ಖಾಸಗಿ ವಿವಿ ಸ್ಥಾಪನೆಗೆ ರಾಜ್ಯ ಸರಕಾರ ಹಸಿರು ನಿಶಾನೆ: ಕಂಗೆಟ್ಟ ವಿದ್ಯಾರ್ಥಿ ಸಮೂಹ
ವಿದ್ಯಾವಿಹೀನಂ ಪಶು ಸಮಾನ ಎನ್ನುವ ಉಕ್ತಿ ಕೇಳಿದಾಗ ಶಿಕ್ಷಣದ ಕುರಿತಾಗಿ ಮನದಾಳದಲ್ಲಿ ಹುದುಗಿರುವ ಭಾವನೆಗಳು ಮುಖದಲ್ಲಿ ಸಂಚಾರಗೊಂಡು ಆ ಶಬ್ದಕ್ಕೆ ಒಂದು ಅರ್ಥ ಕಲ್ಪಿಸಿ ಕೊಡುವುದರಲ್ಲಿ ಎರಡು ಮಾತಿಲ್ಲ ಎನ್ನುವುದು ನನ್ನ ಭಾವನೆ. ಅಂತೆಯೇ ನಿಮ್ಮೆಲ್ಲರದೂ. ಬುದ್ಧಿಮತ್ತೆಯನ್ನು ಪಡೆದು ಸ್ವಲ್ಪ ವಿಚಾರವನ್ನು ತಾರ್ಕಿಕ ಶಕ್ತಿಯಾಗಿ ಪರಿವರ್ತನೆ ಮಾಡಿ ಲೋಕದಲ್ಲಿ ಪ್ರಸ್ತುತ ಪಡಿಸಲು ಭೂಮಿಯಲ್ಲಿ ಜನಿಸಿದ ಮಾನವನಿಗೆ ವಿದ್ಯೆ ಎನ್ನುವುದು ಅವಶ್ಯಕ. ಹಿಂದಿನ ಕಾಲದಲ್ಲಿ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಶಿಕ್ಷಣವು ಇಂದು ಮಹಿಳೆಯರಿಗೂ ವಿಫುಲ ಅವಕಾಶ ದೊರೆತು, ಅವರನ್ನು ಕೂಡ ಸಮಾಜದ ಮುಖ್ಯವಾಹಿನಿಗೆ ತಂದು ವಿವಿಧ ಸ್ತರಗಳಲ್ಲಿ ಮುಕ್ತವಾಗಿ, ಎದೆಗಾರಿಕೆಯಿಂದ ನಿರ್ಭೀತರಾಗಿ ಕಾರ್ಯ ನಿರ್ವಹಿಸುವಂತೆ ಮಾಡಿದೆ. ಆದರೆ ಇಂದಿನ ಶಿಕ್ಷಣ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂದಾಗ ಯಾಕೋ ಅನುಮಾನ ಕಾಡುತ್ತದೆ.
ನಮ್ಮದು ಋಷಿ ಮುನಿಗಳ ಸಂಸ್ಕೃತಿ. ಪುರಾಣದ ಪುಟವನ್ನು ಒಂದೊಂದಾಗಿ ಸರಿಸಿದಾಗ ನಮಗೆ ವಿದ್ಯೆಯ ಮಹತ್ವ ತಿಳಿಯುತ್ತದೆ. ಪೋಷಕರನ್ನು ಬಿಟ್ಟು, ಗುರು ಮಠದಲ್ಲಿದ್ದು ಕೊಂಡು ಗುರುವಿನ ಸೇವೆ ಮಾಡುತ್ತಾ ವಿದ್ಯೆ ಕಲಿಯುವ ಕಾಲಘಟ್ಟದಲ್ಲಿ ವಿದ್ಯಾದಾನ ವೆನ್ನುವುದು ಶ್ರೇಷ್ಟ ದಾನವೆಂದು ತಿಳಿದುಕೊಂಡ ಮಹಾನ್ ನಾಡು ನಮ್ಮದಾಗಿತ್ತು. ಆದರೆ ಇಂದು ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧೆ. ಶಿಕ್ಷಣದ ಮಹತ್ವ ಕಳೆದುಕೊಂಡು ಅದು ಇಂದು ವ್ಯಾಪಾರಿಕರಣವಾಗಿದೆ. ರಾಜ್ಯಾದ್ಯಂತ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಎಲ್.ಕೆ.ಜಿ ಮತ್ತು ಯುಕೆಜಿ ಗಳ ಪ್ರವೇಶ ನೀತಿ, ಶುಲ್ಕ ನೀತಿಗಳನ್ನು ಸ್ಪಷ್ಟವಾಗಿ ರೂಪಿಸದೇ ಇರುವ ಕಾರಣದಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಶೋಷಣೆ ಗೊಳಗಾಗಿದ್ದಾರೆ. ಕೇವಲ ಕೆ.ಜಿ.ಕ್ಲಾಸ್‌ಗಳಲ್ಲಿ ಪ್ರವೇಶ ಪಡೆಯಲಿಂದು ಲಕ್ಷಗಟ್ಟಲೇ ಶುಲ್ಕ ನೀಡಬೇಕೆಂದರೆ ನಮ್ಮ ದೇಶದಲ್ಲಿ ನಿಶುಲ್ಕವಾಗಿ ಶಿಕ್ಷಣ ನೀಡುತ್ತಿದ್ದ ಮಹಾನ್‌ಶಿಕ್ಷಣದ ಮೌಲ್ಯ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದು ಅರ್ಥವಾಗುತ್ತದೆ. ಎಲ್‌ಕೆ.ಜಿ, ಯುಕೆಜಿ ವ್ಯಾಪಾರೀಕರಣದ ಸಮಸ್ಯೆ ತಡೆಗಟ್ಟಲಾಗದ ಸರ್ಕಾರದ ಕೈಯಲ್ಲಿ ಉನ್ನತ ಶಿಕ್ಷಣದ ದೈತ್ಯಾಕಾರದ ಖಾಸಗಿ ವಿವಿಗಳ ವ್ಯಾಪಾರೀಕರಣ ತಡೆಗಟ್ಟಲು ಸಾಧ್ಯವೇ? ಈಗಾಗಲೇ ಬಿಜೆಪಿ ಆಡಳಿತದ ರಾಜ್ಯ ಸರಕಾರವು ೧೨ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ಧೋರಣೆ ತಳೆದಿರುವುದು ತಿಳಿದುಬಂದಿದೆ.
ಸರಕಾರ ಖಾಸಗಿ ವಿವಿ ಸ್ಥಾಪನೆಗೆ ಸ್ವಷ್ಟ ಮಾರ್ಗಸೂಚಿ ರೂಪಿಸದೆ ಅವುಗಳ ಸ್ಥಾಪನೆಗೆ ಅನುಮತಿ ನೀಡಿದ್ದಾದರೆ ಶಿಕ್ಷಣ ಕ್ಷೇತ್ರದ ವ್ಯಾಪಾರೀಕರಣ ತಡೆಗಟ್ಟಲು ಸಾಧ್ಯವಾಗುತ್ತದೆಯೇ? ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ಪ್ರಸಿದ್ಧಿ ಪಡೆದಿದ್ದು ಬೇರೆ ರಾಜ್ಯದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಹಾತೊರೆಯುತ್ತಿದ್ದಾರೆ. ರಾಜ್ಯದಲ್ಲಿ ಖಾಸಗಿ ವಿವಿಗಳು ಬೇರೆ ರಾಜ್ಯಗಳಲ್ಲಿರುವ ಬಂಡವಾಳ ಶಾಹಿಗಳ ತೆಕ್ಕೆಯಲ್ಲಿರುವುದರಿಂದ ಆ ಕಾಲೇಜುಗಳಲ್ಲಿ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಸಿಗುವುದರೊಂದಿಗೆ ನಮ್ಮ ರಾಜ್ಯದಲ್ಲಿರುವ ದುರ್ಬಲ, ಮಧ್ಯಮ ವರ್ಗ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗುವ ಸಂಭವವೇ ಜಾಸ್ತಿ. ಇದನ್ನು ಗಮನಿಸಿದ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಕಾರ್ಯಕರ್ತರು ರಾಜ್ಯದೆಲ್ಲೆಡೆ ಕಾಲೇಜು ಬಹಿಷ್ಕರಿಸಿ ಪ್ರತಿಭಟನೆ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎನ್ನುವುದು ಇಲ್ಲಿ ಉಲ್ಲೇಖನೀಯ. ಇಲ್ಲಿ ಗಮನಿಸಬೇಕಾದ ಅಂಶ ಖಾಸಗಿ ವಿವಿ ಸ್ಥಾಪನೆಯ ಅನುಮತಿಯನ್ನು ಖಂಡಿಸಿ ಬೀದಿಗಿಳಿದ ವಿದ್ಯಾರ್ಥಿಗಳು ಅನ್ಯರಾಜ್ಯದಿಂದ ಬಂದವರಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿದ ಕನ್ನಡದ ಇತರ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಉದ್ದೇಶದಿಂದ ಹೋರಾಟ ಮಾಡಿದ್ದರ ಹಿಂದೆ ವಿದ್ಯಾರ್ಥಿಗಳಲ್ಲಿರುವ ಮುಂದಾಲೋಚನೆ ಎಲ್ಲಾ ಅಕಾರಿಗಳು ಅರ್ಥಮಾಡಿಕೊಳ್ಳಬೇಕು. ಹಿಂದೆ ರಾಜ್ಯ ಸರಕಾರ ಡಿಪ್ಲೋಮಾ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಹೋರಾಟ ಮಾಡಿದ ಪರಿಣಾಮವಿಂದು ಹೆಚ್ಚಿಸಿದ ಶುಲ್ಕವನ್ನು ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಬೇಕು ಎನ್ನುವ ಆದೇಶದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉಸಿರಾಡುವಂತಾಗಿದೆ ಎನ್ನುವುದು ಮರೆಯುವಂತಿಲ್ಲ.
ರಾಜ್ಯ ಸರಕಾರ ಬೆಳಗಾವಿಯಲ್ಲಿ ಕರೆದಿರುವ ವಿಧಾನ ಮಂಡಲದ ಅವೇಶನದಲ್ಲಿ ಹಲವು ಖಾಸಗಿ ವಿವಿಗಳ ಸ್ಥಾಪನೆಯ ವಿಧೇಯಕ ಮಂಡನೆಯಾಗುವ ಪ್ರಸ್ತಾಪ ಮಾಡುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಸರಕಾರ ಯಾವುದೇ ಪೂರ್ವ ತಯಾರಿ, ಸ್ಪಷ್ಟ-ಮಾರ್ಗಸೂಚಿಯಿಲ್ಲದೆ ಖಾಸಗಿ ವಿವಿ ಪ್ರಾರಂಭಕ್ಕೆ ಅನುಮತಿ ನೀಡಲು ಹೊರಟಿರುವ ಸರಕಾರದ ಕ್ರಮ ಅನುಮಾನಕ್ಕೆ ಎಡೆಮಾಡಿದೆ. ಈಗಾಗಲೇ ಯುಜಿಸಿಯ ಕಪ್ಪುಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಹಲವು ಡೀಮ್ಡ್ ವಿವಿಗಳು ಬೇರೆ ಬೇರೆ ಹೆಸರಿನಲ್ಲಿ ಖಾಸಗಿ ವಿವಿಗಳ ಸ್ಥಾಪನೆಗೆ ಮುಂದಾಗುತ್ತಿವೆ ಎನ್ನುವ ಸಂಶಯವಿದೆ. ಖಾಸಗಿ ವಿಶ್ವವಿದ್ಯಾಲಯಗಳು ರಾಜ್ಯದಲ್ಲಿ ತಮ್ಮ ವ್ಯಾಪಾರ ಕೇಂದ್ರ ತೆರೆಯಲು ರಾಜ್ಯ ಅಥವಾ ಕೇಂದ್ರ ಸರಕಾರದ ಪೂರ್ವಾನುಮತಿಯಿಲ್ಲದೇ, ಯುಜಿಸಿಯ ಮಾನ್ಯತೆಯಿಲ್ಲದೇ ಅಸ್ತಿತ್ವಕ್ಕೆ ಬರಲು ಪ್ರಯತ್ನಿಸುತ್ತಿದೆ.
ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬಡ-ಪ್ರತಿಭಾವಂತ ವಿದ್ಯಾರ್ಥಿಗಳ ಹಿತ ಕಾಪಾಡಲು ಖಾಸಗಿ ವಿವಿಗಳ ಕೆಲವೊಂದು ಅಂಶಗಳು ಸಾರ್ವಜನಿಕ ರಂಗದಲ್ಲಿ ವ್ಯಾಪಕ ಚರ್ಚೆಯಾಗಬೇಕಿದೆ ಎನ್ನುವುದು ನನ್ನ ಭಾವನೆ. ಮಾತ್ರವಲ್ಲ ವಿದ್ಯಾರ್ಥಿಗಳ ಹಿತ ಬಯಸುವ ಪ್ರತಿಯೊಬ್ಬ ನಾಗರಿಕನ ಭಾವನೆ ಇದುವೇ ಆಗಿದೆ. ಸರಕಾರಿ, ಅನುದಾನಿತ-ಅನುದಾನ ರಹಿತ ಕಾಲೇಜುಗಳಲ್ಲಿರುವಂತೆ ಎಸ್‌ಸಿ/ಎಸ್‌ಟಿ/ಒಬಿಸಿ ವಿದ್ಯಾರ್ಥಿಗಳಿಗೆ ಸಿಗುವ ಮೀಸಲಾತಿ ನೀತಿ ಖಾಸಗಿ ವಿವಿಯಲ್ಲಿ ಇರುತ್ತದೆಯೇ? ಈ ವಿವಿಗಳಲ್ಲಿ ಶುಲ್ಕ ನೀತಿ ಹಾಗೂ ಇತರೆ ಶುಲ್ಕಗಳ ಕುರಿತು ಪಾರದರ್ಶಕತೆ ಲಭ್ಯವೇ? ಖಾಸಗಿ ವಿವಿಗಳಲ್ಲಿ ಎಷ್ಟು ಪಟ್ಟು ಶುಲ್ಕ ಹೆಚ್ಚಳ ಇರಬೇಕು ಎನ್ನುವ ಮಾಹಿತಿ? ಮತ್ತು ಈಗಿರುವ ಖಾಸಗಿ ಕಾಲೇಜುಗಳಲ್ಲಿರುವಂತೆ ಸರಕಾರಿ ಕೋಟಾ ಮತ್ತು ಆಡಳಿತ ಮಂಡಳಿ ಸೀಟುಗಳು ಖಾಸಗಿ ವಿವಿಗಳಲ್ಲಿರುವವೇ? (ಖಾಸಗಿ ಇಂಜಿನೀಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ಸರಕಾರಿ ಸೀಟು ಮತ್ತು ಶುಲ್ಕ ನೀತಿ ಇದ್ದಂತೆ). ಆದರೆ ಖಾಸಗಿ ವಿವಿಗಳಲ್ಲಿರುವ ಎಲ್ಲಾ ಸೀಟುಗಳು ಆಡಳಿತ ಮಂಡಳಿ ಸೀಟುಗಳೇ ಆಗಿರುತ್ತವೆ. ಉದಾಹರಣೆ ರಾಜ್ಯದಲ್ಲಿರುವ ಅಲೈಯನ್ಸ್ ಬಿಸಿನೆಸ್ ವಿವಿಯ ಶಿಕ್ಷಣ ವ್ಯಾಪಾರೀಕರಣದ ಚಿತ್ರಣ ನೋಡಿದರೆ ತಿಳಿಯುತ್ತದೆ. ಈ ವಿವಿಯಲ್ಲಿ ೨೦೦೭ರಲ್ಲಿ ಎಂಬಿಎಗೆ ರೂ.೭ಲಕ್ಷವಿತ್ತು. ೨೦೦೯ರಲ್ಲಿ ರೂ.೯.೭೫ ಲಕ್ಷ, ೨೦೧೦ರಲ್ಲಿ ರೂ.೧೧ಲಕ್ಷ, ೨೦೧೧-೧೨ರಲ್ಲಿ ಇದುವೇ ಎಂಬಿಎಗೆ ರೂ.೧೨.೫ ಲಕ್ಷ ಹೆಚ್ಚಳವಾಗಿದೆ. ಅಲ್ಲದೇ ಈ ವಿವಿಯಲ್ಲಿ ಶೇ.೧೫ ಸೀಟುಗಳು ಮಾತ್ರ ಕರ್ನಾಟಕದವರಿಗೆ ಮೀಸಲು ಎಂದಾಗ ಖಾಸಗಿ ವಿವಿಗಳಲ್ಲಿ ಕರ್ನಾಟಕದವರ ಪಾಲು ಎಷ್ಟರವರೆಗೆ ಎನ್ನುವುದು ತಿಳಿಯುತ್ತದೆ. ಅಲೈಯನ್ಸ್ ಬಿಸಿನೆಸ್ ವಿವಿಯಂತೆ ಒಂದು ಕಾಲೇಜ್ ರೀತಿ ಶಿಕ್ಷಣದ ವ್ಯಾಪಾರಿಕರಣ ಮಾಡುವಾಗ ರಾಜ್ಯ ಸರಕಾರ ಕೊಟ್ಟಿರುವ ೧೨ ವಿವಿಗಳು ಶಿಕ್ಷಣದ ವ್ಯಾಪಾರ ಮಾಡುವುದಿಲ್ಲವೆನ್ನುವುದಕ್ಕೆ ಏನು ಗ್ಯಾರಂಟಿ?
ಶಿಕ್ಷಣ ವ್ಯಾಪಾರೀಕರಣದ ಕಾಲಘಟ್ಟದಲ್ಲಿ ಖಾಸಗಿ ವಿವಿಗಳಲ್ಲಿ ಬಡವರು, ಮದ್ಯಮ ವರ್ಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಸಾಧ್ಯವೇ? ಎನ್ನುವ ಸಂದೇಹ ವಿಪರೀತವಾಗುತ್ತಿದೆ. ಸರಕಾರ ಏಕಾಏಕಿ ನಿರ್ಧಾರದಿಂದ ಖಾಸಗಿ ವಿವಿಗಳ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿದ್ದು, ಈ ವಿವಿಗಳಲ್ಲಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಮೀಸಲಾತಿ, ಶುಲ್ಕ ರಿಯಾಯಿತಿ, ಶುಲ್ಕ ಪಡೆಯುವಲ್ಲಿ ಪಾರದರ್ಶಕತೆ ಇನ್ನಿತರ ಶುಲ್ಕಗಳ ಯಾವುದೇ ಮಾಹಿತಿಯ ರೂಪುರೇಷೆಯಿಲ್ಲದಿರುವುದರಿಂದ ಈ ವಿವಿಗಳಲ್ಲಿ ಶ್ರೀಮಂತ ವಿದ್ಯಾರ್ಥಿಗಳು ಪ್ರತಿಷ್ಠೆಗಾಗಿ ಶಿಕ್ಷಣ ಪಡೆಯ ಬಹುದಾಗಿದೆ. ಸರಕಾರ ಅವುಗಳಿಗೆ ಅನುಮತಿ ನೀಡುವುದಕ್ಕಿಂತ ಮುಂಚಿತ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳ ದಾಖಲಾತಿ ಮತ್ತು ಸಿಬ್ಬಂಗಳ ನೇಮಕಾತಿಯಲ್ಲಿ ಮೀಸಲಾತಿ, ರೋಸ್ಟರ್ ಪದ್ಧತಿಯನ್ನು ಅನುಸರಿಸುತ್ತವೆಯೇ ಎನ್ನುವುದನ್ನು ಯಾಕೆ ಮನಗಂಡಿಲ್ಲ ಎನ್ನುವುದು ಯಕ್ಷಪ್ರಶ್ನೆ ಅಲ್ಲವೇ?
ಖಾಸಗಿ ವಿವಿಯಲ್ಲಿ ಶೇ.೫೦ ರಷ್ಟು ವಿದ್ಯಾರ್ಥಿಗಳು ಕರ್ನಾಟಕದವರಿದ್ದು, ಇವರ ಶುಲ್ಕವನ್ನು ಸರ್ಕಾರ ನಿಗದಿಪಡಿಸಬೇಕು. ವಿವಿಯ ಪ್ರವೇಶದ ಸಂದರ್ಭದಲ್ಲಿ ಸೀಟು ಹಂಚಿಕೆ ಮತ್ತು ಶುಲ್ಕ ನೀತಿಯನ್ನು ರೂಪಿಸಲು ವಿಶ್ರಾಂತ ಕುಲಪತಿಗಳ ನೇತೃತ್ವದಲ್ಲಿ ಶುಲ್ಕ ಸಂರಚನೆ ಮತ್ತು ಸೀಟು ಹಂಚಿಕೆ ಸಮಿತಿಯನ್ನು ಸರಕಾರವೇ ನೇಮಿಸಬೇಕು. ಅಲ್ಲದೇ ಖಾಸಗಿ ವಿವಿಗಳಿಗೆ ಅನುಮತಿ ನೀಡಿದರೆ ವಿದ್ಯಾರ್ಥಿಗಳ ದಾಖಲಾತಿ ಮತ್ತು ಸಿಬ್ಬಂದಿಗಳ ನೇಮಕಾತಿ ಸಂದರ್ಭ ಮೀಸಲಾತಿ ಮತ್ತು ರೋಸ್ಟರ್ ಪದ್ದತಿ ಅನುಸರಿಸಬೇಕು. ಖಾಸಗಿ ವಿವಿಗಳಲ್ಲಿ ಯುಜಿಸಿಯ ನಿಯಮಾವಳಿಗೆ ಅನುಗುಣವಾಗಿ ಬೇಕಾದ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಹೊಂದಿರಬೇಕು. ಉದ್ದೇಶಿತ ಖಾಸಗಿ ವಿವಿಗಳು ಯಾವುದೇ ಕಾಲೇಜುಗಳ ಸಂಯೋಜನೆ ಹೊಂದುವಂತಿಲ್ಲ. ಖಾಸಗಿ ವಿವಿಗಳ ಕಾರ್ಯವ್ಯಾಪ್ತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಅದಕ್ಕೆ ನಿರ್ಬಂದವನ್ನಿರಿಸಬೇಕು. ಉದ್ದೇಶಿತ ಖಾಸಗಿ ವಿವಿ ವ್ಯಾಪ್ತಿಯಲ್ಲಿ ಬರುವ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ೧೫೬ ಮೆಡಿಕಲ್, ೨೦೦ ಡೆಂಟಲ್, ೧೬೮೮ ಇಂಜಿನಿಯರಿಂಗ್ ಸೀಟುಗಳು ಸಿಇಟಿ ಸರಕಾರಿ ಕೋಟಾದಡಿ ವಿದ್ಯಾರ್ಥಿಗಳಿಗೆ ದೊರೆಯುತ್ತಿದ್ದು, ಈ ಸೀಟುಗಳ ಪರಿಸ್ಥಿತಿ ಏನು ಎನ್ನುವುದರ ಕುರಿತು ಮಾಹಿತಿ ಒದಗಿಸಬೇಕು. ಈ ವಿವಿಗಳು ದೂರಶಿಕ್ಷಣ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಬಾರದು. ಈಗಾಗಲೇ ಕಪ್ಪುಪಟ್ಟಿಯಲ್ಲಿರುವ ಜೈನ್ ವಿವಿ, ದೇವರಾಜ್ ಅರಸು ವಿವಿಗಳಿಗೆ ಖಾಸಗಿ ವಿವಿಯ ಸ್ಥಾನಮಾನ ನೀಡಬೇಕೆ? ಅಲ್ಲದೇ ಅಲಯನ್ಸ್ ವಿವಿಯು ರೂ.೫೦ಕೋ.ಯುಜಿಸಿಯ ಅನುದಾನ ಪಡೆದಿದ್ದು ಯಾವ ಆಧಾರದ ಮೇಲೆ ಇಷ್ಟು ದೊಡ್ಡ ಮೊತ್ತದ ಹಣ ಪಡೆಯಲು ಸಾಧ್ಯವಾಯಿತು? ಅಲ್ಲದೇ ಖಾಸಗಿ ವಿವಿಗಳು ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಚಟುವಟಿಕೆಗಳನ್ನು ನಡೆಸಲು ಉತ್ಸುಕರಾಗಿರುವುದು ಏಕೆ?
ಖಾಸಗಿ ವಿವಿಗಳು ರಾಜ್ಯದಲ್ಲಿ ಕ್ಯಾಂಪಸ್ ಇಲ್ಲದಿದ್ದರೂ ಶಿಕ್ಷಣ ಕ್ಷೇತ್ರಕ್ಕೆ ಆಸಕ್ತಿ ತೋರುತ್ತಿದ್ದು, ಅವರು ಇಲ್ಲಿ ತೆಗೆದುಕೊಳ್ಳುವ ಭೂಮಿಯ ಬೆಲೆಯು ನೇರವಾಗಿ ವಿದ್ಯಾರ್ಥಿಗಳಿಂದ ವಸೂಲಿ ಮಾಡಬಹುದು ಎನ್ನುವ ನಂಬಿಕೆಯಿಂದಲ್ಲವೇ? ಅಲ್ಲದೇ ಈ ವಿವಿಗಳು ಕಾಷನ್ ಡೆಪಾಸಿಟ್ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುತ್ತಿರುವುದರ ಮೇಲೆ ನಿಯಂತ್ರಣವಿಲ್ಲದಿರುವ ಯಾವುದೇ ಅಂಶ ಗಮನಿಸದ ಸರಕಾರ ಈಗಿರುವ ಶಿಕ್ಷಣ ಪದ್ದತಿಯನ್ನು ಸರಿಯಾಗಿ ನಿಯಂತ್ರಿಸದೆ ಖಾಸಗಿ ವಿವಿಗಳ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿರುವುದರ ಹಿಂದಿರುವ ತಂತ್ರ ಶಿಕ್ಷಣದ ವ್ಯಾಪಾರೀಕರಣವೇ?
ಎಲ್ಲಾ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಕೇಳುವ ಪ್ರಶ್ನೆಗೆ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕಚ್ಚಾಡುವ ನಾಯಕರುಗಳು ಉತ್ತರಿಸಿಯಾರೇ? ಮುಂದಿನ ಪೀಳಿಗೆಗೆ ಉನ್ನತ ಶಿಕ್ಷಣ ಮರೀಚಿಕೆಯಾಗಬಾರದು ಎನ್ನುವ ಉದ್ದೇಶವಿದ್ದರೆ ಖಾಸಗಿ ವಿವಿಗಳಿಗೆ ಅನುಮತಿ ನೀಡದೆ ಈಗಿರುವ ಶಿಕ್ಷಣದ ವ್ಯವಸ್ಥೆಯನ್ನು ಸರಿಪಡಿಸಿ, ಗುಣಮಟ್ಟದ ಶಿಕ್ಷಣವನ್ನು ಮದ್ಯಮ, ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೊರಕುವಂತಾಗಬೇಕು? ವಿದ್ಯಾರ್ಥಿಗಳ ಹೋರಾಟಕ್ಕೆ ನಮ್ಮ ಕಿಂಚಿತ್ ಪ್ರಯತ್ನ ಬೇಡವೇ ಎನ್ನುವ ಪ್ರಶ್ನೆಯನ್ನು ತಮಗೆ ಹಾಕಿಕೊಂಡಾಗ ಸರಕಾರದ ಈ ಯೋಜನೆ ಜಾರಿಯಾದರೆ ಅದನ್ನು ನಿಯಂತ್ರಿಸಬಹುದಲ್ಲವೇ.....?
No comments:
Post a Comment