Wednesday, 22 August 2012







ಶಾಂತ ಸ್ವಭಾವವಿದ್ದರೂ ಕಾರ್ಯದಲ್ಲಿ ಸಮುದ್ರದಂತೆ ಬೋರ್ಗರೆತ 
ಕರಾವಳಿ ಕಣ್ಮಣಿಗಳ ಸಾಧನೆ ಜನಮಾನಸದಲ್ಲಿ ಅಜರಾಮರ 
ಸಂಪದೋ ಮಹತಾಮೇವ ಮಹತಾಮೇವ ಚಾಪದಃ/
ವರ್ಧತೇ ಕ್ಷಿಯತೇ ಚಂದ್ರೋ ನ ತು ತಾರಾಗಣಃ ಕ್ವಚಿತ್//
ಹಿರಿಯರಿಗೆ ಸಂಪತ್ತು, ಹಿರಿಯರಿಗೆ ವಿಪತ್ತು! ಚಂದ್ರನಿಗೆ ವೃದ್ಧಿ ಹ್ರಾಸಗಳಿವೆ ಆದರೆ ತಾರೆಗಳಿಗಿಲ್ಲ...ಈ ಮಾತು ಕರಾವಳಿಯಲ್ಲಿ ಜನ್ಮ ತಾಳಿ ನಾಡಿನ ಜನತೆಯ ಪಾಲಿಗೆ ಅಮೂಲ್ಯ  ಕೊಡುಗೆ ನೀಡಿದ ಮೂವರು ಕಣ್ಮಣಿಗಳ ಕುರಿತು ಎಂದಾಗ ಯಾರವರು? ಎನ್ನುವ ಪ್ರಶ್ನೆ ಸಹಜವೇ? ಕರಾವಳಿಯ ಜನತೆಗೆ ಡಿ.ವಿ.ಸದಾನಂದ ಗೌಡರು ರಾಜ್ಯದ ಮುಖ್ಯಮಂತ್ರಿಯಾದಾಗ ಸಂತೋಷವಾಗಿತ್ತು. ಕರಾವಳಿಯ ೨ ನೇ ಮುಖ್ಯಮಂತ್ರಿಯಾಗಿ ಅದರಲ್ಲೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಾಂಸದನಾಗಿ ರಾಜ್ಯದ ಮುಖ್ಯಮಂತ್ರಿಯಾದಾಗ ಜನತೆ ಮನದಲ್ಲಿ ನಿಷ್ಠಾವಂತ ನಾಯಕ ರಾಜ್ಯದ ಮುಖ್ಯಮಂತ್ರಿಯಾದರಲ್ಲ ಎನ್ನುವ ಸಂತೋಷದ ಆಶಾಗೋಪುರ ಹೆಚ್ಚು ದಿನ ಉಳಿಯಲಿಲ್ಲ. ಬಿಜೆಪಿಯಲ್ಲಿನ ಗೊಂದಲ, ಬಣ, ಜಾತಿ ರಾಜಕೀಯಕ್ಕೆ ನಿಷ್ಠಾವಂತ ಮುಖ್ಯಮಂತ್ರಿ ರಾಜೀನಾಮೆ ನೀಡುವಂತಾಯಿತು. ಅಲ್ಲದೇ ಕರಾವಳಿ ಶಾಸಕರು ಅಧಿಕಾರದಲ್ಲಿದ್ದಾಗ ಯಾಕೆ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾತು ಆಡದೆ ಸುಮ್ಮನೆ ಕುಳಿತಿದ್ದರು. ಈ ರೀತಿ ಮೊದಲಲ್ಲ. ಒಬ್ಬ ನಾಯಕರಿಗೆ ಈ ರೀತಿಯಾದ ಅವಮಾನ ಆಗಿದ್ದರೆ ಕ್ಷಮಿಸಬಹುದು. ಆದರೆ ಪಕ್ಷ ಯಾವುದಾದರೇನು ಕರಾವಳಿಯಲ್ಲಿ ಹುಟ್ಟಿ ರಾಜಕೀಯ ರಂಗ ಹಾಗೂ ಸಾಮಾಜಿಕ ರಂಗದಲ್ಲಿ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ  ವ್ಯಕ್ತಿ ಸೇರಿದಂತೆ ಮೂವರು ವ್ಯಕ್ತಗಳಿಗೆ ಅನ್ಯಾಯವಾಗಿರುವುದಕ್ಕೆ ಪ್ರಜ್ಞಾವಂತರು ಮಾತನಾಡದೆ  ಮೌನವೃತ ತಾಳಿರುವುದಕ್ಕೆ ಕಾರಣವಾದರೂ ಯಾವುದು? ಕರಾವಳಿ ಬುದ್ದಿವಂತರ ನಾಡು ಎಂದು ಕರೆಸಿಕೊಂಡು ಅನೇಕ ಬುದ್ದಿಜೀವಿಗಳು, ಸಾಹಿತಿಗಳು ಇಲ್ಲಿ ಬದುಕಿದ್ದರೂ ಸಂಬಂಧಿಸದ ವಿಷಯಗಳಿಗೆ ಮಾತೆತ್ತುವ ಅತಿ ಬುದ್ದಿವಂತರಿಗೆ ಬಹಿರಂಗವಾಗಿ ನಾನು ಕೇಳುವ ಪ್ರಶ್ನೆ ಇದು. ನಿಷ್ಠಾವಂತರಾಗಿ ಕಾರ್ಯವೆಸಗುವ ಸಂದರ್ಭದಲ್ಲಿ ಅಪಮಾನ, ಅನ್ಯಾಯವಾದಾಗ ಮಾತನಾಡದೆ ಸುಮ್ಮನೆ ಕುಳಿತುಕೊಳ್ಳಲು ಕಾರಣವೇನು? ಒಳ್ಳೆಯ ಅಂಶದ ಕುರಿತು ಮಾತನಾಡುವ ಕರಾವಳಿಯ ಜನತೆ ಈ ರೀತಿಯಾಗಿ ಸಮಾಜಕ್ಕೆ ಒಳಿತನ್ನು ಮಾಡಿದವರ ಕುರಿತು ಮಾತನಾಡದೆ ತಮ್ಮ ಕಾರ್ಯದಲ್ಲಿ ಮಗ್ನರಾಗಿರುವುದನ್ನು ಬಿಟ್ಟು ಅವರು ಅಧಿಕಾರದಲ್ಲಿದ್ದಾಗ ಮಾಡಿದ ಕಾರ್ಯವೈಖರಿಯ ಕುರಿತು ಮಾತನಾಡಿಯಾರೆ?
ವನದಲ್ಲಿ ಅನೇಕ ಪುಷ್ಪಗಳು ಹುಟ್ಟುತ್ತವೆ. ಅವುಗಳು ಅರಳಿ ಬಾಡಿ ಉದುರಿ ಹೋಗುತ್ತವೆ. ಇವುಗಳನ್ನು ಯಾರು ಗಮನಿಸುವುದಿಲ್ಲ. ಆದರೆ ಗಜೇಂದ್ರನು ಶ್ರೀಹರಿಯ ಪೂಜೆಗೆಂದು ಅರ್ಪಿಸಿದ ತಾವರೆಯೇ ಧನ್ಯವೆಂದು ಭಾವಿಸುತ್ತದೆ. ಅನೇಕ ದೇವಾಲಯಗಳ ತವರಾದ ಕರಾವಳಿಯು, ಪಶ್ಚಿಮ ಘಟ್ಟಗಳ ತಂಪಾದ ವಾತಾವರಣ, ಮಳೆ,ಗಾಳಿ, ಬಿಸಿಲು ಸರಿಯಾಗಿ ಕಾಲದಿಂದ ಕಾಲಕ್ಕೆ ಆಗುವಂತ ಈ ಪ್ರದೇಶದಲ್ಲಿ ಜನ್ಮ ತಾಳುವುದೇ ಪವಿತ್ರವೆಂದು ಭಾವಿಸುವುದು ತಪ್ಪಲ್ಲ. ಅಂತಹ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಡಿ.ವಿ.ಸದಾನಂದ ಗೌಡ, ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಎಂ.ವೀರಪ್ಪ ಮೊಲಿ ಅವರ ಬಗ್ಗೆ ಹೆಮ್ಮೆಯಾಗಬೇಕು. ಅವರು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಕೊಳಕು ಅಂಟಿಕೊಂಡಿದ್ದರೂ ಅದನ್ನು ಹೋಗಲಾಡಿಸಲು ಪ್ರಯತ್ನಿಸಿದರಲ್ಲ ಎನ್ನುವ ಸಂತೋಷ.
ರಾಜಕೀಯ ಕ್ಷೇತ್ರದಲ್ಲಿ ಕೊಳಕು ತುಂಬಿಕೊಂಡಿದ್ದಾಗಲೂ ಅದನ್ನು ನಂಬಿ ಜನಸೇವೆಯೇ ಜನಾರ್ಧನ ಸೇವೆ ಎನ್ನುವ ತತ್ವದಿಂದ ಯಾವುದೇ ಪಕ್ಷದಲ್ಲಿದ್ದರೂ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ ಬಿಜೆಪಿಯ ಡಿ.ವಿ.ಸದಾನಂದ ಗೌಡ ಹಾಗೂ ಕಾಂಗ್ರೆಸ್‌ನ ಎಂ.ವೀರಪ್ಪ ಮೊಲಿ ಅವರುಗಳು ಜನ ಸಾಮಾನ್ಯರಿಗೂ ಅನುಕೂಲವಾಗುವಂತ ಕಾರ್ಯ ಮಾಡಿದರಲ್ಲ ಅದು ನಿಜವಾದ ಜನಸೇವೆ. ಜನಸೇವೆ ಕೇವಲ ಆಡಂಬರವಾಗಿರದೆ ಭ್ರಷ್ಟಾಚಾರದಿಂದ ತುಂಬಿದ್ದ ರಾಜಕೀಯ ಹಾಗೂ ಸಮಾಜದಲ್ಲಿನ ಧೂಳನ್ನು ಹೊಡೆದೊಡಿಸಲು ಲೋಕಾಯುಕ್ತರಾಗಿ  ಅಧಿಕಾರ ವಹಿಸಿಕೊಂಡು ಭ್ರಷ್ಟಾಚಾರಿಗಳ ಹೆಡೆಮುಡಿ ಕಟ್ಟಿದರಲ್ಲ ನ್ಯಾಯಮೂರ್ತಿ ಸಂತೋಷ ಹೆಗ್ಡೆ. ಈ ಮೂವರ ಕುರಿತಂತೆ ಬುದ್ಧಿವಂತರ ನಾಡಿನ ಜನ ಯಾಕಾದರೂ ತೆಪ್ಪಗೆ ಕುಳಿತಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಈ ನಾಡಿನ ಜನತೆಗೆ ಸಮಾಜ ಒಳಿತಿಗೆ ಮಾಡುವ ಯಾವ ಕಾರ್ಯ ಕೂಡ ಹಿತವಾಗಿ ಕಾಣುವುದಿಲ್ಲವೇ? ತಾವು ಮಾತ್ರ ಕ್ಷೇಮವೆಂದು ತಿಳಿದು ತಮ್ಮಷ್ಟಕ್ಕೆ ತಾವು ಇದ್ದು ಬಿಡುವದೇ ಒಳ್ಳೆಯದೆನ್ನುವ ಭಾವನೆಯೇ ಎನ್ನುವ ಗೊಂದಲದ ಎಳೆ ನನ್ನನ್ನು ಕಾಡುತ್ತಿದೆ. ಇಲ್ಲವಾದರೆ ಡಿ.ವಿ.ಸದಾನಂದ ಗೌಡ, ಎಂ.ವೀರಪ್ಪ ಮೊಲಿ, ಸಂತೋಷ ಹೆಗ್ಡೆ ಅವರಿಗೆ ಅವಮಾನವಾದ ಕುರಿತು ಕರಾವಳಿಯ ಜನತೆ ಅವರಿಗೆ ಅನ್ಯಾಯವಾದಾಗ ಮಾತನಾಡದಿರುವುದು ಬೇಸರದ ಸಂಗತಿ. ನಾಡಿನ ಜನತೆಗೆ ಒಳಿತನ್ನು ಬಯಸಿ ಕೆಲಸ ನಿರ್ವಹಿಸಿದವರಿಗೆ ಅದ ಅನ್ಯಾಯಕ್ಕೆ ಮಾತನಾಡದ ಜನತೆ ಗಡಿನಾಡಿನಲ್ಲಿ ಸೈನಿಕ ನಮ್ಮ ಪ್ರಾಣ ರಕ್ಷಣೆಗಾಗಿ ತನ್ನ ಪ್ರಾಣ ಪಣವಾಗಿಡುತ್ತಾನಲ್ಲ ಆಗ ಕಣ್ಣಿರಿಡುತ್ತಾರೆಯೇ ಎನ್ನುವ ಅನುಮಾನ ಕಾಡುತ್ತದೆ. ಅನ್ಯಾಯ, ಅವಮಾನ, ಸ್ವಾಭಿಮಾನ ಕೆದಕುವ ಸಂದರ್ಭದಲ್ಲಿ ಪ್ರತಿಭಟಿಸದ ಕರಾವಳಿಯ ಜನತೆಗೆ ಬುದ್ದಿವಂತರೆನ್ನುವ ಹಣೆಪಟ್ಟಿ ಮಾತ್ರವೋ? ಅಥವಾ ಅವರಿಗೆ ಆದ ಅನ್ಯಾಯಕ್ಕೆ ಮಾತನಾಡದೇ ಇರುವ ಬಲಹೀನತೆಯೋ?
ಅನ್ಯಾಯವಾದಾಗ ಪ್ರತಿಭಟಿಸುವ ಗುಣವಿರಬೇಕು. ಪ್ರಯೋಜನವೇ ಇಲ್ಲದ ಪಕ್ಷದ ನಡುವಿನ ಹೇಳಿಕೆಗೆ ಪ್ರತಿಭಟಿಸುವ ಜನರು ಸಜ್ಜನರಿಗೆ ಅವಮಾನವಾದರೂ ಅವರಿಗೆ ಬೆಂಬಲ ಸೂಚಿಸಿದಾಗ ಮುಂದೆ ಹೆಚ್ಚಿನ ಸೇವೆಯನ್ನು ನಾವು ಅವರಿಂದ ನಿರೀಕ್ಷಿಬಹುದಲ್ಲವೇ? ಮಹಾಭಾರತದಲ್ಲಿ ಛಲದಂಕ ಮಲ್ಲ, ಕುರುಕುಲ ಸಾಮ್ರಾಟ ಸುಯೋಧನ ಎಲ್ಲರಿಗೂ ಮಾದರಿಯಾಗಬೇಕು. ಪರೀಕ್ಷರಂಗದಲ್ಲಿ ಸೂತಪುತ್ರ ಕರ್ಣನಿಗೆ ಅವಮಾನವಾದಾಗ ಅವನಿಗೆ ಧೈರ್ಯ ತುಂಬಿ ಅಂಗರಾಜ್ಯದ ಅಧಿಕಾರಿಯನ್ನಾಗಿ ಮಾಡಿ ಆತ್ಮೀಯ ಸ್ನೇಹಿತನನ್ನಾಗಿ ಮಾಡಿಕೊಂಡನು. ಇಲ್ಲಿ ಸುಯೋಧನನ ಸ್ವಾರ್ಥವಿದ್ದರೂ ಅವನು ಅನ್ಯಾಯವಾದಾಗ ಅವರಿಗೆ ರಕ್ಷಣೆ ನೀಡುವ ಗುಣವನ್ನು ಬೆಳೆಸಿಕೊಂಡಿದ್ದಾನಲ್ಲಾ. ಇಂತಹ ಗುಣ ಸಮಾಜಕ್ಕೆ ಮತ್ತು ಕುಟುಂಬಕ್ಕೆ ಒಳಿತಾಗುವಂತಿದ್ದರೆ ಸ್ವಾರ್ಥವಿದ್ದರೂ ತಪ್ಪಿಲ್ಲ ಎನ್ನುವ ಭಾವನೆ ನನ್ನದು. ಮೇಲಿನ ಮೂವರು ವ್ಯಕ್ತಿಗಳಿಗಾದ ಅನ್ಯಾಯಕ್ಕೆ ಅಪಮಾನಕ್ಕೆ ಸಮಾಜದ ಹಿತ ಬಯಸಿ ಸ್ವಾರ್ಥ ಬಯಸಿದರೆ ತಪ್ಪೆ ಇಲ್ಲ ಅಲ್ಲವೇ? ಆ ಮೂವರು ವ್ಯಕ್ತಿಗಳ ನಿಜವಾದ ಸಾದನೆ ನಿಮ್ಮ ಮುಂದಿರಿಸಿದಾಗ ಹೇಳಿದ ಮಾತಿಗೆ ಅರ್ಥವಿರುತ್ತದೆ.
ಎಂ.ವೀರಪ್ಪ ಮೊಲಿ: 
೧೯೪೦ ಜನವರಿ ೧೨ ರಂದು ಜನಿಸಿದ ಮೊಲಿ  ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುತ್ತಿರುವುದು ಕರಾವಳಿಯ ಜನತೆಗೆ ಪಾಲಿಗೆ  ಹೆಮ್ಮೆ. ೨೦೦೯ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಂಸದರಾಗಿ ಉತ್ತಮ ಮತಗಳ ಅಂತರದಿಂದ ಆಯ್ಕೆಗೊಂಡು ಕೇಂದ್ರ ಮಂತ್ರಿಗಿರಿ ಅಲಂಕರಿಸಿದ್ದಾರೆ. ತುಳುನಾಡಿನ ಪ್ರಥಮ  ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡವರು. ೧೯೯೨ ನವೆಂಬರ್ ೧೯ ರಿಂದ ೧೯೯೪ ಡಿಸೆಂಬರ್ ೧೧ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ವಿದ್ಯಾರ್ಥಿಗಳ ಪಾಲಿಗೆ ಅನುಕೂಲವಾಗುವಂತ ಕಾರ್ಯ  ಮಾಡಿರುವುದು ಪ್ರತಿಯೊರ್ವರ ನೆನಪಿನಂಗಳದಲ್ಲಿದೆ ಎನ್ನುವ ಭಾವನೆ ನನ್ನದು. ಉಡುಪಿ ಜಿಲ್ಲೆಯ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನ ಸಭೆಗೆ ಆಯ್ಕೆಯಾಗಿ ರಾಜ್ಯದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ವ್ಯಕ್ತಿ. ಪ್ರಸ್ತುತ ಆಲ್ ಇಂಡಿಯನ್ ಕಾಂಗ್ರೆಸ್‌ನ ಆಂಧ್ರಪ್ರದೇಶದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರಾಗಿದ್ದಾರೆ. ಸೋನಿಯಾ ಗಾಂಧಿಯವರಿಗೆ ಆತ್ಮೀಯ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ವೀರಪ್ಪ ಮೊಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಮಾರ್ಪಾಡಿ ಗ್ರಾಮದಲ್ಲಿ ದೇವಾಡಿಗ ಸಮಾಜದಲ್ಲಿ ಜನ್ಮತಾಳಿದರು. ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಸರಕಾರಿ ಕಾಲೇಜು (ವಿಶ್ವವಿದ್ಯಾನಿಲಯ ಕಾಲೇಜು)ತಮ್ಮ ಬಿ.ಎ.ಶಿಕ್ಷಣ ಮುಗಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎಲ್ ಕಾನೂನು ಪದವಿಯನ್ನು ಪಡೆದರು. ರಾಜಕೀಯ ಕ್ಷೇತ್ರದಲ್ಲಿ ಪಳಗಿದ ಇವರಿಗೆ ಹಲವಾರು ಪದವಿಗಳು ಕೈಬೀಸಿ ಕರೆದವು. ಅದರಂತೆ ಆ ಪದವಿಗೆ ಚ್ಯುತಿಬಾರದಂತೆ ಕರ್ತವ್ಯ ನಿರ್ವಹಿಸಿ ಮದ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಮನೆ ಮಾತಾಗಿದ್ದಾರೆ. ಕಾನೂನು ಪದವಿ ಪಡೆದ ಇವರು ಕಾರ್ಕಳ, ಹೈಕೋರ್ಟ್ ಬೆಂಗಳೂರು ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಅಭ್ಯಾಸ ಮಾಡಿದ್ದಾರೆ. ಸಾಮಾಜಿಕವಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮ ಮಾಡಿದ ಇವರು ಲೇಖನಿಯನ್ನು ಹಿಡಿದು ಶ್ರೀ ರಾಮಾಯಣ ಮಹಾನ್ವೇಷಣಂ ಎನ್ನುವ ೫ ಸಂಚಿಕೆಗಳ ೪೨,೨೯೫ ಸಾಲಿನ ಕನ್ನಡ ಕೃತಿ ರಚಿಸಿದ್ದಾರೆ. ಇದು ಇಂದಿರಾ ಗಾಂಧಿ ನ್ಯಾಶನಲ್ ಸೆಂಟರ್ ಆಫ್ ಆರ್ಟ್ಸ್ ಹಿಂದಿ ಭಾಷೆಗೆ ತರ್ಜುಮೆ ಗೊಂಡಿರುವುದು ವಿಶೇಷ.
ಬಡ ವಿದ್ಯಾರ್ಥಿಗಳಿಗೆ ಗಗನ ಕುಸುಮವಾದ ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣಕ್ಕೆ ಶ್ರೀಮಂತರ ಮಕ್ಕಳೇ ಹೋಗುತ್ತಿದ್ದರು. ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಹೇಳಿದಷ್ಟು ನೀಡಿ ಪ್ರತಿಷ್ಟೆಯ ಸಂಕೇತವಾಗಿ ಈ ಕ್ಷೇತ್ರದಲ್ಲಿಯೇ ಓದಲಿ ಎನ್ನುವ ಉದ್ದೇಶದಿಂದ ಮಕ್ಕಳನ್ನು ಕಲಿಸುತ್ತಿದ್ದರು. ವೀರಪ್ಪ  ಮೊಲಿ ಅದಕ್ಕೆ ಮುಕ್ತಿ ಸಿಗಬೇಕು ಎನ್ನುವ ಉದ್ದೇಶದಿಂದ ಕಾಮನ್ ಎಂಟ್ರೆನ್ಸ್ ಟೆಸ್ಟ್ (ಸಿಇಟಿ)ಯನ್ನು ಜಾರಿಗೆ ತಂದರು. ಇದರಿಂದ ಪ್ರತಿಭೆಯಿಲ್ಲದಿದ್ದರೂ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದ ಶ್ರೀಮಂತ ವರ್ಗದ ಕ್ಷೇತ್ರಕ್ಕೆ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಈ ಕ್ಷೇತ್ರಕ್ಕೆ ಪ್ರವೇಶ ಮುಕ್ತವಾಯಿತು. ಇದರಿಂದ ಉತ್ತಮ ಕಾರ್ಯ ಮಾಡಿದ ಶ್ಲಾಘನೆಗೆ ಒಳಗಾದರು.
ನ್ಯಾಯಮೂರ್ತಿ ಸಂತೋಷ ಹೆಗ್ಡೆ: 
೧೯೪೦ ಜೂ.೧೬ರಂದು ನಿಟ್ಟೆಯಲ್ಲಿ ಜನಿಸಿದ ಇವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನಿವೃತ್ತಿಗೊಂಡ ನಂತರ ರಾಜ್ಯದ ಲೋಕಾಯುಕ್ತರಾಗಿ ಆಯ್ಕೆಯಾಗಿ ರಾಜ್ಯದಲ್ಲಿ ಯಾರು ಮಾಡದ ಸಾಹಸವನ್ನು ಮಾಡಿದ್ದಾರೆ.  ಜಸ್ಟೀಸ್ ಕೆಎಸ್ ಹೆಗ್ಡೆ, ಮೀನಾಕ್ಷಿ ಹೆಗ್ಡೆ ದಂಪತಿಗಳ ಆರು ಮಕ್ಕಳಲ್ಲಿ ಒಬ್ಬರಾಗಿ ಉಡುಪಿ ಜಿಲ್ಲೆಯ ನಿಟ್ಟೆಯಲ್ಲಿ ಬಂಟ ಕುಲದಲ್ಲಿ ಜನಿಸಿದರು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು, ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬೆಂಗಳೂರು ಸೈಂಟ್ ಜೋಸೆಫ್ ಹಾಗೂ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ  ಪದವಿ ಪಡೆದು ೧೯೬೫ರಲ್ಲಿ ಬೆಂಗಳೂರು ಸರಕಾರಿ ಕಾನೂನು ಕಾಲೇಜಿನಲ್ಲಿ ಪದವಿ ಪಡೆದರು.
ಈ ರೀತಿಯಾಗಿ ೧೯೬೬ರಲ್ಲಿ ವಕೀಲರಾಗಿ ದಾಖಲಾಗಿ ೧೯೮೪ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ವೃತ್ತಿರಂಗದಲ್ಲಿ ವಿವಿಧ ಹುದ್ದೆಗಳನ್ನು ಸ್ವೀಕರಿಸಿದ ಹೆಗ್ಡೆ ಆ.೩, ೨೦೦೬ ರಂದು ರಾಜ್ಯದ ಲೋಕಾಯಕ್ತರಾಗಿ ನೇಮಕಗೊಂಡರು. ಸಂತೋಷ್ ಹೆಗ್ಡೆ ಲೋಕಾಯಕ್ತರಾಗಿ ನೇಮಕಗೊಂಡಾಗ ಉಡುಪಿಯ ಜನತೆ ಸಂತೋಷದಿಂದ ಬೀಗಿತ್ತು. ಜನತೆಯ ನಂಬಿಕೆ ಹುಸಿಗೊಳಿಸದೆ ರಾಜಕೀಯ ವಲಯದಲ್ಲಿ ಸಂಚಲನವನ್ನುಂಟು ಮಾಡಿದ ಕೀರ್ತಿ ಇವರದು. ಭ್ರಷ್ಟಾಚಾರ ವಿರೋಧಿ ಚಟುವಟಿಕೆ ಹಾಗೂ ಗಾಲಿ ಕರುಣಾಕರ ರೆಡ್ಡಿ , ಸೋಮಶೇಖರ ರೆಡ್ಡಿ ಮಾಲೀಕತ್ವದ ಬಳ್ಳಾರಿ ಗಣಿಗಳಲ್ಲಿ ನಡೆಯುತ್ತಿದ್ದ ಅಕ್ರಮ ವ್ಯವಸ್ಥೆಗಳನ್ನು ಬಹಿರಂಗಗೊಳಿಸಿದ ಕೀರ್ತಿ ಇವರದಾಗಿದೆ. ಕಾನೂನುಗಳನ್ನು ತಿರುಚಿ ಬಳ್ಳಾರಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯಲ್ಲಿ ನಡೆಯುತ್ತಿದ್ದ ವ್ಯವಸ್ಥಿತ ಭ್ರಷ್ಟಾಚಾರವನ್ನು ಬಯಲಿಗೆಳೆದರು. ಅರಣ್ಯ ಭೂಮಿಯ ಭೌಗೋಳಿಕ ಆಕ್ರಮಣ, ಕಬ್ಬಿಣದ ಅದಿರು, ಸರಕಾರಿ ಗಣಿಗಾರಿಕೆ ಘಟಕಗಳ ವ್ಯವಸ್ಥಿತ ಹಸಿವಿನಿಂದ ಮಾರುಕಟ್ಟೆ ಬೆಲೆಯಂತೆ ಗಣಿಗಾರಿಕೆಯಿಂದ ಬರಬೇಕಾದ ತೆರಿಗೆ ನೀಡುವಿಕೆಯಲ್ಲಿ ವ್ಯತ್ಯಾಸವಾಗಿದ್ದವು. ಅಲ್ಲದೆ ಬೆಂಗಳೂರು ಮಹಾನಗರ ಪಾಲಿಕೆ ಕಮಿಷನರ್ ತೆಗೆಯಲು ಮುಖ್ಯಮಂತ್ರಿಯವರ ಒತ್ತಾಯ ಇತರ ಚಟುವಟಿಕೆಗಳಿಂದ ಮನಸ್ಸಿಗೆ ಬೇಸರವಾದರೂ ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡದೆ ಇರುವುದರಿಂದ ಇವರಿಗೆ ಲೋಕಾಯುಕ್ತ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಾಗಿಲ್ಲ. ಇದರಿಂದ ಬೇಸತ್ತು ಲೋಕಾಯುಕ್ತ ಹುದ್ದೆಗೆ ಜೂ.೨೩,೨೦೧೦ರಂದು ರಾಜೀನಾಮೆ ನೀಡಿದರು.
ಬೆಂಗಳೂರಿನ ಫ್ರೀಡಮ್ ಪಾರ್ಕ್‌ನಲ್ಲಿ ಇವರು ಅಣ್ಣಾ ಹಜಾರೆ ಪ್ರಾರಂಭಮಾಡಿದ ಲೋಕಪಾಲ ಮಸೂದೆಗಾಗಿ ಬೆಂಬಲ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ಸರಕಾರದ ಭ್ರಷ್ಟ ಆಡಳಿತ ಬೆಳಕಿಗೆ ತಂದರು.
ಡಿ.ವಿ.ಸದಾನಂದ ಗೌಡ: 
ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡದಲ್ಲಿ ೧೯೫೩ರಲ್ಲಿ ವೆಂಕಪ್ಪ ಗೌಡ ಹಾಗೂ ಕಮಲಮ್ಮ ದಂಪತಿಗಳಿಗೆ ಜನಿಸಿದರು. ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಬಿಎಸ್ಸಿ ಡಿಗ್ರಿ ಪಡೆದು ನಂತರದಲ್ಲಿ ಉಡುಪಿ ವೈಕುಂಠ ಬಾಳಿಕಾ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದರು. ಕಾಲೇಜಿನಲ್ಲಿ ಜನರಲ್ ಸೆಕ್ರೆಟರಿಯಾಗಿ ನಾಯಕತ್ವದ ಗುಣ ಬೆಳೆಸಿಕೊಂಡು ಎಬಿವಿಪಿಯಲ್ಲಿ ೧೯೭೬ ಜಿಲ್ಲಾ ಕಾರ್ಯದರ್ಶಿಯಾಗಿ ದುಡಿದಿದ್ದರು. ಇವರು ಪುತ್ತೂರು ಹಾಗೂ ಸುಳ್ಯದಲ್ಲಿ ಕಾನೂನು ಅಭ್ಯಾಸ ಮಾಡಿದ್ದರು. ಭಾರತೀಯ ಜನತಾ ಪಾರ್ಟಿಯ ಮೂಲಕ ರಾಜಕೀಯ ಪ್ರವೇಶಿಸಿದ ಇವರು ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡು ೨೦೦೪ರಲ್ಲಿ ಲೋಕಸಭಾ ಸದಸ್ಯರಾಗಿ ವೀರಪ್ಪ ಮೊಲಿಯವರನ್ನು ಸೋಲಿಸಿದರು. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇವರು ೧೫ ನೇ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ವಿಜಯಿಯಾದರು. ನಂತರದಲ್ಲಿ ಇವರಿಗೆ ಅವಕಾಶಗಳು ಕೈಬೀಸಿ ಕರೆಯುತ್ತಿತ್ತು ಎನ್ನುವುದಕ್ಕೆ ಡಿನೋಟಿಪಿಕೇಶನ್ ಹಗರಣದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗಿ ಬಂದಾಗ ಅದೃಷ್ಟದಿಂದ ಇವರು ರಾಜ್ಯದ ೨೬ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಕಿರೀಟ ಹೊತ್ತವನಿಗೆ ಕಿರುಕುಳ ತಪ್ಪಿದ್ದಲ್ಲ ಎನ್ನುವುದಕ್ಕೆ ಡಿವಿ ಅವರಿಗೆ ತಮ್ಮ ಪಕ್ಷದಿಂದಲೇ ಕಿರುಕುಳ ಪ್ರಾರಂಭವಾಯಿತು. ೨೦೧೨ ಜುಲೈ ೧೨ರಂದು ರಾಜೀನಾಮೆ ನೀಡಬೇಕಾಯಿತು. ತುಳುನಾಡಿನ ೨ ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಾಗರಿಕ ಸೇವಾ ಖಾತರಿ ಯೋಜನೆ  ಸಕಾಲ ಜಾರಿಗೆ ತಂದು ಭ್ರಷ್ಟಾಚಾರ ನಿಯಂತ್ರಣಕ್ಕೆ ಹಾಗೂ ಸರಕಾರಿ ಅಧಿಕಾರಿಗಳಿಗೆ ಅಂಕುಶ ಪ್ರಾಯರಾದರು. ಬಡ ಜನತೆಗೆ ಸರಕಾರಿ ಕಚೇರಿಗಳಲ್ಲಿ ಆಗುವ ಕೆಲಸದ ವಿಳಂಭಕ್ಕೆ ಸೂಕ್ತ ಪರಿಹಾರ ಕಾಣಲು ಸಕಾಲದಿಂದಾಯಿತು.
ಕರಾವಳಿ ಭಾಗದಿಂದ ಹೋಗಿದ್ದ ವೀರಪ್ಪ ಮೊಲಿ, ಸಂತೋಷ ಹೆಗ್ಡೆ, ಡಿ.ವಿ.ಸದಾನಂದ ಗೌಡರು ಜನತೆಯ ಪಾಲಿಗೆ ಒಳಿತನ್ನೆ ಮಾಡಿದ್ದಾರೆ. ಜನತೆಯ ಮನದಂಗಳದಲ್ಲಿ ಪ್ರತ್ಯೇಕವಾದ ಸ್ಥಾನ ಪಡೆದಿರುವುದಂತೂ ಸತ್ಯ. ಸಹನೆಯುಳ್ಳ ತೇಜಸ್ವಿಗಳಲ್ಲಿ ತುಂಬ ಕಠಿಣತೆಯನ್ನು ತೋರಬಾರದು. ಚಂದನವನ್ನು ತುಂಬ ಉಜ್ಜಿದರೆ ಅದರಿಂದಲೂ ಬೆಂಕಿ ಏಳುತ್ತದೆ ಎನ್ನುವ ಸತ್ಯವನ್ನು ಅರಿತುಕೊಳ್ಳಬೇಕು.
ಮೂವರಲ್ಲೂ ಪ್ರತಿಭೆಯಿದ್ದು ಬುದ್ದಿವಂತಿಕೆಯಿಂದ ಕಾರ್ಯ ಮಾಡಿದ್ದರು. ಆದರೆ ಇಂದು ಅವರನ್ನು ನೆನಪಿಸಿಕೊಳ್ಳುವವರಿಲ್ಲವೇ? ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಪ್ರತಿಭೆಯಿದ್ದು ಅವಕಾಶ ವಂಚಿತರಾಗುವ ಸಮಸ್ಯೆಯನ್ನು ನಿವಾರಿಸಿ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣಕ್ಕೆ ಅವಕಾಶ ಮಾಡಿದ್ದಾರೆ. ಭ್ರಷ್ಟಾಚಾರಿಗಳನ್ನು ಹಿಡಿದು ಸಮಾಜದಲ್ಲಿ ನಿರುಮ್ಮಳತೆಯಿಂದ ಸ್ವಲ್ಪ ಮಟ್ಟಿಗೆ ಅನುಕೂಲ ಮಾಡಿಕೊಟ್ಟಿದ್ದು ಸರಕಾರಿ ಕಚೇರಿಗಳಲ್ಲಿ ಆಮೆ ವೇಗ ಕಾಣುತ್ತಿದ್ದ ಕಡತಗಳು ಶೀಘ್ರಗತಿಯಲ್ಲಿ ವಿಲೇವಾರಿ ಕಾಣುವ ಭಾಗ್ಯ ಕನ್ನಡ ನಾಡಿನ ಜನತೆಗೆ ಒದಗಿಸಿದರಲ್ಲ...ಇವರು ತುಳುನಾಡಿನ ಹೆಮ್ಮೆಯ ಪ್ರತೀಕಗಳಲ್ಲವೇ ಇದಕ್ಕಿಂತ ಹೆಮ್ಮೆ ಬೇರೊಂದಿದೆಯೇ?ಸಮಾಜದಲ್ಲಿ ಉತ್ತಮ ಕೆಲಸ ಮಾಡಿದಾಗ ತೆಗಳದೆ ಅವರನ್ನು ಹೊಗಳಿದರೆ ಅವರು ಮಾಡಿದ ಕೆಲಸಕ್ಕೆ ಸಾರ್ಥಕತೆ ದೊರೆಯುತ್ತದೆ ಅಲ್ಲವೇ? ಉತ್ತಮರು ಹೊಗಳಿಕೆ ಬಯಸುವುದಿಲ್ಲ ಆದರೂ ಬುದ್ದಿವಂತ ನಾಡಿನ ಜನರೆಂದು ಕರೆಯಿಸಿಕೊಳ್ಳುವ ನಾವು ಅಷ್ಟು ಮಾಡದಿದ್ದರೆ ಮಾನವನಾಗಿ ಹುಟ್ಟಿ ಪ್ರಯೋಜನವಾದರೂ ಏನು ಅಲ್ಲವೇ? ಒಮ್ಮೆ ಮೂವರ ನೆನಪು ಮಾಡೋಣ.

Tuesday, 7 August 2012

 ೪೦ಕ್ಕೂ ಅಕ ವರ್ಷದಿಂದ ಬ್ಯಾಗ್ ರಿಪೇರಿ ಮಾಡಿ ಜೀವನ ಸಾಗಿಸುತ್ತಿದ್ದೇನೆ. ಮಕ್ಕಳೆಲ್ಲಾ ಸಮರ್ಥರಾಗಿ ನನ್ನನ್ನು ಸಾಕುವ ಶಕ್ತಿ ದೇವರು ಕರುಣಿಸಿದ್ದರೂ ಕೆಲಸ ಮಾಡುತ್ತಿದ್ದ ದೇಹಕ್ಕೆ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಅದಕ್ಕಾಗಿ ಸಾಧ್ಯವಾದ ಸಣ್ಣ ಕೆಲಸವನ್ನು ಮಾಡುತ್ತಿದ್ದೇನೆ.
-ಅಜೀಜ್



ಮಂಗಳೂರು: ದೇಶದ ಅಭಿವೃದ್ದಿ ಹಾಗೂ ತಂತ್ರಜ್ಞಾನದಲ್ಲಿ ವೈಜ್ಞಾನಿಕ ವೇಗ ಕಂಡು ಕೊಂಡಿದ್ದರೂ ಮನುಷ್ಯ ಪರರನ್ನು ಅವಲಂಬಿಸುವುದು ತಪ್ಪಿಲ್ಲ. ಅಭಿವೃದ್ಧಿಗೆ ಕಾರಣಿಕರ್ತನಾದ ಮನುಷ್ಯ ಸಣ್ಣ-ಪುಟ್ಟ ಕಾರ್ಯಗಳನ್ನು ಹೊರತು ಪಡಿಸಿ ಕೆಲವೊಂದು ಅಂಶದಲ್ಲಿ ಪರರನ್ನು  ಅಥವಾ ವಸ್ತುಗಳನ್ನು ಅವಲಂಬಿಸಲೇಬೇಕು. ಒತ್ತಡದ ಪ್ರಪಂಚದಲ್ಲಿ ಉದ್ಯೋಗದ ನಿಮಿತ್ತ ಬೇರೊಂದು ಕಡೆಗೆ ಪ್ರವಾಸಕ್ಕೊ? ನೆಂಟರಿಷ್ಟರ ಮನೆಗೋ? ಮಕ್ಕಳು ಶಾಲೆಗೆ ಹೋಗುವಾಗ ಬ್ಯಾಗ್‌ನ ಅವಶ್ಯಕತೆಯಿರುತ್ತದೆ. ದಿನನಿತ್ಯ ಉಪಯೋಗಿಸುವ ಬ್ಯಾಗ್‌ನಲ್ಲಿ ಕೊರತೆ ಕಂಡುಬಂದರೆ ಅದನ್ನು ಬಿಸಾಡದೆ ರಿಪೇರಿ ಮಾಡಲು ಪ್ರಯತ್ನಿಸಿ, ಕೈಸೋತಾಗ ರಿಪೇರಿ ಮಾಡುವ ಅಂಗಡಿ ಎಲ್ಲಿದೆ ಎಂದು ಹೊತ್ತೊಯ್ಯುತ್ತೇವೆ. ಹೀಗೆ ನಗರದ ಹೃದಯ ಭಾಗದಲ್ಲಿ ಸುಮಾರು ೪೦ ವರ್ಷಗಳಿಂದ ಸದ್ದಿಲ್ಲದೇ ಬ್ಯಾಗ್ ರಿಪೇರಿಯ ಕಾಯಕದಲ್ಲಿ ಮಗ್ನರಾಗಿದ್ದಾರೆ ಅಜೀಜ್...
ಸಿರಿವಂತರಾಗಲಿ ಅಥವಾ ಬಡವರಾಗಿರಲಿ ಅವರು ಉಪಯೋಗಿಸುವ ಬ್ಯಾಗಿನ ಗುಣಮಟ್ಟ ವ್ಯತ್ಯಾಸವಿರಬಹುದು. ವ್ಯವಹಾರದ ದೃಷ್ಟಿಯಿಂದ ಅಥವಾ ಮಕ್ಕಳು ಶಾಲೆಗೆ ಹೋಗುವಾಗ ಬ್ಯಾಗ್ ಅವಶ್ಯಕವಾಗಿದೆ. ಈ ಬ್ಯಾಗುಗಳು ಶಾಶ್ವತವಾಗಿರದೆ  ಜಿಪ್ ಹೋಗುವುದು, ಬಟ್ಟೆ ಹರಿಯುವುದು ಸಹಜವಾಗಿರುತ್ತದೆ. ಆದರೆ ಈ ಬ್ಯಾಗುಗಳನ್ನು ಬಿಸಾಡದೆ ಅವುಗಳ ರಿಪೇರಿಗೆ ಹೊತ್ತೊಯ್ಯುತ್ತೇವೆ.
ಅಜೀಜ್ ಕಾಸರಗೋಡು ಪೆರ್ಲದಲ್ಲಿ ಹುಟ್ಟಿ ಬೆಳೆದು ಪ್ರಾಥಮಿಕ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ, ಮಂಗಳೂರಿಗೆ ಆಗಮಿಸಿ ಜೀವನ ನಿರ್ವಹಣೆಗೆ ಈ ವೃತ್ತಿಯನ್ನು ಆರಿಸಿಕೊಂಡಿದ್ದಾರೆ. ಮಾರ್ಕೆಟ್ ರಸ್ತೆಯ ಸಮೀಪ ಇವರು ಬಾಡಿಗೆ ರೂಂನಲ್ಲಿ ವಾಸವಾಗಿದ್ದಾರೆ. ೪೦ಕ್ಕೂ ಅಕ ವರ್ಷದ ವೃತ್ತಿಜೀವನದಲ್ಲಿ ೨೦ ವರ್ಷ ನಿರ್ಮಲಾ ವಸತಿ ಗೃಹದ ಕೆಳಗೆ ಕೆಲಸ ಮಾಡುತ್ತಿದ್ದರು. ಈಗ ಅಲ್ಲಿ ಅವರ ಊರಿನವರೆ ಆದ ಬೇರೊಬ್ಬರು ಇದೇ ಕಾರ್ಯ ಮಾಡುತ್ತಿದ್ದಾರೆ. ೨೦ ವರ್ಷದಿಂದ ಫಿಲಿಕ್ಸ್ ಪೈ ಬಝಾರ್ ಸಮೀಪ ರಮೇಶ ಶೆಟ್ಟಿ  ಅವರಿಗೆ ಸೇರಿದ ಸ್ಥಳದಲ್ಲಿ ಭಾರತ್ ಬ್ಯಾಗ್ ಮತ್ತು ಸೂಟ್‌ಕೇಸ್ ರಿಪೇರಿಂಗ್ ಸೆಂಟರ್ ಎನ್ನುವ  ಮಡಲಿ (ತೆಂಗಿನ ಗರಿ)ನಿಂದ  ಮಾಡಿದ ಸಣ್ಣ ಜೋಪಡಿಯಲ್ಲಿ ವೃತ್ತಿ ಮಾಡುತ್ತಿದ್ದಾರೆ.  ೬೩ ವರ್ಷದ ಅವರು ೭ ಮಕ್ಕಳಲ್ಲಿ  ಮೂವರು ಗಂಡು ಮಕ್ಕಳು ವಿದೇಶದಲ್ಲಿ ಕೆಲಸದಲ್ಲಿದ್ದು ಸಂತೃಪ್ತ ಜೀವನ ನಡೆಸುತ್ತಿದ್ದಾರೆ.
ಎಲ್ಲಾ ರೀತಿಯ ಸೂಟ್‌ಕೇಸ್‌ಗಳು, ಜರ್ಕಿನ್, ಲೇಡಿಸ್ ಬ್ಯಾಗ್, ಸ್ಕೂಲ್ ಬ್ಯಾಗ್, ಪೈಬರ್ ಸೂಟ್‌ಕೇಸ್‌ಗಳ ರಿಪೇರಿಯನ್ನು ಮಾಡುತ್ತಿದ್ದು, ಸೇವೆಯಲ್ಲಿ ಬೇದ ಬಾವ ಮಾಡದೇ ಕೆಲಸಕ್ಕೆ ತಕ್ಕ ಬೆಲೆ ನಿಗದಿಪಡಿಸುತ್ತಾರೆ. ದಿನವೊಂದಕ್ಕೆ ೫೦೦ರಿಂದ ೮೦೦ರೂಪಾಯಿ ಸಂಪಾದಿಸುತ್ತಿದ್ದರೂ ರಿಪೇರಿಗೆ ಬಳಸಿದ ವಸ್ತುಗಳ ಖರ್ಚು ಇದರಲ್ಲಿಯೇ ಸಾಗಬೇಕಿದೆ. ಹಿಂದೆ ಗಂಡುಮಕ್ಕಳು ಇವರೊಂದಿಗೆ ಕೆಲಸ ಮಾಡುತ್ತಿದ್ದರಿಂದ ಹೇಳಿದ ಸಮಯಕ್ಕೆ ಸರಿಯಾಗಿ ಒದಗಿಸುತ್ತಿದ್ದರು. ಇತ್ತೀಚಿನ ದಿನದಲ್ಲಿ ಸ್ವಲ್ಪ ವಿಳಂಭವಾಗುತ್ತಿದ್ದರೂ ಗ್ರಾಹಕರು ಸಹಿಸಿಕೊಳ್ಳುತ್ತಾರೆ. ಶಾಲಾ ದಿನದಲ್ಲಿ ಬೆಳಿಗ್ಗೆ ೯ರಿಂದ ರಾತ್ರಿ ೮ ರವರೆಗೆ  ಮತ್ತು ಭಾನುವಾರದಂದು ಮಧ್ಯಾಹ್ನದವರೆಗೆ ಕೆಲಸ ಮಾಡುತ್ತಾ ಪ್ರತಿಯೊಬ್ಬರ ನಂಬಿಕೆ ವಿಶ್ವಾಸ ಗಳಿಸಿಕೊಂಡಿದ್ದಾರೆ ಅಜೀಜ್.
ಅನೇಕ ಬಾರಿ ಬ್ಯಾಗ್ ರಿಪೇರಿಗೆಂದು ಕೊಟ್ಟು ಹೋಗಿದ್ದು ಅದನ್ನು ಮರಳಿ ತೆಗೆದುಕೊಂಡು ಹೋಗದೆ ಕಸದ ತೊಟ್ಟಿಗೆ ಹಾಕಿದ ಉದಾಹರಣೆಗಳಿವೆ. ಆ ಬ್ಯಾಗ್‌ಗಳನ್ನು ರಿಪೇರಿ ಮಾಡಿ ಇಡುವುದರಿಂದ ಅದರ ಮಷಿನ್‌ಗಳೆಲ್ಲಾ ಹಾಳಾಗಿ ಯಾರು ಉಪಯೋಗಿಸದ ಸ್ಥಿತಿ ನಿರ್ಮಾಣವಾಗುತ್ತದೆ. ಪ್ರತಿಯೊಂದು ಬ್ಯಾಗ್‌ನ ಜಿಪ್ ಹಾಕುವುದು, ಪುನಃ ಸ್ಟಿಚ್ ಮಾಡುವುದು, ಹರಿದ ಬಟ್ಟೆಯನ್ನು ತೆಗೆದು ಹೊಸ ಬಟ್ಟೆ ಕೂಡಿಸುವುದು ಹೀಗೆ ಒಂದಲ್ಲ ಹಲವಾರು ಸಣ್ಣ-ಪುಟ್ಟ ಕೆಲಸಗಳು ಇರುತ್ತವೆ. ಅದಕ್ಕೆ ಬೇಕಾದ ಸಾಮಾಗ್ರಿಗಳು ಹಳೆ ಬಸ್‌ನಿಲ್ದಾಣದ ಕೆ.ಕೆ.ಟ್ರೇಡರ್‍ಸ್‌ನಲ್ಲಿ ದೊರಕುತ್ತದೆ. ಹಲವಾರು ವರ್ಷದಿಂದ ನಿಷ್ಠೆಯಿಂದ ಕಾರ್ಯನಿರ್ವಹಿಸಿ ಶಾಲಾ ಮಕ್ಕಳಿಗೆ ಪ್ರೀತಿಯ ಅಜ್ಜನಾಗಿ, ಉಳಿದ ಗ್ರಾಹಕರಿಗೆ ಸ್ನೇಹಿತನಾಗಿ ಬ್ಯಾಗ್ ರಿಪೇರಿ ಮಾಡುತ್ತಿದ್ದಾರೆ. ದೀರ್ಘ ಅನುಭವವಿರುವ ಇವರ ಕಾರ್ಯವೈಖರಿಗೆ ಕಾಸರಗೋಡು, ಕಾಂಞಂಗಾಡ್, ಉಡುಪಿ, ಕುಂದಾಪುರ ಸೇರಿದಂತೆ ದಕ್ಷಿಣ ಕನ್ನಡದ ಜನತೆಯು ಇವರ ಜೋಪಡಿ ಅಂಗಡಿಯನ್ನು ಹುಡುಕುತ್ತಾ ಬರುತ್ತಾರೆ ಎನ್ನುವುದು ಗಮನಿಸಬೇಕಾದ ವಿಷಯವಾಗಿದೆ.




























Sunday, 5 August 2012


ದೈಹಿಕ ನ್ಯೂನತೆಯಿಂದ ಕಂಗೆಡದ ವಿಶಿಷ್ಟ ಕೈಚಳಕದ ತಬಲಾವಾದಕ ಶಿವಾನಂದ ಶೇಟ್

SHIVANANDA SHET
 ಯುವ ಜನತೆ ಪಾಶ್ಚತ್ಯ ಸಂಗೀತದ ಬೆಂಬತ್ತಿ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಆ ಸಂಸ್ಕೃತಿ ಓಲೈಸುವುದರಿಂದ ಅವರಿಗೆ ಪಾಶ್ಚಾತ್ಯದಲ್ಲೂ ಹಾಗೂ ದೇಶೀಯ ಕಲಾ ಪ್ರಕಾರಗಳಲ್ಲಿ ಪಾಂಡಿತ್ಯ ಲಭಿಸದೆ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಯುವಪ್ರತಿಭೆಗಳಿಗೆ ವೇದಿಕೆಯ ಅವಶ್ಯಕತೆಯೊಂದಿಗೆ ಅವರನ್ನು ಸತತವಾಗಿ ಪ್ರೋತ್ಸಾಹಿಸಿದಾಗಲೆ ದೇಶೀಯ ಕಲೆಯನ್ನು ಉಳಿಸುವುದಕ್ಕೆ ಸಾಧ್ಯವಿದೆ. ವ್ಯಕ್ತಿಯನ್ನು ನೋಡದೆ ಅವರಲ್ಲಿರುವ ಪ್ರತಿಭೆ ಗುರುತಿಸಬೇಕು.
ಎಸ್.ಶಿವಾನಂದ ಶೇಟ್- ವಿಕಲಚೇತನ ತಬಲಾ ವಾದಕ.









ಜಾಗತೀಕರಣದ ಯುಗದಲ್ಲಿ ಬಾಹ್ಯ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡಿ ತಮ್ಮ ಸುಂದರ ಜೀವನಕ್ಕೆ ತಿಲಾಂಜಲಿ ಇಟ್ಟವರು ಅನೇಕ ಮಂದಿ ಕಾಣ ಸಿಗುತ್ತಾರೆ. ಸೌಂದರ್ಯ, ವಿದ್ಯಾರ್ಹತೆ ಹಾಗೂ ದೈಹಿಕವಾಗಿ ಬಲಿಷ್ಠವಾಗಿದ್ದರೆ ಮಾತ್ರ ಜೀವನ ನಡೆಸಬಹುದು ಎಂದು ತಿಳಿದುಕೊಂಡಿರುವ ಆಧುನಿಕ ಯುವ ಜನತೆಗೆ ಮಾದರಿಯಾಗಿ ವೈಜ್ಞಾನಿಕ ವೇಗ ಪಡೆದುಕೊಳ್ಳುತ್ತಿರುವ ನಗರದ ಮಧ್ಯಭಾಗದಲ್ಲಿ ವಾಸವಾಗಿರುವ ವಿಕಲಚೇತನ ಪ್ರತಿಭೆ  ಶಿವಾನಂದ ಶೇಟ್ ಅಪವಾದವಾಗಿದ್ದಾರೆ.
ಅಪ್ರಕಟೀಕೃತಶಕ್ತಿಃ ಶಕ್ತೋಪಿ ಜನಸ್ತಿರಸ್ಕ್ರಿಯಾಂ ಲಭತೇ/
ನಿವಸನ್ನಂತರ್ದಾರುಣಿ ಲಂಘ್ಯೋ ವಹ್ನಿರ್ನ ತು ಜ್ವಲಿಯಃ//
ಶೀರ್ಷಿಕೆ ಸೇರಿಸಿ
ಶಕ್ತಿಶಾಲಿಯಾಗಿದ್ದರೂ ಸಹ ತನ್ನ ಮಹಿಮೆ ಪ್ರಕಟಿಸದ ಮನುಜನು ಜಗದ ಅವಜ್ಞೆಗೆ ಗುರಿಯಾಗುತ್ತಾನೆ, ಮರದೊಳಗೆ ಅಡಗಿದ ಅಗ್ನಿಯು (ಕಾಷ್ಠಗಳೆರಡರ ಘರ್ಷಣೆಯಿಂದಷ್ಟೇ ಹುಟ್ಟುವ ಬೆಂಕಿ)ಹೊರಗೆ ಕಾಣದಿರುವಾಗ ಜನರ ಉಪೇಕ್ಷೆಗಷ್ಟೇ ಅದು ತುತ್ತಾಗುವುದಲ್ಲವೇ! ಅಂತೆಯೇ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅವ್ಯಕ್ತವಾದ ಶಕ್ತಿ ಅಡಕವಾಗಿರುತ್ತದೆ. ಅದನ್ನು ನೈಜವಾದ ಹೊತ್ತಿನಲ್ಲಿ ಪ್ರಕಟ ಪಡಿಸಬೇಕು. ಕೆಲಸ ಅಸಾಧ್ಯವೆಂದು ಕೈಕಟ್ಟಿ ಕುಳಿತರೆ ಸಣ್ಣ ಕೆಲಸ ಮಾಡಲು ಸಾಧ್ಯವಿಲ್ಲ. ಅಸಾಧ್ಯವಾದುದನ್ನು ಸಾಧ್ಯವಾಗುವಂತೆ ಮಾಡುವ ಧೃಢ ನಿರ್ಧಾರದ ಹೆಜ್ಜೆಯೇ ಸಮಾಜದಲ್ಲಿ ಗುರುತಿಸುವಂತಾಗುತ್ತದೆ. ಗರುಡ ಎಷ್ಟೇ ಬಲಿಷ್ಟವಾಗಿದ್ದರೂ ಶ್ರಮ ವಹಿಸದಿದ್ದರೆ ಒಂದಡಿಯಷ್ಟು ಮುಂದೆ ಚಲಿಸಲು ಸಾಧ್ಯವಿಲ್ಲ. ಇರುವೆ ಸಾಮರ್ಥ್ಯ ಹಾಗೂ ದೇಹದ ಆಕೃತಿಯಲ್ಲಿ ಚಿಕ್ಕದಾಗಿದ್ದರೂ ಸತತ ಪ್ರಯತ್ನದಿಂದ ಸಾವಿರಾರು ಹೆಜ್ಜೆ ಕ್ರಮಿಸ ಬಲ್ಲುದಾಗಿದೆ. ಪ್ರತಿಭೆಗೆ ಯಾವುದೇ ವರ್ಗ, ಜಾತಿ ಮೇಲು-ಕೀಳು ಎನ್ನುವ ಸಾಮಾನ್ಯ ಅಂಶ ಅಡ್ಡ ಬರುವುದಿಲ್ಲ. ಸಮಾಜದಲ್ಲಿ ಅನೇಕ ಬಡ ಪ್ರತಿಭೆಗಳು ಅನುಕೂಲ ಹಾಗೂ ಅನಾನುಕೂಲತೆಗಳ ನಡುವೆಯೂ ಅಸಾಧ್ಯವಾದುದನ್ನು ಸಾಸಿದ್ದಾರೆ. ದೈಹಿಕ ನ್ಯೂನ್ಯತೆಗಳಿಂದ ಕಂಗೆಡದೆ ಅಚಲ ನಿರ್ಧಾರದ ಮೂಲಕ ತಮ್ಮ ದುರದೃಷ್ಟ ಹಳಿಯುತ್ತಾ ಕೂರದೇ ಸಿಕ್ಕಿದ ಸಮಯ ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಗಮನ ಸೆಳೆಯುವ ಕಾರ್ಯ ಮಾಡಿದ್ದಾರೆ.
ಮಂಗಳೂರು ನಗರ ಮದ್ಯಭಾಗದಲ್ಲಿ ವಾಸವಾಗಿರುವ ಶಿವಾನಂದ ಶೇಟ್ ಜನ್ಮದತ್ತವಾಗಿ ದೊರಕಿದ ಊನತೆಯನ್ನು ಶಾಪವಾಗಿ ಸ್ವೀಕರಿಸದೆ ಅದನ್ನು ವರವಾಗಿ ಸ್ವೀಕರಿಸಿದ್ದಾರೆ. ಪೋಲಿಯೊ ರೋಗದ ಪರಿಣಾಮದಿಂದ ತನ್ನ ಎರಡು ಕಾಲುಗಳ ಬೆಳವಣಿಗೆ ಕುಂಠಿತಗೊಂಡು ಎರಡು ಕೈಗಳನ್ನೆ ಕಾಲುಗಳನ್ನಾಗಿ ಬಳಸಿಕೊಂಡಿರುವುದು ಮಾತ್ರವಲ್ಲದೆ ಅದ್ಬುತವಾಗಿ ತಬಲವಾದನ ಮಾಡುತ್ತಾರೆ ಎಂದಾಗ ಆಶ್ಚರ್ಯ ಪಡಲೇಬೇಕು. ಸಾಸಿದರೆ ಸಬಳವನ್ನಾದರೂ ನುಂಗಬಹುದು ಎನ್ನುವ ನಾಣ್ಣುಡಿ ಇಂಥವರನ್ನು ನೋಡಿಯೇ ಹೇಳಿರಬೇಕು ಅಲ್ಲವೇ...
ಕೇರಳದ ಕೊಲ್ಲಂನಲ್ಲಿ ೧೯೫೯ ನವೆಂಬರ್ ೨೮ ರಂದು ಜನಿಸಿದ ಶಿವಾನಂದರು ಹುಟ್ಟಿದ ೬ ತಿಂಗಳು  ಮಾತ್ರ ಅಲ್ಲಿದ್ದು  ನಂತರ ತಂದೆ-ತಾಯಿ ಮಂಗಳೂರಿಗೆ ಬಂದು ನೆಲೆ ನಿಂತಿದ್ದಾರೆ. ಅಂಚೆ ಇಲಾಖೆಯ ಉದ್ಯೋಗಿಯಾಗಿ, ವಾಯ್‌ಲಿನ್ ವಾದಕರಾಗಿದ್ದ ಶ್ರೀನಿವಾಸ ರಾವ್ ಹಾಗೂ ರತ್ನಾಬಾಯಿ ದಂಪತಿಗಳ ಮೂರನೇ ಮಗನಾಗಿ ಜನಿಸಿದ ಇವರು ೭ ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಅಣ್ಣಂದಿರಾದ ವೆಂಕಟಗಿರಿ, ಶ್ಯಾಮ್‌ಸುಂದರ್ ಇವರಂತೆ ಕಲೆಯಲ್ಲಿ ಆಸಕ್ತಿ ತಳೆದು ವಾಯ್‌ಲಿನ್, ತಬಲಾ ಅಭ್ಯಾಸ ಮಾಡಿದ್ದಾರೆ. ಅವಿಭಕ್ತ ಕುಟುಂಬದ ಸದಸ್ಯರೆಲ್ಲಾ ಕಲಾಮಾತೆಯನ್ನು ಆರಾದಿಸುತ್ತಾ ಒಂದೊಂದು ಕಲೆಯಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಬಾಲಕನಾಗಿದ್ದಾಗ ನಗರದ ಪಳ್ನೀರ್‌ನಲ್ಲಿರುವ ಸತ್ಯಸಾಹಿ ಮಂದಿರದಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮಕ್ಕೆ ಪರರನ್ನು ಅವಲಂಬಿಸಿ ಹೋಗುತ್ತಿದ್ದರು. ಭಜನಾ ಕಾರ್ಯಕ್ರಮಕ್ಕೆ ಉಪಯೋಗಿಸುತ್ತಿದ್ದ ಪರಿಕರ ನೋಡಿ ಆಕರ್ಷಿತನಾಗಿ ಮನದಲ್ಲಿ ಏನನ್ನಾದರೂ ಸಾಸಬೇಕು ಎನ್ನುವ ಆಸೆಯ ಬೀಜ ಮೊಳಕೆಯೊಡೆದು ಅದುವೆ ಹೆಮ್ಮರವಾಗಿ ನಿರ್ಧಾರ ಅಚಲವಾಯಿತು. ಸಂಪೂರ್ಣ ಭಜನಾ ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಎರಡು ಡಬ್ಬಿ  ಇಟ್ಟು ಕೊಂಡು ಬಾರಿಸುತ್ತಿದ್ದರು. ಭಜನೆಯ ಹುಚ್ಚು ತಬಲಾ ವಾದನದತ್ತ ಆಸಕ್ತಿ ತಳೆಯುವಲ್ಲಿ ಪ್ರೇರಣೆಯಾಗಿರುವುದಲ್ಲದೆ ಕ್ಯಾಸೆಟ್ಟು, ಟಿವಿ, ಆಕಾಶವಾಣಿ ಸಂಗೀತ ಕಾರ್ಯಕ್ರಮಕ್ಕೆ ಕಿವಿಯಾಗಿ ಸಂಗೀತ ಜ್ಞಾನದೊಂದಿಗೆ ತಬಲಾವಾದನದ ಒಂದೊಂದೆ ಮಟ್ಟುಗಳನ್ನು ಅರಗಿಸಿಕೊಂಡರು.
ಕೋತಿ ಭಾರಃ ಸಮರ್ಥನಾಂ ಕಿಂ ದೂರಂ ವ್ಯವಸಾಯಿನಾಮ್/
ಕೋ ವಿದೇಶಃ ಸುವಿದ್ಯಾನಾಂ ಕಃ ಪರಃ ಪ್ರಿಯವಾದಿನಾಮ್//
ಸಮರ್ಥರಿಗೆ ಯಾವುದು ತಾನೇ ಭಾರ? ಶ್ರಮ ಪಡಬಲ್ಲವರಿಗೆ ಯಾವುದು ತಾನೇ ದೂರ? ವಿದ್ಯಾವಂತರಿಗೆ ಯಾವುದು ತಾನೇ ಪರದೇಶ? ಒಳ್ಳೆಯ ಮಾತನಾಡಬಲ್ಲವರಿಗೆ ಯಾರು ತಾನೇ ಅಪರಿಚಿತರು? ಶಿವಾನಂದರಿಗೆ ಸಾಮರ್ಥ್ಯವಿದೆ ಎನ್ನುವುದನ್ನು ಧೃಡ ಮನಸ್ಸಿನಿಂದ ನಿರ್ಧರಿಸಿದ್ದರ ಪರಿಣಾಮದಿಂದಲೇ ಹಲವಾರು ಕಾರ್ಯಕ್ರಮ ನೀಡಲು ಸಾಧ್ಯವಾಗಿದೆ. ಶಿವಾನಂದರ ಕಲಾ ಆಸಕ್ತಿ ಗಮನಿಸಿ ಪೋಷಕರು ಗುರುವಿನಿಂದ ವಿದ್ಯೆ ಕೊಡಿಸಬೇಕು ಎನ್ನುವುದಕ್ಕಾಗಿ ನಾರಾಯಣ ಸುವರ್ಣ ಬೋಳಾರ ಅವರಲ್ಲಿ ಸೇರಿಸಿದ್ದರು. ಸತತ ೨ ವರ್ಷ ಅಭ್ಯಾಸ ಮಾಡಿದ್ದರು. ಪಂಡಿತ್ ಓಂಕಾರನಾಥ ಗುಲ್ವಾಡಿ ಅವರಿಂದ ಒಂದು ವಾರಗಳ ಕಾಲ ತಬಲಾ ಪ್ರಾತ್ಯಕ್ಷಿಕಾ ಶಿಬಿರದಲ್ಲಿ ಭಾಗವಹಿಸಿ ಕಲಿತದ್ದು ಹೊರತುಪಡಿಸಿ ಯಾವುದೇ ತರಗತಿಗೆ ಹೋಗದೇ ಸ್ವ-ಪ್ರೇರಣೆ ಹಾಗೂ ಆಸಕ್ತಿಯಿಂದ ಕಲಿತು ರಾಜ್ಯ, ಹೊರರಾಜ್ಯಗಳಲ್ಲಿ ಹಲವಾರು ಕಾರ್ಯಕ್ರಮ ನೀಡಿದ್ದಾರೆ. ೧೯ ವರ್ಷದವರೆಗೆ ಮಗನ ಆಸೆಗೆ ತಣ್ಣಿರೆರೆಚದೆ ಸಂಗೀತ ವೃಕ್ಷಕ್ಕೆ ಪ್ರೀತಿಯ ನೀರನ್ನು ಸುರಿದರು. ಮಗ ಇಚ್ಚಿಸಿದ ಕಾರ್ಯಕ್ರಮಕ್ಕೆ ಅವರನ್ನು ಎತ್ತಿಕೊಂಡು ಸಾಗಿರುವುದರ ಪರಿಣಾಮ ಶಿವಾನಂದರು ಸಮಾಜದಲ್ಲಿ ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗಿದೆ.
ಹಸಿ ಮಡಕೆಯ ಮೇಲೆ ರಚಿಸಿದ ಚಿತ್ರ ವಿಚಿತ್ರ ರೇಖೆಗಳು ಮಡಕೆಯನ್ನು ಸುಟ್ಟಾಗಲೂ ಹೇಗೆ ಅಚ್ಚಳಿಯದೆ ಉಳಿಯುತ್ತದೊ ಚಿಕ್ಕಂದಿನಲ್ಲಿ ಕಲಿತ ವಿದ್ಯೆ ಸಮಾಜದಲ್ಲಿ ವ್ಯಕ್ತಿಯ ವ್ಯಕ್ತಿತ್ವ ನಿರ್ಮಿಸಲು ಸಹಕಾರಿಯಾಗುತ್ತದೆ ಎನ್ನುವುದಕ್ಕೆ ಶಿವಾನಂದ ಶೇಟ್ ಜ್ವಲಂತ ಸಾಕ್ಷಿಯಾಗಿದ್ದಾರೆ. ತಬಲಾ ವಾದನ ಮಾತ್ರವಾಗಿರದೆ ಮರದ ಕೆತ್ತನೆಯ ವಿನ್ಯಾಸ ರಚಿಸುವ ಕಾರ್ಯದಲ್ಲೂ ಪಳಗಿದ್ದಾರೆ. ಇವರು ರಚಿಸಿದ ದೇವರ ಮಂಟಪ ಇಂದಿಗೂ ಮನೆಯಲ್ಲಿದೆ. ಮರದ ಕೆತ್ತನೆಗೆ ವಿನ್ಯಾಸ ರಚಿಸಿದಾಗ ಸ್ವಲ್ಪ ವ್ಯತ್ಯಾಸವಾದರೂ ಅವರೂ ಸಹಿಸುವುದಿಲ್ಲ. ಅಲ್ಲದೇ ೧೦೦ಕ್ಕಿಂತಲೂ ಹೆಚ್ಚು ದೇಶ-ವಿದೇಶದ ಅಂಚೆ ಚೀಟಿ ಸಂಗ್ರಹಿಸಿರುವುದು ಅವರ ಆಸಕ್ತಿಗೆ ಕೈಗನ್ನಡಿಯಾಗಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಂವೇದನಾ ಕಾರ್ಯಕ್ರಮದಲ್ಲಿ ಸೋಲೋ ತಬಲಾ ಪ್ರದರ್ಶನ ಮಾಡಿರುವುದು ಶಿವಾನಂದರ ಜೀವಮಾನದ ಪ್ರಥಮ ಪ್ರದರ್ಶನವಾಗಿದೆ. ಪ್ರಸಿದ್ಧ ಸಂಗೀತ ನಿರ್ದೇಶಕ ಎಂ.ಎಸ್.ಗಿರಿಧರ್ ಅವರನ್ನು ಸ್ಟುಡಿಯೋ ರೆಕಾರ್ಡಿಂಗ್‌ಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅನೇಕ ವೇದಿಕೆ ಒದಗಿಸಿದ್ದಾರೆ. ಕಲಾವಿದ ವೆಂಕಟೇಶ ಮೂರ್ತಿ ಅವರ ಸಹಕಾರವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾರೆ. ಪ್ರಸಿದ್ದ ಕಲಾವಿದರೊಂದಿಗೆ ಭಕ್ತಿಗೀತೆ, ಸುಗಮ ಸಂಗೀತ, ಭಜನಾ ಕಾರ್ಯಕ್ರಮದಲ್ಲಿ ತಬಲಾವಾದಕರಾಗಿ ಕಾರ್ಯಕ್ರಮ ನೀಡಿರುವುದು ಇವರ ಸಾಧನೆಯ ಇನ್ನೊಂದು ಮುಖವಾಗಿದೆ. ತಂತ್ರಜ್ಞಾನ ವೇಗ ಪಡೆದುಕೊಂಡಿರುವ ಪ್ರಸ್ತುತ ಕಾಲಘಟ್ಟದಲ್ಲಿ ಶಿವಾನಂದರಿಗೆ ವೇದಿಕೆಯ ಅವಶ್ಯಕತೆಯಿದೆ. ಹಲವಾರು ಸಂಘಸಂಸ್ಥೆಗಳು ಇವರಿಗೆ ವೇದಿಕೆ ನಿರ್ಮಿಸಿಕೊಟ್ಟಿದ್ದರೂ ಮುಂದಿನ ದಿನದಲ್ಲಿ ವಿಕಲಚೇತನ ಕಲಾವಿದರನ್ನು ಗುರಿಯಾಗಿಸಿ ಅವರನ್ನು ಪ್ರೋತ್ಸಾಹಿಸಲು ಸೂಕ್ತ ವೇದಿಕೆ ನಿರ್ಮಿಸಿ ಕೊಡಬೇಕಾಗಿದೆ. ಆಗಲೇ ಅವರ ಸಾಧನೆಗೆ ತಕ್ಕ ಫಲ ಸಿಕ್ಕಂತಾಗುತ್ತದೆ.


ಮಗನ ಮನದಲ್ಲಿ ವಿಕಲಾಂಗ ಎನ್ನುವ ಭಾವನೆಯನ್ನು ತೋರಗೊಡದೆ ಅವನಲ್ಲಿ ಅಡಕವಾಗಿರುವ ಪ್ರತಿಭೆ ಸಮಾಜಕ್ಕೆ ತೋರ್ಪಡಿಸಬೇಕು ಎನ್ನುವ ಉದ್ದೇಶದಿಂದ ಪ್ರೋತ್ಸಾಹ ನೀಡಿದೆವು. ಅವನು ಆಸೆ ಪಟ್ಟ ಸಮಾರಂಭಗಳಿಗೆ ಎತ್ತಿಕೊಂಡು ಹೋಗಿ ಬರುತ್ತಿದ್ದೆವು. ಆವತ್ತು ಅವನಲ್ಲಿ ಆತ್ಮವಿಶ್ವಾಸವನ್ನು ತುಂಬಿದ್ದರಿಂದ ಇಂದು ಉತ್ತಮ ಕಾರ್ಯಕ್ರಮ ಕೊಡಲು ಶಕ್ತನಾಗಿದ್ದಾನೆ.
ರತ್ನಾಬಾಯಿ- ಶಿವಾನಂದರ ತಾಯಿ









ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇ ದಾಳಿ: ಭಾರತೀಯ ಸಂಸ್ಕೃತಿಗೆ ಸವಾಲು  

ತುಂಡುಡುಗೆಯ ಹೆಣ್ಣು ಮಕ್ಕಳ ಕಣ್ಣೀರಿಗೆ ಬೆಂಬಲಿಸಿದ ಪ್ರಜ್ಞಾವಂತ.....

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ೬೫ ವರ್ಷಗಳಾಗಿದ್ದು ಅದನ್ನು ಸಂಪೂರ್ಣ ಅನುಭವಿಸಿದ್ದೇವೆಯೋ ಎಂದಾಗ ಉತ್ತರ ಮಾತ್ರ ಶೂನ್ಯ. ಸ್ವಾತಂತ್ರ್ಯ ಸಿಕ್ಕಿದೆ ಎಂದು ಸಂಭ್ರಮ ಆಚರಣೆ ಮಾಡಿದರೂ  ಇತ್ತೀಚಿನ ದಿನದಲ್ಲಿ ನಡೆಯುತ್ತಿರುವ ಪರಿಸ್ಥಿತಿ ಗಮನಿಸಿದರೆ ಯಾಕೋ ಸಂಶಯ ಹುಟ್ಟುತ್ತದೆ. ಮಂಗಳೂರಿನಲ್ಲಿ ನಡೆದ ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇ ಮೇಲೆ ದಾಳಿಯ ಸಂದರ್ಭ ಬುದ್ದಿಜೀವಿ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಂಘ, ಲೇಖಕರು ಹಾಗೂ ರಾಜಕೀಯ ನಾಯಕರು ತಮಗೆ ಸಿಕ್ಕಿದ ಅವಕಾಶ ಎನ್ನುವ ತೆರದಲ್ಲಿ ಸ್ವಲ್ಪವೂ ಮುಂದಾಲೋಚನೆ ಮಾಡದೆ ತಪ್ಪು ಒಪ್ಪುಗಳ ವಿಮರ್ಶೆ ಮಾಡದೆ ಏಕಮುಖವಾಗಿ ಹೇಳಿಕೆ ನೀಡುತ್ತಾರೆ ಎಂದಾಗ ೧೯೪೭ ಸ್ವಾತಂತ್ರ್ಯದ ಕುರಿತು ದಲಿತ ಕವಿ ಸಿದ್ದಲಿಂಗಯ್ಯ ಹೇಳಿದ ಮಾತು  ನೆನಪಿಗೆ ಬರುತ್ತದೆ ಮಾತ್ರವಲ್ಲ ಅದುವೆ ಗಾಡವಾಗಿ ಕಾಡಲು ಹಾಗೂ ತರ್ಕಿಸಲು ಅಣಿ ಮಾಡಿದೆ. ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತಮಾತೆ ಬಿಡುಗಡೆಯಾದಳೇನೊ ನಿಜ? ಆದರೆ ದೇಶದ ಅಸ್ತಿಯಾದ ರೈತಾಪಿ ಜನ ಅಥವಾ ಬಡ ಜನತೆಯ ಪಾಲಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನುವ ನೈಜ ಸಂಗತಿಯನ್ನು ಪದ್ಯ ರೂಪವಾಗಿ ಹೇಳಿರುವುದು ಎಲ್ಲರಿಗೂ ತಿಳಿದಿದೆ.
ಯಾರಿಗೆ ಬಂತು ಎಲ್ಲಿಗೆ ಬಂತು ೪೭ರ ಸ್ವಾತಂತ್ರ್ಯ
ಪೊಲೀಸರ ಬೂಟಿಗೆ ಬಂತು,
ವಕೀಲರ ಕೋಟಿಗೆ ಬಂತು,
ಶ್ರೀಮಂತರ ಕೋಣೆಗೆ ಬಂತು
ಬಡವರ ಮನೆಗೆ ಬರಲಿಲ್ಲ.. ಈ ಸ್ವಾತಂತ್ರ್ಯದ ಜ್ಯೋತಿ ಎಂದಿರುವುದು ಅಕ್ಷರಶಃ ಸತ್ಯ.
ಜು.೨೮ ರಂದು ಪಡೀಲ್‌ನ ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇ ದಾಳಿ ನಡೆದ ಸಂದರ್ಭ ಬರ್ತ್‌ಡೇ ಪಾರ್ಟಿ ಆಚರಿಸುತ್ತಿದ್ದ ಎಂಟು ಮಂದಿ ಹುಡುಗರು ಹಾಗೂ ಐದು ಮಂದಿ ಹುಡುಗಿಯರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಲಾಯಿತು. ಈ ಘಟನೆಯನ್ನು ಮಾನವೀಯ ನೆಲೆಯಿಂದ ಗಮನಿಸಿದರೆ ಹೆಣ್ಣು ಮಕ್ಕಳ ಮೇಲೆ ಕೈ ಮಾಡಿರುವುದು ತಪ್ಪು. ಪ್ರಜ್ಞಾವಂತ ನಾಗರಿಕ ಇದನ್ನು ಸಹಿಸುವುದಿಲ್ಲ. ಆದರೆ ನಮ್ಮ ದೇಶದ ಸಂಸ್ಕೃತಿ ಯಾವುದು? ಅದರ ಮರ್ಮವೇನು? ದೇಶದಲ್ಲಿ ಹೆಣ್ಣಿಗೆ ನೀಡಿರುವ ಸ್ಥಾನಮಾನವಾದರೂ ಯಾವುದು? ಮಹಾಭಾರತದಲ್ಲಿ ಇಚ್ಚಾಮರಣಿ ಭೀಷ್ಮನೆದರು ಶಿಖಂಡಿ ಯುದ್ದಕ್ಕೆ ನಿಂತಾಗ ಯುದ್ದ ಮಾಡದೇ ಶರಣಾಗಿ ಮರ್‍ಯಾದೆ ನೀಡಿದ ನಮ್ಮ ದೇಶದಲ್ಲಿ ನಡೆದ ಈ ಘಟನೆಯನ್ನು ಯಾರು ತಾನೇ ಸಹಿಸಿಯಾರು?
ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ
ಎಲ್ಲಿ ನಾರಿಯರು ಸಂತೋಷದಿಂದ ಇರುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಗಾಂದೀಜಿ ಒಂದೆಡೆ ಹೆಣ್ಣೋರ್ವಳು ಮದ್ಯರಾತ್ರಿ ಒಬ್ಬಳೆ ನಿರ್ಭಯವಾಗಿ ಹೋಗುತ್ತಾಳೊ ಆಗಲೇ ಸ್ವತಂತ್ರ್ಯ ಸಿಕ್ಕಿದೆ ಎಂದು ತಿಳಿಯಬಹುದು. ಆದರೆ  ಮುಸ್ಸಂಜೆ ಹೊತ್ತಿನಲ್ಲಿ ಹೆಣ್ಣುಮಕ್ಕಳ ಮೇಲೆ ಕೈ ಮಾಡಿರುವುದು ಸಭ್ಯ ನಾಗರಿಕ ಕ್ಷಮಿಸುವುದಿಲ್ಲ. ಅದನ್ನು ನಾನು ಕೂಡ ಖಂಡಿಸುತ್ತೇನೆ.
ಈ ಘಟನೆ ಆದ ಮೂರು ದಿನದ  ನಂತರ ಆ ಸ್ಥಳವನ್ನು ಒಮ್ಮೆ ನೋಡಬೇಕು ಎನ್ನುವ ನಿಟ್ಟಿನಲ್ಲಿ ಅಲ್ಲಿಗೆ  ಹೋದಾಗ ನನ್ನ ಮನದಲ್ಲಿ ಮೂಡಿದ ಸಂಶಯವಿಷ್ಟೇ? ಅವರು ಇಂತಹ ಸ್ಥಳದಲ್ಲಿ ಹುಟ್ಟಿದ ಹಬ್ಬ ಆಚರಿಸುತ್ತಿದ್ದರೊ ಅಥವಾ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದರೊ ಎನ್ನುವ ಸಂಶಯ ಹುಟ್ಟಿಕೊಂಡಿದೆ. ಆ ಯುವಕ ಯುವತಿಯರು ಸಭ್ಯರಾಗಿದ್ದರೆ ಹುಟ್ಟಿದ ಹಬ್ಬವನ್ನು ನಗರ ಪ್ರದೇಶದ ಹೊರತಾಗಿ ಗುಡ್ಡದ ಮೇಲಿನ ಕೊನೆಯಲ್ಲಿರುವ ಮನೆಯನ್ನು ಯಾಕೆ ಆರಿಸಿಕೊಳ್ಳುತ್ತಿದ್ದರು? ಅಲ್ಲದೆ ಪೋಷಕರೊಂದಿಗೆ ಹುಟ್ಟಿದ ಹಬ್ಬ ಆಚರಿಸಿ ಕೊಳ್ಳಬಹುದಿತ್ತು ತಾನೇ? ರಾತ್ರಿಯಲ್ಲಿ ಗುಡ್ಡಗಾಡಿನ ಮನೆಯೊಂದರಲ್ಲಿ ಬರ್ತ್‌ಡೇ ಪಾರ್ಟಿ ಆಚರಿಸುವುದಾದರೆ ಪೊಲೀಸರಿಗೆ ಮಾಹಿತಿ ನೀಡಿ ಅವರಿಂದ ಅನುಮತಿ ಪಡೆಯ ಬೇಕಿತ್ತು? ಬರ್ತ್‌ಡೇ ಆಚರಿಸುವಾಗ ಅವರು ಹೋಗುವಾದ ಧರಿಸಿದ್ದ ಬಟ್ಟೆಯನ್ನು ತೆಗೆದು ತುಂಡುಡುಗೆ ಧರಿಸುವ ಪ್ರಮೇಯವಾದರು ಏನು? ಹೀಗೆ ಆಲೋಚಿಸುತ್ತಾ ಹೋದರೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆಯೇ ವಿನಃ ಅದಕ್ಕೆ ಉತ್ತರ ಸಿಗುವುದು ಕಷ್ಟವೆನಲ್ಲ. ಇದರಿಂದಲೇ ನಿಜಾಂಶ  ತಿಳಿಯಬಹುದು.
ಈ ಘಟನೆಗೆ ತಕ್ಕಂತೆ ಮಾಧ್ಯಮ, ವಿವಿಧ ಸಂಘಟನೆಗಳು ಆ ವಿಷಯವನ್ನೇ ಹಿಗ್ಗಾಮುಗ್ಗಾ ಎಳೆದಾಡುತ್ತಾ ಟಿಆರ್‌ಪಿ ಜಾಸ್ತಿ ಮಾಡಿಕೊಳ್ಳುತ್ತಿದ್ದಾವೆಯೇ ವಿನಃ ಅವರಲ್ಲಿ ಯಾರಿಗೂ ಅನ್ಯಾಯವಾದವರಿಗೆ ನ್ಯಾಯ ಒದಗಿಸಬೇಕು ಎನ್ನುವ ಕಾಳಜಿ ಇಲ್ಲಾ ಎನ್ನುವುದು ಸ್ಪಷ್ಟ.  ಪಡೀಲ್ ಘಟನೆಯಲ್ಲಿ ೮ ಮಂದಿ ಹಾಗೂ ೫ ಯುವತಿಯರು ಶ್ರೀಮಂತ ಕುಟುಂಬಕ್ಕೆ ಸೇರಿದ್ದು, ಪೊಲೀಸ್ ಅಧಿಕಾರಿಯ ಮಗಳು ಕೂಡ ಸೇರಿದ್ದಳು. ಈವರೆಗೆ ಅನ್ಯಾಯಕ್ಕೆ ಒಳಗಾದವರು ಯಾರು ದೂರು ನೀಡದಿರುವುದು ತಮ್ಮಿಂದ ತಪ್ಪಾಗಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಂತೆ ಅಲ್ಲವೇ? ಆದರೆ ಅವರಿಗೆ ಅನ್ಯಾಯವಾಗಿದೆ  ನ್ಯಾಯ ಒದಗಿಸಿಕೊಡಬೇಕು ಎನ್ನುವ ಸಂಘಟನೆಗಳು ಈ ಘಟನೆ ನಡೆಯುವುದಕ್ಕೆ ವಾರದ ಮುಂಚೆ ಬೆಂಗಳೂರಿನಿಂದ ಮಂಡ್ಯಕ್ಕೆ ಹೊರಟ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಅನೈತಿಕ ಚಟುವಟಿಕೆಗೆ ಕರೆದು ಪ್ರೋತ್ಸಾಹ ನೀಡದೆ ಇದ್ದಾಗ ರೈಲಿನಿಂದ ಹೊರಗೆ ದೂಡಿದರಲ್ಲ? ಕುಟುಂಬದ ಹೊರೆ ಹೊತ್ತ ಯುವತಿಯ ಬಾಳು ಕತ್ತಲೆಯಲ್ಲಿ ಕಳೆಯುವಂತಾಯಿತಲ್ಲಆಗ ಸಂಘಟನೆಗಳು ಯಾಕೆ ಕೈಕಟ್ಟಿ ಕುಳಿತಿರುವುದು ಸ್ವಾಮಿ? ಈ ಎರಡು ಘಟನೆ ನೋಡಿದಾಗ ಒಂದು ಕಣ್ಣಿಗೆ ಬೆಣ್ಣೆ  ಇನ್ನೊಂದು ಕಣ್ಣಿಗೆ ಸುಣ್ಣ ಸವರುತ್ತಿದ್ದಾರೆ ಎನ್ನುವುದು ನಿಜವಲ್ಲವೇ? ಅಥವಾ ಚುನಾವಣೆಯ ಮುನ್ಸೂಚನೆಯೇ? ಶ್ರೀಮಂತಿಕೆಯ ದರ್ಪ ಮೀತಿ ಮೀರಿ ಅನ್ಯ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಯುವತಿಯರ ಮೇಲೆ ದಾಳಿ ನಡೆದಾಗ ಅವರಿಗೆ ಸಾಂತ್ವಾನ ಹೇಳುವ ದೊಡ್ಡ ಸಮೂಹವೆ ರಾಜ್ಯದಲ್ಲಿ ಹುಟ್ಟಿಕೊಂಡಿತು. ತನ್ನ ಪಾಡಿಗೆ ಕರ್ತವ್ಯ ನಿರ್ವಹಿಸಿ ತಂದೆ ತಾಯಿಯ ಮುಖವನ್ನು ನೋಡಬೇಕು ಎಂದು ತವಕದಿಂದ ಹೋಗುವಾಗ  ಕಾಮಪಿತ್ತ ನೆತ್ತಿಗೇರಿದ ನಾಲ್ವರ ಯುವಕರ ಗುಂಪು ಬಡ ಯುವತಿ ಲೈಂಗಿಕ ಚಟುವಟಿಕೆಗೆ ಪ್ರೋತ್ಸಾಹ ನೀಡದಿದ್ದಾಗ ಚಲಿಸುತ್ತಿರುವ ರೈಲಿನಿಂದ ಹೊರಕ್ಕೆ ದೂಡಿದರಲ್ಲ ಆಗ ಎಲ್ಲಿ ಹೋಗಿದೆ ಸ್ವಾಮಿ ಇವರ ಮಾನವೀಯತೆ?  ಮನೆಯ ಮಗಳಾಗಿ ಬಾಳಿ ಬದುಕಬೇಕಾದ ಬಡ ಹೆಣ್ಣು ಮಗಳ ದುಃಖಕ್ಕೆ ಸಾಕ್ಷಿಯಾಗುವವರು ಯಾರಿದ್ದಾರೆ.
ಮಾರ್ನಿಂಗ್ ಮಿಸ್ಟ್‌ನಲ್ಲಿ ಬರ್ತ್‌ಡೇ ಪಾರ್ಟಿ ಆಯೋಜಿಸಿದ್ದ ಡಿಜೆ ವಿಜಯ್ ಹಾಗೂ ಗುರುದತ್ತ ಅವರು ದೊಡ್ಡ ದೊಡ್ಡ ಹೊಟೇಲ್‌ಗಳಲ್ಲಿ ಡಿಜೆ ನಡೆಸಿ ಹೆಣ್ಣು ಮಕ್ಕಳ ಸಂಪರ್ಕ ಬೆಳೆಸಿ ಅನ್ಯಚಟುವಟಿಕೆಗೆ ಹೆಣ್ಣು ಮಕ್ಕಳನ್ನು ಅಣಿಗೊಳಿಸುವ ಕೆಲಸವೆ ಇವರದಾಗಿರುವಾಗ ಅವರ ಮೇಲೆ ನಂಬಿಕೆ ಬರಲು ಸಾಧ್ಯವಿದೆಯೇ? ಗುರುದತ್ತನ ತಾಯಿ ತಾನೇ ಮಗನನ್ನು ಪಾರ್ಟಿಗೆ ಬಿಟ್ಟು ಬಂದಿದ್ದೇನೆ ಎಂದು ಹೇಳಿದಾಗ ದಾಳಿಗೊಳಗಾದವರ ಪೊಷಕರು ಮಕ್ಕಳ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಸಂತೋಷವಾಗಿತ್ತು. ಉಳಿದ ಪೋಷಕರ ಮನಸ್ಸಿಗೆ ನೋವಾಗಿದೆ ನಿಜ. ಆದರೆ ಗುರುದತ್ತನ ತಾಯಿಯ ನೈಜ ವಿಷಯ ತಿಳಿದುಕೊಂಡಾಗ ಇಂಥವರು ಇರುತ್ತಾರೆಯೊ ಎನ್ನುವ ಸಂಶಯದ ಕಿಡಿ ಹುಟ್ಟಿಕೊಳ್ಳುತ್ತದೆ. ಗುರುದತ್ತನ ತಾಯಿ ನಗರದ ಚಿಲಿಂಬಿಯಲ್ಲಿ ಮಸಾಜ್ ಪಾರ್ಲರ್ ನಡೆಸುತ್ತಿದ್ದು ೨೦೦೯ರಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿರುವ ಮಾಹಿತಿ ಪಡೆದು ಪೊಲೀಸರು ರೈಡ್ ಮಾಡಿದಾಗ ಸಿಕ್ಕಿ ಬಿದ್ದು ಅದನ್ನು ನಿಲ್ಲಿಸಲಾಗಿತ್ತು. ತಾಯಿಯೇ ಅನೈತಿಕ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾಳೆ ಎಂದಾಗ ಘನಂದಾರಿ ಮಗ ಎಷ್ಟರ ಮಟ್ಟಿಗೆ ಸಾಚಾ? ತಿಳಿಯುವುದು ನಿಮ್ಮ ಬುದ್ಧಿಮತ್ತೆಗೆ ಬಿಟ್ಟಿದ್ದೇನೆ.
ಪ್ರತಿಭಟನೆ ನಡೆಸುವಾಗ ಅನೇಕರು ದೇಹದಲ್ಲಿ ಕನಿಷ್ಟ ಬಟ್ಟೆ ಧರಿಸಿದರೆ ತಪ್ಪೇನು? ಎಂದಾಗ ಭವ್ಯ ಭಾರತದಲ್ಲೂ ಈ ಮಾತುಗಳು ಬರುತ್ತವೆ ಎಂದಾಗ ನಮ್ಮ ದೇಶದ ಸಂಸ್ಕೃತಿ ಎಲ್ಲಿಗೆ ತಲುಪುತ್ತಿದೆ. ಕಾಯೇಷು ದಾಸಿ, ಕರಣೇಶು ಮಂತ್ರಿ, ಬೋಜ್ಯೇಷು ಮಾತಾ, ರೂಪೇಚಾ ಲಕ್ಷ್ಮೀ, ಶಯನೇಷು ವೇಶ್ಯಾ, ಕ್ಷಮಯಾ ಧರಿತ್ರಿ- ಆರು ಗುಣಗಳುಳ್ಳ ನಾರಿ ಉತ್ತಮ ಸಂಸಾರ ನಿರ್ವಹಣೆ ಮಾಡಿ ಸಂಸ್ಕಾರವನ್ನು ಕಲಿಸುತ್ತಾಳೆ. ಇವಳಿಂದಲೇ ಭವಿಷ್ಯತ್ತಿನ ಪ್ರಜೆಗಳ ನಿರ್ಮಾಣವಲ್ಲವೇ. ಮಾರ್ನಿಂಗ್ ಮಿಸ್ಟ್‌ನ ಘಟನೆ ಗಮನಿಸಿದರೆ ಆಧುನಿಕ ನಾರಿಮಣಿಗಳಿಂದ ಭವಿತವ್ಯದ ಭಾರತ ನಿರ್ಮಾಣ ಸಾಧ್ಯವೇ? ಎನ್ನುವ ಅನುಮಾನ ಕಾಡುತ್ತದೆ. ಗುರುದತ್ತನ ತಾಯಿ ಹಾಗೂ ಅರೆ-ಬರೆ ಬಟ್ಟೆ ತೊಟ್ಟ ಐವರು ಯುವತಿಯರನ್ನು ನೋಡಿದಾಗ ಮೇಲಿನ ಮಾತಿಗೆ ವ್ಯತಿರಿಕ್ತವಾಗಿದ್ದಾರೆ ಎಂದು ಅನಿಸುವುದಿಲ್ಲವೇ?
ಅರೆಬರೆ ಬಟ್ಟೆ ತೊಟ್ಟದ್ದರಿಂದ ಏನಾಯ್ತು ಎನ್ನುವ ಸಾಮಾನ್ಯ ಪ್ರಶ್ನೆ ಕೇಳುವವರಿಗೆ ಲಂಡನ್ ಒಲಿಂಪಿಕ್ಸ್ ಯಾಕೆ ಮಾದರಿಯಾಗುವುದಿಲ್ಲ. ಹಿಂದು ಸಂಸ್ಕೃತಿಯಲ್ಲಿ ಮೈತುಂಬಾ ಬಟ್ಟೆ ಧರಿಸುವುದು, ಹಣೆಗೆ ಕುಂಕುಮ ಇಡುವುದು ಪದ್ಧತಿಯಾದರೂ ಅದನ್ನು ವಿದ್ಯಾವಂತರು ಇಂದು ಯಾರು ಪಾಲಿಸುತ್ತಿಲ್ಲ. ಆಧುನಿಕ ಶಿಕ್ಷಣಕ್ಕೆ ಮಾರುಹೋಗಿ ಭಾರತೀಯತೆ ಮರೆಯುತ್ತಾ ಸಾಗುವ ಯುವಜನತೆಗೆ ಮುಸ್ಲಿಂ ಮಹಿಳೆಯರು ಯಾಕೆ ಮಾದರಿಯಾಗುವುದಿಲ್ಲ. ಬುರ್ಖಾ ಧರಿಸಿ ದೇಹದ ಯಾವುದೇ ಭಾಗವನ್ನು ತೋರಗೊಡದಿರುವುದು ಮೆಚ್ಚಲೇ ಬೇಕು. ಲಂಡನ್ ಒಲಿಂಪಿಕ್ಸ್‌ನಲ್ಲಿ ಟ್ಯುನೀಷಿಯಾದ ಮಹಿಳಾ ವೇಟ್‌ಲಿಫ್ಟರ್ ಘಡಾ ಹಸೈನ್ ಮೈತುಂಬಾ ಬಟ್ಟೆ ಧರಿಸಿ ಸ್ಪರ್ಧಿಸಿದ ಮೊದಲ ಕ್ರೀಡಾ ಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ೬೯ ಕೆ.ಜಿ. ಮಹಿಳಾ ವಿಭಾಗದ ಬಿ.ಗುಂಪಿನಲ್ಲಿ ಸ್ಪರ್ಧಿಸುವಾಗ ಹೊಸದಾಗಿ ಅನುಮತಿ ಪಡೆದು ಯುನಿಟಾರ್ಡ್ ವಸ್ತ್ರಧರಿಸಿ ಪಾಲ್ಗೊಂಡಿದ್ದನ್ನು ಮರೆಯುವಂತಿಲ್ಲ. ಒಲಿಂಪಿಕ್ಸ್‌ನ ಹಿಂದಿನ ನಿಯಮದಂತೆ ವೇಟ್‌ಲಿಫ್ಟಿಂಗ್‌ನಲ್ಲಿ ಸ್ಪರ್ಧಿಗಳು ತೋಳು ಕಾಣುವ ಹಾಗೂ ಮೊಣಕಾಲಿನ ಮೇಲೆ ವಸ್ತ್ರ ಧರಿಸಬೇಕಿತ್ತು. ಆದರೆ ಮುಸ್ಲಿಂ ದೇಶಗಳ ಸ್ಪರ್ಧಿಗಳ ಅನುಕೂಲಕ್ಕಾಗಿ ಮಾರ್ಪಾಟು ಮಾಡಲಾಗಿದೆ. ೧೯ ವರ್ಷದ ಹಸೈನ್ ವೇಟ್‌ಲಿಫ್ಟಿಂಗ್ ಕಾಸ್ಟ್ಯೂಮ್‌ನ ಒಳಗೆ ಯುನಿಟಾರ್ಡ್ ಬಳಸಿದ್ದಲ್ಲದೇ ಶಿರವಸ್ತ್ರ ಧರಿಸಿದ್ದರು. ಪ್ರಜ್ಞಾವಂತ ನಾಗರೀಕರೆನಿಸಿಕೊಂಡವರು ಆಂಗ್ಲ ವಿದ್ಯಾಭ್ಯಾಸದ ಪ್ರಭಾವದಿಂದ ಇಂಚು ಇಂಚು ದೇಹ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಪ್ರೀತಿಯ ಮಕ್ಕಳಲ್ಲೂ ಇದೆ ಮಾನಸಿಕತೆ ಹುಟ್ಟು ಹಾಕುತ್ತಿದ್ದಾರೆ ಎನ್ನುವುದಕ್ಕೆ ಮಾರ್ನಿಂಗ್ ಮಿಸ್ಟ್‌ನಲ್ಲಿ ನಡೆದ ಘಟನೆ ಹಾಗೂ ಅದಕ್ಕೆ ಬೆಂಬಲ ವ್ಯಕ್ತಪಡಿಸಿದವರ ವರ್ತನೆಯಿಂದಲೇ ತಿಳಿಯುತ್ತದೆ.  
ಬುದ್ದಿವಂತ ನಾಡಿನ ಜನತೆಯ ಮಾನಸಿಕತೆ ಯಾವ ರೀತಿಯದಾಗಿದೆ. ಯಾವ ದೃಷ್ಟಿಕೋನದಲ್ಲಿ ವ್ಯವಹರಿಸುತ್ತಿದ್ದಾರೆ. ಮಾರ್ನಿಂಗ್ ಮಿಸ್ಟ್‌ನಲ್ಲಿ ಕಾನೂನು ಕೈಗೆತ್ತಿಕೊಂಡು ಹೆಣ್ಣು ಮಕ್ಕಳ ಮೇಲೆ ಕೈಮಾಡಿರುವುದು ಖಂಡನೀಯ. ಆದರೆ ಬರ್ತ್‌ಡೇ ಪಾರ್ಟಿ ಎನ್ನುತ್ತಾ ಮದ್ಯಪಾನ, ಗಾಂಜಾ ಸೇದುತ್ತಾ ಮೋಜು-ಮಸ್ತಿಗಳಲ್ಲಿ ತೊಡಗಿದ್ದ ಯುವಕ ಯುವತಿಯರಿಗೆ ಬೆಂಬಲವಾಗಿರುತ್ತಾರೆ ಎಂದಾಗ ಜನತೆ ಯಾವುದನ್ನು ಓಲೈಕೆ ಮಾಡುತ್ತಿದೆ. ಹುಟ್ಟಿದ ಮಗುವಿನಲ್ಲಿ ಕೇಳಿದರೂ ಹೆಣ್ಣು ಮಕ್ಕಳಿಗೆ ಹೊಡೆದಿರುವುದು ತಪ್ಪು ಎಂದು ಹೇಳುತ್ತದೆ. ಹಾಗೆ ರಾತ್ರಿ ಸಮಯ ಸ್ನೇಹಿತರಾಗಿದ್ದರೂ ಮದ್ಯಪಾನ ಮತ್ತರಾಗಿರುವ ಯುವಕರೊಂದಿಗೆ ಹೆಣ್ಣು ಮಕ್ಕಳು ಇರುತ್ತಾರೆಂದರೆ ಇವರೆಷ್ಟು ಸಭ್ಯರು ಎನ್ನುವ ಪ್ರಶ್ನೆಯನ್ನು ಕೇಳುತ್ತದೆ. ಮಕ್ಕಳ ಈ ರೀತಿಯ ವರ್ತನೆಗೆ ಕಾರಣರಾರು? ಪೋಷಕರೋ ಅಥವಾ ಸಮಾಜವೋ? ಸಿಕ್ಕಿದ ಸ್ವಾತಂತ್ರ್ಯವೋ ಅಥವಾ ಸ್ವೇಚ್ಚೆಯೇ? ಈಗಲಾದರೂ ದಲಿತ ಕವಿ ಸಿದ್ದಲಿಂಗಯ್ಯ ಹೇಳಿರುವುದು ಸತ್ಯ ಎಂದು ಒಪ್ಪಿಕೊಳ್ಳಬಹುದು ತಾನೇ? ಶ್ರೀಮಂತರ ಮಕ್ಕಳಿಗೆ ಅನ್ಯಾಯವಾದರೆ ಕಾನೂನು ಬಗ್ಗೆ ಮಾತನಾಡುವ ಜನ ಬಡ ಹೆಣ್ಣು ಮಗಳಿಗಾದ ಅನ್ಯಾಯಕ್ಕೆ ಸಾಂತ್ವಾನ ನೀಡುವರೇ......?
ವಿದ್ಯಾರ್ಥಿಗಳ ನುಡಿ:
ಪೋಷಕರು ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಹಾಸ್ಟೆಲ್‌ಗಳಲ್ಲಿಯೋ, ಪೇಯಿಂಗ್ ಗೆಸ್ಟ್‌ನಲ್ಲಿ ಸೇರಿಸುತ್ತಾರೆ. ವಿದ್ಯಾಭ್ಯಾಸದ ಬದಲಿಗೆ ಸಂತೋಷ ಅನುಭವಿಸಲು ಸಾಮಾಜಿಕ ಜಾಲತಾಣ, ಮೊಬೈಲು ಇತರ ಮಾಧ್ಯಮ ಬಳಸಿಕೊಂಡು ಇಂತಹ ಚಟುವಟಿಕೆಯಲ್ಲಿ  ಬಾಗಿಯಾಗುತ್ತಾರೆ. ಹುಟ್ಟಿದ ಹಬ್ಬ ಈ ರೀತಿ ಆಚರಿಸಿಕೊಂಡು ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಟ್ಟುಕೊಂಡಿದ್ದಾರೆ. ಬುದ್ಧಿವಂತ ಜನ ಸತ್ಯಾಸತ್ಯತೆ ಅರಿತು ಮಾತನಾಡಬೇಕು.
ನವೀನ್ ಎಸ್.-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪುತ್ತೂರು.

ದಾಳಿ ಸಂದರ್ಭ ಹಿಂಸಾ ಪ್ರವೃತ್ತಿ ಅನುಸರಿಸಿದ್ದು ಖಂಡನೀಯ. ಭವ್ಯ ಭಾರತದಲ್ಲಿ ಹುಟ್ಟಿದ ವಿದ್ಯಾರ್ಥಿನಿಯರು ಸ್ನೇಹಿತರ ಜೊತೆಯಲ್ಲಿ ಅರೆಬೆತ್ತಲೆಯಾಗಿ ಹುಟ್ಟಿದ ಹಬ್ಬ ಆಚರಿಸಿದ್ದು ನಮ್ಮ ಸಂಸ್ಕೃತಿಯಲ್ಲ. ತಂದೆ ತಾಯಿಯೊಂದಿಗೆ ಆಚರಿಸಿದ್ದರೆ ತೊಂದರೆಯಾಗುತ್ತಿದ್ದಿಲ್ಲ.
ಸಂತೋಷ ನಾಯ್ಕ-ಬಿಕಾಂ ವಿದ್ಯಾರ್ಥಿ ಮಂಗಳೂರು ವಿಶ್ವವಿದ್ಯಾನಿಲಯ

ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಹೆಣ್ಣಿನ ಮೇಲೆ ಕೈ ಮಾಡಿರುವುದು ತಪ್ಪು. ವಿದೇಶಿ ಸಂಸ್ಕೃತಿಗೆ ಮಾರು ಹೋಗಿ ಭಾರತೀಯ ಸಂಸ್ಕೃತಿಯನ್ನು ಗಾಳಿಗೆ ತೂರುತ್ತಿದ್ದಾರೆ. ಅನೈತಿಕ ಚಟುವಟಿಕೆಗಳಿಗೆ ಪೂರಕವಾಗಿರುವ ಹೋಮ್ ಸ್ಟೇಗಳ ವಿರುದ್ಧ ಪೋಷಕರು ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾಗಿದೆ.
ರವಿ ಹಾವೇರಿ- ಎಂಎಸ್‌ಡಬ್ಲ್ಯೂ ವಿದ್ಯಾರ್ಥಿ

ಸಂಸ್ಕೃತಿ ಎನ್ನುವುದು ಮನೆಯಿಂದಲೇ ಬರಬೇಕಾಗಿದೆ.  ಈ ದಾಳಿಯಲ್ಲಿ ತಪ್ಪು-ಒಪ್ಪುಗಳ ಜಿಜ್ಞಾಸೆ ಮೂಡುತ್ತದೆ. ಹುಟ್ಟಿದ ಹಬ್ಬವನ್ನು ಪೋಷಕರ ಜೊತೆಯಲ್ಲಿ ಮನೆಯಲ್ಲಿ ಆಚರಿಸಬಹುದಾಗಿದ್ದರೂ ನಗರದ ಹೊರವಲಯದಲ್ಲಿ ಆಚರಿಸುವ ಪ್ರಮೇಯವಿರಲಿಲ್ಲ.
ಅಕ್ಷಿತಾ - ಪಾಲಿಟೆಕ್ನಿಕ್ ವಿದ್ಯಾರ್ಥಿನಿ ಮಂಗಳೂರು.

ಎಂಜಾಯ್ ಮಾಡುವುದೆಂದರೆ ಇಂದು ಹೀಗೆ ಎಂಬಂತಾಗಿರುವುದು ದುರದೃಷ್ಟಕರ.ನಿಜವಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿಗಳ ಜೊತೆ ಆಟ-ಪಾಠಗಳಲ್ಲಿ ತೊಡಗಿಕೊಂಡು ಭವಿಷ್ಯದ ಜೀವನಕ್ಕೆ ಭದ್ರ ತಳಪಾಯ ಹಾಕುವುದರಲ್ಲೇ ಎಂಜಾಯ್ ಇರುವುದು. ಇದನ್ನು ಮರೆತರೆ ಎಂಜಾಯ್ ಮಾಡಲು ಹೋಗಿ ಭವಿಷ್ಯವೇ ಮುರುಟಿ ಹೋಗುವುದು.ಇದನ್ನು ವಿದ್ಯಾರ್ಥಿ ಮಿತ್ರರು ಅರ್ಥ ಮಾಡಿಕೊಳ್ಳಬೇಕಾಗಿದೆ.
ಚೈತ್ರ , ವೈದ್ಯಕೀಯ ವಿದ್ಯಾರ್ಥಿನಿ, ಕಾಸರಗೋಡು