ದೇಶದ ಆರ್ಥಿಕತೆಯ ಬೆನ್ನೆಲುಬನ್ನೇ ಮುರಿಯುವ ಕೈಗಾರಿಕೆಯ ಅಗತ್ಯವಿದೆಯೇ? ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರದ ಕುರಿತಾಗಿ ಒಂದಿಷ್ಟು..
(೧೨೦೦ ಮೆ.ಗಾ ವ್ಯಾಟ್ ನಂದಿಕೂರು ವಿದ್ಯುತ್ ಸ್ಥಾವರದ ದುಷ್ಪರಿಣಾಮ ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಇರುವ ಕರಾವಳಿ ಜನತೆಗೆ ೪ ಸಾವಿರ ಮೆ.ವ್ಯಾಟ್‌ನ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ..ಕೃಷಿ, ಪರಿಸರ, ಪುಣ್ಯಕ್ಷೇತ್ರ, ನದಿ-ಜಲಮೂಲಗಳಿಗೆ ಆಪತ್ತು)
ಮನೆಯ ಮಾಳಿಗೆ ನೋಡುತ್ತಾ ಅಂಗಾತ ಮಲಗಿರುವ ವ್ಯಕ್ತಿ ವರ್ಷವಿಡೀ ಕೂಗುತ್ತಿದ್ದಾನೆ. ಯಾತನಮಯ ನೋವಿನಿಂದ ಕಿರುಚಾಡುತ್ತಿದ್ದಾನೆ. ಆದರೂ ಆತ ಮಗುವಲ್ಲ. ಪ್ರಾಯವಾಗಿದ್ದರೂ ಮಗುವಿನಂತಿರುವ ನಡೆದಾಡಲು ಶಕ್ತಿಯಿಲ್ಲದೇ ಮನೆಯೊಳಗೆ ತೆವಳುತ್ತಾ ಅನೇಕ ವರ್ಷಗಳಿಂದ ಕಾಲ ಕಳೆಯುತ್ತಿದ್ದಾನೆ. ಒಂದೊಂದು ಮನೆಯಲ್ಲಿನ ಮಕ್ಕಳು ಕೂಡ ಯಾವುದೋ ಒಂದು ಸಮಸ್ಯೆಯಿಂದ ನರಳುತ್ತಿದ್ದಾರೆ. ಈ ಪ್ರದೇಶದಲ್ಲಿ ಸುಂದರ ಯುವತಿಯಿದ್ದರೂ, ಕೈ ಹಿಡಿದು ಬಾಳು ನೀಡುತ್ತೇನೆ ಎನ್ನುವುದಕ್ಕೆ ಯಾವ ಯುವಕರು ಮುಂದೆ ಬರುತ್ತಿಲ್ಲ. ಆ ಊರಿನ ಯುವಕರಿಗೆ ಬೇರೆ ಊರಿನವರು ಹೆಣ್ಣು ಕೊಡಲು ಯಾರು ಕೂಡ ಮುಂದೆ ಬರುತ್ತಿಲ್ಲ. ಹುಟ್ಟುವ ಮಕ್ಕಳು ಅಂಗವೈಕಲ್ಯದಿಂದ ಕೂಡಿದ್ದರೆ ಎನ್ನುವ ಭಯದಿಂದ ಹೆಣ್ಣು ಕೂಡ ಗರ್ಭ ಧರಿಸುವುದಿಲ್ಲ. ಇಂತಹ ಅನೇಕ ವೈರುದ್ಯಗಳಿಂದ ನಲುಗುತ್ತಿರುವ ಕೊಕ್ಕಡ, ಪಟ್ರಮೆ ಇತ್ಯಾದಿ ಪ್ರದೇಶಗಳ ಹೆಸರುಗಳನ್ನು ಕೇಳಿದರೆ ಮೈ ಜುಮ್ಮೆನ್ನುತ್ತದೆ. ಇದಕ್ಕೆ ಕಾರಣ ಮಹಾಮಾರಿ ಏಡ್ಸ್, ಕ್ಯಾನ್ಸರ್ ಅಲ್ಲವೇ ಅಲ್ಲಾ. ಅದಕ್ಕಿಂತಲೂ ಭೀಕರವಾದ ಎಂಡೋಸಲ್ಫಾನ್‌ನ ಪರಿಣಾಮವಿದು.
ನವ ಮಂಗಳೂರು ಬಂದರು ನಿರ್ಮಾಣಕ್ಕೆ ಫಲವತ್ತಾದ ಭೂಮಿ ಬಿಟ್ಟು ಕಾಟಿಪಳ್ಳ-ಕೃಷ್ಣಾಪುರ ಕೇಂದ್ರದಲ್ಲಿ ಕಡಿಮೆ ಸೆಂಟ್ಸ್‌ನಲ್ಲಿ ಮನೆಕಟ್ಟಿಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿರುವ ಅನ್ನದಾತನ ಬದುಕಿನ ಬವಣೆ ಅಧ್ಯಯನಕ್ಕೆ ಯೋಗ್ಯವಾಗಿದೆ. ಮಂಗಳೂರು ತೈಲಾಗಾರ ನಿರ್ಮಾಣಕ್ಕೆ ಭೂಸ್ವಾಧೀನವಾಗಿ ಈಗ ಚೇಳಾರಿನಲ್ಲಿ ಏದುಸಿರುವ ಬಿಡುತ್ತಿರುವ ನಿರ್ವಸಿತರು, ಎಂಎಸ್‌ಇಝೆಡ್ ಸ್ಥಾಪನೆಯಿಂದಾಗಿ ಭೂಮಿ ಕಳೆದುಕೊಂಡವರ ಸ್ಥಿತಿಗತಿ. ಪಡುಬಿದ್ರಿ ನಂದಿಕೂರು ವಿದ್ಯುತ್ ಸ್ಥಾವರದ ಸುಮಾರು ೩೦ ಕಿ.ಮೀ ಸುತ್ತಳತೆಯಲ್ಲಿ ಹಸಿರು ಗಿಡಗಳಿಂದು ನಳನಳಿಸುವುದಿಲ್ಲ. ಯುಪಿಸಿಎಲ್‌ನಿಂದ ಹಾರುವ ಬೂದಿಯ ಪ್ರಭಾವದಿಂದ ಪರಿಸರವೇ ನಾಶವಾಗಿದೆ ಎನ್ನುವುದಕ್ಕೆ ಇಲ್ಲಿರುವ ಹೂವು-ಹಣ್ಣುಗಳೇ ಸಾಕ್ಷಿ. ಅಭಿವೃದ್ಧಿಯ ಹೆಸರಿನಲ್ಲಿ ಲಗ್ಗೆಯಿಡುವ ಕೈಗಾರಿಕೆಗಳು ಮನುಷ್ಯರನ್ನು ಮನುಷ್ಯರಾಗಿ ಬದುಕಲು ಅವಕಾಶ ಕೊಡುವುದಿಲ್ಲ. ಕೈಗಾರಿಕೆಗಳು ಭೂಮಿಗೆ ಪರ್ಯಾಯವಾಗಿ ಹಣ ನೀಡಿದ್ದು, ನಮ್ಮ ಬದುಕನ್ನೆ ಕಿತ್ತುಕೊಂಡಿವೆ. ಭೂ ಮಾಲಿಕ ಕೈಗಾರಿಕೆಗಳ ಕಾರಣದಿಂದ ಫಲವತ್ತಾದ ಭೂಮಿ ಕಳೆದುಕೊಂಡು ನರಕ ಜೀವನ ನಡೆಸುತ್ತಿದ್ದಾನೆ. ಕೈಗಾರಿಕೆಗಳಿಗೆ ಭೂಮಿ ಬಿಟ್ಟುಕೊಟ್ಟ ರೈತ ಹಣದ ಥೈಲಿಯನ್ನು ಕೈಯಲ್ಲಿ ಹಿಡಿದುಕೊಂಡು ಬಾರು, ಮೋಜು ಮಸ್ತಿಯಲ್ಲಿ ಕಾಲ ಕಳೆದು ಬಿಕಾರಿಯಾಗುವ ಕಾಲ ಸನ್ನಿಹಿತವಾಗುತ್ತಿದೆಯೊ ಎನ್ನುವ ಭೀತಿ ಕಾಡುತ್ತಿದೆ.
ಮೇಲಿನ ಎಲ್ಲಾ ಅಂಶಗಳು ಸರಕಾರ ಜನಸ್ನೇಹಿ ಎನ್ನುವ ನೆಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿದ್ದರ ಹಿಂದೆ ಜನತೆಗೆ ಆಗಿರುವ ತೊಂದರೆಗಳ ವಾಸ್ತವ ಸತ್ಯ. ಕಡಂದಲೆ, ಕೊಜೆಂಟ್ರಿಕ್ಸ್ ಹಾನಿಕಾರಕ ಕೈಗಾರಿಕೆಗಳನ್ನು ಹಿಮ್ಮೆಟ್ಟಿಸಿದ್ದೇವೆ ಎಂದು ಜನ ಹೆಮ್ಮೆ ಪಟ್ಟುಕೊಂಡರೂ ನಂದಿಕೂರು ಸ್ಥಾವರ ಇವೆರಡಕ್ಕಿಂತ ಹೇಗೆ ಭಿನ್ನ ಎಂದು ಇಂದು ಸಮರ್ಥನೆ ಮಾಡಲು ಸಾಧ್ಯವೇ? ಎಂಆರ್‌ಪಿಎಲ್ ತ್ಯಾಜ್ಯ ನೀರು ಹರಿಸುವ ಕೊಳವೆ ಅಳವಡಿಸುವ ಸಂದರ್ಭ ನಡೆದ ಗೋಲಿಬಾರ್‌ನಲ್ಲಿ ಗಾಯಗೊಂಡವರಿಗೆ ಪರಿಹಾರ, ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿತು ಎನ್ನುವುದು ಬಿಟ್ಟರೆ ಶ್ರೀಸಾಮಾನ್ಯನಿಗೆ ಯಾವುದೇ ಪ್ರಯೋಜನ ಆಗಿಲ್ಲಎನ್ನುವುದು ಕಟುಸತ್ಯ. ನೆಲ-ಜಲ ನಮ್ಮದು. ಆದರೆ ಇಲ್ಲಿ ತಯಾರಾಗುವ ಪೆಟ್ರೋಲ್ ಕಡಿಮೆ ದರದಲ್ಲಿ ಬಳಕೆ ಮಾಡುವ ಭಾಗ್ಯ ರಾಜಧಾನಿ ದೆಹಲಿ ಜನಕ್ಕೆ. ಉದ್ಯೋಗದ ಆಯ್ಕೆಯಲ್ಲೂ ಅವರದ್ದೇ ಮಾನದಂಡ, ಅವರದ್ದೇ ಜನ. ಇಲ್ಲಿಯೂ ತಾರತಮ್ಯವಿದ್ದರೂ, ಎಲ್ಲರೂ ಭಾರತೀಯರು ಎನ್ನುವ ಸಮಾಧಾನ ಒಂದೆಡೆ.
ನಾನೀಗ ಹೇಳ ಹೊರಟಿರುವುದು ದೇಶದ ಬೆನ್ನೆಲುಬಿಗೆ ಏಟಾಗಿರುವ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ನಮ್ಮ ಘನ ಆಡಳಿತ ವ್ಯವಸ್ಥೆ ಮುಂದಾಗಿದೆ. ರೈತ ದೇಶದ ಬೆನ್ನೆಲುಬು ಎನ್ನುವುದು ಎಲ್ಲರಿಗೂ ಗೊತ್ತು. ಅವರಿಂದಲೇ ದೇಶದ ಶೇ.೬೫ರಷ್ಟು ಆರ್ಥಿಕತೆ ದೇಶದ ಮೇಲಾಗುತ್ತದೆ ಎಂದಾಗ ರೈತರ ಸಾಮರ್ಥ್ಯವನ್ನು ಒಪ್ಪಿಕೊಳ್ಳಲೇಬೇಕಲ್ಲವೇ? ಕರಾವಳಿಯ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಪ್ರಸ್ತಾಪಿಸಿರುವ ಕೊಲತ್ತಾರು ಪದವು ಪ್ರದೇಶದಲ್ಲಿ ಹಲವಾರು ರೈತ ಕುಟುಂಬ ಕೃಷಿಯೊಂದಿಗೆ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಈ ಯೋಜನೆಯ ಮೂಲಕ ರೈತರ ಜೀವನ ಹಾಳುಗೆಡವಿದರೆ ದೇಶದ ಬೆನ್ನೆಲುಬು ಮುರಿದಂತಾಗುವುದಿಲ್ಲವೇ?
ಯೋಜನೆಗೆ ಪ್ರಸ್ತಾಪಿಸಿರುವ ಭೂಮಿಯು ಅನುಪಯುಕ್ತ ಪಾಳು ಭೂಮಿ ಎನ್ನುವುದು ಈ ಭೂಮಿ ಗುರುತಿಸಿರುವ ಆಡಳಿತ ಶಾಹಿಗಳ ಹುರುಳಿಲ್ಲದ ವಾದ. ಯೋಜನೆಯ ಪ್ರಾರಂಭಿಕ ಹಂತದಲ್ಲಿ ಒಟ್ಟು ೭೫೦ ಎಕರೆ ಭೂಮಿ ಬೇಕಾಗಿದ್ದು ಇದೀಗ ಗುರುತು ಮಾಡಿರುವ ಭೂಮಿಯಲ್ಲಿ ಸುಮಾರು ೨೦೦ ಎಕರೆಯಷ್ಟು ಸ್ಥಳವು ಗೋಮಾಳದ ಹೊರತಾಗಿ ಉಳಿದ ೫೫೦ ಎಕ್ರೆಗಿಂತ ಹೆಚ್ಚಿನ ಜಾಗದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಇಂದು ನಿಡ್ಡೋಡಿಗೆ ಭೇಟಿ ನೀಡಿದರೆ ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಪ್ರಕೃತಿ ಮಾತೆಯು ನಮ್ಮನ್ನು ಕೈಬೀಸಿ ಕರೆಯುತ್ತಿದ್ದಾಳೆ. ಕಣ್ಣು ಹಾಯಿಸಿದಷ್ಟು ಉದ್ದಕ್ಕೆ ನಾಟಿ ಮಾಡಿರುವ ಹೊಲಗದ್ದೆಗಳು, ಕಬ್ಬು, ಅಡಿಕೆ, ತೆಂಗು, ಕರಿಮೆಣಸು, ವೀಳ್ಯದೆಲೆ ಮೊದಲಾದ ಬೆಳೆಗಳನ್ನು ನಿಡ್ಡೋಡಿಯ ಕೊಲತ್ತಾರು ಪದವು ಪ್ರದೇಶದಲ್ಲಿ ಕಣ್ತುಂಬ ನೋಡಬಹುದು.
ವೈಜ್ಞಾನಿಕ ಯುಗದಲ್ಲಿ ಕೃಷಿಯಿಂದ ವಿಮುಖರಾಗುತ್ತಿರುವವರು ಹೆಚ್ಚಾಗಿದ್ದಾರೆ. ಆದರೂ ಕೊಲತ್ತಾರು ಪದವಿನ ಕಂಬಳ ಗದ್ದೆಯಲ್ಲಿ ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಈ ಜಮೀನಿನ ಮಾಲಕ ಮಾದವ ಗೌಡ. ನಾವು ನಮ್ಮ ಹಿರಿಯರ ಕಾಲದಿಂದ ಇಲ್ಲಿಯೇ ವಾಸವಾಗಿದ್ದೇವೆ. ನಮಗೆ ಕೃಷಿ ಕೆಲಸ ಬಿಟ್ಟರೆ ಬೇರಾವುದೇ ಕೆಲಸಗಳು ತಿಳಿದಿಲ್ಲ. ನಮ್ಮ ಜೀವ ಏನಿದ್ದರೂ, ಈ ಭೂಮಿಯಲ್ಲಿಯೇ ಇದೆ. ಇಲ್ಲಿಂದ ನಮ್ಮನ್ನು ತೊರೆಯುವಂತೆ ಮಾಡಿದರೆ ಪ್ರಾಣಬಿಟ್ಟೆವು ಹೊರತು ಇಲ್ಲಿಂದ ಕದಲುವುದಿಲ್ಲ. ಹುಟ್ಟಿದ ಭೂಮಿಯಲ್ಲಿಯೇ ಸಾಯಲು ಬಯಸುತ್ತೇವೆ ಎಂದಾಗ ಗೌಡರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿರುವುದನ್ನು ಕಂಡಾ ದೇಶ ಕಾಯುವ ಸೈನಿಕರಿಗೂ, ಕೃಷಿ ಭೂಮಿಯನ್ನೇ ತಮ್ಮ ಜೀವನವನ್ನಾಗಿಸಿದ ರೈತರ ಭೂಮಿಯ ಪ್ರೀತಿ ಯಾವ ರೀತಿಯದ್ದೆನ್ನುವುದು ದೃಢಪಡುತ್ತದೆ.
ನೀರಾವರಿ ಪ್ರದೇಶ:
ಕೊಲತ್ತಾರು ಪದವು ಎನ್ನುವ ಪ್ರದೇಶವು ಹೆಸರಿಗೆ ಮಾತ್ರ ಪದವು( ತುಳುಭಾಷೆಯಲ್ಲಿ ಪದವು ಎಂದರೆ ಗುಡ್ಡ ಪ್ರದೇಶ) ಆಗಿದ್ದರೂ ಕೂಡ ಅಲ್ಲಿ ವರ್ಷಪೂರ್ತಿ ನೀರಿನ ಬರ ಎದುರಾಗುವುದಿಲ್ಲ ಎಂಬುದಕ್ಕೆ ಕಂಬಳ ಗದ್ದೆಯಲ್ಲಿ ಮೂರು ಬೆಳೆಗಳನ್ನು ಬೆಳೆಯುವುದು ಹಾಗೂ ತುಂಬಿದ ಬಾವಿಯಿಂದ ಹರಿದು ಹೋಗುತ್ತಿರುವ ನೀರೇ ಸಾಕ್ಷಿ. ನಿಡ್ಡೋಡಿ ಗ್ರಾಮಕ್ಕೆ ನೀರಿನ ಪೂರೈಕೆ ಮಾಡಲು ಏಕೈಕ ಬೋರ್‌ವೆಲ್‌ನ್ನು ಸ್ಥಳೀಯ ಗ್ರಾಮ ಪಂಚಾಯತ್ ಅವಲಂಬಿಸಿದ್ದು ಆ ಬೋರ್ ವೆಲ್ ಇದೇ ಕೊಲತ್ತಾರು ಪದವು ಪ್ರದೇಶದಲ್ಲಿದೆ. ವರ್ಷ ಪೂರ್ತಿ ಇಡೀ ಗ್ರಾಮಕ್ಕೆ ಈ ಬೋರ್ ವೆಲ್‌ನಿಂದಲೇ ಯಾವುದೇ ವ್ಯತ್ಯಯವಿಲ್ಲದೆ ನೀರು ಪೂರೈಕೆಯಾಗುತ್ತಿದೆ. ಯೋಜನೆಗೆ ಹೆಚ್ಚಿನ ಪ್ರಮಾಣದ ನೀರಿರುವುದರಿಂದ ಸರ್ಕಾರ ಈ ಭೂಮಿ ಆಯ್ಕೆ ಮಾಡಿರಬಹುದು. ಹಾಗಾಗಿ ಇಲ್ಲಿ ನಮಗೆ ವರವಾಗಿರುವ ನೀರೇ ಶಾಪವಾಗಿ ಪರಿಣಮಿಸಿದೆ ಎಂಬುದು ಸ್ಥಳೀಯರ ದುಗುಡ.
ಕೃಷಿಯೊಂದಿಗೆ ಹೈನುಗಾರಿಕೆ:
ಸ್ಥಳೀಯ ನಿವಾಸಿಗಳು ಕೃಷಿಯೊಂದಿಗೆ ಉಪಕಸುಬಾಗಿ ಹೈನುಗಾರಿಕೆ ಕೂಡ ಮಾಡುತ್ತಿದ್ದಾರೆ. ಈ ಪ್ರದೇಶದ ಯಾವುದೇ ಮನೆಗಳಿಗೆ ಭೇಟಿ ನೀಡಿದರೂ ಕೂಡ ಮನೆಯ ಹಿತ್ತಲಲ್ಲಿನ ಹಟ್ಟಿಯಲ್ಲಿರುವ ಮೂರರಿಂದ ನಾಲ್ಕು ಹಸುಗಳು ಅಂಬಾ, ಅಂಬಾ ಎನ್ನುವ ಕೂಗಿನಿಂದ ನಮ್ಮನ್ನು ಸ್ವಾಗತಿಸುತ್ತವೆ. ಸುಮಾರು ೪೦೦ ರಾಸುಗಳು ಮೇಯಲು ಸರ್ಕಾರಿ ಭೂಮಿ ಹಾಗೂ ಗೋಮಾಳವಾಗಿರುವ ಸುಮಾರು ೨೦೦ ಎಕರೆ ಪ್ರದೇಶವನ್ನೇ ಅವಲಂಬಿಸಿದ್ದಾವೆ. ನಿಡ್ಡೋಡಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸೊಸೈಟಿ ಇದ್ದು ಇಲ್ಲಿಗೆ ವರ್ಷಕ್ಕೆ ಹೆಚ್ಚಿನ ಹಾಲು ಪೂರೈಕೆಯಾಗುತ್ತಿರುವುದು ಇದೇ ಕೊಲತ್ತಾರು ಪದವಿನಿಂದ.
ಕಲುಷಿತಳಾಗುವಳು ನಂದಿನಿ:
ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ನಿಡ್ಡೋಡಿ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಗೂ ವ್ಯತಿರಿಕ್ತ ಪರಿಣಾಮವುಂಟಾಗುವುದು ಖಂಡಿತ. ಪುಣ್ಯಕ್ಷೇತ್ರ ಕಟೀಲಿನಲ್ಲಿ ಹರಿಯುವ ಪುರಾಣ ಪ್ರಸಿದ್ದ ನಂದಿನಿ ಹೊಳೆಯು ನಿಡ್ಡೋಡಿ ಹಾಗೂ ಮುಚ್ಚೂರು ಗ್ರಾಮಗಳಲ್ಲಿ ಹರಿದು ಆ ನಂತರ ಕಟೀಲ್‌ಗೆ ತಲುಪುತ್ತದೆ. ಹೆಚ್ಚಿನವರಿಗೆ ನಂದಿನಿ ಕಟೀಲು ಕ್ಷೇತ್ರದಲ್ಲಿ ಮಾತ್ರ ಪರಿಚಿತವಾಗಿದೆಯೇ ಹೊರತು ನಿಡ್ಡೋಡಿ ಪ್ರದೇಶದಲ್ಲಲ್ಲ. ಯೋಜನೆಯು ಜಾರಿಯಾದರೆ ಅಲ್ಲೇ ಪಕ್ಕದಲ್ಲಿ ಹರಿಯುವ ನಂದಿನಿ ಕಲುಷಿತಳಾಗುವುದರಲ್ಲಿ ಎರಡು ಮಾತಿಲ್ಲ. ನಂದಿನಿ ಹರಿಯುವ ಪ್ರದೇಶದ ಉದ್ದಕ್ಕೂ ಸುಮಾರು ಮೂರು ಕಿಲೋಮಿಟರುಗಳವರೆಗೆ ನಂದಿನಿಯನ್ನೇ ಆಶ್ರಯಿಸಿ ಬದುಕು ಸಾಗಿಸುವ ರೈತರ ಕೃಷಿ ಭೂಮಿಗೆ ಕಲುಷಿತ ನೀರು ಹರಿದು ಅವರು ಕೂಡ ಸಂಕಷ್ಟ ಪಡಬೇಕಾಗಬಹುದು ಎನ್ನುವ ಆತಂಕ ಜನತೆಯಲ್ಲಿ ಮನಮಾಡಿದೆ.
ಈ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಕೇವಲ ನಿಡ್ಡೋಡಿ ಪ್ರದೇಶದ ಜನರು ಮಾತ್ರ ನಿರಾಶ್ರಿತರಾಗದೆ ಸುತ್ತಮುತ್ತಲಿನ ಗ್ರಾಮಗಳಾದ ಮುಚ್ಚೂರು, ತೆಂಕ ಮಿಜಾರು, ಬಡಗ ಮಿಜಾರು ಗ್ರಾಮಗಳ ಜನರು ಕೂಡ ಸಂಕಷ್ಟ ಎದುರಿಸಬೇಕಾಗುತ್ತದೆ. ಇಲ್ಲಿಂದ ಹಾರುವ ಹಾರು ಬೂದಿ ಸುತ್ತಮುತ್ತಲಿನ ಕೃಷಿ ಭೂಮಿಗಳಿಗೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಲ್ಲದು ಎಂಬುದು ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ಸ್ಥಾಪಿಸಿರುವ ಯುಪಿಸಿಎಲ್ ನಿಂದಾಗಿರುವ ಅಡ್ಡಪರಿಣಾಮಗಳೇ ಸಾಕ್ಷಿ.
ಕೇಂದ್ರ ಸರ್ಕಾರ ತನ್ನ ಪ್ರಾಯೋಜಕತ್ವದಲ್ಲಿ ಈ ಪ್ರದೇಶದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲು ಮನಮಾಡುತ್ತಿದೆ. ನಿಡ್ಡೋಡಿ, ಮೂಡುಬಿದಿರೆ ವಿಧಾನ ಸಭಾ ವ್ಯಾಪ್ತಿಗೆ ಒಳಪಟ್ಟಿರುವ ಗ್ರಾಮ. ಕೆಲ ದಿನಗಳ ಹಿಂದೆ ನೆಮ್ಮದಿಯಿಂದ ತಮ್ಮ ಪಾಡಿಗೆ ತಮ್ಮ ಕೃಷಿ ಚಟುಚಟಿಕೆಗಳನ್ನು ಮಾಡಿಕೊಂಡು ಯಾರದ್ದೇ ಹಂಗಿಲ್ಲದೆ ಜೀವಿಸುತ್ತಿದ್ದ ಈ ಗ್ರಾಮದ ಹಾಗೂ ಆಸುಪಾಸಿನ ಗ್ರಾಮದ ಜನರು ಇಂದು ಆತಂಕದಿಂದಲೇ ದಿನಗಳೆಯುತ್ತಿದ್ದಾರೆ.
ಈ ಹಿಂದೆ ಇಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುತ್ತಾರೆ ಎಂಬ ವದಂತಿ ಮಾತ್ರ ಇತ್ತು. ಆದರೆ ಮೇ ೧೬ ರಂದು ಕೇಂದ್ರ ಸರ್ಕಾರದ ಸಮಿತಿಯೊಂದು ಸಮೀಕ್ಷೆಗಾಗಿ ಈ ಪ್ರದೇಶಕ್ಕೆ ಆಗಮಿಸಿದ ಸಂದರ್ಭದಲ್ಲಿ ಊರಿನವರೆಲ್ಲರಿಗೂ ಬರಸಿಡಿಲು ಬಡಿದಂತಾದರೂ ಎಲ್ಲರೂ ಒಟ್ಟಾಗಿ ತಮ್ಮ ಪ್ರತಿಭಟನೆಗೆ ಸಿದ್ದರಾದರು. ಆ ಸಂದರ್ಭ ಸ್ಥಳೀಯರು, ಬಂದಿರುವ ಅಧಿಕಾರಿಗಳಲ್ಲಿ ಬಂದಿರುವ ಕಾರಣ ಕೇಳಿದಾಗಲೂ ಸ್ಪಷ್ಟ ಉತ್ತರವನ್ನು ತಂಡದಲ್ಲಿದ್ದ ಯಾವುದೇ ಅಧಿಕಾರಿಗಳು ನೀಡಿಲ್ಲ. ಮಾದ್ಯಮದವರು ಬಂದು ಕೇಳಿದಾಗ ನಾವು ಸರ್ವೆ ಮಾಡಲು ಬಂದಿದ್ದೇವೆ ಎಂದು ಹೇಳಿದರು. ಗ್ರಾಮಸ್ಥರು ಬಹಳ ಮುಗ್ದತೆಯಿಂದ ಮಾದ್ಯಮದವರಿಂದಾಗಿ ನಮಗೆ ನಮ್ಮೂರಿನಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾಗುತ್ತದೆ ಎನ್ನುವುದು ತಿಳಿಯಿತೇ ಹೊರತು ಬೇರಾರೂ ನಮಗೆ ಆ ಬಗ್ಗೆ ತಿಳಿಸಿಲ್ಲ ಎನ್ನುತ್ತಿದ್ದಾರೆ.
ಸ್ಪಷ್ಟ ಮಾಹಿತಿ ನೀಡದ ಸರ್ಕಾರ:
ತಮ್ಮೂರಿನಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾಗುತ್ತದೆ ಎಂದು ನಮಗೆ ಮಾದ್ಯಮಗಳಿಂದ ತಿಳಿದ ತಕ್ಷಣ ನಾವು ಸರ್ಕಾರದ ವಿವಿಧ ಇಲಾಖೆಗಳಿಗೆ ತೆರಳಿ ಮಾಹಿತಿ ಪಡೆಯಲು ಪ್ರಯತ್ನಿಸಿದೆವು. ಆದರೆ ಅಂದಿನಿಂದ ಇಂದಿನವರೆಗೂ ಯಾರೂ ಕೂಡ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸ್ಥಳೀಯ ಶಾಸಕರು, ಸಂಸದರು ಹಾಗೂ ಜಿಲ್ಲೆಯ ಇತರ ಜನಪ್ರತಿನಿಧಿಗಳನ್ನು ಭೇಟಿಯಾಗಿ ನಮ್ಮ ಕಷ್ಟ ತೋಡಿಕೊಂಡಾಗ ಎಲ್ಲರೂ ನಾವು ಸ್ಥಾವರ ಸ್ಥಾಪನೆಯಾಗಲು ಬಿಡುವುದಿಲ್ಲ ಎನ್ನುತ್ತಾರೆ. ಆದರೆ ಯಾರೊಬ್ಬರೂ ಇದನ್ನು ಬಲವಾಗಿ ವಿರೋಧಿಸಿಲ್ಲ. ಇಂದು ನಾವು ಎಲ್ಲಾ ರಾಜಕಾರಣಿಗಳಲ್ಲಿ ವಿಶ್ವಾಸ ಕಳೆದುಕೊಂಡಿದ್ದು, ನಮ್ಮ ಹೋರಾಟವನ್ನು ರಾಜಕೀಯ ರಹಿತವಾಗಿ ಮಾಡಲು ನಮ್ಮದೇ ಮುಂದಾಳತ್ವದಲ್ಲಿ 'ಮಾತೃಭೂಮಿ ಸಂರಕ್ಷಣಾ ಸಮಿತಿ' ಎಂಬ ಸಮಿತಿ ನಿರ್ಮಿಸಿ, ಹೋರಾಟದ ರೂಪುರೇಷೆಗಳನ್ನು ರಚಿಸಿ ಅದರಂತೆ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳುವ ಗ್ರಾಮಸ್ಥರಲ್ಲಿ ತಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಬಗೆಗೆ ತಮಗಿದ್ದ ಹತಾಶ ಭಾವನೆ ಅವರ ಮುಖದಲ್ಲಿ ವ್ಯಕ್ತವಾಗುತ್ತಿತ್ತು. ಮಠಾಧೀಶರು ಹಾಗೂ ರಾಜಕಾರಣಿಗಳೆಲ್ಲರೂ ಪತ್ರಿಕೆಗಳಲ್ಲಿ ನಾವು ನಿಡ್ಡೋಡಿ ಯೋಜನೆ ವಿರೋಧಿಸುತ್ತೇವೆ ಎನ್ನುತ್ತಾರೆಯೇ ಹೊರತು ಯಾರೂ ನಮ್ಮ ಬಳಿಗೆ ಬಂದು ನಮ್ಮ ಕಷ್ಟ ವಿಚಾರಿಸಿಲ್ಲ. ಕೆಲವರು ಈ ಯೋಜನೆಯನ್ನು ತಮ್ಮ ಪ್ರಚಾರ ವಸ್ತುವನ್ನಾಗಿ ಮಾಡಲು, ಪತ್ರಿಕೆಗಳಿಗೆ ಹೇಳಿಕೆ ನೀಡುತ್ತಿದ್ದಾರೆ. ಈ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯು ಬಹಳಷ್ಟು ಹಿಂದೆಯೇ ಪ್ರಸ್ತಾವನೆಯಲ್ಲಿದ್ದ ಯೋಜನೆಯೇ ಎನ್ನುವ ಸಂಶಯವೂ ಕಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಇಂತಹ ಹಳ್ಳಿ ಪ್ರದೇಶಗಳಿಗೆ ತೆರಳುವ ರಸ್ತೆಗಳನ್ನು ಸರ್ಕಾರವು ಸಾಕಷ್ಟು ವರ್ಷಗಳ ಹಿಂದೆಯೇ ಅಗಲವಾಗಿ ಅಭಿವೃದ್ದಿಪಡಿಸಿರುವುದು. ಜಿಲ್ಲೆಯ ಇತರ ಯಾವುದೇ ಗ್ರಾಮೀಣ ಪ್ರದೇಶಗಳಿಗೆ ತೆರಳುವ ರಸ್ತೆಯೂ ಈ ರೀತಿ ಅಭಿವೃದ್ದಿ ಹೊಂದಿಲ್ಲ ಎನ್ನುವುದು ಕೂಡ ಗಮನಿಸಬೇಕಾದ ಅಂಶ.
ಆಸ್ತಿಕರ ಶ್ರದ್ದಾ ಕೇಂದ್ರವಾಗಿ ಜಗತ್ತಿನಾದ್ಯಂತ ಇರುವ ಆಸ್ತಿಕರನ್ನು ಸೆಳೆಯುವ ಪುರಾಣ ಪ್ರಸಿದ್ದ ನಂದಿನಿ ನದಿ ತಟದಲ್ಲಿರುವ ಶ್ರೀ ಕ್ಷೇತ್ರ ಕಟೀಲಿಗೆ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರದಿಂದ ಹೆಚ್ಚಿನ ಅಪಾಯ ಕಾದಿದೆ ಎಂಬುದು ನಿಡ್ಡೋಡಿ ಪರಿಸರದ ಜನರ ಗೋಳಾಗಿದೆ. ಈ ಬಗ್ಗೆ ಅವರನ್ನು ವಿಚಾರಿಸಿದರೆ, ಕಟೀಲು ಕ್ಷೇತ್ರದಲ್ಲಿ ಹರಿಯುವ ನಂದಿನಿ ನದಿಯು ನಿಡ್ಡೋಡಿ ಪರಿಸರದಲ್ಲೇ ಹರಿಯುತ್ತಿದೆ. ಇಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ಅದರಿಂದ ಉತ್ಪತ್ತಿಯಾಗುವ ತ್ಯಾಜ್ಯವು ನದಿಗೆ ಸೇರಿ ಮಲಿನಗೊಳ್ಳುತ್ತದೆ. ಇದರಿಂದ ಕಟೀಲು ಕ್ಷೇತ್ರ ಕೂಡ ಮಲಿನವಾಗುವುದು ಎಂಬುದು ಜನರ ಅಳಲು.
ಕಟೀಲು ಕ್ಷೇತ್ರಕ್ಕೆ ತೊಂದರೆ:
ನಿಡ್ಡೋಡಿ ಸ್ಥಾವರದಿಂದ ಕಟೀಲಿಗಾಗುವ ದುಷ್ಪರಿಣಾಮದ ಬಗ್ಗೆ ಶ್ರೀ ಕ್ಷೇತ್ರ ಕಟೀಲಿನ ಮುಖ್ಯ ಅರ್ಚಕ ಲಕ್ಷ್ಮಿನಾರಾಯಣ ಅಸ್ರಣ್ಣರನ್ನು ಟೈಮ್ಸ್ ಆಫ್ ಧೀನಬಂದು ಮಾತನಾಡಿಸಿದಾಗ ನಿಡ್ಡೋಡಿ ಸ್ಥಾವರದಿಂದಾಗಿ ನಿಡ್ಡೋಡಿಗಿಂತಲೂ ಜಾಸ್ತಿಯಾಗಿ ಕಟೀಲಿಗೆ ಹಾನಿಯಾಗಲಿದೆ. ನಿಡ್ಡೋಡಿ ಪರಿಸರವು ಭೌಗೋಳಿಕವಾಗಿ ಅತಿ ಚಿಕ್ಕದಾಗಿದ್ದರೂ ಕೂಡ ಸುತ್ತಮುತ್ತಲಿನ ಹತ್ತು ಹಳ್ಳಿಗಳು ಅದನ್ನೇ ಅವಲಂಬಿಸಿವೆ. ಈ ಪ್ರದೇಶಕ್ಕೆ ಶಿಖರ ಪ್ರಾಯವಾಗಿ ನಿಡ್ಡೋಡಿ ಇದೆ. ಅಲ್ಲಿನ ಜನರು ಶ್ರಮಜೀವಿಗಳಾಗಿದ್ದು ಕೃಷಿಯಿಂದ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಕಟೀಲು ಕ್ಷೇತ್ರಕ್ಕೂ ಆ ಪ್ರದೇಶದ ಜನರೇ ಬೆಳೆಸಿದ ತರಕಾರಿ ಪೂರೈಕೆಯಾಗುತ್ತಿದೆ. ಅಲ್ಲಿ ಹಸಿರು ತುಂಬಿ ತುಳುಕುತ್ತಿದ್ದು, ಕೈಗಾರಿಕೆ ಸ್ಥಾಪನೆಯಾದರೆ ಪರಿಸರ ನಾಶವಾಗುವುದರೊಂದಿಗೆ ಜನರ ಭಾವನಾತ್ಮಕ ಸಂಬಂಧಗಳಿಗೆ ಘಾಸಿಯಾಗುವುದು ಖಂಡಿತ ಎಂದಿದ್ದಾರೆ.
ಮಂಗಳೂರಿನಲ್ಲಿ ಈಗಾಗಲೇ ಸ್ಥಾಪನೆಯಾಗಿರುವ ಎಂಆರ್‌ಪಿಎಲ್ ನಂತಹ ಕೈಗಾರಿಕೆಗಳಿಂದ ವಾತಾವರದಲ್ಲಿ ಸಾಕಷ್ಟು ಏರುಪೇರುಗಳಾಗಿದ್ದು, ಮತ್ತೆ ಇದೇ ಪರಿಸರದಲ್ಲಿ ಕೈಗಾರಿಕೆ ಸ್ಥಾಪನೆಯಾದರೆ ಹಾನಿ ಖಂಡಿತ. ಶ್ರೀ ಕ್ಷೇತ್ರ ಕಟೀಲು ಹಿಂದೂ ಧರ್ಮದ ಕ್ಷೇತ್ರ ಮಾತ್ರವಾಗಿರದೆ ಎಲ್ಲಾ ಜಾತಿ ಧರ್ಮದ ಆರಾಧನೀಯ ಕ್ಷೇತ್ರವಾಗಿದೆ. ಇಲ್ಲಿ ಹರಿಯುವ ನಂದಿನಿ ನದಿ ತೀರ್ಥದಂತಿದ್ದು, ಭಕ್ತಾದಿಗಳು ರೋಗ ರುಜಿನಗಳ ನಿವಾರಣೆಗಾಗಿ ತೀರ್ಥಸ್ಥಾನ ಮಾಡುತ್ತಾರೆ. ಅದರಿಂದ ಅವರಿಗೆ ಉಪಶಮನವಾಗುತ್ತದೆ ಎನ್ನುವುದು ಐತಿಹ್ಯ.
ಕಟೀಲು ಕ್ಷೇತ್ರದಲ್ಲಿ ಪೂಜೆ ಮಾಡಲು ಅರ್ಚಕರು ನದಿಯಲ್ಲಿ ಮಿಂದು ಪೂಜೆ ಮಾಡಬೇಕೆನ್ನುವ ನಿಯಮವಿದೆ. ದೇವಿಗೆ ನಂದಿನಿ ನದಿ ನೀರಿನಿಂದಲೇ ಅಭಿಷೇಕವಾಗಬೇಕು ಎಂಬುದು ದೇವಿಯ ಇಚ್ಚೆ. ಬೇಸಿಗೆ ಕಾಲದಲ್ಲಿ ನೀರಿಗೆ ಕೊರತೆ ಇದ್ದ ಸಂದರ್ಭದಲ್ಲೂ ನದಿಯಲ್ಲಿ ಸುಮಾರು ಅರ್ಧ ಕಿಲೋಮೀಟರ್ ನಡೆದು ಅಲ್ಲಿರುವ ನೀರಿನ ಒರತೆಯಿಂದ ನೀರನ್ನು ಸಂಗ್ರಹಿಸಿ ಸ್ನಾನ ಹಾಗೂ ಅಭಿಷೇಕಕ್ಕೆ ನೀರನ್ನು ಸಂಗ್ರಹಿಸುತ್ತೇವೆ. ಈ ಪರಿಸರದಲ್ಲಿ ಉಷ್ಣ ವಿದ್ಯುತ್ ಸ್ಥಾವರವಾದರೆ ನಂದಿನಿ ಖಂಡಿತವಾಗಿಯೂ ಮಲಿನಲಾಗುವಳು ಹಾಗೂ ದೇವಿಗೆ ಆ ಮಲಿನ ನೀರಿನಿಂದಲೇ ಅಭಿಷೇಕ ಮಾಡಬೇಕಾದ ದುಸ್ಥಿತಿ ಎದುರಾಗಬಹುದು. ನಾವು ದೇಶದ ಅಭಿವೃದ್ದಿಗಾಗಿ ಕೈಗಾರಿಕೆಗಳು ಬೇಕು ಎಂಬುದನ್ನು ಒಪ್ಪುತ್ತೇವೆ ಆದರೆ ಫಲವತ್ತಾದ ಭೂಮಿಯನ್ನು ಅದಕ್ಕಾಗಿ ಬಲಿಕೊಡುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.
ನಿಡ್ಡೋಡಿಯ ಜನರು ಈಗಾಗಲೇ ಹೋರಾಟದ ಹಾದಿ ತುಳಿದಿದ್ದು ನಿಮ್ಮಂತಹ ಪ್ರಭಾವಿ ವ್ಯಕ್ತಿಗಳು ಮುಂದಾಳತ್ವವಹಿಸಿದರೆ ಇನ್ನಷ್ಟು ಪರಿಣಾಮಕಾರಿಯಾಗಬಹುದು ಎನ್ನುವ ಸ್ಥಳೀಯರ ಅಭಿಪ್ರಾಯ ಅಸ್ರಣ್ಣರ ಮುಂದಿಟ್ಟಾಗ ನಾವು ಈ ಹೋರಾಟಕ್ಕೆ ಮುಂದಾಳತ್ವ ವಹಿಸುತ್ತೇವೆ. ಕೈಗಾರಿಕೆಯು ನಿಡ್ಡೋಡಿಗಿಂತಲೂ ಹೆಚ್ಚಿನ ಹಾನಿ ಕಟೀಲು ಕ್ಷೇತ್ರಕ್ಕೆ ಮಾಡುವುದರಿಂದ ಅದು ನಮ್ಮ ಕರ್ತವ್ಯ.
ಮಚ್ಚೂರು ದುರ್ಗಾಪರಮೇಶ್ವರಿ ದೇವಸ್ಥಾನ:
ಸ್ಥಾವರ ರಚಿಸಲು ಗುರುತಿಸಿರುವ ಸ್ಥಳದಿಂದ ಕೇವಲ ಮೂರೇ ಮೂರು ಕಿಲೋ ಮೀಟರ್ ದೂರದಲ್ಲಿರುವುದು ಶತಮಾನಗಳ ಹಿಂದಿನ ಕಥೆ ಹೇಳುವ ಮುಚ್ಚೂರು ದುರ್ಗಾಪರಮೇಶ್ವರಿ ದೇವಸ್ಥಾನ. ಈ ದೇವಸ್ಥಾನ ಇದೀಗ ಹರಿಭಟ್‌ರ ಆಡಳಿತಕ್ಕೆ ಒಳಟ್ಟಿದ್ದು, ಅವರು ಮುಂಬೈಯ ಸಯನ್ ಈಸ್ಟ್ ನಲ್ಲಿರುವ ಗೋಕುಲ್ ಕೃಷ್ಣ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ನಿರ್ವಹಿಸುತ್ತಿರುವ ಕಾರಣ ಅವರ ತಮ್ಮ ರಘುಪತಿ ಭಟ್ ಪೂಜಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರದೇ ಕುಟುಂಬದವರಾದ ರಾಘವೇಂದ್ರ ಭಟ್ ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ನಿಡ್ಡೋಡಿ ಸ್ಥಾವರ ಸ್ಥಾಪನೆಯ ಕುರಿತು ಮುಚ್ಚೂರು ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ನಿರ್ವಹಿಸಿರುವ ಹಿರಿಯರಾದ ಅನಂತ ಭಟ್ ಅವರನ್ನು ಮಾತನಾಡಿಸಿದಾಗ, ಪರಶುರಾಮ ಸೃಷ್ಟಿಯೆಂದೇ ಕರೆಯಲ್ಪಡುವ ನಮ್ಮ ತುಳುನಾಡು ಪ್ರಕೃತಿ ಸಂಪತ್ತಿನಿಂದಾಗಿ ಶ್ರೀಮಂತವಾಗಿದ್ದು, ಇಲ್ಲಿನ ಪ್ರಕೃತಿಯನ್ನು ಕಂಡ ಕೈಗಾರಿಕೆಗಳು ಅದರ ಉಪಯೋಗ ಪಡೆದುಕೊಳ್ಳಲು ಇತ್ತ ಲಗ್ಗೆಯಿಡುತ್ತಿವೆ. ತುಳುನಾಡಿಗೆ ಈಗಾಗಲೇ ಸಾಕಷ್ಟು ಕೈಗಾರಿಕೆಗಳು ಬಂದು ಇಲ್ಲಿನ ಪ್ರಕೃತಿಯನ್ನು ಹಾಳುಗೆಡವಿದ್ದು, ಇದೀಗ ಮತ್ತೆ ಹಸಿರಿನಿಂದ ಕಂಗೊಳಿಸುತ್ತಿರುವ ನಿಡ್ಡೋಡಿ ಪರಿಸರವು ಕೈಗಾರಿಕೆಗಳ ಕೆಂಗಣ್ಣಿಗೆ ಗುರಿಯಾಗುತ್ತಿವೆ. ಇಲ್ಲಿಗೆ ಉಷ್ಣ ವಿದ್ಯುತ್ ಸ್ಥಾವರ ಬಂದರೆ ಪ್ರಕೃತಿ ನಾಶವಾಗುವುದು ಖಂಡಿತ. ನಮಗೆ ಎಲ್ಲಾ ಸೌಲಭ್ಯ ನೀಡಿರುವ ಪ್ರಕೃತಿಯೇ ಶಾಪವಾಗುತ್ತಿದೆ ಎಂದು ತಮ್ಮ ನೋವು ತೋಡಿಕೊಂಡರು.
ಕೊಡಮಣಿತ್ತಾಯ ದೈವಸ್ಥಾನ:
ಮುಚ್ಚೂರು ದೇವಸ್ಥಾನದ ಪರಿಸರದಲ್ಲಿಯೇ ಇರುವ ಕೊಡಮಣಿತ್ತಾಯ ದೈವಸ್ಥಾನವು ಊರ ಜನರ ಬಹು ನಂಬಿಕೆಯ ಕ್ಷೇತ್ರವಾಗಿದ್ದು, ತುಳುನಾಡಿನ ಜನರ ತಿಂಗಳಾದ ಸುಗ್ಗಿ ಸಂಕ್ರಮಣದಂದು ಇಲ್ಲಿ ಉತ್ಸವ ಕಾರ್ಯಾದಿಗಳು ನಡೆಯುತ್ತದೆ. ಇದೀಗ ಆ ದೈವಸ್ಥಾನವೂ ಕೂಡ ಅಪಾಯವನ್ನು ಎದುರಿಸುತ್ತಿದೆ.
ಸಂತ ಥೆರಸಾ ಚರ್ಚ್:
ನಿಡ್ಡೋಡಿ ಪರಿಸರದಿಂದ ಕೂಗಳತೆಯ ದೂರದಲ್ಲಿರುವ ನಿಡ್ಡೋಡಿಯ ಸಂತ ಥೆರೆಸಾ ಚರ್ಚ್ ಗೆ ಭೇಟಿ ನೀಡಿದ ಆರ್ ಎನ್ ಎನ್ ಲೈವ್ ತಂಡದೊಂದಿಗೆ ಈ ಸ್ಥಾವರದ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ ಚರ್ಚಿನ ಧರ್ಮಗುರುಗಳಾದ ರೆವರೆಂಡ್ ಫಾದರ್ ಜೋಸೆಫ್ ಲೋಬೊ, ನಿಡ್ಡೋಡಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಕುಟುಂಬಗಳು ವಾಸಿಸುತ್ತಿವೆ. ಕುಡುಬಿ ಗೌಡ ಮತ್ತು ಕ್ರೈಸ್ತರೇ ಜಾಸ್ತಿಯಾಗಿದ್ದು ಅವರೆಲ್ಲರೂ ಕೃಷಿಯನ್ನೇ ಅವಲಂಬಿಸಿದ್ದಾರೆ. ಸುತ್ತಮುತ್ತಲಿನ ಹಳ್ಳಿಗಳು ನಿಡ್ಡೋಡಿಯಲ್ಲಿ ಬೆಳೆಯುವ ತರಕಾರಿಗಳನ್ನಾಗಲೀ ಅಥವಾ ಇತರ ಕೃಷಿ ಉತ್ಪನ್ನಗಳನ್ನು ಅವಲಂಬಿಸಿದ್ದಾವೆ ಹೊರತು ಮಾರುಕಟ್ಟೆಯಲ್ಲಿ ಸಿಗುವ ವಿಷಭರಿತ ತರಕಾರಿಗಳನ್ನಲ್ಲ. ಇಲ್ಲಿ ಸ್ಥಾವರ ಸ್ಥಾಪನೆಯಾದರೆ ಇಲ್ಲಿನ ಜನರ ಜೀವನ ಹಾಳಾಗುವುದರ ಜತೆಗೆ ಊರೇ ನಾಶವಾಗುತ್ತದೆ. ಸರ್ಕಾರ ಕೈಗಾರಿಕೆ ಸ್ಥಾಪಿಸಬೇಕು ನಿಜ ಆದರೆ ಅವುಗಳಿಗಾಗಿ ಫಲಭರಿತ ಭೂಮಿ ಬಲಿ ನೀಡುವುದು ಸಮಂಜಸವಲ್ಲ. ಇಂದು ಕೈಗಾರಿಕೆಗಳಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ವಾದ ಮಂಡಿಸಿದರೂ ಕೃಷಿಯನ್ನೇ ನಂಬಿ ಅದನ್ನೇ ತಮ್ಮ ಉದ್ಯೋಗವನ್ನಾಗಿಸಿ ಕೊಂಡಿರುವವರನ್ನು ನೆಲೆ ಕಳೆದುಕೊಳ್ಳುವಂತೆ ಮಾಡಿ ಇತರರಿಗೆ ಉದ್ಯೋಗ ನೀಡುವುದೆಂದರೆ ಅದು ಮೂರ್ಖತನವಲ್ಲವೇ? ಸ್ಥಾವರ ಸ್ಥಾಪನೆಯಾಗದಂತೆ ತಡೆಯಲು ಊರಿನವರು ಈಗಾಗಲೇ ಹೋರಾಟ ಪ್ರಾರಂಭಿಸಿದ್ದು, ಅವರ ಹೋರಾಟಕ್ಕೆ ಧರ್ಮಗುರುವಾಗಿ ಜನರನ್ನು ಒಗ್ಗೂಡಿಸುವುದರೊಂದಿಗೆ ನೈತಿಕವಾಗಿಯೂ ನಾನು ಬೆಂಬಲಿಸುತ್ತೇನೆ ಹಾಗೂ ರಾಜ್ಯದ ಜನರು ಬೆಂಬಲಿಸುವಂತೆ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ನೆಲ್ಲಿತೀರ್ಥ:
ನಮ್ಮ ಪತ್ರಿಕೆಯಲ್ಲಿ ಕ್ಷೇತ್ರದರ್ಶನ ವಿಭಾಗದಲ್ಲಿ ನೆಲ್ಲಿತೀರ್ಥದ ಕುರಿತು ಲೇಖನ ಪ್ರಕಟವಾಗಿತ್ತು. ನಿಡ್ಡೋಡಿಯಿಂದ ಕೆಲವು ಕಿಲೋಮೀಟರುಗಳ ದೂರದಲ್ಲಿರುವ ಅಪರೂಪದ ಗುಹಾಲಯ ದೇವಸ್ಥಾನ ನೆಲ್ಲಿತೀರ್ಥ ಕ್ಷೇತ್ರವೂ ಕೂಡ ಇಲ್ಲಿ ನಿರ್ಮಾಣವಾಗುವ ಉಷ್ಣ ವಿದ್ಯುತ್ ಸ್ಥಾವರದಿಂದ ಅಪಾಯ ಎದುರಿಸುತ್ತದೆ. ಈ ದೇವಸ್ಥಾನವು ಬಲು ಅಪರೂಪವಾಗಿದ್ದು, ಗುಹೆಯಲ್ಲಿ ತೆವಳುತ್ತಾ ತೆರಳಿ ಆ ನಂತರ ಸಿಗುವ ವಿಶಾಲವಾದ ಪ್ರಾಂಗಣದಲ್ಲಿರುವ ಸೋಮನಾಥೇಶ್ವರನ ಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಈ ಸ್ಥಳಕ್ಕೆ ರಾಜ್ಯದಾದ್ಯಂತ ಭಕ್ತರು ಆಗಮಿಸುತ್ತಿದ್ದು ಆಸ್ತಿಕರ ಶ್ರದ್ದೆಯ ಕೇಂದ್ರವಾಗಿದೆ. ಉಷ್ಣ ವಿದ್ಯುತ್ ಸ್ಥಾವರದಿಂದ ಪ್ರಕೃತಿಗೆ ಉಂಟಾಗುವ ದುಷ್ಪರಿಣಾಮವು ಕ್ರಮೇಣ ಇಲ್ಲಿನ ಗುಹೆಯ ಮೇಲೂ ಉಂಟಾಗಬಹುದು ಎನ್ನುವುದು ಆಸ್ತಿಕರ ಕೂಗು.
ಕುಡುಬಿ ಜನಾಂಗದ ಸೀತಾರಾಮ ದೇವಸ್ಥಾನ:
ನಿಡ್ಡೋಡಿ ಪ್ರದೇಶದಲ್ಲಿ ನೆಲೆನಿಂತಿರುವ ಕುಡುಬಿ ಸಮುದಾಯದವರ ಆರಾಧ್ಯ ದೇವರಾದ ಅಶ್ವತ್ಹಪುರದ ಸೀತಾರಾಮ ದೇವಸ್ಥಾನವು ಕೂಡ ನಂದಿನಿ ತಟದಲ್ಲಿಯೇ ಇದ್ದು, ಕುಡುಬಿ ಸಂಸ್ಕೃತಿಯ ಹಲವು ಮಗ್ಗುಲುಗಳಿಗೆ ಸಾಕ್ಷಿಯಾಗಿದ್ದು ಇದೀಗ ಅಪಾಯದ ಪರಿಸ್ಥಿತಿ ಎದುರಿಸುತ್ತಿದೆ. ಸ್ಥಾವರ ಸ್ಥಾಪಿಸಲು ಗುರುತಿಸಿರುವ ಕೊಲತ್ತಾರು ಪದವು ಎಂಬ ಸ್ಥಳದಲ್ಲಿರುವ ಕುಡುಬಿ ಸಮಾಜದ ಜನರು ಆರಾಧಿಸುವ ಸಾವಿರ ದೈವಗಳ ದೈವಸ್ಥಾನವು ಸ್ಥಳೀಯರ ಭಕ್ತಿಯ ಕೇಂದ್ರವಾಗಿದ್ದು, ಇಲ್ಲಿ ಯಾವುದೇ ಕೋರಿಕೆಗಳನ್ನು ಸಲ್ಲಿಸಿದರೂ ಕೂಡ ಈಡೇರುತ್ತದೆ ಎನ್ನುವುದು ಸ್ಥಳೀಯರ ನಂಬಿಕೆ. ಹಾಗಾಗಿ ಇತ್ತೀಚೆಗೆ ಊರಿನ ಹಿರಿಯರು ಮಕ್ಕಳೆನ್ನದೆ ಎಲ್ಲರೂ ತಮ್ಮ ಊರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರವು ಸ್ಥಾಪನೆಯಾಗದಂತೆ ಆ ದೈವಗಳೇ ನೋಡಿಕೊಳ್ಳಬೇಕು ಎಂದು ದೈವಗಳಿಗೆ ಮೊರೆ ಹೋಗಿದ್ದಾರೆ.
ಇನ್ನುಳಿದಂತೆ ಶಿಬರೂರಿನ ಕೊಡಮಣಿತ್ತಾಯ ದೈವಸ್ಥಾನ, ಮುಚ್ಚೂರು ಕಾನದ ಶ್ರೀ ರಾಮ ಮಂದಿರ, ದೈಲಬೆಟ್ಟುವಿನ ಅಬ್ಬಗ ದಾರಗ ಮಹಾಲಿಂಗೇಶ್ವರ ದೇವಸ್ಥಾನ, ಸಂಪಿಗೆಯ ಚರ್ಚ್, ಊರಿನಲ್ಲಿರುವ ದೈವಸ್ಥಾನ, ನಾಗಬನ ಮೊದಲಾದ ಶ್ರದ್ದಾ ಕೇಂದ್ರಗಳಿಗೂ ಈ ಸ್ಥಾವರದಿಂದಾಗಿ ಅಪಾಯ ಎದುರಾಗಿದೆ. ಇಲ್ಲಿ ಸ್ಥಾವರ ಸ್ಥಾಪನೆಯಾಗುವುದರಿಂದ ಕೇವಲ ಕೃಷಿ ಅಥವಾ ಹಸಿರು ಮಾತ್ರ ನಾಶವಾಗದೆ, ಹಲವು ಶತಮಾನಗಳಿಂದ ಜನರು ಉಳಿಸಿಕೊಂಡು ಬಂದಿರುವ ಸಂಸ್ಕೃತಿ ಕೂಡ ನಾಶವಾಗುತ್ತದೆ ಎನ್ನುವುದು ಕಟುಸತ್ಯ.
ಒಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಪಾಲು ಇದರಲ್ಲಿ ಅಡಕವಾಗಿದೆ ಎನ್ನುವುದು ಸತ್ಯ
ಸರ್ಕಾರವು ರೈತನ ಬೆಲೆಗಟ್ಟಲಾಗದ ಕೃಷಿ ಭೂಮಿಯಲ್ಲಿ ಯೋಜನೆಯನ್ನು ಸ್ಥಾಪಿಸುವ ಬದಲು ಪಾಳು ಬಿದ್ದಿರುವ ಕಡೆಗಳಲ್ಲಿ ಇಂತಹ ಯೋಜನೆಗಳನ್ನು ಸ್ಥಾಪಿಸಲು ಮನಸ್ಸು ಮಾಡಬೇಕಾಗಿದೆ. ಯಾವುದೇ ಕೈಗಾರಿಕೆಗಳು ಸ್ಥಾಪನೆಯಾಗಬೇಕು ಎಂದಾಗ ಧುತ್ತನೆ ಪ್ರತ್ಯಕ್ಷವಾಗುವ ಹೋರಾಟ ಸಮಿತಿಗಳು. ನಂದಿಕೂರು ಯೋಜನೆಯಲ್ಲಿಯೂ ಕೂಡ ಪರ್ಯಾಯ ಹೋರಾಟ ಸಮಿತಿ, ಪರಿಸರಕ್ಕೆ ಹಾನಿಯಾಗುವುದಿಲ್ಲವೆಂದು ರಕ್ತದಲ್ಲಿ ಬರೆದುಕೊಡುವ ಘೋಷಣೆ- ಚಪ್ಪಾಳೆ ಗಿಟ್ಟಿಸುವಂಥ ಭಾಷಣಗಳು ಸರ್ವೇ ಸಾಮಾನ್ಯ. ಅನೇಕ ಕೈಗಾರಿಕೆಗಳು ಸ್ಥಾಪನೆಗೊಳ್ಳುವ ಪ್ರಾರಂಭದಲ್ಲಿ ಹೋರಾಟಗಳು ನಡೆದಿದ್ದವು. ಆದರೆ ಕೊನೆಯಲ್ಲಿ ಆ ಹೋರಾಟದಲ್ಲಿ ಕಾಣಿಸಿಕೊಂಡಿದ್ದ ಮುಖಗಳನ್ನು ನೋಡಲು ಇನ್ನೊಂದು ಕೈಗಾರಿಕೆಯ ಪ್ರಸ್ತಾಪವಾಗಬೇಕು? ಇಷ್ಟೆಲ್ಲಾ ಹೇಳಿದ ಮೇಲೂ ನಿಡ್ಡೋಡಿ ಸ್ಥಾವರ ಸಮರ್ಥಿಸಿ ಕೊಳ್ಳುವವರಿದ್ದರೆ ಅಂಥವರನ್ನು ಏನೆಂದು ಕರೆಯಬೇಕು. ೧೨೦೦ ಮೆ.ವಾ ಸಾಮರ್ಥ್ಯದ ನಂದಿಕೂರು ಸ್ಥಾವರದ ಅನಾಹುತ ಸಹಿಸಿಕೊಳ್ಳುವುದು ಕಷ್ಟ ಎನ್ನುತ್ತಿರುವಾಗ ೪೦೦೦ ಮೆ.ವಾ ಸಾಮರ್ಥ್ಯದ ಸ್ಥಾವರ ಮತ್ತು ಅದರಿಂದಾಗುವ ಪರಿಣಾಮ ಜೀರ್ಣಿಸಿಕೊಳ್ಳಲು ಸಾಧ್ಯವೇ?
ಕರಾವಳಿಯಲ್ಲಿ ಸ್ಥಾಪನೆಯಾಗಿರುವ ಮತ್ತು ಸ್ಥಾಪನೆಯಾಗುತ್ತಿರುವ ಕೈಗಾರಿಕೆಗಳೆಲ್ಲವೂ ರಾಸಾಯನಿಕ ಆಧಾರಿತ ಮತ್ತು ಕಲ್ಲಿದ್ದಲು ಆಧಾರಿತ. ಹಾಗಾದರೆ ಕರಾವಳಿ ಎನ್ನುವುದು ತ್ಯಾಜ್ಯವನ್ನು ಡಂಪ್ ಮಾಡುವ ತಿಪ್ಪೇಗುಂಡಿಯೇ? ಉದ್ಯೋಗವಕಾಶ ನೀಡುವ ಕೈಗಾರಿಕೆಗಳು ಇತರ ರಾಜ್ಯಗಳಿಗೆ ಅಥವಾ ರಾಜ್ಯದ ಬೇರೆ ಸ್ಥಳಗಳಿಗೆ, ತ್ಯಾಜ್ಯ ವಿಸರ್ಜಿಸುವ ಕೈಗಾರಿಕೆಗಳು ಮಾತ್ರ ಕರಾವಳಿಗೆ ಎಲ್ಲಿದೆ ಸ್ವಾಮಿ ನ್ಯಾಯ? ಆದ್ದರಿಂದ ಜನತೆ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ವಿರೋದ ವ್ಯಕ್ತಪಡಿಸುವುದರೊಂದಿಗೆ ಪರಿಸರವನ್ನು ರಕ್ಷಿಸಬೇಕಾದ ಅಗತ್ಯವಿದೆ ಎನ್ನುವುದು ಸತ್ಯ.
ಏನಂತಿರಾ...
No comments:
Post a Comment