Saturday, 2 March 2013


ಹಿನ್ನೀರಿನ ಮಡಿಲಲ್ಲಿರುವ ಶಾಂತಸ್ವರೂಪಿ ಸಿಗಂದೂರು ಶ್ರೀ ಚೌಡೇಶ್ವರಿ ಅಮ್ಮ: 

ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಮಡಿಲಲ್ಲಿದ್ದು,ಕಾಡಿನಿಂದ ಆವೃತವಾದ ಸಣ್ಣ ಊರು ಸಿಗಂದೂರು. ವೈಜ್ಞಾನಿಕ ಯುಗದಲ್ಲಿ ಪಟ್ಟಣಗಳಲ್ಲಿನ ಗಲಾಟೆ ಗದ್ದಲಗಳಿಂದ ಹೊರತಾಗಿ ಪ್ರಶಾಂತವಾದ ಪ್ರಕೃತಿಯ ಮಡಿನಲ್ಲಿರುವ ಸಿಗಂದೂರು ಮಾನಸಿಕ ನೆಮ್ಮದಿಯ ತಾಣವಾಗಿರುವುದು ಮಾತ್ರವಲ್ಲ. ಭಗವದ್ ಭಕ್ತರ ಮನದಿಚ್ಚೆಯನ್ನು ನೆರವೇರಿಸುವ ದಿವ್ಯ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿದೆ. ಸಾಗರ ಪೇಟೆಯಿಂದ ಸುಮಾರು ೪೫ ಕಿ.ಮೀ.ದೂರದಲ್ಲಿರುವ ಸಿಗಂದೂರು ಸಮೀಪ ತುಮರಿ ಎನ್ನುವ ಊರಿದೆ.
ಸಿಗಂದೂರಿನ ಚೌಡೇಶ್ವರಿ ದೇವಿಯ ಕ್ಷೇತ್ರಕ್ಕೆ ಸುಮಾರು ೩೦೦ ವರ್ಷಗಳ ಇತಿಹಾಸವಿದೆ. ರಕ್ಷಣೆ ಕೋರಿ ಬರುವ ಭಕ್ತರನ್ನು ಹರಸಿ, ತನ್ನ ಮಡಿಲಲ್ಲಿಟ್ಟು ರಕ್ಷಿಸುವ ತಾಯಿ ಚೌಡೇಶ್ವರಿಯನ್ನು ಸಾವಿರಾರು ಭಕ್ತರು ನಂಬಿದ್ದಾರೆ. ಹೊರ ರಾಜ್ಯಗಳಿಂದ ಇಲ್ಲಿಗೆ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ. ಶರಾವತಿ ಹಿನ್ನೀರಿನ ವಿಶಾಲ ಪ್ರದೇಶದಲ್ಲಿ ಅಲ್ಲಲ್ಲಿ ಸೃಷ್ಟಿಯಾದ ನಡುಗಡ್ಡೆಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಇವುಗಳ ಜೊತೆಗೆ ಚೌಡೇಶ್ವರಿ ದೇವಿಯ ಮಹಿಮೆಯಿಂದ ಸಿಗಂದೂರು ದೊಡ್ಡ ಧಾರ್ಮಿಕ ಕ್ಷೇತ್ರವಾಗಿ ರಾಜ್ಯದ  ಜನರ ಗಮನ ಸೆಳೆದಿದೆ.
ಇತರ ಯಾವುದೇ ಧಾರ್ಮಿಕ ಕ್ಷೇತ್ರದಲ್ಲಿಲ್ಲದ ವಿಶೇಷತೆ ಸಿಗಂದೂರಿನಲ್ಲಿದೆ. ಕಳ್ಳರಿಂದ ತಮ್ಮ ಮನೆ, ಹೊಲಗಳಿಗೆ ರಕ್ಷಣೆ ಪಡೆಯಲು ನಾಮಫಲಕ ಕೊಡುವ ಪದ್ಧತಿ ಇಲ್ಲಿನ ವಿಶೇಷ. ಜಮೀನು, ತೋಟ, ಗz, ಬೇಣ ಮತ್ತು ಹೊಸ ಕಟ್ಟಡಗಳಲ್ಲಿನ ವಸ್ತುಗಳಿಗೆ ದೇವಿಯ ಕಾವಲಿದೆ ಎಂಬ ಬೋರ್ಡ್ ಹಾಕಿದರೆ ಅಲ್ಲಿ ಕಳ್ಳತನವಾಗುವುದಿಲ್ಲ ಎಂಬ ಪ್ರತೀತಿ. ಹೀಗಾಗಿಯೇ ಇಂದಿಗೂ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಗಳಲ್ಲಿರುವ ಮೂಲೆ-ಮೂಲೆಗಳ ಊರುಗಳಲ್ಲಿ ಸಿಗಂದೂರು ಚೌಡೇಶ್ವರಿ ದೇವಿಯ ಕಾವಲಿದೆ ಎನ್ನುವ ಬೋರ್ಡ್‌ಗಳನ್ನು ಕಾಣಬಹುದು.
ಪ್ರತಿ ವರ್ಷ ಮಕರ ಸಂಕ್ರಾಂತಿ (ಜ.೧೪ಅಥವಾ ೧೫ರಂದು) ಸಮಯದಲ್ಲಿ ಇಲ್ಲಿ ಜತ್ರೆ ನಡೆಯುತ್ತದೆ. ಸಾವಿರಾರು ಜನ ಸೇರುವುದು ಅಮ್ಮನ ಪ್ರಖ್ಯಾತಿಗೆ ಸಾಕ್ಷಿಯಾಗಿದೆ. ದೇವಸ್ಥಾನದಲ್ಲಿ ಅಭಿಷೇಕ, ಮಹಾಭಿಷೇಕ, ಪಂಚಾಮೃತ ಪೂಜೆ, ಅಲಂಕಾರ ಪೂಜೆಗಳು ನಡೆಯುತ್ತದೆ. ನಿತ್ಯ ಬೆಳಗಿನ ಜವದ ೪.೩೦ರಿಂದ ಬೆಳಿಗ್ಗೆ ೭ ರವರೆಗೆ, ಬೆಳಿಗ್ಗೆ ೯ರಿಂದ ಮಧ್ಯಾಹ್ನ ೨ ರವರೆಗೆ ಮತ್ತೆ ಸಂಜೆ ೬ರಿಂದ ೭ರವರೆಗೆ ಪೂಜೆ ಮತ್ತು ದರ್ಶನಕ್ಕೆ ಅವಕಾಶವಿದೆ. ದೇವಸ್ಥಾನದ ನಿರ್ವಹಣೆಯನ್ನು ಚೌಡಮ್ಮದೇವಿ ದೇವಾಲಯದ ಧರ್ಮದರ್ಶಿ ರಾಮಪ್ಪ ನೋಡಿಕೊಳ್ಳುತ್ತಿದ್ದಾರೆ. ಶೇಷಗಿರಿ ಭಟ್ಟರು ಇಲ್ಲಿನ ಪ್ರಧಾನ ಅರ್ಚಕರು.
ಸ್ಥಳ ಪುರಾಣ:
ಅದೊಂದು ದಿನ ಸೀಗೆ ಕಣಿವೆಯ ಪುಣ್ಯ ವಿಶೇಷವಿರಬೇಕು. ಆಗಿನ ಸಮಾಜದ ನಾಯಕರಾಗಿದ್ದ ಶೇಷಪ್ಪನವರು ತನ್ನ ಸಂಗಡಿಗರೊಂದಿಗೆ ಬೇಟೆಯಾಡಲು ಸೀಗೆ ಕಣಿವೆಯ ಅರಣ್ಯದ ಕಡೆ ಉತ್ಸುಕರಾಗಿ ಹೊರಟಿದ್ದರು. ಬೆಳೆದು ನಿಂತ ಮರ-ಬಳ್ಳಿ ಪೊದೆಗಳಿಂದಾವೃತವಾದ ಕಾಡದು. ಹುಲಿ, ಚಿರತೆ, ಕೋಣ ಮತ್ತು ಜಿಂಕೆಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದವು. ಕಾಡಿನಲ್ಲಿ ಸಂಚರಿಸುವುದು ಮನಸ್ಸಿಗೆ ಒಂದು ರೀತಿಯ ಭೀತಿಯಾದರೂ, ತಂಪಾದ ವಾತಾವರಣದಲ್ಲಿ ಸಂಚರಿಸುವುದು ಮನಸ್ಸಿಗೆ ಒಂದು ರೀತಿಯ ಮುದ ನೀಡುವ ದಟ್ಟಾರಣ್ಯ. ಶೇಷಪ್ಪನವರು ಸಂಗಡಿಗರ ಜೊತೆ ಸರಿಯಾದ ಭೇಟೆ ಅರಸುತ್ತಾ ಮುಂದುವರೆಯುತ್ತಿದ್ದರು. ಮುಂದೆ ಶೇಷಪ್ಪ, ಹಿಂದೆ ಸಂಗಡಿಗರು. ಇದ್ದಕಿದ್ದ ಹಾಗೆ ಶೇಷಪ್ಪನವರಿಗೂ ಮತ್ತು ಸಂಗಡಿಗರ ನಡುವಿನ ಅಂತರ ಹೆಚ್ಚಾಯಿತು. ಇದರ ಅರಿವಿಲ್ಲದೇ ಶೇಷಪ್ಪನವರು ಮುಂದುವರಿಯುತ್ತಿzರೆ. ಇದ್ದಕಿದ್ದ ಹಾಗೆ ಹಿಂತಿರುಗಿ ನೋಡಿದರು. ಸಂಗಡಿಗರು ಯಾರೂ ಕಾಣಿಸಲಿಲ್ಲ. ಹಿಂದೆ ಎಂದೂ ಹೀಗಾಗಿರಲಿಲ್ಲ. ಇಂದೇಕೆ? ಒಂದು ಕ್ಷಣ ತಬ್ಬಿಬ್ಬಾದರು. ಒಂದೆಡೆ ಹುಲಿಯ ಘರ್ಜನೆಯಾದರೆ, ಇನ್ನೊಂದು ಕಡೆಯಿಂದ ಹುಳ ಹುಪ್ಪಟಗಳ ಶಬ್ಧ. ಪಶ್ಚಿಮಾಂಬುದಿಯಲ್ಲಿ ರವಿಯು ಅಸ್ತಂಗತನಾದ ಸಮಯದಲ್ಲಿ ಬೆಳಕು ಮಂದವಾಗತೊಡಗಿತು. ಅದೇನೋ ಒಂದು ರೀತಿಯ ಮಂಪರು... ಏನೂ ಮಾಡಲು ಹೊಳೆಯದಂತಹ ಆಲಸ್ಯ. ಹಿಂದೆಂದೂ ಮೂಡದ ಭಯದ ಸೆಳೆವು. ಶೇಷಪ್ಪನವರ ಹೃದಯಾಂತರಾಳದಿಂದ ಮಾತೊಂದು ಹೊರಬಿತ್ತು  ಅಮ್ಮಾ, ತಾಯೇ, ನಾನು ಇದುವರೆಗೆ ನನಗೆ ತಿಳಿದಂತೆ ಅನ್ಯಾಯ ಎಣಿಸಿಲ್ಲ. ನಿನ್ನನ್ನು ಇದುವರೆಗೆ ನಂಬಿ ಬಾಳಿದೆ. ನನ್ನನ್ನು ಕಾಯುವ ಭಾರ ನಿನ್ನದಮ್ಮ-ನಿನ್ನದು ಎಂದು ದೈನ್ಯತೆಯಿಂದ ಬೇಡಿದರು.
ಆ ಕ್ಷಣದಲ್ಲಿ ಶೇಷಪ್ಪನವರಿಗೆ ನಿದ್ರೆಯಾವರಿಸಿತು. ನಿದ್ರೆಯಲ್ಲಿ ಕನಸು. ಭೂಮಿ ಬಿರಿಯುವಂತೆ ಗುಡುಗು ಗುಡುಗಿತು. ಸಿಡಿಲು ಸಿಡಿಯಿತು. ಮಿಂಚು ಮಿಂಚಿತು. ವೇದ ನಾದದ ಅಂಗಣ ಹಿತವಾಗಿ ವ್ಯಾಪಿಸಿ ಮಧ್ಯದಂದು ಪ್ರಭೆ ಮೂಡಿತು. ಶಂಖ ಚಕ್ರ ಗಧಾದಾರಿಯಾಗಿ ಮಂದಹಾಸ ಬೀರುತ್ತಾ ನಿಂತಿzಳೆ - ಆದಿಶಕ್ತಿ, ಮಹಾಮಾಯೆ ಲೋಕಮಾತೆ ಸಿಗಂದೂರೇಶ್ವರಿ ರೂಪದಲ್ಲಿ. ನಾನಿಲ್ಲಿ ನೆಲೆಸಿ ಧರ್ಮೋದ್ದಾರ- ಭಕ್ತ ಪರಿಪಾಲನೆ ಮಾಡಬೇಕೆಂದು ನಿಶ್ಚಯಿಸಿzನೆ. ಆದರೆ ನೆಲೆ ನಿಲ್ಲಲು ಗುಡಿಯ ಅವಶ್ಯಕತೆಯಿದೆ. ನಾನು ನೆಲೆನಿಲ್ಲಲು ಗುಡಿಯೊಂದನ್ನು ಕಟ್ಟಿಸು, ನಿತ್ಯ ಪೂಜೆ ನಡೆಯ ಬೇಕು, ನಾನು ಶಿಲಾರೂಪಿಯಾಗಿ ನೆಲೆಸುತ್ತೇನೆ ಎಂದು ದೇವಿ ಕನಸಲ್ಲಿ ಬಂದು ಶೇಷಪ್ಪನವರಿಗೆ ಹೇಳಿದಳು. ಶೇಷಪ್ಪನವರಿಗೆ ಎಚ್ಚರವಾಯಿತು. ಸುತ್ತ ನೋಡಿದಾಗ ಕತ್ತಲಾವರಿಸಿತ್ತು. ಮನೆಯತ್ತ ನಡೆಯತೊಡಗಿದರು.
ಇದಾದ ನಂತರ ದಿನ ಕಳೆದಂತೆ ಶೇಷಪ್ಪನವರ ದಿನಚರಿ ಬದಲಾಯಿತು. ಆಧ್ಯಾತ್ಮದ ಕಡೆ ಒಲವು ಹರಿಯಿತು. ದೇವಿ ಶಿಲಾರೂಪಿಯಾಗಿ ಸೀಗೆ ಕಣಿವೆಯಲ್ಲಿ ನಿಂತಿರುವಳು ಎನ್ನುವುದನ್ನು ಖಚಿತ ಪಡಿಸಿಕೊಂಡರು. ಆದರೆ ಜನರನ್ನು ನಂಬಿಸುವುದೆಂತು. ನೂರಾರು ವರ್ಷ ತಪಸ್ಸನ್ನಾಚರಿಸಿದರೂ ಸಾಧು ಸಂತರಿಗೆ ಒಲಿಯದ ದೇವಿ ತನಗೆ ಕನಸಲ್ಲಿ ಬಂದು ಅಪ್ಪಣೆ ಕೊಡಿಸಿದಳು ಎಂದರೆ ಜನ ನಂಬಿಯಾರೆ? ಎನ್ನುವ ಚಿಂತೆಯ ಜಲಾವೃತವಾದ ಕಾಡನ್ನು ದಾಟಿ ಒಂಟಿಯಾಗಿ ತಾನು ಕನಸು ಕಂಡ ಸ್ಥಳ ಪರಿಶೀಲಿಸಿದರು. ಅಲ್ಲಿಯೇ ವಿಜೃಂಬಿಸುತ್ತಿದ್ದಳು ತಾಯಿ ಸಿಗಂದೂರೇಶ್ವರಿ. ತಾವು ದೇವಿಗೆ ಪೂಜೆ ಮಾಡಿದರು. ಆದರೂ ತೃಪ್ತಿ ಸಮಾಧಾನವಿಲ್ಲ.
ಭಾವನಾ ಪ್ರಪಂಚದ ತೇಲುತ್ತಿದ್ದ ಅವರ ಚಿತ್ತಭಿತ್ತಿಗೆ ಹೊಳೆದುದೇ ಆಗಮ ದುಗ್ಗಪ್ಪಜ್ಜ.
ದುಗ್ಗಪ್ಪಜ್ಜ ಸಾಧಾರಣ ವ್ಯಕ್ತಿ. ಬ್ರಾಹ್ಮಣರಾದರೂ ವೇದ, ಶಾಸ್ತ್ರ, ಮಂತ್ರ ಓದಿದವರಲ್ಲ. ಕೇವಲ ಶದ್ಧಾ ಭಕ್ತಿಯೇ ಅವರ ಉಸಿರು. ಮುಖದಲ್ಲಿ ಸದಾ ಹರ್ಷ, ಕಣ್ಗಳಲ್ಲಿ ನಿರ್ಮಲತೆ, ಮನಸ್ಸಿನಲ್ಲಿ ಪ್ರೀತಿ, ಮಾತಿನಲ್ಲಿ ಮಾಧುರ್ಯ, ಇವೇ ಅವರನ್ನು ಎಲ್ಲರೂ ಗೌರವಾಧರಗಳಿಂದ ಕಾಣುವಂತೆ ಮಾಡಿತ್ತು. ಶೇಷಪ್ಪನವರು ತಾನು ಕಂಡ ಕನಸಿನ ವಿಚಾರವನ್ನೆ ಸವಿಸ್ತಾರವಾಗಿ ನಿವೇದಿಸಿದರು. ತಾಯಿ ಶೇಷಪ್ಪನವರಿಗೆ ಕನಸ್ಸಲ್ಲಿ ಕಂಡ ವಿಷಯ ಕೇಳಿ ದಂಗಾದ ದುಗ್ಗಪ್ಪಜ್ಜ.
ತಾನು ದೇವಿಗೆ ದೇವಸ್ಥಾನ ಕಟ್ಟಿಸುತ್ತೇನೆ, ನೀವು ನನಗೆ ಮಾರ್ಗದರ್ಶಕರಾಗಬೇಕು. ಹೀಗೆ ಮಾಡು ಅಂತ ಅಪ್ಪಣೆ ಕೊಡಿಸಿ, ಅದರಂತೆ ಮಾಡುತ್ತೇನೆ. ನೀವೆ ಅರ್ಚಕರಾಗಿರಬೇಕು ಅಂತ ಶೇಷಪ್ಪನವರು ದುಗ್ಗಪ್ಪಜ್ಜ ಹತ್ತಿರ ಕೇಳಿಕೊಂಡರು. ಅದಕ್ಕೆ ದುಗ್ಗಪ್ಪಜ್ಜ ಸಮ್ಮತಿಸಿದರು.
ಸಣ್ಣದೊಂದು ಗುಡಿ ನಿರ್ಮಾಣವಾಯಿತು. ದುಗ್ಗಜ್ಜನವರೇ ಅರ್ಚಕರು. ಶೇಷಪ್ಪನವರೇ ಧರ್ಮದರ್ಶಿಗಳು. ಕ್ರಮೇಣ ಸಿಗಂದೂರೇಶ್ವರಿಯ ಖ್ಯಾತಿ ಪಸರಿಸತೊಡಗಿತು. ಭಕ್ತರ ಇಷ್ಟಾರ್ಥಗಳು ಫಲಪ್ರದವಾಗುತ್ತಿತ್ತು. ಭಕ್ತಾದಿಗಳು ಪೂಜೆ ಸಲ್ಲಿಸುತ್ತಿದ್ದರು.
ಕಷ್ಟ, ನೋವು, ಬೇನೆ, ಬೇಸರಿಕೆಗಳಿಂದ ಪರಿತಪಿಸುವ ಜನಸಾಮಾನ್ಯ ಭಕ್ತವೃಂದಕ್ಕೆ ಸಂಕ, ತೋಡು ದಾಟಲು ಕಟ್ಟುವ ಸೇತುವೆಗೆ ದಾಟುವಾಗ ಬೀಳದಂತೆ ಹಿಡಿಯಲು ಹಿಡಿಯಾಗುವಂತೆ ದುಗ್ಗಜ್ಜ ಭಕ್ತರ ಹಿಡಿಯಾದರು. ಶೇಷಪ್ಪನವರು ಸೇತುವೆಯಾದರು. ಮಾಳಿಗೆಯ ಮನೆಯಲ್ಲಿ ಒತ್ತಿ ತುಂಬಿಕೊಂಡ ಕತ್ತಲೆಯನ್ನು ಜನರಿಂದ ಹೊರಕ್ಕೆ ತಳ್ಳಿ ನೂಕಲಾಗದು. ಆದರೆ ಒಂದು ದೀಪವನ್ನು ಹೊತ್ತಿಸಿಟ್ಟರೆ ಮುತ್ತಿದ ಕತ್ತಲೆಯು ತಾನೇ ಕಾಲುಕಿತ್ತು ಓಡಿಹೋಗುತ್ತದೆ ಎಂಬಂತೆ ದೀನರಾಗಿ ಬಂದು ಬೇಡುವ ನೊಂದ ಜನರ ಪಾಲಿಗೆ ದುಗ್ಗಜ್ಜ-ಶೇಷಪ್ಪ ನಂದಾದೀಪವಾದರು.
ದುಗ್ಗಜ್ಜ-ಶೇಷಪ್ಪನವರ ಕಾಲಾನಂತರ ಶ್ರೀದೇವಿಯ ಮೂಲ ವಿಗ್ರಹ ನೀರಿನಲ್ಲಿಯೇ ಮುಳುಗಿರುವುದನ್ನು ನೋಡಿ, ದೇವಿಗೆ ನಿತ್ಯ ಪೂಜೆ ಸಲ್ಲುವಂತಾಗಬೇಕೆಂದು ಯೋಚಿಸಿ ದೇವಸ್ಥಾನವನ್ನು ಈಗಿರುವ ಎತ್ತರದ ಸ್ಥಳಕ್ಕೆ ಶ್ರೇಷ್ಟ ವೈದಿಕ ವೇದೋತ್ತಮರಿಂದ ವಿಧಿವತ್ತಾಗಿ ಪ್ರತಿಷ್ಟಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ಸಿಗಂದೂರೇಶ್ವರಿ ತನ್ನನ್ನು ನಂಬಿದ ಭಕ್ತರನ್ನು ಕೈಬಿಡದೇ ಕಾಯುತ್ತಲೇ ಬಂದಿzಳೆ.
ಭಗವಾನ್ ಶೀಧರರೂ ಒಮ್ಮೆ ಸಿಗಂದೂರಿಗೆ ಬಂದಿದ್ದರು. ಆಗ ದೇವಿಯ ಉಗ್ರ ಸ್ವರೂಪಿಯಾಗಿzಳೆಂದು ಶ್ರೀಧರರು ಮೃದು ಸ್ವಭಾವದ ಭಕ್ತಪೋಷಣೆಯಾಗಬೇಕೆಂದು ಪ್ರಾರ್ಥಿಸಲು ಒಪ್ಪಿದ ದೇವಿಯು ಅಂದಿನಿಂದ ಸೌಮ್ಯವಾಗಿzಳೆನ್ನುವ ಪ್ರತೀತಿಯೂ ಇದೆ.

ಮಾರ್ಗಸೂಚಿ.
ಸಾಗರದಿಂದ ಆವಿನಹಳ್ಳಿ ದಾರಿಯಲ್ಲಿ ಹೊಳೆ ಬಾಗಿಲವರೆಗೆ ರಸ್ತೆಯಿದೆ. ಹೊಳೆಬಾಗಿಲಿನಲ್ಲಿ ಲಿಂಗನಮಕ್ಕಿ ಅಣೆಕಟ್ಟೆಯ ಹಿನ್ನೀರು ಎದುರಾಗುತ್ತದೆ. ಇಲ್ಲಿಂದ ಮುಂದೆ ಸೇತುವೆ ಇಲ್ಲ. ಲಾಂಚ್‌ನ ಮೂಲಕ ಹಿನ್ನೀರು ದಾಟಬೇಕು. ಈ ದಾರಿಯಲ್ಲಿ ಬರುವ ಎ ವಾಹನಗಳಿಗೂ ಲಾಂಚ್ ಬಳಕೆ ಅನಿವಾರ್ಯ. ಹಿನ್ನೀರು ಸುಮಾರು ೨ ಕಿ.ಮೀ. ಅಗಲವಿದೆ. ಲಾಂಚ್ ಸೇವೆ ನಿಗದಿತ ಸಮಯಗಳಲ್ಲಿ ಮಾತ್ರ ಲಭ್ಯ. ಹಿನ್ನೀರು ದಾಟಿದ ನಂತರ ಕಾಡಿನ ರಸ್ತೆಯಲ್ಲಿ ೫ ಕಿ.ಮೀ. ಸಾಗಿದರೆ ಚೌಡಮ್ಮ ದೇವಿಯ ದರ್ಶನವಾಗುತ್ತದೆ. ಲಾಂಚ್‌ಗೆ ೧ರೂ.ಶುಲ್ಕ, ವಾಹನಗಳಿಗೆ ತಲಾ ೫ರೂ. ಹಿನ್ನೀರು ದಾಟಿದ ತಕ್ಷಣ ಸಿಗಂದೂರು ಕ್ಷೇತ್ರಕ್ಕೆ ಹೋಗಲು ಖಾಸಗಿ ವಾಹನಗಳಿವೆ. ಕೊಲ್ಲೂರು ಕಡೆಯಿಂದ ಬರುವವರು ರಸ್ತೆ ಮಾರ್ಗವಾಗಿ ನಾಗೊಡ್ಡಿ ಘಟ್ಟವನ್ನು ದಾಟಿ ತುಮರಿ ಮಾರ್ಗವಾಗಿ ಸಿಗಂದೂರಿಗೆ ಬರಬಹುದು.
ದೂರದಿಂದ ಬರುವವರು ಶಿವಮೊಗ್ಗ ಅಥವಾ ಸಾಗರದಲ್ಲಿ ವಾಸ್ತವ್ಯ ಮಾಡಬಹುದಾಗಿದೆ.  ಸಿಗಂದೂರು ಕ್ಷೇತ್ರದಲ್ಲಿ ದೇವಸ್ಥಾನದ ವತಿಯಿಂದ ಉಳಿಯಲು ವ್ಯವಸ್ಥೆ ಇದೆ. ಸಿಗಂದೂರು ಚೌಡಮ್ಮದೇವಿ ದೇವಾಲಯದ ದೂರವಾಣಿ ಸಂಖ್ಯೆ: ೦೮೧೮೬- ೨೪೫ ೦೮೮/ ೨೪೫ ೧೧೪ ಸಂಪರ್ಕಿಸಬಹುದು.
ಊಟದ ವ್ಯವಸ್ಥೆ ಮಾಡಿ....
ಸಿಗಂದೂರು ಕ್ಷೇತ್ರ ಹಿನ್ನೀರು ಪ್ರದೇಶದಲ್ಲಿ ಇರುವುದರಿಂದ ಇಲ್ಲಿಗೆ ಬರುವ ಭಕ್ತರಿಗೆ ಊಟದ ಸಮಸ್ಯೆ ಎದುರಾಗುತ್ತದೆ. ಇಲ್ಲಿ ಉತ್ತಮ ಊಟದ ಹೋಟೆಲ್‌ಗಳಿಲ್ಲ. ದೇವಸ್ಥಾನ ಸಮಿತಿ ಭಕ್ತರಿಗೆ ಊಟದ ವ್ಯವಸ್ಥೆ ಮಾಡಬೇಕು ಎಂಬುದು ಇಲ್ಲಿಗೆ ಬರುವ ಭಕ್ತರ ಬೇಡಿಕೆ. ಈ ಬೇಡಿಕೆಯನ್ನು ದೇವಸ್ಥಾನ ಸಮಿತಿ ಪರಿಶೀಲಿಸಬೇಕು ಎನ್ನುವುದು ಹಲವು ಭಕ್ತರ ಮನವಿ.

No comments:

Post a Comment