Monday, 21 January 2013
ಮಾನಸಿಕತೆಯ ಬದಲಾವಣೆ-ಭವಿಷ್ಯತ್ತಿನ ಸಮಾಜ ನಿರ್ಮಾಣ
ಅತ್ಯಾಚಾರ-ಹೆಣ್ಣು-ಗಂಡುಗಳ ನಡುವಿನ ತಪ್ಪು-ಒಪ್ಪು
ದೇಶದಲ್ಲಿ ಹಲವಾರು ಹೆಣ್ಣುಮಕ್ಕಳ ಮೇಲೆ ನಡೆದ ಮೃಗೀಯ ವರ್ತನೆಯ ಅತ್ಯಾಚಾರದ ಕುರಿತಂತೆ ವಿಷಾಧವಿದ್ದರೂ, ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ತಾರತಮ್ಯದ ಕುರಿತು ಕೆಲವೊಂದು ಮಾತುಗಳನ್ನು ಈ ಸಂದರ್ಭದಲ್ಲಿ ಪ್ರಚುರ ಪಡಿಸುವುದು ಪ್ರಸ್ತುತವೇ ಸರಿ? ದೆಹಲಿಯಲ್ಲಿನ ಘಟನೆ ಹಾಗೂ ಧರ್ಮಸ್ಥಳ ಉಜಿರೆಯ ಸೌಜನ್ಯ ಸೇರಿದಂತೆ ಹಲವಾರು ಪ್ರಕರಣ ಗಮನಿಸಿದರೆ ಅರಳುವ ಹೂಗಳು ತಮ್ಮ ಮೊಗ್ಗಿನ ಸುವಾಸನೆಯನ್ನು ಪ್ರಪಂಚ ಮುಖಕ್ಕೆ ಪಸರಿಸುವ ಮುನ್ನವೆ ಕಾಮಾಂಧರ ಅಟ್ಟಹಾಸಕ್ಕೆ ಸುಟ್ಟು ಕರಕಲಾಗಿ ಕಮರಿಹೋಗಿವೆ. ಆದರೂ ಬುದ್ಧಿಜೀವಿಗಳೆನಿಸಿಕೊಂಡವರು ದೆಹಲಿಯಲ್ಲಿನ ಘಟನೆಗೆ ಪತ್ರಿಕಾ ಹೇಳಿಕೆ ನೀಡುತ್ತಾ ತಾವು ಸಮಾಜದಲ್ಲಿ ಸಭ್ಯರಂತೆ ನಡೆದುಕೊಳ್ಳುತ್ತಾ ಪ್ರತಿಭಟನೆ ಮಾಡುತ್ತಿದ್ದೇವೆ ಎನ್ನುವುದರ ಹಿಂದೆ ಅತ್ಯಾಚಾರದಿಂದ ಹತಳಾದ ವಿದ್ಯಾರ್ಥಿನಿಯ ಕುಟುಂಬಕ್ಕೆ ನಿಜವಾಗಿಯೂ ನ್ಯಾಯ ಒದಗಿಸಬೇಕು ಎನ್ನುವ ಕಾಳಜಿ ಇದೆಯೇ? ಅಥವಾ ರಾಜಧಾನಿಯಲ್ಲಿ ನಡೆದ ಘಟನೆಯಿಂದ ತಮಗೆ ಸುಲಭವಾಗಿ ಪ್ರಚಾರ ಸಿಗುತ್ತದೆ ಎನ್ನುವ ನಂಬಿಕೆಯೇ? ರಾಜಧಾನಿಯಲ್ಲಿ ನಡೆದ ಅತ್ಯಾಚಾರ ಹಾಗೂ ಮಾರ್ನಿಂಗ್ ಮಿಸ್ಟ್‌ನಲ್ಲಿ ಮಜಾ ಉಡಾಯಿಸಲು ಹೋದ ಹೆಣ್ಣು ಮಕ್ಕಳ ಕುರಿತು ಕಣ್ಣೀರು ಹರಿಸುವ ಬುದ್ದಿಜೀವಿಗಳು ಕರಾವಳಿಯಲ್ಲಿ ಅನೇಕ ಮೊಗ್ಗುಗಳನ್ನು ಹಿಸುಕಿ ಹಾಕಿದರಲ್ಲಾ ಆ ಕುರಿತಂತೆ ಷಂಡರಂತೆ ವರ್ತಿಸುತ್ತಿರುವ ಮರ್ಮವೇನು? ದೆಹಲಿಯ ಹಾಗೂ ಉಜಿರೆಯಲ್ಲಿ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯರಲ್ಲಿ ಭೇದ-ಭಾವ ಸೃಷ್ಟಿಸುವುದು ತರವೇ? ದೇಶದ ರಾಜಧಾನಿಯಲ್ಲಿ ನಡೆದ ಘಟನೆಯನ್ನು ಹೈಲೈಟ್ ಮಾಡಲು ಶ್ರಮಿಸಿದರೆ ಪ್ರಪಂಚಕ್ಕೆ ಮಾದರಿಯಾಗಿರುವ ಧರ್ಮದ ಬೀಡಾಗಿರುವ ಧರ್ಮಸ್ಥಳದಲ್ಲಿ ನಡೆದ ಘಟನೆಯ ಕುರಿತು ಮೌನಮುದ್ರೆ ಯಾಕಾಗಿ? ಎನ್ನುವ ಸಂಶಯ. ಅತ್ಯಾಚಾರಗಳು ನಡೆದಾಗ ಪ್ರಗತಿಪರ ಚಿಂತಕರು ಹೆಣ್ಣುಮಕ್ಕಳ ಉಡುಗೆ-ತೊಡುಗೆಯಲ್ಲಿ ಬದಲಾವಣೆಯಾಗಿದೆ. ವಿದ್ಯುನ್ಮಾನ ಮಾಧ್ಯಮ ಹಾಗೂ ಸಿನಿಮಾದ ಪ್ರಭಾವದಿಂದ ಅತ್ಯಾಚಾರ ಜಾಸ್ತಿಯಾಗುತ್ತಿದೆ ಎನ್ನುತ್ತಾರಲ್ಲಾ ಇದು ಎಷ್ಟರಮಟ್ಟಿಗೆ ಸರಿ ಸ್ವಾಮಿ? ಪಕ್ಕದ ಮನೆಯ ತೆಂಗಿನ ಮರದ ಗರಿ ನಮ್ಮ ಅಂಗಳಕ್ಕೆ ಬಿದ್ದರೆ ಕೋರ್ಟ್‌ಗೆ ಹೋಗುವ ನಾವು ದೇಶ, ರಾಜ್ಯ, ಜಿಲ್ಲೆ ಮಾತ್ರವಲ್ಲದೇ ಪಕ್ಕದ ಮನೆಯಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳನ್ನು ಕಂಡು-ಕಣ್ಣಿಲ್ಲದವರಂತೆ ವರ್ತಿಸುವುದಾದರೂ ಯಾಕೆ? ಕರಾವಳಿಯ ಬುದ್ದಿವಂತರೆನಿಸಿಕೊಂಡ ಜನರು ಇದಕ್ಕೆ ಉತ್ತರಿಸಿಯಾರೇ?
ಸಮಾಜದಲ್ಲಿ ನೀತಿ ಹೇಳುವವರು ಮಾಡುವ ಅನ್ಯಾಯಗಳ ಕುರಿತು ನಾವೆಲ್ಲಾ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಯೆಲ್ಲಾ ಕಾಮ ತುಂಬಿಕೊಂಡು ಮೇಲ್ನೋಟಕ್ಕೆ ರಾಮ ಕೃಷ್ಣ--ಗೋವಿಂದ, ಅಲ್ಲಾ, ಏಸು ಎಂದು ದೇವರ ಹೆಸರನ್ನು ಹೇಳುತ್ತಿರುತ್ತಾರೆ. ಅಲ್ಲದೇ ಕುತ್ತಿಗೆಯಲ್ಲಿ ಜ್ಯೋತಿಷಿಗಳು ಹೇಳಿದ ಮಾಲೆಗಳೆಲ್ಲಾ ನೇತಾಡುತ್ತಿರುತ್ತವೆ. ಹಣೆಯ ಮೇಲೆ ಕುಂಕುಮ, ವಿಭೂತಿಗಳು ರಾರಾಜಿಸುತ್ತವೆ. ಆದರೆ ಹುಡುಗಿಯ ವಿಷಯ ಮಾತನಾಡಿದರೆ ಸಾಕು ಕಿವಿ ನಿಮಿರಿ ಕೊಳ್ಳುತ್ತದೆ. ಇದನ್ನೆಲ್ಲಾ ನೋಡಿದರೆ ಪ್ರಪಂಚವೇ ವಿಚಿತ್ರವೆನಿಸುತ್ತದೆ. ನೋಡುವ ದೃಷ್ಟಿ ಬದಲಾಗಿದೆಯೇ ಅಥವಾ ಬದಲಾದ ಪ್ರಪಂಚದಲ್ಲಿ ನಮ್ಮ ಮಾನಸಿಕತೆ ನಾವು ಬದಲಿಸಿಕೊಂಡಿದ್ದೇವೆಯೇ ಎನ್ನುವ ಜಿಜ್ಞಾಸೆ ಮೂಡುತ್ತದೆ. ಮನೆಯಲ್ಲಿ ಹೆಂಡತಿಯಾದವಳು ಚೆನ್ನಾಗಿ ಡ್ರೆಸ್ ಮಾಡಿಕೊಂಡು ಬಂದು ಗಂಡನಲ್ಲಿ ಕೇಳಿದರೆ ಪತಿ ಮಹಾಶಯ ತಾನು ಬ್ಯುಸಿ ಎನ್ನುವುದನ್ನು ತೋರ್ಪಡಿಸಲು ಕೇಳಿದರೂ ಕೇಳದಂತೆ ವರ್ತಿಸುತ್ತಾನೆ. ಅದುವೇ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಕಚೇರಿಯಲ್ಲಿ ತನ್ನ ಸಹದ್ಯೋಗಿ ಹೆಣ್ಣು ಮಕ್ಕಳು ಮಾಡಿಕೊಂಡ ಡ್ರೆಸ್‌ಗಳ ಕುರಿತು ಇಲ್ಲದ ಹೇಳಿಕೆಗಳನ್ನು ನೀಡಿ ಅವಳನ್ನು ಹೊಗಳುತ್ತಾನೆ. ಇದುವೇ ಪ್ರಪಂಚದ ದಿನನಿತ್ಯದ ವಿಷಯವಲ್ಲವೇ?
ಹೆಣ್ಣು ಚಿಕ್ಕವಳೋ ಅಥವಾ ದೊಡ್ಡವಳೋ? ಹೆಣ್ಣು, ಆಂಟಿ, ಅಜ್ಜಿ, ಆಫೀಸ್‌ನಲ್ಲಿರುವ ಮೇಡಂ, ಸೆಕ್ರೇಟರಿ, ಕಾಲೇಜ್‌ನಲ್ಲಿರುವ ಲೇಡಿ ಲೆಕ್ಚರರ್, ಕೆಲಸದವಳು ಒಂದಷ್ಟು ಕಣ್ಣುಗಳು ಇವರೆಲ್ಲರ ಮೇಲೆ ಓಡಾಡುತ್ತಿರುತ್ತವೆ. ಅವಳ ಕುರಿತಂತೆ ಒಂದಷ್ಟು ಅನಾಮಿಕ ಚರ್ಚೆಗಳು ಎಗ್ಗಿಲ್ಲದೆ ಓಡಾಡುತ್ತಿರುತ್ತವೆ. ಸಣ್ಣ ಪುಟ್ಟ ಕಂಪೆನಿಗಳು ಮಾತ್ರವಲ್ಲದೇ ದೊಡ್ಡ ಕಂಪೆನಿಗಳು, ಬಸ್ಸು, ದೇವಸ್ಥಾನ, ಪೆಟ್ರೋಲ್ ಬಂಕ್, ವಿಧಾನ ಸೌಧ, ಸಂಘ-ಸಂಸ್ಥೆಗಳು, ಹೊಟೇಲ್‌ಗಳು...ಒಂದೇ ಸ್ಥಳವೇ ಕಾಮುಕ ಕಣ್ಣುಗಳಿಗೆ ಅವರ ನಡವಳಿಕೆಗೆ ಆಜಾಗ -ಈ ಜಾಗ ವೆನ್ನುವುದಿಲ್ಲ. ಅನೇಕ ಅತ್ಯಾಚಾರಗಳು ನಡೆದಾಗ ಒತ್ತಡದ ಪ್ರಪಂಚದಲ್ಲಿಯೂ ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡುವ ಕುಶಾಗ್ರಮತಿಗಳು ಈ ಸಮಾಜದಲ್ಲಿ ಅನೇಕರಿದ್ದಾರೆ. ಅತ್ಯಾಚಾರಕ್ಕೆ ಸಿನಿಮಾ, ಹೆಣ್ಣು ಧರಿಸುವ ಉಡುಗೆ ತೊಡುಗೆಗಳೆ ಕಾರಣವೆನ್ನುವುದನ್ನು ಸಾರಿ ಹೇಳುತ್ತಾರೆ. ಇಲ್ಲಿ ತಪ್ಪು ಯಾರದ್ದು ಎನ್ನುವುದಕ್ಕಿಂತ ಅದನ್ನು ಸರಿಪಡಿಸುವುದು ಹೇಗೆ ಎನ್ನುವ ಉತ್ತರ ಕಂಡುಕೊಳ್ಳಬೇಕಿದೆ.
ವೈಜ್ಞಾನಿಕ ಪ್ರಗತಿಯ ಬೆನ್ನಲ್ಲೇ ಸಿನಿಮಾ ರಂಗದಲ್ಲಿ ಅನೇಕ ಸಾಹಸ ಕಾರ್ಯ ಹಾಗೂ ಬದಲಾವಣೆಗಳು ನಡೆದು ಹೋದವು. ಹೊಸ ತಂತ್ರಜ್ಞಾನ ಬಳಸಿಕೊಂಡು ಜನತೆಯ ರುಚಿಗೆ ತಕ್ಕಂತೆ ಸಿನಿಮಾ ನೀಡುತ್ತಿದ್ದ ಮನರಂಜನೆಯ ಮಾಧ್ಯಮವೇ ಇಂದು ಮಕ್ಕಳ ಮೇಲೆ ಪ್ರಭಾವ ಬೀರಿ ಸಮಾಜದಲ್ಲಿನ ಅನೇಕ ದುಷ್ಕೃತ್ಯಗಳಿಗೆ ಕಾರಣವಾಗಿದೆ. ಹಿಂದಿನ ಸಿನಿಮಾ ಹಾಗೂ ಇಂದಿನ ಸಿನಿಮಾಗಳನ್ನು ತುಲನೆ ಮಾಡಿದಾಗ ಅನೇಕ ಸಂಗತಿಗಳು ಗೋಚರಿಸುತ್ತವೆ. ಈಗಿನದಕ್ಕಿಂತ ಹಳೆ ಸಿನೆಮಾಗಳ ಅತ್ಯಾಚಾರದ ದೃಶ್ಯಗಳು ಬೀಭತ್ಸವಾಗಿದ್ದವು. ನಾಯಕ-ನಾಯಕಿಯರು, ಖಳನಾಯಕರು ಅತ್ಯುತ್ತಮ ಕಲಾಕಾರರಾಗಿದ್ದು, ಹೆಣ್ಣಿನ ಭೀತಿ, ಸಂಕಟ, ಪಾರಾಗಲು ಅವಳು ನಡೆಸುವ ವ್ಯರ್ಥ ಪ್ರಯತ್ನ, ಗಂಡಿನ ಅಟ್ಟಹಾಸಗಳು ನೋಡುಗರ ಎದೆ ಝನಿಸುತ್ತಿರುವುದರೊಂದಿಗೆ ಅದು ನಿಜವೆನಿಸುತ್ತಿತ್ತು. ನೋಡುವ ದೃಷ್ಟಿ ಮಾನವೀಯ ನೆಲೆಯಲ್ಲಿ ಬಿಂಬಿತವಾದಾಗ ದೃಶ್ಯ ನೋಡಿದ ಜನತೆಗೆ ಆ ಸಂದರ್ಭದಲ್ಲಿ ಅವರಿಗೆ ಆ ಖಳನನ್ನು ಸದೆಬಡಿದು ಅಬಲೆಯನ್ನು ಪಾರು ಮಾಡಬೇಕೆನಿಸುತ್ತಿತ್ತೇ ಹೊರತು, ತಾನೂ ಕೂಡ ಅತ್ಯಾಚಾರ ಮಾಡಬೇಕೆನ್ನುವ ಹುಮ್ಮಸ್ಸು ಮೂಡುತ್ತಿರಲಿಲ್ಲ ಎನ್ನುವುದು ಸ್ಪಷ್ಟ. ಕ್ರಮೇಣ ಪ್ರಖ್ಯಾತ ಹಿರೋಗಳೇ ತಾವೇ ರೇಪಿಸ್ಟ್‌ಗಳಂತೆ ವರ್ತಿಸಲಾರಂಬಿಸಿದ್ದರಿಂದ ಹೀರೊಯಿನ್‌ಗೆ ಇಷ್ಟ ಇರಲೀ ಬಿಡಲಿ ನಾಯಕನಿಗೆ ಅವಳು ವಶವಾಗಬೇಕಾಗಿತ್ತು. ಕಾಲ ವಿಭಿನ್ನವಾಗಿದೆ ಹಿಂದಿನ ಕಾಲಗತಿಯೇ ಬದಲಾಗಿದೆ. ಹೀರೋಯಿನ್‌ಗಳು ತಾವೇ ಮೈಮೇಲಿನ ಬಟ್ಟೆಗಳನ್ನು ಕಿತ್ತೆಸೆದು ಹೀರೋ-ವಿಲನ್ ಇಬ್ಬರನ್ನು ಅಟ್ಟಿಸಿಕೊಂಡು ಹೋಗಬಲ್ಲವರಾಗಿzರೆ. ಬಿಗಿದ ಮುಷ್ಟಿಯನ್ನು ಬಿಚ್ಚಿ ತೋರಿಸಿದ ಮೇಲೆ ಬಲವಂತವಾಗಿ ಬಿಡಿಸುವ ಕೆಲಸ ಎಲ್ಲಿದೆ ಸ್ವಾಮಿ?
ತೆರೆಯ ಮೇಲೆ ಕಣ್ ಕುಕ್ಕುವಂತೆ ಮೈದೆರೆದು ದೇಹದ ಅಂಗಾಂಗವನ್ನು ತೋರಿಸಿ ಕೆರಳಿಸುವುದರಿಂದ ಗಂಡಸು ಮೃಗವಾಗಿ ನಿಸ್ಸಹಾಯಕಳಾಗಿ ಆ ಸಂದರ್ಭದಲ್ಲಿ ಸಿಕ್ಕಿದ ಯಾವಳೋ ಒಬ್ಬಳನ್ನು ಅವಳೇ ಬಿಪಾಶಾ ಬಸು ಎಂದೋ ಅಥವಾ ವೀಣಾ ಮಲಿಕ್ ಎಂದೋ ಭ್ರಮಿಸಿಕೊಂಡು ಬಲವಂತದಿಂದ ಅನುಭವಿಸುತ್ತಾನೆಂದು ಹೇಳುವವರಿzರೆ. ಇದು ಎಷ್ಟರಮಟ್ಟಿಗೆ ಸರಿಯೆನ್ನುವುದು ನನ್ನ ಪ್ರಶ್ನೆ?
ಸಲ್ಮಾನ್‌ಖಾನ್, ಜನ್‌ಅಬ್ರಹಾಂ, ಪೃಥ್ವೀರಾಜ್ ತಮ್ಮ ದೇಹಸಿರಿಯನ್ನು ಪ್ರದರ್ಶನಕ್ಕಿಟ್ಟಿzರ, ಯುವತಿಯರು ಅವರಿಂದ ಹುಚ್ಚೆದ್ದು ಹೋಗಿ ಬೇರೆ ಯಾವನೋ ಒಂಟಿ ಯುವಕನ ಮೇಲೆರಗಿದಿದೆಯೇ? ಅಂಗಡಿಯಲ್ಲಿರುವ ರುಚಿಯಾದ ತಿನಿಸುಗಳನ್ನು ನೋಡಿದಾಗ ಆಸೆಯಾಗುತ್ತದೆ. ಆದರೆ ಅದನ್ನೆಲ್ಲಾ ಒಂದೆ ಸಮನೆ ತಿನ್ನಲು ಸಾಧ್ಯವಿದೆಯೇ ಎನ್ನುವ ಅಂಶವನ್ನು ಮನಗಾಣಬೇಕು. ಆಸೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ತಮ್ಮ ಆಹಾರದ ಸಮಯ, ಸ್ಥಳ, ಡಯಟ್‌ಗಳನ್ನು ಮರೆತು ಅಂಗಡಿಗೆ ನುಗ್ಗುವ ವ್ಯರ್ಥ ಪ್ರಯತ್ನ ತರವಲ್ಲ. ಅತ್ಯಾಚಾರ ಮಾಡುವವರು ಸಿನೆಮಾಗಳ ಸ್ಫೂರ್ತಿಗಾಗಿ ಕಾಯಬೇಕಾಗಿಲ್ಲ. ಹಿಂದೂ ಪುರಾಣಗಳ ಅದು ದಂಡಿಯಾಗಿ ಸಿಕ್ಕುತ್ತದೆ. ಕೌರವರು ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತಾಪಹರಣಕ್ಕೆ ಹೊರಟಿದ್ದು ರಾಜಕಾಂಕ್ಷೆಗಿಂತಲೂ ಕೌರವರ ನಾಶಕ್ಕೆ ಹೆಚ್ಚು ಮುಖ್ಯವಾದ ಕಾರಣವಾಯಿತು. ಕೀಚಕ, ಇನ್ನೂ ಅನೇಕ ಗಂಧರ್ವರು, ದೈತ್ಯರು ದ್ರೌಪದಿಯನ್ನು ಹೊತ್ತೊಯ್ಯಲು ಪ್ರಯತ್ನಿಸುವುದು, ಪಾಂಡವರು ಅದರಲ್ಲೂ ಭೀಮ ಅವರನ್ನು ಸಂಹರಿಸಿ ಅವಳನ್ನು ಪಾರು ಮಾಡುವುದು ಮಹಾಭಾರತದುದ್ದಕ್ಕೂ ಬರುತ್ತದೆ. ರಾವಣ ಸೀತೆಯನ್ನು ಮುಟ್ಟಲೀ ಬಿಡಲೀ ಅಪಹರಿಸಿ, ಬಂದಿಸಿಟ್ಟು ತನ್ನವಳಾಗುವಂತೆ ಪೀಡಿಸಿದ್ದು ಮಾನಸಿಕ ಅತ್ಯಾಚಾರವಲ್ಲವೇ? ಸೀತೆಯನ್ನು ಮೃದು ಸ್ವಭಾವ ಅಂದುಕೊಳ್ಳಬಹುದು. ದ್ರೌಪದಿ ಹಾಗಲ್ಲ. ಉಗ್ರ ಸ್ವರೂಪಿಣಿ. ದುಶ್ಶಾಸನ ಎಳೆಎಳೆದು ರಾಶಿ ಹಾಕಿದ ಸೀರೆಗಳನ್ನು -ದುಯೆಧನ ಅದೇನು ದಟ್ಟ ದರಿತ್ರ ಬಂದಿತ್ತೋ ಗೊತ್ತಿಲ್ಲ-ಅಂತಃಪುರಕ್ಕೆ ಸಾಗಿಸಿ ಎಂದನಂತೆ. ಆಗ ದ್ರೌಪದಿ ಒಂದ್ಸಲ ಕಣ್ಬಿಟ್ಟು ನೋಡುತ್ತಲೇ ಸೀರೆಗಳು ಧಗ್ಗನೆ ಉರಿದು ಬೂದಿಯಾದವಂತೆ. ಅಂತ ಶಕ್ತಿಯಿದ್ದವಳು ತನ್ನ ಕಣ್ಣೋಟದಿಂದ ದುಶ್ಶಾಸನ, ದುಯೆಧನಾದಿಗಳನ್ನು ಸುಟ್ಟು ಬೂದಿ ಮಾಡಿದ್ದರೆ ಅಕ್ಷೆಹಿಣೀ ಸೈನ್ಯದ ನಾಶ ತಪ್ಪುತ್ತಿತ್ತು. ಇದೊಂದೇ ಅಲ್ಲ, ಪೌಂಡ್ರಕನೆಂಬ ದೈತ್ಯ ದೊರೆಯನ್ನು ಕೊಲ್ಲಲು ದ್ರೌಪದಿ ಎಂತಹಾ ರೌದ್ರಾವತಾರ ತಾಳಿದ್ದಳು ಎಂದರೆ ಅತ್ತ ಕಡೆ ನೋಡಲೂ ಧೈರ್ಯ ಸಾಲದೇ ಮುಖ ಮುಚ್ಚಿಕೊಂಡು ಮೂಲೆ ಸೇರಿದ್ದನಂತೆ ಅರ್ಜುನ. ಶ್ರೀಕೃಷ್ಣ ನೋಡಯ್ಯ ನಿನ್ನ ನ..ಕಬ್ಬಿನ ಜ.. ಮಧುರ ಮೆ? ಎಂದು ಗೇಲಿ ಮಾಡಿದನಂತೆ. ಹಾಗೆ ಸತ್ಯಭಾಮಾ, ಕೈಕೇಯಿ ಕೂಡ ತಂತಮ್ಮ ಪತಿಯೆಂದಿಗೆ ಯುದ್ಧಗಳಲ್ಲಿ ವೀರಾವೇಶದಿಂದ ಹೋರಾಡಿದರೆಂದು ಚಿತ್ರಿಸಿದವರಿಗೆ ಒಮ್ಮೆಲೆ ಪುರುಷಾಹಂಕರ ಜಗೃತವಾಗಿದ್ದಿರಬೇಕು. ಹಾಗಾಗಿ ಆ ಸ್ತ್ರೀಪಾತ್ರಗಳ ಸಾಹಸ ಶೌರ್ಯಗಳನ್ನು ಗಂಡಂದಿರ ಪ್ರಭಾವಳಿಯಲ್ಲಿ ಹುದುಗಿಸಿ ಪುನಃ ಅವರನ್ನು ಕುಯ್ಯೆಮರ್ರೊ ಎನಿಸಿ ಪತಿಯ ಪ್ರಾಮುಖ್ಯವನ್ನು ಎತ್ತಿ ಹಿಡಿದಿzರೆ.
ಭಾರತೀಯ ಪುರುಷರ ಮಟ್ಟಿಗೆ ಹೇಳ ಬೇಕೆಂದರೆ ಹೆಣ್ಣು ಭೋಗವಸ್ತು. ಲೈಂಗಿಕ ಸಮಾಗಮದಲ್ಲಿ ಗಂಡಸಿನ ಇಷ್ಟಾನಿಷ್ಟಗಳು ಮುಖ್ಯವೇ ಹೊರತು ಹೆಣ್ಣಿನದಲ್ಲ ಎಂಬ ಶೀತಲ ಕ್ರೌರ್ಯಕ್ಕೆ ಪುರಾಣಗಳಲ್ಲಿ ಬರುವ ನಿಯೋಗ ಪದ್ಧತಿಗಳು, ಕೃಷ್ಣ, ಇಂದ್ರರ ಕೃತ್ಯಗಳು ಸಮರ್ಥನೆಗಳಾಗಿವೆ. ವಿವಾಹಗಳಲ್ಲಿ ರಾಕ್ಷಸ ವಿವಾಹ, ಪೈಶಾಚಿಕ ವಿವಾಹಗಳೂ ಇವೆ. ಹೆಣ್ಣನ್ನು ಹಾರಿಸಿಕೊಂಡು ಹೋಗಿ ಮದುವೆಯಾಗುವುದು ರಾಕ್ಷಸ ವಿವಾಹ. ಕ್ಷತ್ರಿಯರಲ್ಲಿ ಇದು ನ್ಯಾಯ ಬದ್ಧವೇ ಆಗಿತ್ತು. ಪೈಶಾಚಿಕ ಎಂದರೆ ಹೆಣ್ಣನ್ನು ಪ್ರe ತಪ್ಪಿಸಿ, ಕೂಡಿ ಮದುವೆಯಾಗುವುದಿರಬೇಕು. ಒಟ್ಟಿನಲ್ಲಿ ಹೆಣ್ಣನ್ನು ಅನುಭವಿಸಲು ಗಂಡಸು ರಾಕ್ಷಸನೋ, ಪಿಶಾಚಿಯೋ ಆದರೂ ಪರವಾಗಿಲ್ಲವೆಂಬ ಸಮ್ಮತಿ ನಮ್ಮ ಹಿಂದೂ ಧರ್ಮಶಾಸ್ತ್ರಗಳದ್ದು. ಬೇರೆ ಯಾವ ಧರ್ಮವೂ ಅತ್ಯಾಚಾರಕ್ಕೆ ಹೀಗೆ ಪರೋಕ್ಷ ಕುಮ್ಮಕ್ಕನ್ನು ನೀಡಿಲ್ಲ ಎನ್ನುವುದು ಇಲ್ಲಿ ಪ್ರಸ್ತುತವೇ ಸರಿ.
ಒಂದು ಕುಟುಂಬದಲ್ಲಿ ಹೆಣ್ಣು ಮತ್ತು ಗಂಡುಮಕ್ಕಳನ್ನು ಬೆಳೆಸುವ ವಿಧಾನದ ತಾರತಮ್ಯ ಇರುತ್ತದೆ. ನೀನು ಹೆಣ್ಣು ಹುಡುಗಿ. ಒಂಟಿಯಾಗಿ ಎಲ್ಲೂ ಹೋಗ್ಬೇಡ. ಅಣ್ಣ-ತಮ್ಮನ ಜೊತೆ ಹೋಗಿಬಾ. ದಾರಿಯಲ್ಲಿ ಯಾರಾದರೂ ಮೈಮೇಲೆ ಬಿದ್ದರೆ ಏನು ಮಾಡುತ್ತಿ? ಎಂದು ತಾಯಿ ಸಹಜವೆಂಬಂತೆ ಬೆದರಿಸುತ್ತಾಳೆ. ಇದರಿಂದ ಹೆಣ್ಣಿನ ಹೃದಯದಲ್ಲಿ ಭೀತಿ ಹುಟ್ಟಿಕೊಳ್ಳುವುದು ಒಂದಾದರೆ ಗಂಡು ಹುಡುಗರ ಮನಸ್ಸಿನಲ್ಲಿ ಹೆಣ್ಣು ಅಂದರೆ ಅಬಲೆ, ನಮ್ಮ ರಕ್ಷಣೆ ಇಲ್ಲದೇ ಇರಲಾರಳು, ಒಂದು ವೇಳೆ ಅವಳು ಒಂಟಿಯಾಗಿ ವಾಸಿಸಿದರೆ ಅಥವಾ ತಿರುಗುತ್ತಿದ್ದರೆ ಹಾಗೆ ಮಾಡಿದ್ದು ಅವಳ ತಪ್ಪೇ ಹೊರತು ಹ ಮಾಡಿದ ಗಂಡಸಿನದ್ದಲ್ಲ ಎಂಬ ಭಾವನೆ ತಲೆ ಎತ್ತುತ್ತದೆ. ಇಂಥವರಲ್ಲಿ ಮೃಗೀಯತೆ ಹೆಚ್ಚಾಗಿರುವವರು ಸಮಯ ಸಿಕ್ಕಲ್ಲಿ ಅತ್ಯಾಚಾರಕ್ಕೆ ಹೇಸುವುದಿಲ್ಲ. ಅಷ್ಟು ವಿಪರೀತಕ್ಕೆ ಹೋಗದವರು ಬಸ್ಸು, ರೈಲು, ಸಿನೆಮಾ, ಶಾಪಿಂಗ್ ಸಂದಣಿಗಳಲ್ಲಿ ಹತ್ತಿರವಿರುವ ಹೆಣ್ಣಿನ ಮೈಕೈ ಸವರಿ ಸ್ಪರ್ಶಕ್ಕಿಂತಲೂ ಅವಳ ಚಡಪಡಿಕೆಯಿಂದಲೇ ವಿಕೃತಾನಂದ ಭರಿತರಾಗುತ್ತಾರೆ. ಸಂಸ್ಕಾರವಂತರು ಇಂಥ ಅಸಹ್ಯಗಳಿಗೆ ಇಳಿಯದಿದ್ದರೂ ಹೆಣ್ಣು ಎಂದರೆ ತನ್ನ ನೆರಳಿನಲ್ಲಿ, ತನ್ನ ಆeನುವರ್ತಿಯಾಗಿ ಇರಬೇಕಾದವಳು ಎಂದುಕೊಳ್ಳುತ್ತಾರಲ್ಲದೆ, ಒಂಟಿ ಹೆಣ್ಣನ್ನು ಗೌರವಿಸಿ ಅವಳ ಕಷ್ಟಗಳಿಗೆ ಸ್ಪಂದಿಸಲಾಗದೇ ಹೋಗುತ್ತಾರೆ.
ವಿವಾಹ ಹೆಣ್ಣಿನ ಮಾನಪ್ರಾಣಗಳಿಗೆ ರಕ್ಷಾಕವಚ ಎನ್ನುವುದು ಪೂರ್ತಿ ಸುಳ್ಳಲ್ಲ. ಪೂರ್ತಿ ನಿಜವೂ ಅಲ್ಲ. ನೂರಕ್ಕೆ ತೊಂಬತ್ತರಷ್ಟು ಹೆಂಡತಿಯರು ಪತಿ ತಮಗೆ ಒದಗಿಸುವ ರಕ್ಷಣೆಗೆ ಎಷ್ಟೋ ಪಟ್ಟು ಹೆಚ್ಚಿನ ಪ್ರತಿಫಲವನ್ನು ಅವರಿಗೆ ಕೊಡುತ್ತಿದ್ದರಾದ್ದರಿಂದ ಇದೊಂದು ಹಂಗು ಎಂದು ಗೃಹಿಣಿ ಮುದುಡಿಕೊಳ್ಳ ಬೇಕಾಗಿಲ್ಲ. ಪುರುಷರಲ್ಲಿ ಅತ್ಯಾಚಾರ ಸಮರ್ಥರು ಇರುವುದರಿಂದ ನಾವು ಹೆಣ್ಣಿಗೆ ರಕ್ಷಣೆ ಒದಗಿಸ ಬೇಕಾಗಿದೆ ಎನ್ನುವುದು ಪುರುಷವರ್ಗ ತಲೆತಗ್ಗಿಸಬೇಕಾದ ವಿಷಯ. ಕೊರಳಲ್ಲಿ ಮಾಂಗಲ್ಯವಿರುವವಳನ್ನು ಪರಪುರಷ ಕಣ್ಣೆತ್ತಿಯೂ ನೋಡಲಾರ. ಅವಳು ಕೆಲಸ ಮಾಡುವ ಜಗದಲ್ಲಿ ಲೈಂಗಿಕ ಕಿರುಕುಳ ತಪ್ಪುತ್ತವೆನ್ನುವ ಅನುಕೂಲಗಳು ಭ್ರಮೆಗಳೆಂದು ತಳ್ಳಿ ಹಾಕಲಾಗದು. ಹಾಗೆಂದು ವಿವಾಹಿತೆ ಪೂರ್ತಿ ಸುರಕ್ಷಿತೆಯೇನಲ್ಲ. ಒಂಟಿಯಾಗಿ ಬರಿಗೊರಳಿನಲ್ಲಿ ಓಡಾಡುತ್ತಿರುವವಳ ಮೈಮೇಲೆ ಕೈ ಹಾಕಿದಷ್ಟು ಸಲೀಸಾಗಿ ಪಕ್ಕದಲ್ಲಿ ಗಂಡನಿದ್ದರೆ ಮುಟ್ಟಲಾರರು. ಗಂಡ ಸೂಪರ್‌ಮ್ಯಾನ್ ಅಲ್ಲ. ನಿರ್ಜನ ಪ್ರದೇಶದಲ್ಲಿ ೩-೪ ಜನ ಗಂಡನನ್ನು ಕಟ್ಟಿ ಬೀಳಿಸಿ, ಅವನ ಕಣ್ಣ ಮುಂದೆ ಅತ್ಯಾಚಾರ ನಡೆಸಿದ ಪ್ರಕರಣಗಳು ವರದಿಯಾಗುತ್ತಲೆ ಇವೆ. ಕುರುಡುಗಣ್ಣಿಗಿಂತ ಮೆಳ್ಳೆಗಣ್ಣು ಮೇಲು ಎಂಬಂತೆ ಇದು ಅಲ್ಲವೇ?
ಸ್ತ್ರೀಯರು ಮೈ ಕಾಣುವಂತೆ ಬಟ್ಟೆ ಧರಿಸುವುದು ಅನಾಹುತಕ್ಕೆ ಕಾರಣ ಎಂದು ಪೊಲೀಸ್ ಅಧಿಕಾರಿಗಳಿಬ್ಬರು ಹೇಳಿz ತಡ, ಸ್ತ್ರೀವಾದಿಗಳು ಹೋ ಎಂದು ಚೀರಿದರು. ನೋಡುವವರ ದೃಷ್ಟಿ ಸರಿಯಿರಬೇಕು? ನಮ್ಮಿಷ್ಟ. ನಾವೇನ್ ಬೇಕಾದ್ರೂ ಹಾಕ್ಕೋತೀವಿ ಎಂದು ನೆಲಕ್ಕೆ ಕಾಲಪ್ಪಳಿಸಿದರು. ಅವರ ಆವೇಶದಲ್ಲಿ ತಪ್ಪಿಲ್ಲ. ಆದರೆ ಮನೆಬಾಗಿಲನ್ನು ತೆರೆದಿಟ್ಟೇ ಹೋಗುತ್ತೇನೆ. ನನ್ನ ವಸ್ತು, ನನ್ನ ಹಣ ನನ್ನಿಷ್ಟ ಎಂದರೆ ಅವು ಉಳಿಯುತ್ತವೆಯೇ? ಕಳ್ಳರು ಎಷ್ಟೇ ಭದ್ರತೆ ಇದ್ದರೂ ದೋಚಬಲ್ಲರು. ಅಂತೆಯೇ ಅಪರಾಧ ನಡೆದಾಗ ಅದರ ಪೂರ್ತಿ ಹೊಣೆಯನ್ನು ಅಪರಾಧಿಯ ತಲೆಗೆ ಕಟ್ಟುವಂತೆ ಇಂತಹ ಸಂದರ್ಭದಲ್ಲಿ ನಮ್ಮಿಂದಾಗುವ ಎಲ್ಲ ಜಗರೂಕತೆಯನ್ನು ತೆಗೆದುಕೊಳ್ಳಬೇಕಲ್ಲವೇ ಮಾನಿನಿಯರೇ?
ಅತ್ಯಾಚಾರದಲ್ಲಿ ಅಪರಾಧಿ ಪುರುಷನ ಪರ ಹುಲ್ಲುಕಡ್ಡಿಯಷ್ಟು ಆಧಾರವೂ ಇರಬಾರದು. ಆಗ ಅವನು ಕಠಿಣ ಶಿಕ್ಷೆಯ ಹೊಂಡಕ್ಕೆ ಬಿz ಬೀಳುತ್ತಾನೆ. ಮಮತಾ ಬ್ಯಾನರ್ಜಿಯವರ ಮಾತುಗಳ ಹಿಂದಿನ ಧ್ವನಿ ಇದೇ ಇರಬೇಕು. ಸ್ತ್ರೀಪುರುಷರ ಮಧ್ಯೆ ಅತಿ ಸಲುಗೆ ಅತ್ಯಾಚಾರಕ್ಕೆ ದಾರಿ ತೆಗೆಯಬಲ್ಲದು ಎಂದು ಹೇಳುತ್ತಲೇ ಸೋಕಾಲ್ಡ್ ಪ್ರಗತಿಪರರಿಗೆ ಅವರು ಆಜನ್ಮ ವೈರಿಯಾಗಿ ಬಿಟ್ಟರು. ಸ್ತ್ರೀಪುರುಷರ ಮಧ್ಯೆ ಸ್ನೇಹ ಇರಬಾರದೆಂದಲ್ಲ. ಅದು ಅವರಿರ್ವರನ್ನು ಏಕಾಂತಕ್ಕೆ ಎಳೆಯಬಾರದು. ನಾನು ಕರೆದರೆ ಲಂಚ್‌ಗೆ ಬಂದಾಳು, ಪಾರ್ಟಿ-ಡಿನ್ನರ್‌ಗೆ ಬಂದಾಳು, ಮಂಚಕ್ಕೆ ಕರೆದ್ರೆ ಬರ್ದೇ ಇರ್ತಾಳಾ? ಎನ್ನುವಷ್ಟು ಅಗ್ಗವಾಗದಂತೆ ಎಚ್ಚರ ವಹಿಸಬೇಕು. ಹೆಗಲಮೇಲೆ ಕೈ ಹಾಕಲು, ಸೊಂಟ ಬಳಸಲು ಬಿಟ್ಟರೆ ಆ ಸಲುಗೆ ಗೌರವ ಕಳೆಯುತ್ತದೆ. ಗೌರವವಿಲ್ಲದ ಸ್ಥಳದಲ್ಲಿ ಏನು ಬೇಕಾದರೂ ಆಗಬಹುದು. ಗೆಳೆಯ, ಅವನ ಗೆಳೆಯರು ಹೆಣ್ಣಿಗೆ ಅಪಾಯಕಾರಿಗಳಾದ ಪ್ರಸಂಗಗಳು ಗ್ಯಾಂಗ್‌ರೇಪ್‌ನಲ್ಲಿ ಕಂಡು ಬಂದಿವೆ.
ಹೆಣ್ಣಿನ ಮೇಲೆ ಅತ್ಯಾಚಾರ ಮಾಡುವುದು ಮಹಾಪರಾಧ ಎಂಬ ಅರಿವನ್ನು ಹೆತ್ತವರು, ಶೈಕ್ಷಣಿಕ ವ್ಯವಸ್ಥೆ ಮತ್ತು ಸಮಾಜ ಗಂಡಿನಲ್ಲಿ ಬೆಳೆಸಬೇಕು. ಹೆಣ್ಣು ತನ್ನ ನಡವಳಿಕೆ, ಉಡುಗೆ, ಜೀವನ ವಿಧಾನಗಳಲ್ಲಿ ಘನತೆ ಕಾಪಾಡಿಕೊಳ್ಳುವುದರ ಜೊತೆಗೆ ಸ್ವಯಂ ರಕ್ಷಣಾ ಕಲೆಗಳಲ್ಲಿ ನಿಷ್ಣಾತಳಾಗಬೇಕು. ಇದೆಲ್ಲದರಾಚೆಗೆ ಮಕ್ಕಳು, ಮುದುಕಿಯರೆನ್ನದೇ, ತಾಯಿ-ಮಗಳು ಎಂಬ ಪರಿeನವಿಲ್ಲದೇ ಅತ್ಯಾಚಾರವೆಸಗುವ ಕಾಮಪಶುಗಳನ್ನು ಜೈಲಿನಲ್ಲಿ ಮೇಯಿಸುತ್ತಾ ಇಟ್ಟುಕೊಳ್ಳಬಾರದು. ಅವರಿಗೆ ಮರಣದಂಡನೆ, ಪುರುಷತ್ವ ಹರಣದಂಥ ಶಿಕ್ಷೆಗಳು ಜರಿಗೆ ಬಂದರೆ ಕಾಮುಕರಲ್ಲಿ ಸ್ವಲ್ಪವಾದರೂ ಭಯ ಹುಟ್ಟುತ್ತದೆ. ಜೀವದಾಸೆಗಿಂತ ಕಾಮದಾಸೆ ದೊಡ್ಡದಲ್ಲ ಎನ್ನುವ ಸತ್ಯವನ್ನು ಅರಿಯುತ್ತಾರೆ. ಇದುವೇ ಅಲ್ಲವೇ ಉತ್ತಮ ಸಮಾಜ ನಿರ್ಮಾಣ....ಏನಂತಿರಾ
Subscribe to:
Post Comments (Atom)
thumba chennagi bardiddira keep it up & all the very best
ReplyDelete