಗೆ ೧೦೩ ಹಾಗೂ ತುಟ್ಟಿಭತ್ಯೆ ಪಾಯಿಂಟ್‌ಗೆ ೪ ಪೈಸೆಯಂತೆ ನೀಡಬೇಕು ಎಂದು ಘೋಷಣೆ ಮಾಡಿದ್ದರು. ಇದಕ್ಕೆ ಕಾರ್ಮಿಕ ಸಂಘಟನೆಗಳಿಂದ ಸಲಹೆ ಸೂಚನೆ ನೀಡುವುದಕ್ಕೆ ಮೂರು ತಿಂಗಳ ಅವಧಿ ನಿಗದಿಯಾಗಿತ್ತು. ಮುಂದಿನ ದಿನದಲ್ಲಿ ಕನಿಷ್ಟ ವೇತನ ಮಂಡಳಿ ಆಯೋಗವು ಬರ್ಖಾಸ್ತು ಆಗಿತ್ತು. ಹೀಗೆ ಕಮಿಟಿ ರಚನೆಯಾಗಿ ಸಮಿತಿಯು ಕರಡು ಪ್ರತಿ ರಚನೆಯಾಗಿ ಸೂಚನೆ ಜಾರಿಯಾಗದೆ  ಹಿಂದಿನ ವೇತನವನ್ನೆ ಕಾರ್ಮಿಕರಿಗೆ ನೀಡುವ ಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ಸರಕಾರದಿಂದ ೧೯೭೮ರಲ್ಲಿ ಕಾರ್ಮಿಕ ಕಲ್ಯಾಣ ಸಂಸ್ಥೆ ಪ್ರಾರಂಭವಾಗಿ ಬೀಡಿ ಮಾಲಕರಿಂದ  ಸಾವಿರಕ್ಕೆ ರೂ.೫ ತೆರಿಗೆ ವಸೂಲಿ ಮಾಡಿ ಬೀಡಿ ಕಾರ್ಮಿಕರ ಕ್ಷೇಮಾಭಿವೃದ್ದಿಗಾಗಿ ಆರೋಗ್ಯ, ವಸತಿ ಹಾಗೂ ಶಿಕ್ಷಣ ಸೌಲಭ್ಯಗಳನ್ನು ನೀಡಲಾಗುತ್ತಿತ್ತು.
ಕ್ಯಾನ್ಸರ್, ಹೃದ್ರೋಗ, ಮೂತ್ರಪಿಂಡ ಚಿಕಿತ್ಸೆ, ಹೆರಿಗೆ ಸೌಲಭ್ಯ, ಕುಟುಂಬ ಯೋಜನೆ, ಕ್ಷಯ ರೋಗ, ಕುಷ್ಠರೋಗ, ಮಾನಸಿಕ ರೋಗ ಇತರ ಸಮಸ್ಯೆಗಳಿಗೆ  ಕ್ಲಿನಿಕ್ ಮತ್ತು ಸಂಚಾರಿ ಆಸ್ಪತ್ರೆಗಳಲ್ಲಿ ಗುರುತು ಕಾರ್ಡ್ ನೀಡಿ ಚಿಕಿತ್ಸೆಯನ್ನು ಪಡೆಯಬಹುದಾಗಿತ್ತು. ಕಾರ್ಮಿಕ ಭವಿಷ್ಯ ನಿಧಿಗೆ ಸದಸ್ಯರಲ್ಲದವರು ಹಾಗೂ ೧೮ರಿಂದ ೬೦ರ ವಯೋಮಿತಿಯವರು  ಗುರುತಿನ ಚೀಟಿ ಹೊಂದಿರುವ ಕಾರ್ಮಿಕರು ಸಾಮೂಹಿಕ ವಿಮಾ ಯೋಜನೆ ಫಲವನ್ನು ಪಡೆಯಬಹುದಾಗಿತ್ತು.
ವಿದ್ಯಾರ್ಥಿವೇತನ  ಕನಿಷ್ಟ ರೂ ೨೫೦ರಿಂದ ಪ್ರಾರಂಭವಾಗಿ ಗರಿಷ್ಠ ರೂ. ೩ಸಾವಿರ ನೀಡಲಾಗುತ್ತಿತ್ತು. ವಿದ್ಯಾರ್ಥಿ ವೇತನ ವಿಲೇವಾರಿ ಮಾಡುವ ಖಾಸಗಿ ಬ್ಯಾಂಕ್‌ನಲ್ಲಿ ೧ ಲಕ್ಷದ ೩೦೦ಅರ್ಜಿ ಬಂದಿದ್ದು, ೬ ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ವಿಲೆವಾರಿಯಾದ ಪಟ್ಟಿಯಲ್ಲಿ ದಾಖಲಿಸಿದ ಖಾತೆ ಸಂಖ್ಯೆ ವ್ಯತ್ಯಾಸದಿಂದ ಎರಡು ವರ್ಷಗಳಿಂದ ಅದಕ್ಕೂ ಕಲ್ಲು ಬಿದ್ದಿರುವಲ್ಲಿ ಮಧ್ಯವರ್ತಿಗಳ ಹಾಗೂ ಕಾರ್ಮಿಕರ ಅನಕ್ಷರತೆಯೆ ಕಾರಣವಾಗಿದೆ. ದೊಡ್ಡದಾದ ಖಾತೆ ಸಂಖ್ಯೆಯು ಬದಲಾಗಿ ಸಮಸ್ಯೆಯಾಗಿರುವುದು ಒಂದೆಡೆಯಾದರೆ ಹಿಂದೆ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿ ವೇತನವನ್ನು ಶಾಲೆಯ ಅಭಿವೃದ್ಧಿಗಾಗಿ ಬಳಸಲಾಗಿದೆ ಎಂದು ಕೆಲವೆಡೆ ಆಡಳಿತ ಮಂಡಳಿ ಸುಳ್ಳು ಮಾಹಿತಿ ನೀಡಿ ವಂಚಿಸುತ್ತಿದ್ದ ಆರೋಪವು ಕೇಳಿಬಂದಿದೆ.
ಬೀಡಿ ಕಾರ್ಮಿಕನಿಗೆ ಹಕ್ಕು ಪತ್ರವಿದ್ದು, ಮನೆ ಇಲ್ಲದಿದ್ದರೆ ೪೦ ಸಾವಿರ ಸಬ್ಸಿಡಿ ದೊರೆಯುತ್ತಿತ್ತು. ಅವರದು ಒಂದು ಲಕ್ಷದ ಒಳಗಿನ ಯೋಜನೆಯಾಗಿರಬೇಕು. ತಂಬಾಕು ಎಲೆ, ಹೊಗೆಸೊಪ್ಪು, ನೂಲು ನೀಡುವಲ್ಲಿ ಗುತ್ತಿಗೆದಾರರು ನಷ್ಟವಾಗಿದೆ ಎಂದು ನಷ್ಟವಸೂಲಿ ಮಾಡುವ ಪರಿಪಾಠವನ್ನು ಹಮ್ಮಿಕೊಂಡಿದ್ದಾರೆ. ೧ ಕೆ.ಜಿ ಎಲೆಗೆ ಕಂಪೆನಿಯವರು ೧೮೦೦ರಿಂದ ೧೯೦೦ ಕೇಳಿದರೆ  ಮಧ್ಯವರ್ತಿ ಮಾತ್ರ ೨೨೦೦ ಕೇಳುತ್ತಾನೆ. ಕಡಿಮೆ ಬಂದರೆ ದಂಡವನ್ನು ಹೇರಿ ಕೊನೆಗೆ ನೂಲು ಕೂಡ ಇವರು ಹಣಕೊಟ್ಟು ಪಡೆಯುವ ಸ್ಥಿತಿ ನಿರ್ಮಾಣ ಮಾಡುತ್ತಾನೆ. ಸಾವಿರ ಬೀಡಿಯಲ್ಲಿ ಒಂದೆರಡು ಕಟ್ಟನ್ನು  ಮುರಿದು ಹಾಕಿ ದಂಡವನ್ನು ವಸೂಲಿ ಮಾಡಿದ್ದರೂ ತಂಬಾಕನ್ನು ತಾನೆ ಇಟ್ಟುಕೊಳ್ಳುವುದು, ವರ್ಷಕ್ಕೊಮ್ಮೆ ನೀಡುವ ಬೋನಸ್‌ನಲ್ಲಿಯೂ ಕೂಡ ಅವಿದ್ಯಾವಂತ ಬೀಡಿ ಕಾರ್ಮಿಕರಿಂದ ಸಹಿ ಹಾಕಿಸಿಕೊಂಡು ಅನ್ಯಾಯವೆಸಗುತ್ತಿರುವ ಆರೋಪಗಳಿವೆ.
ವರ್ಷದಲ್ಲಿ ೧ಲಕ್ಷ ಬೀಡಿಯಾಗಿದ್ದರೂ ಕೇವಲ ೮೫ ಸಾವಿರಕ್ಕೆ ಮಾತ್ರ ಲೆಕ್ಕ ಕೊಡುವುದು. ಸಾವಿರ ಬೀಡಿಗೆ ೯೩.೨೩ರಂತೆ ನೀಡಿದರೂ ಲಕ್ಷಕ್ಕೆ ೧,೫೩೧ರೂ. ಬೋನಸ್  ನೀಡಬೇಕಾಗುತ್ತದೆ. ಆತ ನೀಡುತ್ತಿರುವುದು ಮಾತ್ರ ೮೦೦ರಿಂದ ೯೦೦ ಮಾತ್ರಎಂದು ದೂರಲಾಗಿದೆ.  ಸಾಮಾನ್ಯವಾಗಿ ಪ್ರತಿಯೊಬ್ಬ  ಕಾರ್ಮಿಕನಿಗೂ ಬೋನಸ್-೮.೩೩%, ರಜಾ ಸಂಬಳ-೫%, ರಾಷ್ಟ್ರೀಯ ಮತ್ತು ಹಬ್ಬದ ರಜೆ-೩.೧೦% ಒಟ್ಟಾಗಿ ೧೬.೪೩% ಕಾರ್ಮಿಕರಿಗೆ ಸಿಗಬೇಕಾಗುತ್ತದೆ. ವ್ಯಕ್ತಿಯೊಬ್ಬ  ವರ್ಷದಲ್ಲಿ ಕನಿಷ್ಟ ೨೪೦ ದಿನ ಕೆಲಸ ಮಾಡಿದರೆ ಮಾತ್ರ ಗ್ರ್ಯಾಚುವಿಟಿ ಪಡೆಯಲು ಅರ್ಹನಾಗಿರುತ್ತಾನೆ. ಆದರೆ ಇವರಿಗೆ  ವಾರದಲ್ಲಿ ೩ ಅಥವಾ ೪ ಹಾಜರಾತಿ ನೀಡಿರುವುದು ಹಾಗೂ ಹಬ್ಬ ಹರಿದಿನಗಳ ವೈಯಕ್ತಿಕ ರಜೆ ಸೇರಿದರೆ  ವರ್ಷದಲ್ಲಿ ೨೪೦ದಿನ ತಲುಪಲು ಸಾಧ್ಯವೇ?
ಬೀಡಿ ಕಾರ್ಮಿಕರಿಂದ ೧೦ ವರ್ಷಕ್ಕಿಂತ ಹೆಚ್ಚಾಗಿ ಕೆಲಸ ಮಾಡಲು ಅವಕಾಶ ನೀಡದೆ ವಂಚಿಸುತ್ತಿದ್ದಾರೆ. ಕೆಲವೊಂದು ಅಂಶಗಳು ಕಾರ್ಮಿಕರಿಗೆ ತಿಳಿಯದೆ ಇರುವುದರಿಂದ ಗುಣಮಟ್ಟದ ಸಂಸ್ಥೆಯೆಂದು ಖ್ಯಾತಿವೆತ್ತ ಹಾಗೂ ಸಣ್ಣ ಬೀಡಿ ಮಾಲಕರಿಂದ ನಿರಂತರ ಶೋಷಣೆಯಾಗುತ್ತಿದೆ. ಇವರ ಅನ್ಯಾಯ ಒಂದೆಡೆಯಾದರೆ  ಹೊಗೆಸೊಪ್ಪಿನ ವಾಸನೆಯಿಂದಾಗಿ ಅಸ್ತಮಾ, ಟಿಬಿ, ಕೆಮ್ಮು, ಮೊಣಕಾಲು, ಹೊಟ್ಟೆಉರಿ, ದೃಷ್ಟಿಮಂದ, ಬೆನ್ನು ನೋವುಗಳಂಥ ದಿನದಿಂದ ದಿನಕ್ಕೆ ಕುಗ್ಗಿಸುವ ಕಾಯಿಲೆಗಳಿಂದ ತತ್ತರಿಸುತ್ತಿದ್ದಾರೆ.  ಬೀಡಿಗಾಗಿ ಓಡಾಟ ಮಾಡುವ ಬೀಡಿ ಕಾರ್ಮಿಕರ ಬದುಕಿನ ಬಂಡಿ ಮಾತ್ರ ಸೌಲಭ್ಯಗಳಿಂದ ವಂಚಿತವಾಗಿದೆ. ಕಾರ್ಮಿಕರಿಗೆ ಇನ್ನಾದರೂ ನ್ಯಾಯ ಸಿಕ್ಕಿತೆ ಎಂದು ಕಾದುನೋಡಬೇಕಾಗಿದೆ.

ರಾಜ್ಯ ಸರಕಾರ ಜಾರಿಗೊಳಿಸಿದ ಕನಿಷ್ಟ ವೇತನ ಮತ್ತು ಕಾಲಕಾಲಕ್ಕೆ ಏರಿಕೆಯಾದ ತುಟ್ಟಿಭತ್ಯೆ, ಬೋನಸ್ ಇತ್ಯಾದಿ ಸೌಲಭ್ಯಗಳನ್ನು  ಬೀಡಿ ಕಾರ್ಮಿಕರ ಕೈಗಳಿಗೆ ನೀಡುತ್ತಿದ್ದರೆ ಇಂತಹ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಕಂಪೆನಿಯ ಮಾಲಕರಿಗೆ ಮಧ್ಯವರ್ತಿಗಳ ಮೇಲಿನ ಹಿಡಿತವಿಲ್ಲದೆ ಇರುವುದರಿಂದ ಬೀಡಿ ಕಾರ್ಮಿಕರ ಸೌಲಭ್ಯ ಕಸಿದು ಸುಲಭವಾಗಿ ನುಣುಚಿಕೊಳ್ಳುತ್ತಿದ್ದಾರೆ. ಕಾರ್ಮಿಕರಿಗೆ  ಉತ್ತಮ ಎಲೆ  ಹಾಗೂ ಹೊಗೆಸೊಪ್ಪು ನೀಡಿದಾಗ ಗುಣಮಟ್ಟದ ಪ್ರತಿಫಲ ಸಿಗಲು ಸಾಧ್ಯ. -ವಿಶ್ವನಾಥ ಶೆಟ್ಟಿ-ಜಿಲ್ಲಾಧ್ಯಕ್ಷ ಬಾರತೀಯ ಮಜ್ದೂರ್ ಸಭಾ

ಬಡತನದ ಕಾರಣದಿಂದ ೫ನೇ ತರಗತಿಗೆ ಶಾಲಾಜೀವನಕ್ಕೆ ತಿಲಾಂಜಲಿ ಇಟ್ಟು ಜೀವನ ನಿರ್ವಹಣೆಗಾಗಿ ಬೀಡಿ ಕಾಯಕವನ್ನು ಆರಿಸಿಕೊಂಡು ಇಂದಿಗೆ ೩೦ ವರ್ಷಗಳಾಗಿವೆ. ಇತ್ತೀಚಿಗೆ ಮೊದಲಿನಂತೆ ಕೆಲಸ ಮಾಡಲು ಸಾಧ್ಯವಾಗದಿರುವುದರಿಂದ ದಿನವೊಂದಕ್ಕೆ ೫೦೦ರಿಂದ ೬೦೦ ಬೀಡಿ ಕಟ್ಟಿ, ಮನೆಯ ಕೆಲಸ ಮಾಡಿಕೊಂಡು ಸಂಸಾರ ನಿಭಾಯಿಸಬೇಕಾಗಿದೆ. ಇತ್ತೀಚಿಗೆ ಆರೋಗ್ಯದ ಸಮಸ್ಯೆ ಎದುರಾಗಿದೆ. -ಬಂಟ್ವಾಳ ಅಬ್ಬಿಗುಡ್ಡೆಯ ರೇವತಿ

೧೩ ವರ್ಷದಿಂದ ಬೀಡಿಕಟ್ಟಿ ಜೀವನ ನಿರ್ವಹಿಸುತ್ತಿದ್ದೇನೆ. ಇದರಿಂದಲೇ ಸಂಸಾರ ನಡೆಯಬೇಕಿದೆ. ಮೊದಲು ಮಕ್ಕಳಿಗೆ ವಿದ್ಯಾರ್ಥಿವೇತನ ದೊರೆಯುತ್ತಿತ್ತು. ಈಗ ಅದನ್ನು ನಿಲ್ಲಿಸಿದ್ದಾರೆ. ಕಷ್ಟದಲ್ಲಿ ಜೀವನ ನಿರ್ವಹಿಸುತ್ತಿದ್ದೇವೆ ಎಂದು ಕಣ್ಣಿರಿಡುತ್ತಾರೆ -ಶಕ್ತಿನಗರದ ದೇವಕಿ.


ಕನ್ನಡದಲ್ಲಿ ವಾಹನಗಳ ನಾಮಫಲಕ ಬಳಸಿದರೆ ದಂಡ ವಿಧಿಸುವಂತಿಲ್ಲ..
ಸಂದೇಶ ಶೆಟ್ಟಿ ಆರ್ಡಿ
ಸಾಮಾನ್ಯ ಜನತೆಯ ಮನದಲ್ಲಿ ಮೂಡಿರುವ  ಪ್ರಶ್ನೆ? ಕನ್ನಡದಲ್ಲಿ ನಂಬರ್‌ಪ್ಲೇಟ್ ಬಳಸಿದರೆ ದಂಡ ವಿಧಿಸುತ್ತಾರೆ ಎನ್ನುವ ಸುದ್ದಿ ಕರಾವಳಿಯಲ್ಲಿ ಎಗ್ಗಿಲ್ಲದೇ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಕರ್ನಾಟಕದಲ್ಲಿ ಹುಟ್ಟಿದ ಜನರು ಮಾತೃಭಾಷೆಯ  ಮೇಲಿನ ಪ್ರೀತಿಯನ್ನು ಕನ್ನಡ ಅಕ್ಷರ ಬರೆಯಿಸುವುದರ  ಮೂಲಕ ಹಾಗೂ ಕನ್ನಡ ಫಲಕಗಳ ಬರೆದು ಅಭಿಮಾನವನ್ನು ತೋರ್ಪಡಿಸುತ್ತಾರೆ. ವಾಹನ ಸಂಖ್ಯೆಯನ್ನು ಕೂಡ ಕನ್ನಡ ಅಕ್ಷರಗಳ ಮೂಲಕ ಬರೆಯಿಸಿ ಕನ್ನಡದ ಮೇಲಿನ ಅಭಿಮಾನ ಹಂಚಿಕೊಳ್ಳುವವರಿದ್ದಾರೆ. ಆದರೆ ಕೇಂದ್ರ ವಾಹನ ಕಾಯಿದೆ ೧೯೮೯ರ ೫೦ (೨)ಡಿಯನ್ವಯ ವಾಹನಗಳ ನಂಬರ್ ಪ್ಲೇಟ್‌ನ್ನು  ಇಂಗ್ಲೀಷ್ ಅಥವಾ ಅರೆಬಿಕ್ ನ್ಯೂಮರಲ್ಸ್‌ನಲ್ಲಿ ಬರೆದಿರಲೇ ಬೇಕು ಎಂದು ಕಡ್ಡಾಯ ಮಾಡಲಾಗಿದೆ. ಇತ್ತೀಚಿಗೆ ಕನ್ನಡ ನಂಬರ್‌ಪ್ಲೇಟ್ ಇರುವಂಥ ವಾಹನವನ್ನು ಕಂಡರೆ ದಂಡ ವಿಧಿಸುತ್ತಾರೆ ಎನ್ನುವ ಅಂಜಿಕೆ ಜನಸಾಮಾನ್ಯರಲ್ಲಿದೆ.
ಆ ಸಮಸ್ಯೆಯ ಕುರಿತು ಮಾಹಿತಿ ಸಂಗ್ರಹಿಸಿದಾಗ ತಿಳಿದು ಬಂದಿರುವ ಅಂಶಗಳಿಷ್ಟು. ಗಡಿಭಾಗದಲ್ಲಿರುವ ವಾಹನ ಮಾಲಕರು ಎರಡು ಕಡೆ ಕನ್ನಡ ನಾಮಫಲಕವನ್ನು ಹಾಕಿಕೊಂಡರೆ ಬೇರೊಂದು ರಾಜ್ಯಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಅಲ್ಲಿಯವರೆಗೆ ವಾಹನದ ಸಂಖ್ಯೆಯನ್ನು ಗುರುತಿಸುವುದು ಕಷ್ಟಕರವಾಗಿರುತ್ತದೆ. ಅಲ್ಲದೆ  ಇದರಿಂದ ತೊಂದರೆ  ಜಾಸ್ತಿಯಾಗಿರುತ್ತದೆ. ಹೆಚ್ಚಿನ ಅಪರಾಧಿಗಳು ದುಷ್ಟ ಕೃತ್ಯಗಳನ್ನು  ಮಾಡಲು ಈ ತಂತ್ರವನ್ನು ಬಳಸುತ್ತಾರೆ ಎನ್ನುವ ಅಂಶಗಳು ಜನಸಾಮಾನ್ಯರಲ್ಲಿದ್ದರೂ  ಮಂಗಳೂರಿನ ಆರ್‌ಟಿಓ ಅಧಿಕಾರಿ ಸಿ.ಮಲ್ಲಿಕಾರ್ಜುನ ಅಂತಹ ಪ್ರಮೇಯ ಇಲ್ಲಾ. ಅಪರಾಧವನ್ನು ಎಸಗುವವರು ಹೆಚ್ಚಿನ ಎಲ್ಲಾ ಮಾರ್ಗವನ್ನು ಉಪಯೋಗಿಸುತ್ತಾರೆ. ಅದರಲ್ಲಿ ಕನ್ನಡ ನಂಬರ್ ಪ್ಲೇಟ್‌ಬಳಸಿಯೂ ಮಾಡಬಹುದು ಎನ್ನುತ್ತಾರೆ.
ಕರ್ನಾಟಕ ರಾಜ್ಯದಲ್ಲಿ ಕನ್ನಡ ನಾಮಫಲಕ ಇರಲೇ ಬೇಕು ಎಂದು ಕಡ್ಡಾಯವಾಗಿಲ್ಲ. ಕನ್ನಡ ನಾಮಫಲಕವಿದ್ದರೆ ದಂಡ ವಿಧಿಸುವ ಕಾನೂನು ಇಲ್ಲಾ. ಸರಕಾರಿ ವಾಹನಗಳು ಮಾತ್ರ ಕಡ್ಡಾಯವಾಗಿ ಕನ್ನಡ ಸಂಖ್ಯಾಫಲಕವನ್ನು ಹಾಕಲೇ ಬೇಕಾಗುತ್ತದೆ. ದ್ವಿ-ಚಕ್ರ  ಹೊರತು ಪಡಿಸಿ ಹಳದಿ ಬೋರ್ಡ್‌ನ ವಾಹನಗಳಿಗೆ ನಾಲ್ಕು ಭಾಗದಲ್ಲಿ ಸಂಖ್ಯೆಯನ್ನು ಹಾಕಬಹುದು. ನಾಲ್ಕರಲ್ಲಿ ಯಾವುದಾದರೂ  ಒಂದು ಭಾಗದಲ್ಲಿ ಕನ್ನಡ ನಾಮಫಲಕ ಕಡ್ಡಾಯವಾಗಿರುತ್ತದೆ. ದ್ವಿ-ಚಕ್ರ ವಾಹನವುಳ್ಳವರು ಒಂದು ಕಡೆ ಕನ್ನಡ ನಾಮಫಲಕ ಬಳಸಬೇಕು.
ನಂಬರ್ ಪ್ಲೇಟ್ ತಯಾರಿಸುವ ಅಂಗಡಿಯವರು ಸುಳ್ಳು ಮಾಹಿತಿಯನ್ನು ಸಾಮಾನ್ಯ ಜನತೆಗೆ ಮುಟ್ಟಿಸುತ್ತಾರೆ. ಅವರಿಗೆ ಕಂಪ್ಯೂಟರ್‌ನಲ್ಲಿ ಕನ್ನಡ ಸಂಖ್ಯೆಯನ್ನು ಬರೆಯಲು ಕಷ್ಟ ವಾಗುವುದರಿಂದ ಹಾಗೂ ಅವರಿಗೆ ಹೆಚ್ಚಿನ ಕೆಲಸವಾಗುವುದರಿಂದ ಸುಲಭದಲ್ಲಿ ಆಗುವಂಥ ಕೆಲಸಕ್ಕಾಗಿ ಈ ರೀತಿಯಾಗಿ ತಪ್ಪು ಮಾಹಿತಿಯನ್ನು ನೀಡಿ ಗೊಂದಲವನ್ನು ಸೃಷ್ಠಿಸುತ್ತಾರೆ.
ಈ ರೀತಿಯಾಗಿ ತಪ್ಪು ಮಾಹಿತಿಯನ್ನು ನೀಡುವ ಮಂದಿ ಒಂದೆಡೆಯಾದರೆ ಕರ್ನಾಟಕದಲ್ಲಿ ನೋಂದಾವಣೆ ಮಾಡಿಸಿದ ವಾಹನಗಳ ಮಾಲಕರಿಗೆ ಕನ್ನಡದಲ್ಲಿ ನಂಬರ್ ಹಾಕಿಸುವ ಆಸೆಯಾದರೆ ಹಣವುಳ್ಳವರು  ಬೇರೆ ರಾಜ್ಯದಲ್ಲಿ ಐಶಾರಾಮಿ ವಾಹನ  ಖರೀದಿಸಿ ರಾಜ್ಯದಲ್ಲಿ ಓಡಿಸುವ ಆಸೆಯಿರುತ್ತದೆ. ಆದರೂ ಕೂಡ ಸಾಮಾನ್ಯ ಜನತೆಯ ಮನದಲ್ಲಿರುವ ಸಂಶಯವನ್ನು ಪರಿಹರಿಸುವ ಕಾನೂನು ಜಾರಿಯಾಗುವುದೇ ಎಂದು ಕಾಯಬೇಕಾದ ಪರಿಸ್ಥಿತಿಯಿದೆ.

ರಾಜ್ಯದಲ್ಲಿ ಹೆಚ್ಚಾಗಿ ರೋಮನ್ ಹಾಗೂ ಅರೇಬಿಕ್ ಸಂಖ್ಯೆಯಲ್ಲಿ ನಂಬರ್‌ಪ್ಲೇಟ್ ಬಳಸುತ್ತಿದಾರೆ. ಯುವಜನತೆಯು ಕನ್ನಡವನ್ನು ಬಳಸಿದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಇತರರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ರಸ್ತೆಯ ಭದ್ರತಾ ಕಾನೂನು ಉಲ್ಲಂಘಿಸುವವರ ಶೀಘ್ರ ಕಾರ್ಯಾಚರಣೆಗಾಗಿ ಸಿಸಿ ಕ್ಯಾಮರಾವನ್ನು ಬಳಸುತ್ತಿದ್ದು ಅದರಲ್ಲಿ ಕನ್ನಡ ಹಾಗೂ ಇತರ ಭಾಷೆಯ ಅಕ್ಷರಗಳನ್ನು ಸೆರೆಹಿಡಿಯುತ್ತದೆ.
ಸಿ.ಮಲ್ಲಿಕಾರ್ಜುನ ಆರ್‌ಟಿಓ ಅಧಿಕಾರಿ ಮಂಗಳೂರು
 
೧೯೬೫-೭೦ರಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ ನಮಗೆ ಕನ್ನಡ ಸಂಖ್ಯೆಗಳ ಪರಿಚಯ ವಿರುವಂತೆ ಈಗಿನ ಯುವಜನತೆಗೆ ಕನ್ನಡ ಸಂಖ್ಯೆಯನ್ನು ಶೀಘ್ರವಾಗಿ ಗುರುತಿಸುವ ಸಾಮರ್ಥ್ಯವಿರುವುದಿಲ್ಲ. ಸಾಮಾನ್ಯವಾಗಿ ಕನ್ನಡ ಸಂಖ್ಯಾಫಲಕ ಕನ್ನಡದಲ್ಲಿ ಬಳಕೆ ಮಾಡುವುದು ಕಡಿಮೆಯಾಗಿದೆ.
ಮಂಜುನಾಥ್ ಸರ್ಕಲ್ ಇನ್ಸ್‌ಸ್ಪೆಕ್ಟರ್ ಮಂಗಳೂರು

Thursday, 3 May 2012

karmikaru



ನಮಗೂ ಒಂದು ಬದುಕಿದೆ ನಮ್ಮನ್ನೂ ಕೂಡ ಸಂತೋಷವಾಗಿ ಬದುಕಲು ಬಿಡಿ-
(ವಿಶ್ವದಲ್ಲೆಡೆ ಕಾರ್ಮಿಕರ ದಿನದಂದು ಧ್ವನಿಯಿಲ್ಲದ ಧ್ವನಿಯಿಂದ ಹಕ್ಕುಗಳಿಗಾಗಿ ಹೋರಾಟ ಮಾಡಿದ ಕಾರ್ಮಿಕರು)
ಕೆ.ಎಸ್.ಶೆಟ್ಟಿ
ಮೇ ೧ರಂದು ವಿಶ್ವದೆಲ್ಲೆಡೆ ಕಾರ್ಮಿಕರ ದಿನವನ್ನಾಗಿ ಆಚರಿಸುತ್ತಾ ಎಲ್ಲಾ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಒಕ್ಕೊರಲಿನಿಂದ ಧ್ವನಿಯಾಗಿದ್ದಾರೆ. ಇಂದು ನಿನ್ನೆಯ ಪಾಡಲ್ಲ ಹತ್ತಾರು ವರ್ಷಗಳಿಂದ ಧ್ವನಿಯಿಲ್ಲದ ಧ್ವನಿಯಿಂದ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಇದು ಕೇವಲ ಹೋರಾಟಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಅವರಿಗೆ ನ್ಯಾಯ ಸಿಕ್ಕಿದೆಯೇ ಎಂದಾಗ ಉತ್ತರ ಮಾತ್ರ ಶೂನ್ಯ.
ಜೀವನ ನಡೆಸಲು ಹೊಟ್ಟೆಪಾಡಿಗಾಗಿ ತಮ್ಮ ಕುಟುಂಬ ನಿರ್ವಹಣೆಗಾಗಿ ಒಂದಲ್ಲ ಒಂದು ಉದ್ಯೋಗವನ್ನು ಅರಸಿಕೊಂಡು ಒಂದೂರಿನಿಂದ ಇನ್ನೊಂದು ಊರಿಗೆ ವಲಸೆ ಬಂದವರು ಎಲ್ಲರೂ ಕಾರ್ಮಿಕರೇ. ವಿವಿಧ ರೀತಿಯ ಕಾರ್ಮಿಕರು ಇದ್ದರೂ ಅವರಿಗೆ ಒಂದೇ ರೀತಿಯ ವೇತನ ದೊರೆಯುತ್ತಿದೆಯೇ? ಅವರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿದೆಯೇ? ಹೀಗೆ ನಾವು ಪ್ರಶ್ನೆ ಕೇಳುತ್ತಾ ಹೋದರೆ ಅದು ಪ್ರಶ್ನೆಯಾಗಿಯೇ ಉಳಿಯುತ್ತದೆ.
ಸರಕಾರಿ ನೌಕರರಲ್ಲದವರು ತಮ್ಮ ಜೀವನ ನಿರ್ವಹಣೆಗಾಗಿ ಉದ್ಯೋಗವನ್ನರಸಿ ವಿವಿಧ ಸ್ಥಳಗಳನ್ನು ಅರಸಿ ಹೋಗುವುದು ಅನಿವಾರ್ಯ. ಕೃಷಿ ಭೂಮಿಯನ್ನು ಹೊಂದಿರುವ ರೈತ ಕಷ್ಟಪಟ್ಟು ಮಕ್ಕಳನ್ನು ಓದಿ ಬುದ್ದಿವಂತರನ್ನಾಗಿಸುತ್ತಾನೆ. ರೈತನು ದೇಶದ ಬೆನ್ನೆಲುಬು ಎಂದು ಸಾರುವ ದೇಶದಲ್ಲಿಂದು ಕೃಷಿ ಭೂಮಿಯ ಕೊರತೆಯಿಂದ ಕೃಷಿ ವಸ್ತುಗಳನ್ನು ಬೇರೆಡೆಯಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯೆ ಕಲಿತ ರೈತನ ಮಗನಿಗೆ ವೈಟ್‌ಕಾಲರ್‌ನ ಕೆಲಸವೇ ಬೇಕೆಂದು ಸುಂದರ ಪರಿಸರ ಬಿಟ್ಟು ಮಾಯಾನಗರಿಗೆ ಹೋಗುತ್ತಾನೆ. ಅಲ್ಲಿ ಅವನಿಗೆ ಸಾಧಾರಣ ಕೆಲಸ ಸಿಕ್ಕಿದರೂ ಅವನ ಸಂತೋಷಕ್ಕೆ ಪಾರವೇ ಇಲ್ಲಾ. ಇಂದು ಆತನಿಗೆ ಕೃಷಿ ಚಟುವಟಿಕೆಯ ಯಾವುದೇ ಕೆಲಸಗಳು ತಿಳಿಯದೆ ಪೇಟೆಯನ್ನೇ ಅವಲಂಬಿಸುವಂತಾಗಿದೆ. ವಯಸ್ಸಾದ ತಂದೆ-ತಾಯಿ ಮಕ್ಕಳ ಬರನಿರೀಕ್ಷೆಯಲ್ಲಿದ್ದು ಅದು ಕೈಗೂಡದೆ  ಕೃಷಿ ಕಾರ್ಯವನ್ನು ಮಾಡಲು ಸಾಧ್ಯವಾಗದೇ ಇದ್ದಾಗ ಜಮೀನನ್ನು ಮಾರಿ ಅನಾಥಶ್ರಮವನ್ನು ಸೇರುವ ಪರಿಸ್ಥಿತಿ ಉಂಟಾಗಿದೆ. ಹೀಗೆ ಜಮೀನನ್ನು ಕೊಂಡ ವ್ಯಕ್ತಿ ಅಲ್ಲೊಂದು ದೊಡ್ಡ ಕಟ್ಟಡವನ್ನೇ ನಿರ್ಮಾಣ ಮಾಡಿ ಕೃಷಿ ಭೂಮಿಯ ಗುರುತು ಇಲ್ಲದಂತೆ ಮಾಡುತ್ತಾನೆ. ಹೀಗೆ ಪ್ರತಿಯೊಂದು ಉಧ್ಯಮಕ್ಕೂ ಅವಿನಾಭಾವ ಸಂಬಂಧವಿರುವ ಹೊತ್ತಿನಲ್ಲಿ ಕಾರ್ಮಿಕರಾಗಿ ಬರುವಂಥವರ ಜೀವನಕ್ಕೆ ಎಷ್ಟು ಭದ್ರತೆ ಇದೆ ಎಂದು ನಾವು ತಿಳಿದುಕೊಳ್ಳಬೇಕು.
ಕೃಷಿ ಭೂಮಿ ಪಡೆದ ವ್ಯಕ್ತಿ ಪಡೆದ ಒಂದು ವರ್ಷದಲ್ಲಿ ಐದಾರು ಅಂತಸ್ತಿನ ಕಟ್ಟಡ ನಿರ್ಮಾಣಮಾಡುವ ಗುರಿಯನ್ನು ಹೊಂದಿ ಕೆಲಸಕ್ಕೆ ಬೇಕಾದ ಕಾರ್ಮಿಕರು ಅಭಾವದಿಂದ ಬೇರೆಡೆಯಿಂದ ಕಾರ್ಮಿಕರನ್ನು ಕರೆದು ತರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗೆ ಬಂದ ಕಾರ್ಮಿಕರು ಕೇವಲ ದಿನದ ಸಂಬಳಕ್ಕಾಗಿಯೋ ಅಥವಾ ಗುತ್ತಿಗೆ ಆಧಾರದಲ್ಲಿಯೋ ಕಾರ್ಯ ನಿರ್ವಹಿಸುತ್ತಾರೆ. ಹೀಗೆ ಆ ಕಟ್ಟಡದ ಕಾಮಗಾರಿ ಪೂರ್ಣಗೊಂಡ ನಂತರ ಅಲ್ಲಿಗೆ ಅವರ ಋಣ ತೀರಿದಂತೆ..ಅವರು ಬೇರೊಂದು ಕಡೆಗೆ ಹೋಗಲೇಬೇಕಾದ ಅನಿವಾರ್ಯ.
ಇಂತಹ ಪರಿಸ್ಥಿತಿಯಲ್ಲಿ ವಲಸೆ ಜೀವನವನ್ನು ನಡೆಸುವ ಕಾರ್ಮಿಕರ ಜೀವನಕ್ಕೆ ಬೇಕಾದ ನೆಲೆ ಅಥವಾ ಅವರ ಮೂಲಭೂತ ಹಕ್ಕುಗಳನ್ನು ನೀಡುವುದು ಸಾಧ್ಯವೇ? ಹತ್ತಾರು ವರ್ಷಗಳಿಂದ ನಿಗಧಿತ ಸ್ಥಳದಲ್ಲಿ ವಾಸಿಸುತ್ತಿದ್ದ ವ್ಯಕ್ತಿಗೆ ಸರಕಾರದಿಂದ ಬಂದ ಸವಲತ್ತುಗಳನ್ನು ಗ್ರಾಮ ಪಂಚಾಯತ್‌ಅಥವಾ ಮಹಾನಗರಪಾಲಿಕೆಯಿಂದ ಪಡೆಯಲು ಕಷ್ಟವಾಗಿರುವಾಗ ಇವರಿಗೆ ಆ ಸೌಲಭ್ಯವನ್ನು ಕಲ್ಪಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ.
ಇತ್ತ ನಗರದಲ್ಲಿ ಕೃಷಿಭೂಮಿಯ ತೊರೆದು ಗುತ್ತಿಗೆ ಆಧಾರದಲ್ಲಿ ಬಿಳಿ ಕಾಲರಿನ ಕೆಲಸವನ್ನು ನಿರ್ವಹಿಸುತ್ತಿರುವ ವ್ಯಕ್ತಿಗೆ ಸರಿಯಾದ ಸ್ಥಾನಮಾನಗಳು ಸಿಗುತ್ತಿವೆಯೋ? ಇಲ್ಲಾ ಅಂತಲೇ ಹೇಳಬೇಕು. ಅಲ್ಲಿಯೂ ಕೂಡ ಗುತ್ತಿಗೆದಾರ ಹಾಗೂ ಮಾಲಕರ ನಡುವಿನ ಒಪ್ಪಂದದಿಂದ ನೌಕರನಿಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿತನಾಗಿದ್ದಾನೆ. ದಿನನಿತ್ಯದ ಜೀವನ ನಿರ್ವಹಣೆಗಾಗಿ ದೇಶ ಕಟ್ಟುವ ಅಥವಾ ಒಂದು ಸಂಸ್ಥೆ ಮುನ್ನಡೆಸಲು ಸೂತ್ರದಾರನಾಗಿರುವ ಕಾರ್ಮಿಕ ತನ್ನ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಿದ್ದಾನೆ. ಇಎಸ್‌ಐ, ಪಿಎಫ್,ಬೋನಸ್ ಹೀಗೆ ಒಂದೇ ಎರಡೇ ಕಾರ್ಮಿಕನ ಸಮಸ್ಯೆ ಹೇಳತೀರದು.
ಪ್ರತಿಯೊಂದು ರಂಗದಲ್ಲೂ ಕೂಡ ಕಾರ್ಮಿಕನಿಗೆ ಹಲವಾರು ಸಮಸ್ಯೆಗಳು ಉಲ್ಬಣಿಸುತ್ತದೆ. ಪತ್ರಕರ್ತನಾದವನಿಗೆ ದಿನದ ೨೪ ಗಂಟೆಗಳಲ್ಲಿಯೂ ಕೂಡ ಸಮಾಜಕ್ಕೆ ಸತ್ಯಾಂಶವನ್ನು ಸಾರುವ ವರದಿಯನ್ನು ಬಿತ್ತರಿಸಬೇಕು. ವೈದ್ಯನಾದವನಿಗೆ  ಇನ್ನೊಂದು ಅಮೂಲ್ಯ ಜೀವದ ರಕ್ಷಣೆಯ ಘನತರವಾದ ಹೊಣೆಗಾರಿಕೆಯಿರುತ್ತದೆ. ಪೊಲೀಸ್ ಹಾಗೂ ವಕೀಲರು ಸಮಾಜದಲ್ಲಿ ಅನ್ಯಾಯವಾದಾಗ ಅವುಗಳನ್ನು ಹಂಸಕ್ಷೀರ ನ್ಯಾಯದಂತೆ ತುಲನೆ ಮಾಡಿ ಜನತೆಗೆ ನ್ಯಾಯ ಒದಗಿಸಬೇಕು. ಕಲಾವಿದನೊಬ್ಬ ಮನದಲ್ಲಿ ನೋವು ತುಂಬಿಕೊಂಡಿದ್ದರೂ ಅದನ್ನೂ ತೊರಗೊಡದೆ ರಂಗದಲ್ಲಿ ಬಂದಾಗ ತುಂಬಿದ ಪ್ರೇಕ್ಷಕರನ್ನು ರಂಜಿಸಲೇ ಬೇಕಾಗುತ್ತದೆ. ಹೀಗೆ ಯಾವುದೇ ಉಧ್ಯಮದಲ್ಲಿದ್ದರೂ ಆತನ ಮೂಲಭೂತ ಹೊಣೆಗಾರಿಕೆಯಿಂದ ಸಮಾಜದಲ್ಲಿ ಗುರುತಿಸಲ್ಪಡುತ್ತಾನೆ. ಮನದಲ್ಲಿ ದುಗುಡವನ್ನು ತುಂಬಿಕೊಂಡಿದ್ದರೂ ಮಾಡುವ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಕಾರ್ಮಿಕರ ಬದುಕು ಮಾತ್ರ ಕತ್ತರಿಯಲ್ಲಿ ಸಿಲುಕಿದ ಅಡಕೆಯಂತಾಗಿದೆ.
ಪ್ರತಿಯೊಬ್ಬ ಕೂಲಿ ಕಾರ್ಮಿಕನ ಬದುಕು ಯಾವ ಮಟ್ಟದ್ದಾಗಿದೆ ಎಂದಾಗ ಕರುಳು ತಿವುಚಿದಂತಾಗುತ್ತದೆ. ವಲಸೆ ಕಾರ್ಮಿಕನಿಗೆ ಮೂಲಭೂತ ಸೌಕರ್ಯಗಳು ದೊರಕುತ್ತಿವೆಯೇ? ಆತನಿಗೆ ವಾಸಿಸಲು ಯೋಗ್ಯವಾದ ಸ್ಥಳವಿದೆಯೇ? ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ನೋಡುತ್ತಾ ಉಡುಪಿಯ ಸಂತೆಕಟ್ಟೆ ಹಾಗೂ ಬ್ರಹ್ಮಾವರ ಸಮೀಪ ವಲಸೆ ಕಾರ್ಮಿಕರು ಹತ್ತಾರು ವರ್ಷಗಳಿಂದ ವಾಸಿಸುತ್ತಿದ್ದು ಮಡದಿಯ ಸೀರೆಯನ್ನೋ ಅಥವಾ ಪಂಚೆಯನ್ನೋ ಹರಿದು ಪರದೆಯನ್ನಾಗಿ ಮಾಡಿಕೊಂಡಿದ್ದಾರೆ. ತೆಂಗಿನ ಗರಿಯ ಮಡಲನ್ನು ಗೂಡಿನ ಮೇಲ್ಚಾವಣಿಯನ್ನಾಗಿ ಮಾಡಿಕೊಂಡ ದೃಶ್ಯ ನಾವು ನೋಡಬಹುದಾಗಿದೆ. ಸಂಗ್ರಹ ಚಿತ್ರದಲ್ಲಿರುವ ಈ ದೃಶ್ಯ ಚರಂಡಿಯ ಕೊಳವೆಯನ್ನು ವಾಸಸ್ಥಾನವನ್ನಾಗಿ ಮಾಡಿಕೊಂಡ ಘಟನೆ ನಾವು ಕಾಣಬಹುದು. ಹೀಗೆ ಪ್ರಪಂಚದಲ್ಲಿ ಹತ್ತು ಹಲಾವಾರು ಘಟನೆಗಳು ನಮ್ಮ ಕಣ್ಣಮುಂದಿದೆ. ಆದರೆ ಇವರೆಲ್ಲಾ ಕೆಲಸ ಮಾಡಿ ಉದ್ಯೋಗ ದಾತರನ್ನು ಸಂತೋಷವಾಗಿಟ್ಟು ತಾವು ಮಾತ್ರ ಕಷ್ಟದಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ. ಕಾರ್ಮಿಕರ ದಿನಾಚರಣೆಯ ದಿನ ಹಲವಾರು ಹೋಟೆಲ್ ಅಂಗಡಿಗಳನ್ನು ನೋಡಿದಾಗ  ಮಕ್ಕಳು ಕೆಲಸ ಮಾಡುವ ಸನ್ನಿವೇಶವನ್ನು ನೋಡಿದ್ದೇವೆ. ಆದರೆ ಮಕ್ಕಳಿಗೆ ಕೆಲಸ ಮಾಡದೆ ಬೇರೆ ಗತಿಯಿಲ್ಲಾ. ತಮ್ಮ ಕಾಲಮೇಲೆ ತಾವು ನಿಲ್ಲಬೇಕು ಎನ್ನುವ ಮಹತ್ವಾಕಾಂಕ್ಷೆ ಒಂದೆಡೆಯಾದರೆ ಮನೆಯಲ್ಲಿರುವ ಬಡತನ. ತಂದೆ ತಾಯಿಯ ಕಷ್ಟವನ್ನು ನೋಡಿದ ಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ತಂದೆ ತಾಯಿ ಆರ್ಥಿಕ ಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಲು ಸಹಾಯ ಮಾಡಿ ಪುಸ್ತಕವನ್ನು ಕೊಳ್ಳಲು ಅನೂಕೂಲವಾಗುವುದು ಎಂದು ಈ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇವರೆಲ್ಲಾ ಅರೆಕಾಲಿಕ ಕಾರ್ಮಿಕರಾದರೆ ಬಡತನದ ಜೀವನವನ್ನು ನಿರ್ವಹಿಸಲು ಶಾಲೆಯ ತೊರೆದು ಖಾಯಂ ಆಗಿ ದುಡಿಯುವ ವರ್ಗ ಅದೆಷ್ಟೊ ಮಂದಿ ದೈನಂದಿನ ಪ್ರಪಂಚದಲ್ಲಿ ನಮ್ಮ ಕಣ್ಣಮುಂದೆ ಸಾಕ್ಷಿಯಾಗಿ ಬರುತ್ತಾರೆ.
ಯಾವುದೇ ಒಂದು ಉದ್ಯಮ ಯಶಸ್ಸನ್ನು ಪಡೆಯಬೇಕಾದರೆ ನೌಕರರ ಹಾಗೂ ಮಾಲಕರ ನಡುವೆ ಪ್ರೀತಿ, ವಿಶ್ವಾಸ ಹಾಗೂ ಸ್ನೇಹಪರವಾದ ಅಂಶಗಳು ಒಳಗೊಂಡಿರಬೇಕು. ಸ್ನೇಹ ಪೂರಕವಾದ ಅಂಶಗಳಿಂದ ಮಾಲಕರು ಕಾರ್ಮಿಕರ ಕಂಡಾಗ ಅವರು ಮಾಡುವ ಕೆಲಸದಲ್ಲಿ ನಿಷ್ಠೆಯನ್ನು ತೊರುವುದರೊಂದಿಗೆ ಸಂಸ್ಥೆಯ ಅಭಿವೃದ್ದಿಗೆ ಅವಿರತ ಶ್ರಮಿಸುತ್ತಾರೆ. ಮಾಲಕನಾದವನು ಯಾವಾಗ ಕಾರ್ಮಿಕರಲ್ಲಿ ತಮ್ಮ ದರ್ಪ ತೋರುತ್ತಾರೋ ಆಗಲೇ ಕಾರ್ಮಿಕರು ಅನ್ಯಾಯವನ್ನು ಮಾಡುವ ಗುಣವನ್ನು ಬೆಳೆಸಿಕೊಳ್ಳುತ್ತಾರೆ. ಅವರಿಗೆ ಸಿಗಬೇಕಾದ ಸೌಲಭ್ಯ ಹಾಗೂ ಪ್ರೀತಿಯಿಂದ ನೋಡಿದಾಗ ಅವರಿಗೆ ಸಂಸ್ಥೆಯ ಹಾಗೂ ಮಾಲಕರ ಬಗ್ಗೆ ಗೌರವಗಳು ಮೂಡುತ್ತವೆ.
ಮೇ ೧ರಂದು ಮಂಗಳೂರಿನಲ್ಲಿ ಕಾರ್ಮಿಕ ದಿನಾಚರಣೆಯ ದಿನ ನಡೆದ ಸನ್ಮಾನ ಕಾರ್ಯಕ್ರಮ. ರೋಟರ್‍ಯಾಕ್ಟ್ ಸಂಸ್ಥೆಯು ಸಮಾಜದಲ್ಲಿ ದುಡಿದ ಹಿರಿಯ ನೌಕರ ಬಂದುಗಳನ್ನು ಗುರುತಿಸಿ ಕ್ರಮ ಮಾತ್ರ ಶ್ಲಾಘನೀಯ. ೨೫ ವರ್ಷಗಳಿಂದ ನಾವೆಲ್ಲಾ ನಿದ್ರಾದೇವಿಯ ಆಲಿಂಗನದಲ್ಲಿ ಮೈಮರೆತಿರುವ ಹೊತ್ತು ಸೂರ್ಯನ ಆಗಮನವಾಗುವುದಕ್ಕಿಂತ ಮುಂಚಿತವಾಗಿ ೪ ಗಂಟೆಗೆ ಎದ್ದು  ಪ್ರತಿಯೊಬ್ಬರ ಮನೆಗೆ ಪತ್ರಿಕೆಯನ್ನು ತಲುಪಿಸುವ ಕಾರ್ಯ ಮಾಡಿದ ಆನಂದ ಆಚಾರ್ಯ ಮತ್ತು ಒಂದೇ ಸಂಸ್ಥೆಯಲ್ಲಿ (ಹೋಟೆಲ್ ವುಡ್‌ಲ್ಯಾಂಡ್ಸ್) ಕಳೆದ ೨೦ಕ್ಕೂ ಹೆಚ್ಚು ವರ್ಷಗಳಿಂದ ಕಾರ್ಯ ನಿರ್ವಹಿಸಿದ ಪ್ರೇಮ್ ಕುಮಾರ್ ಶೆಟ್ಟಿ, ಅನಂತ ಪಡ್ಕೆ ಇವರುಗಳ ಸನ್ಮಾನ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಗಿದೆ. ಇನ್ನೊಂದೆಡೆ ಅಖಿಲ ಭಾರತೀಯ ಕಾರ್ಮಿಕ ಸಂಘ ಕಾರ್ಮಿಕರಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆಯನ್ನು ಆಯೋಜಿಸಿತ್ತು. ವರ್ಷವಿಡೀ ದುಡಿಯುವ ಕಾರ್ಮಿಕ ಮನುಸ್ಸುಗಳು ಒಂದೆಡೇ ಸೇರಿ ಸಂತೋಷವನ್ನು ಹಂಚಿಕೊಳ್ಳುವುದರೊಂದಿಗೆ ಸಮಾಜದಲ್ಲಿ ದುಡಿಯುವ ಹಲವಾರು ಪ್ರತಿಭೆಗಳನ್ನು ಗುರುತಿಸಿ, ಬಡವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ. ಹೀಗೆ ಕಾರ್ಮಿಕರು ಹಾಗೂ ಮಾಲಕರ ನಡುವೆ ಏಕಮನೋಭಾವನೆಯಿಂದ ಸಂಸ್ಥೆಯ ಯಶಸ್ಸು ಸಾಧ್ಯವೆನ್ನುವುದು ಎಲ್ಲರಿಗೂ ತಿಳಿದ ಅಂಶವೇ...ಕಾರ್ಮಿಕರಿಗೂ ಒಂದು ಮನಸ್ಸಿದೆ ಅವರ ಮನಸ್ಸಿನಲ್ಲಿರುವ ಅಂಶಗಳು ಯಾವುದು ಎಂದು ತಿಳಿದು ಕಾರ್ಯಪ್ರವೃತ್ತರಾಗೋಣ ಅಲ್ಲವೇ...