Saturday, 1 December 2012

ಅಲ್ಲಿ ಮಕ್ಕಳ ದಿನಾಚರಣೆ ಅಬ್ಬರ
ಇಲ್ಲಿ ಮಕ್ಕಳ ಭವಿಷ್ಯ ಅರಳುತ್ತಿದೆ ಹೀಗೆ...

ಪ್ರಥಮ ಪ್ರಧಾನಿ ನೆಹರೂ ಅವರ ಬದುಕಿನಲ್ಲಿ ಮಕ್ಕಳ ಕುರಿತ ವಿಶೇಷ ಕಾಳಜಿ ವಹಿಸಿದ್ದಾರೆಂದು ಈ ದಿನವನ್ನು ಮಕ್ಕಳ ದಿನವೆಂದು ಆಚರಿಸಲಾಗುತ್ತಿದೆ. ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಅವರ ಬದುಕಿನ ಸತ್ಯದ ಬೆಳಕಿನಲ್ಲಿ ಈ ದಿನಾಚರಣೆಯ ಬಗೆಗೇ ಪ್ರಶ್ನೆಗಳನ್ನು ಹುಟ್ಟುಹಾಕುವಂತಿದೆ. ಏನೇ ಆದರೂ ಮಕ್ಕಳ ದಿನಾಚರಣೆಯನ್ನು ನಾವು ಕ್ರಮವಾಗಿ ಆಚರಿಸುತ್ತಲೇ ಬಂದಿದ್ದೇವೆ.ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಆಚರಿಸುವ  ಇಂತಹ ದಿನಗಳು ಮಕ್ಕಳ ಬಗ್ಗೆ ನಮ್ಮಲ್ಲಿ ಭಾವ ಸಂವೇದನೆ ಮೂಡಿಸಿದ್ದೇ ಆದರೆ ಅಂತಹ ದಿನಾಚರಣೆ ಪ್ರಸ್ತುತವೇ . ಈ ಹಿನ್ನೆಲೆಯಲ್ಲಿ ಮಕ್ಕಳ ಬಗೆಗೆ ಅವಲೋಕನ ನಡೆಸಲು ಇದು ಸಕಾಲವೇನೋ.
ಮಕ್ಕಳ ದಿನಾಚರಣೆಯಂದು ಎಲ್ಲಾ ಪತ್ರಿಕೆಗಳಲ್ಲಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪುಟಾಣಿ ಮಕ್ಕಳ ವೇಷದ ಸ್ಪರ್ಧೆ, ಚಿತ್ರ ಬಿಡಿಸುವುದು, ಹಾಡು, ನೃತ್ಯ, ಭಾಷಣ ಒಂದೆ ಎರಡೇ ಅನೇಕ ಸ್ಫರ್ಧೆಯನ್ನು ವಿವಿಧ ಸಂಸ್ಥೆಗಳು ಆಯೋಜಿಸಿ ಜಾಹಿರಾತುಗಳನ್ನು ನೀಡುತ್ತವೆ. ಸ್ಪರ್ಧೆ ಆಯೋಜಿಸಿದ ಸಂಸ್ಥೆ ಹೆಸರು ಗಳಿಸಬೇಕೆನ್ನುವ ಉದ್ದೇಶ ಇದರಲ್ಲಿ ಎದ್ದು ಕಂಡರೂ, ಮಕ್ಕಳ ಪ್ರತಿಭೆ ಪ್ರದರ್ಶಿಸಲು ಇದೊಂದು ವೇದಿಕೆ ಎಂಬುದೂ ಸರಿಯೇ.
 ಆದರೆ ನಮ್ಮ ದೇಶದಲ್ಲಿ ಇಂದು ಮಕ್ಕಳ ಬದುಕಿನತ್ತ ಒಂದು ನೋಟ ಹರಿಸಿದ್ದೇ ಆದರೆ , ಒಂದೆಡೆ ಆಧುನಿಕ ಶಿಕ್ಷಣದ ಭರಾಟೆಯಲ್ಲಿ ಮಕ್ಕಳಿಗ ಬಾಲ್ಯವೇ ಕಳೆದುಹೋಗುತ್ತಿದೆಯೇನೋ ಎನಿಸುತ್ತಿದೆ. ಮಕ್ಕಳಿಗೆ ಹೋಮ್‌ವರ್ಕ್(ಭವಿಷ್ಯ ಜೀವನದಲ್ಲಿ ಕಷ್ಟಸಹಿಷ್ಣುತೆಯನ್ನು ಕಲಿಸುವ  ಮನೆಗೆಲಸ ಮಾಡಿಸಿದ್ದೇ ಆದರೆ ಅಪರಾಧ !)ನ ಒತ್ತಡ.ಓದುವ , ಇಂಜಿನಿಯರ್ ಆಗುವ , ಡಾಕ್ಟರ್, ಐಟಿ, ಬಿಟಿ ಆಗಿ ಕೈ ತುಂಬ ಸಂಬಳ ಪಡೆಯುವ , ಫಾರೀನ್‌ಗೆ ಹಾರುವ ಭ್ರಮಾ ಲೋಕದಲ್ಲಿ ಬಾಲ್ಯದ ಖುಷಿ , ಬದುಕಿನ ತಳಪಾಯ ಕಳೆದುಹೋಗುತ್ತಿದೆ  ಎಂಬ ಆತಂಕ ಇಂದು ಅನೇಕರಲ್ಲಿ ಮೂಡುತ್ತಿದ್ದರೆ ಅದರಲ್ಲಿ ತಥ್ಯವಿದೆ.
ಇನ್ನೊಂದೆಡೆ ,ದೇಶದ ಅನೇಕ ನಗರಗಳ ಸೇವಾಬಸ್ತಿಗಳು ಸೇರಿದಂತೆ ಸಮಾಜದಲ್ಲಿ ಎಷ್ಟೋ ಮಕ್ಕಳಿಗೆ ಓದಲು ಅವಕಾಶವಿಲ್ಲ.ಬದುಕಿನ ಕೂಳಿಗೂ ಬಡಿದಾಡಬೇಕಾದ ಅಧ್ವಾನ. ಇವರ ಬದುಕಿಗೇನು?
  ಬಡತನದ ಬೇಗೆಯಲ್ಲಿ ದಿನಕಳೆಯುತ್ತಿರುವ ಸ್ಲಮ್‌ಗಳಲ್ಲಿರುವ ಮಕ್ಕಳನ್ನು ಬಹಳ ಸುಲಭವಾಗಿ ದುಷ್ಟಕೃತ್ಯಗಳಿಗೆ ತಮ್ಮ ದಾಳವನ್ನಾಗಿ ಬಳಸಿಕೊಳ್ಳುತ್ತಿವೆ ದುಷ್ಟಶಕ್ತಿಗಳು. ಇಂತಹ  ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ.ಇಂತಹ ಆಮಿಷಕ್ಕೆ ಬಲಿಯಾಗಿ ಮಕ್ಕಳ ಸುಂದರ ಭವಿಷ್ಯ ಹಾಳುಗೆಡಹುವುದು ಒಂದೆಡೆಯಾದರೆ ಅವರ ಪೋಷಕರು ಕುಡಿತದ ದಾಸರಾಗಿರುವುದರಿಂದ ಅವರನ್ನು ಸುಲಭವಾಗಿ ವಂಚಿಸಲು ಇನ್ನಷ್ಟು ಅವಕಾಶ. ಇಂದು ಸ್ಲಮ್‌ಗಳಲ್ಲಿ ಬಳಪ-ಲೇಖನಿ ಹಿಡಿಯಬೇಕಾದ ಸಣ್ಣ ಮಕ್ಕಳು ಗಾಂಜಾ, ಅಫಿಮು, ಚರಸ್‌ನಂಥ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಚಕ್ರವ್ಯೂಹದಲ್ಲಿ ಸಿಕ್ಕಿ ಹೊರಬರಲಾರದೆ ವಿಲವಿಲ ಒದ್ದಾಡುತ್ತಿದ್ದಾರೆ. ಮೊದಲಿಗೆ ಸಣ್ಣ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿ ಕೊಳ್ಳುವ ಮಕ್ಕಳು, ಬೆಳೆದು ದೊಡ್ಡವರಾದಾಗ, ಜೀವನದಲ್ಲಿ ಗುರಿಯಿಲ್ಲದೆ, ಬೇರೆ ದಾರಿ ಕಾಣದೆ ಇಂತಹ ನರಕದಲ್ಲಿಯೆ ಬದುಕನ್ನು ಅಂತ್ಯಗೊಳಿಸುವ ದಾರುಣ ಸ್ಥಿತಿ.
ಮುಗ್ಧಮನಸುಗಳಿಗೆ ತಮ್ಮ ಜೀವನ ಮೃತ್ಯುಕೂಪದಲ್ಲಿ ಬೀಳುತ್ತವೆ ಎಂದು ತಿಳಿಯುವುವಾಗ ಕಾಲ ಕೈ ಮೀರಿ ಹೋಗಿರುತ್ತದೆ. ಆದರೂ ಕೆಲವೊಂದು ಕಾಯಿಲೆಗೆ ಪ್ರಾರಂಭದಲ್ಲಿಯೇ ಔಷದಿ ಮಾಡಿದರೆ ನಿವಾರಿಸಬಹುದು ಅಥವಾ ರೋಗದ ಪ್ರಖರತೆ ಹತೋಟಿಗೆ ತರಬಹುದು. ಸ್ಲಮ್‌ನಲ್ಲಿರುವ ಮಕ್ಕಳ -ಜನರ ಬದುಕನ್ನೇ   ಬಂಡವಾಳವಾಗಿಸಿಕೊಂಡ ಮತೀಯವಾದಿ ಗುಂಪುಗಳು  ಈ ಕುಟುಂಬಗಳನ್ನು ಮತಾಂತರ ಮಾಡಿದ ಘಟನೆಗಳೂ ಸಾಕಷ್ಟಿವೆ.
ಮನೆಯ ಬಡತನ, ತಂದೆ ತಾಯಿಯ ಕಿರುಕುಳ, ಮಾನಸಿಕ ಬೆಳವಣಿಗೆಯ ಕೊರತೆ, ಅನಕ್ಷರತೆ, ಅತಿಯಾಸೆ ಹೀಗೆ ಅನೇಕ ಸಮಸ್ಯೆಗಳಿಂದ ಮಕ್ಕಳು ಸಮಾಜ ಘಾತುಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತವೆ.  ಗಂಡು ಮಕ್ಕಳು ಈ ರೀತಿಯಾಗಿ ಜೀವನ ಹಾಳುಮಾಡಿಕೊಳ್ಳುತ್ತಿದ್ದರೆ ಪಾಪ ಹೆಣ್ಣು ಮಕ್ಕಳ ಸ್ಥಿತಿ ಇನ್ನಷ್ಟೂ ಶೋಚನೀಯ. ಅಪ್ರಾಪ್ತ ಬಾಲೆಯರು ಕಾಮಾಂಧರ ಭೋಗದ ವಸ್ತುಗಳಾಗುತ್ತಿದ್ದಾರೆ. ಮೈಕಲ್ ಜಾಕ್ಸನ್ ಕಾಮತೃಷೆ ತೀರಿಸಿಕೊಳ್ಳಲು ಅಪ್ರಾಪ್ತೆಯರನ್ನೆ ಬಳಸುತ್ತಿದ್ದ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಮುಂಬೈನ ಅಂದೇರಿಯಲ್ಲಿ ವಾಸವಾಗಿದ್ದ ಮಧ್ಯಮ ವರ್ಗದ ಹೆಣ್ಣಿನ ಮೇಲಾದ ಲೈಂಗಿಕ ದೌರ್ಜನ್ಯ,  ಸೌಜನ್ಯಳಂತಹ ನೂರಾರು ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಬಲಿಯಾಗುತ್ತಿರುವುದನ್ನು   ಕಂಡಾಗ, ನಮ್ಮ ದೇಶದಲ್ಲಿಯೂ ಕೂಡ ಇಂತಹ ಪಾಪಿಗಳಿರುವುದು ವ್ಯಕ್ತ.
 ವಾಮಾಚಾರವೆಂಬ ಮಾಯೆಗೆ ಬಲಿಯಾಗಿ ಪುಟಾಣಿಗಳನ್ನೆ ಬಲಿಕೊಡುವಂಥ ಕಟುಕರೂ ಸಮಾಜದಲ್ಲಿದ್ದಾರೆ. ಎನ್‌ಸಿಆರ್‌ಬಿಯು ೨೦೧೧ರಲ್ಲಿ ನಮ್ಮ ದೇಶದಲ್ಲಿನ ಮಕ್ಕಳ ಸಮಾಜ ವಿರೋಧಿ ಚಟುವಟಿಕೆಯನ್ನು ವರದಿ ಮಾಡಿದೆ. ಜೈಪುರದಲ್ಲಿ ೩೬೯ ಕ್ರೈಮ್ ಮತ್ತು ಬಲಾತ್ಕಾರದ ದೂರು ದಾಖಲಾಗಿದೆ. ರಾಜಸ್ಥಾನ-೧,೩೧೮, ಮಧ್ಯಪ್ರದೇಶ-೪,೯೧೨, ಮಹಾರಾಷ್ಟ್ರ-೩,೬೨೪, ಉತ್ತರ ಪ್ರದೇಶ-೨,೩೩೨ ದೂರು ದಾಖಲಾಗಿದೆ. ೧೫-೨೯ ವರ್ಷದೊಳಗಿನ ಆತ್ಮಹತ್ಯೆ ಪ್ರಕರಣದಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ೬೫೭ ಪ್ರಕರಣಗಳಲ್ಲಿ ೩೨೯ ಮಹಿಳೆಯರು, ದೆಹಲಿ-೬೫೧, ಮುಂಬೈ-೫೮೨, ಚೆನೈ-೪೭೨ ಈ ರೀತಿಯಾಗಿ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಸ್ಲಮ್‌ಗಳಲ್ಲಿರುವ ಮಕ್ಕಳಿಗೆ ಹಾಗೂ ಬಡತನದಲ್ಲಿರುವ ಮಕ್ಕಳಿಗೆ ವಿದ್ಯೆ ಕಲಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸೇವಾಸಂಸ್ಥೆಗಳು ಶ್ರಮಿಸುತ್ತಿವೆ. ೧೯೮೦ರ ದಶಕದಲ್ಲಿ ಒರಿಸ್ಸಾದಲ್ಲಿ ಫ್ಲಾಟ್‌ಫಾರಂ ಶಾಲೆಗಳು ಪ್ರಾರಂಭಗೊಂಡವು. ನಿವೃತ್ತ ಸೇನಾಧಿಕಾರಿಯ ಪತ್ನಿ ಇಂದರ್‌ಜಿತ್ ಖುರಾನ ರುಚಿಕಾ ಸೋಷಿಯಲ್ ಸರ್ವಿಸ್ ಆರ್ಗನೈಜೇಷನ್ ಪ್ರಾರಂಭ ಮಾಡಿ, ಈಗ ಆ ಸಂಸ್ಥೆ ೮೨೦ ಫ್ಲಾಟ್‌ಫಾರಂ ಶಾಲೆ, ೭೫ ಸೇವಾ ಬಸ್ತಿ ಶಾಲೆ, ೨೫ ನರ್ಸರಿ ಶಾಲೆಗಳನ್ನು ಯಾವುದೇ ಸ್ವಾರ್ಥವಿಲ್ಲದೆ ಯಶಸ್ವಿಯಾಗಿ ನಡೆಸುತ್ತಿದೆ. ಸರ್ಕಾರ ಮಕ್ಕಳ ವಿಕಾಸಕ್ಕೆಂದು ಹಲವಾರು ಯೋಜನೆಗಳನ್ನು, ಸ್ವಯಂಸೇವಾ ಸಂಸ್ಥೆಗಳು, ಅಂಗನವಾಡಿಗಳು, ಶಾಲಾಪೂರ್ವ ಚಟುವಟಿಕೆಗಳು ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ಕಾಪಾಡುತ್ತಿವೆ. ೧೯೫೨ರಲ್ಲಿ ಭಾರತೀಯ ಮಕ್ಕಳ ಕಲ್ಯಾಣ ಸಂಸ್ಥೆಯಡಿಯಲ್ಲಿ ಬಾಲವಿಕಾಸ ಕೇಂದ್ರ ಹಾಗೂ ೧೯೫೫ ಮಕ್ಕಳ ಕಲ್ಯಾಣವನ್ನೇ ಗುರಿಯಾಗಿಸಿ ರಾಷ್ಟ್ರೀಯ ಮಕ್ಕಳ ಮಂಡಳಿಯನ್ನು ಪ್ರಾರಂಭ ಮಾಡಿದೆ.
ಸಂಘ ಪರಿವಾರದ ಸಾರ್ಥಕ ಕಾರ್ಯ:
ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರೇರಿತ ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗೆ ಪ್ರೋತ್ಸಾಹ ನೀಡಲು ಅನೇಕ ಕಾರ್ಯಕ್ರಮ ಆಯೋಜಿಸುತ್ತಿದೆ. ಬೆಂಗಳೂರಿನಲ್ಲಿ  ೩ ಗಂಡು ಮಕ್ಕಳಿಗಾಗಿ ನಡೆಯುವ ನರೇಂದ್ರ ನೆಲೆ(೬೫ಮಕ್ಕಳು), ನಮ್ಮ ಮನೆ(೨೨ಮಕ್ಕಳು), ಚಂದನ ನೆಲೆ(೩೩ಮಕ್ಕಳು) ಮತ್ತು ಹೆಣ್ಣು ಮಕ್ಕಳಿಗಾಗಿ ನಿವೇದಿತಾ (೨೮), ಆಶಾಕಿರಣ (೨೫), ವಸುಧಾ ನೆಲೆ (೨೫), ಶಿವಮೊಗ್ಗದಲ್ಲಿ (೨೫), ಮೈಸೂರು(೧೨)ತುಮಕೂರು(೧೬),ಬಾಗಲಕೋಟೆಯಲ್ಲಿ ವಸತಿ ಕೇಂದ್ರಗಳನ್ನು ಸ್ಥಾಪಿಸಿದೆ. ನೆಲೆಯಲ್ಲಿ ಚಿಂದಿ ಆಯುವ, ಅನಾಥರು, ಸಿಂಗಲ್ ಪೇರೆಂಟ್ ಹೀಗೆ ಹಲವಾರು ನಿರ್ವಸಿತ ಮಕ್ಕಳಿಗೆ ಆಶ್ರಯವನ್ನು ಕಲ್ಪಿಸಿಕೊಟ್ಟು ಉಚಿತ ಶಿಕ್ಷಣ ವ್ಯವಸ್ಥೆ ಮಾಡುತ್ತಿದೆ.
ಸೇವಾ ಕಿರಣದ ವತಿಯಿಂದ ೭೦ ಟ್ಯೂಶನ್ ಕೇಂದ್ರಗಳಲ್ಲಿ ೧,೨೦೦ ಮಕ್ಕಳಿಗೆ ೭೦ ಶಿಕ್ಷಕರು ಉಚಿತ ಮನೆಪಾಠ ವ್ಯವಸ್ಥೆ ಮಾಡುತ್ತಿದ್ದಾರೆ. ಅಲ್ಲದೆ ಮನೋನಂದನ, ಅರುಣ ನಂದನ ಅಂಗವಿಕಲ ಮಕ್ಕಳ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಯೂತ್ ಫಾರ್ ಸೇವಾದ ವತಿಯಿಂದ ಬಡ ಮಕ್ಕಳಿಗೆ ಶಿಕ್ಷಣದ ವೆಚ್ಚದೊಂದಿಗೆ ಉಚಿತವಾಗಿ ಶಿಕ್ಷಣಕ್ಕೆ ಅಗತ್ಯ ಸಲಕರಣೆಗಳನ್ನು ಒದಗಿಸುತ್ತಿವೆ. ಆಪ್ತ ಸಲಹಾ ಕೇಂದ್ರದಿಂದ ಮಕ್ಕಳಿಗೆ ಕೌನ್ಸೆಲಿಂಗ್ ಕೂಡ ಮಾಡಲಾಗುತ್ತಿದೆ.
ರಾಷ್ಟ್ರೋತ್ಥಾನ ಪರಿಷತ್‌ನ ವತಿಯಿಂದ ದಿನದಲ್ಲಿ ೨ ಗಂಟೆಗಳ ತರಬೇತಿಯನ್ನು ೨೨೭ ಕೇಂದ್ರಗಳಲ್ಲಿ ೨೨೭ ಶಿಕ್ಷಕರು ೫ಸಾವಿರಕ್ಕೂ ಅಧಿಕ ಮಕ್ಕಳಿಗೆ ಗಣಿತ, ಆಂಗ್ಲ, ವಿಜ್ಞಾನ ಪಠ್ಯವನ್ನು ಬೋಧಿಸುತ್ತಿದ್ದಾರೆ. ಕೇಶವ ಸೇವಾ ಸಮಿತಿಯಿಂದ ೩೦೦೦ ವಿದ್ಯಾರ್ಥಿಗಳಿಗೆ ಮನೆಪಾಠ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಬಡಮಕ್ಕಳನ್ನು ಗುರುತಿಸಿ ಅವರಿಗೆ ಉಚಿತ ಶಿಕ್ಷಣ ವ್ಯವಸ್ಥೆ ಮಾಡಲಾಗುತ್ತಿದ್ದು ೬೦ ಮಕ್ಕಳಿಗೆ ಈರೀತಿಯ ಸೌಲಭ್ಯ ದೊರಕಿದೆ. ಸ್ನೇಹ ಸೇವಾ ಟ್ರಸ್ಟ್‌ನ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ  ವಿದ್ಯಾರ್ಥಿಗಳಿಗೆ ೭ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ``ವಿದ್ಯಾವಾಹಿನಿ" ಯೋಜನೆಯಲ್ಲಿ ಉಚಿತ ಶಿಕ್ಷಣ ನೀಡುತ್ತಿದೆ. ವಿದ್ಯಾವಾಹಿನಿಯಲ್ಲಿ ೮೬ ಮಕ್ಕಳು ಈ ಸೌಲಭ್ಯ ಪಡೆದುಕೊಂಡಿದ್ದಾರೆ. ಸ್ಲಮ್‌ಗಳಲ್ಲಿ ವಿದ್ಯಾರ್ಥಿಗಳಿಗಾಗಿ ೧೧ಕೇಂದ್ರಗಳಲ್ಲಿ ೨೧೬ ಮಕ್ಕಳಿಗೆ ಉಚಿತ ಮನೆಪಾಠ ಕಲಿಸಲಾಗುತ್ತಿದೆ. ಸಂಸ್ಕಾರ ಕೇಂದ್ರದಿಂದ ಮಕ್ಕಳಿಗೆ ಸಂಸ್ಕಾರವನ್ನು ಕಲ್ಪಿಸಲಾಗಿದೆ. ವಿಶ್ವಹಿಂದೂ ಪರಿಷತ್ತಿನ ವನಿತಾಶ್ರಮ ಹಾಗೂ ಕುತ್ತಾರು ಆಶ್ರಮದಲ್ಲಿ ಅನೇಕ ನಿರಾಶ್ರಿತ ಮಕ್ಕಳು ತಮ್ಮ ಜೀವನ ಸಾರ್ಥಕ್ಯ ಮಾಡಿ ಕೊಳ್ಳುತ್ತಿರುವುದನ್ನು ಗಮನಿಸಬೇಕಾದ ಅಂಶ. ಯಾವುದೆ ಸ್ವಾರ್ಥ ಬಯಸದೆ ಬಡಮಕ್ಕಳಿಗೆ ಶಿಕ್ಷಣ ನೀಡುತ್ತಾ ಅನೇಕ ಸ್ವಯಂಸೇವಕರು  ಸೇವಾ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಮತಾಂತರದ ಗುರಿಯಿರಿಸಿ, ಸ್ವಾರ್ಥಸಾಧಿಸುವ ಮತೀಯವಾದಿ ಶಕ್ತಿಗಳಿಗೆ  ಸೆಕ್ಯುಲರ್  ಸಿಗುತ್ತಿದೆ. ಯಾವುದೇ ಸ್ವಾರ್ಥಾಪೇಕ್ಷೆಯಿಲ್ಲದೆ ಸೇವೆ ಕರ್ತವ್ಯ ಎಂಬ ನೆಲೆಯಲ್ಲಿ ೮೬ ವರ್ಷಗಳಿಂದ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಸೇವಾ ಪ್ರಕಲ್ಪಗಳನ್ನು  ನಡೆಸುತ್ತಿರುವ   ಸಂಘಪರಿವಾರಗಳಿಗೆ ಕೋಮುಸಂಘಟನೆ ಎನ್ನುವ ಪಟ್ಟ !
 ಹಿಂದು ಸಮಾಜದ ಎಲ್ಲ ಬಂಧುಗಳಿಗೆ ನೆಲೆಯನ್ನು ಕಲ್ಪಿಸಬೇಕು ಹಾಗೂ ಭವ್ಯಭಾರತದ ನಿರ್ಮಾಣ ಮಾಡಬೇಕೆನ್ನುವ ಮನೋಭಿಲಾಷೆಯು  ಎಲ್ಲಿಯಾದರೂ ಕೋಮುವಾದಕ್ಕೆ ಆಸ್ಪದ ಕೊಡುತ್ತದೆಯೇ? ಸ್ವಾರ್ಥ, ಕೀರ್ತಿ ಬಯಸದೆ ಸೇವಾ ಬಸ್ತಿಯಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾ, ಸಂಸ್ಕಾರವನ್ನು ಬೆಳೆಸುತ್ತಾ ಸಮಾಜದ ಮುಖ್ಯವಾಹಿನಿಗೆ ತಂದು ಸತ್ಪ್ರಜೆಗಳನ್ನಾಗಿ ಮಾಡಬೇಕೆನ್ನುವುದು ಸಂಘಪರಿವಾರದಂತಹ ಅನೇಕ ಸಂಘ ಸಂಸ್ಥೆಗಳು ಮಕ್ಕಳ ಬದುಕಿಗೆ ಬೆಳಕಾಗುತ್ತಿರುವುದು ಅರ್ಥಪೂರ್ಣವೆಂದೆನಿಸದೇ?


ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್...ಶಿಕ್ಷಕಿಯರ ಅಳಲು
ಕೇಂದ್ರದ ಗ್ಯಾಸ್ ನೀತಿ..ಅಂಗನವಾಡಿಗೂ ತಟ್ಟಿದ ಬಿಸಿ

ಕನ್ನಡ ಉಳಿಸಬೇಕೆಂದು ಕನ್ನಡ ಪರ ಸಂಘಟನೆಗಳು, ರಾಜ್ಯ ಸರಕಾರ ವಿಪರೀತ ಹೋರಾಟ ನಡೆಸುತ್ತಿದ್ದರೂ, ಕನ್ನಡವನ್ನೆ ಮೂಲವಾಗಿಸಿಕೊಂಡು ರಾಜ್ಯದಲ್ಲಿ ಕಾರ್ಯಚರಿಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಕೇಂದ್ರ ಸರಕಾರ ಗ್ಯಾಸ್ ಸಿಲಿಂಡರ್ ಮೇಲಿನ ಬೆಲೆ ಏರಿಕೆ ಮಾಡಿರುವುದರ ಬಿಸಿ ತಟ್ಟಿದೆ. ಶಿಕ್ಷಣ ಕಲಿಕೆಯ ಮೊದಲ ಮೆಟ್ಟಿಲು ಅಂಗನವಾಡಿಯಲ್ಲಿ ಚಿಕ್ಕ ಮಕ್ಕಳಿಗೆ ನೀಡುತ್ತಿದ್ದ ಬೆಳಗ್ಗಿನ ತಿಂಡಿ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರಕಾರವು ಅಂಗನವಾಡಿ ಕೇಂದ್ರಗಳಿಗೆ ಉರುವಲು ವೆಚ್ಚವಾಗಿ ತಿಂಗಳಿಗೆ ರೂ.೧೦೦ ರಂತೆ ವರ್ಷಕ್ಕೆ ೧,೨೦೦ ನೀಡುತ್ತಿತ್ತು. ನಂತರ ಸತತ ಹೋರಾಟದ ಫಲವಾಗಿ ರೂ.೮೦೦ಜಾಸ್ತಿ ಮಾಡಿದೆ. ಈ ಸಂದರ್ಭ ಅಂಗನವಾಡಿ ಕೇಂದ್ರಗಳಲ್ಲಿ ಒಂದು ಹೊತ್ತು ಮಕ್ಕಳಿಗೆ ಬೇಯಿಸಿದ ಆಹಾರ ನೀಡುತ್ತಿದ್ದರಿಂದ ಗ್ಯಾಸ್ ಸಿಲಿಂಡರ್ ೩ರಿಂದ ಮೂರುವರೆ ತಿಂಗಳವರೆಗೆ ಬರುತ್ತಿದ್ದು ವರ್ಷಕ್ಕೆ ೪ ಗ್ಯಾಸ್ ಸಿಲಿಂಡರ್ ಸಾಲುತ್ತಿತ್ತು. ಇದು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಾಮರ್ಥ್ಯವನ್ನಾಧರಿಸಿ ಗ್ಯಾಸ್ ಸಿಲಿಂಡರ್ ಸಾಗಾಟ-ವೆಚ್ಚ ಹೆಚ್ಚಿದಾಗ ಅಲ್ಪಸ್ವಲ್ಪ ಹಣವನ್ನು ಶಿಕ್ಷಕಿಯರೇ ಭರಿಸುತ್ತಿದ್ದರು. ಈಗ ಕೇಂದ್ರ ಸರಕಾರ ಏಕಾಏಕಿ ಗ್ಯಾಸ್ ಸಿಲಿಂಡರ್‌ಗಳ ಮೇಲಿನ ಬೆಲೆ ಏರಿಸಿದ್ದರಿಂದ ಶಿಕ್ಷಕರಿಯರಿಗೆ ದಿಕ್ಕು ತೋಚದಂತಾಗಿದೆ.
ಬದಲಾದ ಅಂಗನವಾಡಿ ಆಹಾರ ಪಟ್ಟಿ:
ಎಪ್ರಿಲ್ ತಿಂಗಳಿನಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುವ ಆಹಾರ ಪಟ್ಟಿಯಲ್ಲಿ ಬದಲಾವಣೆಯಾಗಿದೆ. ಬೆಳಿಗ್ಗೆ ಮತ್ತು ಮದ್ಯಾಹ್ನ ಗಂಜಿ ಹಾಗೂ ಚಟ್ನಿ ನೀಡಬೇಕು ಎನ್ನುವ ಆದೇಶವಿದೆ. ಚಟ್ನಿಗೆ ಸರಕಾರದ ವತಿಯಿಂದ ಹುರುಳಿ, ಮೆಣಸು, ಉಪ್ಪುಗಳನ್ನು ಮಾತ್ರ ಬಳಸಬೇಕಿದ್ದು ಅಷ್ಟು ಸಾಮಾಗ್ರಿ ಮಾತ್ರ ನೀಡುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಆಹಾರ ವ್ಯವಸ್ಥೆಗೊಳಿಸಬೇಕು ಎನ್ನುವ ಸಂಪೂರ್ಣ ಜವಾಬ್ದಾರಿ ವಹಿಸಿದ್ದರಿಂದ ಕರಾವಳಿ ಬಾಗದಲ್ಲಿ ಎರಡು ಹೊತ್ತು ಗಂಜಿ ನೀಡುವುದನ್ನು ಕಡಿತಗೊಳಿಸಿ ವಾರದಲ್ಲಿ ೨ ದಿನ ಗಂಜಿಯೂಟ ಸೇರಿದಂತೆ ಉಳಿದ ದಿನದಲ್ಲಿ ಬೇಯಿಸಿದ ಕಡ್ಲೆಕಾಳು ನೀಡುವಂತೆ ಸೂಚಿಸಲಾಗಿದೆ. ಬೆಳಿಗ್ಗೆ ಹೆಸರುಕಾಳು, ಗಂಜಿ-ಚಟ್ನಿ, ಮದ್ಯಾಹ್ನ ಅನ್ನಸಾಂಬಾರು (ಕುಚ್ಚಲು ಅಕ್ಕಿ)ನೀಡಬೇಕು.
ಅಂಗನವಾಡಿ ಕೇಂದ್ರಗಳಿಗೆ ಗ್ಯಾಸ್‌ಕೊರತೆ:
ಜಿಲ್ಲೆಯಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಬೆಳಗ್ಗಿನ ತಿಂಡಿಗೆ ಕಡ್ಲೆಕಾಳನ್ನು ಬೇಯಿಸಿ ನೀಡಬೇಕು. ಅಲ್ಲದೇ ತೊಗರಿಬೇಳೆ, ಕುಚ್ಚಲು ಅಕ್ಕಿ ಅನ್ನ, ಕಡ್ಲೆ, ಮಕ್ಕಳಿಗೆ ಕುದಿಸಿದ ನೀರು ಎಲ್ಲವು ಕೂಡ ಗ್ಯಾಸ್‌ನಲ್ಲಿ ಆಗಬೇಕಿರುವುದರಿಂದ ಮಕ್ಕಳ ಸಂಖ್ಯೆ ಆದರಿಸಿ ಗ್ಯಾಸ್ ೨ತಿಂಗಳು ಬರುವುದು ಕಷ್ಟಕರ. ಜಿಲ್ಲೆಯ ೩೦ಕ್ಕಿಂತಲೂ ಕಡಿಮೆ ಅಂಗನವಾಡಿ ಕೇಂದ್ರಗಳಲ್ಲಿ ಪ್ರೆಶರ್ ಕುಕ್ಕರ್ ಸೌಲಭ್ಯವಿದ್ದರಿಂದ ಗ್ಯಾಸ್ ಸ್ವಲ್ವ ದಿನ ಹೆಚ್ಚು ಬಳಕೆ ಮಾಡಬಹುದಾಗಿದೆ. ಶಿಕ್ಷಕಿಯರ ಸತತ ಹೋರಾಟದ ಬಳಿಕ ಆಗಸ್ಟ್ ತಿಂಗಳಿನಿಂದ ೩ ತಿಂಗಳಿಗೆ ರೂ.೨೦೦ ಜಾಸ್ತಿ ಮಾಡಿದ್ದು, ವರ್ಷಕ್ಕೆ ರೂ.೮೦೦ ಹೆಚ್ಚಳವಾಗಿ ಉರುವಲು ವೆಚ್ಚ ವರ್ಷಕ್ಕೆ ರೂ. ೨೦೦೦ ಸಿಗುತ್ತಿದೆ. ಇದರಿಂದ ಸ್ವಲ್ಪ ಸುಧಾರಿಸಿ ಕೊಳ್ಳುವುದರಲ್ಲಿ ಕೇಂದ್ರದ ಬೇಲೆಯೇರಿಕೆಯಿಂದಾಗಿ ಪ್ರತಿ ಗ್ಯಾಸ್‌ಗೆ ರೂ.೧,೧೫೦ ನೀಡಿ ಖರೀದಿಸುವುದು ಮಾತ್ರವಲ್ಲ, ಸಿಲಿಂಡರ್‌ನ ಸಾಗಾಟ ವೆಚ್ಚ ಭರಿಸಬೇಕಿದೆ. ನಗರ ಪ್ರದೇಶದಲ್ಲಿ ಸಾಗಾಟ ವೆಚ್ಚ ಸ್ವಲ್ಪ ಕಡಿಮೆಯಾಗಿದ್ದು, ಗ್ರಾಮೀಣ ಪರಿಸರದಲ್ಲಿ ವೆಚ್ಚ ವಿಪರೀತವಾಗಿದೆ. ಸರಕಾರದಿಂದ ಉರುವಲು ವೆಚ್ಚವಾಗಿ ರೂ. ೨,೦೦೦ ಮಾತ್ರ ಸಿಗುತ್ತಿದ್ದು, ಒಂದು ಅಂಗನವಾಡಿಯಲ್ಲಿ ೩೦ ರಂತೆ ಮಕ್ಕಳ ಸಂಖ್ಯೆಯನ್ನಾದರಿಸಿ ಕನಿಷ್ಟ ೫ ಸಿಲಿಂಡರ್‌ನ ಅವಶ್ಯಕತೆಯಿದೆ. ಗ್ಯಾಸ್ ಸಿಲಿಂಡರ್‌ಗೆ ರೂ.೧,೧೫೦ರಂತೆ ೫ ಸಿಲಿಂಡರ್‌ಗೆ ರೂ.೫,೭೫೦ ಆಗುತ್ತಿದ್ದು ಸರಕಾರದಿಂದ ಸಿಗುವ ಉರುವಲು ವೆಚ್ಚ ಕೇವಲ ರೂ.೨೦೦೦ವಾಗಿದೆ. ಉಳಿದಂತೆ ೩,೭೫೦ನ್ನು ಶಿಕ್ಷಕಿಯರು ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಯಾವುದೇ ಅಧಿಕಾರಿಗಳು ಕೇಳುತ್ತಿಲ್ಲ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಾರ್ಚ್ ತಿಂಗಳಿನಿಂದ ಅಂಗನವಾಡಿ ಶಿಕ್ಷಕಿಯರ ಅಹವಾಲು ಸ್ವೀಕರಿಸದಿರುವುದು ಮಕ್ಕಳ ಹಾಗೂ ಅಂಗನವಾಡಿಯ ಕುರಿತಾಗಿರುವ ಕಾಳಜಿ ಸೂಚಿಸುತ್ತದೆ.
ಅಂಗನವಾಡಿ ಕೇಂದ್ರಗಳ ಅನ್ಯವೆಚ್ಚ:
ಜಿಲ್ಲೆಯಲ್ಲಿರುವ ಕೆಲವೊಂದು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲದೇ ಕ್ಲಬ್, ಸಂಘಸಂಸ್ಥೆಗಳಲ್ಲಿ ನಡೆಸಲಾಗುತ್ತಿದೆ. ಕ್ಲಬ್‌ಗಳಲ್ಲಿ ನಡೆಸುವ ಅಂಗನವಾಡಿ ಕೇಂದ್ರದ ಕರೆಂಟ್ ಬಿಲ್‌ಗಳನ್ನು ಅವರು ತುಂಬಿಸಿಕೊಂಡು ಹೋಗುತ್ತಿದ್ದು, ಇತರೆಡೆಯಲ್ಲಿ ಶಿಕ್ಷಕಿಯರು ಭರಿಸಬೇಕಾದ ದುಸ್ಥಿತಿಯಿದೆ. ಅಲ್ಲದೆ ಸಿಲಿಂಡರ್ ಸಾಗಾಟದ ವೆಚ್ಚವನ್ನು ನೀಡಬೇಕಿದೆ. ಸರಕಾರ ಗಂಜಿ-ಚಟ್ನಿ ವ್ಯವಸ್ಥೆ ಮಾಡಿದ್ದರೂ ತೆಂಗಿನ ಕಾಯಿ ನೀಡುವುದಿಲ್ಲ. ಅದನ್ನು ಕೆಲವೊಮ್ಮೆ ನಿಭಾಯಿಸಬೇಕು. ಚಟ್ನಿ ರುಬ್ಬಲು ಸರಿಯಾದ ವ್ಯವಸ್ಥೆಯಿಲ್ಲ. ಕೇಂದ್ರ ಸರಕಾರದಿಂದ ರೂ. ೩೦೦೦ಹಾಗೂ ರಾಜ್ಯ ಸರಕಾರದಿಂದ ರೂ.೧೫೦೦ ಗೌರವಧನ ಪಡೆಯುವ ನಾವು ರೂ.೩೭೫೦ ಮತ್ತು ಇತರ ವೆಚ್ಚವನ್ನು ಭರಿಸಿದರೆ ನಮ್ಮ ಸಂಸಾರ ಗತಿಯೇನು? ಎನ್ನುವ ಪ್ರಶ್ನೆ ರಾಜ್ಯದ ಎಲ್ಲಾ ಅಂಗನವಾಡಿ ಶಿಕ್ಷಕಿಯರದಾಗಿದೆ. ಇದಕ್ಕೆ ಅಧಿಕಾರಿಗಳು ಹಾಗೂ ಸರಕಾರ ಉತ್ತರ ನೀಡಬೇಕಿದೆ. ಅಧಿಕಾರಿಗಳು ಈ ಸಮಸ್ಯೆ ಬಗೆ ಹರಿಸಿದರೆ ಮಾತ್ರ ಅಂಗನವಾಡಿಗಳಲ್ಲಿ ಚಿಕ್ಕ-ಚಿಕ್ಕ ಮಕ್ಕಳ ತೊದಲು ನುಡಿಗಳು ಪುನಃ ಕೇಳುವಂತಾಗುತ್ತದೆ.
ಬಾಕ್ಸ್:
ಗ್ಯಾಸ್ ಬೆಲೆಯೇರಿಕೆಯಿಂದ ರಾಜ್ಯದ ಎಲ್ಲಾ ಅಂಗನವಾಡಿಯಲ್ಲೂ ಕೊರತೆ ಕಾಣಿಸಿದೆ. ಕಡ್ಲೆಕಾಳನ್ನು ಬೇಯಿಸದೆ ಮಕ್ಕಳಿಗೆ ನೀಡಲು ಸಾಧ್ಯವಿಲ್ಲ. ಸರಕಾರವು ಸಂಜೆಯವರೆಗೆ ಅಂಗನವಾಡಿಯಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವಂತೆ ಆದೇಶ ಹೊರಡಿಸಿದ್ದರೂ ಯಾವುದೇ ಸೌಕರ್ಯ ಒದಗಿಸಿಲ್ಲ. ಕೆಲವು ಕಡೆ ದಾನಿಗಳ ಸಹಕಾರದಿಂದ ಮಕ್ಕಳು ಮಲಗಲು ಚಾಪೆಯ ವ್ಯವಸ್ಥೆ ಮಾಡಿಕೊಂಡಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಮೂಲಭೂತ ಸೌಕರ್ಯ ಒದಗಿಸಲು ಗಮನ ಹರಿಸಬೇಕು. 
ವಿಶಾಲಾಕ್ಷಿ-ಜಿಲ್ಲಾ ಕಾರ್ಯದರ್ಶಿ ಅಂಗನವಾಡಿ ಕಾರ್ಯಕರ್ತೆಯರ ಸಂಘ.

ಬಾಕ್ಸ್:
ದ.ಕ.ಜಿಲ್ಲೆಯಲ್ಲಿರುವ ಅಂಗನವಾಡಿಗಳು:
*ಮಂಗಳೂರು ನಗರ-೨೨೮
*ಗ್ರಾಮಾಂತರ -೪೮೦
*ಬೆಳ್ತಂಗಡಿ-೩೩೦
*ಪುತ್ತೂರು-೩೮೪
*ಸುಳ್ಯ-೧೬೫
* ಬಂಟ್ವಾಳ-೫೦೦ಕ್ಕೂ ಅಧಿಕ


ಗೋ ಮಾತೆ ರಕ್ಷಣೆಯ ಅಳಿಲು ಸೇವೆ ನಮ್ಮದಾಗಲಿ
 ಹಿಂದುಗಳ ಹಬ್ಬ ದೀಪಾವಳಿಯಲ್ಲಿ ಹಣತೆಯ ಬೆಳಕಿನೊಂದಿಗೆ ಪಟಾಕಿಗಳ ಸದ್ದು ಕಳೆದ ಮರುದಿನವೇ ತಾಯಿಯ ಸ್ಥಾನದಲ್ಲಿರುವ ಗೋಮಾತೆಯನ್ನು ಪೂಜಿಸುವ ದಿನವೇ ಗೋಪೂಜೆ. ಗೋವನ್ನು ಸ್ವಚ್ಛಗೊಳಿಸಿ ಹೂವು-ಹಾರಗಳಿಂದ ಶೃಂಗರಿಸಿ, ಶ್ರದ್ಧೆ-ಭಕ್ತಿಯಿಂದ ಆರಾಧಿಸಿ ಸಂತಸಪಡುವ ದಿನ.
ಕೃಷಿ ಭೂಮಿಯಿರುವ ಮನೆಯಲ್ಲಿ ಗೋವುಗಳಿಗೆ ವಿಶೇಷ ಪೂಜೆ ಮಾಡುವುದರೊಂದಿಗೆ ಅವುಗಳಿಗೆ ಅರಶಿನ ಎಲೆಯಲ್ಲಿ ಮಾಡಿದ ಕಡಬು ನೀಡುವುದು ಕ್ರಮ. ಅಲ್ಲದೇ ಗದ್ದೆಯಿಂದ ತೆಗೆದ ಫಸಲನ್ನು ಗೋವುಗಳಿಗೆ ನೀಡುವ ಪುಣ್ಯದಿನ. ಗೋವು ಅದನ್ನು ತಿಂದು ಸಂತೋಷದಿಂದ ಅಂಬಾ ಎಂದು ಕೂಗಿದಾಗಲೇ ಕುಟುಂಬದ ಸದಸ್ಯರೆಲ್ಲರ ಮನಸ್ಸಿಗೆ ನೆಮ್ಮದಿಯ ಭಾವ.
ನಮ್ಮ ಜೀವನದಲ್ಲಿ ಬೇರೆ ಬೇರೆ ರೂಪದಲ್ಲಿ ನಮಗೆ ಸಹಕಾರಿಯಾಗುವ ಗೋವು ಅಳಿವಿನಂಚಿನಲ್ಲಿರುವುದು ದುಃಖಕರ. ಇದೇ ರೀತಿ ಕೃಷಿ ಭೂಮಿ-ಗೋವುಗಳು ಕ್ಷೀಣಿಸುತ್ತಿದ್ದರೆ ಮುಂದೊಂದು ದಿನ ಗೋವನ್ನು ಮೃಗಾಲಯದಲ್ಲಿ ನೋಡಲು ಮಾತ್ರ ಸಾಧ್ಯ!
ಪುರಾಣದಲ್ಲಿ ಗೋವು
ಗೋವುಗಳನ್ನು ರಕ್ಷಣೆ ಮಾಡಿದ ಶ್ರೀಕೃಷ್ಣ ಗೋ-ಸಂರಕ್ಷಕ ಎನ್ನುವ ಬಿರುದು ಪಡೆದಿದ್ದಾನೆ. ನಮ್ಮ ಸಂಸ್ಕೃತಿಯಲ್ಲಿ ಗಾ,ಗೀ,ಗೋ (ಗಾ-ಗಾಯತ್ರಿ ಮಂತ್ರ, ಗೀ-ಗೀತೆ, ಗೋ-ಗೋವು) ಎನ್ನುವ ಮೂರು ಅಕ್ಷರಕ್ಕೆ ಮಹತ್ವವಿದೆ. ಸವಿತ್ರನಾರಾಯಣನನ್ನು ಸ್ಮರಿಸುವ ಗಾಯತ್ರಿ ಮಂತ್ರ, ಜೀವನದ ಏರು-ಪೇರುಗಳನ್ನು ಸಮತೋಲನಕ್ಕೆ ತರಬಲ್ಲ ಭಗವಂತನ ನುಡಿಯಾದಾರಿತ ಭಗವದ್ಗೀತೆ ಮತ್ತು ಮನಸ್ಸು ಹಾಗೂ ಶರೀರಕ್ಕೆ ಬೇಕಾದ ಆಹಾರ ನೀಡುವ ಗೋಮಾತೆಗೆ ಗೌರವವಿದೆ. ಕ್ಯಾನ್ಸರ್‌ನಂತ ಮಹಾಮಾರಿಯನ್ನು ಗೋಮೂತ್ರ ದೂರಿಕರಿಸುತ್ತದೆ. ಗೋವಿನ ಉತ್ಪನ್ನಗಳಿಂದ ಜೀವಕೋಶಗಳು ಹೊಸ ಹುಮ್ಮಸ್ಸು ಪಡೆಯಲು ಸಹಕಾರಿ. ಆಯುರ್ವೇದದಲ್ಲಿ ಪಂಚಗವ್ಯ ಘೃತವು ಮಾನಸಿಕ ಔಷಧವೆಂದು ತಿಳಿಸಲಾಗಿದೆ. ದೇವಸ್ಥಾನದ ಶಿಖರ ಚಲನೆಯಲ್ಲಿ ಗೋವೃಷಭ ಬಳಸುತ್ತಾರೆ. ಬಿಂಬ ಚಲನೆಯಲ್ಲಿ ಗೋಮಾತೆಯನ್ನು ಬಳಸಲಾಗುತ್ತದೆ. ನೇರವಾಗಿ ದೇವರ ಮೂರ್ತಿ ಹೊರತರುವ ಸಾಮರ್ಥ್ಯ ಮನುಷ್ಯರಿಗಿಲ್ಲಾ. ಗೋವಿಗೆ ಮಾತ್ರ ಎಲ್ಲಾ ದೋಷ ತಡೆದುಕೊಳ್ಳುವ ಶಕ್ತಿ ಇರುವುದರಿಂದಲೇ ಅವುಗಳನ್ನು ಬಳಸುತ್ತಾರೆ. ಗೋವಿನ ಪರೋಪಕಾರ ಗುಣವೇ ಅವುಗಳಿಗೆ ದೋಷಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ನೀಡಿದೆ. ಆದ್ದರಿಂದಲೇ ಗೋವಿನ ಕಾರ್ಯ ನೋಡಿ ಪರೋಪಕಾರಾರ್ಥಾಯ ಇದಂ ಶರೀರಂ ಎನ್ನುವ ಮಾತು ಸಮಂಜಸ ಎನ್ನುವುದು ನನ್ನ ಭಾವನೆ. 
ಹಿಂದು ಸಂಸ್ಕೃತಿಯಲ್ಲಿ ಗೋವಿನ ಮಹತ್ವ:
ಹಿಂದೆ ಗೋವಿಲ್ಲದ ಮನೆಯಿರಲಿಲ್ಲಎಂದು ಹೆಮ್ಮೆಯಿಂದ ಹೇಳುವ ನಾವಿಂದು ಗೋವಿರುವ ಮನೆ ವಿರಳ ಎನ್ನುವ ವಿಷಾದದ ನುಡಿಯಾಡಬೇಕಿದೆ. ಗೋವು ಮೂರು ಮುಖ್ಯ ಅಂಶಗಳಿಂದ ಹಿಂದು ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ದೇವಸ್ಥಾನದ ಆಗಮ ಕಾರ್ಯ, ಮಾನುಷ ಕಾರ್ಯ ಮತ್ತು ಗೃಹಗಳ ಚಲನೆಯಿಂದ ಜೀವನದಲ್ಲಾಗುವ ಬದಲಾವಣೆಗಳಲ್ಲಿ ಇವುಗಳ ಪಾತ್ರ ಮುಖ್ಯವಾಗಿದೆ. ಗೋವು ಸಹಜವಾಗಿ ವಾಸಿಸುವ, ಫಲಪುಷ್ಪಗಳಿಂದ ಆವೃತವಾದ ಜಾಗದಲ್ಲಿ ದೇವಸ್ಥಾನ ಕಟ್ಟಬಹುದು ಎನ್ನುವ ಶಾಸ್ತ್ರೋಕ್ತಿಯಿದೆ. ಇವುಗಳ ಸಂಚರಿಸಿದ ಸ್ಥಳದಲ್ಲಿ ವಿಷಯುಕ್ತ ಅಂಶಗಳು ನಾಶವಾಗಿರುತ್ತವೆ. ಸ್ಥಳ ಶುದ್ಧಿ ಹಾಗೂ ಸಪ್ತಶುದ್ಧಿಯಲ್ಲಿ ಮತ್ತು ಮನೆಕಟ್ಟಿದ ಸಂದರ್ಭ ಗೋಮಾತೆಯ ಪ್ರವೇಶದ ನಂತರ ಮಾನವನಿಗೆ ಅವಕಾಶ ನೀಡುವಾಗಲೇ ಗೋವಿನ ಮಹತ್ವ ತಿಳಿಯಬಹುದು. ಹಿಂದೆ ಅಮವಾಸ್ಯೆ ಹಾಗೂ ಮುನ್ನಾದಿನ, ಗೃಹಣ, ಮೂಲ ನಕ್ಷತ್ರದಲ್ಲಿ ಜನಿಸಿದವರಿಗೆ ಗೋಪ್ರಸವ ಶಾಂತಿ ಮಾಡಿದ ಜಾತಕದಿಂದ ಜನ್ಮಾಂತರದ ಕರ್ಮಫಲವನ್ನು ತಡೆಯುವ ಶಕ್ತಿ ಗೋಮಾತೆಗೆ ಇದ್ದುದರಿಂದ ಅವುಗಳನ್ನು ಸಾಕುತ್ತಿದ್ದರು. ಇಂದು ಒತ್ತಡದ ಪ್ರಪಂಚದಲ್ಲಿ ಗೋವುಗಳಿಲ್ಲದಿದ್ದರೂ ಅವುಗಳ ಸೇವೆಗೆ ಒಂದಷ್ಟು ನಿಧಿ ಸಮರ್ಪಿಸಲು ಅವಕಾಶ ಕಲ್ಪಿಸಲಾಗಿದೆ.
ಬದಲಾದ ಪ್ರಪಂಚದಲ್ಲಿ ಮಾನವನ ಮಾನಸಿಕತೆ:
ಗೋವಿನ ಧೂಳು ಆವರಿಸಿರುವ ಗೋಧೂಳಿ ಮೂಹೂರ್ತದಲ್ಲಿ ಎಲ್ಲಾ ಅನಿಷ್ಟ ದೂರವಾಗುವುದರಿಂದ ಆ ಸಂದರ್ಭ ಉತ್ತಮ ಕಾರ್ಯಗಳಿಗೆ ಸೂಕ್ತ ಕಾಲ ಎನ್ನುವ ನಂಬಿಕೆ. ಪರಿಸ್ಥಿತಿ ಬದಲಾಗಿದ್ದು ಇಂದು ಗೋವಿನ ದೂಳುಗಳಿಲ್ಲದೆ ರಸ್ತೆಗಳೆಲ್ಲಾ ಕಾಂಕ್ರೀಟಿಕರಣಗೊಂಡು ವಾಹನದ ಧೂಳು ಹೆಚ್ಚಾಗಿವೆ. ಹಿಂದೆ ಧಾರ್ಮಿಕ ಕಾರ್ಯದಲ್ಲಿ ಗೋದಾನ ಮಾಡುವ ಸಂಪ್ರದಾಯವಿತ್ತು ಆದರೆ ಅದು ಇಂದು ವಿರಳವಾಗುತ್ತಿದೆ. ಪ್ರಸ್ತುತ ಸಮಾಜದಲ್ಲಿ ಗೋವುಗಳನ್ನು ರಕ್ಷಣೆ ಮಾಡುತ್ತಾರೆ ಎನ್ನುವ ನಂಬಿಕೆಯ ಒಸರು ಬತ್ತಿಹೋಗಿದೆ. ದಿನದಿಂದ ದಿನಕ್ಕೆ ಹಲವಾರು ದನ-ಕರುಗಳು ಕಸಾಯಿಖಾನೆ ಪ್ರವೇಶ ಮಾಡುತ್ತಿವೆ.  ಮನೆಯ ವಾಸ್ತುದೋಷ ನಿವಾರಣೆಗೆ ನಿತ್ಯ ತುಪ್ಪದ ದೀಪ ಹಚ್ಚುವುದು, ದೇವತೆಗಳ ಆಹಾರ ತುಪ್ಪವಾದ್ದರಿಂದ ಎಲ್ಲಾ ಧಾರ್ಮಿಕ ಕಾರ್ಯ ತುಪ್ಪದಿಂದಲೇ ನಡೆಯುತ್ತಿತ್ತು. ಅದನ್ನು ಮನೆಯಲ್ಲಿ ತಯಾರಿಸುತ್ತಿದ್ದರು. ಮನೆಯಲ್ಲಿ ಹೇರಳವಾಗಿ ದೊರೆಯುತ್ತಿದ್ದ ಗೋ-ಉತ್ಪನ್ನಗಳು ಇಂದು ಮರೆಯಾಗಿ ಪೊಟ್ಟಣಗಳಲ್ಲಿ ಸಿಗುವ ವಸ್ತುಗಳಿಗೆ ಅವಲಂಬಿತರಾಗಿದ್ದೇವೆ.
ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ನಾವಿದ್ದೇವೆ. ದೃಶ್ಯಮಾಧ್ಯಮ, ಅಂತರ್ಜಾಲ, ಮೊಬೈಲ್,ಕಂಪ್ಯೂಟರ್‌ಗಳಲ್ಲಿ ಕಾರ್ಯಮಗ್ನರಾಗಿ ಗೋಸಂರಕ್ಷಣೆಯಲ್ಲಿ ನಿರಾಸಕ್ತಿ ತಳೆದಿದ್ದೇವೆ. ಸಮಾಜದಲ್ಲಿ ಜೀವ ತಳೆದಾಗ ತಾಯಿಯ ಎದೆಹಾಲು ಅವಲಂಬಿಸುವ ನಾವು ಬೆಳೆದು ದೊಡ್ಡವರಾಗುತ್ತಾ ಗೋ-ಮಾತೆ ನೀಡುವ ಹಾಲನ್ನು ಅವಲಂಬಿಸುತ್ತೇವೆ. ಆದರೆ ದಿನಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಕಸಾಯಿಖಾನೆ ಸೇರುವ ಗೋಮಾತೆಯ ರಕ್ಷಣೆ ನಮ್ಮಿಂದಾಗಬೇಕಿದೆ. ೨೦೧೨ರಲ್ಲಿ ದೇಶವ್ಯಾಪಿ ರಾಷ್ಟ್ರೀಯ ಜಾನುವಾರು ಗಣತಿಗೆ ಚಾಲನೆ ನೀಡಲಾಗಿದ್ದು ಈ ನಿಟ್ಟಿನಲ್ಲಿ ಕಸಾಯಿಖಾನೆಗೆ ಸೇರುತ್ತಿರುವ ಗೋವುಗಳ ರಕ್ಷಣೆಗೆ ನಮ್ಮ ಅಳಿಲಿನ ಸೇವೆ ಮುಖ್ಯವಾಗಿದೆ. ಗೋವುಗಳ ಮಹತ್ವ ತಿಳಿದುಕೊಂಡು ಅದನ್ನು ಮುಂದಿನ ಪೀಳಿಗೆಗೆ ತಿಳಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.




Thursday, 1 November 2012

ಮನೆ-ಮನೆಯಲ್ಲೂ ಪ್ರತಿಕ್ಷಣ ಕನ್ನಡದ ಕಂಪನ್ನು ಪಸರಿಸಿ...
ಮಾತೃಭಾಷೆಯ ಅಭಿಮಾನವೇ ನಮ್ಮ ನಾಡು, ನುಡಿಯ ರಕ್ಷಣೆಗೆ ಪ್ರೇರಕ ಶಕ್ತಿ:

೧೯೫೬ ನವೆಂಬರ್ ೧ರಂದು ಕರ್ನಾಟಕ ಏಕೀಕರಣವಾಯಿತು. ಕನ್ನಡ  ಮಾತನಾಡುವವರಿಗೆಂದೆ ಪ್ರತ್ಯೇಕ ರಾಜ್ಯ ರಚನೆಯಾಗಿ ಕರ್ನಾಟಕ ಎನ್ನುವ ಹೆಸರು ಇಟ್ಟಾಯಿತು. ಐದೂವರೆ ದಶಕಗಳೇ ಕಳೆದರೂ ಇಂದಿಗೂ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲ ಎಂದು ಬೊಬ್ಬೆ ಇಡುತ್ತಿದ್ದೇವೆ. ಯಾಕೆ ಸಿಕ್ಕಿಲ್ಲ ಎನ್ನುವ ಕುರಿತಂತೆ ಯಾರು ಕೂಡ ಯಾರು ತಲೆಕೆಡಿಸಿಕೊಳ್ಳುವುದಿಲ್ಲ. ಈ ಸಂದರ್ಭ ಮಾತೃಭಾಷಾ ದಿನವನ್ನು ನೆನಪು ಮಾಡಿಕೊಳ್ಳುವುದಕ್ಕೂ ಕಾರಣವಿದೆ. ನವೆಂಬರ್‌ನ್ನು ಕನ್ನಡ ಮಾಸವೆಂದು ಆಚರಣೆ ಮಾಡಲಾಗುತ್ತದೆ. ಮಾತೃಭಾಷೆಗಾಗಿ ಹುತಾತ್ಮರಾದವರನ್ನು ಇದೇ ಸಂದರ್ಭದಲ್ಲಿ ನೆನಪಿಸಿ ಕೊಳ್ಳುತ್ತಿದ್ದೇವೆ. ಮಾತೃಭಾಷೆಗಾಗಿ ಹುತಾತ್ಮರಾದವರನ್ನು ನೆನಪಿಸಿಕೊಂಡು ನಮ್ಮ ಮಾತೃಭಾಷೆಯ ಉಳಿವಿಗಾಗಿ ನಾವೇನು ಮಾಡುತ್ತಿದ್ದೇವೆ ಎನ್ನುವ ಚಿಂತನೆಗೆ ಸಾರಣೆ ಹಚ್ಚುವುದಕ್ಕೆ ಇದು ಸಕಾಲವೆನ್ನುವುದು ನನ್ನ ಭಾವನೆ.
ಭಾಷೆ ಒಂದು ಸಂವಹನ ಮಾಧ್ಯಮವಾಗಿರದೆ ಭಾವಾಭಿವ್ಯಕ್ತಿಯ ಸಾಧನವು ಹೌದು. ಪ್ರತಿಯೊರ್ವರ ಬದುಕಿನಲ್ಲಿಯೂ ಭಾಷೆಯ ಪಾತ್ರ ಅಪಾರವಾಗಿದೆ. ಅದಿಲ್ಲವಾಗಿದ್ದರೆ ಒಂದು ಭಾಷೆಗಾಗಿ ಜೀವ ನೀಡುವ ಬಾಂಧವ್ಯ ಬೆಳೆಯುತ್ತಿರಲಿಲ್ಲ. ಕನ್ನಡ ಬಗ್ಗೆ ನಮ್ಮಲ್ಲಿ ಅಂಥ ಬಾಂಧವ್ಯ ಬೆಳೆಯುವುದು ಯಾವಾಗ? ಎನ್ನುವುದು ಪ್ರಶ್ನೆಯಾಗಿ ಉಳಿದಿದೆ ಅಲ್ಲವೇ?
ಅದು ಏನೆ ಇರಲಿ..ಈ ವರ್ಷ ನಿಘಂಟು ತಜ್ಞ ಹಿರಿಯ ಸಾಹಿತಿ ಪ್ರೊ.ಜಿ. ವೆಂಕಟಸುಬ್ಬಯ್ಯನವರು ಜನ್ಮಶತಾಮಾನೋತ್ಸವ ಆಚರಿಸಿಕೊಂಡರು. ಶತಾಯುಷಿ ಸುಬ್ಬಯ್ಯ ಮಾತನಾಡುತ್ತಾ ಕರ್ನಾಟಕದಲ್ಲಿ ಕನ್ನಡ ಉಳಿಯಬೇಕಾದರೆ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾದ್ಯಮ ನಿಷೇದಿಸಬೇಕು ಎನ್ನುವ ಹೇಳಿಕೆ ನೀಡಿದ್ದರು. ಯಾರೋ ತಥಾಕಥಿತ ಸಾಹಿತಿಗಳೋ, ಕನ್ನಡ ಪರ ಹೋರಾಟಗಾರರೋ ಹೇಳಿದ್ದರೆ ಅದೊಂದು ಗಂಭೀರ ಸಮಸ್ಯೆಯೇ ಆಗುತ್ತಿರಲಿಲ್ಲ. ಆದರೆ ಇಂಥ ಆತಂಕ ವ್ಯಕ್ತಪಡಿಸಿದ್ದು ಕನ್ನಡದ ಬಗ್ಗೆ ಪ್ರಾಮಾಣಿಕ ಕಳಕಳಿ ಇರುವ ಹಾಗೂ ಕನ್ನಡಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿರುವ ಶತಮಾನಗಳಿಂದ ಕನ್ನಡದ ಆಗು ಹೋಗುಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಒಬ್ಬ ಪಕ್ಕಾ ಕನ್ನಡಿಗ ವೆಂಕಟಸುಬ್ಬಯ್ಯ.
ಇತ್ತೀಚಿಗೆ ರಾಜ್ಯ ಸಚಿವರಿಬ್ಬರು ಕನ್ನಡ ನಾಡಿನ ಕುರಿತು ಯಾರು ಕೂಡ ಅರಗಿಸಿಕೊಳ್ಳಲಾಗದ ಹೇಳಿಕೆ ನೀಡಿದ್ದಾರೆ. ಉಮೇಶ ಕತ್ತಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಣೆ ಮಾಡಬೇಕು ಎನ್ನುವ ಉದಾರವಾದ ಹೇಳಿಕೆ ನೀಡಿದರೆ ಆನಂದ ಅಸ್ನೋಟಿಕರ್ ಕಾರವಾರವನ್ನು ಗೋವಾಕ್ಕೆ ಸೇರಿಸಬೇಕು ಎನ್ನುವುದಾಗಿ ಹೇಳಿದ್ದರು. ಮಂತ್ರಿಗಳಾದವರೆ ಈ ರೀತಿಯಾಗಿ ಕರ್ನಾಟಕವನ್ನು ಒಡೆಯುವ ರಾಜಕೀಯ ಮಾಡುತ್ತಿರುವುದನ್ನು ನೋಡಿದಾಗ ನಮ್ಮ ರಾಜಧಾನಿಯ ಪರಿಸ್ಥಿತಿ ಹೇಗಿರಬೇಕು ಅಲ್ಲವೇ? ಕರುನಾಡಿನ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡವನ್ನೇ ಆಡುಭಾಷೆಯನ್ನಾಗಿ ಮಾತನಾಡುವವರ ಸಂಖ್ಯೆ ಶೇ.೩೦ ಮಾತ್ರ ಎನ್ನುವುದನ್ನು ವೆಂಕಟಸುಬ್ಬಯ್ಯ ಹೇಳಿದ್ದರು. ಒಂದು ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಕೇಂದ್ರಸ್ಥಳವಾದ ರಾಜಧಾನಿಯಲ್ಲೆ ಮಾತೃಭಾಷೆ ಮೂಲೆಗುಂಪಾಗುತ್ತಿರುವುದು ತೀರಾ ಗಂಬೀರ ವಿಷಯ ಎನ್ನುವುದು ಅವರ ಆತಂಕವಾಗಿತ್ತು.
ಇಷ್ಟೆಲ್ಲಾ ಆತಂಕದ ನಡುವೆಯೂ ನ. ೧ ಕರ್ನಾಟಕದ ಜನತೆಗೆ ಎಲ್ಲಿಲ್ಲದ ಸಂಭ್ರಮ. ಕನ್ನಡಾಂಬೆಯು ಕೂಡ ಶೃಂಗಾರ ಭರಿತಳಾಗಿದ್ದಾಳೆ. ಈ ತಿಂಗಳಲ್ಲಿ ಕನ್ನಡ ಪ್ರೇಮ ಚಿಗುರಿ, ಅಭಿವೃದ್ದಿಯ ಹೊಸತಾದ ಆಲೋಚನೆಗೆ ಎಡೆಮಾಡಿಕೊಟ್ಟು , ಅಡಿಪಾಯ ಹಾಕುವ ಸುವರ್ಣಾವಕಾಶವನ್ನು ನಾಡಿನ ಜನತೆಗೆ ಒದಗಿಸುತ್ತದೆ. ರಾಜ್ಯದ ಮೂಲೆಯಲ್ಲಿಯೂ ಕನ್ನಡ ನಾಡು, ನುಡಿಯ ಬಗ್ಗೆ ಜನತೆ ಆನಂದದಿಂದ ಹರ್ಷೋದ್ಗಾರ ಮಾಡುತ್ತಾರೆ. ಮೈಸೂರು ರಾಜ್ಯದ ಹೆಸರು ಕರ್ನಾಟಕ ಎಂದು ಮರು ನಾಮಕರಣವಾಗಿ ೫೬ ವರ್ಷಗಳು ಸಂದಿವೆ. ಹಳೆಯ ಕವಿಗಳಾದಿಯಾಗಿ ನವಕವಿಗಳೆಲ್ಲಾ ಕನ್ನಡ ನಾಡು ನುಡಿಯ ಬಗ್ಗೆ ಕಾಳಜಿ ಹೊಂದಿದವರೆ ಆಗಿದ್ದಾರೆ. ಕನ್ನಡಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ತಮ್ಮ ದೇಹವನ್ನು ದಣಿಸಿ ಕನ್ನಡದ ಕಂಪನ್ನು ಸಾಗರದಾಚೆ ಪಸರಿಸುವುದಕ್ಕೆ ಪಟ್ಟ ಶ್ರಮ ಸಾಮಾನ್ಯವೇ?
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು ಬದುಕಿದು ಜಟಕಾ ಬಂಡಿ...ಎಂದು ಅಣ್ಣಾವ್ರು ಹಾಡಿದಾಗ ಕನ್ನಡ ಜನತೆ ನಾಡಿನಾದ್ಯಂತ ಕುಣಿದು ಕುಪ್ಪಳಿಸಿದ್ದಾರೆ. ಕನ್ನಡದ ಕಂಪನ್ನು ಪಸರಿಸುವಲ್ಲಿ ನಮ್ಮ ಪ್ರಯತ್ನ ಮುಖ್ಯವಾಗಿರುತ್ತದೆ. ಇಲ್ಲದಿದ್ದರೆ ಅದರ ಮಹತ್ವವೂ ನಮಗೆ ತಿಳಿಯುವುದಿಲ್ಲ. ಕನ್ನಡದ ಮೇಲೆ ಅಭಿಮಾನವಿದ್ದರೆ ಸಾಲದು. ಅದನ್ನು ನಾವು ಎಷ್ಟರಮಟ್ಟಿಗೆ ಜೀವನದಲ್ಲಿ ಅಳವಡಿಸಿ ಕೊಂಡಿದ್ದೇವೆ ಎನ್ನುವುದು ಮುಖ್ಯ. ಕನ್ನಡ ಪತ್ರಿಕಾ ಮಾದ್ಯಮದಿಂದ ಕನ್ನಡದ ಕಂಪನ್ನು ಮನೆಗಳಿಗೆ ತಲುಪಿಸಲು ಮಾತ್ರ ಸಾಧ್ಯ, ಅದರೆ ಅದು ಮನೆಯಲ್ಲಿರುವ ಮನಗಳಿಗೆ ತಲುಪಿಸಿದಾಗ ಕನ್ನಡದ ಗರಿಮೆ ಹೆಚ್ಚಿಸ ಬಹುದು. ಕನ್ನಡ ರಾಜ್ಯೋತ್ಸವ ಒಂದು ದಿನ ಆಚರಣೆ ಮಾಡಿದರೆ ಸಾಲದು, ಎಲ್ಲಾ ಕನ್ನಡ ಮನಸ್ಸುಗಳ ನಿತ್ಯ ಉತ್ಸವ ಆಗಬೇಕು.
ರಾಮಾಯಣದಲ್ಲಿ  ಶ್ರೀರಾಮನು ಲಂಕಾಧೀಶ ರಾವಣನನ್ನು ಕೊಂದು, ಹಿಂತಿರುಗುವ ಸಂದರ್ಭ ತಮ್ಮನಾದ ಲಕ್ಷ್ಮಣ ಅಲ್ಲಿಯ ಸಂಪತ್ತನ್ನು ನೋಡಿ, ಅಣ್ಣಾ ಸುವರ್ಣಮಯವಾದ ಲಂಕೆಯಲ್ಲಿ ನಾವಿರೋಣ ಎಂದು ಬಿನ್ನವಿಸಿಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ರಾಮ 
“ಹೇ ಲಕ್ಷ್ಮಣಾ, ಅಪೀ ಸ್ವರ್ಣಮಯಿ ಲಂಕಾ ನ ಮೇ ರೋಚತೇ |
                     ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರಿಯಸಿ || 
ಲಂಕೆ ಎಷ್ಟು ಸುವರ್ಣಮಯವಾಗಿದ್ದರೂ, ಹೆತ್ತ ತಾಯಿ, ಹೊತ್ತ ನೆಲ ಸ್ವರ್ಗಕ್ಕಿಂತಲೂ ಮಿಗಿಲು. ಅದೇ ರೀತಿ ನಮ್ಮ ಜೀವನದಲ್ಲಿಯೂ ಕೂಡ ನವಮಾಸ ಪರ್ಯಂತ ಹೊತ್ತು, ಹತ್ತನೇ ತಿಂಗಳಿಗೆ ಭೂಮಿಯ ಬೆಳಕನ್ನು ತೋರಿಸಿದ ತಾಯಿ, ಆಶ್ರಯ ನೀಡಿ ಸಲಹುತ್ತಿರುವ ಮಮತಾಮಯಿ, ಸಹನಶೀಲೆ ಭೂಮಿದೇವಿ ಹಾಗೂ ಉತ್ತಮ ಸಂಸ್ಕಾರದ ಜೊತೆಗೆ, ಸಂಬಂಧವನ್ನು ಬೆಸೆದು ಸಮಾಜದಲ್ಲಿ ವ್ಯಕ್ತಿಯನ್ನಾಗಿ ನಿರ್ಮಿಸಲು ಸಹಕಾರಿಯಾಗುವ ಮಾತೃಭಾಷೆಯ ಮೇಲೆ ಅಭಿಮಾನವಿರಬೇಕಲ್ಲವೇ?
ಆದರೆ ಕನ್ನಡ ರಾಜ್ಯೋತ್ಸವದಲ್ಲಿ ರಾಜಕಾರಣಿಗಳು, ಯುವಜನತೆ ಸುಂದರ ಕನ್ನಡವನ್ನು ಬಿಟ್ಟು, ಕಂಗ್ಲಿಷ್‌ನಲ್ಲಿ ಮಾತನಾಡುತ್ತಾರಲ್ಲ.ಅವರಿಗೆ ಭಾಷೆಯ ಬಗ್ಗೆ ಅಭಿಮಾನ ಇಲ್ಲವೇ? ಇಲ್ಲದಿದ್ದರೆ ಯಾಕೆ ಅಷ್ಟು ಆಡಂಬರವಾಗಿ ರಾಜ್ಯೋತ್ಸವ ಆಚರಿಸುತ್ತಾರೆ. ಕುಣಿದು ಕುಪ್ಪಳಿಸುತ್ತಾರೆ. ಅದು ತಪ್ಪಲ್ಲ ಸಂತೋಷದ ಸಂಭ್ರಮ ಆ ರೀತಿ ವ್ಯಕ್ತಪಡಿಸುತ್ತಾರೆ ಎಂದು ಸಂತೋಷ ಪಟ್ಟುಕೊಳ್ಳಲೇ? ಹೇಗೆ ಸಾಧ್ಯ ಸ್ವಾಮೀ..ಸಾವಿರಾರು ಬಡನೌಕರರು ನಾನಾ ಕಡೆ ಸುಡುವ ಬಿಸಿಲಿನಲ್ಲಿ ಕೆಲಸ ಮಾಡುವ ಸ್ಥಿತಿಯನ್ನು ಕಲ್ಪಸಿಕೊಳ್ಳಲು ಸಾದ್ಯವಿಲ್ಲ. ದಿನನಿತ್ಯ ಹವಾನಿಯಂತ್ರಿತ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುವ ನಾವು ಆ ಸ್ಥಿತಿಯಲ್ಲಿದ್ದರೆ ಅಬ್ಬಾ  ಕಲ್ಪನೆ ಮಾಡುವುದಕ್ಕೂ ಅಸಾಧ್ಯ? ಮನಸ್ಸಿನ ಭಾವನೆ ಅಭಿವ್ಯಕ್ತಗೊಳಿಸಲು ಕುಣಿದು ಕುಪ್ಪಳಿಸುತ್ತಾರೆ ಎಂದು ಭಾವಿಸಿದರೆ, ಅದು ನಮ್ಮ ತಪ್ಪು ಕಲ್ಪನೆ. ಇದು ಕೇವಲ ಆಡಂಬರಕ್ಕಾಗಿ ಎನ್ನುವುದು ಸ್ಪಷ್ಟ.
ನ.೧ರಂದು ನನ್ನ ಆಪ್ತಮಿತ್ರ ಬೆಂಗಳೂರಿನಿಂದ ಕರೆ ಮಾಡಿದ್ದ. ಅವನಲ್ಲಿ ಕ್ಷೇಮ ಸಮಚಾರದ ಬಗ್ಗೆ ವಿಚಾರಿಸಿ, ಹೇಗಿತ್ತಪ್ಪ ರಾಜ್ಯೋತ್ಸವ ಅಂತ ಕೇಳಿದರೆ.... ಹಗಲಿನಲ್ಲಿ ರಾಜ್ಯೋತ್ಸವ ಆಚರಿಸುತ್ತಾ, ಕುಣಿದು ಕುಪ್ಪಳಿಸುತ್ತಾರೆ. ಸಂಜೆ ನೋಡಿದರೆ ಅಮಲಾಸುರನ ಮನೆಯಲ್ಲಿ , ಕುಡಿದ ಮತ್ತಿನಲ್ಲಿ ತೇಲಾಡುತ್ತ ಆಂಗ್ಲಭಾಷೆಯ ಅಣಿಮುತ್ತುಗಳು ಅವರ ಬಾಯಿಂದ ಉದುರುತ್ತವೆ. ಕನ್ನಡ ಭಾಷೆ ಉಳಿಸಬೇಕು, ಅದಕ್ಕೆ ನಾವು ಹೋರಾಟ ಮಾಡುತ್ತೇವೆ ಎನ್ನುವ ಇವರು ಕೊನೆಯಲ್ಲಿ ನಾನು ಕನ್ನಡ ಲೈಕ್ ಮಾಡ್ತೆನೆ ಎನ್ನುವ ಕಂಗ್ಲೀಷ್‌ಕನ್ನಡಿಗರು ಈಗ ಎಲ್ಲೆಡೆಯಿದ್ದಾರೆ. ರಾಜ್ಯೋತ್ಸವ ಸಂಭ್ರಮವನ್ನು ಕಣ್ಣಾರೆ ನೋಡಿದ ಹಳ್ಳಿಯಿಂದ ಹೊಟ್ಟೆಪಾಡಿಗಾಗಿ ಪಟ್ಟಣ ಸೇರಿ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿರುವ ಸಣ್ಣ ಪ್ರಾಯದ ನನ್ನ ಮಿತ್ರನ ಅಂತರಾಳದ ಮಾತಿವು. 
ಜಾಗತೀಕರಣದ ಪ್ರಭಾವವಾದ್ದರಿಂದ ರಾಜಧಾನಿಯಲ್ಲಿ ಅನ್ಯಭಾಷಿಗರು ತಮ್ಮ ಪ್ರಾಬಲ್ಯ ಮೆರೆಯುತ್ತಿದ್ದಾರೆ. ಅನೇಕ ಕಂಪೆನಿಗಳು ಕನ್ನಡ ನಾಡಿಗೆ ಲಗ್ಗೆ ಇಟ್ಟ ಪರಿಣಾಮ ಕನ್ನಡಿಗರಿಗೆ ಕನ್ನಡ ಭಾಷೆಯ ಕಂಪನ್ನು ಹೊರಸೂಸಲು ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಊಟದ ಜೊತೆ ಉಪ್ಪಿನ ಕಾಯಿ ಇದ್ದರೆ, ಅದರ ರುಚಿಯೇ ಬೇರೆ ಆದರೆ ಉಪ್ಪಿನಕಾಯಿಯೇ ಪ್ರಧಾನವಾದರೆ ಊಟದ ರುಚಿಯೇ ಕೆಡುತ್ತದೆ. ರಾಜಧಾನಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಈಗ ಕನ್ನಡ ಮಾತನಾಡುವವರೆ ವಿರಳ ಎಂಬಂತಾಗಿದೆ. ಬೆಂಗಳೂರಿನಲ್ಲಿ ತಮಿಳು, ತೆಲುಗು, ಮಲೆಯಾಳಂ, ಇಂಗ್ಲೀಷ್, ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಬೆಂಗಳೂರನ್ನೊಮ್ಮೆ ಸುತ್ತು ಹೊಡೆದರೆ ಮಾತೃಭಾಷೆ ಯಾವುದೆಂದು ಕನ್ನಡಿಗರಿಗೆ ಗೊಂದಲವಾಗುತ್ತದೆ. ಅತ್ತ ಬೆಳಗಾವಿಗೆ ಹೋದರೆ ಮರಾಠಿ, ಕಾರವಾರಕ್ಕೆ ಹೋದರೆ ಕೊಂಕಣಿ, ಕಾಸರಗೋಡಿನಲ್ಲಂತೂ ಮಲೆಯಾಳಂ, ಗುಲ್ಬರ್ಗಾ ಕಡೆ ಹೋದರೆ ಉರ್ದು ಹಿಂದಿ...ಕರ್ನಾಟಕದಲ್ಲಿ ಬದುಕಬೇಕೆಂದರೆ ಕನ್ನಡವೇ ಬೇಕೆನ್ನುವ ಅಗತ್ಯವೇನಿಲ್ಲ. ಕನ್ನಡಿಗರು ಅಷ್ಟರ ಮಟ್ಟಿಗೆ ಉದಾರಿಗಳು.
ರಾಜ್ಯೋತ್ಸವದಂದು ನಡೆದ ಘಟನೆ ನಮ್ಮ ರಾಜ್ಯದಲ್ಲಿ ಕನ್ನಡ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತವೆ.
ಘಟನೆ-೧: ಮದ್ಯಾಹ್ನದ ಉರಿಬಿಸಿಲು, ಗಂಟಲು ಒಣಗಿದ್ದರಿಂದ ಏನಾದರೂ ತಂಪು ಪಾನೀಯ ಕುಡಿಯೋಣವೆಂದು ಅಂಗಡಿಗೆ ಹೋಗಿ ನನಗೆ ಬೇಕಾದ ಪಾನೀಯ ಕೇಳಿ ಪಡೆದುಕೊಂಡು ಕುಡಿಯುತ್ತಾ ಕುಳಿತುಕೊಂಡಿದ್ದೆ. ನನಗೆ ಪಾನೀಯ ತಂದುಕೊಟ್ಟ ಹುಡುಗನನ್ನು ನೋಡಿದರೆ ಬಡತನದ ಬೇಗೆಯಿಂದ ಬಳಲಿ ಬೆಂಡಾದ ತಂದೆ ತಾಯಿಯ ಜವಾಬ್ದಾರಿ ಹೊತ್ತು, ಕುಟುಂಬದ ಪರಿಸ್ಥಿತಿ ನಿಭಾಯಿಸಲು ಅನ್ಯಮಾರ್ಗವಿಲ್ಲದೇ ಆ ಕಾಯಕದಲ್ಲಿ ತೊಡಗಿದ್ದಾನೆ ಎನ್ನುವುದು ಆತನನ್ನು ನೋಡಿದಾಗಲೆ ತಿಳಿಯುತ್ತದೆ.
ಅದೇ ಸಮಯಕ್ಕೆ ಐದಾರು ವಿದ್ಯಾರ್ಥಿನಿಯರು ಮಾತೃಭಾಷೆ ತುಳು ಅಥವಾ ಕನ್ನಡವಾದರೂ ಆ ಬಾಷೆಯೇ ಬಾರದವರ ತೆರದಲ್ಲಿ ಆಂಗ್ಲಭಾಷೆಯಲ್ಲಿ ಐ ವಾಂಟ್ ಫಿಸ್ತಾ, ಕೋಲ್ಡ್ ಬಾದಾಮಿ, ಹಾರ್ಲೆಕ್ಸ್ ಹೀಗೆ ತಮಗೆ ಬೇಕಾದ ಪಟ್ಟಿಯನ್ನೆ ನೀಡುತ್ತಾರೆ. ಹುಡುಗ ಅನುಭವವಿರುವುದರಿಂದ ಅವರು ಹೇಳಿರುವ ವಸ್ತುವನ್ನು ನೀಡುತ್ತಾನೆ. ಇಲ್ಲಿ ನನ್ನ ಸಂದೇಹ ಬೇರೆನಲ್ಲ..ಆ ಹುಡುಗನಿಗೆ ಆಂಗ್ಲಭಾಷೆ ಬರುತ್ತಿದ್ದರೆ ಈ ಅಂಗಡಿಯಲ್ಲಿ ಯಾಕೆ ಕೆಲಸ ಮಾಡುತ್ತಿದ್ದ? ತುಳು ಮಾತೃಭಾಷೆಯವರೆ ತುಳು ಮಾತನಾಡದೆ ಪರಭಾಷೆಯ ವ್ಯಾಮೋಹದಿಂದ ಅದರ ದಾಸರಾಗುತ್ತಿದ್ದಾರೆ. ಆಂಗ್ಲಭಾಷೆಯೆ ನನ್ನ ಸರ್ವಸ್ವ ಎನ್ನುತ್ತಿರಬೇಕಾದರೆ ಕನ್ನಡ ಇಷ್ಟಾದರೂ ಉಳಿದಿದೆಯೆಂದು ಸಂತೋಷ ಪಡಬೇಕು.
ಘಟನೆ:೨-ಸ್ವಲ್ಪ ದಿನದ ಹಿಂದೆ ಕುಂದಾಪುರದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ. ಇಬ್ಬರು ಯುವಕರು ಯಾವುದೋ ಉತ್ತಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವರಂತೆ ಕಂಡು ಬರುತ್ತಿದ್ದರು. ಪಕ್ಕದಲ್ಲಿಯೆ ನಿಂತು ಅವರ ಮಾತುಗಳನ್ನೆ ಆಲಿಸುತ್ತಿದ್ದೆ. ಸ್ವಚ್ಚ ಕನ್ನಡದಲ್ಲಿ ಯಾವುದೇ ಆಂಗ್ಲಪದಗಳ ಬಳಕೆಯಿಲ್ಲದೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅದೇ ಸಂದರ್ಭ ಅವರೊಲ್ಲಬ್ಬನ ಸ್ನೇಹಿತ ಬಂದಾಗ ಮಾತೃಭಾಷೆಯಲ್ಲಿ ಮಾತನಾಡಿದ್ದು ನೋಡಿ ಆಶ್ಚರ್ಯವಾಯಿತು. ಅಲ್ಲಿಯವರೆಗೆ ಕುಂದಾಪುರ ಕನ್ನಡ ಬಾರದ ಉತ್ತರ ಕರ್ನಾಟಕದ ಸ್ನೇಹಿತನಲ್ಲಿ ಶುದ್ದ ಕನ್ನಡದಲ್ಲಿ ಮಾತನಾಡಿದ ವ್ಯಕ್ತಿ, ಊರಿನ ಮಿತ್ರ ಬಂದಾಗ ಮಾತೃಭಾಷೆಯ ಕಂಪನ್ನು ಹೊರ ಹಾಕಿದ್ದು, ಆಡಂಬರದ ರಾಜ್ಯೋತ್ಸವ ಆಚರಿಸಿ ಕುಣಿದು ಕುಪ್ಪಳಿಸುವ ಎಲ್ಲರಿಗೂ ಆದರ್ಶವಾಗುವಂತಿದೆ. ಅದನ್ನು ಕುಂದಗನ್ನಡದಲ್ಲಿಯೇ ಹೇಳಿದರೆ ಚೆನ್ನಾಗಿರುತ್ತದೆ. ನೀವೂ ಸ್ಪಲ್ಪ ಕೇಳಿ..“ಗಡೆ, ಎಲ್ಲ ಹೊಯಿದ್ಯಾ,ಉಂಡ ಆಯ್ತನಾ...ಇವತ್ ಹಾಲಾಡಿ ಹೊಲ್ಂಗ್ ಆಟ್ ಅಂಬ್ರಲ್ಲಾ...ಆಟಕ್ ಹೋಪ್ವಾ...ನಿ ಹೋಪುದಾರೆ ನಮ್ಮನಿಗ್ ಬಾ.. ಇಲ್ದಿದ್ರೆ ಅಪ್ಪಯ್ಯ ಬಿಡುದಿಲ್ಲ ಮರಯಾ..ಆಟ ಒಳ್ಳೆಯಿತ್ತಂಬ್ರ..ಇದು ನಿಜವಾದ ಭಾಷಾಭಿಮಾನ.
ಅಕ್ಬರನ ಆಸ್ಥಾನದಲ್ಲಿ ಪಂಡಿತನೊಬ್ಬ ಬಂದು ನನ್ನ ಮಾತೃಭಾಷೆ ಯಾವುದು? ಎಂದು ಸವಾಲು ಹಾಕಿದ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಎಲ್ಲಾ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ಅವನ ಮಾತೃಭಾಷೆಯನ್ನು ಕಂಡು ಹಿಡಿಯುವುದು ಕೊಂಚ ಕಷ್ಟವೇ? ಆದರೆ ಬೀರಬಲ್ ಮಾತ್ರ ಬುದ್ದಿವಂತಿಕೆಯಿಂದ ಅವನು ಮಲಗಿರುವ ಹೊತ್ತಿನಲ್ಲಿ ಮೈಮೇಲೆ ನೀರನ್ನು ಸುರಿದು ಅವನ ಮಾತೃಭಾಷೆ ಕಂಡುಹಿಡಿಯುತ್ತಾನೆ. ಯಾವ ವ್ಯಕ್ತಿಯೇ ಆಗಲಿ ತನ್ನ ಮಾತೃಭಾಷೆಯನ್ನು ದೈನಂದಿನ ಜೀವನದಲ್ಲಿ ಬಳಸಿಕೊಂಡು, ಇತರ ಭಾಷೆಯನ್ನು ವ್ಯಾವಹಾರಿಕವಾಗಿ ಬಳಸಿದಾಗಲೇ ಘನತೆ ಹೆಚ್ಚುತ್ತದೆ. ಮಾತೃಭಾಷೆ, ಮಾತೃಭೂಮಿಯ ಬಗ್ಗೆ ಅಭಿಮಾನ ಮೂಡಿದಾಗಲೇ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. ತಮಿಳು ನಾಡಿಗೆ ಕಾಲಿಟ್ಟರೆ ಅಲ್ಲಿ ತಮಿಳಲ್ಲದೆ ಬೇರೆ ಭಾಷೆಯನ್ನು ಮಾತನಾಡುವ ವ್ಯಕ್ತಿ ಸಿಗಲಾರ. ಅಕಸ್ಮಾತ್ ಇದ್ದರೂ ಕೆಲವೆ ದಿನದಲ್ಲಿ ಆತ ತಮಿಳು ಕಲಿಯುತ್ತಾನೆ. ಅಲ್ಲಿ ಬದುಕಬೇಕೆಂದರೆ ತಮಿಳು ಅನಿವಾರ್ಯ ಎನ್ನುವ ಸ್ಥಿತಿಯನ್ನು ಅಲ್ಲಿಯ ಜನತೆ ನಿರ್ಮಾಣ ಮಾಡಿದ್ದಾರೆ. ಆದರೆ ನಮಗಿನ್ನೂ ಸಾಧ್ಯವಾಗಿಲ್ಲ. ನಮ್ಮಲ್ಲಿ ಅಂಥ ಒಗ್ಗಟ್ಟು ಇಲ್ಲ. ಮಾತೃಭಾಷೆಯ ಮಹತ್ವದ ಬಗ್ಗೆ ಅಂಥದೊಂದು ಗಂಭೀರತೆ ಮೂಡಿಯೂ ಇಲ್ಲ.
ಕನ್ನಡ ರಾಜ್ಯೋತ್ಸವದಂದು ಮಾತ್ರವಲ್ಲದೇ ದಿನನಿತ್ಯ ಕನ್ನಡ ಮಾತನಾಡುವವರೆ ಕನ್ನಡಾಭಿಮಾನಿಗಳು. ಕನ್ನಡ ಮಾತನಾಡಿದರೆ ಪ್ರಸ್ತುತ ಸಮಾಜದಲ್ಲಿ ವ್ಯವಹಾರ ಮಾಡುವುದು ಕಷ್ಟ. ಆಡಳಿತ ವ್ಯವಹಾರಕ್ಕೆ ಆಂಗ್ಲಭಾಷೆಯ ಮೊರೆಹೋದರೂ, ಸ್ಥಳ, ಸಮಯ ನೋಡಿ ಕನ್ನಡ ಮಾತನಾಡುವುದಕ್ಕೆ ಹಿಂಜರಿಕೆ ಯಾಕೆ? ನಮ್ಮ ಊರಿನಲ್ಲಿ ನಮ್ಮವರೊಂದಿಗೆ ನಮ್ಮ ಮಾತೃಭಾಷೆಯನ್ನು ಮಾತನಾಡುವುದಕ್ಕೆ ಸಂಕೋಚವೇಕೆ? ಹಿಂಜರಿಕೆ ಲಜ್ಜೆಯನ್ನು ಕಿತ್ತೊಗೆದು ಮಾತೃಭಾಷೆಯನ್ನು ಪ್ರೋತ್ಸಾಹಿಸಿದಾಗ ಕನ್ನಡ ಉಳಿಸಿ ಬೆಳೆಸಬಹುದು. ಗಗನದೆತ್ತರಕ್ಕೆ ಕನ್ನಡದ ಕಂಪನ್ನು ಪಸರಿಸಬಹುದು. ಮನಸ್ಸನ್ನು ಕನ್ನಡ ಭಾಷೆಗೆ ಸಂಕುಚಿತಗೊಳಿಸದೆ, ವಿಶಾಲ ದೃಷ್ಟಿಯಿಂದ ಯೋಚಿಸಿ, ನಮ್ಮ ಸಂಸ್ಕೃತಿ ಹಾಳುಮಾಡುವ ದುಷ್ಟಶಕ್ತಿಯನ್ನು ಹಿಮ್ಮೆಟ್ಟಿಸಬೇಕಿದೆ. ಮನೆ-ಮನೆಯಲ್ಲೂ ಕನ್ನಡ ವಾತಾವರಣ ಮೂಡಿಸುವ ಅಗತ್ಯವಿದೆ. ಮಗು ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಎನ್ನುವ ಮೊದಲು ಸಾಮಾನ್ಯ ಕನ್ನಡ ಹಾಡು “ಗುಂಡಾಡಿ ಗುಂಡ ಮನೆ ಮನೆಗೆ ಹೋದ....ಎನ್ನುವ ಸಾಮಾನ್ಯ ಹಾಡನ್ನು ಕಲಿಯುವಂತಾಗಬೇಕು. ಆಗಲೇ ಕನ್ನಡವನ್ನು ಉಳಿಸಿ ಬೆಳೆಸಬಹುದು...ಏನಂತಿರಾ.



Sunday, 28 October 2012



ಭಾರತ ಪರಿಕ್ರಮ ಯಾತ್ರೆಯ ರೂವಾರಿ ಸೀತಾರಾಮ ಕೆದಿಲಾಯರೊಂದಿಗೆ ಒಂದು ಕ್ಷಣ.

ಮಂಗಳೂರು: ಕಾಲ ಕೆಲವೊಂದು ಸಂದರ್ಭದಲ್ಲಿ ವಿಚಿತ್ರವಾಗಿದೆ ಅನಿಸುತ್ತದೆ? ಮಳೆಗಾಲದಲ್ಲಿ ಮಳೆ ಕಡಿಮೆಯಾಗಿದ್ದರೂ, ಚಳಿಗಾಲದಲ್ಲಿ ಮಾತ್ರ ಬೇಸಗೆಯಂಥ ಬಿಸಿಲು. ಆದರೂ ಕಳೆದೆರಡು ದಿನದಲ್ಲಿ ರಾಜ್ಯದ ಕೆಲವೊಂದು ಭಾಗದಲ್ಲಿ ವರುಣನ ಆಗಮನವಾಗಿದೆ. ಇದೇ ಸಂದರ್ಭದಲ್ಲಿ ಅಖಂಡ ಭಾರತದ ಕಲ್ಪನೆ ಹೊತ್ತ ದೇಶಭಕ್ತ ಸಂತನ ಆಗಮನ ರಾಜ್ಯ ಗಡಿಭಾಗದ ಕೇರಳದ ಕಾಸರಗೋಡಿನಲ್ಲಾಗಿದೆ. ೧೯೭೦ರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಸೀತಾರಾಮ ಕೆದಿಲಾಯರು ಮೂಲತಃ ಪುತ್ತೂರಿನವರು. ದೇಹದ ಪ್ರತಿಯೊಂದು ಕಣದಲ್ಲಿಯೂ ದೇಶದ ಆಗುಹೋಗುಗಳ ಕುರಿತು ಚಿಂತಿಸುವ ಇವರು ಸ್ವಂತ ಕುಟುಂಬ, ಸ್ವ-ಪರಿಚಯ ಹೇಳಲೊಲ್ಲರು?
ಕನ್ಯಾಕುಮಾರಿಯಿಂದ ಆ.೯ರಂದು ಭಾರತ ಪರಿಕ್ರಮ ಯಾತ್ರೆ ಕೈಗೊಂಡ ಕೆದಿಲಾಯರು ಸತತ ೭೫ ದಿನಗಳನ್ನು ಪೂರೈಸಿದ್ದಾರೆ. ಬರಿಗಾಲಲ್ಲಿ ದೇಶ ಪರ್ಯಟನೆ ಹೊರಟು ದೇಶೀಯ ಜನರಲ್ಲಿ ಜಾಗೃತಿ ಭಾವ ಬಿತ್ತುತ್ತಿದ್ದಾರೆ. ವೈಜ್ಞಾನಿಕವಾಗಿ ಹಾಗೂ ವಾಹನಗಳ ಭರಾಟೆಯ ನಡುವೆಯೂ ಬರಿಗಾಲಲ್ಲಿ ಕನಿಷ್ಟ ೫ ವರ್ಷಗಳವರೆಗೆ ಪರಿಕ್ರಮ ಯಾತ್ರೆ ಕೈಗೊಳ್ಳುವುದು ಸಾಮಾನ್ಯ ಮಾತಲ್ಲ. ಈ ನಿಟ್ಟಿನಲ್ಲಿ ಕೆದಿಲಾಯರು ಅಸಾಧಾರಣ ವ್ಯಕ್ತಿಯಾಗಿ ಕಂಡು ಬರುತ್ತಾರೆ. ಅವರನ್ನು ಬಹಳ ಹತ್ತಿರದಿಂದ ಮಾತನಾಡಿಸಿದಾಗ ನನಗರಿವಾದದ್ದು...ಕೆದಿಲಾಯರು ಚಲಿಸುವ ಕೋಶ, ಶ್ರೇಷ್ಟ ರಾಜಕಾರಣಿ, ಉತ್ತಮ ಅರ್ಥಶಾಸ್ತ್ರಜ್ಞ, ಕಾನೂನು ತಜ್ಞ, ವಾಗ್ಮಿ ಮತ್ತು ದೇಶಭಕ್ತ ಸಂತ. ಇದು ಅತಿಶಯೋಕ್ತಿಯಲ್ಲ. ಅವರೊಂದಿಗೆ ಮಾತಿಗಿಳಿದಾಗ ಜೀವಮಾನದ ಅನುಭವವನ್ನು ಎಳೆಎಳೆಯಾಗಿ ಬಿತ್ತರಿಸಿದ್ದು ಹೀಗೆ..ಇದು ದೇಶದಲ್ಲಿರುವ ಪ್ರತಿಯೋರ್ವ ಪ್ರಜೆಗೂ ಮಾರ್ಗದರ್ಶನವಾದೀತು ಎನ್ನುವ ಭಾವನೆಯೊಂದಿಗೆ....
ಪ್ರ: ಪರಿಕ್ರಮ ಯಾತ್ರೆಯ ಉದ್ದೇಶ
ಉ: ಉದರ ನಿಮಿತ್ತಂ ಬಹುಕೃತ ವೇಷಂ ಎನ್ನುವ ಮಾತಿನಂತೆ ನಗರ ಜೀವನಕ್ಕೆ ಮಾರು ಹೋದ ಯುವ ಮನಸ್ಸುಗಳು ಗ್ರಾಮ ತ್ಯಜಿಸಿ, ನಗರವಾಸಿಗಳಾಗುತ್ತಿದ್ದಾರೆ. ಒತ್ತಡದ ಜೀವನದ ಜಂಜಾಟದಲ್ಲಿ ಕಾಲಕಳೆಯುತ್ತಿರುವ ಯುವಮನಸ್ಸುಗಳು ಕೃಷಿಯೆಡೆಗೆ ತೆರಳುವಂತಾಗಬೇಕು. ಪ್ರಕೃತಿ ಸಹಜವಾದ ಬದುಕನ್ನು ಬಿಟ್ಟು ವಿಕೃತ ಸಹಜವಾದ ಜೀವನಕ್ಕೆ ಮಾರುಹೋಗುತ್ತಿದ್ದು, ಅದರಲ್ಲಿ ಆನಂದವಿದೆಯೆನ್ನುವ ಭ್ರಮೆಯಲ್ಲಿದ್ದಾರೆ. ನಾನೊಬ್ಬನೇ ಎನ್ನುವ ಅಂಶ ತ್ಯಜಿಸಿ, ಹಿಂದು ಧರ್ಮದ ಪರಿಕಲ್ಪನೆಯಾದ ವಿಶಾಲ ಕುಟುಂಬದ ದೃಷ್ಟಿ ಬೆಳೆಸಿಕೊಳ್ಳಬೇಕು. ವಿದೇಶಿ ಮಾನಸಿಕತೆಯ ಪರಿಭಾವವನ್ನು ತ್ಯಜಿಸಬೇಕಾಗಿದೆ. ಆ ನಿಟ್ಟಿನಲ್ಲಿ ಕೃಷಿ ಪ್ರಧಾನವಾದ ದೇಶಿಯ ಸಂಸ್ಕೃತಿಯನ್ನು ಯುವಮನಸ್ಸುಗಳಲ್ಲಿ ಬಿತ್ತರಿಸುವ ಉದ್ದೇಶ ಯಾತ್ರೆಯದಾಗಿದೆ.
ಪ್ರ: ವೈಜ್ಞಾನಿಕ ಉಪಕರಣಗಳ ಧಾವಂತದಲ್ಲಿ ಇದು ಸಫಲವಾಗುವುದೇ?
ಉ: ವೈಜ್ಞಾನಿಕವಾಗಿ ಮುಂದುವರಿದಿಲ್ಲ. ಇಂದು ವಿನಾಶವನ್ನು ಅನುಕರಿಸುವ ಅಜ್ಞಾನದಲ್ಲಿದ್ದೇವೆ. ಉಪಭೋಗ ಮತ್ತು ಉಪಯೋಗ ಎನ್ನುವ ಎರಡು ಅಂಶಗಳಲ್ಲಿ ನಿಮ್ಮ ಪ್ರಶ್ನೆಗೆ ಉತ್ತರವಿದೆ. ವೈಜ್ಞಾನಿಕ ಸತ್ಯವನ್ನು ನಾವು ಅರಿತುಕೊಳ್ಳಬೇಕಿದೆ. ಉಪಭೋಗದ ಸಂಸ್ಕೃತಿಯಲ್ಲಿರುವುದು ವೈಜ್ಞಾನಿಕ ಬೆಳವಣಿಗೆಯೆ? ವಸ್ತುವನ್ನು ಬಳಸಿ, ಬಿಸಾಡುವ ಸಂಸ್ಕೃತಿ ವೈಜ್ಞಾನಿಕ ಪ್ರಗತಿಯಲ್ಲ. ಪೂರ್ವಜರು ೪೦ ವರ್ಷಗಳ ಕಾಲ ಬಳಸಿದ ಲೇಖನಿಯನ್ನು ಈಗಲೂ ಬಳಸುತ್ತಾರೆ. ಆದರೆ ನಾವು ಕೇವಲ ಅರ್ಧಗಂಟೆಗಳ ಕಾಲ ವಸ್ತುವನ್ನು ಬಳಸಿ ಅದನ್ನು ಬಿಸಾಡುತ್ತೇವೆ. ಇದು ಉಪಭೋಗದ ಸಂಸ್ಕೃತಿ. ಬದಲಾಗುತ್ತಿರುವ ಮನುಷ್ಯನ ಜೀವನ ಶೈಲಿ ಲಾಲಸೆಗಳನ್ನು ಬೆಳೆಸುತ್ತಾ ಹೋಗುತ್ತದೆ. ಇದರಿಂದ ವ್ಯಾಪಾರಿಗಳು ಅದರ ಲಾಭವನ್ನು ಪಡೆಯುತ್ತಾರೆ. ಮಾರುಕಟ್ಟೆಗೆ ಹೊಸ ವಸ್ತುಗಳು ಬಂದಾಗ ಹಳೆಯ ವಸ್ತುಗಳು ಬೇಡವೆನಿಸುತ್ತದೆ.(ಟಿವಿ ಬಂದ ಮೇಲೆ ಕ್ಯಾಸೆಟ್, ಟೇಪ್, ರೇಡಿಯೋ ಮಾಯವಾಗಿದೆ). ಇದು ಪ್ರಗತಿಯಲ್ಲ. ಕುಟುಂಬದ ಸದಸ್ಯರೆಲ್ಲರಲ್ಲೂ ಬಳಸುವ ದೃಷ್ಟಿಕೋನ ಬದಲಾಗಬೇಕಿದೆ. ಮನುಷ್ಯನ ಬೇಕು ಎನ್ನುವ ಧಾವಂತದ ನಾಗಾಲೋಟಕ್ಕೆ ಹಾಕಬೇಕು ಬಲವಂತದ ಬ್ರೇಕು. ಅದುವೇ ದೇಶದ ಪ್ರಗತಿಯ ಸಂಕೇತ.
ಪ್ರ: ಮನುಷ್ಯ ಬೆಳೆಯುತ್ತಿದ್ದಂತೆ ಸ್ವಾರ್ಥ ಹೆಚ್ಚಾಗುತ್ತಿದೆ ಇದು ನಿಜವೇ?
ಉ: ಮನುಷ್ಯನಿಗೆ ಆಸೆಯೆನ್ನುವುದು ಸಹಜ. ಅದು ಅತಿಯಾದರೆ ಸ್ವಾರ್ಥವಾಗುತ್ತದೆ. ಬೆಂಕಿಗೆ ತುಪ್ಪವನ್ನು ಸುರಿದಾಗ ಅದರ ಪ್ರಖರತೆ ಜಾಸ್ತಿಯಾಗುತ್ತದೆ. ತುಪ್ಪ ಸುರಿಯುವುದು ಕಡಿಮೆಯಾದಾಗ  ಬೆಂಕಿಯ ತೀವ್ರತೆ ಕಡಿಮೆಯಾಗುತ್ತದೆ. ಜೀವನ ಸಾಗರದಲ್ಲಿ ಆಸೆಯನ್ನು ತಡೆದಾಗ ಸ್ವಾರ್ಥ ಕಡಿಮೆಯಾಗುತ್ತದೆ.
ಪ್ರ: ಧರ್ಮದ ಮೇಲೆ ಆಕ್ರಮಣವಾಗಿದೆ ಎನ್ನುತ್ತಾರಲ್ಲ ಇದು ನಿಜವೇ?
ಉ: ಹಿಂದು ಧರ್ಮ ಸಬಲವಾಗಿದ್ದು, ಅದರ ಮೇಲೆ ಆಕ್ರಮಣವಾಗಿಲ್ಲ. ಹಿಂದು ಧರ್ಮದಲ್ಲಿರುವ ಜೀವನ ಕ್ರಮದ ಮೇಲೆ ಆಕ್ರಮಣವಾಗಿದೆ. ರೋಗಾಣುಗಳು ದೇಹದ ಮೇಲೆ ಆಕ್ರಮಣ ಮಾಡುವುದು ಅದರ ಸಹಜ ಸ್ವಭಾವ. ಜನಜೀವನ ದುರ್ಬಲವಾಗಿದ್ದಾಗ ರೋಗದ ಅಣುಗಳು ಜಾಸ್ತಿಯಾಗಿ ಅವು ತಮ್ಮ ಪ್ರಭಾವ ತೋರುತ್ತವೆ. ಹಿಂದು ಸಮಾಜ ದುರ್ಬಲವಾಗಿದ್ದಾಗ ರೋಗಾಣುಗಳಂತೆ ಅನ್ಯ ಮತಗಳು ಆಕ್ರಮಣಮಾಡಿರಬಹುದು. ಹಿಂದು ಧರ್ಮ ಶಕ್ತಿಯುತವಾದುದು. ಶಕ್ತಿ ಹಿಡಿದುಕೊಂಡರೆ ಸಬಲವಾಗಬಹುದು. ಆ ನಿಟ್ಟಿನಲ್ಲಿ ಹಿಂದು ಸಮಾಜ ಸಬಲವಾಗಬಹುದೇ ಎನ್ನುವ ಚಿಂತನೆ ಮಾಡಬೇಕಿದೆ.
ಪ್ರ: ದೇಶದ ಜನತೆಯ ಜೀವನಕ್ರಮದ ಬದಲಾವಣೆಗೆ ಆಂಗ್ಲಭಾಷೆಯ ಬಿಸಿ ತಟ್ಟಿದೆಯೇ?
ಉ: ದೇಶದಲ್ಲಿ ಯಾವುದೇ ಭಾಷೆಗೆ ವಿರೋಧವಿಲ್ಲ. ತಾಯಿ, ಮಾತೃಭಾಷೆಯ ಬಗ್ಗೆ ಅಭಿಮಾನವಿದ್ದಾಗ ಇತರ ಭಾಷೆಗಳು ಸೋದರ ಭಾಷೆಗಳಾಗುತ್ತದೆ. ಅನ್ಯ ಭಾಷೆಯ ಮೇಲೆ ಸೋದರ ಭಾವನೆ ಮೂಡಿದಾಗ ಅದು ಸುಸಂಸ್ಕೃತ ಸಮಾಜದ ಲಕ್ಷಣವಾಗುತ್ತದೆ. ಪ್ರತಿಯೊಂದು ಭಾಷೆಯ ಹಿಂದೆ ಸಂಸ್ಕೃತಿಯಿರುತ್ತದೆ. ಅದು ನಮ್ಮ ಜೀವನಕ್ಕೆ ಅಂಟಿಕೊಳ್ಳದೇ ಇರಬೇಕಾದ್ರೆ ತಾಯಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಹಲಸಿನ ಮೇಣ ಅಂಟುವುದು ಅದರ ಸ್ವಭಾವ..ಅದು ದೇಹಕ್ಕೆ ಅಂಟದೆ ಇರಬೇಕಾದ್ರೆ ಎಣ್ಣೆ ಹಚ್ಚಿಕೊಳ್ಳುವ ವಿವೇಕವಿರಬೇಕು.
ಪ್ರ: ಯಾತ್ರೆಯ ಸಂದರ್ಭ ಹಿಂದುಗಳು ಮಾತ್ರ ಬೆಂಬಲಿಸಿದ್ದಾರೋ? 
ಉ: ಅನ್ಯನ್ಯ ಮತಗಳು ಎನ್ನುವ ಶಬ್ದವನ್ನು ಬಳಸುತ್ತೇನೆ. ಬುದ್ದಿಯಿರುವವನಿಗೆ ಅಭಿಪ್ರಾಯವಿರುತ್ತದೆ. ಎಲ್ಲರ ಅಭಿಪ್ರಾಯವನ್ನು ಗೌರವಿಸುವ ಮನೋಧರ್ಮವಿದೆಯೋ ಅದುವೇ ಹಿಂದುತ್ವ. ಅಭಿಪ್ರಾಯದಲ್ಲಿ ತಿರಸ್ಕಾರವಿಲ್ಲ. ಗೌರವ ಭಾವನೆಯಿದೆ. ಇದನ್ನು ಎಲ್ಲರೂ ಆಲಂಗಿಸಿದ್ದಾರೆ. ಕನ್ಯಾಕುಮಾರಿಯಿಂದ ವಿವಿಧ ಅಭಿಪ್ರಾಯದ ಜನರು ಬಂದಿದ್ದು, ದೈಹಿಕ, ಮಾನಸಿಕ, ಭಾವನಾತ್ಮಕವಾಗಿ ಯಾತ್ರೆಯನ್ನು ಗೌರವಿಸಿ, ಮನ್ನಿಸಿ, ಆಶೀರ್ವದಿಸಿ, ಸ್ವಾಗತಿಸಿದ್ದಾರೆ.
ಪ್ರ: ಪ್ರಜಾಪ್ರಭುತ್ವದಲ್ಲಿ ಜಾತಿ-ತಾರತಮ್ಯ ತರವೇ?
ಉ: ಜಾತಿ ಎನ್ನುವುದು ಅಜ್ಞಾನ.. ಸೂರ್ಯ ಬೆಳಕು ನೀಡುವಾಗ, ಮರ ಹಣ್ಣನ್ನು ಬಿಡುವಾಗ, ನದಿ ಹರಿಯುವಾಗ ಎಲ್ಲಾ ಜೀವಿಗಳಿಗೂ ಉಪಯೋಗವಾಗಲಿ ಎನ್ನುವ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಅಂತೆಯೇ ಹಿಂದು ಜೀವನ ಎಲ್ಲರ ಹಿತವನ್ನು ಬಯಸಿ ಕೆಲಸ ಮಾಡುತ್ತದೆ. ಇದನ್ನು ಅರ್ಥ ಮಾಡಿಕೊಂಡವರು ವಿರೋಧ ಮಾಡುವುದಿಲ್ಲಾ. ಸಮಾಜದಲ್ಲಿ ಜಾತಿ ಎನ್ನುವ ಅಜ್ಞಾನದ ಪರದೆ ತೆಗೆಯುವ ಕಾರ್ಯವಾಗಬೇಕಿದೆ.
ಪ್ರ: ಮನುಷ್ಯ ವಿದ್ಯಾವಂತನಾಗುತ್ತಿದ್ದಂತೆ ಹಿಂಸಾಪ್ರವೃತ್ತಿ ಜಾಸ್ತಿಯಾಗುತ್ತಿದೆ ಎನ್ನುವುದು ನನ್ನ ಭಾವನೆ?
ಉ: ಹಿಂಸಾ ಮನೋಧರ್ಮವೆನ್ನುವುದು ಜನಸಂಖ್ಯಾತ್ಮಕವಾಗಿ ಎಲ್ಲಿ ಹೆಚ್ಚಿದೆಯೋ ಅಲ್ಲಿ ಹಿಂಸೆ ಜಾಸ್ತಿಯಾಗಿದೆ. ಅಸ್ಸಾಂ, ಕಾಶ್ಮೀರ, ಕೇರಳ, ಮಣಿಪುರ, ಪಾಕಿಸ್ತಾನ, ಬಾಂಗ್ಲಾ, ಇರಾಕ್, ಇರಾನ್ ದೇಶದಲ್ಲಿಯೂ ಹಿಂಸಾಪ್ರವೃತ್ತಿ ವಿಪರೀತವಾಗಿದೆ. ಕೇರಳದಲ್ಲಿ ಅನೇಕರು ಭಾರತವನ್ನು ನಿಜವಾದ ಸ್ವರ್ಗವೆಂದಿದ್ದಾರೆ. ಸಮತ್ವ ಇದ್ದಾಗ ಹಿಂಸೆಯನ್ನು ದೂರಿಕರಿಸಬಹುದು.  Inactive majority ಯಿದ್ದಲ್ಲಿ active minorityಯು  ಸಮಾಜದಲ್ಲಿ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿರುತ್ತದೆ.   Inactive majority ಯು active ಆಗಿ ಕಾರ್ಯಚರಿಸಿದಾಗ ಹಿಂಸಾ ಪ್ರವೃತ್ತಿಯನ್ನು ಖಂಡಿಸಬಹುದಾಗಿದೆ.
(ಬಾಯಾರು ರಜಾಕ್ ಯಾತ್ರೆಯ ಸಂದರ್ಭ ಖುರಾನ್‌ನಲ್ಲಿ ಗಲಾಟೆ, ಗದ್ದಲ, ಹಿಂಸೆಗೆ ಸಮ್ಮತಿಯಿಲ್ಲ. ಇಸ್ಲಾಂನ ಹೆಸರಿನಲ್ಲಿ ಮಸಿ ಬಳಿಯುವ ಕಾರ್ಯ ನಡೆಯುತ್ತಿದೆ )
ಪ್ರ: ಪ್ರಸ್ತುತ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆಯಲ್ಲವೇ?
ಉ: ರಾಜಕೀಯ ವ್ಯವಸ್ಥೆಯಲ್ಲಿ ಅವ್ಯವಸ್ಥೆಯಾಗಿದೆ. ಇಂತಹ ರಾಜಕೀಯ ವ್ಯವಸ್ಥೆಗೆ ನಿಷ್ಠಾವಂತರು ಹೋದರೂ ಅವ್ಯವಸ್ಥಿತ ರಾಜಕೀಯ ವ್ಯವಸ್ಥೆಯಲ್ಲಿ ಅವರಂತೆಯೆ ಆಗುತ್ತಾರೆ. ರಾಜಕೀಯದ ಬೇರನ್ನು ಸರಿ ಮಾಡಬೇಕಿದೆ. ಗಾಂಧೀಜಿ ಗೋಖಲೆಯವರನ್ನು ಬೇಟಿ ಮಾಡಿ ಮಾರ್ಗದರ್ಶನ ನೀಡಬೇಕು. ನಾನು ರಾಜಕೀಯಕ್ಕೆ ಹೊಸಬ ಎಂದಾಗ ಗೋಖಲೆ ರಾಜಕೀಯಕ್ಕೆ ಹೊಸಬರಾಗಿದ್ದರೂ, ಆಧ್ಯಾತ್ಮಿಕವಾಗಿ ಹಳಬರಿದ್ದಿರಾ. ರಾಜಕೀಯ ವ್ಯವಸ್ಥೆಯಲ್ಲಿ ಆಧ್ಯಾತ್ಮಿಕತೆ ಬೆಳೆಸಿ ಎಂದು ಹೇಳಿದ್ದರು. ಇದು ಇಂದಿನ ರಾಜಕೀಯ ನಾಯಕರಿಗೆ ಅನ್ವಯವಾಗಬೇಕಿದೆ.
stop politilism, criminalism, meterialism, comercialism and all political leaders ll start the spiritualism in the field. ರಾಜಕೀಯ ರಂಗ ಆಧ್ಯಾತ್ಮ ನಿಷ್ಠವಾದಾಗ ರಾಜಕೀಯ ಗೊಂದಲ ಪರಿಶುದ್ದವಾಗುತ್ತದೆ.
ರಾಮಾಯಣದಲ್ಲಿ ರಾಮ ಆಧ್ಯಾತ್ಮ ನಿಷ್ಟನಾಗಿ, ಸಮಚಿತ್ತತೆಯಿಂದ ವ್ಯವಹರಿಸಿದ್ದರಿಂದ ಕಿಂಚಿತ್ ವಿಕಾರ  ಉತ್ಪತ್ತಿಯಾಗಲಿಲ್ಲ. ಭರತನ ಪಟ್ಟಾಭಿಷೇಕವಾಗಬೇಕು ಎಂದಾಗ ಆತ ಆಧ್ಯಾತ್ಮ ಚಿಂತನೆಗೆ ವಿರೋಧ ಮಾಡಲಿಲ್ಲ. ಕುಟುಂಬದಲ್ಲಿ ರಾಜಕೀಯ ಗೊಂದಲವಿದ್ದರೂ ರಾಮ ಮತ್ತು ಭರತ ವ್ಯವಹಾರದಿಂದ ರಾಜಕೀಯದ ಆಧ್ಯಾತ್ಮಿಕತೆಯನ್ನು ಬಿತ್ತರಿಸಿದ್ದರು. ಚಿಂತನೆಗೆ ತಾತ್ವಿಕ ನೆಲೆಯನ್ನು ಕಲ್ಪಿಸಿದ್ದರಿಂದ ಗೊಂದಲ ಪರಿಹಾರವಾಗಿದೆ. ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ನಾನು ಹೋಗಿ ನಮ್ಮಲ್ಲಿ ಯಾರು ಆಗಬಹುದು ಎನ್ನುವ ಭಾವನೆ ಮೂಡಬೇಕು. ಪಾದುಕೆ ಹೊತ್ತು ಕೆಲಸ ಮಾಡುತ್ತೇನೆ ಎನ್ನುವ ಭರತನ ಚಿಂತನೆಗೆ ಪ್ರತಿಯೊರ್ವ ರಾಜಕಾರಣಿಯು ಒತ್ತು ನೀಡಿದರೆ ರಾಜವ್ಯವಸ್ಥೆ ಶುದ್ದಿಯಾಗುತ್ತದೆ. ನಾಯಕರು ಶುದ್ದಜೀವನ ನಡೆಸಿದಾಗ ಪ್ರಜೆಗಳು ಅದನ್ನು ಅನುಸರಿಸುತ್ತಾರೆ. ದೇಶದ ಅಭಿವೃದ್ದಿಯನ್ನು ಬಯಸಿ ಕಾರ್ಯ ನಿರ್ವಹಿಸಿದ್ದೆ ಆದರೆ ಅದರ ಫಲವನ್ನು ಕಾಣಬಹುದಾಗಿದೆ.
ಯಾತ್ರೆಯ ಸಂದರ್ಭ ಕೇರಳದಲ್ಲಿ ನೋಡಿದ ಧನಾತ್ಮಕ ಅಂಶಗಳು:
*ರಸ್ತೆಯಲ್ಲಿ ಬಿಕ್ಷುಕರಿಲ್ಲ. ಬಿಕ್ಷುಕರನ್ನು ನೋಡಿದರೆ ಅವರನ್ನು ಬಂಧಿಸಿ ಜೀವನಕ್ಕೊಂದು ವ್ಯವಸ್ಥೆ ಮಾಡುವ ಕಾನೂನು ಜಾರಿಯಲ್ಲಿದೆ.
*ಜೋಪಡಿ ಪಟ್ಟಿ (ಸ್ಲಮ್) ಇಲ್ಲದ ರಾಜ್ಯ(ಅಪವಾದಕ್ಕೆ ಒಂದೆರಡು ಹೊರತು ಪಡಿಸಿ).
*ವಿನಾಶದ ನಡುವೆಯೂ ಗ್ರಾಮ ಮತ್ತು ನಗರದಲ್ಲಿ ಹಸಿರು ಕೇರಳದ ಸೃಷ್ಟಿ.
*ದುರಭ್ಯಾಸದಿಂದ ಸಾರ್ವಜನಿಕ ಸ್ಥಳದಲ್ಲಿ ಬಿದ್ದಿರುವುದಿಲ್ಲ.
*ರಾಜ್ಯದಲ್ಲಿ ವಿದೇಶಿ ಹೆಸರುಗಳನ್ನು ತೆಗೆದು ಸ್ವದೇಶಿ ಹೆಸರನ್ನು ರಚಿಸಿದ್ದಾರೆ.
*ದಾರಿಯುದ್ದಕ್ಕೂ ದೇವಸ್ಥಾನ, ಪ್ರಾರ್ಥನಾ ಮಂದಿರಗಳ ನಿರ್ಮಾಣ.
*ಭವನಗಳ ನಿರ್ಮಾಣದಲ್ಲಿಯೂ ಸ್ವದೇಶಿತನ.
ಋಣಾತ್ಮಕ ಅಂಶಗಳು:
*ವ್ಯಕ್ತಿಗತವಾಗಿ ವಿಪರೀತ ದುರ್ವ್ಯವಹಾರ, ಮನೆ-ರೋಗಯುಕ್ತವಾಗಿ ನಾಟಿ ವೈದ್ಯರು ಮಾಯವಾಗಿದ್ದಾರೆ.(ಯೋಗ ಮತ್ತು ಆರೋಗ್ಯ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಕೆ ಮಾಡಬೇಕು)
*ಕೃಷಿ ಭೂಮಿಯ ವಿನಾಶವಾಗಿದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣು, ನೀರು, ಆಹಾರ ಪದಾರ್ಥಗಳು ವಿಷಯುಕ್ತವಾಗಿವೆ( ೪ ಜಿಲ್ಲೆಯನ್ನು ಹೊರತು ಪಡಿಸಿ)
*ಅನ್ನದ ಕೃಷಿ ಕಡಿಮೆಯಾಗಿ ಹಣದ ಕೃಷಿ ಹೆಚ್ಚಾಗಿದೆ.
*ವಿದೇಶಿ ವಸ್ತುಗಳ ಬಳಕೆ ವಿಪರೀತ.


ದೇಶದಲ್ಲಿ ಅನ್ನದ ಕೃಷಿ ಜಾಸ್ತಿಯಾಗಬೇಕು. ಹಣವಿದ್ದರೆ ಅದನ್ನು ಹಂಚುವ ಮನಸ್ಸು ಬರುವುದಿಲ್ಲ. ಅನ್ನವನ್ನು ಹಂಚುವ ಮನಸ್ಸಾಗುತ್ತದೆ. ನಗರ ವಾಸದ ವ್ಯಾಮೋಹ ತ್ಯಜಿಸಿ ಗೋವು ಆದಾರಿತ ಕೃಷಿಯ ಗ್ರಾಮೀಣ ಬದುಕನ್ನು ರೂಪಿಸಿಕೊಳ್ಳಬೇಕು. ಕೇರಳದಲ್ಲಿರುವ ಧನಾತ್ಮಕ ಅಂಶಗಳನ್ನು ಎಲ್ಲಾ ರಾಜ್ಯಗಳಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ದೇಶದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ತರಬೇಕು. ಭ್ರಾತೃತ್ವವನ್ನು ಬೆಸೆಯುವ ಜೀವನಶೈಲಿ ನಮ್ಮದಾಗಬೇಕು.
ಸೀತಾರಾಮ ಕೆದಿಲಾಯ-ಭಾರತ ಪರಿಕ್ರಮ ಯಾತ್ರೆಯ ರೂವಾರಿ.


Saturday, 27 October 2012

ಅಂಗವೈಕಲ್ಯತೆ ಮರೆತು ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಜೆಪ್ಪಿನಮೊಗೆರುವಿನ ಸುಭಾಶಿನಿ.

ಮಂಗಳೂರು: ಸಮಾಜದಲ್ಲಿ ದೈಹಿಕವಾಗಿ ಸುದೃಡವಾಗಿರುವವರು ಅಬ್ಬೆಪಾರಿಗಳಾಗಿ ತಿರುಗಾಡುವುದು ಸಾಮಾನ್ಯವೆನ್ನುವ ನಂಬಿಕೆ ಬೆಳೆಯುತ್ತಿರುವ ಕಾಲಘಟ್ಟದಲ್ಲಿ ದೈಹಿಕವಾಗಿ ನ್ಯೂನ್ಯತೆ ಇದ್ದರೂ ಅದನ್ನು ತೋರ್ಪಡಿಸಿಕೊಳ್ಳದೆ ತನ್ನದೆ ವಿಶಿಷ್ಟ ವ್ಯಕ್ತಿತ್ವದಿಂದ ಗುರುತಿಸಿಕೊಂಡ ಜೆಪ್ಪಿನಮೊಗೆರುವಿನ ಸುಭಾಶಿನಿ.
ತಾಯಿಯ ಗರ್ಭದಿಂದ ಜನಿಸುವಾಗ ನಮ್ಮಂತೆ ಇದ್ದ ಸುಭಾಶಿನಿ ೬ ತಿಂಗಳು ಸಮೀಪಿಸುತ್ತಿದ್ದಾಗ ಕಾಣಿಸಿಕೊಂಡ ಮಿದುಳು-ಜ್ವರದಿಂದಾಗಿ ೧೩ ನೇ ವಯಸ್ಸಿನವರೆಗೆ ನಡೆದಾಡುವ ಸ್ಥಿತಿಯಿಲ್ಲದೆ ಹಾಸಿಗೆಯಲ್ಲಿಯೆ ಕಾಲ ಕಳೆಯಬೇಕಾಯಿತು. ನಂತರದ ದಿನದಲ್ಲಿ ನಿಧಾನವಾಗಿ ಕುಳಿತುಕೊಳ್ಳುವ ಮಾನಸಿಕ ಹಾಗೂ ದೈಹಿಕ ಶಕ್ತಿ ದೊರಕಿದಾಗ ತಾಯಿ ಚಂದ್ರಕಲಾ ಮಗಳನ್ನು ಎತ್ತಿಕೊಂಡು ಹೋಗಿ ಶಾಲೆಗೆ ಸೇರಿಸಿದರು. ದೈಹಿಕ ಸುದೃಢವಾಗಿರುವ ಇತರ ಮಕ್ಕಳು ಹೋಗುವ ಸರಕಾರಿ ಶಾಲೆಗೆ ೫ ತರಗತಿಯವರೆಗೆ ತಾಯಿಯೊಂದಿಗೆ ಹೋಗಿದ್ದರೂ, ಆ ಹೊತ್ತಿನಲ್ಲಿ ಸುಭಾಶಿನಿಗೆ ಬಲಗಾಲು ಹಾಗೂ ಬಲಗೈಯ ಸ್ವಾಧೀನವಿಲ್ಲದೆ ಹೇಳಿಕೊಟ್ಟ ಅಕ್ಷರ ಬರೆಯಲು ಹಾಗೂ ನಡೆದಾಡಲು ಕೂಡ ಆಗದ ಪರಿಸ್ಥಿತಿ. ದೇವರು ದೇಹದ ಎಲ್ಲಾ ಅಂಗ ಕೊಟ್ಟಿದ್ದರೂ ಬಲಗಾಲಿನ ಬಲವನ್ನೇ ಕಿತ್ತುಕೊಂಡಿದ್ದ. ಅಲ್ಲದೇ ಬಲಗೈ ಕೊಟ್ಟಿದ್ದರೂ ಪೆನ್ನು ಹಿಡಿಯುವಷ್ಟು ಶಕ್ತಿ ನೀಡದೆ ವಂಚಿಸಿದ್ದ.
ಸಮಾಜದಲ್ಲಿ ಇತರರು ಮಾತನಾಡುವುದನ್ನು ನೋಡಿ ತಾನೂ ಕೂಡ ಮಾತನಾಡಬೇಕು ಎನ್ನುವ ಆಸೆ ಚಿಗುರೊಡೆದು ಅಲ್ಪಸ್ವಲ್ಪ ಮಾತನಾಡುವಂತೆ ಮಾಡಿದೆ. ಹಿರಿಯರ ಪ್ರೋತ್ಸಾಹ, ಗುರುಗಳ ಸಹಕಾರ, ಚೇತನಾ ಸಂಸ್ಥೆಯ ಬೆಂಬಲ ಹಾಗೂ ಧರ್ಮಸ್ಥಳ ಸ್ವಸಹಾಯ ಸಂಘದ ನಿರಂತರ ನೆರವಿನಿಂದಾಗಿ ಸುಭಾಶಿನಿ ಇಂದು ಸಮಾಜದಲ್ಲಿ ವಿಶಿಷ್ಟ  ವ್ಯಕ್ತಿಯಾಗಿ ರೂಪುಗೊಂಡಿದ್ದಾಳೆ. ಜೀವನದಲ್ಲಿ ಬಂದ ಸವಾಲುಗಳಿಗೆ ತನ್ನಿಂದಾದ ಉತ್ತರ ನೀಡುತ್ತಿದ್ದಾಳೆ ಎಂದರೂ ತಪ್ಪಿಲ್ಲ.
೫ ನೇ ತರಗತಿಯವರೆಗೆ ಸರಕಾರಿ ಶಾಲೆಗೆ ಎತ್ತಿಕೊಂಡು ಹೋಗುತ್ತಿದ್ದ ತಾಯಿ ಚಂದ್ರಕಲಾಗೆ ಉಡುಪಿಯ ಆಶಾ ನಿಲಯ ಆಸರೆಯಾಯಿತು. ಮಗಳನ್ನು ೭ವರ್ಷಗಳ ಕಾಲ ಆಶಾ ನಿಲಯದಲ್ಲಿ ಬಿಟ್ಟು ನಂತರ ಮಂಗಳೂರಿನ ಸಂತ ಆಗ್ನೇಸ್ ವಿಶೇಷ ಶಾಲೆಯಲ್ಲಿ ೧೦ ವರ್ಷಗಳವರೆಗೆ ಶಿಕ್ಷಣ ಕೊಡಿಸಿದರು. ಕಳೆದ ೬ ವರ್ಷದಿಂದ ಸೇವಾಭಾರತಿಯ ವತಿಯಿಂದ ನಡೆಯುತ್ತಿರುವ ಚೇತನಾ ವಿಶೇಷ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದಾರೆ.
ಸುಭಾಶಿನಿಯ ವಿಶೇಷ:
೪೦ ವರ್ಷ ಪ್ರಾಯದ ಸುಭಾಶಿನಿ ವಿಧಿಯಾಟಕ್ಕೆ ಬಲಿಯಾಗಿ ಅಂಗವೈಕಲ್ಯ ಹೊಂದಿದ್ದು, ದೇಹದ ಆಕೃತಿಯಲ್ಲಿ ಸಾಮಾನ್ಯರಂತೆ ಇಲ್ಲದಿದ್ದರೂ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಇಂದಿನ ಸಮಾಜದಲ್ಲಿ ಎರಡಕ್ಷರ ಕಲಿತು ಅಬ್ಬೆಪಾರಿಗಳಾಗಿ ತಿರುಗಾಡುತ್ತಿರುವ ಯುವಸಮೂಹಕ್ಕೆ ಮಾದರಿಯಾಗಿದ್ದಾರೆ. ಚಂದ್ರಕಲಾ ಅವರ ೩ ಮಕ್ಕಳಲ್ಲಿ ಕೊನೆಯವರಾದ ಸುಭಾಶಿನಿ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಉಲ್ಲಾನ್ ವಸ್ತುವಿನಿಂದ ಮಾಡಿರುವ ಮ್ಯಾಟ್, ಫಿನಾಯಿಲ್, ಸೋಪ್ ವಾಟರ್‌ತಯಾರಿ ಮತ್ತು ಬಟ್ಟೆಯ ಬ್ಯಾಗ್‌ಗಳಿಗೆ ನೂಲ್ ಹಾಕುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಮೆಡಿಕಲ್‌ಗಳಲ್ಲಿ ಮಾತ್ರೆಗಳನ್ನು ಹಾಕಲು ಬಳಸುವ ಪೇಪರ್ ಕವರ್‌ಗಳನ್ನು ಮಾಡುತ್ತಿರುವುದು ವಿಶೇಷವಾಗಿದೆ. ಧರ್ಮಸ್ಥಳ ಸ್ವ-ಸಹಾಯ ಸಂಘದ ಸದಸ್ಯೆಯಾಗಿರುವ ಇವರಿಗೆ ಇತರ ಸದಸ್ಯರು ಪೂರ್ಣ ಸಹಕಾರ ನೀಡುತ್ತಿದ್ದಾರೆ.
ದಿನಕ್ಕೆ ೫೦ಲೀಟರ್‌ಗಳವರೆಗೆ ಫಿನಾಯಿಲ್, ಸೋಪ್ ಆಯಿಲ್ ತಯಾರಿಸುವ ಮನಸ್ಸು ಇದ್ದರೂ, ಇದಕ್ಕೆ ಪೂರಕವಾಗುವ ಮಾರುಕಟ್ಟೆ ದೊರಕಿಲ್ಲ. ಮನೆಯ ಬಳಕೆಗೆ ಬೇಕಾಗುವಷ್ಟನ್ನು ಮಾತ್ರ ತಯಾರಿಸುತ್ತಿದ್ದಾರೆ. ದೈಹಿಕ ವೈಕಲ್ಯ ಲೋಕಮುಖಕ್ಕೆ ತೋರಗೊಡದೆ ತಾನು ನಿರ್ಮಾಣ ಮಾಡಿದ ವಸ್ತುವನ್ನು ಇತರ ಜನರಿಗೂ ತೋರ್ಪಡಿಸಬೇಕು ಎನ್ನುವ ಇಚ್ಚೆಯಿಂದ ಇತ್ತೀಚಿಗೆ ನಗರದ ಫಿಶರೀಸ್ ಕಾಲೇಜ್‌ನಲ್ಲಿ ನಡೆದ ರೈತ ಮಾಹಿತಿ ಶಿಬಿರದಲ್ಲಿ ಧರ್ಮಸ್ಥಳ ಸ್ವ-ಸಹಾಯ ಮಳಿಗೆಯಲ್ಲಿ ಫಿನಾಯಿಲ್, ಸೋಪ್ ಆಯಿಲ್ ಬಾಟಲ್‌ಗಳನ್ನು ಸ್ವತಃ ಕುಳಿತು ಮಾರಾಟಕ್ಕೆ ಇಟ್ಟಿದ್ದರೂ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ದೊರಕಿದೆ ಎನ್ನುವ ಅಳಲು ಸುಭಾಶಿನಿಯದಾಗಿದೆ.
ವಿಶೇಷ ಮಕ್ಕಳಿಗಾಗಿ ಸರಕಾರದಿಂದ ನೀಡುವ ರೂ.೧೦೦೦ದಿಂದ ಅವರ ಜೀವನ ಸಾಗುತ್ತಿದೆ. ಯಾವುದೇ ಸಂಘ ಸಂಸ್ಥೆಗಳಿಂದ ಅನುದಾನ ಇಲ್ಲಿಯವರೆಗೆ ದೊರಕಿಲ್ಲ. ಆದರೂ ಕೂಡ ಸಮಾಜದಲ್ಲಿ ಚೆನ್ನಾಗಿ ಬದುಕ ಬೇಕೆನ್ನುವ ಇಚ್ಚೆ ಇದೆ. ಅದಕ್ಕೆ ಸಾರ್ವಜನಿಕರ ಪ್ರೋತ್ಸಾಹದ ಅಗತ್ಯವಿದೆ. ಸುಭಾಶಿನಿಯ ಸಂಪರ್ಕ ಸಂಖ್ಯೆ-೯೪೪೯೧೩೧೪೮೬

ಬಾಕ್ಸ್:
೬ ತಿಂಗಳ ಮಗುವಾಗಿದ್ದಾಗ ಮೆದುಳು ಜ್ವರಕ್ಕೆ ತುತ್ತಾದ ಮಗಳಿಂದು ಅಂಗವೈಕಲ್ಯದಿಂದ ಬಳಲುವಂತಾಯಿತು. ಸಮಾಜದಲ್ಲಿ ಇತರ ಮಕ್ಕಳಂತೆ ಬದುಕಬೇಕೆನ್ನುವ ಛಲದಿಂದ ವಿಶೇಷ ಮಕ್ಕಳ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಾ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ಸಮಾಜದ ಬಂಧುಗಳಿಂದ ಅವಳ ಚಟುವಟಿಕೆಗಳಿಗೆ ಪ್ರೋತ್ಸಾಹ ಅವಶ್ಯಕತೆಯಿದೆ. ಮಾತನಾಡುತ್ತಿದ್ದರೂ ಮೊದಲ ಬಾರಿಗೆ ಕೇಳಿದರೆ ಯಾರಿಗೂ ಅರ್ಥವಾಗುವುದಿಲ್ಲ. ದಿನನಿತ್ಯ ಕೇಳುತ್ತಿದ್ದರೆ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.
ಚಂದ್ರಕಲಾ-ಸುಭಾಶಿನಿ ತಾಯಿ.

ರಾಜ್ಯದಲ್ಲಿಯೇ ಪ್ರಥಮ ಮಂಗಳೂರು ಪಶುಇಲಾಖೆ
ವೈದ್ಯರು ಅಸಹಕಾರ ಚಳುವಳಿಯಲ್ಲಿ ನಿರತರಾಗಿದ್ದರೂ ಜಾನುವಾರು ಗಣತಿಗೆ ಚಾಲನೆ

ಮಂಗಳೂರು: ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ರಾಜ್ಯದಲ್ಲಿರುವ ಪಶು ವೈದ್ಯಾಧಿಕಾರಿಗಳು ಮುಷ್ಕರ ಹಮ್ಮಿಕೊಂಡು ೫ ವರ್ಷಗಳಿಗೊಮ್ಮೆ ನಡೆಸಬೇಕಿರುವ ಜಾನುವಾರು ಗಣತಿ ವಿಳಂಭಗೊಂಡಿದೆ. ಆದರೂ ರಾಜ್ಯದಲ್ಲಿ ಪ್ರಥಮವಾಗಿ ಸೆ. ೬ರಂದು ಮೂಡಬಿದ್ರೆ ಮತ್ತು ೧೦ರಂದು ನಗರದಲ್ಲಿ ಗಣತಿದಾರರಿಗೆ ತರಬೇತಿ ನೀಡಿರುವುದು ಮಂಗಳೂರಿನ ಪಶು ಇಲಾಖೆಗೆ ಸಂದ ಗೌರವ. ಸರಕಾರದಿಂದ ಮುಷ್ಕರಕ್ಕೆ ಯಾವುದೇ ಪ್ರತಿಕ್ರಿಯೆ ಬಾರದೆ ಅನಿರ್ದಿಷ್ಟಾವಧಿಯವರೆಗೆ ಅಸಹಕಾರ ಚಳುವಳಿ ನಡೆಸಲು ತೀರ್ಮಾನಿಸಿದ್ದರೂ, ರಾಷ್ಟ್ರೀಯ ಕಾರ್ಯಕ್ರಮ ಹಾಗೂ ಪಶು ಇಲಾಖೆಯ ನೈತಿಕ ಜವಾಬ್ದಾರಿಯೆನ್ನುವ ನೆಲೆಯಲ್ಲಿ ಮಂಗಳೂರಿನ ಜಿಲ್ಲಾ ಪಶುಇಲಾಖೆ ಗಣತಿ ಕಾರ್ಯಕ್ಕೆ ಚಾಲನೆ ನೀಡಿದೆ.
ಜಿಲ್ಲೆಯಲ್ಲಿರುವ ಪಶುವೈದ್ಯಾಧಿಕಾರಿಗಳು ರಾಜ್ಯದ ಇತರ ವೈದ್ಯರಂತೆ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಇಲಾಖೆಯ ಪುನರ್ರಚನೆ, ಮಂಗಳೂರು ಹಾಗೂ ಪುತ್ತೂರನ್ನು ಗಮನದಲ್ಲಿರಿಸಿ ಪಶುಗಳ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಪಾಲಿಕ್ಲಿನಿಕ್ ಸೌಲಭ್ಯ ಕಲ್ಪಿಸಬೇಕು ಎನ್ನುವ ಬೇಡಿಕೆಯನ್ನು ಸರಕಾರದ ಮುಂದಿರಿಸಿದೆ. ಸರಕಾರ ಕೊಲದಲ್ಲಿ ಪಶು ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡಿದ್ದರಿಂದ ವಿದ್ಯಾರ್ಥಿಗಳಿಗೆ  ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಬೇಡಿಕೆಯನ್ನಿಡಲಾಗಿದೆ. ಆದರೂ ಮಷ್ಕರವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡು ಜಾನುವಾರು ಗಣತಿ ಕಾರ್ಯದಲ್ಲಿ ತೊಡಗಿ ಕೊಳ್ಳಲಿದ್ದಾರೆ. ಮಂಡ್ಯದಲ್ಲಿ ಇತ್ತೀಚಿಗೆ ೧೫ ದಿನಗಳ ಅಂತರದಲ್ಲಿ ಒಂದು ಕಡೆ ತರಬೇತಿ ನಡೆದಿರುವುದು ಹೊರತು ಪಡಿಸಿ ಬೇರೆ ಯಾವ ಜಿಲ್ಲೆಯಲ್ಲಿ ಪ್ರಾರಂಭವಾದ ಮಾಹಿತಿ ಇಲ್ಲಾ.
ದ.ಕ.ಜಿಲ್ಲೆಯಲ್ಲಿ ನಗರಭಾಗದಲ್ಲಿರುವ ೨,೦೪,೬೭೭ ಮನೆಗಳು ಹಾಗೂ ಗ್ರಾಮೀಣ ಭಾಗದಲ್ಲಿರುವ ೩೬೮ ಗ್ರಾಮಗಳ ೨,೨೨,೬೨೮ ಮನೆಗಳಲ್ಲಿರುವ ಜಾನುವಾರು, ಕುದುರೆ, ಕತ್ತೆ, ನಾಯಿ, ಮೊಲ, ಕುಕ್ಕುಟ ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕೆ ಅನುಕೂಲವಾಗುವ ಎಲ್ಲಾ ಸಾಕುಪ್ರಾಣಿಗಳು (ಬೆಕ್ಕನ್ನು ಹೊರತುಪಡಿಸಿ)ಮತ್ತು ಪಶುಸಂಗೋಪನಾ ವಲಯದಲ್ಲಿ ಉಪಯೋಗಿಸುವ ಉಪಕರಣಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ೧೯೧೯-೨೦ರಲ್ಲಿ ಪ್ರಾರಂಭವಾದ ಜಾನುವಾರು ಗಣತಿಯು ೫ ವರ್ಷಗಳಿಗೊಮ್ಮೆ ನಡೆಯುತ್ತಿದ್ದು, ಇದು ೧೯ ನೇ ಜಾನುವಾರು ಗಣತಿಯಾಗಿದೆ. ೧೮ ನೇ ಗಣತಿಯಲ್ಲಿ ಶೇ.೫೪ರಷ್ಟು ಕುಟುಂಬಗಳು ಪಶುಪಾಲನೆಯಲ್ಲಿ ತೊಡಗಿರುವುದು ಕಂಡುಬಂದಿದೆ. ೨೦೧೨ ರ ಸೆ.೧೫ರಂದು ಪ್ರಾರಂಭಗೊಂಡು ಅ.೧೫ರೊಳಗೆ ಪೂರ್ಣಗೊಳಿಸಿ, ಈ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಗಳ ಪರಿಶೀಲನೆ ಮತ್ತು ವ್ಯತ್ಯಾಸಗಳನ್ನು ಸರಿಪಡಿಸಬೇಕಿತ್ತು. ಆದರೆ ಪಶುವೈದ್ಯಾಧಿಕಾರಿಗಳ ಮುಷ್ಕರದಿಂದಾಗಿ ಗಣತಿ ಕಾರ್ಯ ವಿಳಂಭಗೊಂಡಿದೆ.
ಜಾನುವಾರು ಗಣತಿಯಲ್ಲಿ ಯಾರಿರುತ್ತಾರೆ?
ದ.ಕ.ಜಿಲ್ಲೆಯಲ್ಲಿ ೬೯ ಅಧಿಕಾರಿಗಳು ಹಾಗೂ ೫೫೭ ಎಣಿಕೆದಾರರು ಗಣತಿ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಪಾಲಿಕೆ ವ್ಯಾಪ್ತಿಯ ಅಧಿಕಾರಿಗಳು, ಪುರಸಭೆ ಅಥವಾ ಪಟ್ಟಣ ಪಂಚಾಯಿತಿಗಳು, ಪಶುಪಾಲನಾ , ಕೃಷಿ, ತೋಟಗಾರಿಕೆ ಇಲಾಖೆ, ಗ್ರಾಮೀಣಾಭಿವೃದ್ಧಿ, ಕಂದಾಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಎಸ್‌ಕೆಡಿಆರ್‌ಡಿಪಿ ಸೇವಾ ನಿರತರು ಹಾಗೂ ನುರಿತ ವಿದ್ಯಾವಂತ ಯುವಕ-ಯುವತಿಯರು ಜಾನುವಾರು ಗಣತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ದ.ಕ.ಜಿಲ್ಲೆಯಲ್ಲಿ ತರಬೇತಿಯೊಂದಿಗೆ ಗಣತಿ ಕಾರ್ಯಕ್ಕೆ ಚಾಲನೆ:
೧೯ ನೇ ಅಖಿಲ ಭಾರತ ಜಾನುವಾರು ಗಣತಿ ಕಾರ್ಯಕ್ಕೆ ನೇಮಕಗೊಂಡ ಜಿಲ್ಲೆಯ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ವಿವಿಧ ತಾಲೂಕಿನಲ್ಲಿ ತರಬೇತಿ ನಡೆಯಲಿದೆ. ಮಂಗಳೂರು ಗ್ರಾಮಾಂತರ ಉಳ್ಳಾಲ ವಲಯದಲ್ಲಿ ಅ.೨೭ ರಂದು, ಬಂಟ್ವಾಳ ಹಾಗೂ ಸುಳ್ಯದಲ್ಲಿ ಅ.೩೦ ಮತ್ತು ಬೆಳ್ತಂಗಡಿ ಹಾಗೂ ಪುತ್ತೂರಿನಲ್ಲಿ ಅ.೩೧ರಂದು ತರಬೇತಿ  ಆಯೋಜಿಸಲಾಗಿದೆ. ತರಬೇತಿ ನಡೆದ ಮಾರನೇಯ ದಿನವೇ ಆಯಾ ತಾಲೂಕಿನಲ್ಲಿ ಗಣತಿ ಕಾರ್ಯ ಪ್ರಾರಂಭವಾಗಲಿದೆ.

ಬಾಕ್ಸ್:
*೬೯ ಅಧಿಕಾರಿಗಳು, ೫೫೭ ಗಣತಿದಾರರು.
* ಗ್ರಾಮೀಣ ಪ್ರದೇಶದಲ್ಲಿ ೨,೨೨,೬೨೮ ಹಾಗೂ ನಗರದಲ್ಲಿ ೨,೦೪,೬೭೭ ಮನೆಗಳ ಜಾನುವಾರು ಗಣತಿ(೨೦೧೧ಜನಗಣತಿ)
*ಅಭಿವೃದ್ಧಿ ಕಾರ್ಯಕ್ಕೆ ಅನುಕೂಲವಾಗುವ ಎಲ್ಲಾ ಸಾಕುಪ್ರಾಣಿಗಳು (ಬೆಕ್ಕನ್ನು ಹೊರತುಪಡಿಸಿ)ಮತ್ತು ಉಪಕರಣಗಳು.
*ರಾಜ್ಯದಲ್ಲಿಯೇ ಪ್ರಥಮ ತರಬೇತಿ ಸೆ.೬ ಮತ್ತು ಸೆ.೧೦ (ಮಂಗಳೂರು ಪಶುಸಂಗೋಪನಾ ಇಲಾಖೆ

ಬಾಕ್ಸ್:
ಅಖಿಲ ಭಾರತ ಜಾನುವಾರು ಗಣತಿಗೆ ಜಿಲ್ಲೆಯಲ್ಲಿ ವೈದ್ಯರು ಮೂಲಭೂತ ಸೌಕರ್ಯಗಳಿಗಾಗಿ ಹಮ್ಮಿಕೊಂಡ ಮುಷ್ಕರದಿಂದ ವಿಳಂಭವಾಗಿದೆ. ವೈದ್ಯರು ಅಸಹಕಾರ ಚಳುವಳಿಯಲ್ಲಿ ನಿರತರಾಗಿದ್ದರೂ, ಜಿಲ್ಲೆಯ ವೈದರನ್ನು ಕರೆದು ರಾಷ್ಟ್ರೀಯ ಕಾರ್ಯಕ್ರಮದಲ್ಲಿ ನೈತಿಕ ಜವಾಬ್ದಾರಿಯನ್ನು ಅರಿತು ಗಣತಿ ಕಾರ್ಯದಲ್ಲಿ ಭಾಗಿಯಾಗಲು ಸೂಚಿಸಲಾಗಿದೆ. ಎಲ್ಲಾ ವೈದಾಧಿಕಾರಿಗಳು ಸಹಕರಿಸಲಿದ್ದು, ತರಬೇತಿಯನ್ನು ಹಮ್ಮಿಕೊಂಡು ಗಣತಿ ಕಾರ್ಯ ಪ್ರಾರಂಭಿಸಲಾಗುವುದು. 
ಡಾ.ಕೆ.ವಿ.ಹಲಗಪ್ಪ.-ಉಪನಿರ್ದೇಶಕರು ಪಶು ವೈದ್ಯಕೀಯ ಇಲಾಖೆ.