ತೀವ್ರ ಬೆನ್ನು ನೋವಿನ ಸೆಳೆತಕ್ಕೆ ಸಿಕ್ಕಿ ಅಕಾಲದಲ್ಲಿ ತೆರೆಮರೆಗೆ ಸರಿದ ಗಿರ್ಕಿ ವೀರ-ಉದಯ ನಾವುಡ ಮಧೂರು
ಕರಾವಳಿಯ ಗಂಡುಕಲೆಯೆನಿಸಿದ ಯಕ್ಷಗಾನ ರಂಗದಲ್ಲಿ ದುಡಿದವರು ಅದೆಷ್ಟೊ ಮಂದಿ. ಕಲೆಯ ಕಂಪನ್ನು ಸೂಸುತ್ತಾ, ಪುರಾಣದ ಸತ್ವವನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಬಯಲಾಟ ಅಥವಾ ಡೇರೆ ಮೇಳಗಳ ಕಲಾವಿದರ ಪಾತ್ರ ಹಿರಿದು. ಅನೇಕ ಕಲಾವಿದರು ಯಕ್ಷಗಾನ ರಂಗದಲ್ಲಿ ಅವಿರತವಾಗಿ ದುಡಿದು, ನಮ್ಮಿಂದ ಅಗಲಿದ್ದಾರೆ. ಶೇಣಿ ಗೋಪಾಲಕೃಷ್ಣ ಭಟ್, ಹರಾಡಿ ರಾಮಗಾಣಿಗ, ಕಾಳಿಂಗ ನಾವುಡ, ರಾಮ ನಾರಿ ಅದೆಷ್ಟೊ ಕಲಾವಿದರು ರಂಗದಲ್ಲಿ ಮಿಂಚಿದ್ದು, ಮಾತ್ರವಲ್ಲದೇ ಅವರ ಸಾಧನೆಯ ಪೂರವನ್ನು ನಮ್ಮಲ್ಲಿಂದು ಬಿಟ್ಟು ಅವರನ್ನು ದಿನನಿತ್ಯ ಸ್ಮರಿಸುವಂತೆ ಮಾಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಯಕ್ಷಗಾನದಲ್ಲಿ ತೆಂಕು-ಬಡಗು, ಬಡಾಬಡಗು ಶೈಲಿಗಳಿದ್ದರೂ, ತೆಂಕು ತಿಟ್ಟಿನಲ್ಲಿ ಮಾತ್ರ ಕನ್ನಡ-ತುಳು ಭಾಷೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದರು. ಆದರೆ ಯಕ್ಷಗಾನ ಪ್ರಪಂಚದಿಂದ ತುಳು ಮೇಳಗಳು ಮರೆಯಾಗಿದೆ. ಮೇಳಗಳು ಮರೆಯಾದಾಕ್ಷಣ ತುಳು ಕಲಾವಿದರು ಕೆಲವರು ಮರೆಯಾಗಿದ್ದಾರೆ. ಆದರೆ ಅನಿವಾರ್ಯ ಕಾರಣದಿಂದ ತುಳು ಯಕ್ಷಗಾನ ಮೇಳದಲ್ಲಿ ಸತತ ೨೬ ವರ್ಷಗಳ ಸೇವೆ ಸಲ್ಲಿಸಿ, ಅನಾರೋಗ್ಯಕ್ಕೆ ತುತ್ತಾಗಿ ಯಕ್ಷಗಾನ ರಂಗದಿಂದ ಹೊರಗುಳಿದು ವಿಶ್ರಾಂತ ಜೀವನ ನಡೆಸುತ್ತಿರುವ ಗಿರ್ಕಿ ವೀರ ಉದಯ ನಾವುಡ ಮಧೂರು ಇವರನ್ನು ಬಲ್ಲವರು ಬೆರಳೆಣಿಕೆಯಷ್ಟು ಮಂದಿ ಮಾತ್ರ.
ನಾವುಡರ ಪುಂಡುವೇಷದ ಅಬ್ಬರವನ್ನು ನೋಡುವಾಗ ಯಕ್ಷಗಾನದ ಕುರಿತಾಗಿ ನಮಗೆ ಸರಿಯಾಗಿ ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿ ಬಲಿತಿರಲಿಲ್ಲ. ಅರ್ಥವಾಗುವ ಹೊತ್ತಿನಲ್ಲಿ ಅವರು ವೇಷ ಮಾಡುವ ಸ್ಥಿತಿಯನ್ನು ಭಗವಂತ ಕರುಣಿಸಿಲ್ಲ ಎನ್ನುವುದಕ್ಕೆ ಬೇಸರ. ನಾವುಡರ ಯೌವನದ ಸಮಯದಲ್ಲಿ ವೈಜ್ಞಾನಿಕವಾಗಿ ಈಗಿನಷ್ಟು ಮುಂದುವರಿಯದ ಕಾರಣ ಅವರ ಕುಣಿತಗಳ ಯಾವುದೇ ದಾಖಲಿಕರಣವಿಲ್ಲದೆ ಅವರ ವೇಷದ ಸವಿಯನ್ನು ಅನುಭವಿಸುವುದಕ್ಕೆ ಸಾಧ್ಯವಿಲ್ಲದಾಯಿತು ಎನ್ನುವ ಬೇಸರದ ನುಡಿಯನ್ನಾಡಬೇಕಾದ ಅನಿವಾರ್ಯತೆ. ಅಸ್ವಾಭಾವಿಕವಾಗಿ ಯಕ್ಷಗಾನ ರಂಗದಿಂದ ಬೇರೆಯಾಗಿ ಕಲಾವಿದನೊರ್ವ, ಯಕ್ಷ ಅಭಿಮಾನಿಯಾದ ನಾವುಡರ ವಯಸ್ಸು ಮಾತ್ರ ನಲ್ವತ್ತೇಳು.
ಯಕ್ಷಗಾನದ ಅಭಿಮಾನಿಗಳು ವಿಭಿನ್ನ. ಜ್ಞಾನವನ್ನು ಸಂಪಾದಿಸಲೋಸುಗ ಪುರಾಣದ ಪ್ರಸಂಗ ನೋಡುವ ಒಂದು ವರ್ಗವಾದರೆ, ಸಾಮಾಜಿಕ ಜೀವನ ಶೈಲಿಗೆ ಅನುಗುಣವಾಗಿ ನಾಟ್ಯ, ದಿಗಿಣದ ಸವಿಯನ್ನು ಅನುಭವಿಸಲು ತೆರಳುವ ವರ್ಗವೇ ಬೇರೆಯಾಗಿತ್ತು. ತುಳು ಯಕ್ಷಗಾನ ಪ್ರಪಂಚದಲ್ಲಿಯೇ ತನ್ನದೇ ಆದ ವಿಭಿನ್ನ ದಿಗಿಣಗಳ ಮೂಲಕ ಛಾಪನ್ನು ಮೂಡಿಸಿದ ದಿಗಿಣ ವೀರ(ಗಿರ್ಕಿ ವೀರ)ಉದಯ ನಾವುಡ ಮಧೂರು ಅವರ ಹೆಸರು ಕೇಳಿದವರು (ಯುವಸಮೂಹವನ್ನು ಹೊರತುಪಡಿಸಿ)ಕಡಿಮೆ.
ಕಲಾವಿದನಾದವ ಕೌಟುಂಬಿಕವಾಗಿ ಯಾವುದೆ ಸಮಸ್ಯೆಗಳಿದ್ದರೂ, ಅದನ್ನು ರಂಗದಲ್ಲಿ ತೋರಗೊಡುವುದಿಲ್ಲ. ರಂಗದಲ್ಲಿ ಅಭಿಮಾನಿಗಳ ಕರತಾಡನ, ಸಿಳ್ಳೆಗೆ ಸೋಲುವ ಕಲಾವಿದ ಯಾವತ್ತೂ ಕೂಡ ಪ್ರೇಕ್ಷಕರಿಗೆ ವಂಚಿಸುವುದಿಲ್ಲ. ಅಭಿಮಾನಿಗಳ ಅಭಿಮಾನಕ್ಕೆ ತನಗಿರುವ ಬೇಸರ, ಆರೋಗ್ಯದ ಸ್ಥಿತಿಯನ್ನು ಲೆಕ್ಕಿಸದೆ ರಂಗದಲ್ಲಿ ಮಿಂಚುವ ಕಲಾವಿದ ತನಗೆ ಕಲಾಮಾತೆಯ ಸೇವೆಗೆ ಅವಕಾಶ ನೀಡಿದ ಯಜಮಾನರ ಖಾತೆಯನ್ನು ತುಂಬಲು ಮೈಮರೆತು ಕಾರ್ಯ ನಿರ್ವಹಿಸುತ್ತಾನೆ. ಯಜಮಾನರುಗಳ ದಬ್ಬಾಳಿಕೆಗೆ, ತಾರತಮ್ಯಕ್ಕೆ ನೋವು ಮಾಡಿಕೊಳ್ಳದೆ ಅಭಿಮಾನಿಗಳು ಹಾಗೂ ಯಜಮಾನರಿಗಾಗಿ ಯಕ್ಷ ತಿರುಗಾಟದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾರೆ. ಕುಟುಂಬದ ಸದಸ್ಯನೊರ್ವ ಅಥವಾ ಕಟ್ಟಿಕೊಂಡ ಹೆಂಡತಿಯಾದರೂ, ತನ್ನ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರೂ, ಮನಸ್ಸಿನಲ್ಲಿರುವ ನೋವನ್ನು ಹೊರಗೆ ತೋರ್ಪಡಿಸದೆ ಕಲಾರಸಿಕರನ್ನು ಅಪಾರವಾಗಿ ರಂಜಿಸುತ್ತಾರೆ. ತಾನು ಸೇವೆ ಮಾಡಿದಷ್ಟು ದಿನ ಯಕ್ಷಗಾನದಲ್ಲಿ ಯಾವುದೇ ನಿರಾಸಕ್ತಿ ತಾಳದೆ ಪ್ರೇಕ್ಷಕರನ್ನು ರಂಜಿಸಿ, ಅಕಾಲ ಅನಾರೋಗ್ಯಕ್ಕೆ ತುತ್ತಾಗಿ ತಂದೆ ಹಾಗೂ ತಾನು ನೆಚ್ಚಿದ ಯಕ್ಷವೃತ್ತಿಗೆ ತಿಲಾಂಜಲಿ ಹೇಳಿದ ಉಭಯ ತಿಟ್ಟುಗಳ ಖ್ಯಾತ ಯಕ್ಷಗಾನ ಕಲಾವಿದ, ತೆಂಕುತಿಟ್ಟಿನ ಗಿರ್ಕಿ ವೀರ `ಮಧೂರು ಉದಯ ನಾವುಡ' ರದು ನೋವಿನ ಕಥೆ.
ತಂದೆಯ ಒತ್ತಾಯಕ್ಕೆ ಮಣಿದು ಬಾಲ್ಯಾವಸ್ಥೆಯಲ್ಲಿಯೇ ಕುಟುಂಬದ ನಾಲ್ವರು ಗಂಡು ಮಕ್ಕಳು ಸೇರಿದಂತೆ ದೊಡ್ಡಪ್ಪನ ಮಗನೊಂದಿಗೆ ಖ್ಯಾತ ಕಿರೀಟ ವೇಷಧಾರಿ ಕೂಡ್ಲು ನಾರಾಯಣ ಬಲ್ಯಾಯರಲ್ಲಿ ಹೆಜ್ಜೆಗಾರಿಕೆ ಕಲಿತು ಯಕ್ಷಮಾತೆಯ ಸೇವೆಗೆ ಧುಮುಕಿದರು. ಇವರು ೧೯೬೬ ರ ಮಾರ್ಚ್ ೫ ರಂದು ವಿಷ್ಣು ನಾವುಡ ಮತ್ತು ಲೀಲಾವತಿ ದಂಪತಿಗಳ ಮೂರನೇ ಪುತ್ರನಾಗಿ ಜನಿಸಿ, ೬ ನೇ ತರಗತಿಯ ಶಿಕ್ಷಣ ಮುಗಿಸಿ, ತನ್ನ ೧೫ ನೇ ವಯಸ್ಸಿನಲ್ಲಿ ಕುಬಣೂರು ಶ್ರೀಧರ್ ರಾವ್ ಅವರ ವ್ಯವಸ್ಥಾಪಕತ್ವದ ಕೂಡ್ಲುಮೇಳ ಪ್ರವೇಶಿಸಿದರು. ನಂತರ ಸುರತ್ಕಲ್, ಪುತ್ತೂರು, ಬಪ್ಪನಾಡು, ಮಧೂರು, ಗಣೇಶಪುರ, ಕುಂಟಾರು, ಕಾಂತಾವರ, ಸಾಲಿಗ್ರಾಮ, ಪೆರ್ಡೂರು ತೆಂಕು ಹಾಗೂ ಬಡಗಿನ ಡೇರೆ ಮೇಳದಲ್ಲಿ ಒಟ್ಟು ೨೬ ವರ್ಷ ತಿರುಗಾಟ ಪೂರೈಸಿದ್ದರು. ಸ್ತ್ರೀವೇಷ ಹಾಗೂ ಪುಂಡುವೇಷದಲ್ಲಿ ಗುರುತಿಸಿಕೊಂಡ ಇವರು ಕ್ರಮೇಣ ಪುಂಡುವೇಷದ ಹುಲಿಯೆಂದೆ ಖ್ಯಾತರಾದವರು.
ಪೆರ್ಡೂರು ಮತ್ತು ಸಾಲಿಗ್ರಾಮ ಮೇಳದಲ್ಲಿಯೂ ತೆಂಕಿನ ವೇಷಗಾರಿಕೆಯೊಂದಿಗೆ ಬಡಗಿನ ಚೆಂಡೆಯಲ್ಲಿಯೂ ತಮ್ಮ ಅತ್ಯದ್ಬುತ ಪ್ರತಿಭೆಯಿಂದ ಬಡಗಿನಲ್ಲಿಯೂ ಅಭಿಮಾನಿಗಳನ್ನು ಸೃಷ್ಟಿಸಿಕೊಂಡವರು ನಾವುಡರು. ಹಿರಿಯಣ್ಣ ರಾಧಾಕೃಷ್ಣ ನಾವುಡ ಅವರ ಪ್ರೋತ್ಸಾಹದೊಂದಿಗೆ ಯಕ್ಷಗಾನ ತಿರುಗಾಟದಲ್ಲಿ ಸುದೀರ್ಘ ೨೦ ವರ್ಷಗಳು ಜೊತೆಯಲ್ಲಿಯೇ ರಾಮ-ಲಕ್ಷ್ಮಣರಂತೆ ಯಕ್ಷಮಾತೆಯ ಕಲಾಸೇವೆಗೈದಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ. ಖ್ಯಾತ ಪುಂಡುವೇಷಧಾರಿಯೆಂದೆ ಖ್ಯಾತಿ ಹೊಂದಿದ ಇವರ ಕೀರ್ತಿ ಡೇರೆ ಮೇಳಗಳಲ್ಲಿನ ಕರಪತ್ರಕಗಳಲ್ಲಿ ``ಯಕ್ಷಾಭಿಮಾನಿಗಳೇ ಗಿರ್ಕಿ ವೀರ ಉದಯ ನಾವುಡರ ಗಿರ್ಕಿ ನೋಡಲು ಮರೆಯದಿರಿ" ಎಂದು ಅಚ್ಚಾಗುತ್ತಿದ್ದವು. ಸಾಮಾಜಿಕ ತುಳು ಪ್ರಸಂಗಗಳಲ್ಲಿ ಮಾತ್ರವಾಗಿರದೆ ಪುರಾಣ ಪ್ರಸಂಗಗಳಲ್ಲಿಯ ಬಬ್ರುವಾಹನ, ಅಭಿಮನ್ಯು, ಭಾರ್ಗವ, ರುಕ್ಮಾಂಗ-ಶುಭಾಂಗ, ಚಂಡ-ಮುಂಡ ಇತ್ಯಾದಿ ವೇಷಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು.
ತಂದೆಯ ಒತ್ತಾಯಕ್ಕೆ ಯಕ್ಷಗಾನ ಪ್ರವೇಶ ಮಾಡಿದ್ದರೂ, ೧೬ ವರ್ಷಗಳವರೆಗೆ ಯಕ್ಷಗಾನದಲ್ಲಿ ಯಾವುದೇ ಆಸಕ್ತಿ ತಳೆದಿರಲಿಲ್ಲ. ಪ್ರತಿವರ್ಷವೂ ಕೂಡ ತಂದೆಯ ಒತ್ತಾಯಕ್ಕೆ ಮೇಳಕ್ಕೆ ಆಗಮಿಸುತ್ತಿದ್ದೆ. ಅನಿವಾರ್ಯತೆಯಿಂದ ನಿವೃತ್ತಿಯಾಗುವುದಕ್ಕಿಂತ ಮುಂಚಿನ ೧೦ ವರ್ಷಗಳಲ್ಲಿ ಯಕ್ಷಗಾನದಲ್ಲಿ ಆಸಕ್ತಿ ಹುಟ್ಟಿತ್ತು. ತಿರುಗಾಟದ ಸಂದರ್ಭ ಅಭಿಮಾನಿಗಳು ರಂಗದಲ್ಲಿನ ತನ್ನ ಕಸುಬನ್ನು ನೋಡಿ, ಯೋಗಕ್ಷೇಮ ವಿಚಾರಿಸಲು ಮುಖತಃ ಭೇಟಿಯಾಗುತ್ತಿದ್ದರೋ ಆಗಲೇ ಯಕ್ಷಗಾನ ಬೇಕು ಅಂತ ಅನಿಸಿತ್ತು. ಮೇಳಕ್ಕೆ ಸೇರಿದ ೧೩ನೇ ವರ್ಷದಲ್ಲಿ ನೋವು ಪ್ರಾರಂಭವಾದಾಗ ೨ ವರ್ಷ ಯಕ್ಷಗಾನದಿಂದ ವಿರಮಿಸಿದ್ದೆ. ಆಗ ಅಭಿಮಾನಿಗಳಿಂದ ಬೇರಾದ ಮಾನಸಿಕ ಯಾತನೆ ಅನುಭವಕ್ಕೆ ಬಂದಿತ್ತು. ದೇವರ ದಯೆಯಿಂದ ಅಭಿಮಾನಿಗಳ ಹಾರೈಕೆಯಿಂದ ಪುನಃ ಯಕ್ಷಗಾನಕ್ಕೆ ಮರಳುವಂತಾಯಿತು. ತುಳು ಯಕ್ಷಗಾನದಲ್ಲಿಯೇ ತನ್ನ ಸೇವೆ ಮುಂದುವರಿಸುವಂತಾಯಿತು ಎನ್ನುವುದು ಅವರ ಮನದಾಳದ ಮಾತು.
ತುಳು ಯಕ್ಷಗಾನ ಕಲಾವಿದರನ್ನು ಮರೆತರು...
ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎನ್ನುವ ಹೋರಾಟಗಳು ಅನೇಕ ವರ್ಷಗಳಿಂದ ನಡೆಯುತ್ತಿದೆ. ತುಳು ಭಾಷೆಯನ್ನು ಗೌರವಿಸಬೇಕು, ಪ್ರೀತಿಸಬೇಕು ಅದನ್ನು ಇತರರಿಗೂ ತಿಳಿಯಪಡಿಸಬೇಕು. ತುಳುವಿಗೆ ಪ್ರತ್ಯೇಕ ರಾಜ್ಯಗಳು ಲಭ್ಯವಾಗಬೇಕು ಎನ್ನುವ ತುಳುವರ ಧ್ವನಿಗಳಿಂದು ಅಲ್ಲಲ್ಲಿ ಕೇಳಿಬರುತ್ತಿದೆ. ಈ ಮಾತು ಉಲ್ಲೇಖಕ್ಕೂ ಕಾರಣವಿದೆ. ಕಾಸಿಗಾಗಿರುವ ಕಲೆಯಲ್ಲಿ ತುಳು ಭಾಷೆಯ ಕುರಿತಾಗಿರುವ ಅಭಿಮಾನವೋ, ಯಜಮಾನರುಗಳ ಬೊಕ್ಕಸವನ್ನು ತುಂಬಿಸಲೋಸುಗ ಅಥವಾ ಕಲಾವಿದರು ತಮ್ಮ ಜೀವನ ನಿರ್ವಹಣೆಗಾಗಿ ತುಳು ಯಕ್ಷಗಾನವನ್ನು ವೃತ್ತಿಯನ್ನಾಗಿ ಆಯ್ದುಕೊಂಡಿದ್ದರೂ, ತುಳು ಯಕ್ಷಗಾನ ಕಲಾವಿದರಿಂದ ಶುದ್ಧ ತುಳುವಿನ ಪರಿಮಳ ಎಲ್ಲೆಡೆಯೂ ಪಸರಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ ತುಳುವಿನಂತೆ ಆಂಗ್ಲಭಾಷೆಯ ಮಿಶ್ರಣವಿಲ್ಲದೇ, ಈಗಿನ ನಾಟಕದಲ್ಲಿರುವ ಇಂಗ್ಲಿಷ್ ಡೈಲಾಗುಗಳ ಹೊರತಾಗಿರುವ ತುಳುವಿನ ಮೂಲ ತುಳು ಯಕ್ಷಗಾನದಲ್ಲಿದ್ದು, ಅದನ್ನು ಫಸರಿಸುವ ಕಾರ್ಯ ಅನೇಕ ತುಳು ಕಲಾವಿದರು ಮಾಡುತ್ತಿದ್ದರು. ಆದರೂ ತುಳು ಯಕ್ಷಗಾನ ಕಲಾವಿದರನ್ನು ಗುರುತಿಸುವ ಕಾರ್ಯವಾಗುತ್ತಿಲ್ಲ ಎನ್ನುವುದಂತು ಸತ್ಯ. ಇದಕ್ಕೆ ಉದಾಹರಣೆ ಉದಯ ನಾವುಡ ಮಧೂರು.
ತೆಂಕುತಿಟ್ಟು ಯಕ್ಷಗಾನ ಪ್ರಪಂಚದಲ್ಲಿಯೇ ವಿಶಿಷ್ಟವಾದ ಶೈಲಿ ಅಳವಡಿಸಿಕೊಂಡಿದ್ದರು. ಎಲ್ಲಾ ಕಲಾವಿದರು ಬಲದಿಂದ ಎಡಕ್ಕೆ ದಿಗಿಣ ಹಾರಿದರೆ, ಇವರು ಮಾತ್ರ ಎಡದಿಂದ ಬಲಕ್ಕೆ ಹಾರುತ್ತಿದ್ದರು. ಪೆರ್ಡೂರು ಮತ್ತು ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ಮಾಡಿರುವ ಕಾರಣ ತೆಂಕುತಿಟ್ಟಿನಲ್ಲಿಯೂ ಬಡಗಿನ ಶೈಲಿಯನ್ನು ಅವರದೇ ಆದ ಕಲ್ಪನೆಯಲ್ಲಿ ಅಳವಡಿಸಿಕೊಂಡು ಪ್ರತಿಯೊಂದು ಪದ್ಯದಲ್ಲಿಯೂ ಪ್ರತ್ಯೇಕತೆಯನ್ನು ಕಾಯ್ದುಕೊಂಡು ಅಭಿನಯಿಸುತ್ತಿದ್ದರು. ಬಡಗುತಿಟ್ಟಿನಲ್ಲಿ ಚೈತ್ರಚಂದನ, ಸಿರಿಸಂಪಿಗೆ, ಧರ್ಮಸಾಮ್ರಾಜ್ಯ, ಚಾಣಕ್ಯತಂತ್ರಎನ್ನುವ ಪ್ರಸಂಗಗಳಲ್ಲಿ ರಂಜಿಸಿದ ಇವರು ವಿಭಿನ್ನ ಶೈಲಿಯ ಬಡಗು ಅಭಿಮಾನಿಗಳನ್ನು ಪಡೆಯಲು ಸಹಕಾರಿಯಾಗಿದೆ. ನಾಟ್ಯ, ಅಬ್ಬರದ ಕುಣಿತಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದ ನಾವುಡರು ಮಾತುಗಾರಿಕೆಗೆ ಕಡಿಮೆ ಆಸಕ್ತಿ ತೋರಿದ್ದರು. ಮಾತು ಕಡಿಮೆಯಾದರೂ ಸ್ಪಷ್ಟ, ಸ್ಪುಟವಾದ ಮಾತುಗಳಿಂದ ಗುರುತಿಸಿಕೊಂಡಿದ್ದರು.
ತೆಂಕುತಿಟ್ಟಿನ ಯಕ್ಷಗಾನ ರಂಗದಲ್ಲಿಯೇ ದಾಖಲೆಯೆನ್ನಬಹುದು. ತನ್ನ ೧೬ ನೇ ವರ್ಷದ ಯಕ್ಷಗಾನ ತಿರುಗಾಟದಲ್ಲಿ ಪುತ್ತೂರು ಶ್ರೀಧರ ಭಂಡಾರಿ ವ್ಯವಸ್ಥಾಪಕತ್ವದ ಪುತ್ತೂರು ಮೇಳದಲ್ಲಿದ್ದಾಗ `ನಾಡ ಕೇದಗೆ' ಎನ್ನುವ ಪ್ರಸಂಗದಲ್ಲಿ ೪೫೦ ದಿಗಿಣ ಹೊಡೆದಿದ್ದೆ. ಪ್ರತಿಯೊಂದು ದಿಗಿಣ ಹೊಡೆಯುವಾಗ ನಾನೇ ಲೆಕ್ಕ ಹಾಕುತ್ತಿದ್ದೆ ಎಂದು ಸಂತೋಷದಿಂದ ಹೇಳುವ ನಾವುಡರು ಸಂಘಸಂಸ್ಥೆಗಳಿಂದ ಕೆಲವೊಂದು ಕಡೆ ಸನ್ಮಾನಗಳು ದೊರೆತರೂ, ಅನಾರೋಗ್ಯದಿಂದ ಬಳಲುತ್ತಿದ್ದಾಗ ಯಾರು ಗುರುತಿಸುತ್ತಿಲ್ಲ. ಯೌವನದಲ್ಲಿ, ಆರೋಗ್ಯ ಸರಿಯಿರುವಾಗ, ಹಣೆಬರಹ ಚೆನ್ನಾಗಿರುವಾಗ ಅಭಿಮಾನಿಗಳು, ಯಜಮಾನರು ಎಲ್ಲರೂ ಮಾತನಾಡಿಸುತ್ತಾರೆ. ಆರೋಗ್ಯ ಸರಿಯಿಲ್ಲದೇ ಮನೆಯಲ್ಲಿದ್ದಾಗ ಕುಟುಂಬದ ಹೊರತಾಗಿ ಯಾರಿಗೂ ಬೇಡದವರಾಗುತ್ತೇವೆ. ನಾಲ್ಕು ವರ್ಷದಿಂದ ಮೇಳದಿಂದ ಹೊರಗಿದ್ದು, ಯಾರಿಗೂ ಬೇಡದ ಕಲಾವಿದನಾಗಿದ್ದೇನೆ ಎನ್ನುವಾಗ ಅವರ ಕಣ್ಣಂಚಿನಲ್ಲಿ ದುಃಖದ ಕಣ್ಣೀರು ಬಂದು ಮರೆಯಾಗಿತ್ತು.
ಪ್ರತಿ ತಿಂಗಳು ೧೦೦೦ ರೂಗಿಂತಲೂ ಅಧಿಕ ಮದ್ದಿಗಾಗಿ ವ್ಯಯಿಸುವ ಇವರು ಪ್ರಸ್ತುತ ಕೇಬಲ್ ಕಲೆಕ್ಷನ್ ಮಾಡುತ್ತಿದ್ದಾರೆ. ಮೆಚ್ಚಿನ ಮಡದಿಯಾಗಿ ರಾಜೇಶ್ವರಿಯನ್ನು ಕೈಹಿಡಿದ ಇವರ ದಾಂಪತ್ಯದ ಫಲವಾಗಿ ೮ ನೇ ತರಗತಿಯಲ್ಲಿರುವ ಮಗಳು ಸ್ವಾತಿ ಹಾಗೂ ೪ ನೇ ತರಗತಿಯಲ್ಲಿ ಕಲಿಯುತ್ತಿರುವ ಮಗ ಕೃಷ್ಣಪ್ರಕಾಶರೊಂದಿಗೆ ಕಷ್ಟದ ಜೀವನ ನಡೆಸುತ್ತಿದ್ದರೂ, ಮೊಗದಲ್ಲಿರುವ ನಗು ಇನ್ನು ಕೂಡ ಮಾಸಿಲ್ಲ. ಹೃದಯದಲ್ಲಿ ತಿರುಗಾಟದಲ್ಲಿನ ನೋವು-ನಲಿವು, ದೈಹಿಕವಾಗಿ ಬೆನ್ನು ನೋವನ್ನು ಅನುಭವಿಸುತ್ತಿದ್ದರೂ, ಯಕ್ಷಗಾನದ ಕುರಿತು ಅಪಾರವಾದ ಅಭಿಮಾನ ಹೊಂದಿದ್ದಾರೆ. ನೋವು ಕಡಿಮೆಯಾದರೆ ಸಂಪಾದನೆಗಾಗಿ ಅಲ್ಲದಿದ್ದರೂ, ಅಭಿಮಾನಿಗಳಿಗೆ ರಂಜನೆ ನೀಡಲು ಯಕ್ಷಗಾನಕ್ಕೆ ಮರಳಿ ಬರುವ ಇರಾದೆಯನ್ನು ಕೂಡ ಹೊಂದಿದ್ದಾರೆ. ಪ್ರಸ್ತುತ ಯೌವನದಲ್ಲಿ ತನ್ನ ವಿಭಿನ್ನತೆಯ ಗಿರಕಿಯಿಂದಲೇ ಅಭಿಮಾನಿಗಳನ್ನು ರಂಜಿಸಿದ ನಾವುಡರಿಗೆ ಅಭಿಮಾನಿಗಳ ಸಹಕಾರದ ಅಗತ್ಯವಿದೆ. ಅವರ ಕಷ್ಟಕ್ಕಾಗಿ ಮರುಗುವವರು ೦೯೦೪೮೬೩೦೧೨೩ ಸಂಪರ್ಕಿಸಬಹುದು.
ಸಮಾಜದಲ್ಲಿ ಕೈಕಾಲು ಸರಿಯಿದ್ದವರಿಗೆ ಸಹಾಯ ಮಾಡುತ್ತಾ, ಪ್ರಸಕ್ತ ರಂಗದಲ್ಲಿ ಮಿಂಚುವ ಸ್ಟಾರ್ ಕಲಾವಿದರಿಗೆ ದಿನನಿತ್ಯ ಸನ್ಮಾನಗಳು ನಡೆಯುತ್ತಿರುತ್ತವೆ. ಅವರಿಗೆಲ್ಲಾ ಬೇಕಾದಷ್ಟು ಸಂಪಾದನೆ ಮಾಡಿದ್ದರೂ, ಸನ್ಮಾನಗಳಿಂದ ದೊರಕುವ ಮೊತ್ತವು ಕೂಡ ದ್ವಿಗುಣವೇ. ಸನ್ಮಾನ ಮಾಡುವುದು ತಪ್ಪಲ್ಲ. ಕಲಾವಿದನನ್ನು ಗುರುತಿಸುವುದು ಸಮಂಜಸವೇ ಆದರೂ ಸಮಾಜದಲ್ಲಿರುವ ಅಶಕ್ತನಾಗಿರುವ ಕಲಾವಿದನನ್ನು ಗುರುತಿಸಿದಾಗ ಅವರು ಮಾಡಿದ ಕಾರ್ಯಕ್ಕೆ ಸತ್ಪಲ ದೊರಕುವುದರಲ್ಲಿ ಎರಡು ಮಾತಿಲ್ಲ ಎನ್ನುವುದು ನೂರ್ಕಾಲ ಸತ್ಯ. ಮುಂದೆ ಸಂಘಟಕರು ಸಮಾರಂಭ ಆಯೋಜಿಸುವಾಗ ಇಂತಹ ಜನತೆಯ ನೆನಪಿನಲ್ಲಿರುವ ಕಾರ್ಯಕ್ರಮ ರೂಪಿಸುವಂತಾಗಲಿ.
ಯಕ್ಷಗಾನಂ ಗೆಲ್ಗೆ
ಬಾಕ್ಸ್:
ಯಾವುದೇ ಮೇಳವಿರಲಿ, ಅಲ್ಲಿರುವ ಯಜಮಾನರುಗಳ ಮಾನಸಿಕತೆ ಬದಲಾಗಬೇಕು. ಓರ್ವ ಕಲಾವಿದ ಕೈಕಾಲು ಗಟ್ಟಿಯಾಗಿದ್ದುದುಡಿಯುವಾಗ ಅಭಿಮಾನಿಗಳಿಗೆ ಸಂತೋಷ ಪಡಲು, ಯಜಮಾನರಿಗೆ ಖಾತೆ ಭರ್ತಿಯಾಗಿಸಲು ಬೇಕಾಗುತ್ತಾನೆ. ಕಲಾವಿದ ಯಕ್ಷ ತಿರುಗಾಟದ ೬ ತಿಂಗಳು ತನ್ನ ಜೀವವನ್ನೆ ಲೆಕ್ಕಿಸದೆ ಕೆಲಸ ನಿರ್ವಹಣೆ ಮಾಡುತ್ತಾನೆ. ಹರಕೆ ಮೇಳವಾದರೆ ದೇವಸ್ಥಾನಕ್ಕೆ ಪ್ರಸಿದ್ಧಿ, ಡೇರೆ ಮೇಳಗಳಲ್ಲಿ ಯಜಮಾನರುಗಳಿಗೆ ಹೆಸರು, ಕೀರ್ತಿ ಹಾಗೂ ಹಣ. ಆದರೆ ಕಲಾವಿದನಿಗೆ ಮಾತ್ರ ಅಭಿಮಾನಿಗಳು ಹಾಕಿದ ಸಿಳ್ಳೆ, ಚಪ್ಪಾಳೆಗಳು ಮಾತ್ರ. ಅದರಿಂದಲೇ ತಮ್ಮ ಜೀವವನ್ನು ಯಕ್ಷಗಾನಕ್ಕಾಗಿ ತೇಯ್ದ ಕಲಾವಿದರು ಅನೇಕರಿದ್ದಾರೆ. ದೇಹದ ಅನಾರೋಗ್ಯದಿಂದ ಅಶಕ್ತನಾಗಿ ಮೂಲೆಗುಂಪಾದಾಗ ಆತನಿಗೆ ಪ್ರೋತ್ಸಾಹ, ಆಸರೆಯಾಗುವವರು ಕುಟುಂಬಿಕರು ಮಾತ್ರ ಎನ್ನುವ ಬೇಸರದ ನುಡಿ ಉದಯ ನಾವುಡರದ್ದು.
No comments:
Post a Comment