Sunday, 22 September 2013


ಸೇವೆಗೆ ಪರ್ಯಾಯ ಪದ  `ಯೂತ್ ಫಾರ್ ಸೇವಾ'

ಮಂಗಳೂರು: ಘೋರ ಚಳಿಯನ್ನೂ ಲೆಕ್ಕಿಸದೆ, ಜೀವದ ಹಂಗು ತೊರೆದು ದ್ರೋಹಿ ಪಾಕ್ ಸೈನಿಕರನ್ನು ಮಣಿಸಿ ಭಾರತಮಾತೆಯ ಅಂಗವಾದ ಕಾರ್ಗಿಲ್‌ನ್ನು ಶತ್ರುಗಳ ಹಿಡಿತದಿಂದ  ಗೆದ್ದು ವಿಜಯ ಸಾಧಿಸಿದಾಗಲೂ ನಮ್ಮ ಯೋಧರು ಯಾವುದೇ ಪ್ರಚಾರ ಬಯಸಿರಲಿಲ್ಲ. ಇಂಡಿಯನ್ ಆರ್ಮಿಯ ವಿಶೇಷತೆ ಇದು. ಕಾರ್ಗಿಲ್ ವಿಜಯ ಸಂಕೇತವಾಗಿ ಜು.೨೬ ರಂದು ವಿಜಯೋತ್ಸವ ಆಚರಿಸುತ್ತೇವೆ ಬಹಳ ಸಂಭ್ರಮದಿಂದ , ಗೌಜಿಯಿಂದ....
ಆದರೆ ಹಿಂದು ಸೇವಾ ಪ್ರತಿಷ್ಠಾನದ `ಯೂತ್ ಫಾರ್ ಸೇವಾ' ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆಯಾದ್ದು  ತೀರಾ ವಿಭಿನ್ನ ತೆರ ಮತ್ತು ಅನುಕರಣೀಯ ರೀತಿಯಲ್ಲಿ.ಕುಂದಾಪುರ ತಾಲೂಕಿನ ಆರ್ಡಿಯ ಸರಕಾರಿ ಮಾದರಿ ಹಿ. ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯದಂದು ನಡೆದ ವಿನೂತನ ಕಾರ್ಯಕ್ರಮಕ್ಕೆ  ಪ್ರಚಾರದ ಅಬ್ಬರವಿರಲಿಲ್ಲ.ಯಾವುದೇ ಕರಪತ್ರ ವಿತರಣೆಯಿಲ್ಲ,  ದುಂದು ವೆಚ್ಚರಹಿತ ತೀರಾ ಸರಳ ಕಾರ್ಯಕ್ರಮ ಅದಾಗಿತ್ತು. ನಿವೃತ್ತ ಶಿಕ್ಷಕ, ಜನಪ್ರತಿನಿಧಿಗಳನ್ನು ಶಾಲೆಯ ಪುಟಾಣಿ ಮಕ್ಕಳು ಪ್ರೀತಿಯಿಂದ ವೇದಿಕೆಗೆ ಬರಮಾಡಿಕೊಂಡರು. ಅತಿಥಿಗಳಿಂದ ಕಾರ್ಗಿಲ್ ವಿಜಯೋತ್ಸವ- ಯೋಧರ ಸಾಹಸ ಗಾಥೆಗಳನ್ನು ಕೇಳಿಸಿಕೊಂಡ ಪುಟಾಣಿಗಳು, ಹಿರಿಯರ  ಶುಭಹಾರೈಕೆಯ ನುಡಿಗಳೊಂದಿಗೆ ಉಚಿತ ಪುಸ್ತಕಗಳನ್ನು ಖುಷಿಯಿಂದ ಸ್ವೀಕರಿಸಿ ಕುಣಿದಾಡಿದರು.
ಸರ್ವ ಶಿಕ್ಷಣ ಅಭಿಯಾನದಲ್ಲಿ ,ಸರಕಾರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ನೆಲೆಯಲ್ಲಿ ಅಕ್ಷರ ದಾಸೋಹ, ಉಚಿತ ಬೈಸಿಕಲ್ ವಿತರಣೆ, ಮಕ್ಕಳ ದೇಹದಲ್ಲಿ ಕಬ್ಬಿಣಾಂಶ ಹೆಚ್ಚಿಸಲು ಮಾತ್ರೆ, ಪೌಷ್ಠಿಕಾಂಶ ವರ್ಧನೆಗೆ ಹಾಲು ವಿತರಣೆ ಹೀಗೆ  ಅನೇಕ ವಿದ್ಯಾರ್ಥಿಪರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಅಭಿವೃದ್ಧಿಪರ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದರೂ, ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಂಠಿತಗೊಳ್ಳುತ್ತಿದ್ದು, ಅನೇಕ ಕಡೆಗಳಲ್ಲಿ ಮುಚ್ಚುವಂತಹ ಸ್ಥಿತಿಯೇ ಗೋಚರಿಸುತ್ತಿದೆ. ಸರಕಾರಿ ಶಾಲೆಯ ಮಕ್ಕಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಸರಕಾರೇತರ ಸಂಸ್ಥೆಯೊಂದು ಶ್ರಮಿಸುತ್ತಿರುವುದು ಗಮನಾರ್ಹ. ಈ ಸೇವಾಸಂಸ್ಥೆ  ಇನ್ಯಾವುದಲ್ಲ, ಹಿಂದು ಸೇವಾ ಪ್ರತಿಷ್ಠಾನದ ಅಂಗಸಂಸ್ಥೆ `ಯೂತ್ ಫಾರ್ ಸೇವಾ'(ವೈಎಫ್‌ಎಸ್).
ನಿರ್ಗತಿಕ ಮಕ್ಕಳಿಗೆ ಆಸರೆ, ಶಿಕ್ಷಣ.....
ಸಮಾಜದ ನಿರ್ಗತಿಕ ಮಕ್ಕಳಿಗೆ ಆಸರೆ ನೀಡಬೇಕು, ಆರ್ಥಿಕವಾಗಿ ಸಬಲರಲ್ಲದ ಕೊಳೆಗೇರಿಯ ಮಕ್ಕಳು ಹಾಗೂ ನಾನಾ ಕಾರಣಗಳಿಂದಾಗಿ ಶಿಕ್ಷಣಾವಕಾಶದಿಂದ ವಂಚಿತರಾದವರ ಶಿಕ್ಷಣಕ್ಕೆ ನೆರವಾಗಬೇಕು ಎಂಬ ಉದಾತ್ತ ಧ್ಯೇಯದಿಂದ ,ಸೇವಾ ಮನೋಭಾವವನ್ನೊಳಗೊಂಡ ಸಮಾನ ಮನಸ್ಕರ ಯುವಪಡೆಯು ೨೦೦೭ ಏಪ್ರಿಲ್‌ನಲ್ಲಿ ರಚನೆಯಾಯಿತು. ಈ ತಂಡವೇ ಯೂತ್ ಫಾರ್ ಸೇವಾ. ವೈಎಫ್‌ಎಸ್ ಸರಕಾರಿ ಶಾಲೆಗಳಿಗೆ, ಎನ್‌ಜಿಒ, ಸರಕಾರಿ ಆಸ್ಪತ್ರೆಗಳಿಗೆ ಹಾಗೂ ಸಾಮಾಜಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಇತರ ಸಂಸ್ಥೆಗಳಿಗೂ ಸಹಕಾರ ನೀಡುತ್ತಿದೆ. ವೈಎಫ್‌ಎಸ್‌ನ ಕಾರ್ಯಕರ್ತರು ತಮ್ಮ ವೃತ್ತಿಯ ಬಿಡುವಿನ ವೇಳೆಯಲ್ಲಿ ಸ್ವಯಂ ಪ್ರೇರಿತರಾಗಿ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮಾದರಿ ಸಂಸ್ಥೆ  ಹಿಂದು ಸೇವಾ ಪ್ರತಿಷ್ಠಾನದ ಒಂದು ಅಂಗವಾಗಿದೆ. 
ಉದಾತ್ತ ಧ್ಯೇಯಗಳಿವು...
ಶಾಂತಿ-ನೆಮ್ಮದಿಯುಕ್ತ  ಸ್ವಾವಲಂಬೀ ಸಮಾಜ ನಿರ್ಮಾಣದೊಂದಿಗೆ ಸಾಮರಸ್ಯ ಮತ್ತು ಬೆಳವಣಿಗೆಯನ್ನು ಸಾಧಿಸುವುದು ವೈಎಫ್‌ಎಸ್ ಕನಸು.  ಸ್ವಯಂ ಸೇವಕರಲ್ಲಿ ಸೇವಾ ಮನೋಭಾವವನ್ನು ಬಲಪಡಿಸುವುದು, ಸಮಾಜದಲ್ಲಿ  ಧನಾತ್ಮಕ ಪರಿವರ್ತನೆಗಳೊಂದಿಗೆ  ಅಧಿಕಾರ ಮತ್ತು ವ್ಯಕ್ತಿ ನಿರ್ಮಾಣ, ಸಂಸ್ಥೆಯ ಸೇವೆಗಳನ್ನು ಸಮುದಾಯಕ್ಕೆ ಪರಿಣಾಮಕಾರಿಯಾಗಿ ತಲುಪಿಸುವುದು ಸಂಘಟನೆಯ ಆಶಯವಾಗಿದೆ. ಸ್ವ-ಇಚ್ಛೆಯಿಂದ ಭಾರತೀಯ ಸಂಸ್ಕೃತಿಯ ಬುನಾದಿಯಲ್ಲಿ, ಅಭಿವೃದ್ಧಿಗೆ ಪೂರಕ  ಮಾದರಿಗಳ ರಚನೆ, ಪ್ರತೀ ಬಡ ವ್ಯಕ್ತಿಯ ಸಮರ್ಥ ಬದುಕಿಗೆ ಪ್ರೋತ್ಸಾಹದ ಜತೆ ಜತೆಗೆ ಸಮಗ್ರ ಸಮಾಜದ ಉನ್ನತಿಗೆ ಶ್ರಮಿಸುವ ಉದಾತ್ತ ಧ್ಯೇಯಗಳಿವೆ ವೈಎಫ್‌ಎಸ್ ಯುವಪಡೆಗೆ.
ವಿದ್ಯಾರ್ಥಿಗಳ ದತ್ತು ಸ್ವೀಕಾರ
ಶಿಕ್ಷಣಕ್ಕಾಗಿ ಸ್ಕೂಲ್ ಕಿಟ್ ವಿತರಣೆ, ವಿದ್ಯಾರ್ಥಿಯ ದತ್ತು ಸ್ವೀಕಾರ, ಬಿಡುವಿನ ವೇಳೆಯಲ್ಲಿ ಇಂಗ್ಲಿಷ್, ವಿಜ್ಞಾನ, ಕಂಪ್ಯೂಟರ್  ಸಹಿತ ಹಲವು ವಿಷಯಗಳ ಬೋಧನೆ, ಪರಿಸರವೆಂಬ ಪ್ರತ್ಯೇಕ ವಿಭಾಗದಲ್ಲಿ  ಗ್ರೀನ್ ಕ್ಲಬ್ಸ್, ಗ್ರೀನ್ ಕಮಾಂಡೋಸ್, ಹಸಿರು ಪರಿಸರ ಮತ್ತು ಚಿಗುರು ಕಾರ್ಯಕ್ರಮದ ಮೂಲಕ ಆರೋಗ್ಯ ರಕ್ಷಣೆ, ಡಾಕ್ಟರ್‍ಸ್ ಫಾರ್ ಸೇವಾ ಇತ್ಯಾದಿ ಕಾಯಕ್ರಮಗಳನ್ನು ನಡೆಸುತ್ತಿದೆ. ಸ್ಕೂಲ್ ಕಿಟ್ ವಿತರಣೆಯಲ್ಲಿ ಸ್ಕೂಲ್ ಬ್ಯಾಗ್, ನೋಟ್ ಪುಸ್ತಕಗಳು, ವಿದ್ಯಾ ಪರಿಕರಗಳನ್ನು ನೀಡಲಾಗುತ್ತಿದೆ. ಈ ವರ್ಷ ಸುಮಾರು ೧೦ಸಾವಿರಕ್ಕೂ ಅಧಿಕ ಮಕ್ಕಳು ಈ ಸೌಲಭ್ಯ ಪಡೆದರು. ೨೦೧೧ರಲ್ಲಿ ಬೆಂಗಳೂರಿನ ೫೮ ಶಾಲೆಗಳು ಹಾಗೂ ಬೆಂಗಳೂರು ಹೊರತು ಪಡಿಸಿ ೨೨ ಶಾಲೆಗಳ ಒಟ್ಟು ೮,೬೦೦ ಮಕ್ಕಳು ಸಂಸ್ಥೆಯ ಈ ಸೌಲಭ್ಯಕ್ಕೆ ಭಾಜನರಾಗಿದ್ದರು. ೨೦೦೯ ಜೂನ್‌ನಲ್ಲಿ ಪ್ರಾರಂಭಗೊಂಡ `ಸ್ಪಾನ್ಸರ್ ಎ ಚೈಲ್ಡ್ ' ಯೋಜನೆಯಡಿ  ೨೦೧೧-೧೨ರ ಸಾಲಲ್ಲಿ  ೫೩೪ ದಾನಿಗಳು ೮೩೬ ಮಕ್ಕಳನ್ನು ದತ್ತು ಸ್ವೀಕರಿಸಿದ್ದು, ಈ ಮಕ್ಕಳೀಗ ಶಿಕ್ಷಣ ಪಡೆಯುತ್ತಿದ್ದಾರೆ. 
ಉಚಿತ ಶಿಕ್ಷಣ
ಸರಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಸಂಸ್ಥೆಯ ಕಾರ್ಯಕರ್ತರು ತಮ್ಮ ಬಿಡುವಿನ ಅವಧಿಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಗಮನಾರ್ಹ. ಸೇವಾ ಮನೋಭಾವದ ಯೂತ್ ಫಾರ್ ಸೇವಾದ ಹಲವು ಯೋಜನೆಗಳಿಂದಾಗಿ, ಸಮಾಜದ ನಿರ್ಗತಿಕ ಮಕ್ಕಳು, ಆರ್ಥಿಕವಾಗಿ ಸಬಲರಲ್ಲದ ಕುಟುಂಬಗಳ  ಎಷ್ಟೋ ಮಕ್ಕಳು ಶಿಕ್ಷಣ ಭಾಗ್ಯದ ಜತೆ ಜತೆಗೆ ಬಹಳಷ್ಟು ಪ್ರಯೋಜನ ಹೊಂದುವಂತಾಗಿದೆ.
ರಾಜ್ಯದಲ್ಲೇ ಮಾದರಿ:
ದೇಶದ ಭೋಪಾಲ್, ದಿಲ್ಲಿ, ಚೆನ್ನೈ, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ  ವೈಎಫ್‌ಎಸ್ ಕಾರ್ಯ ನಿರ್ವಹಿಸುತ್ತಿದೆ. ಬೆಂಗಳೂರು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ಯೂತ್ ಫಾರ್ ಸೇವಾದ ಯೋಜನೆಯು ಪ್ರಥಮ ಬಾರಿಗೆ ಕರಾವಳಿಯ ಕುಂದಾಪುರ ತಾಲೂಕಿನ ಆರ್ಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ದೊರೆತಿರುವುದು ವಿಶೇಷ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ, ಮೂಲಭೂತ ಸೌಕರ್ಯಗಳ ಕೊರತೆಯಿರುವ ಅಲ್ಬಾಡಿ ಗ್ರಾಮದ ಆರ್ಡಿ ಶಾಲೆಯ ಮಕ್ಕಳಿಗೆ ಇಂತಹ ಸೇವೆ ಹೊಸತು.
ಆರ್ಡಿ ಸರಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದರೂ ೧೬೪ ವಿದ್ಯಾರ್ಥಿಗಳಿದ್ದಾರೆ. ವೈಎಫ್‌ಎಸ್‌ನಿಂದ ಈ ಬಾರಿ ಕಾರ್ಗಿಲ್ ವಿಜಯ ದಿನದಂದು ಉಚಿತ ನೋಟ್ ಪುಸ್ತಕ ಹಾಗೂ ವಿದ್ಯಾಸಲಕರಣೆಗಳನ್ನು  ಯೋಧರ ನೆನಪಲ್ಲಿ ವಿತರಿಸಿರುವುದು ರಾಜ್ಯದಲ್ಲೇ ಮಾದರಿ.
ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯ ಸುರೇಶ್ ಶೆಟ್ಟಿ ಆರ್ಡಿ, ಶಾಲೆಯ ಮುಖ್ಯೋಪಾಧ್ಯಾಯ ಕೆ.ಗೋವಿಂದ ನಾಯ್ಕ, ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಣೇಶ್ ಕುಮಾರ ಅರಸಮ್ಮಕಾನು ಸಮರ್ಥವಾಗಿ ನಿರ್ವಹಿಸಿದ್ದರು. ಗಣೇಶ್ ಶೆಟ್ಟಿ ಕೊಂಜಾಡಿ, ಪ್ರತಾಪ ನಾಯ್ಕ, ಪ್ರಕಾಶ ಹಾಂಡ, ದಿನೇಶ್ ಹೆಗ್ಡೆ, ಸಂತೋಷ ನಾಯ್ಕರ ತಂಡವು ಸಹಕರಿಸಿತ್ತು.
ಮರೆಯಾಗುತ್ತಿದೆ
ಸೇವಾ ಮನೋಭಾವ:
ಪೋಷಕರು ಮಕ್ಕಳನ್ನು ಬೆಳೆಸುವಾಗ  ಮಕ್ಕಳಿಗೆ ಶಿಕ್ಷಣ ಕೊಡಿಸುವ ವೇಳೆ ಈ ವಿಷಯಗಳಲ್ಲಿ ಅವರಿಗೆ ಆಸಕ್ತಿ  ಇದೆಯೋ ಇಲ್ಲವೋ ಎಂಬುದನ್ನು ತಿಳಿಯುವ ಗೋಜಿಗೇ ಹೋಗುವುದಿಲ್ಲ.   ವಿದ್ಯಾರ್ಥಿಗಳು ರ್‍ಯಾಂಕ್ ಪಡೆಯಲು, ಸೀಟುಗಳನ್ನು ಪಡೆಯಲು ರೋಬೋಟ್‌ಗಳಂತೆ ಪೈಪೋಟಿ ನಡೆಸುತ್ತಾರೆ.  ರ್‍ಯಾಂಕ್ ಗಳಿಸುವ ಉದ್ದೇಶದಿಂದ ದಿನದ ೨೪ ಗಂಟೆಗಳೂ ಅಭ್ಯಾಸ ಮಾಡುತ್ತಾ, ಬಾಲ್ಯವನ್ನು ಯಾವಾಗಲೋ ಕಳಕೊಂಡಿರುತ್ತಾರೆ. ರ್‍ಯಾಂಕ್ ಬಂದರೆ ಮಾತ್ರ ಜೀವನ ಎಂಬ ಭಾವನೆಯನ್ನು ಮಕ್ಕಳಿಗೆ ಇಂಜೆಕ್ಟ್  ಮಾಡಿರುವುದೂ ಮಕ್ಕಳ ಈ ತೆರ ಮೆಂಟಾಲಿಟಿಗೆ ಕಾರಣ.  ಯಾವ ಕೋರ್ಸ್ ಮಾಡಿದರೆ ಭವಿಷ್ಯದಲ್ಲಿ ಎಷ್ಟು ಸಂಪಾದನೆ ಮಾಡಬಹುದು ಎಂಬ ಲೆಕ್ಕಾಚಾರ ಮೂಲಕ  ಸ್ವಾರ್ಥ ಮನೋಭಾವವೂ ಸದ್ದಿಲ್ಲದೇ ಮಕ್ಕಳ ವ್ಯಕ್ತಿತ್ವದಲ್ಲಿ ತುಂಬಿಕೊಳ್ಳುತ್ತದೆ. ಯಾವ ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ಸಿಕ್ಕಿರುವುದೋ  ಅವರಿಂದ ಮಾತ್ರ ಸೇವಾ ಮನೋಭಾವ ನಿರೀಕ್ಷಿಸಲು ಸಾಧ್ಯವಿದೆ . ಇದು ನಿವೃತ್ತ ಶಿಕ್ಷಕ ಜಗ್ಲುಗುಡ್ಡೆಯ ಬಾಬು ಶೆಟ್ಟಿ ಅವರ ಅಭಿಮತ. 
ಸಂಪಾದನೆಯೆನ್ನುವುದು ಸ್ವಂತಕ್ಕೆ ಮಾತ್ರ ಬಳಕೆಯಾಗದೇ ಸಮಾಜದ ದೀನರ ಸೇವೆಗೂ ಬಳಕೆಯಾಗಬೇಕು. ಹಿಂದು ಧರ್ಮದಲ್ಲಿ ನಮ್ಮ ಸಂಪಾದನೆಯ ಅತ್ಯಲ್ಪವನ್ನು ಸ್ವಂತಕ್ಕೂ, ಅಲ್ಪವನ್ನು ತಂದೆ-ತಾಯಿಯ ಆರೈಕೆಗೂ, ಒಂದಂಶವನ್ನು  ಧಾರ್ಮಿಕ ಕಾರ್ಯಕ್ಕೂ ಹಾಗೆ ಸಮಾಜ ಸೇವೆಗೂ ಮೀಸಲಿರಿಸಬೇಕು ಎನ್ನಲಾಗಿದೆ. ಇದೇ ರೀತಿ ಸಂಸ್ಕಾರ ಭರಿತರಾಗಿ ಹಿಂದು ಧರ್ಮದ ಸಂದೇಶಗಳನ್ನು ಪಾಲನೆ ಮಾಡುತ್ತಾ ಸೇವಾ ಮನೋಭಾವನೆಯಿಂದ ದುಡಿಯುತ್ತಿರುವ ಯೂತ್ ಫಾರ್ ಸೇವಾದ ಸೇವಾಕಾರ್ಯ ನಿಜಕ್ಕೂ ಅನುಕರಣೀಯ. 

ಅಭಿಮತ:
ಶಿಕ್ಷಣ ರಂಗದ ಅಭಿವೃದ್ಧಿಯಲ್ಲಿ ದಾನಿಗಳ ಹಾಗೂ ಸಂಘಸಂಸ್ಥೆಗಳ ಪಾತ್ರ ಹೆಚ್ಚಿನ ಮಹತ್ವ ಪಡೆಯುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲು ಇನ್ನೂ ಹೆಚ್ಚಿನ ಸೌಲಭ್ಯ ಹಾಗೂ ಪ್ರೋತ್ಸಾಹದ ಅಗತ್ಯವಿದೆ.
. ಪ್ರಕಾಶ ಶೆಣೈ-ಸ್ವ ಉದ್ಯೋಗಿ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ಸಿಗುವ ಸೌಲಭ್ಯವನ್ನು ಉಪಯೋಗಿಸಿಕೊಂಡು ಉತ್ತಮ ಫಲಿತಾಂಶ ದಾಖಲಿಸುತ್ತಿರುವುದು ಶ್ಲಾಘನೀಯ. ಸರಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ಸೌಲಭ್ಯ ಒದಗಿಸುವ ಅನಿವಾರ್ಯತೆಯಿದೆ.
.ದೀಪಿಕಾ ಶೆಟ್ಟಿ  ಆರ್ಡಿ,
ಕುಂದಾಪುರ ತಾ.ಪಂ.ಅಧ್ಯಕ್ಷೆ.


ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಂಘಸಂಸ್ಥೆಗಳಿಂದ ಸಹಕಾರ ಸಿಗುವುದು ಬಹಳ ವಿರಳ. ಹಿಂದು ಸೇವಾ ಪ್ರತಿಷ್ಠಾನದ ಯೂತ್ ಫಾರ್ ಸೇವಾ ವತಿಯಿಂದ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯಾಗಿ ಮಕ್ಕಳ ಮುಖಗಳು ಅರಳಿವೆ. ನಗರ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದರೂ, ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಗ್ರಾಮೀಣ ಸರಕಾರಿ ಶಾಲೆಯನ್ನು ಗುರುತಿಸಿ ಸೇವೆ ನೀಡಿರುವುದು ಗಮನಾರ್ಹ. ಇವರ ಸೇವೆಯು ಈ ಶಾಲಾ ಮಕ್ಕಳಿಗೆ ನಿರಂತರವಾಗಿರಲಿ.
. ಪಲ್ಲವಿ ಶೆಟ್ಟಿ ,
ಶಾಲಾ ಗೌರವ ಶಿಕ್ಷಕಿ








No comments:

Post a Comment