Monday, 21 January 2013


ಮಾನಸಿಕತೆಯ ಬದಲಾವಣೆ-ಭವಿಷ್ಯತ್ತಿನ ಸಮಾಜ ನಿರ್ಮಾಣ
ಅತ್ಯಾಚಾರ-ಹೆಣ್ಣು-ಗಂಡುಗಳ ನಡುವಿನ ತಪ್ಪು-ಒಪ್ಪು 

ದೇಶದಲ್ಲಿ ಹಲವಾರು ಹೆಣ್ಣುಮಕ್ಕಳ ಮೇಲೆ ನಡೆದ ಮೃಗೀಯ ವರ್ತನೆಯ ಅತ್ಯಾಚಾರದ ಕುರಿತಂತೆ ವಿಷಾಧವಿದ್ದರೂ, ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ತಾರತಮ್ಯದ ಕುರಿತು ಕೆಲವೊಂದು ಮಾತುಗಳನ್ನು ಈ ಸಂದರ್ಭದಲ್ಲಿ ಪ್ರಚುರ ಪಡಿಸುವುದು ಪ್ರಸ್ತುತವೇ ಸರಿ? ದೆಹಲಿಯಲ್ಲಿನ ಘಟನೆ ಹಾಗೂ ಧರ್ಮಸ್ಥಳ ಉಜಿರೆಯ ಸೌಜನ್ಯ ಸೇರಿದಂತೆ ಹಲವಾರು ಪ್ರಕರಣ ಗಮನಿಸಿದರೆ ಅರಳುವ ಹೂಗಳು ತಮ್ಮ ಮೊಗ್ಗಿನ ಸುವಾಸನೆಯನ್ನು ಪ್ರಪಂಚ ಮುಖಕ್ಕೆ ಪಸರಿಸುವ ಮುನ್ನವೆ ಕಾಮಾಂಧರ ಅಟ್ಟಹಾಸಕ್ಕೆ ಸುಟ್ಟು ಕರಕಲಾಗಿ ಕಮರಿಹೋಗಿವೆ. ಆದರೂ ಬುದ್ಧಿಜೀವಿಗಳೆನಿಸಿಕೊಂಡವರು ದೆಹಲಿಯಲ್ಲಿನ ಘಟನೆಗೆ ಪತ್ರಿಕಾ ಹೇಳಿಕೆ ನೀಡುತ್ತಾ ತಾವು ಸಮಾಜದಲ್ಲಿ ಸಭ್ಯರಂತೆ ನಡೆದುಕೊಳ್ಳುತ್ತಾ ಪ್ರತಿಭಟನೆ ಮಾಡುತ್ತಿದ್ದೇವೆ ಎನ್ನುವುದರ ಹಿಂದೆ ಅತ್ಯಾಚಾರದಿಂದ ಹತಳಾದ ವಿದ್ಯಾರ್ಥಿನಿಯ ಕುಟುಂಬಕ್ಕೆ ನಿಜವಾಗಿಯೂ ನ್ಯಾಯ ಒದಗಿಸಬೇಕು ಎನ್ನುವ ಕಾಳಜಿ ಇದೆಯೇ? ಅಥವಾ ರಾಜಧಾನಿಯಲ್ಲಿ ನಡೆದ ಘಟನೆಯಿಂದ ತಮಗೆ ಸುಲಭವಾಗಿ ಪ್ರಚಾರ ಸಿಗುತ್ತದೆ ಎನ್ನುವ ನಂಬಿಕೆಯೇ? ರಾಜಧಾನಿಯಲ್ಲಿ ನಡೆದ ಅತ್ಯಾಚಾರ ಹಾಗೂ ಮಾರ್ನಿಂಗ್ ಮಿಸ್ಟ್‌ನಲ್ಲಿ ಮಜಾ ಉಡಾಯಿಸಲು ಹೋದ ಹೆಣ್ಣು ಮಕ್ಕಳ ಕುರಿತು ಕಣ್ಣೀರು ಹರಿಸುವ ಬುದ್ದಿಜೀವಿಗಳು ಕರಾವಳಿಯಲ್ಲಿ ಅನೇಕ ಮೊಗ್ಗುಗಳನ್ನು ಹಿಸುಕಿ ಹಾಕಿದರಲ್ಲಾ ಆ ಕುರಿತಂತೆ ಷಂಡರಂತೆ ವರ್ತಿಸುತ್ತಿರುವ ಮರ್ಮವೇನು? ದೆಹಲಿಯ ಹಾಗೂ ಉಜಿರೆಯಲ್ಲಿ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯರಲ್ಲಿ ಭೇದ-ಭಾವ ಸೃಷ್ಟಿಸುವುದು ತರವೇ? ದೇಶದ ರಾಜಧಾನಿಯಲ್ಲಿ ನಡೆದ ಘಟನೆಯನ್ನು ಹೈಲೈಟ್ ಮಾಡಲು ಶ್ರಮಿಸಿದರೆ ಪ್ರಪಂಚಕ್ಕೆ ಮಾದರಿಯಾಗಿರುವ ಧರ್ಮದ ಬೀಡಾಗಿರುವ ಧರ್ಮಸ್ಥಳದಲ್ಲಿ ನಡೆದ ಘಟನೆಯ ಕುರಿತು ಮೌನಮುದ್ರೆ ಯಾಕಾಗಿ? ಎನ್ನುವ ಸಂಶಯ. ಅತ್ಯಾಚಾರಗಳು ನಡೆದಾಗ ಪ್ರಗತಿಪರ ಚಿಂತಕರು ಹೆಣ್ಣುಮಕ್ಕಳ ಉಡುಗೆ-ತೊಡುಗೆಯಲ್ಲಿ ಬದಲಾವಣೆಯಾಗಿದೆ. ವಿದ್ಯುನ್ಮಾನ ಮಾಧ್ಯಮ ಹಾಗೂ ಸಿನಿಮಾದ ಪ್ರಭಾವದಿಂದ ಅತ್ಯಾಚಾರ ಜಾಸ್ತಿಯಾಗುತ್ತಿದೆ ಎನ್ನುತ್ತಾರಲ್ಲಾ ಇದು ಎಷ್ಟರಮಟ್ಟಿಗೆ ಸರಿ ಸ್ವಾಮಿ? ಪಕ್ಕದ ಮನೆಯ ತೆಂಗಿನ ಮರದ ಗರಿ ನಮ್ಮ ಅಂಗಳಕ್ಕೆ ಬಿದ್ದರೆ ಕೋರ್ಟ್‌ಗೆ ಹೋಗುವ ನಾವು ದೇಶ, ರಾಜ್ಯ, ಜಿಲ್ಲೆ ಮಾತ್ರವಲ್ಲದೇ ಪಕ್ಕದ ಮನೆಯಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳನ್ನು ಕಂಡು-ಕಣ್ಣಿಲ್ಲದವರಂತೆ ವರ್ತಿಸುವುದಾದರೂ ಯಾಕೆ? ಕರಾವಳಿಯ ಬುದ್ದಿವಂತರೆನಿಸಿಕೊಂಡ ಜನರು ಇದಕ್ಕೆ ಉತ್ತರಿಸಿಯಾರೇ?

ಸಮಾಜದಲ್ಲಿ ನೀತಿ ಹೇಳುವವರು ಮಾಡುವ ಅನ್ಯಾಯಗಳ ಕುರಿತು ನಾವೆಲ್ಲಾ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಯೆಲ್ಲಾ ಕಾಮ ತುಂಬಿಕೊಂಡು ಮೇಲ್ನೋಟಕ್ಕೆ ರಾಮ ಕೃಷ್ಣ--ಗೋವಿಂದ, ಅಲ್ಲಾ, ಏಸು ಎಂದು ದೇವರ ಹೆಸರನ್ನು ಹೇಳುತ್ತಿರುತ್ತಾರೆ. ಅಲ್ಲದೇ ಕುತ್ತಿಗೆಯಲ್ಲಿ ಜ್ಯೋತಿಷಿಗಳು ಹೇಳಿದ ಮಾಲೆಗಳೆಲ್ಲಾ ನೇತಾಡುತ್ತಿರುತ್ತವೆ. ಹಣೆಯ ಮೇಲೆ ಕುಂಕುಮ, ವಿಭೂತಿಗಳು ರಾರಾಜಿಸುತ್ತವೆ. ಆದರೆ ಹುಡುಗಿಯ ವಿಷಯ ಮಾತನಾಡಿದರೆ ಸಾಕು ಕಿವಿ ನಿಮಿರಿ ಕೊಳ್ಳುತ್ತದೆ. ಇದನ್ನೆಲ್ಲಾ ನೋಡಿದರೆ ಪ್ರಪಂಚವೇ ವಿಚಿತ್ರವೆನಿಸುತ್ತದೆ. ನೋಡುವ ದೃಷ್ಟಿ ಬದಲಾಗಿದೆಯೇ ಅಥವಾ ಬದಲಾದ ಪ್ರಪಂಚದಲ್ಲಿ ನಮ್ಮ ಮಾನಸಿಕತೆ ನಾವು ಬದಲಿಸಿಕೊಂಡಿದ್ದೇವೆಯೇ ಎನ್ನುವ ಜಿಜ್ಞಾಸೆ ಮೂಡುತ್ತದೆ. ಮನೆಯಲ್ಲಿ ಹೆಂಡತಿಯಾದವಳು ಚೆನ್ನಾಗಿ ಡ್ರೆಸ್ ಮಾಡಿಕೊಂಡು ಬಂದು ಗಂಡನಲ್ಲಿ ಕೇಳಿದರೆ ಪತಿ ಮಹಾಶಯ ತಾನು ಬ್ಯುಸಿ ಎನ್ನುವುದನ್ನು ತೋರ್ಪಡಿಸಲು ಕೇಳಿದರೂ ಕೇಳದಂತೆ ವರ್ತಿಸುತ್ತಾನೆ. ಅದುವೇ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಕಚೇರಿಯಲ್ಲಿ ತನ್ನ ಸಹದ್ಯೋಗಿ ಹೆಣ್ಣು ಮಕ್ಕಳು ಮಾಡಿಕೊಂಡ ಡ್ರೆಸ್‌ಗಳ ಕುರಿತು ಇಲ್ಲದ ಹೇಳಿಕೆಗಳನ್ನು ನೀಡಿ ಅವಳನ್ನು ಹೊಗಳುತ್ತಾನೆ. ಇದುವೇ ಪ್ರಪಂಚದ ದಿನನಿತ್ಯದ ವಿಷಯವಲ್ಲವೇ?
ಹೆಣ್ಣು ಚಿಕ್ಕವಳೋ ಅಥವಾ ದೊಡ್ಡವಳೋ? ಹೆಣ್ಣು, ಆಂಟಿ, ಅಜ್ಜಿ, ಆಫೀಸ್‌ನಲ್ಲಿರುವ ಮೇಡಂ, ಸೆಕ್ರೇಟರಿ, ಕಾಲೇಜ್‌ನಲ್ಲಿರುವ ಲೇಡಿ ಲೆಕ್ಚರರ್, ಕೆಲಸದವಳು ಒಂದಷ್ಟು ಕಣ್ಣುಗಳು ಇವರೆಲ್ಲರ ಮೇಲೆ ಓಡಾಡುತ್ತಿರುತ್ತವೆ. ಅವಳ ಕುರಿತಂತೆ ಒಂದಷ್ಟು ಅನಾಮಿಕ ಚರ್ಚೆಗಳು ಎಗ್ಗಿಲ್ಲದೆ ಓಡಾಡುತ್ತಿರುತ್ತವೆ. ಸಣ್ಣ ಪುಟ್ಟ ಕಂಪೆನಿಗಳು ಮಾತ್ರವಲ್ಲದೇ ದೊಡ್ಡ ಕಂಪೆನಿಗಳು, ಬಸ್ಸು, ದೇವಸ್ಥಾನ, ಪೆಟ್ರೋಲ್ ಬಂಕ್, ವಿಧಾನ ಸೌಧ, ಸಂಘ-ಸಂಸ್ಥೆಗಳು, ಹೊಟೇಲ್‌ಗಳು...ಒಂದೇ ಸ್ಥಳವೇ ಕಾಮುಕ ಕಣ್ಣುಗಳಿಗೆ ಅವರ ನಡವಳಿಕೆಗೆ ಆಜಾಗ -ಈ ಜಾಗ ವೆನ್ನುವುದಿಲ್ಲ. ಅನೇಕ ಅತ್ಯಾಚಾರಗಳು ನಡೆದಾಗ ಒತ್ತಡದ ಪ್ರಪಂಚದಲ್ಲಿಯೂ ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡುವ ಕುಶಾಗ್ರಮತಿಗಳು ಈ ಸಮಾಜದಲ್ಲಿ ಅನೇಕರಿದ್ದಾರೆ. ಅತ್ಯಾಚಾರಕ್ಕೆ ಸಿನಿಮಾ, ಹೆಣ್ಣು ಧರಿಸುವ ಉಡುಗೆ ತೊಡುಗೆಗಳೆ ಕಾರಣವೆನ್ನುವುದನ್ನು ಸಾರಿ ಹೇಳುತ್ತಾರೆ. ಇಲ್ಲಿ ತಪ್ಪು ಯಾರದ್ದು ಎನ್ನುವುದಕ್ಕಿಂತ ಅದನ್ನು ಸರಿಪಡಿಸುವುದು ಹೇಗೆ ಎನ್ನುವ ಉತ್ತರ ಕಂಡುಕೊಳ್ಳಬೇಕಿದೆ.
ವೈಜ್ಞಾನಿಕ ಪ್ರಗತಿಯ ಬೆನ್ನಲ್ಲೇ ಸಿನಿಮಾ ರಂಗದಲ್ಲಿ ಅನೇಕ ಸಾಹಸ ಕಾರ್ಯ ಹಾಗೂ ಬದಲಾವಣೆಗಳು ನಡೆದು ಹೋದವು. ಹೊಸ ತಂತ್ರಜ್ಞಾನ ಬಳಸಿಕೊಂಡು ಜನತೆಯ ರುಚಿಗೆ ತಕ್ಕಂತೆ ಸಿನಿಮಾ ನೀಡುತ್ತಿದ್ದ ಮನರಂಜನೆಯ ಮಾಧ್ಯಮವೇ ಇಂದು ಮಕ್ಕಳ ಮೇಲೆ ಪ್ರಭಾವ ಬೀರಿ ಸಮಾಜದಲ್ಲಿನ ಅನೇಕ ದುಷ್ಕೃತ್ಯಗಳಿಗೆ ಕಾರಣವಾಗಿದೆ. ಹಿಂದಿನ ಸಿನಿಮಾ ಹಾಗೂ ಇಂದಿನ ಸಿನಿಮಾಗಳನ್ನು ತುಲನೆ ಮಾಡಿದಾಗ ಅನೇಕ ಸಂಗತಿಗಳು ಗೋಚರಿಸುತ್ತವೆ. ಈಗಿನದಕ್ಕಿಂತ ಹಳೆ ಸಿನೆಮಾಗಳ ಅತ್ಯಾಚಾರದ ದೃಶ್ಯಗಳು ಬೀಭತ್ಸವಾಗಿದ್ದವು. ನಾಯಕ-ನಾಯಕಿಯರು, ಖಳನಾಯಕರು ಅತ್ಯುತ್ತಮ ಕಲಾಕಾರರಾಗಿದ್ದು, ಹೆಣ್ಣಿನ ಭೀತಿ, ಸಂಕಟ, ಪಾರಾಗಲು ಅವಳು ನಡೆಸುವ ವ್ಯರ್ಥ ಪ್ರಯತ್ನ, ಗಂಡಿನ ಅಟ್ಟಹಾಸಗಳು ನೋಡುಗರ ಎದೆ ಝನಿಸುತ್ತಿರುವುದರೊಂದಿಗೆ ಅದು ನಿಜವೆನಿಸುತ್ತಿತ್ತು. ನೋಡುವ ದೃಷ್ಟಿ ಮಾನವೀಯ ನೆಲೆಯಲ್ಲಿ ಬಿಂಬಿತವಾದಾಗ ದೃಶ್ಯ  ನೋಡಿದ ಜನತೆಗೆ ಆ ಸಂದರ್ಭದಲ್ಲಿ ಅವರಿಗೆ ಆ ಖಳನನ್ನು ಸದೆಬಡಿದು ಅಬಲೆಯನ್ನು ಪಾರು ಮಾಡಬೇಕೆನಿಸುತ್ತಿತ್ತೇ ಹೊರತು, ತಾನೂ ಕೂಡ ಅತ್ಯಾಚಾರ ಮಾಡಬೇಕೆನ್ನುವ ಹುಮ್ಮಸ್ಸು ಮೂಡುತ್ತಿರಲಿಲ್ಲ ಎನ್ನುವುದು ಸ್ಪಷ್ಟ. ಕ್ರಮೇಣ ಪ್ರಖ್ಯಾತ ಹಿರೋಗಳೇ ತಾವೇ ರೇಪಿಸ್ಟ್‌ಗಳಂತೆ ವರ್ತಿಸಲಾರಂಬಿಸಿದ್ದರಿಂದ ಹೀರೊಯಿನ್‌ಗೆ ಇಷ್ಟ ಇರಲೀ ಬಿಡಲಿ ನಾಯಕನಿಗೆ ಅವಳು ವಶವಾಗಬೇಕಾಗಿತ್ತು. ಕಾಲ ವಿಭಿನ್ನವಾಗಿದೆ ಹಿಂದಿನ ಕಾಲಗತಿಯೇ ಬದಲಾಗಿದೆ. ಹೀರೋಯಿನ್‌ಗಳು ತಾವೇ ಮೈಮೇಲಿನ ಬಟ್ಟೆಗಳನ್ನು ಕಿತ್ತೆಸೆದು ಹೀರೋ-ವಿಲನ್ ಇಬ್ಬರನ್ನು ಅಟ್ಟಿಸಿಕೊಂಡು ಹೋಗಬಲ್ಲವರಾಗಿzರೆ. ಬಿಗಿದ ಮುಷ್ಟಿಯನ್ನು ಬಿಚ್ಚಿ ತೋರಿಸಿದ ಮೇಲೆ ಬಲವಂತವಾಗಿ ಬಿಡಿಸುವ ಕೆಲಸ ಎಲ್ಲಿದೆ ಸ್ವಾಮಿ?
ತೆರೆಯ ಮೇಲೆ ಕಣ್ ಕುಕ್ಕುವಂತೆ ಮೈದೆರೆದು ದೇಹದ ಅಂಗಾಂಗವನ್ನು ತೋರಿಸಿ ಕೆರಳಿಸುವುದರಿಂದ ಗಂಡಸು ಮೃಗವಾಗಿ ನಿಸ್ಸಹಾಯಕಳಾಗಿ ಆ ಸಂದರ್ಭದಲ್ಲಿ ಸಿಕ್ಕಿದ ಯಾವಳೋ ಒಬ್ಬಳನ್ನು ಅವಳೇ ಬಿಪಾಶಾ ಬಸು ಎಂದೋ ಅಥವಾ ವೀಣಾ ಮಲಿಕ್ ಎಂದೋ ಭ್ರಮಿಸಿಕೊಂಡು ಬಲವಂತದಿಂದ ಅನುಭವಿಸುತ್ತಾನೆಂದು ಹೇಳುವವರಿzರೆ. ಇದು ಎಷ್ಟರಮಟ್ಟಿಗೆ ಸರಿಯೆನ್ನುವುದು ನನ್ನ ಪ್ರಶ್ನೆ?
ಸಲ್ಮಾನ್‌ಖಾನ್, ಜನ್‌ಅಬ್ರಹಾಂ, ಪೃಥ್ವೀರಾಜ್ ತಮ್ಮ ದೇಹಸಿರಿಯನ್ನು ಪ್ರದರ್ಶನಕ್ಕಿಟ್ಟಿzರ, ಯುವತಿಯರು ಅವರಿಂದ ಹುಚ್ಚೆದ್ದು ಹೋಗಿ ಬೇರೆ ಯಾವನೋ ಒಂಟಿ ಯುವಕನ ಮೇಲೆರಗಿದಿದೆಯೇ? ಅಂಗಡಿಯಲ್ಲಿರುವ ರುಚಿಯಾದ ತಿನಿಸುಗಳನ್ನು ನೋಡಿದಾಗ ಆಸೆಯಾಗುತ್ತದೆ. ಆದರೆ ಅದನ್ನೆಲ್ಲಾ ಒಂದೆ ಸಮನೆ ತಿನ್ನಲು ಸಾಧ್ಯವಿದೆಯೇ ಎನ್ನುವ ಅಂಶವನ್ನು ಮನಗಾಣಬೇಕು. ಆಸೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ತಮ್ಮ ಆಹಾರದ ಸಮಯ, ಸ್ಥಳ, ಡಯಟ್‌ಗಳನ್ನು ಮರೆತು ಅಂಗಡಿಗೆ ನುಗ್ಗುವ ವ್ಯರ್ಥ ಪ್ರಯತ್ನ ತರವಲ್ಲ. ಅತ್ಯಾಚಾರ ಮಾಡುವವರು ಸಿನೆಮಾಗಳ ಸ್ಫೂರ್ತಿಗಾಗಿ ಕಾಯಬೇಕಾಗಿಲ್ಲ. ಹಿಂದೂ ಪುರಾಣಗಳ ಅದು ದಂಡಿಯಾಗಿ ಸಿಕ್ಕುತ್ತದೆ. ಕೌರವರು ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತಾಪಹರಣಕ್ಕೆ ಹೊರಟಿದ್ದು ರಾಜಕಾಂಕ್ಷೆಗಿಂತಲೂ ಕೌರವರ ನಾಶಕ್ಕೆ ಹೆಚ್ಚು ಮುಖ್ಯವಾದ ಕಾರಣವಾಯಿತು. ಕೀಚಕ, ಇನ್ನೂ ಅನೇಕ ಗಂಧರ್ವರು, ದೈತ್ಯರು ದ್ರೌಪದಿಯನ್ನು ಹೊತ್ತೊಯ್ಯಲು ಪ್ರಯತ್ನಿಸುವುದು, ಪಾಂಡವರು ಅದರಲ್ಲೂ ಭೀಮ ಅವರನ್ನು ಸಂಹರಿಸಿ ಅವಳನ್ನು ಪಾರು ಮಾಡುವುದು ಮಹಾಭಾರತದುದ್ದಕ್ಕೂ ಬರುತ್ತದೆ. ರಾವಣ ಸೀತೆಯನ್ನು ಮುಟ್ಟಲೀ ಬಿಡಲೀ ಅಪಹರಿಸಿ, ಬಂದಿಸಿಟ್ಟು ತನ್ನವಳಾಗುವಂತೆ ಪೀಡಿಸಿದ್ದು ಮಾನಸಿಕ ಅತ್ಯಾಚಾರವಲ್ಲವೇ? ಸೀತೆಯನ್ನು ಮೃದು ಸ್ವಭಾವ ಅಂದುಕೊಳ್ಳಬಹುದು. ದ್ರೌಪದಿ ಹಾಗಲ್ಲ. ಉಗ್ರ ಸ್ವರೂಪಿಣಿ. ದುಶ್ಶಾಸನ ಎಳೆಎಳೆದು ರಾಶಿ ಹಾಕಿದ ಸೀರೆಗಳನ್ನು -ದುಯೆಧನ ಅದೇನು ದಟ್ಟ ದರಿತ್ರ ಬಂದಿತ್ತೋ ಗೊತ್ತಿಲ್ಲ-ಅಂತಃಪುರಕ್ಕೆ ಸಾಗಿಸಿ ಎಂದನಂತೆ. ಆಗ ದ್ರೌಪದಿ ಒಂದ್ಸಲ ಕಣ್ಬಿಟ್ಟು  ನೋಡುತ್ತಲೇ ಸೀರೆಗಳು ಧಗ್ಗನೆ ಉರಿದು ಬೂದಿಯಾದವಂತೆ. ಅಂತ ಶಕ್ತಿಯಿದ್ದವಳು ತನ್ನ ಕಣ್ಣೋಟದಿಂದ ದುಶ್ಶಾಸನ, ದುಯೆಧನಾದಿಗಳನ್ನು ಸುಟ್ಟು ಬೂದಿ ಮಾಡಿದ್ದರೆ ಅಕ್ಷೆಹಿಣೀ ಸೈನ್ಯದ ನಾಶ ತಪ್ಪುತ್ತಿತ್ತು. ಇದೊಂದೇ ಅಲ್ಲ, ಪೌಂಡ್ರಕನೆಂಬ ದೈತ್ಯ ದೊರೆಯನ್ನು ಕೊಲ್ಲಲು ದ್ರೌಪದಿ ಎಂತಹಾ ರೌದ್ರಾವತಾರ ತಾಳಿದ್ದಳು ಎಂದರೆ ಅತ್ತ ಕಡೆ ನೋಡಲೂ ಧೈರ್ಯ ಸಾಲದೇ ಮುಖ ಮುಚ್ಚಿಕೊಂಡು ಮೂಲೆ ಸೇರಿದ್ದನಂತೆ ಅರ್ಜುನ. ಶ್ರೀಕೃಷ್ಣ  ನೋಡಯ್ಯ ನಿನ್ನ ನ..ಕಬ್ಬಿನ ಜ.. ಮಧುರ ಮೆ? ಎಂದು ಗೇಲಿ ಮಾಡಿದನಂತೆ. ಹಾಗೆ ಸತ್ಯಭಾಮಾ, ಕೈಕೇಯಿ ಕೂಡ ತಂತಮ್ಮ ಪತಿಯೆಂದಿಗೆ ಯುದ್ಧಗಳಲ್ಲಿ ವೀರಾವೇಶದಿಂದ ಹೋರಾಡಿದರೆಂದು ಚಿತ್ರಿಸಿದವರಿಗೆ ಒಮ್ಮೆಲೆ ಪುರುಷಾಹಂಕರ ಜಗೃತವಾಗಿದ್ದಿರಬೇಕು. ಹಾಗಾಗಿ ಆ ಸ್ತ್ರೀಪಾತ್ರಗಳ ಸಾಹಸ ಶೌರ್ಯಗಳನ್ನು ಗಂಡಂದಿರ ಪ್ರಭಾವಳಿಯಲ್ಲಿ ಹುದುಗಿಸಿ ಪುನಃ ಅವರನ್ನು ಕುಯ್ಯೆಮರ್ರೊ ಎನಿಸಿ ಪತಿಯ ಪ್ರಾಮುಖ್ಯವನ್ನು ಎತ್ತಿ ಹಿಡಿದಿzರೆ.
ಭಾರತೀಯ ಪುರುಷರ ಮಟ್ಟಿಗೆ ಹೇಳ ಬೇಕೆಂದರೆ ಹೆಣ್ಣು ಭೋಗವಸ್ತು. ಲೈಂಗಿಕ ಸಮಾಗಮದಲ್ಲಿ ಗಂಡಸಿನ ಇಷ್ಟಾನಿಷ್ಟಗಳು ಮುಖ್ಯವೇ ಹೊರತು ಹೆಣ್ಣಿನದಲ್ಲ ಎಂಬ ಶೀತಲ ಕ್ರೌರ್ಯಕ್ಕೆ ಪುರಾಣಗಳಲ್ಲಿ ಬರುವ ನಿಯೋಗ ಪದ್ಧತಿಗಳು, ಕೃಷ್ಣ, ಇಂದ್ರರ ಕೃತ್ಯಗಳು ಸಮರ್ಥನೆಗಳಾಗಿವೆ. ವಿವಾಹಗಳಲ್ಲಿ ರಾಕ್ಷಸ ವಿವಾಹ, ಪೈಶಾಚಿಕ ವಿವಾಹಗಳೂ ಇವೆ. ಹೆಣ್ಣನ್ನು ಹಾರಿಸಿಕೊಂಡು ಹೋಗಿ ಮದುವೆಯಾಗುವುದು ರಾಕ್ಷಸ ವಿವಾಹ. ಕ್ಷತ್ರಿಯರಲ್ಲಿ ಇದು ನ್ಯಾಯ ಬದ್ಧವೇ ಆಗಿತ್ತು. ಪೈಶಾಚಿಕ ಎಂದರೆ ಹೆಣ್ಣನ್ನು ಪ್ರe ತಪ್ಪಿಸಿ, ಕೂಡಿ ಮದುವೆಯಾಗುವುದಿರಬೇಕು. ಒಟ್ಟಿನಲ್ಲಿ ಹೆಣ್ಣನ್ನು ಅನುಭವಿಸಲು ಗಂಡಸು ರಾಕ್ಷಸನೋ, ಪಿಶಾಚಿಯೋ ಆದರೂ ಪರವಾಗಿಲ್ಲವೆಂಬ ಸಮ್ಮತಿ ನಮ್ಮ ಹಿಂದೂ ಧರ್ಮಶಾಸ್ತ್ರಗಳದ್ದು. ಬೇರೆ ಯಾವ ಧರ್ಮವೂ ಅತ್ಯಾಚಾರಕ್ಕೆ ಹೀಗೆ ಪರೋಕ್ಷ ಕುಮ್ಮಕ್ಕನ್ನು ನೀಡಿಲ್ಲ ಎನ್ನುವುದು ಇಲ್ಲಿ ಪ್ರಸ್ತುತವೇ ಸರಿ.
ಒಂದು ಕುಟುಂಬದಲ್ಲಿ ಹೆಣ್ಣು ಮತ್ತು ಗಂಡುಮಕ್ಕಳನ್ನು ಬೆಳೆಸುವ ವಿಧಾನದ ತಾರತಮ್ಯ ಇರುತ್ತದೆ. ನೀನು ಹೆಣ್ಣು ಹುಡುಗಿ. ಒಂಟಿಯಾಗಿ ಎಲ್ಲೂ ಹೋಗ್ಬೇಡ. ಅಣ್ಣ-ತಮ್ಮನ ಜೊತೆ ಹೋಗಿಬಾ. ದಾರಿಯಲ್ಲಿ ಯಾರಾದರೂ ಮೈಮೇಲೆ ಬಿದ್ದರೆ ಏನು ಮಾಡುತ್ತಿ? ಎಂದು ತಾಯಿ ಸಹಜವೆಂಬಂತೆ ಬೆದರಿಸುತ್ತಾಳೆ. ಇದರಿಂದ ಹೆಣ್ಣಿನ ಹೃದಯದಲ್ಲಿ ಭೀತಿ ಹುಟ್ಟಿಕೊಳ್ಳುವುದು ಒಂದಾದರೆ ಗಂಡು ಹುಡುಗರ ಮನಸ್ಸಿನಲ್ಲಿ ಹೆಣ್ಣು ಅಂದರೆ ಅಬಲೆ, ನಮ್ಮ ರಕ್ಷಣೆ ಇಲ್ಲದೇ ಇರಲಾರಳು, ಒಂದು ವೇಳೆ ಅವಳು ಒಂಟಿಯಾಗಿ ವಾಸಿಸಿದರೆ ಅಥವಾ ತಿರುಗುತ್ತಿದ್ದರೆ ಹಾಗೆ ಮಾಡಿದ್ದು ಅವಳ ತಪ್ಪೇ ಹೊರತು ಹ ಮಾಡಿದ ಗಂಡಸಿನದ್ದಲ್ಲ ಎಂಬ ಭಾವನೆ ತಲೆ ಎತ್ತುತ್ತದೆ. ಇಂಥವರಲ್ಲಿ ಮೃಗೀಯತೆ ಹೆಚ್ಚಾಗಿರುವವರು ಸಮಯ ಸಿಕ್ಕಲ್ಲಿ ಅತ್ಯಾಚಾರಕ್ಕೆ ಹೇಸುವುದಿಲ್ಲ. ಅಷ್ಟು ವಿಪರೀತಕ್ಕೆ ಹೋಗದವರು ಬಸ್ಸು, ರೈಲು, ಸಿನೆಮಾ, ಶಾಪಿಂಗ್ ಸಂದಣಿಗಳಲ್ಲಿ ಹತ್ತಿರವಿರುವ ಹೆಣ್ಣಿನ ಮೈಕೈ ಸವರಿ ಸ್ಪರ್ಶಕ್ಕಿಂತಲೂ ಅವಳ ಚಡಪಡಿಕೆಯಿಂದಲೇ ವಿಕೃತಾನಂದ ಭರಿತರಾಗುತ್ತಾರೆ. ಸಂಸ್ಕಾರವಂತರು ಇಂಥ ಅಸಹ್ಯಗಳಿಗೆ ಇಳಿಯದಿದ್ದರೂ ಹೆಣ್ಣು ಎಂದರೆ ತನ್ನ ನೆರಳಿನಲ್ಲಿ, ತನ್ನ ಆeನುವರ್ತಿಯಾಗಿ ಇರಬೇಕಾದವಳು ಎಂದುಕೊಳ್ಳುತ್ತಾರಲ್ಲದೆ, ಒಂಟಿ ಹೆಣ್ಣನ್ನು ಗೌರವಿಸಿ ಅವಳ ಕಷ್ಟಗಳಿಗೆ ಸ್ಪಂದಿಸಲಾಗದೇ ಹೋಗುತ್ತಾರೆ.
ವಿವಾಹ ಹೆಣ್ಣಿನ ಮಾನಪ್ರಾಣಗಳಿಗೆ ರಕ್ಷಾಕವಚ ಎನ್ನುವುದು ಪೂರ್ತಿ ಸುಳ್ಳಲ್ಲ. ಪೂರ್ತಿ ನಿಜವೂ ಅಲ್ಲ. ನೂರಕ್ಕೆ ತೊಂಬತ್ತರಷ್ಟು ಹೆಂಡತಿಯರು ಪತಿ ತಮಗೆ ಒದಗಿಸುವ ರಕ್ಷಣೆಗೆ ಎಷ್ಟೋ ಪಟ್ಟು ಹೆಚ್ಚಿನ ಪ್ರತಿಫಲವನ್ನು ಅವರಿಗೆ ಕೊಡುತ್ತಿದ್ದರಾದ್ದರಿಂದ ಇದೊಂದು ಹಂಗು ಎಂದು ಗೃಹಿಣಿ ಮುದುಡಿಕೊಳ್ಳ ಬೇಕಾಗಿಲ್ಲ. ಪುರುಷರಲ್ಲಿ ಅತ್ಯಾಚಾರ ಸಮರ್ಥರು ಇರುವುದರಿಂದ ನಾವು ಹೆಣ್ಣಿಗೆ ರಕ್ಷಣೆ ಒದಗಿಸ ಬೇಕಾಗಿದೆ ಎನ್ನುವುದು ಪುರುಷವರ್ಗ ತಲೆತಗ್ಗಿಸಬೇಕಾದ ವಿಷಯ. ಕೊರಳಲ್ಲಿ ಮಾಂಗಲ್ಯವಿರುವವಳನ್ನು ಪರಪುರಷ ಕಣ್ಣೆತ್ತಿಯೂ ನೋಡಲಾರ. ಅವಳು ಕೆಲಸ ಮಾಡುವ ಜಗದಲ್ಲಿ ಲೈಂಗಿಕ ಕಿರುಕುಳ ತಪ್ಪುತ್ತವೆನ್ನುವ ಅನುಕೂಲಗಳು ಭ್ರಮೆಗಳೆಂದು ತಳ್ಳಿ ಹಾಕಲಾಗದು. ಹಾಗೆಂದು ವಿವಾಹಿತೆ ಪೂರ್ತಿ ಸುರಕ್ಷಿತೆಯೇನಲ್ಲ. ಒಂಟಿಯಾಗಿ ಬರಿಗೊರಳಿನಲ್ಲಿ ಓಡಾಡುತ್ತಿರುವವಳ ಮೈಮೇಲೆ ಕೈ ಹಾಕಿದಷ್ಟು ಸಲೀಸಾಗಿ ಪಕ್ಕದಲ್ಲಿ ಗಂಡನಿದ್ದರೆ ಮುಟ್ಟಲಾರರು. ಗಂಡ ಸೂಪರ್‌ಮ್ಯಾನ್ ಅಲ್ಲ. ನಿರ್ಜನ ಪ್ರದೇಶದಲ್ಲಿ ೩-೪ ಜನ ಗಂಡನನ್ನು ಕಟ್ಟಿ ಬೀಳಿಸಿ, ಅವನ ಕಣ್ಣ ಮುಂದೆ ಅತ್ಯಾಚಾರ ನಡೆಸಿದ ಪ್ರಕರಣಗಳು ವರದಿಯಾಗುತ್ತಲೆ ಇವೆ. ಕುರುಡುಗಣ್ಣಿಗಿಂತ ಮೆಳ್ಳೆಗಣ್ಣು ಮೇಲು ಎಂಬಂತೆ ಇದು ಅಲ್ಲವೇ?
ಸ್ತ್ರೀಯರು ಮೈ ಕಾಣುವಂತೆ ಬಟ್ಟೆ ಧರಿಸುವುದು ಅನಾಹುತಕ್ಕೆ ಕಾರಣ ಎಂದು ಪೊಲೀಸ್ ಅಧಿಕಾರಿಗಳಿಬ್ಬರು ಹೇಳಿz ತಡ, ಸ್ತ್ರೀವಾದಿಗಳು ಹೋ ಎಂದು ಚೀರಿದರು. ನೋಡುವವರ ದೃಷ್ಟಿ ಸರಿಯಿರಬೇಕು? ನಮ್ಮಿಷ್ಟ. ನಾವೇನ್ ಬೇಕಾದ್ರೂ ಹಾಕ್ಕೋತೀವಿ ಎಂದು ನೆಲಕ್ಕೆ ಕಾಲಪ್ಪಳಿಸಿದರು. ಅವರ ಆವೇಶದಲ್ಲಿ ತಪ್ಪಿಲ್ಲ. ಆದರೆ ಮನೆಬಾಗಿಲನ್ನು ತೆರೆದಿಟ್ಟೇ ಹೋಗುತ್ತೇನೆ. ನನ್ನ ವಸ್ತು, ನನ್ನ ಹಣ ನನ್ನಿಷ್ಟ ಎಂದರೆ ಅವು ಉಳಿಯುತ್ತವೆಯೇ? ಕಳ್ಳರು ಎಷ್ಟೇ ಭದ್ರತೆ ಇದ್ದರೂ ದೋಚಬಲ್ಲರು. ಅಂತೆಯೇ ಅಪರಾಧ ನಡೆದಾಗ ಅದರ ಪೂರ್ತಿ ಹೊಣೆಯನ್ನು ಅಪರಾಧಿಯ ತಲೆಗೆ ಕಟ್ಟುವಂತೆ ಇಂತಹ ಸಂದರ್ಭದಲ್ಲಿ ನಮ್ಮಿಂದಾಗುವ ಎಲ್ಲ ಜಗರೂಕತೆಯನ್ನು ತೆಗೆದುಕೊಳ್ಳಬೇಕಲ್ಲವೇ ಮಾನಿನಿಯರೇ?
ಅತ್ಯಾಚಾರದಲ್ಲಿ ಅಪರಾಧಿ ಪುರುಷನ ಪರ ಹುಲ್ಲುಕಡ್ಡಿಯಷ್ಟು ಆಧಾರವೂ ಇರಬಾರದು. ಆಗ ಅವನು ಕಠಿಣ ಶಿಕ್ಷೆಯ ಹೊಂಡಕ್ಕೆ ಬಿz ಬೀಳುತ್ತಾನೆ. ಮಮತಾ ಬ್ಯಾನರ್ಜಿಯವರ ಮಾತುಗಳ ಹಿಂದಿನ ಧ್ವನಿ ಇದೇ ಇರಬೇಕು. ಸ್ತ್ರೀಪುರುಷರ ಮಧ್ಯೆ ಅತಿ ಸಲುಗೆ ಅತ್ಯಾಚಾರಕ್ಕೆ ದಾರಿ ತೆಗೆಯಬಲ್ಲದು ಎಂದು ಹೇಳುತ್ತಲೇ ಸೋಕಾಲ್ಡ್ ಪ್ರಗತಿಪರರಿಗೆ ಅವರು ಆಜನ್ಮ ವೈರಿಯಾಗಿ ಬಿಟ್ಟರು. ಸ್ತ್ರೀಪುರುಷರ ಮಧ್ಯೆ ಸ್ನೇಹ ಇರಬಾರದೆಂದಲ್ಲ. ಅದು ಅವರಿರ್ವರನ್ನು ಏಕಾಂತಕ್ಕೆ ಎಳೆಯಬಾರದು. ನಾನು ಕರೆದರೆ ಲಂಚ್‌ಗೆ ಬಂದಾಳು, ಪಾರ್ಟಿ-ಡಿನ್ನರ್‌ಗೆ ಬಂದಾಳು, ಮಂಚಕ್ಕೆ ಕರೆದ್ರೆ ಬರ್ದೇ ಇರ್ತಾಳಾ? ಎನ್ನುವಷ್ಟು ಅಗ್ಗವಾಗದಂತೆ ಎಚ್ಚರ ವಹಿಸಬೇಕು. ಹೆಗಲಮೇಲೆ ಕೈ ಹಾಕಲು, ಸೊಂಟ ಬಳಸಲು ಬಿಟ್ಟರೆ ಆ ಸಲುಗೆ ಗೌರವ ಕಳೆಯುತ್ತದೆ. ಗೌರವವಿಲ್ಲದ ಸ್ಥಳದಲ್ಲಿ ಏನು ಬೇಕಾದರೂ ಆಗಬಹುದು. ಗೆಳೆಯ, ಅವನ ಗೆಳೆಯರು ಹೆಣ್ಣಿಗೆ ಅಪಾಯಕಾರಿಗಳಾದ ಪ್ರಸಂಗಗಳು ಗ್ಯಾಂಗ್‌ರೇಪ್‌ನಲ್ಲಿ ಕಂಡು ಬಂದಿವೆ.
ಹೆಣ್ಣಿನ ಮೇಲೆ ಅತ್ಯಾಚಾರ ಮಾಡುವುದು ಮಹಾಪರಾಧ ಎಂಬ ಅರಿವನ್ನು ಹೆತ್ತವರು, ಶೈಕ್ಷಣಿಕ ವ್ಯವಸ್ಥೆ ಮತ್ತು ಸಮಾಜ ಗಂಡಿನಲ್ಲಿ ಬೆಳೆಸಬೇಕು. ಹೆಣ್ಣು ತನ್ನ ನಡವಳಿಕೆ, ಉಡುಗೆ, ಜೀವನ ವಿಧಾನಗಳಲ್ಲಿ ಘನತೆ ಕಾಪಾಡಿಕೊಳ್ಳುವುದರ ಜೊತೆಗೆ ಸ್ವಯಂ ರಕ್ಷಣಾ ಕಲೆಗಳಲ್ಲಿ ನಿಷ್ಣಾತಳಾಗಬೇಕು. ಇದೆಲ್ಲದರಾಚೆಗೆ ಮಕ್ಕಳು, ಮುದುಕಿಯರೆನ್ನದೇ, ತಾಯಿ-ಮಗಳು ಎಂಬ ಪರಿeನವಿಲ್ಲದೇ ಅತ್ಯಾಚಾರವೆಸಗುವ ಕಾಮಪಶುಗಳನ್ನು ಜೈಲಿನಲ್ಲಿ ಮೇಯಿಸುತ್ತಾ ಇಟ್ಟುಕೊಳ್ಳಬಾರದು. ಅವರಿಗೆ ಮರಣದಂಡನೆ, ಪುರುಷತ್ವ ಹರಣದಂಥ ಶಿಕ್ಷೆಗಳು ಜರಿಗೆ ಬಂದರೆ ಕಾಮುಕರಲ್ಲಿ ಸ್ವಲ್ಪವಾದರೂ ಭಯ ಹುಟ್ಟುತ್ತದೆ. ಜೀವದಾಸೆಗಿಂತ ಕಾಮದಾಸೆ ದೊಡ್ಡದಲ್ಲ ಎನ್ನುವ ಸತ್ಯವನ್ನು ಅರಿಯುತ್ತಾರೆ. ಇದುವೇ ಅಲ್ಲವೇ ಉತ್ತಮ ಸಮಾಜ ನಿರ್ಮಾಣ....ಏನಂತಿರಾ






ಪ್ರಕೃತಿಯ ರಮ್ಯತಾಣದಲ್ಲಿರುವ ಪ್ರಕೃತಿಯ ಕೂಸು, ಮಾನಸಿಕ ನೆಮ್ಮದಿಯ ತಾಣ.  ನೆಲ್ಲಿತೀರ್ಥ -ಸೋಮನಾಥೇಶ್ವರ ಗುಹಾಲಯ 
ಕೆಲವು ವರ್ಷಗಳ ಹಿಂದೆ ಶ್ರೀ ನೆಲ್ಲಿತೀರ್ಥ ಸೋಮನಾಥೇಶ್ವರ ದೇವಸ್ಥಾನ ಹಾಗೂ ತೀರ್ಥದ ಅದ್ಭುತ ಗುಹೆಯು ಇತಿಹಾಸದ ಪುಟಗಳಿಗೆ ಮಾತ್ರ ಸೀಮಿತವಾಗುವ ಸಂದರ್ಭ ಎದುರಾದಾಗ ಊರಿನ ಪ್ರಜ್ಞಾವಂತ ವ್ಯಕ್ತಿಗಳು ಎಚ್ಚೆತ್ತು ಈ ಪ್ರಕೃತಿಯ ರಮ್ಯ ತಾಣವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲು ಪ್ರಯತ್ನಿಸಿ ಸಫಲರಾದುದು ಈಗ ಇತಿಹಾಸ. ಸುಮಾರು ೫೦ ವರ್ಷಗಳಿಂದ ಈ ಕ್ಷೇತ್ರದಲ್ಲಿ ನಡೆದು ಬಂದ ಹೋರಾಟ, ಎದುರಿಸಿದ ಎಡರು ತೊಡರುಗಳು ಹಲವಾರು. ಆರ್ಥಿಕವಾಗಿ ತೀರಾ ಹಿಂದುಳಿದ ಪ್ರದೇಶವಾಗಿದ್ದು ಮಾತ್ರವಲ್ಲದೇ ಅನ್ಯಮತೀಯರ ಮಧ್ಯೆಯೂ ಮತೀಯ ಸಾಮರಸ್ಯ ಉಳಿಸಿಕೊಳ್ಳುತ್ತಾ ಅವರೆಲ್ಲರ ಸಹಕಾರ ಪಡೆದು ಕಾರ್ಯಸಾಧಿಸ ಬೇಕಿದೆ. ಆ ನಿಟ್ಟಿನಲ್ಲಿ ಅದ್ಭುತ ಪ್ರಕೃತಿಯ ಸೌಂದರ್ಯದ ತಾಣವನ್ನು ನಾಡಿನ ಜನತೆಗೆ ಪರಿಚಯಿಸಬೇಕಿದೆ. ಈ ಪ್ರಕೃತಿಯ ಕೂಸು, ಪ್ರಸಕ್ತ ಕಾಲದಲ್ಲಿ ಮಾನಸಿಕ ನೆಮ್ಮದಿಯನ್ನು ಕೊಡುವ ಅಕ್ಷಯ ಪಾತ್ರೆ ಎನ್ನುವುದರಲ್ಲಿ ಸಂಶಯವಿಲ್ಲಾ.
ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಒಂದು ಮಾತನ್ನು ಹೇಳಿರುವುದನ್ನು ನಾವು ನೆನಪಿಸಿಕೊಳ್ಳಲೇ ಬೇಕು. ನನ್ನನ್ನು ಪೂಜಿಸಲು ನಾನೇ ಸೃಷ್ಟಿಸಿದ ವಸ್ತುಗಳಿವೆ. ಪತ್ರ, ಪುಷ್ಪ, ಫಲ, ನೀರು, ಏನನ್ನು ಭಕ್ತಿಯಿಂದ ಸಮರ್ಪಿಸಿದರೂ ನಾನು ಸ್ವೀಕರಿಸುವೆ? ಆ ಮಾತನ್ನು ಈ ಯುಗದಲ್ಲೂ ನಿಜಗೊಳಿಸಲೋಸುಗವೋ ಎನ್ನುವಂತೆ ನೆಲ್ಲಿತೀರ್ಥದ ಗುಹಾಲಯ ಬೆಳೆದು ನಿಂತಿದೆ. ಪ್ರಕೃತಿ ಮುಖೇನ ಭಗವಂತನ ಆರಾಧನೆಗೆ ನೆಲ್ಲಿತೀರ್ಥ ಗುಹೆಯಂತಹ ಇನ್ನೊಂದು ತಾಣವಿಲ್ಲ. ಸಾಧಕನ ಆಧ್ಯಾತ್ಮಿಕ ಉನ್ನತಿಗೆ ನೆಲ್ಲಿತೀರ್ಥ ಗುಹಾಲಯ ಭಗವಂತ ನಿರ್ಮಿಸಿದ ಪ್ರಾಕೃತಿಕ ಗುರುಕುಲವೆಂದರೂ ತಪ್ಪಿಲ್ಲ.
ನಮ್ಮ ಆಧ್ಯಾತ್ಮಕ್ಕೂ ಸಂಖ್ಯೆ ಹದಿನೆಂಟಕ್ಕೂ ಆಳವಾದ ನಂಟಿದೆ, ಸುಲಭವಾಗಿ ಬಿಚ್ಚಲಾಗದ ಗಂಟಿದೆ. ಹದಿನೆಂಟು ಶಾಸ್ತ್ರ, ಹದಿನೆಂಟು ಪುರಾಣ, ಹದಿನೆಂಟು ದಿವಸಗಳ ಭಾರತದ ಯುದ್ಧ, ಹದಿನೆಂಟು ಅಧ್ಯಾಯಗಳ ಗೀತೆ. ಹೀಗೆಯೇ ಮುಂದುವರಿಯುತ್ತದೆ ಹದಿನೆಂಟರ ಲೆಕ್ಕಾಚಾರ. ಏನಿದು ಹದಿನೆಂಟು? ಈ ಹದಿನೆಂಟೇ ನಮ್ಮ ಹಿಂದೂ ಧರ್ಮದ ಒಳತಿರುಳು. ಇದುವೇ ವೇದ ಉಪನಿಷತ್ತು ಶಾಸ್ತ್ರ ಪುರಾಣಗಳೆಲ್ಲದರ ಜೀವಸತ್ತ್ವ. ಈ ಹದಿನೆಂಟನ್ನು ತಲುಪಲು ಪ್ರಪಂಚದ ನಾನಾ ಧರ್ಮಗಳು ಮಂತ್ರ ದೃಷ್ಠಾರರೂ ಶ್ರಮಿಸಿದ್ದು ಪರಮ ಸತ್ಯವಲ್ಲದೇ ಮತ್ತೇನು? ಈ ಪ್ರಯತ್ನ ಇಂದಿನ ವಿಜ್ಞಾನ ಯುಗದಲ್ಲೂ ಮುಂದುವರಿಯುತ್ತದೆ. ಈ ಹದಿನೆಂಟನೆ ಮೆಟ್ಟಿಲೇ ಮೋಕ್ಷ. ನಮ್ಮ ವೈದಿಕ ಧರ್ಮದ ಕೊನೆಯ ಮೆಟ್ಟಲು. ಈ ಮೆಟ್ಟಲನ್ನು ಮುಟ್ಟಬೇಕಾದರೆ ಮನುಷ್ಯನು ಮೊದಲಿನ ಹದಿನೇಳು ಮೆಟ್ಟಲುಗಳನ್ನು ಜನ್ಮದಾರಾಭ್ಯ ಏರಬೇಕಾಗಿದೆ. ಅದು ಆಧ್ಯಾತ್ಮಿಕ ಸಾಧನೆಯಿಂದ ಮಾತ್ರ ಸಾಧ್ಯ. ಅದನ್ನೇ ವೇದ ಉಪನಿಷತ್ತುಗಳು ಸಾರುತ್ತಿರುವುದು.
ನೆಲ್ಲಿತೀರ್ಥದ ಪ್ರಕೃತಿ ನಿರ್ಮಿತ ಗುಹೆಯೊಳಗಿನ ಶಿವಲಿಂಗದ ದರ್ಶನವಾಗಬೇಕಾದರೆ ನಾವು ಮೊದಲಿನ ೧೭ ಮೆಟ್ಟಲುಗಳನ್ನು ಹೇಗೆ ಏರಬೇಕು ಎಂಬುದನ್ನು ಅರ್ಥೈಸಿಕೊಂಡಾಗ ಮಾತ್ರ ಮೇಲೆ ಹೇಳಿದ ಸಿದ್ಧಾಂತದ ಒಳಗುಟ್ಟು ತಿಳಿಯುತ್ತದೆ. ದೇವರ ಸಾನ್ನಿಧ್ಯವನ್ನು ತಲುಪಬೇಕಾದರೆ ಗರ್ಭಸ್ಥ ಶಿಶುವಿನಿಂದ ವೃದ್ಧ್ಯಾಪ್ಯದವರೆಗೆ ಮಾಡಬೇಕಾದ ಸಾಧನೆ ಹಾಗೂ ಭಕ್ತಿಯೊಂದಿಗೆ ದೈಹಿಕ ಶ್ರಮಕ್ಕೂ, ಕರ್ಮಕ್ಕೂ ಅಷ್ಟೆ ಪ್ರಾಮುಖ್ಯತೆ ಇವೆ ಎನ್ನುವುದು ಸ್ಪಷ್ಟ. ಗುಹೆಗೆ ಇಳಿಯುವಾಗ ತಾಯಿಯ ಹೊಟ್ಟೆಯಲ್ಲಿನ ಗರ್ಭಾವಸ್ಥೆಯ ಶಿಶುವಿನ ರೀತಿಯಲ್ಲಿ ಕುಳಿತು ಇಳಿಯಬೇಕು. ವಸುಂಧರೆಯ ಗರ್ಭವನ್ನು ಪ್ರವೇಶಿಸಿದಂತೆ ನಾವು ಮುಂದಕ್ಕೆ ಶಿಶುವಿನ ಜನನದಾರಭ್ಯ ವಿವಿಧ ಬೆಳವಣಿಗೆಯ ಹಂತದ ರೀತಿಯಲ್ಲಿ ಅಂದರೆ ಹೊಟ್ಟೆಯನ್ನು ನೆಲಕ್ಕೆ ತಾಗಿಸಿಕೊಂಡು ಮುಂದೆ ಹೋಗುವುದರಿಂದ ಕುಕ್ಕುರುಗಾಲು, ಅಂಬೆಗಾಲು ಇಡುವವರೆಗೆ ನಾನಾ ರೀತಿಯ ಅವಸ್ಥೆಗಳಲ್ಲಿ ಮುಂದುವರಿಯ ಬೇಕಾಗುತ್ತದೆ.
ಮನುಷ್ಯನ ಆಯುಷ್ಯ ಪ್ರಮಾಣ ೧೨೦ ವರ್ಷ ಎಂದಾದರೆ ಸಾಮಾನ್ಯವಾಗಿ ೨೦ರಿಂದ ೫೦ರ ೩೦ ವರುಷಗಳನ್ನು ಜೀವನದ ಸಾಧನೆಯ ಕಾಲವೆಂದು ಅರ್ಥೈಸಬಹುದು. ಈ ಪ್ರಕಾರ ನಮಗೆ ಸುಮಾರು ೨೫ ವರುಷಗಳಾದಾಗ ಭವಿಷ್ಯದ ಬದುಕನ್ನು ಬೃಹದಾಕಾರವಾಗಿ ನೋಡುವ ಹಂತಕ್ಕೆ ತಲುಪಿರುತ್ತೇವೆ. ಅಂತೆಯೇ ಗುಹೆಯ ಮಧ್ಯಭಾಗಕ್ಕೆ ಬಂದಾಗ ಅದು ನಮಗೆ ಬೃಹದಾಕಾರವಾಗಿ ಕಾಣಿಸ ತೊಡಗುತ್ತದೆ. ಅದರ ಒಳಗೆ ಒಂದು ಚಿಕ್ಕ ಗುಡ್ಡವಿದ್ದು ನಂತರ ಅದನ್ನು ಏರಬೇಕಾಗಿದೆ. ಅದನ್ನು ನಮ್ಮ ಜೀವನದ ಸಾಧನೆಯ ಕಾಲಕ್ಕೆ ಹೋಲಿಸಬಹುದು. ಅದರ ತುದಿ ಮುಟ್ಟಿದಾಗ ೬೦ರ ಅನುಭವ. ಅದು ಷಷ್ಠಿಪೂರ್ತಿ. ನಮ್ಮ ವ್ಯವಹಾರಗಳನ್ನು ಮಕ್ಕಳಿಗೆ ಬಿಟ್ಟು, ಅಂದರೆ ಈ ಮನೆಯ ವ್ಯಾಮೋಹವನ್ನು ತೊರೆದು ಆ ಮನೆಯ ಕಡೆಗೆ ಗಮನ ಕೊಡುವ ಕಾಲ. ಪ್ರತಿ ಮನುಷ್ಯನಿಗೆ ಎರಡು ಮನೆಗಳಿವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಮನುಷ್ಯ ಮೋಹಕ್ಕೊಳಪಟ್ಟು ಒಂದನೇ ಮನೆಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತ ಮಡದಿ, ಮಕ್ಕಳು ಹೀಗೆ ಎಲ್ಲಾ ವಿಷಯ ಸುಖಗಳಲ್ಲಿ ಮಗ್ನನಾಗಿ ಬಿಡುತ್ತಾನೆ. ಆದರೆ ಆತನಿಗೆ ಇನ್ನೊಂದು ಮನೆಗೆ ಹೋಗಲಿಕ್ಕಿದೆ. ಆ ಮನೆಗೆ ಅವನ ಹಿರಿಯರೆಲ್ಲಾ ಹೋಗಿರುತ್ತಾರೆ. ತನಗೂ ಅಲ್ಲಿ ಬೇಗನೆ ಹೋಗಲಿಕ್ಕಿದೆ .ಅದಕ್ಕಾಗಿ ಆ ಮನೆಯ ವ್ಯವಸ್ಥೆಗಾಗಿ ಏನಾದರೂ ಸಂಗ್ರಹಿಸು ಎನ್ನುವುದು ಇದರ ತಾತ್ಪರ್ಯ. ಅದಕ್ಕಾಗಿ ಆಧ್ಯಾತ್ಮ ಚಿಂತನೆ, ಸತ್ಕರ್ಮ ಮಾಡುವುದು, ತೀರ್ಥಕ್ಷೇತ್ರಗಳ ಸಂದರ್ಶನ. ನೆಲ್ಲಿತೀರ್ಥದಲ್ಲಿ ನಾವು ಏರಿದ ಗುಡ್ಡವನ್ನು ದಕ್ಷಿಣಾಭಿ ಮುಖವಾಗಿ ಇಳಿಯುತ್ತೇವೆ. ಇಲ್ಲಿ ದಕ್ಷಿಣಾಮುಖ ಎಂಬುದು ಬಹಳ ಪ್ರಾಮುಖ್ಯವಾದ ವಿಷಯ. ಕೆಳಗಿಳಿದಾಗ ನಮಗೆ ಪ್ರಕೃತಿ ನಿರ್ಮಿತ ಸುಂದರ ಸರೋವರ ಎದುರಾಗುತ್ತದೆ. ಅದುವೇ ಸಂಸಾರ ಸರದಿ. ಅದನ್ನು ದಾಟಿದಾಗ ಪರಾತ್ಪರ ಸ್ವರೂಪಿ ಜಾಬಾಲೇಶ್ವರ ಶಿವಲಿಂಗದ ದರ್ಶನ. ಅದುವೇ ಮೋಕ್ಷ.
ಗುಹೆಯ ಪ್ರಾರಂಭದಿಂದ ಕೊನೆಯ ತನಕ ನಾವು ಸಾಗುವಾಗ ಸುಮಾರು ೧೮ ಅವಸ್ಥೆಗಳನ್ನು ದಾಟ ಬೇಕಾಗುತ್ತದೆ. ನಮ್ಮನ್ನೇ ನಾವು ಮರೆತು ಭಗವಂತನ ನಾಮಸ್ಮರಣೆ ಮಾಡುತ್ತಾ, ಧ್ಯಾನದ ಅನುಭವವು ನಮಗೆ ಆಗಿ ಎಲ್ಲವನ್ನು ಮರೆಯುತ್ತೇವೆ. ನೆಲ್ಲಿತೀರ್ಥದ ಸೊಬಗೆ ಅಂಥದ್ದು. ಇದರ ಆನಂದವನ್ನು ಸವಿಯಬೇಕಿದ್ದರೆ ಸ್ವ-ಅನುಭವ ಅಗತ್ಯವಲ್ಲವೇ? ಒಮ್ಮೆ ಬಂದು ಈ ಕ್ಷೇತ್ರದ ದರ್ಶನ ಪಡೆದು ಕೃತಾರ್ಥರಾಗಬೇಕು.
ಪರಿವಾರ ದೇವತೆಗಳು ಮತ್ತು ದೈವಗಳು...
ಶ್ರೀ ಮಹಾಗಣಪತಿ ದೇವಳವು ಮುಖ್ಯ ದೇವಸ್ಥಾನದ ಒಳಾಂಗಣದಲ್ಲಿ ನೈರುತ್ಯ ಭಾಗದಲ್ಲಿದ್ದು ಪ್ರತ್ಯೇಕ ಗುಡಿಯನ್ನು ಹೊಂದಿದೆ. ಗಣಪತಿ ದೇವರಿಗೆ ಗಣಹೋಮ, ಸಂಕಷ್ಟ ಚತುರ್ಥಿ ಪೂಜೆ, ಅಪ್ಪದ ಪೂಜೆ, ಕಜ್ಜಾಯ ಹರಕೆಯಾಗಿ ನಡೆಸಲ್ಪಡುತ್ತದೆ. ವ್ಯಾಘ್ರಚಾಮುಂಡಿ ಶ್ರೀಕ್ಷೇತ್ರದ ಮತ್ತು ಊರಿನ ಪ್ರಧಾನ ದೈವ. ತುಳುವಿನಲ್ಲಿ ರಾಜನ್‌ದೈವ ಎಂದು ಮನ್ನಣೆ ಪಡೆದಿರುವ ಈಕೆ ದೇವಾಸ್ಥಾನದ ಆಗ್ನೇಯ ದಿಕ್ಕಿನಲ್ಲಿದ್ದು ಭಕ್ತಾಭೀಷ್ಟ ಪ್ರದಾಯಕಿಯಾಗಿದ್ದಾಳೆ. ನಿತ್ಯ ಪೂಜೆಯೊಂದಿಗೆ ಶುಕ್ರವಾರದಂದು ಹೂವಿನ ಪೂಜೆ, ಅಗೆಲು ಸೇವೆ ಹರಕೆಯಾಗಿ ಸಲ್ಲಿಸಲ್ಪಡುತ್ತವೆ. ವಾರ್ಷಿಕ ಉತ್ಸವದ ಸಮಯ ಶ್ರೀ ದೇವರ ಚೂರ್ಣೋತ್ಸವದ ಸಂದರ್ಭ, ಊರವರ ಸಮ್ಮುಖದಲ್ಲಿ ದರ್ಶನ ಪಾತ್ರಿಯ ಮೈಮೇಲೆ ವ್ಯಾಘ್ರಚಾಮುಂಡಿಯನ್ನು ಆಹ್ವಾನಿಸಿದಾಗ ಶ್ರೀ ದೇವರ ಭೇಟಿಗೆ ತೆರೆಳುವ ವ್ಯಾಘ್ರಚಾಮುಂಡಿಯು ಮಹಾಪ್ರಸಾದದೊಂದಿಗೆ ಭಕ್ತಾದಿಗಳನ್ನು ಹರಸುವುದು ಅನುಚಾನವಾಗಿ ನಡೆದು ಕೊಂಡು ಬರುತ್ತಿದೆ. ಹಾಗೆಯೇ ಧ್ವಜಾವರೋಹಣದ ಮಾರನೇ ದಿನ ವ್ಯಾಘ್ರಚಾಮುಂಡಿ ನೇಮೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ. ಅಲ್ಲದೇ ಧೂಮಾವತಿ, ರಕ್ತೇಶ್ವರಿ, ಕಾಂತರ ಧೂಮಾವತಿ, ಬಂಟ, ವ್ಯಾಘ್ರಚಾಮುಂಡಿ ಬಂಟ, ಸರಳ ಧೂಮಾವತಿ ಎಂಬ ಇತರ ಆರು ದೈವಗಳು ಪೂಜಿಸಲ್ಪಟ್ಟು ನೇಮೋತ್ಸವ ನಡೆಯುತ್ತದೆ.
ಮಹರ್ಷಿ ಜಾಬಾಲಿ:
ದೇವಸ್ಥಾನದ ಹೊರಾಂಗಣದ ಉತ್ತರ ದಿಕ್ಕಿನಲ್ಲಿ ವೃಂದಾವನ ಸ್ವರೂಪದಲ್ಲಿ ಮಹರ್ಷಿ ಜಾಬಾಲಿಯು ಕಂಗೊಳಿಸುತ್ತಿದ್ದಾರೆ. ಅಲ್ಲದೆ ಈ ವೃಂದಾವನದ ಇತರ ಮೂರು ದಿಕ್ಕುಗಳಲ್ಲಿ ಅವರ ಆರಾಧ್ಯ ದೇವರುಗಳಾದ ಮಹಾಗಣಪತಿ, ಪಾರ್ವತಿ, ಮಹೇಶ್ವರರು ಪೂಜಿಸಲ್ಪಡುತ್ತಿದ್ದು ಬಹಳ ಕಾರಣೀಕದ ಪೀಠವಾಗಿದೆ. ಗುಹೆಯೊಳಗೆ ತೀರ್ಥಸ್ನಾನ ಮಾಡಿ ಜಾಬಾಲೇಶ್ವರನನ್ನು ಅರ್ಚಿಸಿ ಮಹರ್ಷಿಗಳ ಸನ್ನಿಧಾನದಲ್ಲಿ ಫಲ ಸಮರ್ಪಣೆ ಮಾಡಿ, ಪ್ರಾರ್ಥಿಸಿಕೊಂಡಾಗ ಮನಸ್ಸಿನಲ್ಲಿ ಇಚ್ಚಿಸಿದ ಕಾರ್ಯವು ಕ್ಷಿಪ್ರವಾಗಿ ಈಡೇರುತ್ತಿರುವುದು ಈ ಸ್ಥಳದ ವಿಶೇಷ.
ಮಹರ್ಷಿ ಜಾಬಾಲಿ ಕಾಶೀ ವಿಶ್ವನಾಥನ ಸನ್ನಿಧಿಯಿಂದ ಬಂದು ಅಂದು ಬಿಲ್ವ ವನವೆಂದು ಪ್ರಸಿದ್ಧಿಯಾದ (ನಿರ್ಜರಾರಣ್ಯ - ಕಟೀಲು ಕ್ಷೇತ್ರ) ನೆಲ್ಲಿತೀರ್ಥದ ಗುಹೆಯಲ್ಲಿ ತಪಸ್ಸನ್ನಾಚರಿಸಿ ಜನರ ಕಷ್ಟಸುಖಗಳಿಗೆ ಸ್ಪಂದಿಸಿ ನಂದಿನಿಯನ್ನು ನದಿಯಾಗಿ ಹರಿಸಿ, ಈ ಪ್ರದೇಶದ ಕ್ಷಾಮ ಡಾಮರಗಳನ್ನು ಪರಿಹರಿಸಿ ಮುಂದಕ್ಕೆ ಅರುಣಾಸುರ ವಧೆಗೆ ಕಾರಣೀಭೂತರಾದ ಮಹಾಮಹಿಮರು ಇವರು. ಇಂದಿಗೂ ಗುಹೆಯಲ್ಲಿ ತಪಸ್ಸನ್ನಾಚರಿಸುತ್ತ ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಕಾಮಧೇನುವಾಗಿದ್ದಾರೆ ಎನ್ನುವುದು ಹಿಂದಿನಿಂದ ಬಂದ ನಂಬಿಕೆ.
ಕ್ಷೇತ್ರಪಾಲ - ಕ್ಷೇತ್ರ ಉಲ್ಲಾಯ
ದೇವಸ್ಥಾನದ ಮುಂಭಾಗದಲ್ಲಿ ಇರುವ ದೈವಕ್ಷೇತ್ರ ಉಲ್ಲಾಯ. ಕ್ಷೇತ್ರರಕ್ಷಕನಾದ ಈತನಿಗೆ ಅವಭೃತ (ಆರಾಟ) ದಿವಸ ವಿಶಿಷ್ಟ ರೀತಿಯ ನೇಮೋತ್ಸವ ನಡೆಯುತ್ತದೆ. ವಿಚಿತ್ರ ಸಂಪ್ರದಾಯದಿಂದ ಕೂಡಿದ ಈ ನೇಮವು ಮಹಾರಾಜನು ಅಧಿಕಾರಿಗಳನ್ನು ಪ್ರಶ್ನಿಸುವ ರೀತಿಯಲ್ಲಿ ಇದ್ದು, ಆತನ ವೇಷಭೂಷಣಗಳು ಇದನ್ನು ಪುಷ್ಟೀಕರಿಸುತ್ತವೆ. ಮುಖದಲ್ಲಿ ಮೀಸೆಯನ್ನು ಹೊತ್ತು ಧನುರ್ಧಾರಿಯಾಗಿ ದೇವರು ಸ್ನಾನ ಮಾಡಿ ವಿಜೃಂಭಣೆಯಿಂದ ಬರುತ್ತಿರುವಾಗ ಅರ್ಧದಲ್ಲಿ ಅಡ್ಡಗಟ್ಟಿ, ತಂತ್ರಿಗಳನ್ನು ಅಧಿಕಾರಯುತವಾಗಿ ಕೇಳುವ ಮಾತುಗಳು ಬಹುಶಃ ದಕ್ಷಿಣ ಕನ್ನಡದಲ್ಲಿಯೇ ವಿಶಿಷ್ಟ ರೀತಿಯದ್ದಾಗಿದೆ? ತಂತ್ರಿಗಳೇ, ನನ್ನ ದೇವರ ಮೂರು ದಿವಸದ ದೇವಬಲಿ, ಒಂದು ದಿವಸದ ಭೂತಬಲಿ, ಆರಡ ಅಂಬೋಲಿ ಸರಿಯಾಗಿ ನೆರೆವೇರಿತು ತಾನೆ? ಶ್ರೀ ದೇವರ ಅಂದರೆ ನನ್ನ ಉಲ್ಲಾಯ ಒಡೆಯನ ನಿತ್ಯ ಬಲಿ, ನಂದಾದೀಪ ಸಾಂಗವಾಗಿ ನೆರವೇರುತ್ತಾ ಇದೆ ತಾನೆ? ಹಾಗಿದ್ದ ಪಕ್ಷದಲ್ಲಿ ಧ್ವಜಾವರೋಹಣವಾಗಲಿ ಮತ್ತು ನನ್ನ ಒಡೆಯ ಗರ್ಭಗುಡಿ ಪ್ರವೇಶಿಸಲಿ, ನಾನು ನನ್ನ ಗುಡಿ ಸೇರುತ್ತೇನೆ? ಎನ್ನುತ್ತಾ ಧರಾಶಾಯಿಯಾಗುತ್ತಾನೆ. ಅಲ್ಲಿಗೆ ನೇಮ ಸಮಾಪ್ತಿಯಾಗುತ್ತದೆ. ಈ ರೀತಿಯ ಸಂಪ್ರದಾಯ ತುಳುನಾಡಿನಲ್ಲಿ ಬೇರೆಲ್ಲೂ ಕಂಡು ಬರುವುದಿಲ್ಲ.
ನಾಗಬ್ರಹ್ಮರು ಮತ್ತು ದೈವಗಳು:
ದೇವಸ್ಥಾನದಿಂದ ವಾಯವ್ಯ ದಿಕ್ಕಿಗೆ ಸುಮಾರು ೨ ಫರ್ಲಾಂಗ್ ದೂರದಲ್ಲಿ ಕಾಡಿನ ಮಧ್ಯೆ ನಾಗಬ್ರಹ್ಮ ಹಾಗೂ ಪರಿವಾರ ದೈವಗಳ ಸಾನ್ನಿಧ್ಯವಿದ್ದು ಜೀರ್ಣೋದ್ಧಾರದ ಹಂತದಲ್ಲಿದೆ. ವರ್ಷಕ್ಕೆ ಎರಡಾವರ್ತಿ ವಾರ್ಷಿಕ ಪೂಜೆಗಳು ನಡೆಯುತ್ತಿದ್ದು, ಬಹಳ ಕಾರಣಿಕ ಸ್ಥಳವಾಗಿದೆ. ಈ ಸನ್ನಿಧಾನದಲ್ಲಿ ವಾರಾಹಿ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲ, ಬೊಬ್ಬರ್ಯ, ಪಾಶಾಣಮೂರ್ತಿ ಎಂಬ ಆರು ದೈವಗಳ ಸಾನ್ನಿಧ್ಯವಿದ್ದು ಇವುಗಳ ಮಧ್ಯೆ ನಾಗಬ್ರಹ್ಮರು ರಾರಾಜಿಸುತ್ತಿದ್ದಾರೆ.
ನೆಲ್ಲಿತೀರ್ಥ-ಕೆಲವು ಪ್ರಾಚೀನ ಉಲ್ಲೇಖಗಳು:




ತುಳುನಾಡಿನ ಪ್ರಾಚೀನ ದೇವಾಲಯಗಳಿಗೆಲ್ಲ ಒಂದು ಭವ್ಯ ಪರಂಪರೆಯಿದೆ. ಹಿಂದೆ ಈ ಪ್ರದೇಶವನ್ನು ಆಳಿದ್ದ ಆಳುಪ, ವಿಜಯನಗರ, ಕೆಳದಿ ಸಂಸ್ಥಾನಗಳಿಂದಲೂ, ಸ್ಥಳೀಯ ರಾಜವಂಶೀಯರಿಂದಲೂ ಆರಾಧಿಸಲ್ಪಡುತ್ತಿದ್ದ ಅನೇಕ ದೇವಾಲಯಗಳು ಇಲ್ಲಿವೆ. ದೇವಾಲಯಗಳ ವಿನಿಯೋಗಗಳು ಸಾಂಗವಾಗಿ ನಡೆಯಬೇಕೆಂಬ ಸದುದ್ದೇಶದಿಂದ, ಅಂದಿನ ಅರಸರು ಬಿಟ್ಟುಕೊಟ್ಟ ದತ್ತಿ ಶಾಸನಗಳ ಸಂಖ್ಯೆ ಅಪರಿಮಿತವಾಗಿದೆ. ಇಲ್ಲಿಯ ತುಂಡರಸರಲ್ಲಿ ಚೌಟರು ಸುಪ್ರಸಿದ್ಧರು. ಇವರು ಮೂಲತಃ ಕರಾವಳಿಯ ಉಳ್ಳಾಲದವರಾಗಿದ್ದು, ಮುಂದೆ ಪುತ್ತಿಗೆ, ಮೂಡಬಿದಿರೆಗಳಲ್ಲಿ ಕೇಂದ್ರಸ್ಥಾನವನ್ನೇರ್ಪಡಿಸಿ ರಾಜ್ಯಭಾರ ಮಾಡುತ್ತಿದ್ದರು. ಇವರು ಸೋಮನಾಥ ದೇವರ ಭಕ್ತರಾಗಿದ್ದರು. ಆದ ಕಾರಣ ಇವರು ಆಳಿಕೊಂಡಿದ್ದ ಭಾಗದಲ್ಲಿ ಅನೇಕ ಸೋಮನಾಥ ದೇವಾಲಯಗಳಿವೆ. ಉಳ್ಳಾಲ, ಪುತ್ತಿಗೆ, ಅಮ್ಮೆಂಬಳ, ಪೆರ್ಮುದೆ, ಪೋರ್ಕೋಡಿ, ಗುರುಪುರ, ಇರಾ, ನೆಲ್ಲಿತೀರ್ಥ ಮೊದಲಾದೆಡೆ ಸೋಮನಾಥ ದೇವಾಲಯಗಳಿವೆ. ಇವುಗಳಲ್ಲಿ ನೆಲ್ಲಿತೀರ್ಥವು ಪವಿತ್ರ ಗುಹಾತೀರ್ಥದ ಸನ್ನಿಧಿಯಲ್ಲಿದ್ದು ಅತಿ ಮಹಿಮಾನ್ವಿತವಾಗಿದೆ. ಪೂರ್ವಕಾಲದಲ್ಲಿ ಇದು ಜಾಬಾಲಿಮುನಿಯ ಸಿದ್ಧಾಶ್ರಮವಾಗಿತ್ತೆಂದು ಪುರಾಣೋಕ್ತಿಯಿದೆ. ಕ್ಷೇತ್ರದಲ್ಲಿರುವ ಅರಸರ ಮಂಚ, ಅರಸು ಕಟ್ಟೆಗಳು ಇಲ್ಲಿಗೆ ಚೌಟರಸರು ಆಗಾಗ ಭೇಟಿ ಕೊಡುತ್ತಿದ್ದರೆನ್ನುವುದಕ್ಕೆ ಮೂಕಸಾಕ್ಷಿಯಾಗಿದೆ. ದ.ಕ ಜಿಲ್ಲೆಯ ಪ್ರಾಚೀನ ಇತಿಹಾಸ ಬರೆದಿರುವ ದಿ.ಗಣಪತಿರಾವ್ ತನ್ನ ಕೃತಿಯಲ್ಲಿ ಹೇಳಿರುವ ಕೆಲವು ವಿಷಯಗಳು ಮುಖ್ಯವಾಗಿವೆ. ಕ್ರಿ.ಶ ೧೪೦೩-೧೪೭೦ರ ಅವಧಿಯಲ್ಲಿದ್ದ ೨ ನೇ ಚೆನ್ನರಾಯ ಚೌಟನು ಒಂದು ಯುದ್ಧಕಾಲದಲ್ಲಿ ಬಂಗರಸರಿಗೆ ಸೈನ್ಯ ಸಹಾಯ ಮಾಡಿ ಜಯ ದೊರಕಿಸಿ ಕೊಟ್ಟ ಕಾರಣಕ್ಕೆ ಮಣೇಲ, ಪೇಜಾವರ, ಮುಂಡ್ಕೂರು ಸೀಮೆಗಳನ್ನು ಉಡುಗೊರೆಯಾಗಿ ಪಡೆದನು. ಅವನು ಹಿಂತಿರುಗಿ ಬರುವಾಗ ಜಾಬಾಲಿ ಋಷಿಯ ಆಶ್ರಮವಿದ್ದ ಸ್ಥಳದಲ್ಲಿ ಗುಹಾತೀರ್ಥದಲ್ಲಿ ಸ್ನಾನಮಾಡಿ, ಆ ಋಷಿಯ ಪ್ರತಿಷ್ಠೆ ಮಾಡಿ, ಸೋಮನಾಥೇಶ್ವರ ದೇವರ ದರ್ಶನ ಮಾಡಿಕೊಂಡು ನೆಲ್ಲಿತೀರ್ಥ ಮತ್ತು ಕರಂಬಾರು ಗ್ರಾಮಗಳನ್ನು ಈ ದೇವಸ್ಥಾನಕ್ಕೆ ದಾನವಾಗಿ ನೀಡಿದನು ಎಂದು ಹೇಳಲಾಗಿದೆ. ಈಗಲೂ ಕೆಂಜಾರು, ಕರಂಬಾರು ಗ್ರಾಮದವರು ಉತ್ಸವದ ಸಮಯದಲ್ಲಿ ಬಂದು ಅಗ್ನಿಕುಳಿಯನ್ನು ನಡೆಸಿಕೊಡುತ್ತಾರೆ.
ಕ್ರಿ.ಶ ೧೫೭೪ ರಲ್ಲಿ ನೆಲ್ಲಿತೀರ್ಥ ಕ್ಷೇತ್ರದಲ್ಲಿ ನಡೆದ ಘಟನೆಯಿದು. ಆಗ ತಾನೆ ತುಳುನಾಡಿನಲ್ಲಿ ಬೇರು ಬಿಡುತ್ತಿದ್ದ ವೀರಶೈವ ಧರ್ಮದವರಿಗೂ, ಬ್ರಾಹ್ಮಣರಿಗೂ ದೇವತಾರಾಧನೆಯ ಕುರಿತು ವಿವಾದವೆದ್ದಿತು. ವಿಜಯನಗರ ಸಾಮ್ರಾಜ್ಯದ ವರ್ಚಸ್ಸು ಇಳಿಮುಖವಾಗಿ, ಕೆಳದಿ ಅರಸರು (ವೀರಶೈವ) ಇಲ್ಲಿ ಆಳ್ವಿಕೆ ಆರಂಭಿಸಿದ ಕಾಲವದು. ವೀರಶೈವರು ಬಾಳೇಹಳ್ಳಿಯ ಸಿಂಹಾಸನಾಧೀಶ ಕುಮಾರ ಚನ್ನಬಸವೆಂಬ ಪ್ರಭಾವಿ ವ್ಯಕ್ತಿಯಲ್ಲಿ ದೂರಿಡುವರು. ಅವನು ಈ ನ್ಯಾಯ ತೀರ್ಮಾನವನ್ನು ಮಾಡಬೇಕೆಂದು ಮೂಡಬಿದಿರೆಯ ಚೌಟವನೆ ರಾಣಿ ಅಬ್ಬಕ್ಕದೇವಿ ೨ (೧೫೪೪-೧೫೮೨)ಯ ಸನ್ನಿಧಿಗೆ ಅರಿಕೆ ಮಾಡುವನು. ಅಬ್ಬಕ್ಕ ದೇವಿಯು ಉಭಯ ಪಕ್ಷದವರನ್ನೂ ಮೂಡಬಿದಿರಿಗೆ ಕರೆಸಿ, ತುಳುನಾಡಿನ ಬೇರೆ ಅರಸರನ್ನೂ ಬರಿಸಿ, ಬಿದಿರೆಯ ಹಲವರು, ಸೆಟ್ಟಿಕಾರರ ಸಮಕ್ಷಮದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿ, ಕ್ಷೇತ್ರದ ಪಾವಿತ್ರ್ಯವನ್ನು ರಕ್ಷಿಸುವಳು. ವಿಜಯನಗರದ ಬುಕ್ಕರಾಯನ ಕಾಲದ (ಕ್ರಿ.ಶ ೧೩೬೮) ಒಂದು ಶಾಸನವು (ಶ್ರವಣ ಬೆಳಗೊಳ) ಜೈನರಿಗೂ, ವೈಷ್ಣವರಿಗೂ ಬಂದ ಮನಸ್ತಾಪವನ್ನು ಒಪ್ಪಂದ ಮೂಲಕ ಬಗೆಹರಿಸಿದ ವಿಷಯವನ್ನು ತಿಳಿಸುತ್ತದೆ. ಅದೇ ಆದರ್ಶವನ್ನು ಅಬ್ಬಕ್ಕ ದೇವಿ ಇಲ್ಲಿ ತೋರಿಸುತ್ತಾಳೆ. ಈ ರೀತಿಯಾಗಿ ಸಾಗುವ ನೆಲ್ಲಿತೀರ್ಥದ ವಿಶೇಷತೆಯೇ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದಕ್ಷಿಣ ಕನ್ನಡದಿಂದ ಕಟೀಲು ದೇವಸ್ಥಾನಕ್ಕೆ ಹೋಗುವಾಗ ಹಳೆಯಂಗಡಿ ಸಮೀಪದಲ್ಲಿ ನೆಲ್ಲಿತೀರ್ಥ ಸಿಗುತ್ತದೆ.

Thursday, 3 January 2013

ಖಾಸಗಿ ವಿವಿ ಸ್ಥಾಪನೆಗೆ ರಾಜ್ಯ ಸರಕಾರ ಹಸಿರು ನಿಶಾನೆ: ಕಂಗೆಟ್ಟ ವಿದ್ಯಾರ್ಥಿ ಸಮೂಹ
ವಿದ್ಯಾವಿಹೀನಂ ಪಶು ಸಮಾನ ಎನ್ನುವ ಉಕ್ತಿ ಕೇಳಿದಾಗ ಶಿಕ್ಷಣದ ಕುರಿತಾಗಿ ಮನದಾಳದಲ್ಲಿ ಹುದುಗಿರುವ ಭಾವನೆಗಳು ಮುಖದಲ್ಲಿ ಸಂಚಾರಗೊಂಡು ಆ ಶಬ್ದಕ್ಕೆ ಒಂದು ಅರ್ಥ ಕಲ್ಪಿಸಿ ಕೊಡುವುದರಲ್ಲಿ ಎರಡು ಮಾತಿಲ್ಲ ಎನ್ನುವುದು ನನ್ನ ಭಾವನೆ. ಅಂತೆಯೇ ನಿಮ್ಮೆಲ್ಲರದೂ. ಬುದ್ಧಿಮತ್ತೆಯನ್ನು ಪಡೆದು ಸ್ವಲ್ಪ ವಿಚಾರವನ್ನು ತಾರ್ಕಿಕ ಶಕ್ತಿಯಾಗಿ ಪರಿವರ್ತನೆ ಮಾಡಿ ಲೋಕದಲ್ಲಿ ಪ್ರಸ್ತುತ ಪಡಿಸಲು ಭೂಮಿಯಲ್ಲಿ ಜನಿಸಿದ ಮಾನವನಿಗೆ ವಿದ್ಯೆ ಎನ್ನುವುದು ಅವಶ್ಯಕ. ಹಿಂದಿನ ಕಾಲದಲ್ಲಿ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಶಿಕ್ಷಣವು ಇಂದು ಮಹಿಳೆಯರಿಗೂ ವಿಫುಲ ಅವಕಾಶ ದೊರೆತು, ಅವರನ್ನು ಕೂಡ ಸಮಾಜದ ಮುಖ್ಯವಾಹಿನಿಗೆ ತಂದು ವಿವಿಧ ಸ್ತರಗಳಲ್ಲಿ ಮುಕ್ತವಾಗಿ, ಎದೆಗಾರಿಕೆಯಿಂದ ನಿರ್ಭೀತರಾಗಿ ಕಾರ್ಯ ನಿರ್ವಹಿಸುವಂತೆ ಮಾಡಿದೆ. ಆದರೆ ಇಂದಿನ ಶಿಕ್ಷಣ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂದಾಗ ಯಾಕೋ ಅನುಮಾನ ಕಾಡುತ್ತದೆ.
ನಮ್ಮದು ಋಷಿ ಮುನಿಗಳ ಸಂಸ್ಕೃತಿ. ಪುರಾಣದ ಪುಟವನ್ನು ಒಂದೊಂದಾಗಿ ಸರಿಸಿದಾಗ ನಮಗೆ ವಿದ್ಯೆಯ ಮಹತ್ವ ತಿಳಿಯುತ್ತದೆ. ಪೋಷಕರನ್ನು ಬಿಟ್ಟು, ಗುರು ಮಠದಲ್ಲಿದ್ದು ಕೊಂಡು ಗುರುವಿನ ಸೇವೆ ಮಾಡುತ್ತಾ ವಿದ್ಯೆ ಕಲಿಯುವ ಕಾಲಘಟ್ಟದಲ್ಲಿ ವಿದ್ಯಾದಾನ ವೆನ್ನುವುದು ಶ್ರೇಷ್ಟ ದಾನವೆಂದು ತಿಳಿದುಕೊಂಡ ಮಹಾನ್ ನಾಡು ನಮ್ಮದಾಗಿತ್ತು. ಆದರೆ ಇಂದು ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧೆ. ಶಿಕ್ಷಣದ ಮಹತ್ವ ಕಳೆದುಕೊಂಡು ಅದು ಇಂದು ವ್ಯಾಪಾರಿಕರಣವಾಗಿದೆ. ರಾಜ್ಯಾದ್ಯಂತ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಎಲ್.ಕೆ.ಜಿ ಮತ್ತು ಯುಕೆಜಿ ಗಳ ಪ್ರವೇಶ ನೀತಿ, ಶುಲ್ಕ ನೀತಿಗಳನ್ನು ಸ್ಪಷ್ಟವಾಗಿ ರೂಪಿಸದೇ ಇರುವ ಕಾರಣದಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಶೋಷಣೆ ಗೊಳಗಾಗಿದ್ದಾರೆ. ಕೇವಲ ಕೆ.ಜಿ.ಕ್ಲಾಸ್‌ಗಳಲ್ಲಿ ಪ್ರವೇಶ ಪಡೆಯಲಿಂದು ಲಕ್ಷಗಟ್ಟಲೇ ಶುಲ್ಕ ನೀಡಬೇಕೆಂದರೆ ನಮ್ಮ ದೇಶದಲ್ಲಿ ನಿಶುಲ್ಕವಾಗಿ ಶಿಕ್ಷಣ ನೀಡುತ್ತಿದ್ದ ಮಹಾನ್‌ಶಿಕ್ಷಣದ ಮೌಲ್ಯ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದು ಅರ್ಥವಾಗುತ್ತದೆ. ಎಲ್‌ಕೆ.ಜಿ, ಯುಕೆಜಿ ವ್ಯಾಪಾರೀಕರಣದ ಸಮಸ್ಯೆ ತಡೆಗಟ್ಟಲಾಗದ ಸರ್ಕಾರದ ಕೈಯಲ್ಲಿ ಉನ್ನತ ಶಿಕ್ಷಣದ ದೈತ್ಯಾಕಾರದ ಖಾಸಗಿ ವಿವಿಗಳ ವ್ಯಾಪಾರೀಕರಣ ತಡೆಗಟ್ಟಲು ಸಾಧ್ಯವೇ? ಈಗಾಗಲೇ ಬಿಜೆಪಿ ಆಡಳಿತದ ರಾಜ್ಯ ಸರಕಾರವು ೧೨ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ಧೋರಣೆ ತಳೆದಿರುವುದು ತಿಳಿದುಬಂದಿದೆ.
ಸರಕಾರ ಖಾಸಗಿ ವಿವಿ ಸ್ಥಾಪನೆಗೆ ಸ್ವಷ್ಟ ಮಾರ್ಗಸೂಚಿ ರೂಪಿಸದೆ ಅವುಗಳ ಸ್ಥಾಪನೆಗೆ ಅನುಮತಿ ನೀಡಿದ್ದಾದರೆ ಶಿಕ್ಷಣ ಕ್ಷೇತ್ರದ ವ್ಯಾಪಾರೀಕರಣ ತಡೆಗಟ್ಟಲು ಸಾಧ್ಯವಾಗುತ್ತದೆಯೇ? ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ಪ್ರಸಿದ್ಧಿ ಪಡೆದಿದ್ದು ಬೇರೆ ರಾಜ್ಯದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಹಾತೊರೆಯುತ್ತಿದ್ದಾರೆ. ರಾಜ್ಯದಲ್ಲಿ ಖಾಸಗಿ ವಿವಿಗಳು ಬೇರೆ ರಾಜ್ಯಗಳಲ್ಲಿರುವ ಬಂಡವಾಳ ಶಾಹಿಗಳ ತೆಕ್ಕೆಯಲ್ಲಿರುವುದರಿಂದ ಆ ಕಾಲೇಜುಗಳಲ್ಲಿ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಸಿಗುವುದರೊಂದಿಗೆ ನಮ್ಮ ರಾಜ್ಯದಲ್ಲಿರುವ ದುರ್ಬಲ, ಮಧ್ಯಮ ವರ್ಗ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗುವ ಸಂಭವವೇ ಜಾಸ್ತಿ. ಇದನ್ನು ಗಮನಿಸಿದ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಕಾರ್ಯಕರ್ತರು ರಾಜ್ಯದೆಲ್ಲೆಡೆ ಕಾಲೇಜು ಬಹಿಷ್ಕರಿಸಿ ಪ್ರತಿಭಟನೆ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎನ್ನುವುದು ಇಲ್ಲಿ ಉಲ್ಲೇಖನೀಯ. ಇಲ್ಲಿ ಗಮನಿಸಬೇಕಾದ ಅಂಶ ಖಾಸಗಿ ವಿವಿ ಸ್ಥಾಪನೆಯ ಅನುಮತಿಯನ್ನು ಖಂಡಿಸಿ ಬೀದಿಗಿಳಿದ ವಿದ್ಯಾರ್ಥಿಗಳು ಅನ್ಯರಾಜ್ಯದಿಂದ ಬಂದವರಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿದ ಕನ್ನಡದ ಇತರ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಉದ್ದೇಶದಿಂದ ಹೋರಾಟ ಮಾಡಿದ್ದರ ಹಿಂದೆ ವಿದ್ಯಾರ್ಥಿಗಳಲ್ಲಿರುವ ಮುಂದಾಲೋಚನೆ ಎಲ್ಲಾ ಅಕಾರಿಗಳು ಅರ್ಥಮಾಡಿಕೊಳ್ಳಬೇಕು. ಹಿಂದೆ ರಾಜ್ಯ ಸರಕಾರ ಡಿಪ್ಲೋಮಾ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಹೋರಾಟ ಮಾಡಿದ ಪರಿಣಾಮವಿಂದು ಹೆಚ್ಚಿಸಿದ ಶುಲ್ಕವನ್ನು ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಬೇಕು ಎನ್ನುವ ಆದೇಶದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉಸಿರಾಡುವಂತಾಗಿದೆ ಎನ್ನುವುದು ಮರೆಯುವಂತಿಲ್ಲ.
ರಾಜ್ಯ ಸರಕಾರ ಬೆಳಗಾವಿಯಲ್ಲಿ ಕರೆದಿರುವ ವಿಧಾನ ಮಂಡಲದ ಅವೇಶನದಲ್ಲಿ ಹಲವು ಖಾಸಗಿ ವಿವಿಗಳ ಸ್ಥಾಪನೆಯ ವಿಧೇಯಕ ಮಂಡನೆಯಾಗುವ ಪ್ರಸ್ತಾಪ ಮಾಡುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಸರಕಾರ ಯಾವುದೇ ಪೂರ್ವ ತಯಾರಿ, ಸ್ಪಷ್ಟ-ಮಾರ್ಗಸೂಚಿಯಿಲ್ಲದೆ  ಖಾಸಗಿ ವಿವಿ ಪ್ರಾರಂಭಕ್ಕೆ ಅನುಮತಿ ನೀಡಲು ಹೊರಟಿರುವ ಸರಕಾರದ ಕ್ರಮ ಅನುಮಾನಕ್ಕೆ ಎಡೆಮಾಡಿದೆ. ಈಗಾಗಲೇ ಯುಜಿಸಿಯ ಕಪ್ಪುಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಹಲವು ಡೀಮ್ಡ್ ವಿವಿಗಳು ಬೇರೆ ಬೇರೆ ಹೆಸರಿನಲ್ಲಿ ಖಾಸಗಿ ವಿವಿಗಳ ಸ್ಥಾಪನೆಗೆ ಮುಂದಾಗುತ್ತಿವೆ ಎನ್ನುವ ಸಂಶಯವಿದೆ. ಖಾಸಗಿ ವಿಶ್ವವಿದ್ಯಾಲಯಗಳು ರಾಜ್ಯದಲ್ಲಿ ತಮ್ಮ ವ್ಯಾಪಾರ ಕೇಂದ್ರ ತೆರೆಯಲು ರಾಜ್ಯ ಅಥವಾ ಕೇಂದ್ರ ಸರಕಾರದ ಪೂರ್ವಾನುಮತಿಯಿಲ್ಲದೇ, ಯುಜಿಸಿಯ ಮಾನ್ಯತೆಯಿಲ್ಲದೇ ಅಸ್ತಿತ್ವಕ್ಕೆ ಬರಲು ಪ್ರಯತ್ನಿಸುತ್ತಿದೆ.
ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬಡ-ಪ್ರತಿಭಾವಂತ ವಿದ್ಯಾರ್ಥಿಗಳ ಹಿತ ಕಾಪಾಡಲು ಖಾಸಗಿ ವಿವಿಗಳ ಕೆಲವೊಂದು ಅಂಶಗಳು ಸಾರ್ವಜನಿಕ ರಂಗದಲ್ಲಿ ವ್ಯಾಪಕ ಚರ್ಚೆಯಾಗಬೇಕಿದೆ ಎನ್ನುವುದು ನನ್ನ ಭಾವನೆ. ಮಾತ್ರವಲ್ಲ ವಿದ್ಯಾರ್ಥಿಗಳ ಹಿತ ಬಯಸುವ ಪ್ರತಿಯೊಬ್ಬ ನಾಗರಿಕನ ಭಾವನೆ ಇದುವೇ ಆಗಿದೆ. ಸರಕಾರಿ, ಅನುದಾನಿತ-ಅನುದಾನ ರಹಿತ ಕಾಲೇಜುಗಳಲ್ಲಿರುವಂತೆ ಎಸ್‌ಸಿ/ಎಸ್‌ಟಿ/ಒಬಿಸಿ ವಿದ್ಯಾರ್ಥಿಗಳಿಗೆ ಸಿಗುವ ಮೀಸಲಾತಿ ನೀತಿ ಖಾಸಗಿ ವಿವಿಯಲ್ಲಿ ಇರುತ್ತದೆಯೇ? ಈ ವಿವಿಗಳಲ್ಲಿ ಶುಲ್ಕ ನೀತಿ ಹಾಗೂ ಇತರೆ ಶುಲ್ಕಗಳ ಕುರಿತು ಪಾರದರ್ಶಕತೆ ಲಭ್ಯವೇ? ಖಾಸಗಿ ವಿವಿಗಳಲ್ಲಿ ಎಷ್ಟು ಪಟ್ಟು ಶುಲ್ಕ ಹೆಚ್ಚಳ ಇರಬೇಕು ಎನ್ನುವ ಮಾಹಿತಿ? ಮತ್ತು ಈಗಿರುವ ಖಾಸಗಿ ಕಾಲೇಜುಗಳಲ್ಲಿರುವಂತೆ ಸರಕಾರಿ ಕೋಟಾ ಮತ್ತು ಆಡಳಿತ ಮಂಡಳಿ ಸೀಟುಗಳು ಖಾಸಗಿ ವಿವಿಗಳಲ್ಲಿರುವವೇ? (ಖಾಸಗಿ ಇಂಜಿನೀಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ಸರಕಾರಿ ಸೀಟು ಮತ್ತು ಶುಲ್ಕ ನೀತಿ ಇದ್ದಂತೆ). ಆದರೆ ಖಾಸಗಿ ವಿವಿಗಳಲ್ಲಿರುವ ಎಲ್ಲಾ ಸೀಟುಗಳು ಆಡಳಿತ ಮಂಡಳಿ ಸೀಟುಗಳೇ ಆಗಿರುತ್ತವೆ. ಉದಾಹರಣೆ ರಾಜ್ಯದಲ್ಲಿರುವ ಅಲೈಯನ್ಸ್ ಬಿಸಿನೆಸ್ ವಿವಿಯ ಶಿಕ್ಷಣ ವ್ಯಾಪಾರೀಕರಣದ ಚಿತ್ರಣ ನೋಡಿದರೆ ತಿಳಿಯುತ್ತದೆ. ಈ ವಿವಿಯಲ್ಲಿ ೨೦೦೭ರಲ್ಲಿ ಎಂಬಿಎಗೆ ರೂ.೭ಲಕ್ಷವಿತ್ತು. ೨೦೦೯ರಲ್ಲಿ ರೂ.೯.೭೫ ಲಕ್ಷ, ೨೦೧೦ರಲ್ಲಿ ರೂ.೧೧ಲಕ್ಷ, ೨೦೧೧-೧೨ರಲ್ಲಿ ಇದುವೇ ಎಂಬಿಎಗೆ ರೂ.೧೨.೫ ಲಕ್ಷ ಹೆಚ್ಚಳವಾಗಿದೆ. ಅಲ್ಲದೇ ಈ ವಿವಿಯಲ್ಲಿ ಶೇ.೧೫ ಸೀಟುಗಳು ಮಾತ್ರ ಕರ್ನಾಟಕದವರಿಗೆ ಮೀಸಲು ಎಂದಾಗ ಖಾಸಗಿ ವಿವಿಗಳಲ್ಲಿ ಕರ್ನಾಟಕದವರ ಪಾಲು ಎಷ್ಟರವರೆಗೆ ಎನ್ನುವುದು ತಿಳಿಯುತ್ತದೆ. ಅಲೈಯನ್ಸ್ ಬಿಸಿನೆಸ್ ವಿವಿಯಂತೆ ಒಂದು ಕಾಲೇಜ್ ರೀತಿ ಶಿಕ್ಷಣದ ವ್ಯಾಪಾರಿಕರಣ ಮಾಡುವಾಗ ರಾಜ್ಯ ಸರಕಾರ ಕೊಟ್ಟಿರುವ ೧೨ ವಿವಿಗಳು ಶಿಕ್ಷಣದ ವ್ಯಾಪಾರ ಮಾಡುವುದಿಲ್ಲವೆನ್ನುವುದಕ್ಕೆ ಏನು ಗ್ಯಾರಂಟಿ?
ಶಿಕ್ಷಣ ವ್ಯಾಪಾರೀಕರಣದ ಕಾಲಘಟ್ಟದಲ್ಲಿ ಖಾಸಗಿ ವಿವಿಗಳಲ್ಲಿ ಬಡವರು, ಮದ್ಯಮ ವರ್ಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಸಾಧ್ಯವೇ? ಎನ್ನುವ ಸಂದೇಹ ವಿಪರೀತವಾಗುತ್ತಿದೆ. ಸರಕಾರ ಏಕಾಏಕಿ ನಿರ್ಧಾರದಿಂದ ಖಾಸಗಿ ವಿವಿಗಳ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿದ್ದು, ಈ ವಿವಿಗಳಲ್ಲಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಮೀಸಲಾತಿ, ಶುಲ್ಕ ರಿಯಾಯಿತಿ, ಶುಲ್ಕ ಪಡೆಯುವಲ್ಲಿ ಪಾರದರ್ಶಕತೆ ಇನ್ನಿತರ ಶುಲ್ಕಗಳ ಯಾವುದೇ ಮಾಹಿತಿಯ ರೂಪುರೇಷೆಯಿಲ್ಲದಿರುವುದರಿಂದ ಈ ವಿವಿಗಳಲ್ಲಿ ಶ್ರೀಮಂತ ವಿದ್ಯಾರ್ಥಿಗಳು ಪ್ರತಿಷ್ಠೆಗಾಗಿ ಶಿಕ್ಷಣ ಪಡೆಯ ಬಹುದಾಗಿದೆ. ಸರಕಾರ ಅವುಗಳಿಗೆ ಅನುಮತಿ ನೀಡುವುದಕ್ಕಿಂತ ಮುಂಚಿತ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳ ದಾಖಲಾತಿ ಮತ್ತು ಸಿಬ್ಬಂಗಳ ನೇಮಕಾತಿಯಲ್ಲಿ ಮೀಸಲಾತಿ, ರೋಸ್ಟರ್ ಪದ್ಧತಿಯನ್ನು ಅನುಸರಿಸುತ್ತವೆಯೇ ಎನ್ನುವುದನ್ನು ಯಾಕೆ ಮನಗಂಡಿಲ್ಲ ಎನ್ನುವುದು ಯಕ್ಷಪ್ರಶ್ನೆ ಅಲ್ಲವೇ?
ಖಾಸಗಿ ವಿವಿಯಲ್ಲಿ ಶೇ.೫೦ ರಷ್ಟು ವಿದ್ಯಾರ್ಥಿಗಳು ಕರ್ನಾಟಕದವರಿದ್ದು, ಇವರ ಶುಲ್ಕವನ್ನು ಸರ್ಕಾರ ನಿಗದಿಪಡಿಸಬೇಕು. ವಿವಿಯ ಪ್ರವೇಶದ ಸಂದರ್ಭದಲ್ಲಿ ಸೀಟು ಹಂಚಿಕೆ ಮತ್ತು ಶುಲ್ಕ ನೀತಿಯನ್ನು ರೂಪಿಸಲು ವಿಶ್ರಾಂತ ಕುಲಪತಿಗಳ ನೇತೃತ್ವದಲ್ಲಿ ಶುಲ್ಕ ಸಂರಚನೆ ಮತ್ತು ಸೀಟು ಹಂಚಿಕೆ ಸಮಿತಿಯನ್ನು ಸರಕಾರವೇ ನೇಮಿಸಬೇಕು. ಅಲ್ಲದೇ ಖಾಸಗಿ ವಿವಿಗಳಿಗೆ ಅನುಮತಿ ನೀಡಿದರೆ ವಿದ್ಯಾರ್ಥಿಗಳ ದಾಖಲಾತಿ ಮತ್ತು ಸಿಬ್ಬಂದಿಗಳ ನೇಮಕಾತಿ ಸಂದರ್ಭ ಮೀಸಲಾತಿ ಮತ್ತು ರೋಸ್ಟರ್ ಪದ್ದತಿ ಅನುಸರಿಸಬೇಕು. ಖಾಸಗಿ ವಿವಿಗಳಲ್ಲಿ ಯುಜಿಸಿಯ ನಿಯಮಾವಳಿಗೆ ಅನುಗುಣವಾಗಿ ಬೇಕಾದ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಹೊಂದಿರಬೇಕು. ಉದ್ದೇಶಿತ ಖಾಸಗಿ ವಿವಿಗಳು ಯಾವುದೇ ಕಾಲೇಜುಗಳ ಸಂಯೋಜನೆ ಹೊಂದುವಂತಿಲ್ಲ. ಖಾಸಗಿ ವಿವಿಗಳ ಕಾರ್ಯವ್ಯಾಪ್ತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಅದಕ್ಕೆ ನಿರ್ಬಂದವನ್ನಿರಿಸಬೇಕು. ಉದ್ದೇಶಿತ ಖಾಸಗಿ ವಿವಿ ವ್ಯಾಪ್ತಿಯಲ್ಲಿ ಬರುವ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ೧೫೬ ಮೆಡಿಕಲ್, ೨೦೦ ಡೆಂಟಲ್, ೧೬೮೮ ಇಂಜಿನಿಯರಿಂಗ್ ಸೀಟುಗಳು ಸಿಇಟಿ ಸರಕಾರಿ ಕೋಟಾದಡಿ ವಿದ್ಯಾರ್ಥಿಗಳಿಗೆ ದೊರೆಯುತ್ತಿದ್ದು, ಈ ಸೀಟುಗಳ ಪರಿಸ್ಥಿತಿ ಏನು ಎನ್ನುವುದರ ಕುರಿತು ಮಾಹಿತಿ ಒದಗಿಸಬೇಕು. ಈ ವಿವಿಗಳು ದೂರಶಿಕ್ಷಣ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಬಾರದು. ಈಗಾಗಲೇ ಕಪ್ಪುಪಟ್ಟಿಯಲ್ಲಿರುವ ಜೈನ್ ವಿವಿ, ದೇವರಾಜ್ ಅರಸು ವಿವಿಗಳಿಗೆ  ಖಾಸಗಿ ವಿವಿಯ ಸ್ಥಾನಮಾನ ನೀಡಬೇಕೆ? ಅಲ್ಲದೇ ಅಲಯನ್ಸ್ ವಿವಿಯು ರೂ.೫೦ಕೋ.ಯುಜಿಸಿಯ ಅನುದಾನ ಪಡೆದಿದ್ದು ಯಾವ ಆಧಾರದ ಮೇಲೆ ಇಷ್ಟು ದೊಡ್ಡ ಮೊತ್ತದ ಹಣ ಪಡೆಯಲು ಸಾಧ್ಯವಾಯಿತು? ಅಲ್ಲದೇ ಖಾಸಗಿ ವಿವಿಗಳು ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಚಟುವಟಿಕೆಗಳನ್ನು ನಡೆಸಲು ಉತ್ಸುಕರಾಗಿರುವುದು ಏಕೆ?
ಖಾಸಗಿ ವಿವಿಗಳು ರಾಜ್ಯದಲ್ಲಿ ಕ್ಯಾಂಪಸ್ ಇಲ್ಲದಿದ್ದರೂ ಶಿಕ್ಷಣ ಕ್ಷೇತ್ರಕ್ಕೆ ಆಸಕ್ತಿ ತೋರುತ್ತಿದ್ದು, ಅವರು ಇಲ್ಲಿ ತೆಗೆದುಕೊಳ್ಳುವ ಭೂಮಿಯ ಬೆಲೆಯು ನೇರವಾಗಿ ವಿದ್ಯಾರ್ಥಿಗಳಿಂದ ವಸೂಲಿ ಮಾಡಬಹುದು ಎನ್ನುವ ನಂಬಿಕೆಯಿಂದಲ್ಲವೇ? ಅಲ್ಲದೇ ಈ ವಿವಿಗಳು ಕಾಷನ್ ಡೆಪಾಸಿಟ್ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುತ್ತಿರುವುದರ ಮೇಲೆ ನಿಯಂತ್ರಣವಿಲ್ಲದಿರುವ ಯಾವುದೇ ಅಂಶ ಗಮನಿಸದ ಸರಕಾರ ಈಗಿರುವ ಶಿಕ್ಷಣ ಪದ್ದತಿಯನ್ನು ಸರಿಯಾಗಿ ನಿಯಂತ್ರಿಸದೆ ಖಾಸಗಿ ವಿವಿಗಳ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿರುವುದರ ಹಿಂದಿರುವ ತಂತ್ರ ಶಿಕ್ಷಣದ ವ್ಯಾಪಾರೀಕರಣವೇ?
ಎಲ್ಲಾ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಕೇಳುವ ಪ್ರಶ್ನೆಗೆ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕಚ್ಚಾಡುವ ನಾಯಕರುಗಳು ಉತ್ತರಿಸಿಯಾರೇ? ಮುಂದಿನ ಪೀಳಿಗೆಗೆ ಉನ್ನತ ಶಿಕ್ಷಣ ಮರೀಚಿಕೆಯಾಗಬಾರದು ಎನ್ನುವ ಉದ್ದೇಶವಿದ್ದರೆ ಖಾಸಗಿ ವಿವಿಗಳಿಗೆ ಅನುಮತಿ ನೀಡದೆ ಈಗಿರುವ ಶಿಕ್ಷಣದ ವ್ಯವಸ್ಥೆಯನ್ನು ಸರಿಪಡಿಸಿ, ಗುಣಮಟ್ಟದ ಶಿಕ್ಷಣವನ್ನು ಮದ್ಯಮ, ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೊರಕುವಂತಾಗಬೇಕು? ವಿದ್ಯಾರ್ಥಿಗಳ ಹೋರಾಟಕ್ಕೆ ನಮ್ಮ ಕಿಂಚಿತ್ ಪ್ರಯತ್ನ ಬೇಡವೇ ಎನ್ನುವ ಪ್ರಶ್ನೆಯನ್ನು ತಮಗೆ ಹಾಕಿಕೊಂಡಾಗ ಸರಕಾರದ ಈ ಯೋಜನೆ ಜಾರಿಯಾದರೆ ಅದನ್ನು ನಿಯಂತ್ರಿಸಬಹುದಲ್ಲವೇ.....?



ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳ ಬಲವರ್ಧನೆ ಸಾಧ್ಯವೇ?
ಕರ್ನಾಟಕದಲ್ಲಿ ಬರುವ ವಿಧಾನಸಭೆ ಚುನಾವಣೆ ಹೊತ್ತಿಗೆ ಒಂದಕ್ಕಿಂತ ಹೆಚ್ಚು ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬರುವುದು ಖಚಿತವಾಗುತ್ತಿದ್ದಂತೆಯೇ ರಾಜ್ಯದಲ್ಲಿ ಈ ಹಿಂದೆ ಪ್ರಾದೇಶಿಕ ಪಕ್ಷ ಗೆಲುವು ಕಂಡಿಲ್ಲ, ಈಗಲೂ ಕಾಣುವುದಿಲ್ಲ ಹೀಗೆ ಧ್ವನಿಗಳು ಕರಾವಳಿಯಲ್ಲಿ ಕೇಳಿಬರುತ್ತಿದೆ. ಅದುವೇ ಚುನಾವಣೆ ಸಮೀಪಿಸುತ್ತಿದ್ದಂತೆ ಅದು ತಾರಕಕ್ಕೆರಲಿದೆ. ಯಾವುದೇ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡರೂ ಅವುಗಳ ಭವಿಷ್ಯವಿರುವುದು ಜನತಾ ನ್ಯಾಯಲಯದಲ್ಲಿಯೇ? ಅಲ್ಲಿಯ ತೀರ್ಪೇ ಅಂತಿಮವಾದುದು. ಆದರೂ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ನೆಲೆ ಸಿಗುವ ಸಾಧ್ಯತೆ ಜಾಸ್ತಿ.
ಭಾರತ ಒಕ್ಕೂಟದ ಮೇಲೊಂದು ಹಿನ್ನೋಟ
ಭಾರತ ಒಕ್ಕೂಟ ಅಸ್ತಿತ್ವಕ್ಕೆ ಬಂದ ದಿನಗಳನ್ನು ಒಮ್ಮೆ ನೆನಪಿಸಿಕೊಂಡಾಗ ವಿವಿಧ ನುಡಿಯಾಡುವ, ವಿವಿಧ ಆಚರಣೆ, ಆಹಾರ, ಜೀವನವಿಧಾನವನ್ನೇ ಹೊಂದಿರುವ ಭಾರತ ಒಕ್ಕೂಟದ ಜನರನ್ನು ಭಾವನಾತ್ಮಕವಾಗಿ ಬೆಸೆದಿದ್ದರೂ ಇದೆಲ್ಲದಕ್ಕಿಂತ ಆರ್ಥಿಕವಾಗಿ, ತಾಂತ್ರಿಕವಾಗಿ ಮುಂದುವರೆದಿದ್ದ ಬ್ರಿಟಿಷ್ ಎನ್ನುವುದು ನಮ್ಮ ಪಾಲಿಗೆ ಸಾಮಾನ್ಯ ಶತ್ರು. ಈ ಶತ್ರುವಿನ ವಿರುದ್ದ ಭಾರತ ಒಕ್ಕೂಟದ ಜನರನ್ನು ಸಂಘಟಿತರನ್ನಾಗಿಸಿ ಹೋರಾಟಕ್ಕೆ ಮೆನಚು ತಂದ ಘಟಾನುಗಟಿ ನಾಯಕರಿದ್ದದ್ದು ಕಾಂಗ್ರೆಸ್ ಪಕ್ಷದಲ್ಲಿ ಎನ್ನುವ ಮಾತನ್ನು ಅಲ್ಲಗಳೆಯುವಂತಿಲ್ಲ. ಬ್ರಿಟಿಷರು ಭಾರತ ಬಿಟ್ಟು ಹೋದಾಗ ಜನರ ಮನದಲ್ಲಿದ್ದ ಕಾಂಗ್ರೆಸ್ಸಿನವರು ಸ್ವಾತಂತ್ರಕ್ಕೆ ಕಾರಣರಾದರು ಎನ್ನುವ ಭಾವನೆಯನ್ನೇ ಬಂಡವಾಳವಾಗಿಸಿಕೊಂಡು ದೇಶದಾದ್ಯಂತ ಕಾಂಗ್ರೆಸ್ ಪಕ್ಷ ರಾಜಕೀಯ ನೆಲೆ ಕಂಡುಕೊಂಡಿತು. ಈ ಭಾವನಾತ್ಮಕ ಬಂಡವಾಳ ಗಟ್ಟಿಯಾಗಿದ್ದರಿಂದ ಸ್ವಾತಂತ್ರ್ಯ ನಂತರದ ಮೆದಲೆರಡು ದಶಕ ದೇಶಕ್ಕೆ ಒಂದೇ ಪಕ್ಷ ಅನ್ನುವಂತೆ ಕಾಂಗ್ರೆಸಿನ ಪಾರುಪತ್ಯ ನಡೆದಿತ್ತು ಎನ್ನುವುದು ಈ ಸಂದರ್ಭದಲ್ಲಿ ಪ್ರಸ್ತುತವೇ ಸರಿ.
ಒಂದು ಪಕ್ಷ, ಒಬ್ಬ ವ್ಯಕ್ತಿ ಒಕ್ಕೂಟವನ್ನಾಳುವುದು ಅಸಹಜ. ಹೀಗೆ ಬ್ರಿಟಿಷರನ್ನು ಹೊಡೆದೊಡಿಸಲು ರೂಪುಗೊಂಡಿದ್ದ ಹೋರಾಟದಿಂದಾಗಿ ನೆಲೆ ಕಂಡಿದ್ದ ಭಾವನಾತ್ಮಕ ಒಗ್ಗಟ್ಟು ಅನ್ನುವ ತೆಳು ಅಂಟಿನ ಮಹಿಮೆ ಕೆಲ ಸಮಯದಲ್ಲಿ ಖಾಲಿಯಾಗುತ್ತಲೇ ನಮ್ಮ ನಮ್ಮಲ್ಲಿನ ಆಸೆ, ಆಶೋತ್ತರಗಳು, ಏಳಿಗೆಯ ಕಲ್ಪನೆಗಳಲ್ಲಿನ ವೈವಿಧ್ಯತೆಗಳು ಹಂತ ಹಂತವಾಗಿ ಹೊರ ಹೊಮ್ಮತೊಡಗಿದವು. ಇಷ್ಟು ವ್ಯಾಪಕವೂ, ವೈವಿಧ್ಯಮಯವೂ ಆದ ಒಕ್ಕೂಟವೊಂದನ್ನು ಒಂದು ಪಕ್ಷ, ಒಬ್ಬ ವ್ಯಕ್ತಿ ದೆಹಲಿಯಿಂದ ಆಳುವುದು ಅತ್ಯಂತ ಅಸಹಜವೂ, ಆಳಲು ಅಸಾಧ್ಯವಾದದ್ದು ಅನ್ನುವುದು ಜನರಿಗೆ ಅರ್ಥವಾಗತೊಡಗಿತು. ನೂರು ಕೋಟಿಗೂ ಮಿಗಿಲಾದ ಜನರ ಆಶೋತ್ತರಗಳನ್ನು ಒಂದು ಪಕ್ಷ, ಒಬ್ಬ ವ್ಯಕ್ತಿಯಿಂದ ಎಂದಿಗೂ ಈಡೇರಿಸಲಾಗದು ಅನ್ನುವ ಪ್ರಾಕ್ಟಿಕಲ್ ಆದ ತಿಳಿವೇ ಮುಂದಿನ ದಿನಗಳಲ್ಲಿ ಕಾಂಗ್ರೆಸಿನ ಪಾರಮ್ಯವನ್ನು ಮುರಿದು ದೇಶದ ಹಲವೆಡೆ ಪ್ರಾದೇಶಿಕ ಶಕ್ತಿಗಳು ಉದಯಿಸುವಂತೆ ಮಾಡಿದೆ ಅನ್ನುವುದನ್ನು ಗಮನಿಸಬೇಕಿದೆ.
೧೯೯೦ರ ಈಚೆಗೆ ಆರ್ಥಿಕ, ಸಾಮಾಜಿಕ ನೆಲೆಗಟ್ಟಿನದ ತುರ್ತಿನ ಬದಲಾವಣೆಗಳು ಈ ಪ್ರಕ್ರಿಯೆಗೆ ಇನ್ನಷ್ಟು ವೇಗ ಒದಗಿಸಿತು. ರಾಜ್ಯದಲ್ಲಾದ ಮೂರು ಹಂತದ ಬದಲಾವಣೆಗಳಾದವು. ಈ ಬದಲಾವಣೆ ಆಗುವ ಹೊತ್ತಲ್ಲಿ ಕರ್ನಾಟಕದನಾಯಿತು ಎಂದು ನಾವು ನೋಡಲು ಹೋದರೆ ಒಂದಿಷ್ಟು ವಿಷಯ ಗೋಚರಿಸುತ್ತವೆ. ಕಾಂಗ್ರೆಸ್ಸಿನ ಪ್ರಾಬಲ್ಯ ಮುಗಿದು ಸಮಾಜವಾದಿ ಹಿನ್ನೆಲೆಯ ಜನತಾ ಪರಿವಾರ ತನ್ನ ಬಲದ ಅಧಿಕಾರ ಹಿಡಿಯುವ ಮಟ್ಟಿಗಿನ ಬದಲಾವಣೆ ಕರ್ನಾಟಕದದ ಮೆದಲ ಹಂತದ ಬದಲಾವಣೆ ಅನ್ನಬಹುದು. ಮುಂದೆ ಜನತಾ ಪರಿವಾರ ಒಡೆದು ಹೋದಾಗ ಅಲ್ಲಿನ ನಾಯಕರನ್ನು, ಅದರ ಶಕ್ತಿಯನ್ನು ಬಳಸಿಕೊಂಡ ಬಿಜೆಪಿ ಯಡಿಯೂರಪ್ಪನವರಂತಹ ರಾಜ್ಯವ್ಯಾಪಿ ಪ್ರಭಾವ, ಸಮುದಾಯದ ಬೆಂಬಲ ಇರುವ ಹಾಗೂ ಪ್ರಾದೇಶಿಕವಾಗಿ ಬಲಗೊಂಡಿರುವ ನಾಯಕನ ನೇತೃತ್ವದಲ್ಲಿ  ಕರ್ನಾಟಕದಲ್ಲಿ ಒಂದು ಮಟ್ಟಿಗೆ ನೆಲೆ ಕಂಡುಕೊಂಡಿತು. ಇದನ್ನು ಎರಡನೆಯ ಹಂತವೆಂದು ಕರೆಯಬಹುದು. ಆದರೆ ಈ ಎರಡೂ ಹಂತದ ಬದಲಾವಣೆಗಳು ಕರ್ನಾಟಕದ ಮಟ್ಟಿಗೆ ಇಲ್ಲಿನ  ನದಿ, ನೆಲ, ನುಡಿ, ಬದುಕು ಬವಣೆಗಳ ಸವಾಲಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನಿರೀಕ್ಷೆ ಇಟ್ಟುಕೊಂಡ ಮಟ್ಟಕ್ಕೆ ಯಶಸ್ವಿಯಾಗದೇ ಇರುವುದರಿಂದಲೇ ಇಂದು ಪ್ರಾದೇಶಿಕ ಪಕ್ಷಗಳು ಬೇಕು ಅನ್ನುವ ಮೂರನೇ ಹಂತದ ಬದಲಾವಣೆಯತ್ತ ಕರ್ನಾಟಕ ಹೆಜ್ಜೆಯಿಟ್ಟಿದೆ. ಯಡಿಯೂರಪ್ಪ, ಶ್ರೀರಾಮುಲು ಯಾರೇ ಆಗಿರಲಿ ಇನ್ನೊಂದು ಅಸ್ತಿತ್ವದಲ್ಲಿರುವ ಪಕ್ಷಕ್ಕೆ ಸೇರುವ ಬದಲು ಪ್ರಾದೇಶಿಕ ಪಕ್ಷ ಕಟ್ಟುತ್ತೇನೆ ಅನ್ನುವ ಛಲವನ್ನು ಮೆಚ್ಚಬೇಕು. ಜತ್ಯಾತೀತ ಜನತಾದಳದ ಇತ್ತೀಚಿನ ನಿಲುವಿನಲ್ಲಿರುವ ಆತ್ಮವಿಶ್ವಾಸಕ್ಕೆ ಕರ್ನಾಟಕದಲ್ಲಿ ಬಲಗೊಳ್ಳುತ್ತಿರುವ ಪ್ರಾದೇಶಿಕ ಪಕ್ಷ ಬೇಕು ಅನ್ನುವ ಚಿಂತನೆಯ ಹಿನ್ನೆಲೆಯಲ್ಲಿ ನೋಡಿದಾಗಲೇ ಮೂರನೆಯ ಹಂತದ ಬದಲಾವಣೆ ಹೇಗೆ ರೂಪುಗೊಳ್ಳುತ್ತಿದೆ ಅನ್ನುವುದನ್ನು ಸ್ಪಷ್ಟವಾಗಿ ತಿಳಿಯಬಹುದಾಗಿದೆ.
ಪ್ರಾದೇಶಿಕ ಪಕ್ಷಗಳ ಒಡೆಯರು ಮಾತ್ರ ಭ್ರಷ್ಟರೇ?
ಎನ್ನುವ ಪ್ರಶ್ನೆ ಉದ್ಬವವಾಗುತ್ತದೆ. ಭಾರತ ಒಕ್ಕೂಟದಲ್ಲಿ ನಮ್ಮ ನೆಲ, ಜಲ, ನುಡಿ, ಬದುಕಿನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಬೇಕಿರುವ ಸಂಧಾನದ ಶಕ್ತಿ ಪಡೆಯಲು ಪ್ರಾದೇಶಿಕ ಪಕ್ಷಗಳೆನೋ ಬೇಕು, ಆದರೆ ಪ್ರಾದೇಶಿಕ ಪಕ್ಷಗಳು ಹೆಚ್ಚು ಭ್ರಷ್ಟವಲ್ಲವೇ ಅನ್ನುವ ವಾದವೂ ಕೇಳಿ ಬರುತ್ತಿವೆ. ಇಲ್ಲಿಯೂ ಕೂಡ ಜಿಜ್ಞಾಸೆ. ಅದು ಸರಿ ಎನ್ನುವವರು ಒಂದೆಡೆಯಾದರೆ ಇಲ್ಲಾ ಎನ್ನುವವರ ಗುಂಪು ಇನ್ನೊಂದೆಡೆ. ಭ್ರಷ್ಟಾಚಾರ ಇಂದು ಪ್ರಾದೇಶಿಕ, ರಾಷ್ಟ್ರೀಯ ಪಕ್ಷ ಅನ್ನದೇ ಎಡೆ ವ್ಯಾಪಿಸಿದೆ. ಭ್ರಷ್ಟಾಚಾರ ಎನ್ನುವುದು ಯಾವುದೋ ಒಂದು ಪಕ್ಷ ಇಲ್ಲವೇ ವ್ಯಕ್ತಿಯಿಂದ ಬಗೆ ಹರಿಯುವ ಸಮಸ್ಯೆಯಲ್ಲ. ಅದಕ್ಕೆ ಬೇಕಿರುವುದು ಚುನಾವಣೆ ಸುಧಾರಣೆ, ಬೇಕಿಲ್ಲದ ಕ್ಷೇತ್ರಗಳಿಂದ ಸರ್ಕಾರದ ಪಾತ್ರ ಕಡಿಮೆಗೊಳಿಸುವುದು, ರಾಜಕೀಯ ಹಸ್ತಕ್ಷೇಪವಿಲ್ಲದೇ ಕೆಲಸ ನಿರ್ವಹಿಸುವಂತೆ ತನಿಖಾ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡುವುದು, ಅಧಿಕಾರ ವಿಕೇಂದ್ರಿಕರಣದ ಮೂಲಕ ಆಡಳಿತವನ್ನು ಕೆಳ ಹಂತದವರೆಗೆ ಕೊಂಡೊಯ್ಯುವಂತಹ ಸಾಂಸ್ಥಿಕ ಸುಧಾರಣೆಗಳಾಗಬೇಕು.
ಅಂತಹ ಬದಲಾವಣೆಗೆ ಒತ್ತಡ ತರುವ ಕೆಲಸವನ್ನು ಸಾಮಾಜಿಕ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಮಾಡಬೇಕಿವೆ. ಅಂತಹ ಬದಲಾವಣೆಗಳಾಗುವವರೆಗೂ ಇವತ್ತಿನ ಎ ಮೀರಿ ಕೇಂದ್ರಿಕೃತವಾಗಿರುವ ಕೇಂದ್ರದಲ್ಲಿನ ಒಕ್ಕೂಟ ವ್ಯವಸ್ಥೆಯಲ್ಲಿ ಆಯಾ ರಾಜ್ಯದ ಏಳಿಗೆಗೆ ಸಂಪನ್ಮೂಲ ಹೊಂದಿಸಲು ಪ್ರಾದೇಶಿಕ ಪಕ್ಷಗಳ ಅಗತ್ಯ ಕಂಡು ಬರುತ್ತವೆ. ಮುಂದಿನ ದಿನಗಳಲ್ಲಿ ಇಷ್ಟೊಂದು ವೈವಿಧ್ಯತೆಯ ಭಾರತ ಒಕ್ಕೂಟ ಒಂದು ಸರಿಯಾದ ಒಕ್ಕೂಟದ ಮಾದರಿಯಲ್ಲಿ ಕೆಲಸ ಮಾಡುವಂತೆ ಮಾಡುವ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟ ಅಸ್ತಿತ್ವಕ್ಕೆ ಬರುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ಈ ಸಂದರ್ಭದಲ್ಲಿ ಕರ್ನಾಟಕದ ಹಿತ ಕಾಯಲು ಸರಿಯಾದ ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬರುವುದು ಕನ್ನಡ, ಕನ್ನಡಿಗರ ಪಾಲಿಗೆ ಅತ್ಯಂತ ಮುಖ್ಯವಾಗಿದೆ.
ಈ ಹಿಂದಿನ ಪ್ರಯತ್ನಕ್ಕೂ ಈಗಿನದ್ದಕ್ಕೂ ತುಂಬಾ ವ್ಯತ್ಯಾಸವಿದೆ. ಕರ್ನಾಟಕದಲ್ಲಿ ಈ ಹಿಂದೆ ಪ್ರಾದೇಶಿಕ ಪಕ್ಷ ಕಟ್ಟುವ ಪ್ರಯತ್ನಗಳು ಗೆಲುವು ಕಂಡಿಲ್ಲ, ಹಾಗಾಗಿ ಈ ಬಾರಿಯ ಪ್ರಯತ್ನಗಳು ಗೆಲುವು ಕಾಣುವುದಿಲ್ಲ ಎನ್ನುವ ಅಭಿಪ್ರಾಯ ಕೆಲವರದ್ದು. ಆದರೆ ಅಂದಿನ ಸೋಲು ಯಾಕಾಯಿತು ಎನ್ನುವ ಅಂಶ ನೋಡಿದಾಗ ಅವುಗಳ ಸೋಲಿನ ಕಾರಣ ಸುಲಭವಾಗಿ ತಿಳಿಯಬಹುದು. ಈ ಹಿಂದೆ ಪಕ್ಷ ಕಟ್ಟಿದ್ದ ದೇವರಾಜ್ ಅರಸು, ಬಂಗಾರಪ್ಪನವರ ಕಾಲದಲ್ಲಿ ರಾಷ್ಟ್ರೀಯ ಪಕ್ಷಗಳು ದೇಶಾದ್ಯಂತ ಬಲವಾಗಿದ್ದವು. ಆದರೆ ಇಂದು ದೇಶಾದ್ಯಂತ ಪ್ರಾದೇಶಿಕ ಪಕ್ಷಗಳು ಬಲಗೊಂಡಿರುವ, ಬಲಗೊಳ್ಳುತ್ತಿರುವ ಸಮ್ಮಿಶ್ರ ಸರ್ಕಾರಗಳ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿರುವ ದಿನಗಳಾಗಿವೆ. ಈ ಹಿಂದಿನ ಪ್ರಯತ್ನ ಮಾಡಿದವರು ಕರ್ನಾಟಕದ ಪ್ರಭಾವಿ ಸಮುದಾಯಕ್ಕೆ ಸೇರದ, ರಾಜ್ಯವ್ಯಾಪಿ ರಾಜಕೀಯ ಪ್ರಭಾವ ಹೊಂದಿರದ ನಾಯಕರಾಗಿದ್ದರೆ ಇಂದಿನ ಪ್ರಯತ್ನದಲ್ಲಿರುವವರಿಗೆ ಆ ತೊಡಕು ಅಷ್ಟಾಗಿಲ್ಲ.
ಎಲ್ಲಕ್ಕೂ ಹೆಚ್ಚಾಗಿ ಕರ್ನಾಟಕಕ್ಕೆ ನಿರಂತರವಾಗಿ ಭಾರತ ಒಕ್ಕೂಟದಲ್ಲಿ ನದಿ, ನೆಲ, ಬದುಕಿನ ಹಕ್ಕುಗಳ ವಿಷಯಗಳಲ್ಲಿನ ಅನ್ಯಾಯ ಸರಿಪಡಿಸಲು ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷಗಳ ಅಗತ್ಯವಿದೆ ಅನ್ನುವ ಚಿಂತನೆ ಈ ಹಿಂದಿನವರು ಪ್ರಯತ್ನ ಮಾಡಿದ್ದ ಹೊತ್ತಲ್ಲಿ ಅಷ್ಟಾಗಿ ಜನಮಾನಸದಲ್ಲಿ ಗಟ್ಟಿಯಾಗಿರಲಿಲ್ಲ, ಆದರೆ ಇಂದು ಈ ವಾದಕ್ಕೆ ರಾಜ್ಯದ ಜನಸಾಮಾನ್ಯನಲ್ಲೂ ಬಹು ದೊಡ್ಡ ಮಟ್ಟದಲ್ಲಿ ಬೆಂಬಲವಿದೆ. ಹೀಗಾಗಿ ಸರಿಯಾದ ಪ್ರಯತ್ನ ಮಾಡಿದರೆ ಕರ್ನಾಟಕದಲ್ಲಿ ಒಂದೆರಡು ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿ ನೆಲೆ ನಿಲ್ಲುವ ಎಲ್ಲ ಸಾಧ್ಯತೆಗಳಿವೆ ಎನ್ನುವುದು ನನ್ನ ಭಾವನೆ.
ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿಯೂ ಪ್ರಾದೇಶಿಕ ಪಕ್ಷಗಳ ಅಲೆ ತಟ್ಟಿದೆ. ಇಲ್ಲಿಯವರೆಗೆ ರಾಜಕೀಯದಲ್ಲಿ ಕಾಣಿಸಿಕೊಳ್ಳದ ವ್ಯಕ್ತಿಗಳು ರಾಜರೋಷವಾಗಿ ರಾಜಕೀಯ ರಂಗದಲ್ಲಿ ಭಾಗವಹಿಸುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಶ್ರೀದೇವಿ ಸಮೂಹ ಸಂಸ್ಥೆಯ ಅಧ್ಯಕ್ಷ ಸದಾನಂದ ಶೆಟ್ಟಿ ಜೆಡಿಎಸ್‌ನ ಬಾಗಿಲು ತಟ್ಟಿದ್ದರೆ, ಸಾಮಾಜಿಕ ಕಾರ್ಯಕರ್ತ, ಧಾರ್ಮಿಕ ಧುರೀಣರೆಂದು ಹಲವಾರು ಹಿಂದುತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹೆಸರು ಗಳಿಸಿದ ವಿಜಯನಾಥ ವಿಠಲ ಶೆಟ್ಟಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಕಾಂಗ್ರೆಸ್‌ಗೆ ಆನೆಬಲ ಬಂದಂತಾಗಿದೆ. ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗುವ ನೀರಿಕ್ಷೆಯಿದೆ. ಬಿಜೆಪಿ ಆಡಳಿತವಿರುವಾಗ ಬೆಂಗಳೂರಿಗೆ ಮಂತ್ರಿಸ್ಥಾನ ಕೊಡಿಸುವುದಾಗಿ ಕರೆಸಿಕೊಂಡು ಕೊನೆಗೂ ಬಿಜೆಪಿಯ ದಾಷ್ಟ್ಯಕ್ಕೆ ಬಲಿಯಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ತಟಸ್ಥರಾಗಿರುವುದು ಕಂಡು ಬರುತ್ತಿದೆ. ಆಪ್ತ ವಲಯದಲ್ಲಿ ಅವರು ರಾಜಕೀಯದಿಂದಲೇ ನಿವೃತ್ತಿಯಾಗುತ್ತಾರೆ ಎನ್ನುವ ಮಾತು ಒಂದೆಡೆಯಾದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಮಾತು ಕೇಳುತ್ತಿದೆ. ಅಲ್ಲದೇ ಕುಂದಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹ್ಯಾಟ್ರಿಕ್ ಹುಲಿಯಾಗಿದ್ದ ಹೈಕಾಡಿ ಪ್ರತಾಪ ಚಂದ್ರ ಶೆಟ್ಟಿ ಅವರನ್ನು ಸೋಲಿಸಿ ರಾಜಕೀಯ ಕ್ಷೇತ್ರದಲ್ಲಿ ಬಲವಾಗಿ ಬೇರೂರಿದ್ದರು. ಆದರೆ ಹಾಲಾಡಿಯವರು ನಿವೃತ್ತಿಯಾದರೆ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹೈಕಾಡಿಯವರು ಸ್ಪರ್ಧಿಸುವ ನಿರೀಕ್ಷೆಯಿದೆ. ಹಾಲಾಡಿಯವರು ಸ್ಪರ್ಧಿಸದಿದ್ದರೆ ಕುಂದಾಪುರದಲ್ಲಿ ನಿಲ್ಲುವ ಬಂಟ ಸಮುದಾಯಕ್ಕೆ ಗೆಲುವಾಗುವ ಸಾಧ್ಯತೆ ಒಂದೆಡೆಯಾದರೆ ಬಿಲ್ಲವ ಸಮಾಜವು ಕೂಡ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆನ್ನುವ ಛಲ ತೊಟ್ಟಿದ್ದಾರೆ. ಆದರೂ ರಾಜಕೀಯ ಪಕ್ಷದಲ್ಲಿ ಅಭ್ಯರ್ಥಿಗಳ ಸ್ಫರ್ಧೆ ಹಾಗೂ ಪ್ರಾದೇಶಿಕ ಪಕ್ಷಗಳ ಆಯ್ಕೆ ನಿಗೂಡವಾಗಿದೆ. ರಾಜಕೀಯದಲ್ಲಿ ಬದಲಾವಣೆ ಬೇಕು ಎನ್ನುವ ವರ್ಗ ಒಂದೆಡೆ? ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲಾ ಎನ್ನುವ ಮಂದಿ ಇನ್ನೊಂದೆಡೆ? ಆದರೆ ಯಾವುದು ಆಗಬೇಕು ಎನ್ನುವ ಪ್ರಶ್ನೆಗೆ ಉತ್ತರ ಮುಂಬರುವ ವಿಧಾನ ಸಭಾ ಚುನಾವಣೆ ಉತ್ತರ ನೀಡಲಿದೆ ಅಲ್ಲವೇ?