Thursday 9 May 2013

ಮತದಾರನೇ ನಿನಗೆ ಹ್ಯಾಟ್ಸ್‌ಅಪ್...
ಕರಾವಳಿಯಲ್ಲಿ ಮುದುಡಿದ ಕಮಲ...ವಿಜೃಂಭಿಸಿದ ಕೈ..ವಿಧಾನ ಸಭೆಯತ್ತ ಶ್ರೀನಿವಾಸಣ್ಣನ ಆಟೋ
ಅಂತೂ ಕರ್ನಾಟಕ ವಿಧಾನ ಸಭಾ ಕ್ಷೇತ್ರದಲ್ಲಿ ಮೇ-೫ ರಂದು ನಡೆದ ಚುನಾವಣೆಯಲ್ಲಿನ ಫಲಿತಾಂಶ ಅಚ್ಚರಿ ಮೂಡಿಸಿರುವುದರಲ್ಲಿ ಸಂಶಯವೇ ಇಲ್ಲಾ. ಮತದಾರರು ತಮಗೆ ಬೇಕಾದ ಅಭ್ಯರ್ಥಿಗಳನ್ನು ಆರಿಸಿದ್ದಾರೋ? ಅಥವಾ ಅಭ್ಯರ್ಥಿಗಳು ಮತದಾರರನ್ನು ಖರೀದಿಸಿದ್ದಾರೋ? ಎನ್ನುವ ಸಂಶಯವಿದ್ದರೂ ಕರಾವಳಿ ಭಾಗದಲ್ಲಿ ಮಾತ್ರ ಈ ಮಾತಿಗೆ ಆಸ್ಪದವೇ ನೀಡಿಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆದ ಒಟ್ಟು ೧೩ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್೧೦ಸ್ಥಾನಗಳನ್ನು ಪಡೆದು ಜಯಭೇರಿ ಬಾರಿಸಿದೆ. ಬಿಜೆಪಿ ಕೇವಲ ೨ ಸ್ಥಾನಗಳಲ್ಲಿ ತನ್ನ ಪ್ರಭುತ್ವ ಸಾದಿಸಿದ್ದರೆ, ಬಿಜೆಪಿಯಿಂದ ಕಡೆಗಣಿಸಲ್ಪಟ್ಟು, ಸ್ವಾಭಿಮಾನದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ೪೦,೬೧೧ ಮತಗಳ ಅಂತರದಿಂದ ವಿಜಯಿಯಾಗಿ ರಾಜ್ಯ ವಿಧಾನ ಸಭಾ ಚುನಾವಣೆಯ ಇತಿಹಾಸದಲ್ಲಿಯೇ ದಾಖಲೆ ನಿರ್ಮಿಸಿದ್ದಾರೆ.
ಚುನಾವಣೆಯ ಪೂರ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕನಿಷ್ಟ ೫ ಸ್ಥಾನ ಪಡೆಯಬಹುದು ಎನ್ನುವ ನಿರೀಕ್ಷೆ ಸಂಘ-ಪರಿವಾರದ ಬಂಧುಗಳಲ್ಲಿ ಹಾಗೂ ಬಿಜೆಪಿಯ ನಾಯಕರುಗಳಲ್ಲಿತ್ತು. ಆದರೆ ಅವರ ನಿರೀಕ್ಷೆಯನ್ನು ಸತ್ಯ ಮಾಡುವುದಕ್ಕೆ ಹಾಗೂ ಹುಸಿಗೊಳಿಸಲು ಸಾಮಾನ್ಯ ಕಾರ್ಯಕರ್ತನಿಗೂ ಸಾಧ್ಯ ಎನ್ನುವುದನ್ನು ಮತದಾರ ತೋರಿಸಿಕೊಟ್ಟಿದ್ದಾನೆ. ಕೇವಲ ಹೇಳಿಕೆಗೆ ತಲೆಯಾಡಿಸುವ ಕುರಿಯಲ್ಲ ನಾವು. ಸ್ವಂತವಾಗಿ ಆಲೋಚಿಸುವ ಕಿಂಚಿತ್ ಬುದ್ದಿಶಕ್ತಿಯಿದೆ ಎನ್ನುವುದನ್ನು ಮೌನವಾಗಿ ಕೃತಿಯಿಂದ ಮಾಡಿ ತೋರಿಸಿದ ಮತದಾರರ ಸಾಮರ್ಥ್ಯವನ್ನು ಈ ಸಂದರ್ಭ ಶ್ಲಾಘಿಸಲೇಬೇಕು.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕೃಷ್ಣ ಜೆ.ಪಾಲೆಮಾರ್, ಮಂಗಳೂರು ದಕ್ಷಿಣದ ಎನ್.ಯೋಗೀಶ್ ಭಟ್, ಬಂಟ್ವಾಳದ ಅಭ್ಯರ್ಥಿ ಉಳೆಪ್ಪಾಡಿ ಗುತ್ತು ರಾಜೇಶ್ ನಾಕ್, ಸುಳ್ಯದಲ್ಲಿ ಅಂಗಾರ, ಪುತ್ತೂರಿನಲ್ಲಿ ಸಂಜೀವ ಮಟಂದೂರು ಈ ಐವರು ಅಭ್ಯರ್ಥಿಗಳು ವಿಜಯಿಗಳಾಗುತ್ತಾರೆ ಎನ್ನುವ ಅತೀವ ನಂಬಿಕೆ ಪಕ್ಷದ ನಾಯಕರಲ್ಲಿತ್ತು. ಹಿರಿಯರ ನಂಬಿಕೆಯನ್ನು ಬೇರು ಸಮೇತ ಕೀಳಬಾರದು ಎನ್ನುವುದಕ್ಕೆ ಸುಳ್ಯದಲ್ಲಿ ಬಿಜೆಪಿಯ ಅಂಗಾರ ಅವರನ್ನು ಕೇವಲ ೨೦೦೦ದೊಳಗಿನ ಮತಗಳ ಅಂತರದಲ್ಲಿ ವಿಜಯಿಯನ್ನಾಗಿ ಮಾಡಿದ್ದಾರೆ. ಬ್ಲೂ ಬಾಯ್ ಎಂದು ಖ್ಯಾತರಾಗಿದ್ದ ಕೃಷ್ಣ ಜೆ.ಪಾಲೆಮಾರ್ ಚುನಾವಣಾ ಪೂರ್ವದಲ್ಲಿ ಕಾರ್ಯಕರ್ತರಿಗೆ ಬೇಕಾದಷ್ಟು ಹಣ ನೀಡಿ, ಹಗಲಿರುಳೆನ್ನದೇ ಕಾರ್ಯಕರ್ತರನ್ನು ಭೇಟಿ ಮಾಡಿರುವುದಕ್ಕೆ ಪ್ರತಿಫಲವಾಗಿ ಅತ್ಯಂತ ಕಡಿಮೆ ಅಂತರದಲ್ಲಿ ಸೋಲನ್ನು ಅನುಭವಿಸಿರುವುದು ಕಾರ್ಯಕರ್ತರೆಲ್ಲರಿಗೂ ಬೇಸರದ ಸಂಗತಿಯಾಗಿದೆ. ಅವರನ್ನು ಒತ್ತಾಯ ಪೂರ್ವಕವಾಗಿ ಚುನಾವಣೆಗೆ ನಿಲ್ಲಿಸಿದ್ದು, ಅವರು ಗೆದ್ದೆ-ಗೆಲ್ಲುತ್ತಾರೆಂಬುದು ಎಲ್ಲಾ ಕಾರ್ಯಕರ್ತರ ದೃಢ-ನಂಬಿಕೆಯಾಗಿತ್ತು. ಆದರೆ ತಾನೊಂದು ಬಗೆದರೆ ದೈವ ಬೇರೊಂದು ಬಗೆಯುತ್ತದೆ ಎನ್ನುವುದಕ್ಕೆ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಅಭ್ಯರ್ಥಿ ಮೊದಿನ್ ಭಾವ ವಿಜಯಿಯಾಗಿದ್ದಾರೆ. ಪ್ರಾರಂಭದಲ್ಲಿ ಈ ಕ್ಷೇತ್ರದಲ್ಲಿ ಕೃಪಾ ಆಳ್ವರಿಗೆ ಸಂಭವಿತ ಟಿಕೆಟ್ ಘೋಷಣೆಯಾದಾಗ ಪಾಲಿಕೆ ಸದಸ್ಯರು ರಾಜೀನಾಮೆ ಘೋಷಣೆ ಮಾಡಿ ತಮ್ಮ ಅಸಂತೋಷ ವ್ಯಕ್ತಪಡಿಸಿದ್ದರು. ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ಬದಲಾವಣೆಯಾಗಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿರುವುದು ಗೆಲುವಿಗೆ ಕಾರಣವಾಗಿದೆ ಎನ್ನುವುದು ನಾಯಕರ ಅಭಿಮತ.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ವಿಧಾನ ಸಭಾ ಉಪಾಧ್ಯಕ್ಷರಾಗಿದ್ದ ಎನ್.ಯೋಗೀಶ್ ಭಟ್ ಗೆಲುತ್ತಾರೆನ್ನುವ ನಿರೀಕ್ಷೆಯಿತ್ತು. ಕಾಂಗ್ರೆಸ್‌ನ ಜೆ.ಆರ್.ಲೋಬೋ ಕಮಿಷನರ್ ಆಗಿದ್ದು, ರಾಜೀನಾಮೆಯ ನಂತರ ಆರು ತಿಂಗಳ ಹಿಂದೆ ಪಕ್ಷಕ್ಕೆ ಸೇರ್ಪಡೆಯಾಗಿ ಕೇವಲ ಕಡಿಮೆ ಅಂತರದಲ್ಲಿ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಆಯ್ಕೆಯಾದ ಮೊದಲ ಕ್ರಿಶ್ಚಿಯನ್ ವ್ಯಕ್ತಿ. ಜೆ.ಆರ್.ಲೋಬೊ ಜಾತಿವಾದಿಯಾಗಿ ಕಾಣಿಸಿಕೊಂಡು ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ವಿಜಯಿಯಾದಾಗ ಅದರ ಅಲೆಗಳು ಮಂಗಳೂರಿನಲ್ಲಿ ಈಗಾಗಲೇ ಕಾಣಿಸಿಕೊಂಡಿದೆ. ಯೋಗೀಶ್ ಭಟ್ ಶಾಸಕರಾಗಿದ್ದ ಸಂದರ್ಭ ಕೇವಲ ಭರವಸೆಗಳನ್ನು ನೀಡುತ್ತಾ ಪಕ್ಷದ ಕಾರ್ಯಕರ್ತರಿಗೂ ಬೇಸರವನ್ನು ತರಿಸುವಂತ ವ್ಯಕ್ತಿತ್ವವನ್ನು ಹೊಂದಿದ್ದರು. ಮಂಗಳೂರು ಕ್ಷೇತ್ರದಲ್ಲಿ ಯು.ಟಿ.ಖಾದರ್ ದಾಖಲೆಯ ಮೊತ್ತದೊಂದಿಗೆ ವಿಜಯಿಯಾಗಿದ್ದು, ಬಿಜೆಪಿಯ ಚಂದ್ರಹಾಸ ಉಳ್ಳಾಲ್ ಸೋತಿದ್ದಾರೆ. ಬಂಟ್ವಾಳದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರ ಅನುಯಾಯಿಯಾದ ಉಳೆಪ್ಪಾಡಿಗುತ್ತು ರಾಜೇಶ್ ನಾಕ್ ಸಂಘ ಪರಿವಾರದ ಸಜ್ಜನ ವ್ಯಕ್ತಿ. ಸಾವಯವ ಕೃಷಿಕನಾಗಿದ್ದುಕೊಂಡು ಎಲ್ಲಾ ಕೃಷಿಕರಿಗೂ ಮಾರ್ಗದರ್ಶಕರಾಗಿದ್ದರು. ಅಂತಹ ವ್ಯಕ್ತಿಗೆ ರಾಜಕೀಯದ ಹುಚ್ಚು ಹಿಡಿದು, ಬಂಟ್ವಾಳ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿ ಚುನಾವಣೆಗೆ ದುಮುಕಿಯೇ ಬಿಟ್ಟರು. ಬಂಟ್ವಾಳದ ಹಳೆಯ ಹುಲಿ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾದ ಬಿ.ರಮಾನಾಥ ರೈ ಚುನಾವಣೆಗೆ ಪೂರ್ವದಲ್ಲಿಯೇ ಭವಿಷ್ಯ ನುಡಿದಿದ್ದರು. ಈ ಚುನಾವಣೆಯು ನನ್ನ ಹಾಗೂ ಕಲ್ಲಡ್ಕ ಪ್ರಭಾಕರ ಭಟ್ಟನ ವಿರುದ್ದದ ಚುನಾವಣೆ. ಇಲ್ಲಿ ನಾನು ಗೆದ್ದೆ ಗೆಲ್ಲುತ್ತೇನೆ ಎನ್ನುವ ಅವರ ಅತೀವ ನಂಬಿಕೆಯನ್ನು ಮತದಾರರು ಹುಸಿಗೊಳಿಸಲಿಲ್ಲ.
ಪುತ್ತೂರಿನಲ್ಲಿಯೂ ಕೂಡ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲವಿರುವುದೇ ಪುತ್ತೂರಿನಲ್ಲಿ. ಎಲ್ಲಾ ಕ್ಷೇತ್ರದಲ್ಲಿಯೂ ಸೋತರೂ ಪುತ್ತೂರಿನಲ್ಲಿ ವಿಜಯಿಯಾಗುತ್ತದೆ ಎನ್ನುವ ಹುಚ್ಚುನಂಬಿಕೆ. ಕಳೆದ ಬಾರಿ ಶಕುಂತಲಾ ಶೆಟ್ಟಿ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಅವರು ಬಂಡಾಯವಾಗಿ ಸ್ಪರ್ಧಿಸಿ ಸೋತಿದ್ದರು. ಕಾಂಗ್ರೆಸ್‌ನಿಂದ ದಿ.ಬೊಂಡಾಲ ಜಗನ್ನಾಥ ಶೆಟ್ಟಿ ಅವರ ವಿರುದ್ದ ಮೊದಲ ಬಾರಿಗೆ ಮಲ್ಲಿಕಾ ಪ್ರಸಾದ್ ಶಾಸಕಿಯಾಗಿ ಆಯ್ಕೆಗೊಂಡಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಶಕುಂತಲಾ ಶೆಟ್ಟಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದು, ಬಿಜೆಪಿಯಿಂದ ಸಂಜೀವ ಮಟಂದೂರು ಸ್ಪರ್ಧಿಸಿದ್ದರು. ಶಕ್ಕು ಅಕ್ಕಾ ಎಂದು ಖ್ಯಾತರಾಗಿರುವ ಬಂಟ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಚುನಾವಣೆಗೆ ಪೂರ್ವದಲ್ಲಿ ಉರಿಮಜಲು ರಾಮ ಭಟ್ ಅವರಲ್ಲಿಗೆ ಹೋಗಿ ಅವರಿಗೆ ನಮಸ್ಕರಿಸಿ, ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದಾಗ ಗೆದ್ದು ಬಾ ಎಂದು ಹರಸಿದ್ದರು. ನಂತರದಲ್ಲಿ ರಾಮಭಟ್ಟರು ನನಗೆ ಕಾಂಗ್ರೆಸ್‌ಗೆ ಮತನೀಡಲು ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿರುವುದು ಈ ಸಂದರ್ಭದಲ್ಲಿ ಪ್ರಸ್ತುತ. ರಾಮಭಟ್ಟರ ಆಶೀರ್ವಾದದ ಫಲವಾಗಿ ಪುತ್ತೂರು ಕ್ಷೇತ್ರದಲ್ಲಿ ಶಕುಂತಲಾ ಶೆಟ್ಟಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಬೆಳ್ತಂಗಡಿಯಲ್ಲಿ ವಸಂತ ಬಂಗೇರ ಕಾಂಗ್ರೆಸ್‌ನಿಂದಲೂ, ಬೆಳ್ತಂಗಡಿಯಲ್ಲಿ ಅಭಯಚಂದ್ರ ಜೈನ್ ಕಾಂಗ್ರೆಸ್‌ನಿಂದಲೂ ಹಾಗೂ ಸುಳ್ಯದಲ್ಲಿ ಎಸ್.ಅಂಗಾರ (ಬಿಜೆಪಿ)ಯಿಂದ ವಿಜಯಿಯಾಗಿದ್ದಾರೆ. ದಕ್ಷಿಣ ಕನ್ನಡ ವಿಧಾನ ಸಭೆಯ ಒಟ್ಟು ೮ ಕ್ಷೇತ್ರಗಳಲ್ಲಿ ೭ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ಬಿಜೆಪಿ ಕಡಿಮೆ ಅಂತರದಲ್ಲಿ ಗೆದ್ದುಕೊಂಡು ತನ್ನ ಮರ್‍ಯಾದೆ ಉಳಿಸಿಕೊಂಡಿದೆ.
ಉಡುಪಿ ಜಿಲ್ಲೆಯ ೫ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ೩ ಸ್ಥಾನಗಳನ್ನೂ, ಬಿಜೆಪಿ ಹಾಗೂ ಪಕ್ಷೇತರ ತಲಾ ಒಂದು ಸ್ಥಾನದಲ್ಲಿ ಗೆಲುವು ಸಾದಿಸಿದೆ. ಕಾಪು ಕ್ಷೇತ್ರದಲ್ಲಿ ವಿನಯ ಕುಮಾರ್ ಸೊರಕೆ ಬಿಜೆಪಿಯ ಲಾಲಾಜಿ ಆರ್ ಮೆಂಡನ್ ಅವರನ್ನು ಅತ್ಯಂತ ಕಡಿಮೆ ಅಂತರದ ಮತಗಳಿಂದ ಸೋಲಿಸಿ ಜಯಬೇರಿ ಗಳಿಸಿದ್ದಾರೆ. ಕಾಂಗ್ರೆಸ್‌ನ ವಸಂತ ಸಾಲ್ಯಾನ್ ಸೀಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಆದರೆ ಇವರ ಸ್ಪರ್ಧೆಯಿಂದ ಎರಡು ಪಕ್ಷಗಳಿಗೂ ಪರಿಣಾಮ ಬೀರಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಉಡುಪಿಯಲ್ಲಿ ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್ ಅತ್ಯಂತ ಅಧಿಕ ಮತಗಳ ಅಂತರದಿಂದ ಸಮೀಪದ ಸ್ಪರ್ಧಿ ಸುಧಾಕರ ಶೆಟ್ಟಿ ಅವರನ್ನು ಸೋಲಿಸಿದ್ದಾರೆ. ಕಾರ್ಕಳದಲ್ಲಿ ಕಾಂಗ್ರೆಸ್‌ನ ಗೋಪಾಲ ಭಂಡಾರಿ ಅವರನ್ನು ಬಿಜೆಪಿಯ ಸುನಿಲ್ ಕುಮಾರ್ ನಾಲ್ಕು ಸಾವಿರ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸುಕುಮಾರ ಶೆಟ್ಟಿ ಅವರನ್ನು ಸೋಲಿಸಿದ ಗೋಪಾಲ ಪೂಜಾರಿ ವಿಧಾನ ಸಭೆಯನ್ನು ಒಂದು ಅವದಿಯ ಅಂತರದಲ್ಲಿ ಮತ್ತೊಮ್ಮೆ ಪ್ರವೇಶಿಸಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ತ್ರಿಕೋನ ಸ್ಪರ್ಧೆ ನಿರ್ಮಾಣವಾಗಿತ್ತು ಎನ್ನುವುದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ತಿಳುವಳಿಕೆಯಾಗಿತ್ತು. ಆದರೆ ಈ ಕ್ಷೇತ್ರದಲ್ಲಿ ಎಂದೂ ಕೂಡ ತ್ರಿಕೋನ ಸ್ಫರ್ದೆಯ ಯಾವುದೇ ಒಂದು ಕುರುಹು ಕೂಡ ಇರಲಿಲ್ಲ. ಚುನಾವಣೆಗೆ ಮುಂಚಿತವಾಗಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ವಿಜಯಿ ಎನ್ನುವುದು ಕಾಂಗ್ರೆಸ್ ಪಕ್ಷದ ನಾಯಕರಿಗೂ ಹಾಗೂ ಬಿಜೆಪಿಯ ನಾಯಕರಿಗೂ ತಿಳಿದಿತ್ತು. ಆದರೆ ಶೆಟ್ಟರ ಅಭಿಮಾನಿಗಳಿಗೆ ಮಾತ್ರ ಕಳೆದ ಬಾರಿಗಿಂತ ಅತ್ಯಂತ ಅಂತರದಲ್ಲಿ ಗೆಲುವು ಸಾಧಿಸಬೇಕೆಂಬ ಛಲವಿತ್ತು. ಕಾರ್ಯಕರ್ತರಲ್ಲಿ ನಿಷ್ಠೆಯಿತ್ತು. ಶ್ರೀನಿವಾಸಣ್ಣನ ಹೆಸರಿನ ವರ್ಚಸ್ಸು ಕ್ಷೇತ್ರದಲ್ಲಿ ನೆಲೆಯಾಗಿತ್ತು. ಅಭಿಮಾನಿಗಳ ಬೆವರು ಹರಿಸಿ-ಸ್ವಂತ ಖರ್ಚಿನಲ್ಲಿ ಕಾರ್ಯ ನಿರ್ವಹಿಸಿದ್ದರು. ವಿಧಾನ ಸಭಾ ಚುನಾವಣೆಯ ಇತಿಹಾಸದಲ್ಲೇ ಯಾವುದೇ ರಾಷ್ಟ್ರೀಯ ಪಕ್ಷದ ಬೆಂಬಲವಿಲ್ಲದೇ, ಹೆಸರಿನ ವರ್ಚಸ್ಸಿನಿಂದಲೇ, ಹಣಕಾಸಿನ ಹರಿವಿಲ್ಲದೇ ಪಕ್ಷೇತರ ಅಭ್ಯರ್ಥಿಯಾಗಿ ೪೦೬೧೧ ಮತಗಳ ಅಂತರದಲ್ಲಿ ಗೆಲುವು ಸಾಧಿಸಿರುವುದು ದಾಖಲೆಯಾಗಿದೆ. ಕಳೆದ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀನಿವಾಸ ಶೆಟ್ಟಿ ೨೫೦೦೦ ಮತಗಳನ್ನು ಪಡೆದಿದ್ದರು. ಹಾಲಾಡಿ ಅವರ ಗೆಲುವನ್ನು ಗಮನಿಸಿದ ಕಾಂಗ್ರೆಸ್‌ನ ಕೇಂದ್ರದ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಹಾಲಾಡಿಯವರನ್ನು ತಮ್ಮ ಪಕ್ಷದ ಅಭ್ಯರ್ಥಿಯಂತೆ ಶ್ಲಾಘಿಸಿರುವುದು ಗಮನಾರ್ಹ.
ಆದರೆ ಬಿಜೆಪಿಯ ಭದ್ರ ಕೋಟೆಯಾಗಿದ್ದ ಕರಾವಳಿಯಲ್ಲಿ ಬಿಜೆಪಿಯ ಹಿನ್ನಡೆಗೆ ಕಾರಣವಾದ ಅಂಶಗಳಾವುವು. ಅವಿಭಜಿತ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಾಗಿದ್ದರೂ, ಜನತೆ ಗುರುತಿಸಿದ ಅಂಶಗಳಾವು? ೫ ವರ್ಷಗಳ ಅವಧಿಗೆ ಅಧಿಕಾರ ನೀಡಿದ ಬಿಜೆಪಿ ನಾಯಕರಿಗೆ ಕಾರ್ಯಕರ್ತರನ್ನು ಯಾವ ರೀತಿ ಬಳಸಿಕೊಳ್ಳಬೇಕು ಎನ್ನುವ ಸಾಮಾನ್ಯ ಪರಿಜ್ಞಾನವಿಲ್ಲದಂತೆ ವರ್ತಿಸಿರುವುದು ಕಾರಣವೇ? ಕರಾವಳಿ ಭಾಗದಲ್ಲಿ ಅತಿಯಾಗಿ ನಡೆಯುವ ಕೋಮು-ಸಂಘರ್ಷ ಕಾರಣವೇ? ಬಿಜೆಪಿಯವರು ಹಿಂದುತ್ವದ ಸೋಗಿನಲ್ಲಿ ಯುಗಾದಿ, ಹಿಂದು ಸಮಾಜೋತ್ಸವ, ಸಾಂಘಿಕ ಎನ್ನುವ ಕಾರ್ಯಗಳನ್ನು ಮಾಡುತ್ತಾ ಆ ಸಂದರ್ಭದಲ್ಲಿ ಮಾತ್ರ ಕಾರ್ಯಕರ್ತರ ನೆನಪು ಮಾಡಿಕೊಂಡು ಉಳಿದ ಸಮಯದಲ್ಲಿ ನಿರ್ಲಕ್ಷ್ಯ ತಾಳಿದ್ದರ ಫಲವೇ? ಆರ್‌ಎಸ್‌ಎಸ್‌ನ ನಾಯಕರು ಸಮಾಜ ಸೇವೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟು, ಅಖಂಡ ಭಾರತದ ಕಲ್ಪನೆ ಸಾಕಾರಗೊಳ್ಳುವಲ್ಲಿ ಶ್ರಮಿಸುತ್ತಿರುವ ವರ್ಗ ಒಂದೆಡೆಯಾದರೆ ಅಲ್ಲಿರುವ ಸ್ವಾರ್ಥ ತುಂಬಿರುವವರಿಂದ ಬಿಜೆಪಿಗೆ ಇಂಥ ಗತಿ ಬಂದಿದೆಯೇ? ಸಣ್ಣ ಉದಾಹರಣೆ ನೀಡುವುದಾದರೆ ಬಿಜೆಪಿ ವಿಧಾನ ಪರಿಷತ್ ಸದಸ್ಯರೊರ್ವರ ಮಗ ಆರ್‌ಎಸ್‌ಎಸ್‌ನ ಜಿಲ್ಲಾ ಪ್ರಚಾರಕರಾಗಿ ಕಳೆದೆರಡು ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಾಂತ ಪ್ರಚಾರಕರ ಅನುಮತಿಯಿಲ್ಲದೇ ಬಿಜೆಪಿಯ ಕಾರ್ಯಾಲಯದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಹಿಂದಿರುವ ಸ್ವಾರ್ಥವೆಂಥದ್ದು? ಬಿಜೆಪಿ ನಾಯಕರ ಅಹಂ, ಸ್ವಾರ್ಥಪರತೆ, ಕಾರ್ಯಕರ್ತರ ನಿರ್ಲಕ್ಷ್ಯದಿಂದಾಗಿ ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಸರಿಯಾಗಿ ಪಾಠ ಕಲಿಸಿದ್ದಾನೆ ಎನ್ನುವುದು ಸ್ಪಷ್ಟ. ಇದು ಕೇವಲ ಬಿಜೆಪಿಗೆ ಮಾತ್ರವಲ್ಲ. ಕಾಂಗ್ರೆಸ್‌ಗೂ ಕೂಡ ಇದು ಪೂರ್ವ ಪಾಠವೆನ್ನುವುದನ್ನು ಅರಿತುಕೊಂಡು ಆಡಳಿತ ನಿರ್ವಹಿಸಬೇಕು. ಇದನ್ನು ಮರೆತು ಸಾಗಿದರೆ ಇಂದು ಬಿಜೆಪಿಗಾದ ಗತಿಯೇ ಕಾಂಗ್ರೆಸ್‌ಗೂ ಆಗಲಿದೆ ಎನ್ನುವ ಎಚ್ಚರಿಕೆಯ ಘಂಟೆಯೇ ಈ ಮತದಾನವೆನ್ನುವುದರಲ್ಲಿ ಸಂಶಯವಿಲ್ಲಾ...
ಏನಂತಿರಾ
 ಬಾಕ್ಸ್:
ಕರಾವಳಿಯಲ್ಲಿ ವಿಜೇತರಾದ ಅಭ್ಯರ್ಥಿಗಳಿವರು:
                 ದಕ್ಷಿಣ ಕನ್ನಡ ಜಿಲ್ಲೆ:
  ಕ್ಷೇತ್ರ                   ಅಭ್ಯರ್ಥಿಗಳು                      ವಿಜಯಿ ಮತ
*ಮಂಗಳೂರು ಕ್ಷೇತ್ರ      : ಯು.ಟಿ.ಖಾದರ್ (ಕಾಂಗ್ರೆಸ್)-        ೨೯,೧೧೧
*ಮಂಗಳೂರು ಉತ್ತರ    : ಮೊದಿನ್ ಬಾವ   (ಕಾಂಗ್ರೆಸ್)-       ೫,೩೨೩
*ಮಂಗಳೂರು ದಕ್ಷಿಣ     : ಜೆ.ಆರ್.ಲೋಬೊ (ಕಾಂಗ್ರೆಸ್)-      ೧೨,೨೭೫
*ಬಂಟ್ವಾಳ              : ಬಿ.ರಮಾನಾಥ ರೈ  (ಕಾಂಗ್ರೆಸ್)-      ೧೭,೮೫೦
*ಪುತ್ತೂರು              :ಶಕುಂತಲಾ ಶೆಟ್ಟಿ    (ಕಾಂಗ್ರೆಸ್)  -     ೪,೨೮೯
*ಬೆಳ್ತಂಗಡಿ              :ವಸಂತ ಬಂಗೇರ  (ಕಾಂಗ್ರೆಸ್)   -     ೧೫,೭೪೧
*ಮೂಡಬಿದ್ರೆ            :ಅಭಯಚಂದ್ರ ಜೈನ್(ಕಾಂಗ್ರೆಸ್)-        ೪,೪೫೦
*ಸುಳ್ಯ                  : ಎಸ್.ಅಂಗಾರ   (ಬಿಜೆಪಿ)         -   ೧,೩೭೩

ಉಡುಪಿ ಜಿಲ್ಲೆ:
*ಕುಂದಾಪುರ          : ಹಾಲಾಡಿ ಶ್ರೀನಿವಾಸ ಶೆಟ್ಟಿ (ಪಕ್ಷೇತರ)- ೪೦,೬೧೧
*ಬೈಂದೂರು          : ಗೋಪಾಲ ಪೂಜಾರಿ (ಕಾಂಗ್ರೆಸ್)-      ೩೧,೧೪೯
*ಕಾರ್ಕಳ             :ಸುನಿಲ್ ಕುಮಾರ್    (ಬಿಜೆಪಿ) -        ೪,೨೫೪
*ಉಡುಪಿ             : ಪ್ರಮೋದ್ ಮಧ್ವರಾಜ್(ಕಾಂಗ್ರೆಸ್)-    ೩೯,೫೨೪
*ಕಾಪು                :ವಿನಯ ಕುಮಾರ್ ಸೊರಕೆ(ಕಾಂಗ್ರೆಸ್)-    ೧,೮೫೫











No comments:

Post a Comment